‘ಕೊಹ್ರಾ’ ಎಂಬ ಸೀರಿಸ್

‘ಕೊಹ್ರಾ’ ಎಂಬ ಸೀರಿಸ್. ಕೊಹ್ರಾ ಮೊದಲ ಸೀಸನ್ ಕೂಡ ಚೆನ್ನಾಗಿತ್ತು. ಒಂದು ಕೊಲೆ ಅಪರಾಧದ ಸುತ್ತ ನಡೆಯುವ ಈ ಕಥೆ ಅಪರಾಧಕ್ಕಿಂತ ಸತ್ತ ವ್ಯಕ್ತಿಯ ಸುತ್ತಲೂ ಇರುವ ಜನರನ್ನು ಇಡೀ ಇಡೀಯಾಗಿ ಯಾವ ಅವಸರ ಇಲ್ಲದೆ ಬಿಡಿಸುತ್ತ ಹೋಗುತ್ತದೆ, ಅದು ಈ ಕಥೆಯ ಅತ್ಯಂತ ವಿಶೇಷ. ಲೇಖಕರಾದ ಜಯರಾಮಚಾರಿ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಒಂದೊಳ್ಳೆ ಸಿನಿಮಾ, ಒಂದೊಳ್ಳೆ ಪುಸ್ತಕ ಓದಿ ಮುಗಿಸಿದಾಗ ಆರಿಸಿಕೊಳ್ಳುವ ಗುಂಗು, ಹ್ಯಾಂಗ್ ಓವರ್ ನಮ್ಮೊಳಗೆ ಹಲವು ಪ್ರಶ್ನೆಗಳನ್ನ ಹುಟ್ಟು ಹಾಕುತ್ತ ನಮ್ಮನ್ನು ನಾವೇ ನೋಡಿಕೊಳ್ಳುವುದಕ್ಕೆ ಪ್ರೇರೇಪಿಸುತ್ತವೆ ಅಂತ ನನಗನಿಸುತ್ತೆ. ಇದಕ್ಕೆ ತಾಜಾ ಉದಾಹರಣೆ ಬೆಂಗಳೂರು ಫಿಲಂ ಫೆಸ್ಟಿವಲ್ ನಲ್ಲಿ ನೋಡಿದ ‘ಹ್ಯಾಪಿ ಬರ್ತಡೇ’ ಸಿನಿಮಾ. ಸಿನಿಮಾದ ಕೊನೆ ದೃಶ್ಯ ಮುಗಿದಾಗ ನನ್ನ ಕಣ್ಣಲ್ಲಿ ಜಿನುಗುತ್ತಿದ್ದ ನೀರು, ನನ್ನ ಪಕ್ಕದಲ್ಲಿ ಕೂತವರ ಮುಖದಲ್ಲೂ ವ್ಯಕ್ತಪಡಿಸಲಾಗದ ಒಂದು ದುಃಖ ಕಾಣುತ್ತಿತ್ತು. ತುಂಬಾ ಹೊತ್ತು ನಾವು ಸ್ಕ್ರೀನ್ ಮೇಲೆ ಓದುತ್ತಿದ್ದ ಎಂಡ್ ಟೈಟಲ್ ನೋಡುತ್ತಾ ಅಲ್ಲೇ ಕೂತಿದ್ದೆವು, ಸ್ಕ್ರೀನ್ ಇಂದ ಹೊರಗೆ ಬಂದ ಮೇಲೆಯೂ ಅದೇ ಗುಂಗು. ಸಿನಿಮಾಸಕ್ತರು, ಸಿನಿಮಾದಲ್ಲೇ ಏನಾದರೂ ಮಾಡಬೇಕೆಂಬ ಮನಸುಗಳು. ಮಾತಾಡುತ್ತ ನಮ್ಮ ಮಂಜುನಾಥ್ ಸರ್ ಒಂದು ಮಾತಾಡಿದ್ರು ಈ ಸಿನಿಮಾ ನೋಡ್ತಾ ನಾವು ಎಲ್ಲಿ ನಿಂತಿದ್ದೀವಿ, ಗೊತ್ತೋ ಗೊತ್ತಿಲ್ಲದೆಯೋ ನಾವು ಬೇರೆಯವರನ್ನು ಹೇಗೆ ನಡೆಸಿಕೊಂಡಿದ್ದೀವಿ ನಮ್ಮನ್ನು ನಾವೇ ಒಂದು ಸಲ ನೋಡಿಕೊಳ್ಳಬೇಕು. ಎನ್ನುವ ಮಾತನ್ನಾಡಿದರು. ಒಂದು ಸಿನಿಮಾ ಒಂದು ಪುಸ್ತಕ ಮಾಡಬೇಕಾದ ಬದಲಾವಣೆ ಇದು. ಸಿನಿಮಾದಿಂದ ಪುಸ್ತಕದಿಂದ ಏನೂ ಬದಲಾಗಲ್ಲ ಅನ್ನೋದು ಪೂರ್ತಿ ಸುಳ್ಳಲ್ಲ.

ಈ ಮಾತು ಯಾಕೆ ಅಂದರೆ ನೆನ್ನೆ ಪೂರ್ತಿ ಒಂದು ವಿಚಿತ್ರವಾದ ಹ್ಯಾಂಗ್ ಓವರಿನಲ್ಲಿದ್ದೆ. ಅದಕ್ಕೆ ಕಾರಣ ಕೊಹ್ರಾ ಎಂಬ ಸೀರಿಸ್. ಕೊಹ್ರಾ ಮೊದಲ ಸೀಸನ್ ಕೂಡ ಚೆನ್ನಾಗಿತ್ತು. ಒಂದು ಕೊಲೆ ಅಪರಾಧದ ಸುತ್ತ ನಡೆಯುವ ಈ ಕಥೆ ಅಪರಾಧಕ್ಕಿಂತ ಸತ್ತ ವ್ಯಕ್ತಿಯ ಸುತ್ತಲೂ ಇರುವ ಜನರನ್ನು ಇಡೀ ಇಡೀಯಾಗಿ ಯಾವ ಅವಸರ ಇಲ್ಲದೆ ಬಿಡಿಸುತ್ತ ಹೋಗುತ್ತದೆ, ಅದು ಈ ಕಥೆಯ ಅತ್ಯಂತ ವಿಶೇಷ.

ನನಗೆ ತುಂಬಾ ಆಶ್ಚರ್ಯ ಎನಿಸಿದ್ದು ಮೇನ್ ಪ್ಲಾಟ್ ಜೊತೆಗೆ ಮತ್ತೊಂದು ಪ್ಲಾಟ್ ನಡೆಯುತ್ತಾ ಹೋಗುತ್ತೆ. ಅದ್ರಲ್ಲಿ ಒಂದು ಸಾರಿಯೂ ತನ್ನ ತಂದೆಯ ಮುಖ ನೋಡದ ವ್ಯಕ್ತಿಯೊಬ್ಬ ತನ್ನ ತಂದೆಯ ಮದುವೆ ಫೋಟೋ ಹಿಡಿದು ಅವನನ್ನು ಹುಡುಕುವ ಕಥೆ, ಒಂದೇ ಒಂದು ಸಲ ತನ್ನ ತಂದೆಯ ಮುಖ ನೋಡಬೇಕು ಎನ್ನುವ ಗುರಿ ಇಟ್ಟುಕೊಂಡ ದಿಕ್ಕಾಪಾಲಾದ ಹುಡುಗನ ಕಥೆ. ಅಲ್ಲಲ್ಲಿ ಅವನ ತಂದೆ ಇದ್ದಿರಬಹುದಾದ ಸಾಧ್ಯತೆಗಳ ಕೊಂಡಿ ಸಿಗುತ್ತಾ ಹೋಗುತ್ತದೆ, ಕೊನೆಗೆ ಸಿಕ್ಕ ಕೊಂಡಿಯಲ್ಲಿ ಆತನ ತಂದೆ ಒಂದು ಫ್ಯಾಕ್ಟರಿಯಂತ ಜಾಗ ಸುಟ್ಟು ಹೋಗಿ ಅದ್ರಲ್ಲಿರುವ ಕರಕಲು ದೇಹಗಳಲ್ಲಿ ತನ್ನ ತಂದೆಯದ್ದು ಒಂದು ಎಂದು ಗೊತ್ತಾಗುತ್ತೆ. ಅದಕ್ಕೆ ಕಾರಣವಾದವನನ್ನ ಹುಡುಕಿ ಕೊಲ್ಲುವ ಮೂಲಕ ಅವನ ಹುಡುಕಾಟಕ್ಕೆ ಒಂದು ಪೂರ್ಣವಿರಾಮ ಸಿಗುತ್ತೆ.

ಕಥೆ ಅಲ್ಲಿಗೆ ನಿಂತು ಹೋಯ್ತಾ? ಎಂದುಕೊಂಡರೆ ಕೊನೆಯಲ್ಲಿ ಬರುವ ಇಪ್ಪತ್ತು ನಿಮಿಷಗಳಲ್ಲಿ ಕಥೆ ಬೇರೆಯದೇ ದಿಕ್ಕು ಪಡೆದುಕೊಂಡು ನೋಡುಗರನ್ನು ಭಾವ ತೀವ್ರತೆಯಲ್ಲಿ ಅದ್ದಿ ನೋವಿನ ಬಿಸಿಲಿಗೆ ಆರಿಹಾಕುವಂತೆ ನಡೆದುಹೋಗುತ್ತದೆ.

ಫೋಟೋ ಕೃಪೆ : ಗೂಗಲ್

ಈ ಕಥೆಯಲ್ಲಿರೋದು ಮುರಿದುಬಿದ್ದ ಮದುವೆಗಳು, ಜಮೀನ್ದಾರಿ ಮನಸುಗಳು, ಬಿಡುಗಡೆಗೆ ಹಪಹಪಿಸುತ್ತಿರುವ ಜೀವಗಳು, ಬದುಕು, ಬಾಲ್ಯ, ಶಾಪ, ಕೆಟ್ಟ ಭೂತ, ತಪ್ಪು, ಪಶ್ಚಾತ್ತಾಪ, ಬದುಕಿನಲ್ಲಿ ನಿಲ್ಲಲು ಒದ್ದಾಡುವ ಪಾತ್ರಗಳು. ಎಲ್ಲ ಪಾತ್ರಗಳು ಒಡೆದು ಹೋದ ಪ್ರತಿಬಿಂಬಗಳೇ ಅದರಲ್ಲಿ ಕೆಲವು ತಮ್ಮನ್ನು ತಾವೇ ಹೊಲಿದುಕೊಂಡು ಮತ್ತೆ ಬದುಕಲು ಒದ್ದಾಡುವ ದಿಟ್ಟ ಪಾತ್ರಗಳು.

ನನಗೆ ಈ ಸೀರೀಸ್ ನೋಡ್ತಾ ಇದು ಕೇವಲ ಸಿನಿಮಾ ಮಾಡೋರು ನೋಡೋರು ಅಷ್ಟೇ ಅಲ್ಲದೆ ನಮ್ಮ ಜೊತೆ ಇರುವ ಸಮಕಾಲೀನ ಕಥೆಗಾರರು ಕೂಡ ನೋಡಲೇಬೇಕು. ಕೆಲವನ್ನು ದೃಶ್ಯ ಮಾಧ್ಯಮದಲ್ಲಿ ಹಿಡಿಯಲಾಗೋದಿಲ್ಲ ಹಾಗೆ ಕೆಲವನ್ನು ಅಕ್ಷರಗಳಲ್ಲಿ ಹಿಡಿಯಲಾಗೋಲ್ಲ. ಆದರೆ ಸಿನಿಮಾಗೆ ಆಗಲಿ, ಕಥೆ ಕಾದಂಬರಿಗೆ ಆಗಲಿ ಬೇಕಿರೋದು ಕಥೆ, ಪಾತ್ರಗಳು, ತಲ್ಲಣಗಳು. ಹಾಗಾಗಿ ಈ ಸೀರಿಸ್ ಕತೆಗಾರರು ಕೂಡ ನೋಡಬೇಕು.

ಯಾವ ಅವಸರ ಇಲ್ಲದೆ, ಇಂಚಿಂಚಾಗಿ ಪಾತ್ರಗಳನ್ನೂ ಹೊಕ್ಕು ನೋಡುವ ಪ್ರಕ್ರಿಯೆ ಇದೆಯಲ್ಲ ಅದು ಬರೆಯೋರಿಗೆ ನಿಜಕ್ಕೂ ಬೇಕಿರೋದು. ನಾವಿನ್ನೂ ಓಬಿರಾಯನ ಕಥೆಗಳನ್ನು ಓಬಿರಾಯನ ಮಾದರಿಯಲ್ಲೇ ಹೇಳೋದು ಬರೆಯೋದು ಬಿಡಬೇಕು. ಅದೇ ಶೋಷಣೆಯ ಕಥೆಗಳನ್ನು ಹೊಸ ದೃಷ್ಟಿಯಲ್ಲಿ ಇನ್ನೂ ವಸ್ತುನಿಷ್ಠವಾಗಿ ಬರೆಯಬಹುದು. ಸಿನಿಮಾ ಅಥವಾ ಸೀರಿಸ್ ನೋಡೋದು ಜೊತೆಗೆ ಪರಂಪರೆ ಯಾಕೆ ನಮಗೆ ಬರೆಯೋರಿಗೆ ಮುಖ್ಯವಾಗುತ್ತೆ ಮತ್ತು ಎಷ್ಟು ಸಹಾಯ ಮಾಡುತ್ತೆ ಅನ್ನೋದನ್ನ ನನಗೆ ನಮ್ಮ ನಡುವೆ ಇರುವ ಅತ್ಯುತ್ತಮ ಕತೆಗಾರ ಇಂದ್ರಕುಮಾರ್ ಜೊತೆ ಒಮ್ಮೆ ಮಾತಾಡುವಾಗ ಹೊಳಹು ಸಿಕ್ತು. ಅವರದೊಂದು ಕತೆ ಇದೆ. ಚಿಕ್ಕ ವಯಸ್ಸಿನಲ್ಲೇ ಓಡಿ ಹೋದ ಮೈದುನ ಮತ್ತೆ ಮನೆಗೆ ಬರ್ತಾ ಇದ್ದಾನೆ ಎನ್ನುವ ಸುದ್ದಿ ಬರುತ್ತೆ, ಆ ಸುದ್ದಿ ಕೇಳುತ್ತಲೇ ಅತ್ತಿಗೆ ಅವನಿಗೆ ಇಷ್ಟವಾಗುವ ಶಂಕರಪೋಳಿ ತಯಾರಿಸಲು ಶುರು ಮಾಡುತ್ತಾಳೆ ಇಡೀ ಕಥೆ ಆ ಶಂಕರಪೋಳಿ ಮಾಡುತ್ತಲೇ ಭೂತದ ಚಿತ್ರಗಳೊಂದಿಗೆ ನಡೆಯುತ್ತಾ ಕೊನೆಗೆ ನಿಲ್ಲುತ್ತೆ. ಆ ಕತೆಗೆ ಅವರಿಗೆ ಇದೆ ತರಹ ಸಿನಿಮಾವೊಂದು ಕಾರಣ ಎಂದು ಹೇಳಿದ ನೆನಪು. ಆ ಸಿನಿಮಾದ ಆರಂಭದಲ್ಲಿ ನಾಯಕಿ ಯಾವುದೊ ಖಾದ್ಯ ತಯಾರಿಸುವ ದೃಶ್ಯ ಬರುತ್ತೆ ಅಂತೇ, ಆ ದೃಶ್ಯ ಅವರಿಗೆ ಎಷ್ಟು ಕಾಡಿತ್ತೆಂದರೆ ಈ ತಾರಾ ಕಾಡುವ ಕತೆಯನ್ನು ಬರೆಯುವಷ್ಟು. ಬರೆಯೋರಿಗೆ ಈ ಸಿನಿಮಾ, ಸೀರಿಸ್, ನಮ್ಮ ಪರಂಪರೆ ಸಾಹಿತ್ಯ ಬಲು ಮುಖ್ಯವಾಗುತ್ತದೆ.

ಫೋಟೋ ಕೃಪೆ : ಗೂಗಲ್

ನೆನ್ನೆ ಕೊಹ್ರಾ ನೋಡುತ್ತಾ ನನಗೆ ಜಿ ಎಸ್ ಸಾದಾಶಿವ ನೆನಪಾದ್ರು, ಚಿತ್ತಾಲ ನೆನಪಾದ್ರೂ, ಖಾಸನೀಸ ನೆನಪಾದ್ರೂ, ಮೂರು ದಾರಿಗಳು ಕಾದಂಬರಿಯ ನಿರ್ಮಲ ನೆನಪಾದಳು, ತಬ್ಬಲಿಗಳು ಕಥೆಯಲ್ಲಿ ಛಿದ್ರ ಛಿದ್ರಗೊಂಡ ಪಾತ್ರಗಳು ನೆನಪಾದವು, ಸಿಕ್ಕು ಕತೆಯಲ್ಲಿ ಮಧ್ಯರಾತ್ರಿಲಿ ಟ್ರೈನ್ ನಿಂತ ಕೂಡಲೇ ಗದ್ದೆ ಬಯಲಿನಲ್ಲಿ ಓಡುವ ಪಾತ್ರಗಳು ನೆನಪಾದವು.
ಕೊಹ್ರಾದಂತ ಕತೆಗಳು, ಅದರ ಶೈಲಿ ನಮ್ಮ ಕನ್ನಡ ಸಾಹಿತ್ಯದಲ್ಲಿ ಎಂದೋ ಬಂದು ಹೋಗಿವೆ. ಅದೂ ಇನ್ನೂ ಸಶಕ್ತವಾಗಿ ಬಂದಿವೆ. ಆದರೆ ನಮ್ಮ ಕನ್ನಡದಲ್ಲಿ ದೃಶ್ಯ ಮಾಧ್ಯಮ ಮತ್ತು ಅಕ್ಷರ ಮಾಧ್ಯಮ ನಡುವೆ ದೊಡ್ಡ ಕಂದರವೇ ಇದೆ.

ಸಿನಿಮಾದಲ್ಲಿ ಇರೋರಿಗೆ ಬರವಣಿಗೆ ದಕ್ಕಿಲ್ಲ, ಕನ್ನಡ ಸಾಹಿತ್ಯವನ್ನು ಸಿನಿಮಾದವರು ಮೂಸು ನೋಡೋಲ್ಲ. ಈ ತರ ವಿಚಿತ್ರ ಕಂದರವಿದೆ. ಕನ್ನಡದಲ್ಲಿ ಹಳೆದಿರಲಿ ಹೊಸದಿರಲಿ ಸರಿಯಾಗಿ ಬಳಸಿಕೊಂಡರೆ ಎಷ್ಟೋ ಕತೆಗಳು ಸಿನಿಮಾಗಳಾಗಿಯೋ ಕಿರುಚಿತ್ರ ಆಗಿಯೋ ಸೀರಿಸ್ ಆಗಿಯೋ ಗಡಿ ದಾಟಬಹುದು. ಇದಕ್ಕೊಂದು ತಾಜಾ ಉದಾಹರಣೆ ಕಿರಣ್ ಕುಮಾರ್ ಕೆ ಆರ್ ಅವರ ಕಾಜೂ ಬಿಸ್ಕೆಟ್ ಕಥಾಸಂಕಲನದ ಕಾಜೂ ಬಿಸ್ಕೆಟ್ ಕತೆಗೆ ಕಿರುಚಿತ್ರ ರೂಪ ನೀಡಿ ಅದೀಗ ಪ್ರಶಸ್ತಿಯೂ ಪಡೆದುಕೊಂಡಿದೆ. ಅಂತಹ ಎಷ್ಟೋ ಅದ್ಭುತ ಕತೆಗಳು ನಮ್ಮ ಸಮಕಾಲೀನ ಸಾಹಿತಿಗಳು ಬರೆಯುತ್ತಲೇ ಇದ್ದಾರೆ. ವಿನಾಯಕ ಅರಳಸುರಳಿ ಅವರ ಮುಕ್ತಿ ಕತೆ, ಪೂರ್ಣಿಮಾ ಭಟ್ ಅವರ ಕತೆ ಜಾರಿಯಲ್ಲಿ ಕತೆ, ಮುನವ್ವರ್ ಅವರ ಕತೆಗಳು, ಇಂದ್ರಕುಮಾರ ಅವರ ಕತೆಗಳು, ಶಶಿ ತರೀಕೆರೆ, ಅನಿಲ್ ಕುಮಾರ್, ದಾದಾಪೀರ್, ದೀಪ ಹೀರೇಗುತ್ತಿ, ಶಾಂತಿ ಕೆ ಅಪ್ಪಣ್ಣ, ಕಾವ್ಯ ಕಡಮೆ, ಹೀಗೆ ಹೇಳ್ತ ಹೋದರೆ ಲಿಸ್ಟ್ ದೊಡ್ಡಗುವಷ್ಟು ಕತೆಗಾರರು ಅವರ ಬೆಸ್ಟ್ ಕತೆಗಳು ನಮ್ಮ ನಡುವೆ ಇದೆ.

ಸಿನಿಮಾದವರು ಸಾಹಿತ್ಯದ ಕಡೆ ಮುಖ ಮಾಡಲಿ, ಸಾಹಿತ್ಯದವರು ಸಿನಿಮಾವನ್ನು ಕೂಡ ಅಧ್ಯಯನ ಮಾಡಲಿ ಆಗ ಒಂದೊಷ್ಟು ಎಷ್ಟೋ ಕತೆಗಳು ಗಡಿ ದಾಟುತ್ತವೆ ಜೊತೆಗೆ ಕಥೆ ಹೇಳುವ ಪ್ರಕ್ರಿಯೆ ಮತ್ತಷ್ಟು ಬದಲಾಗುತ್ತವೆ.


  • ಜಯರಾಮಚಾರಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW