ಮಡಿಲು ಕವನ ಸಂಕಲನ ಪರಿಚಯ – ಭಾರತಿ ಪ್ರಸಾದ್ ಕೊಡ್ವಕೆರೆ




ಖ್ಯಾತ ಕವಿ ಚೆನ್ನಕೇಶವ ಜಿ ಲಾಳನಕಟ್ಟೆ ಅವರ ಮಡಿಲು ಕವನ ಸಂಕಲನ ಪುಸ್ತಕದ ಕುರಿತು ಲೇಖಕಿ ಭಾರತಿ ಪ್ರಸಾದ್ ಕೊಡ್ವಕೆರೆ ಅವರು ಬರೆದ ಪರಿಚಯವನ್ನು ಓದಿ…

ಕವನ ಸಂಕಲನ ಪುಸ್ತಕ : ಮಡಿಲು
ಕವಿ : ಚೆನ್ನಕೇಶವ ಜಿ. ಲಾಳನಕಟ್ಟೆ
ಬೆಲೆ  : ೮೦ ರೂ
ಪ್ರಥಮ ಮುದ್ರಣ : ೨೦೨೧

ಕವಿ ಪರಿಚಯ :

ಶ್ರೀಯುತ ಚೆನ್ನಕೇಶವ ಜಿ ಲಾಳನಕಟ್ಟೆ ಇವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಣ್ಣ ಹಳ್ಳಿಯಿಂದ ಬಂದವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಸಪ್ತಗಿರಿ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮ್ಯಾನೇಜರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.

ಸುಮಾರು ಒಂದು ಸಾವಿರಕ್ಕೂ ಅಧಿಕ ಕವಿತೆಗಳನ್ನು ಬರೆದಿರುವ ಈ ಯುವಕವಿ ಕವಿತಾ ಪ್ರಕಾರದಲ್ಲಿ ಕೈಯಾಡಿಸದಿರುವುದು ಕಮ್ಮಿ ಎಂದೇ ಹೇಳಬಹುದು. ಭಾವಗೀತೆಗಳು, ಷಟ್ಪದಿಗಳು, ಗಜಲ್ಗಳು, ಚುಟುಕುಗಳು ಕೂಡ ಇವರಿಂದ ರಚಿಸಲ್ಪಟ್ಟಿದ್ದು, ಸುಮಾರು ೫೦ಕ್ಕೂ ಹೆಚ್ಚು ಭಾವಗೀತೆಗಳು ಯೂಟ್ಯೂಬ್ ಚಾನಲ್ನಲ್ಲಿ ಪ್ರಸಾರಗೊಂಡಿರುವುದು ಈ ಯುವಕವಿಯ ಸಾಧನೆ.

ಮಡಿಲು ಕವನ ಸಂಕಲನ ಬಿಡುಗಡೆ ಕಂಡದ್ದು ಮಾತ್ರವಲ್ಲದೇ, ರಾಜ್ಯ ಸರ್ಕಾರದ ಗ್ರಂಥಾಲಯಕ್ಕೂ ಆಯ್ಕೆ ಆಗಿದೆ. ಯುಗಾದಿ ಎಂಬ ಮತ್ತೊಂದು ಕವನಸಂಕಲನ ಸಧ್ಯದಲ್ಲೇ ಬಿಡುಗಡೆಯ ಸಂಭ್ರಮದಲ್ಲಿದೆ.

ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು

ದೇಶವ್ಯಾಪಿ ತನ್ನ ಕರಾಳಹಸ್ತ ಚಾಚಿದ್ದ ಕೋವಿಡ್ ೧೯ ಸಮಯದಲ್ಲಿ ಕೋವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸಿದ್ದ ಕವಿಗಳು ಅತ್ಯುತ್ತಮ ಕೋವಿಡ್ ವಾರಿಯರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇಷ್ಟಲ್ಲದೇ ಗೋವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರೀಶಂಕರವಾಹಿನಿಯಲ್ಲಿ ಗೋಸಂರಕ್ಷಣಾ ಕಾರ್ಯಕ್ರಮದ ನಾಲ್ಕು ಎಪಿಸೋಡ್ ಗಳನ್ನು ನಡೆಸಿಕೊಟ್ಟ ಕೀರ್ತಿ ಇವರಿಗಿದೆ. ಒಟ್ಟಿನಲ್ಲಿ ಕವಿಗಳು ಕವಿಗಳಾಗಿ ಉಳಿಯದೇ ಸಾಮಾಜಿಕ ಕಾರ್ಯಗಳಲ್ಲೂ ತಮ್ಮ ಕೈಲಾದ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ.

