‘ವಿಸ್ಮೃತಿ’ ಫ್ಯಾಂಟಸಿ ನೀಳ್ಗತೆ (ಭಾಗ ೧) – ಭಾಗ್ಯ.ಕೆ.ಯುಕತೆಗಾರ್ತಿ ಭಾಗ್ಯ.ಕೆ.ಯು ಅವರು ಬರೆದ ನೀಳ್ಗತೆಯಿದು, ಆಗೊಮ್ಮೆ ಈಗೊಮ್ಮೆ ಬರೆಯುತ್ತೇನೆ ಎನ್ನುತ್ತಲೇ ನೀಳ್ಗತೆಯನ್ನು ಬರೆದು ಓದುಗರ ಮನಗೆದ್ದ ಕತೆಗಾರ್ತಿ. ಕತೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ, ತಪ್ಪದೆ ಎಲ್ಲರೂ ಓದಿ, ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವುದರ ಜೊತೆಗೆ ಕತೆಗಾರ್ತಿಯನ್ನು ಪ್ರೋತ್ಸಾಹಿಸಿ…

ವಿಸ್ಮೃತಿ ಎದ್ದೇಳು ಕಂದ ಎನ್ನುತ್ತಾ… ಬಂದ ತಾಯಿಯ ಧ್ವನಿಗೆ ಕಿವಿಗೊಡದೆ, ಹೊದಿಕೆಯನ್ನು ಎಳೆದು ಮತ್ತೆ ಕಣ್ಮುಚ್ಚಿ ಮಲಗಿತ್ತು ಹತ್ತು ವರ್ಷದ ಮಗು ವಿಸ್ಮೃತಿ. ಎಷ್ಟೇ ಎಬ್ಬಿಸಿದರು ಮೇಲೆಳದ ಮಗುವನ್ನು ಕುರಿತು ಶಾಲೆಗೆ ತಡವಾಗಿದೆ ಕಂದ ಎದ್ದೇಳೆಂದು ಲಲ್ಲೆಗರೆದು, ಓಲೈಸಿದ್ದರು ತಾಯಿ ಪ್ರಭಲಾಂಭಿಕೆ. ಕಣ್ಮುಚ್ಚಿಯೆ ಸಬೂಬು ನೀಡುತ್ತಾ, ಇಂದು ಶಾಲೆಗೆ ಹೋಗುವುದೇ ಇಲ್ಲವೆಂದು ನುಡಿದು ಮತ್ತೆ ಕಣ್ಮುಚ್ಚಿ ಮಲಗುವಾಗ ಹಿಮೋಪಾತದ ವಾತಾವರಣದಲ್ಲೂ ಮಗುವಿನ ಒಡಲು ಬೆವರೂರುತ್ತಿತ್ತು, ಕುದಿಯುವಂತಿತ್ತು ದೇಹದ ತಾಪ. ಮಗುವನ್ನು ಸ್ಪರ್ಶಿಸಿದಾಗ ಆರೋಗ್ಯದಲ್ಲಿ ವ್ಯತ್ಯಾಸ ಇರುವಂತೆ ಗೋಚರಿಸಿ, ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗುತ್ತಾರೆ ತಾಯಿ ಪ್ರಭಲಾಂಭಿಕೆ.

ಸಾಂದರ್ಭಿಕ ಚಿತ್ರ (ಫೋಟೋ ಕೃಪೆ : mackaywomenscentre)

ಕೆಲವು ನಿಮಿಷಗಳ ನಂತರ ಅಣಿಗೊಂಡು ಬಂದು ಮತ್ತೆ ಮಗುವನ್ನು ಎಬ್ಬಿಸುವಾಗ, ಗಕ್ಕನೆ ಎದ್ದು ಕುಳಿತಿತ್ತು ಮಗು ವಿಸ್ಮೃತಿ. ಎಲ್ಲೋ ಕೆಟ್ಟ ಕನಸ್ಸಿರಬೇಕೆಂದು ನೆನೆದು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುತ್ತಾರೆ ಪ್ರಭಲಾಂಭಿಕೆ.

ಸಂಜೆಯ ವೇಳೆ ಮನೆಗೆ ಬಂದಾಗ ಮಗುವಿಗೆ ನಿತ್ರಾಣದಿಂದ ನಿದ್ದೆಯಾವರಿಸುತ್ತದೆ. ವೈದ್ಯರಿಂದ ತಪಾಸಣೆಗೊಂಡು ಔಷಧಿ ಸೇವಿಸಿ ಮಲಗಿದ್ದರಿಂದ ಮಗುವನ್ನು ಮಲಗಲುಬಿಟ್ಟು ಅವರ ಕೆಲಸದಲ್ಲಿ ಮಗ್ನರಾಗುತ್ತಾರೆ. ಅದು ಬೆಳದಿಂಗಳ ಹೊನಲಿನಡಿ, ನೀರಿನ ಮೇಲ್ಮೈಯಲ್ಲಿ ತೇಲುತ್ತಾ ಸುಂದರವಾಗಿ ಸುಸಜ್ಜಿತವಾಗಿ ವೈಭವೋಪೇತವಾಗಿ ನಿರ್ಮಾಣಗೊಂಡ ಮಾಯಾನಗರಿ. ಆ ರಾಜ್ಯದ ಅಧಿಪತಿಯಾದ ಕುಬ್ಜರಾಜನ ಮಗಳು ಮೇದಿನಿಯ ಜನನವಾಯಿತು.

ಇಡೀ ಸಂಸ್ಥಾನವೇ ಕುಬ್ಜ ದೇಹದಾರ್ಢ್ಯದ ವೈಶಿಷ್ಟ್ಯ ಛಾಯೆಗಳು. ಗಿಡ್ಡಾದ ದೇಹ, ಕುರೂಪಿ ಮೊಗ, ದಪ್ಪ ದಪ್ಪ ಕಂಗಳು, ಗಾಢವಾದ ಉಬ್ಬು ಹೀಗೆ ಅವರ ದೇಹಸೌಂದರ್ಯ ವಿಭಿನ್ನವಾಗಿತ್ತು, ವೈಶಿಷ್ಟ್ಯದಿಂದ ಕೂಡಿತ್ತು. ಮೇದಿನಿ ಬೆಳೆದಂತೆ ಅವಳ ದೇಹಸೌಂದರ್ಯ ತನ್ನೀ ಸಂಸ್ಥಾನದ ಪ್ರಜೆಗಳಿಗಿಂತ ಭಿನ್ನವಾಗಿತ್ತು!.

ನೀಳ ದೇಹಾಕೃತಿಯ ಸಿರಿಯೊಡಲು, ಸೌಂದರ್ಯವತಿಯ ರೂಪು, ನೀಳ ಕೇಶಕಾಂತಿ, ನಳನಳಿಸುವ ಹಸಿರಿನ ಸೊಬಗಿನಂತಹ ಮೊಗಕಾಂತಿಯು ಇಡೀ ಸಾಮ್ರಾಜ್ಯವನ್ನೆ ಶೋಭಿಸುವಂತಿತ್ತು. ಆದರೆ ತನ್ನ ಹತ್ತನೇ ವರ್ಷಕ್ಕೆ ದೃಷ್ಟಿಯನ್ನು ಕಳೆದುಕೊಂಡು ಮೇದಿನಿಯು ಅಂಧಳಾದಳು.

ದೃಷ್ಟಿಹೀನತೆಯನ್ನು ಮಾಯಾವಿದ್ಯೆಗಳಿಂದ ಸರಿಪಡಿಸಲಾಗದೆ ಪರಿತಪಿಸಿದ್ದ ಕುಬ್ಜರಾಜ ಮಗಳ ಸ್ಥಿತಿಯನ್ನು ನೆನೆದು ವ್ಯಸನ ಪಟ್ಟಿದ್ದ.ಸಂಸ್ಥಾನದ ಅಧಿಪತಿಗೂ, ಸಾಮ್ರಾಜ್ಯದ ಪ್ರಜೆಗಳಿಗೂ ಅವಳ ಸೊಬಗು ವಿಸ್ಮಯಾಕಾರಿಯೆನಿಸಿತ್ತು, ಅವಳ ಸೌಂದರ್ಯ ಸೋಜಿಗವೆನಿಸಿತ್ತು. ಎಂತಹದ್ದೋ ವಿಸ್ಮಯ ನಿಗೂಢ ನಮ್ಮನ್ನಾವರಿಸಲು ಸಜ್ಜಾಗಿದೆಯೆನಿಸಿತು. ಆದರೂ ರಾಜ್ಯಕ್ಕೆ ಸುಭೀಕ್ಷೆ ತಂದೊಡ್ಡುವವಳೆಂದು ಮೇದಿನಿಯನ್ನು ಸ್ಮರಿಸಿದ್ದರು ಸಂಸ್ಥಾನದ ಪ್ರಜೆಗಳು. ಅಷ್ಟಗುಣ ಸಂಪನ್ನೆ, ಪೂರ್ವ ಸೌಂದರ್ಯವತಿ, ಲಾವಣ್ಯವತಿ, ನಿರಾಭರಣಳಾದರೂ ಭುವನೈಕ ಸುಂದರಿಯವಳು. ದಶಮಾನಗಳು ಉರುಳಿದಂತೆ ಸಂಸ್ಥಾನದ ವೈಭವಕ್ಕೆ ಕುಂದಾಗುವ ಹಾಗೆ ಒಂದೊಂದೆ ಸಂಗತಿಗಳು ಜರುಗತೊಡಗಿದವು. ಕುರುಡಾದರೂ ಅವಳಿಂದಲೇ ಸಂಸ್ಥಾನಕ್ಕೆ ಸಂವೃದ್ಧಿ ಎಂಬುದು ಇಡೀ ಮಾಯಾಲೋಕ ಸಂಸ್ಥಾನದ ಅಪೂರ್ವ ನಂಬಿಕೆಯಾಗಿತ್ತು.

ಅಂದೊಮ್ಮೆ ರಾಜಸಭೆಯಲ್ಲಿದ್ದ ಕುಬ್ಜರಾಜನನ್ನು ಅರಸಿ ಕುಬ್ಜ ಮಾಯಾಲೋಕದ ಪರಿವ್ರಾಜಿಕೆ ಮಾಯಾವಿನಿ ಬಂದಿದ್ದಳು. ಸಭೆಯನ್ನು ತೊರೆದು ಮಾಯಾವಿನಿಯ ಭೇಟಿಗೆ ಬರುತ್ತಾರೆ ಕುಬ್ಜರಾಜ.
ಈ ಲೋಕಕ್ಕೆ ವಿಪತ್ತು ಆವರಿಸಿದೆ, ಮೊದಲು ಮೇದಿನಿಯನ್ನು ಸುರಕ್ಷಿತ ಮಾಡಿ ಎಂದು ಹೇಳಿ ಆಗಸದಲ್ಲಿ ಪಕ್ಷಿಯಾಗಿ ಹಾರಿಹೋದಳು ಮಾಯಾವಿನಿ. ಮಗಳ ಮೇಲೆ ಚಿಂತಾಗ್ರಸ್ತನಾದ ರಾಜ ಮೇದಿನಿಯ ಸುರಕ್ಷತೆಗೆ ಮುಂದಾದ. ತನ್ನೀ ಮಾಯಾಲೋಕದಲ್ಲಿ ಸುಬದ್ರವಾಗಿ ಮಗಳನ್ನಿರಿಸಲು ಅಷ್ಟ ಶಕ್ತಿಯಿಂದ ಮಾಯಾ ವ್ಯೂಹವೊಂದರ ರಚನೆ ಮಾಡಿದ. ಕುಬ್ಜ ಆಸ್ಥಾನದ ಮಾಯಾವಲಯದ ಸುತ್ತಲೂ ಅಸಾಧಾರಣ ಶಕ್ತಿಗಳು ಒಳನುಗ್ಗಲು ಆಗದಂತಹ ಮಾಯಾ ಶಕ್ತಿಯಿಂದ ವಲಯ ಸೃಷ್ಟಿಸಿದ್ದ.

*****
ಸಹಸ್ರವರ್ಷ ಪ್ರಾಯದ ವಿಹಂಗ ರಾಜನ ಆಸ್ಥಾನ ಕ್ಷಿತಿಗದಲ್ಲಿ ಸೃಷ್ಟಿಸಲ್ಪಟ್ಟಿತ್ತು. ಭೂಮಿಯನ್ನು ಮುಟ್ಟುವಂತೆ ಕಾಣುವ ಆಕಾಶದಲ್ಲಿ ಸೃಷ್ಟಿಸಲ್ಪಟ್ಟ ಆ ಆಸ್ಥಾನ ವಿಸ್ಮಯಲೋಕದ ನಿಗೂಢವಾಗಿತ್ತು.

ರಜನಿಯ ಇರುವಿಕೆಯೇ ಇಲ್ಲದ ವಿಸ್ಮಯಲೋಕವದು.

ಅಂದೊಂದು ದಿನ ಅಪರರಾತ್ರಿಯಲ್ಲಿ ನಂದಿಹೋದ ಪ್ರಣತಿಯ ಹರಿವನ್ನು ಎಣಿಸಿ ದಿಗ್ಭ್ರಮೆಗೊಂಡಿದ್ದ ವಿಹಂಗ ರಾಜನಿಗೆ ತನ್ನ ದಿವ್ಯ ಜ್ಞಾನದಿಂದ ಗೋಚರಿಸಿದ ಸಂಗತಿಯಿಂದ ಮೇದಿನಿಯನ್ನು ವರಿಸಿ, ಅವಳ ಮೂಲಕ ತನ್ನ ವಿಸ್ಮಯಲೋಕಕ್ಕೆ ಒದಗಿದ್ದ ಆಪತ್ತನ್ನು ನಿಗ್ರಹಿಸಿಲು ಸಂಚುಗಳನ್ನು ಹೆಣೆದಿದ್ದ.

ಅವನು ಮೇದಿನಿಯನ್ನು ವರಿಸಲು ಬಹುಮುಖ್ಯವಾದ ಕಾರಣ ಇನ್ನೊಂದಿತ್ತು. ಮೇದಿನಿಯನ್ನು ವರಿಸದೇ ಹೋದಲ್ಲಿ ಕ್ರಮೇಣ ಅವನ ಅಷ್ಟ ಶಕ್ತಿಗಳು ಕುಂದುವುದು, ಹತ್ತು ಶತಮಾನಗಳು ಆಮರಣ ಶಕ್ತಿಯನ್ನು, ವರವನ್ನು ಪಡೆದವನಿಗೆ ಮೇದಿನಿಯೊಂದಿಗೆ ವಿವಾಹವಾಗದೆ ಹೋದಲ್ಲಿ ಸಹಸ್ರ ವರ್ಷಾಯುಷ್ಯವೇ ಕೊನೆಯೆಂಬುದು ದಿವ್ಯಜ್ಞಾನದಿಂದ ತಿಳಿಯಲ್ಪಟ್ಟಿತ್ತು.

ಫೋಟೋ ಕೃಪೆ : huffpost

ಮೇದಿನಿಯನ್ನು ಹುಡುಕಿಕೊಂಡು ಸಹಚರ ಅನುಚರರೊಂದಿಗೆ ಹಯವೇರಿ ಹೊರಟಿದ್ದ ವಾಯುವಿನಲ್ಲಿ.

ಕ್ಷಿತಿಗದಿಂದ ಹೊರಟ ಪಯಣ ಕುಬ್ಜರಾಜನ ಮಾಯಾಲೋಕದ ಆಸ್ಥಾನದ ಎದುರಲ್ಲಿ ನಿಂತಿತ್ತು.

ವಿಹಂಗ ರಾಜನ ಅಳವಿಗೆ ಮಾಯಾಲೋಕವು ತೃಣಕ್ಕೆ ಸಮಾನ ಎಂಬ ಅಲ್ಪ ಯೋಚನೆಯಿಂದ ಮಾಯಾವಲಯವನ್ನು ಭೇದಿಸಲು ಹೊರಟವನಿಗೆ ನಿರಾಶೆ ಕಾದಿತ್ತು. ಕುಬ್ಜರಾಜನ ಶಕ್ತಿವಲಯವನ್ನು ಭೇದಿಸಲಾಗದೆ ಅವನ ಅಷ್ಟ ಶಕ್ತಿಗಳನ್ನು ಬಳಸಿ ವ್ಯರ್ಥವೆನಿಸಿ‌ ಕೊನೆಗೆ ಸೋತು ವಿಸ್ಮಯಲೋಕಕ್ಕೆ ವಾಪಸ್ಸಾಗುತ್ತಾನೆ.

ಸಹಸ್ರ ವರ್ಷೋಪ್ರಾಯದ ವಿಹಂಗನಿಗೆ ಮೇದಿನಿಯ ಜನ್ಮರಹಸ್ಯವನ್ನು ತಿಳಿಯುವ ಮನೋ ಇಚ್ಛೆ.

ತನ್ನ ದಿವ್ಯ ಶಕ್ತಿಯಿಂದ ಎಷ್ಟು ಪ್ರಯತ್ನಿಸಿದರೂ ಅವಳ ಜನ್ಮ ರಹಸ್ಯವನ್ನು, ಅವಳ ಅಳವನ್ನು ಗ್ರಹಿಸಲಾಗದೆ ಮತ್ತೊಂದು ಸೋಲಿಗೆ ಶರಣಾಗುತ್ತಾ ವ್ಯಾಗ್ರಿಯಾಗುತ್ತಾನೆ. ತನ್ನ ಅದಃಪತನವನ್ನು ಸಹಿಸಲಾಗದೆ ಮೇದಿನಿಯನ್ನು ವರಿಸಲು ಹೊಂಚುಹಾಕಿ ಕಾಯುತ್ತಿರುತ್ತಾನೆ. ತನ್ನ ಜನ್ಮದಾತ ಕ್ಷಿತಿಪ ರಾಜನಿಂದ ಮಾಯಾಜಾಲ ವಿದ್ಯೆಯನ್ನು ಕಲಿತು ಕರಗತ ಮಾಡಿಕೊಂಡ ವಿಹಂಗನಿಗೆ ಸಕಲ ಸಂಸ್ಥಾನಗಳನ್ನು ಆಳುವ ಹೆಬ್ಬಯಕೆ, ಸಕಲ ಜೀವಚರಗಳನ್ನು ಮುಷ್ಠಿಯಲ್ಲಿಟ್ಟುಕೊಳ್ಳುವ ಮಹದಾಸೆ.

****

ಕಾಪಾಡಿ, ಕಾಪಾಡಿ ಎಂದು ಚೀರಿಕೊಳ್ಳುವ ವಿಸ್ಮೃತಿಯ ಬಳಿ ಪ್ರಭಲಾಂಭಿಕೆ ಧಾವಿಸಿಬರುತ್ತಾರೆ.

ಫೋಟೋ ಕೃಪೆ : iStock

ನಿದ್ರೆಯಿಂದ ಎಚ್ಚರಗೊಂಡ ಮಗು ಬಡಬಡಾಯಿಸುತ್ತಿರುವುದು ಕಂಡು ಮಗುವನ್ನು ಸಮಾಧಾನಿಸುತ್ತಾರೆ, ಸಂತೈಸಿಸುತ್ತಾರೆ. ಕಣ್ಣನ್ನು ಮುಚ್ಚಿದಂತೆಯೇ ಮಗು ಮಾತನಾಡುತ್ತದೆ ಗಾಬರಿಯಲ್ಲಿ.
ಆ ಕುಳ್ಳ ದೇಹದ ಮನುಷ್ಯರು ಮೇದಿನಿಯನ್ನು ಕಾಪಾಡಲು ಹೊರಟಿದ್ದಾರೆ, ವಿಹಂಗ ರಾಜ ಮೇದಿನಿಯನ್ನು ವರಿಸಲು ಮತ್ತೆ ಬರುತ್ತಾನೆ, ಹೀಗಾಗಬಾರದು, ಕಾಪಾಡಿ, ಕಾಪಾಡಿ ಎಂದು ಮತ್ತೆ ಮತ್ತೆ ಹೇಳುವ ಮಗುವಿನ ಕುರಿತು ಚಿಂತೆಯಾಗುತ್ತದೆ ತಾಯಿಗೆ. ಕಣ್ಣುತೆರೆಯುವವರೆಗೂ ಸಮಾಧಾನಿಸಿ ಕಾಯ್ದು, ಆನಂತರ ಮಗುವಿನ ಬಳಿ ಕನಸು ಕಂಡೆಯಾ?… ಎಂದು ಕೇಳಿದಾಗ ಏನಿಲ್ಲವೆಂದು ನಿರಾತಂಕವಾಗಿ ಅರುಹಿದ ಮಗುವಿನ ಕುರಿತು ಭಯಬೀತಳಾಗುತ್ತಾಳೆ ತಾಯಿ ಪ್ರಭಲಾಂಭಿಕೆ.

(ಮುಂದುವರೆಯುವುದು)…


  • ಭಾಗ್ಯ.ಕೆ.ಯು (ಗೃಹಿಣಿ, ಹವ್ಯಾಸಿ ಬರಹಗಾರ್ತಿ), ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW