ಟಿ ಕೆ ರಾಮರಾವ್ ಅವರ “ಕನಸುಗಾರ” ಕಾದಂಬರಿ ಕುರಿತು ಲೇಖಕರು ರಾಘವೇಂದ್ರ ಇನಾಮದಾರ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಕೃತಿ: ಕನಸುಗಾರ
ಲೇಖಕರು: ಟಿ ಕೆ ರಾಮರಾವ್
ಪ್ರಕಾಶನ: ವಸಂತ ಪ್ರಕಾಶನ
ಪ್ರಕಾರ : ಪತ್ತೇದಾರಿ ಕಾದಂಬರಿ
ಬೆಲೆ: ೮೦
ಪುಟಗಳು: ೧೧೬
“ಕನಸುಗಾರ”
ಪತ್ತೇದಾರಿ ಕಾದಂಬರಿಗಳನ್ನು ತುಂಬಾ ಇಷ್ಟ ಪಡುವ ನಾನು ಮೊನ್ನೆ ದಿನ ಟಿ ಕೆ ರಾಮರಾವ್ ಅವರ “ಕನಸುಗಾರ” ಕಾದಂಬರಿ ಓದಿದೆ. ರಾಮರಾವ್ ಅವರ ಕಾದಂಬರಿ ಇದೇ ಮೊದಲ ಬಾರಿಗೆ ಓದಿದ್ದು. ಅಬ್ಬಾ!! ಅದೆಂಥಾ ಸೊಗಸಾದ ಬರವಣಿಗೆ ಶೈಲಿ ಅಂದ್ರೆ ನನಗಂತೂ ತುಂಬಾ ಇಷ್ಟ ಆಯ್ತು.
ಈ ಕಾದಂಬರಿ ಆರಂಭದಿಂದಲೂ ಕುತೂಹಲ ಕಾಯ್ದಿರಿಸುವ ಜೊತೆಗೆ ಸ್ಥಳೀಯ ಭಾಷೆ, ಮೆರಗು, ಮತ್ತೆ ಖಚಿತವಾದ ತಾಂತ್ರಿಕ ಹಾಗೂ ಕಾನೂನು ವಿವರಣೆ ಹೊಂದಿದೆ. ಓದುಗರಿಗೆ ಕುತೂಹಲ ಹುಟ್ಟಿಸುವ, ಮನರಂಜನೆ ನೀಡುವ ರಾಮರಾವ್ ಅವರ ನಿರೂಪಣೆ ನಿಜಕ್ಕೂ ಅದ್ಭುತ.
ಕನ್ನಡ ಪುಸ್ತಕಗಳನ್ನು ಪ್ರಕಟಿಸಲು ಪ್ರಕಾಶಕರು ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ ಅನೇಕ ಪುಸ್ತಕ ಪ್ರಕಾಶಕರು ಟಿ ಕೆ ರಾಮರಾವ್ ಅವರ ಮನೆಗೆ ಎಡತಾಕುತ್ತಿದ್ದರಂತೆ. ಅವರು ಕೇಳಿದಷ್ಟು ಗೌರವಧನವನ್ನು ಮುಂಗಡವಾಗಿ ನೀಡುತ್ತಿದ್ದರಂತೆ. ಕಾದಂಬರಿ ಆರಂಭವಾಗುವ ಮುನ್ನ ಟಿ ಕೆ ರಾಮರಾವ್ ಅವರ ಸಾಹಿತ್ಯಲೋಕದ ಬಗ್ಗೆ ಓದಿದಾಗ ಅವರ ಬಗ್ಗೆ ಅನೇಕ ವಿಷಯಗಳು ತಿಳಿಯುತ್ತವೆ.
ಇದು ಪತ್ತೇದಾರಿ ಕಾದಂಬರಿಯಾದುದರಿಂದ ಕಥೆ ಬಗ್ಗೆ ಬರಿಯೋದು ಸೂಕ್ತವಲ್ಲ. ಹಾಗಾಗಿ ಕಥೆ ಬಗ್ಗೆ ಏನೂ ಬರೆದಿಲ್ಲ. ಆದರೆ ಪತ್ತೇದಾರಿ ಇಷ್ಟ ಪಡುವವರು ಈ ಕಾದಂಬರಿ ಓದಲೇ ಬೇಕು.
- ರಾಘವೇಂದ್ರ ಇನಾಮದಾರ, ಹುಬ್ಬಳ್ಳಿ.