ಮಡಿಲು ಕವನ ಸಂಕಲನ ೪೮ ಕವನಗಳಿಂದ ಕೂಡಿದ ಕವನಸಂಕಲನವಾಗಿದೆ. ಇದರಲ್ಲಿ ಬರುವ ಮೊದಲ ಕವನ ತಾಯಿಯ ಕುರಿತಾದದ್ದಾಗಿದ್ದು, ತಾಯಿಯ ಮಹತ್ವದ ಬಗ್ಗೆ ತಮ್ಮ ಭಾವಲಹರಿಯನ್ನು ಬಿಚ್ಚಿಟ್ಟಿದ್ದಾರೆ.

‘ಇದ್ದಾಗ ಮರೆತು ಸತ್ತಾಗ ಅತ್ತರೆ
ಮತ್ತೆ ಎದ್ದು ಬರಲಾಗದಯ್ಯ
ಮಡಿದಾಗ ಎಡೆ ಇಡುವ ಬದಲು
ನಡೆವಾಗ ಎಡೆ ವಡೆ ತಿನ್ನಿಸು ದೇವ ಮೆಚ್ಚುವನಯ್ಯ’ ಎಂದಿರುವ ಕವಿ ಸಮಾಜದಲ್ಲಿ ಹೆತ್ತವರ ಬಗ್ಗೆ ನಿರ್ಲಕ್ಷ್ಯ ತಾಳುತ್ತಿರುವವರಿಗೆ ಬುದ್ಧಿ ಹೇಳುವಂತಿದೆ.

ಭೂಮಿಯನ್ನು ತಾಯಿಯಂತೆ ಪ್ರೀತಿಸುವ ಕವಿ *ವಸುಧೆ” ಶೀರ್ಷಿಕೆಯ ಕವನದಲ್ಲಿ ಆ ಒಲವನ್ನು ಬಿಚ್ಚಿಟ್ಟಿದ್ದಾರೆ.

ದಿಂದ ಕ: ದವರೆಗಿನ ಅಕ್ಷರಗಳಲ್ಲಿ ಮೂಡಿಸಿದ ಕವಿತೆ ನಿಸರ್ಗದೊಡಲಲಿ ಮಾನವ. ಪ್ರಕೃತಿ ಮತ್ತು ಮನುಷ್ಯ ನಡುವಿನ ಅವಿನಾಭಾವ ಸಂಬಂಧವನ್ನು ಬಿಂಬಿಸುವ ಕವನವಿದು. ಪಶು ಪಕ್ಷಿಗಳ ಮೇಲೂ ಅಪಾರ ಪ್ರೀತಿಯನ್ನಿರಿಸುವ ಕವಿ, ಗೋವಿನ ಬಗ್ಗೆಯೂ ಕವಿತೆಯನ್ನು ಬರೆದಿದ್ದಾರೆ. ಕಾಮಧೇನುವಿನಂತ ಗೋ ಮಾತೆಯನ್ನು ಕಡಿದು ತಿನ್ನುವವರ ಬಗ್ಗೆ ಕವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ .

ಬರಡು ಭೂಮಿಯನ್ನು ತನ್ನ ದುಡಿಮೆಯಿಂದ ಹಸನು ಮಾಡಿದ ಪರಿಯನ್ನು ವೀರನಾರಿ ಎಂಬ ಕವನದಲ್ಲಿ ಬಿಂಬಿಸಿರುವ ಕವಿ ಹೆಣ್ಣಿನ ಶಕ್ತಿಯ ಅಗಾಧತೆಯನ್ನು ಇಲ್ಲಿ ಹೇಳಿದ್ದಾರೆ. ನಾನು ಎಂಬ ಕವಿತೆ ನಾನು ಎಂಬ ಅಹಂ ಮೇಲೆ ಬೆಳಕು ಚೆಲ್ಲಿದರೆ, ಅಪ್ಪ ಅಗಲಿದಾಗ ಕವಿತೆ ಕಣ್ಣಂಚನ್ನು ಒದ್ದೆ ಮಾಡುವುದು ಸುಳ್ಳಲ್ಲ.

ಗುರುವಿನ ಬಗ್ಗೆ ಅಪಾರ ಒಲವಿರುವ ಕವಿ ನಮ್ಮಲ್ಲಿರುವ ಕತ್ತಲನ್ನು ಹೊಡೆದೋಡಿಸಿ, ಬೆಳಕನ್ನು ಮೂಡಿಸುವ ಗುರು ದೇವರಿಗಿಂತಲೂ ದೊಡ್ಡವನು ಎಂದು ಗುರು ಕವನದಲ್ಲಿ ಸಾರಿದ್ದಾರೆ.

ಸಮಾಜದಲ್ಲಿ ನಡೆಯುತ್ತಿರುವ ಲಂಚವೆಂಬ ಅನಿಷ್ಟದ ಬಗ್ಗೆ ಸಮರ ಸಾರಿರುವ ಕವಿ ಭೋಗಿ ಕವಿತೆಯಲ್ಲಿ ಸೊಗಸಾಗಿ ಬಣ್ಣಿಸಿದ್ದಾರೆ. ಕೊಟ್ಟಾರೆ ಕೊಡು ಶಿವನೆ ಕುಡುಕನಲ್ಲದ ಗಂಡನ ಎಂಬ ಜಾನಪದ ಗೀತೆಯಂತೆ ಗುಂಡಾಡಿ ಗುಂಡನಂಥ ಗಂಡನನ್ನು ಕೊಡಬೇಡ ಅನ್ನುವ ಭಾವ ಗಂಡ ಎಂಬ ಕವಿತೆಯಲ್ಲಿ ಕವಿ ತೆರೆದಿಟ್ಟಿದ್ದಾರೆ.

ಕೇವಲ ತಾಯಿ, ದೇಶ,ಭಾಷೆ, ಭೂಮಿ, ಅಪ್ಪ ಎನ್ನುವಲ್ಲಿಗೆ ಮೀಸಲಾಗದ ಇವರ ಕವಿತೆಯ ಭಾವ ರಸಿಕತೆಯಲ್ಲಿ ಎದ್ದು ಕಂಡದ್ದು ನನ್ನ ಹೆಂಡ್ತಿ * , ಹರೆಯದ ಚಿತ್ತ ಎಂಬ ಕವಿತೆಗಳಲ್ಲಿ

ಪ್ರೇಮನಿವೇದನೆಯನ್ನು ಹೀಗೂ ಮಾಡಬಹುದೆಂದು ಬಣ್ಣಿಸುವ ಕವಿತೆ ಹೀಗೊಂದು ಪ್ರೇಮ ನಿವೇದನೆ ಕವಿತೆಯಲ್ಲಿದೆ.




ಕೋವಿಡ್ ವಾರಿಯರ್ ಆಗಿಯೂ ಕೆಲಸ ಮಾಡಿರುವ ಕವಿ ಕೋವೈಡ್ ಕವಿತೆಯಲ್ಲಿ ಕೋವಿಡನ್ನು ರಕ್ಕಸ ರಾಕ್ಷಸ ಎಂದು ಬಣ್ಣಿಸುತ್ತಾರೆ.

ತಾವು ಕಲಿತ ಶಾಲೆಯ ಮೇಲೆ ಅಪಾರ ಪ್ರೇಮ ಹೊಂದಿರುವ ಕವಿ ಜ್ಞಾನ ದೇಗುಲವನ್ನು ತಮ್ಮ ಕವಿತೆಯಲ್ಲಿ ಕೊಂಡಾಡಿದ್ದು ಅಲ್ಲದೇ, ಮಕ್ಕಳ ಸಂಖ್ಯೆ ಕಡಿಮೆ ಆಗಿ ಸೊರಗಿ ಹೋದ ಪರಿಯನ್ನು ನನ್ನ ಶಾಲೆ ಕವಿತೆಯಲ್ಲಿ ಬರೆದಿದ್ದಾರೆ. ಕನ್ನಡ ಮಾಧ್ಯಮ ಶಾಲೆಯ ದುರವಸ್ಥೆ ಇವರ ಈ ಪದ್ಯದಲ್ಲಿ ಕಾಣಬಹುದು.

‌ಕನ್ನಡದ ಬಗ್ಗೆ ಅಪಾರ ಅಭಿಮಾನದ ಕುರುಹಾಗಿ ಕನ್ನಡ ಬಾವುಟ ಕವಿತೆ, ಪರರ ನಿಂದೆ ಮಾಡುವ ನಾಲಿಗೆಯನ್ನು ಕಟುವಾಗಿ ಟೀಕಿಸಿರುವ ಇವರು ಜರಿದ ನಾಲಿಗೆಯೇ ಮಿಗಿಲಂತೆ ಜಗದಲ್ಲಿ ಮುಚ್ಚಿ ಸತ್ಯವ ಮೆಚ್ಚಿಸುವ ಮಿಥ್ಯಕ್ಕಿಂತ ಎನ್ನುತ್ತಾರೆ. ಮೂರ್ನಾಲ್ಕು ಚುಟುಕುಗಳು, ಶಿಶುಗೀತೆಯೂ ಇವರ ಮಡಿಲು ಸಂಕಲನದಲ್ಲಿ ಸೇರಿದ್ದು, ಪ್ರತಿ ಕವಿತೆಯು ಪ್ರಾಸಬದ್ಧವಾಗಿರುವುದು ವಿಶೇಷ.

ಎಲ್ಲವನ್ನೂ ಕವಿ ಮನಸ್ಸಿನಿಂದಲೇ ನೋಡುವ ಇವರಿಗೆ ವಿಷಯ ಒಂದಿದ್ದರೆ ಸಾಕು. ತಟ್ಟನೆ ಅದಕ್ಕೊಂದು ಮೂರ್ತರೂಪ ಕೊಟ್ಟು ಕವಿತೆಯಾಗಿಸುವ ಚಾಕಚಕ್ಯತೆ ಬಹಳಷ್ಟಿದೆ. ಇವರ ಸಾಧನೆ ಹೀಗೆ ಮುಂದುವರಿಯಲಿ, ಇನ್ನಷ್ಟು , ಮತ್ತಷ್ಟು ಕವನಸಂಕಲನಗಳು ಇವರಿಂದ ಬಿಡುಗಡೆ ಆಗುತ್ತಿರಲಿ, ರಾಜ್ಯ ಸರ್ಕಾರದ ಗ್ರಂಥಾಲಯಕ್ಕೆ ಇವರ ಸಂಕಲನಗಳೆಲ್ಲವೂ ಸೇರಲಿ ಎಂಬ ಹಾರೈಕೆಯೊಂದಿಗೆ. ಅಕ್ಕಯ್ಯ ಎಂದು ತುಂಬು ಮನದಿಂದ, ಪ್ರೀತಿಯಿಂದ ಕರೆಯುವ ತಮ್ಮಯ್ಯನಿಗೆ ಶುಭವಾಗಲಿ ತಮ್ಮಯ್ಯ.


  • ಭಾರತಿ ಪ್ರಸಾದ್ ಕೊಡ್ವಕೆರೆ

One thought on “ಮಡಿಲು ಕವನ ಸಂಕಲನ ಪರಿಚಯ – ಭಾರತಿ ಪ್ರಸಾದ್ ಕೊಡ್ವಕೆರೆ

  1. ಪ್ರಕಟಿಸಿದ ಅಡ್ಮಿನ್ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading