ಮಹಾಭಾರತದಲ್ಲಿ ರಾಕ್ಷಸರನ್ನು ಸೃಷ್ಟಿಸಿದ್ದು ಯಾರು?

ಲೇಖನ- ಹೂಲಿ ಶೇಖರ್‌ 
(ಖ್ಯಾತ ನಾಟಕಕಾರರು – ಚಿತ್ರಕಥೆ- ಸಂಭಾಷಣಾಕಾರರು) 

bf2fb3_da95706332c74d5c859197064ad9f6f3~mv2.jpg

ಇದೀಗ ಕಿರುತೆರೆಯಲ್ಲಿ ಬಿ ಆರ್ ಛೋಪ್ರಾ ಅವರ ಮಹಾಭಾರತ ಧಾರಾವಾಹಿಗಳನ್ನು ಎಲ್ಲರೂ ನೋಡುತ್ತಿದ್ದಾರೆ. ಇವುಗಳಲ್ಲಿ ಯಾವುದು ಐತಿಹಾಸಿಕ ಕತೆ? ಯಾವುದು ಪೌರಾಣಿಕ ಕತೆ? ಎಂದು ಕೆಲವರಿಗಾದರೂ ಗೊಂದಲ ಇರಬಹುದು. ಹಲವರು ಹೇಳುವಂತೆ ರಾಮಾಯಣವು ಒಂದು ಪೌರಾಣಿಕ ಕತೆ. ಅಥವಾ ಅದೊಂದು ಮಿಥ್‌.

ಆದರೆ ಡಾ.ಹೆಚ್‌.ಎ.ಪಾರ್ಶ್ವನಾಥ್‌ ಅವರು ಹೇಳುವಂತೆ ಮಹಾಭಾರತದ ಕತೆ ಮಾತ್ರ ಎಂದಿಗೂ ಒಂದು ಇತಿಹಾಸವೆ? ಅದನ್ನು ಒಂದು ಇತಿಹಾಸವಾಗಿಯೇ ನೋಡಬೇಕು. ಇತಿಹಾಸ ಯಾವಾಗಲೂ ಬರೆಯುವವನ ಕೈಯಲ್ಲಿ ಮರು ಹುಟ್ಟು ಪಡೆದು ಹೊಸದೊಂದು ಕತೆಯಾಗುತ್ತದೆ. ಅದು ಕಾಲ ಕಾಲಕ್ಕೆ ರೂಪ ಬದಲಿಸುತ್ತಲೇ ಇರುತ್ತದೆ. ಎರಡೂ ಮಹಾಕಾವ್ಯದಲ್ಲಿ ಅವುಗಳನ್ನು ಬರೆದವರು ಲೋಕದ ನೀತಿ ಮತ್ತು ಅನೀತಿಗಳನ್ನು ವಿಸ್ತಾರಗೊಳಿಸಿದ್ದಲ್ಲದೆ ಯುದ್ಧಗಳನ್ನು ರಮ್ಯವಾಗಿ ಸೃಷ್ಟಿಸಿದ್ದಾರೆ. ಇದಕ್ಕೆ ಪೂರಕವಾದ ಉಪಕತೆಗಳಲ್ಲಿ ಮನುಷ್ಯರೂಪದ ರಾಕ್ಷಸರನ್ನೂ ಸೃಷ್ಟಸಿದ್ದಾರೆ. ಈ ರಾಕ್ಷಸರು ಮನುಷ್ಯರೂ ಅಲ್ಲದ ಪ್ರಾಣಿಗಳೂ ಅಲ್ಲದ ವಿಚಿತ್ರ ಶಕ್ತಿಯ ಪಿಂಡಗಳಾಗಿ ನಮಗೆ ಗೋಚರಿಸುತ್ತಾರೆ. ರಾಮಾಯಣ ಒಂದು ಪೌರಾಣಿಕ ಕತೆಯಾದ್ದರಿಂದ ಅಲ್ಲಿ ಇಂಥ ಅಚ್ಚರಿಯ ಉದ್ಭವಗಳು ರಮ್ಯತೆಯ ಕಾರಣದಿಂದ ಸಹ್ಯವಾಗಬಹು ದೇನೋ. ಈಗಲೂ ಸಾಕಷ್ಟು ಜನ ರೋಚಕ, ಮತ್ತು ರಮ್ಯ ಕತೆಗಳನ್ನು ಕಾರಣವಿಲ್ಲದೆ ಇಷ್ಟಪಡುತ್ತಾರೆ. ಆದರೆ ಮಹಾಭಾರತ ಒಂದು ಇತಿಹಾಸ ಎಂದು ಒಪ್ಪಿಕೊಂಡು ನೋಡುವಾಗ ಇಲ್ಲಿ ಬರುವ ಅಸಹಜತೆಗಳು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ. ಈ ಪ್ರಶ್ನೆಗಳಲ್ಲಿ ಮುಖ್ಯವಾದದ್ದು ಮಹಾಭಾರತದ ಕಾಲದಲ್ಲಿ ಹಿಡಂಬಾ, ಹಿಡಂಬಿ, ಬಕಾಸುರ, ಇವರೆಲ್ಲ ರಾಕ್ಷಸರು ಹೇಗಾಗುತ್ತಾರೆ. ಕೃಷ್ಣನ ಮಾವ ಅನ್ನುವ ಕಾರಣಕ್ಕೆ ಕಂಸ ರಾಕ್ಷಸನಾಗುವುದಿಲ್ಲ. ರಾಜನೊಬ್ಬನ ಹೆಂಡತಿಯ ತಮ್ಮ ಎಂಬ ಕಾರಣಕ್ಕೆ ಕೀಚಕ ರಾಕ್ಷಸನಾಗುವುದಿಲ್ಲ. ಅವರು ಕೇವಲ ದುಷ್ಟಪಾತ್ರಗಳು ಅಷ್ಟೇ. ಯಾಕಂದರೆ ಇವರೆಲ್ಲ ಇದ್ದದ್ದು ಉತ್ತರ ಭಾರತದಲ್ಲಿ. ಮಹಾ ಕಾವ್ಯಗಳನ್ನು ಬರೆದವರಿಗೆ ಉತ್ತರ ಕಡೆಯವರು ಯಾವತ್ತೂ ರಾಕ್ಷಸರಾಗಿ ಗೋಚರವಾಗುವುದಿಲ್ಲ. ರಾಕ್ಷಸರು ಏನಿದ್ದರೂ ದಕ್ಷಿಣಾತ್ಯರು.

ದಕ್ಷಿಣದ ಹುಡುಗಿ ಶೂರ್ಪನಖಿ ಉತ್ತರದ ಹುಡುಗ ಲಕ್ಷ್ಮಣನನ್ನು ಬಯಸುತ್ತಾಳೆ. ಲಕ್ಷ್ಮಣ ಆಕೆಯ ಮೂಗನ್ನೇ ಕತ್ತರಿಸಿ ಬಿಡುತ್ತಾನೆ. ಆದರೆ ದಕ್ಷಿಣದ ಗಂಡು [ರಾವಣ] ಸೀತೆಯನ್ನು ಬಯಸಿದ್ದು ಅದೂ ತಪ್ಪೇ. ಆದರೆ ತಪ್ಪುಗಳು ದಕ್ಷಿಣದ ಕಡೆಯವರಿಂದ ಮಾತ್ರ ಆಗುತ್ತವೆ. ಶಿಕ್ಷೆಗಳು ಅವರಿಗೇ ಕೊಡಲ್ಪಡುತ್ತವೆ ಅನ್ನುವುದು ಇತಿಹಾಸವಲ್ಲ. ಇಂಥವು ರಾಮಾಯಣದಂಥ ಪೌರಾಣಿಕ ಕತೆಗಳಲ್ಲಿ ಮಾತ್ರ ಘಟಿಸಬೇಕು. ಆದರೆ ಮಹಾಭಾರತ ಹಾಗೆ ಬರೆಯಲ್ಪಟ್ಟಿಲ್ಲ. ಇತಿಹಾಸಕ್ಕೆ ನಿಷ್ಠರಾಗಿ ಬರೆಯಲ್ಪಿಟ್ಟಿಲ್ಲ. ಇತಿಹಾಸಕ್ಕೆ ಬಣ್ಣ ಕೊಟ್ಟು ಅಲ್ಲಿಯೂ ಅಮಾಯಕ ಬುಡಕಟ್ಟು ಜನರಿಗೆ ರಾಕ್ಷಸ ಪಟ್ಟ ಕಟ್ಟಲಾಗಿದೆ. ಇದರಲ್ಲಿ ಬರುವ ಹಿಡಂಬಾ, ಹಿಡಂಬಿ, ಬಕಾಸುರ ಯಾರೇ ಇರಲಿ ಅವರು ರಾಕ್ಷಸಸರಲ್ಲ. ಅವರು ಬುಡಕಟ್ಟು ಆದಿವಾಸಿ ಜನ ಅನ್ನುವುದನ್ನು ಒಪ್ಪಬೇಕು. ಈ ಹಿನ್ನಲೆಯಲ್ಲಿ ರಂಗ ನಿರ್ದೇಶಕ ಮತ್ತು ಸಿನಿಮಾ ನಿರ್ದೇಶಕ ಪೀಟರ್‌ ಬ್ರೂಕನ ಮಹಾ ಭಾರತ ಸಿನಿಮಾ ನೋಡಬೇಕು. ಅದನ್ನು ನೋಡಿದ ನಂತರ ನನ್ನ ಅನುಮಾನಗಳು ಇನ್ನಷ್ಟು ಗಟ್ಟಿಯಾಗಿವೆ.

ಇಲ್ಲಿ ನೋಡಿ. ವಾಲ್ಮೀಕಿ ಹೇಳಿದ್ದೇ ಸತ್ಯವಾಗಿದ್ದರೆ ರಾಮಾಯಣದ ಕಾಲದಲ್ಲಿ ಮನುಷ್ಯರು ಯುದ್ಧವನ್ನೇ ಮಾಡಲಿಲ್ಲ. ಅಲ್ಲಿ ಯುದ್ಧಮಾಡಿದವರು ವಾನರರು, ಕರಡಿ ರೂಪದ ಜಾಂಬುವಂತ-ನೀಲರು ಮತ್ತು ಇತರ ಪ್ರಾಣಿ, ಪಕ್ಷಿಗಳು. ಹಾಗೂ ರಾವಣ ಮತ್ತು ರಾಕ್ಷಸರ ಕುಲದವರು. ಗೆದ್ದವರು ಮಾತ್ರ ದೈವ ರೂಪದ ಮನುಷ್ಯರಾದ ಶ್ರೀ ರಾಮ-ಲಕ್ಷ್ಮಣರು. ದ್ವಾಪರ ಯುಗದ ಮಹಾಭಾರತದಲ್ಲಿ ಮಾತ್ರ ಮನುಷ್ಯ-ಮನುಷ್ಯರ ನಡುವೆ ಯುದ್ಧವಾಗುತ್ತದೆ. ಗೆದ್ದವರು ಮಾತ್ರ ನೀತಿಯುತ ಮನುಷ್ಯರು. ಅಷ್ಟಾದರೂ ಈ ಕತೆಯ ಅನೇಕ ಭಾಗದಲ್ಲಿ ಬರುವ ರಾಕ್ಷಸರು ಯಾರು? ಎಂಬ ಪ್ರಶ್ನೆ ಏಳುತ್ತದೆ. ಈ ಪ್ರಶ್ನೆಗೆ ಸರಳ ಮತ್ತು ನೇರ ಉತ್ತರವೆಂದರೆ ಅವರೆಲ್ಲ ಭರತವರ್ಷದ ಮೂಲ ನಿವಾಸಿಗಳಾದ ಆದಿವಾಸಿಗಳು ಯಾ ಬುಡಕಟ್ಟು ಜನಾಂಗದವರು.

ಕೈಕೇಯಿಯ ಅಸೂಯೆಗೆ ಒಂದು ರಾಮಾಯಣವೇ ಸೃಷ್ಟಿಯಾಯಿತು.

Screenshot (18)

ಆ ಕಾಲದಲ್ಲಿ ಎಂದಿನಂತೆ ಚಿಕ್ಕ-ಪುಟ್ಟ ಅನೇಕ ರಾಜ್ಯಗಳಿದ್ದವು. ಈ ರಾಜರಲ್ಲಿ ಮೇಲಾಟಗಳು, ಅಸೂಯೆಗಳು, ಅಧಿಕಾರಕ್ಕಾಗಿ ಕಚ್ಚಾಟಗಳು ಇಂದಿನ ಹಾಗೆ ಅಂದೂ ಇದ್ದವು. ಕೈಕೇಯಿ ಎಂಬ ರಾಣಿಯ ಅಸೂಯೆಗೆ ಒಂದು ರಾಮಾಯಣವೇ ಸೃಷ್ಟಿಯಾಯಿತು. ದುರ್ಯೋಧನ ಎಂಬ ಒಬ್ಬ ದಾಯಾದಿಯ ಅಸೂಯೆಗೆ ಒಂದು ಮಹಾಭಾರತವೇ ನಿರ್ಮಾಣವಾಯಿತು.ಈಗಿದು ಕಲಿಯುಗ.

ಅವತ್ತಿನ ಅಸೂಯೆಗಳು ಇಂದು ಪ್ರತಿ ಮನೆಯಲ್ಲೂ ಉಸಿರು ಹಾಕುತ್ತಿವೆ. ರಾಮಾಯಣ, ಮಹಾಭಾರತಗಳು ಪ್ರತಿ ಊರಿನಲ್ಲಿಯೂ ಇವೆ. ಸೇಡು, ಆಕ್ರಮಣ, ಕೊಲ್ಲುವುದು, ಅತ್ಯಾಚಾರ, ಅನಾದರಣೆ ಮನುಷ್ಟನಿಗೆ ಅಂಟಿ ಬಂದ ಜಾಡ್ಯ. ಇದರ ನಡುವೆ ನೀತಿ ಪರರಾದ ಋಷಿಗಳು, ತ್ಯಾಗಿಗಳು ಆಗಲೂ ಇದ್ದರು. ಈಗಲೂ ಇದ್ದಾರೆ. ಯಾಕಂದರೆ ಅವರೂ ಮನುಷ್ಯರು. ಹುಟ್ಟಿ ಸಾಯುವವರೆಲ್ಲ ಮನುಷ್ಯರು ತಾನೆ. ಆದರೆ ತಾಮಸ ಮತ್ತು ರಾಕ್ಷಸೀ ಗುಣ ಮನುಷ್ಯನಲ್ಲಿದೆ ವಿನಃ ರಾಕ್ಷಸ ಅನ್ನುವ ಇನ್ನೊಂದು ಪ್ರಾಣಿಯಲ್ಲಿಲ್ಲ.

ಆಗ ಬಲಿಷ್ಠನಾದವ ರಾಜನಾಗಿರುತ್ತಿದ್ದ. ಇನ್ನೂ ಬಲಿಷ್ಠನಾಗಿದ್ದರೆ ಅನೇಕ ರಾಜರನ್ನು ತನ್ನ ಸಾಮಂತರನ್ನಾಗಿ ಮಾಡಿಕೊಳ್ಳುತ್ತಿದ್ದ. ಚಕ್ರವರ್ತಿ ಎಂದು ಬಿರುದಾಂಕಿತನಾಗುತ್ತಿದ್ದ. ಧನ ಸಂಪತ್ತು, ಕನಕ ಸಂಪತ್ತು, ಭೂ ಸಂಪತ್ತು, ಪಶು ಸಂಪತ್ತು, ಸ್ತ್ರೀ ಸಂಪತ್ತು ಅವನ ಬಳಿ ಬಂದು ಬೀಳುತ್ತಿತ್ತು. ಈ ಜಗತ್ತಿನಲ್ಲಿ ಮನುಷ್ಯ ಪ್ರಾಣಿಗೆ ಬುದ್ಧಿ ಎಂಬುದು ಯಾವತ್ತು ಬಂದಿತೋ

ಅಂದಿನಿಂದ ಈ ಸಂಪತ್ತುಗಳಿಗಾಗಿ ಮನುಷ್ಯ ಪ್ರಾಣಿಗಳಲ್ಲಿ ಹೊಡೆದಾಟಗಳು- ಕಾದಾಟಗಳು ಆರಂಭವಾದವು. ಬಲವಿದ್ದವ ಬದುಕುತ್ತಿದ್ದ. ಬಲಹೀನ ಗುಲಾಮನಾಗಿ ಇಲ್ಲಾ ಲಯವಾಗಿ ಹೋಗುತ್ತಿದ್ದ.

ಇರುವುದಕ್ಕಿಂತ ಇಲ್ಲದ್ದನ್ನು ಹೆಚ್ಚು ಹೇಳಿದ್ದು ಯಾರು?

ಇಡೀ ಭಾರತದ ಇತಿಹಾಸದಲ್ಲಿ ಇರುವುದಕ್ಕಿಂತ ಇಲ್ಲದ್ದನ್ನು ಲೇಪಿಸುವ ಕೆಲಸ ಮೊದಲಿನಿಂದಲೂ ನಡೆದಿದೆ. ಅತಿಶಯೋಕ್ತಿಗಳು ಹೇರಳವಾಗಿ ಉಪಕತೆಗಳಲ್ಲಿ ಸೇರಿಕೊಂಡಿವೆ ಎಂದೂ ಹೇಳಬಹುದು. ವ್ಯಾಸರಾದಿಯಾಗಿ ಮಹಾಭಾರತದ ಕತೆಯನ್ನು ಬರೆದವರೆಲ್ಲ ಮೂಲ ಕತೆಯೊಂದಿಗೆ ತಮಗೆ ಅನಿಸಿದ್ದನ್ನು ಇನ್ನಷ್ಟು ಲೇಪಿಸುತ್ತ ಕತೆ ಆಕರ್ಷಕವಾಗಿ ಮೂಡಿ ಬರುವಂತೆ ನೋಡಿಕೊಂಡಿದ್ದಾರೆ. ಹಾಗಾಗಿ ಭಾರತದಲ್ಲಿರುವ ಎಲ್ಲಾ ಭಾಷೆಗಳಲ್ಲಿ ಬಂದಿರುವ ಕತೆ ಒಂದೇ ರೀತಿಯಾಗಿಲ್ಲ. ಮೂಲ ಕತೆ ಒಂದೇ ಇದ್ದರೂ ಪ್ರಾದೇಶಿಕ ಮಟ್ಟದಲ್ಲಿ ಯೋಚಿಸುವಾಗ ತಮಗೆ ಸರಿ ಕಂಡ ರೀತಿಯಲ್ಲಿ ಬರೆಯುತ್ತ ಹೋಗುತ್ತಾರೆ. ಅದರಿಂದ ಒಂದು ಭಾಷೆಯಲ್ಲಿ ಬರೆದ ಈ ಕಾವ್ಯಗಳು ಇನ್ನೊಂದು ಭಾಷೆಯಲ್ಲಿ ಬದಲಾಗುತ್ತ… ