ಕೆಲಸದಾಕೆ ನೀಲಮ್ಮನಿಗೆ ಮುದ್ದಾದ ಎರಡು ವರ್ಷದ ಮಗನಿದ್ದ ಅವನ ಹೆಸರು ರುದ್ರಾ.ಅವನನ್ನು ಯಾರೇ ನೋಡಿದರೂ ಮುದ್ದಿಸುವಷ್ಟು ಪ್ರೀತಿ ಬರುತ್ತಿತ್ತು. ಆದರೆ ಆ ದಿನ ಮುದ್ದಾದ ರುದ್ರನ ಜೀವನದಲ್ಲಿ ದುರಂತ ನಡೆದು ಹೋಯಿತು. ಪೂರ್ತಿಯಾಗಿ ಓದಿ ಕತೆಗಾರ್ತಿ ಶ್ವೇತಾ ಅನವಟ್ಟಿ ಅವರ ಕತೆಯನ್ನು ತಪ್ಪದೆ ಮುಂದೆ ಓದಿ…
ಅಂದು ರಾತ್ರಿಯಿಡಿ ಜೋರಾಗಿ ಸಿಡಿದ ಮಳೆಗೆ ಧರೆ ತಂಪಾಗಿತ್ತು. ಬಿಸಿಲಿನ ತಾಪಕ್ಕೆ ಬೆಂದು ಹೋದ ಜನರಿಗೆ ಈ ಮಳೆ ಸಂತೋಷ ತಂದಿತ್ತು. ಇವತ್ತು ಆಕಾಶದಲ್ಲಿ ದಿನಕರ ತನ್ನ ಹಾಜರಿ ಹಾಕೋದು ಅನುಮಾನ. ಆದರೆ ಕೋಳಿಯ ಕೂಗು, ಹಕ್ಕಿಗಳ ಚಿಲಿಪಿಲಿ ಕಲರವ, ಇನ್ನೂ ಮಳೆ ಬರುವ ಮುನ್ಸೂಚನೆ ಇದ್ದರೂ… ಹೆಂಗೆಳೆಯರು ಅಂಗಳದಲ್ಲಿ ರಂಗೋಲಿ ಬಿಡಿಸುವ ಕೆಲಸ ಯಾವುದೇ ಅಡ್ಡಿಯಿಲ್ಲದೇ ಸಾರಾಗವಾಗಿ ನಡೆಯುತ್ತಿತ್ತು. ಕೊರಳಿನ ಗಂಟೆಯ ಶಬ್ದದ ಜೊತೆಗೆ “ಅಂಬಾ” ಎಂದು ಕೂಗುತಿದ್ದ ಹಸುವಿನ ಧ್ವನಿ.
ಇದನೆಲ್ಲ ತನ್ನ ಮನೆಯ ಮಾಳಿಗೆಯ ಮೇಲೆ ನಿಂತು ಚಹಾ ಸವಿಯುತ್ತ, ಪ್ರಕೃತಿಯ ಜೊತೆಗೆ ನಮ್ಮ ಬಂಧ ಎಷ್ಟು ಸುಂದರ ಎಂದು ಮನದಲ್ಲೇ ಸಂತೋಷಪಡುತ್ತಾ ನಿಂತಿದ್ದ ಚೆನ್ನಕೇಶವ. ನಿಸರ್ಗ ಮಾತೆಯ ಆರಾಧಕ. ಅವಳಲ್ಲಿನ ಚಿಕ್ಕ ಪುಟ್ಟ ಸಂಗತಿಗಳನ್ನು ಆಹ್ಲಾದಿಸುವ ಕವಿ ಮನಸು.
ಇಂದೇಕೋ ಚೆನ್ನಕೇಶವನ ಮನಸ್ಸು ನಲಿಯುತಿತ್ತು. ಒಳ್ಳೆಯದೇನೋ ತನ್ನ ಜೀವನದಲ್ಲಿ ನಡೆಯಬಹುದು?ಎಂದು ಅನಿಸಿತು. ಮುಗುಳು ನಗುತ್ತಾ ಆಕಾಶದತ್ತ ನೋಡಿದ. ಮೆಲ್ಲನೆ ಮೋಡಗಳು ಮಾಯವಾಗಿ, ಶುಭ್ರವಾಗುವ ಎಲ್ಲ ಲಕ್ಷಣ ಗೋಚರಿಸಿದವು.
“ಮಳೆಯು ಸುರಿದು ಧರೆ ತಂಪಾಯಿತು
ಮೋಡ ಸರಿದು ರವಿ ರಂಗೇರಿದ
ಭಾನು, ಭೂಮಿಗೆ ನ್ಯಾಯ ಸಿಕ್ಕಿತು
ನನ್ನ ಹೃದಯ ತಂಪಾಗಿ ರಂಗೇರಿಸುವ
ರಾಣಿ ಕಾಯಿಸದೆ ಬಂದು ಬಿಡು, ಬಂದು ಬಿಡು “
ಎಂದು ಗೊಣಗುತ್ತಾ ಮೆಟ್ಟಿಳಿದು ಕೆಳಗೆ ಬಂದ.
ಅಷ್ಟರಲ್ಲಿ ಗುಂಗುರು ಕೂದಲಿನ, ಗುಂಡು ಮುಖದ, ಕಡು ಕಪ್ಪು ಬಣ್ಣದ ಕಣ್ ರೆಪ್ಪೆಯ, ಎರೆಡು ವರ್ಷದ ಮುದ್ದು ಮುಖದ ರುದ್ರ ತನ್ನ ತೊದಲು ನುಡಿಯಲ್ಲಿ ಚೆನ್ನಕೇಶವನನ್ನು ಚಿನ್ನ, ಚಿನ್ನ ಎಂದು ಕೂಗುತ್ತಿದ್ದ. ಕಾರಣ ಇಷ್ಟೇ, ಕೇಶವನ ತಾಯಿ ಶಾಂತಮ್ಮ, ಮಗ ಬೆಳೆದು ದೊಡ್ಡವನಾದರೂ ಚೆನ್ನಕೇಶವನನ್ನು ಚಿನ್ನ ಎಂತಲೇ ಕರೆಯುತ್ತಿದ್ದರು. ರುದ್ರನನ್ನು ನೋಡಿದ ಕೂಡಲೇ ಕೆನ್ನೆ ಚಿವುಟಿ, ಕೊಂಚ ಆಟ ಆಡಿಸಿ ಕೈಗೆ ಚಾಕೊಲೇಟ್ ಇತ್ತ. ರುದ್ರ ಖುಷಿಯಿಂದ ಅಮ್ಮ ನೀಲಮ್ಮ ಹತ್ತಿರ ತೋರಿಸಿ ಚಾಕೋಲೇಟ್ ಸವಿದ.
ನೀಲಮ್ಮ, ಚೆನ್ನಕೇಶವನ ಮನೆ ಕೆಲಸದಾಕೆ. ಕಸಗುಡಿಸುವುದು, ಪಾತ್ರೆ ತೊಳೆಯುವುದು,ಬಟ್ಟೆ ಎಲ್ಲ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದಳು. ಕೇಶವನನ್ನು ಅಣ್ಣ ಎಂದು ಕರೆಯುತ್ತಿದ್ದಳು. ತಾಯಿ ಶಾಂತಮ್ಮನ ಪ್ರೀತಿಗೆ ಪಾತ್ರಳಾಗಿದ್ದಳು. ತನ್ನ ಕಷ್ಟ ಸುಖ ಎಲ್ಲವನ್ನು ನೀಲಮ್ಮ ಇವರ ಹತ್ತಿರ ಹೇಳಿಕೊಳ್ಳುತ್ತಿದ್ದಳು.
ಚೆನ್ನಕೇಶವ, ರಾಮರಾಯರ ಹಾಗು ಶಾಂತಮ್ಮನ ಒಬ್ಬನೇ ಮಗ. ದಂಪತಿಗಳಿಗೆ ಮಗನ ಮದುವೆಯ ಬಗ್ಗೆಯೇ ಚಿಂತಿ ಕಾರಣ ಕೇಶವ ಹಳ್ಳಿಯಲ್ಲಿ ಶಿಕ್ಷಕನಾಗಿದ್ದ.
ಚಿಕ್ಕ ವಯಸ್ಸಿನಿಂದಲೂ ಚೆನ್ನಕೇಶವಗೆ ಶಿಕ್ಷಕನಾಗುವ ಹೆಬ್ಬಯಕೆ. ಜಾಣನಾಗಿದ್ದ ಕೇಶವನಿಗೆ ಬೇರೆ ವೃತ್ತಿ ಮಾಡಲು ಎಷ್ಟೇ ಹೇಳಿದರೂ ಇದೇ ವೃತ್ತಿ ಆಯ್ಕೆ ಮಾಡಿಕೊಂಡು ಪಕ್ಕದ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ. ಪ್ರೀತಿಯ, ಇಷ್ಟದ ಕೆಲಸವಾದ್ದರಿಂದ ಶಿಕ್ಷಕನಾಗಿ ಒಳ್ಳೆಯ ಹೆಸರು ಮಾಡಿದ್ದ. ಮಕ್ಕಳ ಕಂಡರೆ ಬಲು ಅಕ್ಕರೆ . ಮಕ್ಕಳಿಗೂ ಇವನ ಕಂಡರೆ ಪ್ರೀತಿ.
ಎಂದಿನಂತೆ ಇಂದೂ ಕೆಲಸಕ್ಕೆ ಬಸ್ನಲ್ಲಿ ಹೊರಟ. ಇಂದೇಕೋ ಅವನ ಮನ ಕಾರಣವಿಲ್ಲದೆ ಸಂತೋಷದಿಂದ ನಲಿಯುತಿತ್ತು. ಬಸ್ನಲ್ಲಿ ಕಿಟಕಿಯ ಆಚೆ ಗಿಡ ಮರಗಳನ್ನು ನೋಡುತ್ತಿದ್ದ. ಮುಂದಿನ ನಿಲ್ದಾಣದಲ್ಲಿ ಬಸ್ ಸ್ಟಾಪ್ ಆಯಿತು. ಜಿಟಿ ಜಿಟಿ ಮಳೆಗೆ ಸ್ವಲ್ಪ ಮೆಲ್ಲ ಓಡುತ್ತ, ಕೈಯಲ್ಲಿ ಛತ್ರಿ ಹಿಡಿದು ಸೀರೆ ಉಟ್ಟುಕೊಂಡು ಬಸ್ಗೆ ಕೈ ಮಾಡುತ್ತಾ ಒಬ್ಬ ಹುಡುಗಿ ಬರುತ್ತಿದ್ದಳು. ಬಸ್ ಅವಳಿಗಾಗಿ ನಿಂತಿತು. ಅವಳು ಛತ್ರಿ ಕ್ಲೋಸ್ ಮಾಡಿ ಬಸ್ ಹತ್ತಿದಳು. ಕೇಶವ ಈ ಹೊಸ ಹುಡುಗಿಯನ್ನೇ ನೋಡುತ್ತ ಕಳೆದು ಹೋದ. ನೋಡು ನೋಡತ್ತಲೆ ಅವಳು ಇವನ ಹತ್ತಿರ ಬಂದಳು. ಇವನ ಪಕ್ಕದಲ್ಲಿ ಖಾಲಿ ಇದ್ದ ಸೀಟ್ನಲ್ಲಿ ಕುಳಿತೆಬೀಟ್ಟಳು. ಇವನು ಕಕ್ಕಾ ಬಿಕ್ಕಿಯಾದ. ಅವಳನ್ನೆ ನೋಡಬೇಕೆಂದೇನ್ನಿಸುತ್ತಿದ್ದರೂ , ಕಿಟಕಿಯ ಆಚೆ ದೃಷ್ಟಿ ಹಾಯಿಸಿದ. ಅವಳ ಬಗ್ಗೆಯೇ ಯೋಚಿಸುತ್ತ ಗಲಿಬಿಲಿಗೊಂಡ. ಅವಳು ಎಲ್ಲಿ ಇಳಿದುಕೊಳ್ಳುವಳು? ಯಾರಿವಳು..? ಎಂಬ ಪ್ರಶ್ನೆಗಳು ಮನದಲ್ಲಿ ನರ್ತನ ಮಾಡಿದವು. ಹೀಗೆ ಯೋಚಿಸುತ್ತಿರವಾಗ ‘ಮೇಷ್ಟ್ರೇ ನಿಮ್ಮೂರು ಬಂತು ‘ ಎಂದು ಕಂಡೆಕ್ಟರ್ ಹೇಳಿದಾಗ ಎಚ್ಚೆತ್ತು ಪಕ್ಕದಲ್ಲಿ ನೋಡಿದಾಗ ಹುಡುಗಿ ಕಾಣಲಿಲ್ಲ. ಗಡಿಬಿಡಿಯಿಂದ ಬಸ್ನಿಂದ ಇಳಿದ. ನೋಡಿದರೆ ಆ ಹುಡುಗಿ ಇವನ ಮುಂದೆಯೇ ಹೋಗುತ್ತಿದ್ದಳು. ಇವನು ಅವಳ ಹಿಂದೆ. ಅವಳೂ ಶಾಲೆಗೆ ಹೋದಳು… ಅರೇ..!! ಇದೇನಿದು ಇವಳೂ ಇಲ್ಲೆಗೆ ಬಂದಳಲ್ಲ ಎಂದು ಸಂತಸ ಪಟ್ಟ.
ಇವಳು ಹೊಸದಾಗಿ ನೇಮಕವಾಗಿದ್ದ ಶಿಕ್ಷಕಿ ಎಂದೂ, ಅವಳ ಹೆಸರು ರಶ್ಮಿಯೆಂದೂ ತಿಳಿದುಕೊಳ್ಳಲು ಬಹಳ ಹೊತ್ತು ಬೇಕಾಗಲಿಲ್ಲ ಕೇಶವನಿಗೆ.
ಎಲ್ಲರಿಗೂ ತನ್ನ ಬಗ್ಗೆ ಹೇಳಿ, ಎಲ್ಲರ ಪರಿಚಯವನ್ನು ಮಾಡಿಕೊಂಡಳು ರಶ್ಮಿ. ಕೇಶವನಿಗೆ ಅವಳ ನೋಡಿದಾಗೊಮ್ಮೆ ಎದೆಬಡಿತ ಏರುಪೇರಾಗುತಿತ್ತು. ಅವಳಿಗೆ ಇನ್ನೂ ಮದುವೆ ಆಗಿಲ್ಲ ಎಂಬ ವಿಷಯ ತಿಳಿದು ಇವನ ಮನ ಆಕಾಶಕ್ಕೆ ಹಾರಿತು.
ಮನೆಗೆ ಬಂದವ ಬರೀ ಅವಳ ಬಗ್ಗೆಯೇ ಯೋಚನೆ. ಅವಳನ್ನು ಕಾಣಲು ಮನ ಹಂಬಲಿಸುತಿತ್ತು. ಸ್ವಲ್ಪ ದಿನದಲ್ಲೇ ಇಬ್ಬರೂ ತುಂಬಾ ಹತ್ತಿರವಾದರು. ಇಬ್ಬರಿಗೂ ಶಿಕ್ಷಕ ವೃತ್ತಿ ತುಂಬಾ ಇಷ್ಟ. ಮಕ್ಕಳ ಕಂಡರೆ ಪ್ರೀತಿ. ಅರಿವಿಲ್ಲದೆ ಇಬ್ಬರ ನಡುವೇ ಪ್ರೀತಿ ಮನೆ ಮಾಡಿತ್ತು. ಇವರಿಬ್ಬರ ಪ್ರೀತಿಗೆ ಹಿರಿಯರ ಪ್ರೀತಿಯ ಒಪ್ಪಿಗೆ ದೊರೆತು ಮದುವೆ ನಿಶ್ಚಯವಾಯಿತು.
ಕೇಶವನ ಮನೆಯಲ್ಲಿ ಮದುವೆ ತಯಾರಿ ಜೋರಾಗಿ ನಡೆಯುತ್ತಿತ್ತು. ಮನೆ ಕೆಲಸದಾಕೆ ನೀಲಮ್ಮಳೂ ಉತ್ಸಾಹದಿಂದ ಮದುವೆ ತಯಾರಿಗೆ, ಶಾಂತಮ್ಮನಿಗೆ ಸಹಾಯ ಮಾಡುತ್ತಿದ್ದಳು. ಈ ನಡುವೆ ನೀಲಮ್ಮನ ಗಂಡ ಕುಡಿದು ಕುಡಿದು ಸತ್ತು ಹೋದ. ಚೆನ್ನಕೇಶವನ ಕುಟುಂಬಕ್ಕೆ ತುಂಬಾ ನೋವಾಯಿತು. ನೀಲಮ್ಮ, ರುದ್ರನ ಮುಖ ನೋಡಿದರೆ ಬೇಜಾರಾಗುತಿತ್ತು.
ಆವತ್ತು ಕೇಶವ ಶಾಲೆಯಿಂದ ಮನೆಗೆ ಬರುತ್ತಿರುವಾಗ ನೀಲಮ್ಮನ ಮನೆ ಮುಂದೆ ಜನ ಸೇರಿದ್ದರು. ನೋಡಿದರೆ ನೀಳಮ್ಮಳೂ ಚಿಕ್ಕ ವಯಸ್ಸಿಗೆ ಹೃದಯಘಾತಕ್ಕೆ ಬಲಿಯಾಗಿದ್ದಳು. ಪುಟ್ಟ ರುದ್ರ ಒಂದೇ ಸಮನೆ ಅಳುತ್ತಿತ್ತು. ರುದ್ರ ಅನಾಥ ದಂಪತಿಗೆ ಹುಟ್ಟಿದ ಮಗುವಾಗಿದ್ದ.
ಶಾಂತಮ್ಮ ಹಾಗು ರಾಮರಾಯರು ಮಗುವನ್ನು ತಮ್ಮ ಮನೆಗೇ ಕರೆದುಕೊಂಡು ಬಂದರಲ್ಲದೆ ತಾವೇ ಸಾಕಬೇಕೆಂದುಕೊಂಡರು. ಆದರೆ ನಮ್ಮ ನಂತರ ರುದ್ರನ ಗತಿ..!! ರುದ್ರನನ್ನು ನೋಡಿಕೊಳ್ಳಲು ಕೇಶವ ಒಪ್ಪಿಕೊಳ್ಳುತ್ತಾನೆಯೇ..??? ಇವನು ಒಪ್ಪಿದರೂ ರಶ್ಮಿ ಒಪ್ಪಿಕೊಳ್ಳುತ್ತಾಳೆಯೇ..?? ಹೀಗೆ ಹಲವಾರು ಸಂಗತಿಗಳು ತಲೆಯಲ್ಲಿ ಸುತ್ತಿ ಮಗನ ಮದುವೆಯ ಸಂಭ್ರಮವನ್ನು ಕಸಿದಿತ್ತು. ಮದುವೆಗೆ ಇನ್ನು ಕೇವಲ ಹದಿನೈದು ದಿನ ಮಾತ್ರ ಉಳಿದಿತ್ತು.
ಅಂದು ರವಿವಾರದ ದಿನ ರಶ್ಮಿ ತನ್ನ ತಂದೆ ತಾಯಿಯೊಂದಿಗೆ ಬಂದಳು. ಶಾಂತಮ್ಮ ಪ್ರೀತಿಯಿಂದ ಬೀಗರಿಗೆ ಬರಮಾಡಿಕೊಂಡರು. ಕುಶಲೋಪರಿ ಮಾತಾಡಿ ತಿಂಡಿ ತರಲು ಅಡುಗೆ ಮನೆ ಸೇರಿದರು ಶಾಂತಮ್ಮ. ಅವರು ತಿಂಡಿ ತರುವಷ್ಟರಲ್ಲಿ ರಶ್ಮಿ ಮತ್ತವರ ತಂದೆ ತಾಯಿ ರುದ್ರನೊಂದಿಗೆ ಪ್ರೀತಿಯಿಂದ ಆಡುತ್ತಿದ್ದರು. ಇದನ್ನು ಕಂಡು ಶಾಂತಮ್ಮರಿಗೆ ಕಣ್ಣುಗಳು ಒದ್ದೆಯಾದವು.
ತಿಂಡಿ ತಿಂದ ರಶ್ಮಿ, ಅತ್ತೆಯ ಕೈ ಹಿಡಿದು ” ನೀವೇನೂ ಚಿಂತಿಸಬೇಡಿ. ರುದ್ರನಿಗೆ ಇನ್ನು ಮುಂದೆ ನಾನೇ ತಾಯಿ ” ಎಂದಳು..!! ನಿಜಾನಾ..? ಎಂಬಂತೆ ಕಣ್ಣಲ್ಲೇ ಪ್ರಶ್ನಿನಿಸಿದರು. ಅವಳು ಭರವಸೆ, ಅಂತಃಕರಣದ ಕಣ್ಣುಗಳಿಂದ ನಿಜ ಎಂದು ಉತ್ತರಿದಳು. ಅವಳನ್ನು ಅಪ್ಪಿದರು ಗಟ್ಟಿಯಾಗಿ..ಇದನ್ನು ನೋಡುತ್ತಿದ್ದ ರಶ್ಮಿಯ ಅಪ್ಪ ಅಮ್ಮನಿಗೂ ಕಣ್ ತುಂಬಿ ಬಂತು.. ಶಾಂತಮ್ಮ ಅವರನ್ನು ಧನ್ಯತೆಯಿಂದ ನೋಡಿದರು.
ಇದರ ಬಗ್ಗೆ ರಶ್ಮಿ ಹತ್ತಿರ ಚರ್ಚಿಸಿದ್ದ ಚೆನ್ನಕೇಶವ.ಅವಳ ಉತ್ತರಕ್ಕೆ ಕಾಯುತ್ತಿದ್ದ. ಇಂದು ಅವಳ, ಅವಳ ಮನೆವವರ ದೊಡ್ಡ ಮನಸ್ಸು ನೋಡಿ ಮನ ತುಂಬಿ ಬಂತು.
ಮದುವೆಯ ಹಿಂದಿನ ರಾತ್ರಿ ನೀಲಮ್ಮ ಕೇಶವನ ಕನಸಲ್ಲಿ ಬಂದು ಕೈ ಮುಗಿದಿದ್ದು ಅವಳ ಆತ್ಮಕ್ಕೆ ಶಾಂತಿ ದೊರೆತ ಭಾವ ಗಟ್ಟಿಯಾಯಿತು…!!
ತಿಂಡಿ ತಿಂದ ರಶ್ಮಿ, ಅತ್ತೆಯ ಕೈ ಹಿಡಿದು ” ನೀವೇನೂ ಚಿಂತಿಸಬೇಡಿ.. ರುದ್ರನಿಗೆ ಇನ್ನು ಮುಂದೆ ನಾನೇ ತಾಯಿ ” ಎಂದಳು..!! ನಿಜಾನಾ..? ಎಂಬಂತೆ ಕಣ್ಣಲ್ಲೇ ಪ್ರಶ್ನಿನಿಸಿದರು.. ಅವಳು ಭರವಸೆ, ಅಂತಃಕರಣದ ಕಣ್ಣುಗಳಿಂದ ನಿಜ ಎಂದು ಉತ್ತರಿದಳು.. ಅವಳನ್ನು ಅಪ್ಪಿದರು ಗಟ್ಟಿಯಾಗಿ..ಇದನ್ನು ನೋಡುತ್ತಿದ್ದ ರಶ್ಮಿಯ ಅಪ್ಪ ಅಮ್ಮನಿಗೂ ಕಣ್ ತುಂಬಿ ಬಂತು.. ಶಾಂತಮ್ಮ ಅವರನ್ನು ಧನ್ಯತೆಯಿಂದ ನೋಡಿದರು.
ಇದರ ಬಗ್ಗೆ ರಶ್ಮಿ ಹತ್ತಿರ ಚರ್ಚಿಸಿದ್ದ ಚೆನ್ನಕೇಶವ.ಅವಳ ಉತ್ತರಕ್ಕೆ ಕಾಯುತ್ತಿದ್ದ.. ಇಂದು ಅವಳ, ಅವಳ ಮನೆವವರ ದೊಡ್ಡ ಮನಸ್ಸು ನೋಡಿ ಮನ ತುಂಬಿ ಬಂತು. ಮದುವೆಯ ಹಿಂದಿನ ರಾತ್ರಿ ನೀಲಮ್ಮ ಕೇಶವನ ಕನಸಲ್ಲಿ ಬಂದು ಕೈ ಮುಗಿದಿದ್ದು ಅವಳ ಆತ್ಮಕ್ಕೆ ಶಾಂತಿ ದೊರೆತ ಭಾವ ಗಟ್ಟಿಯಾಯಿತು…!!
- ಶ್ವೇತಾ ಅನವಟ್ಟಿ
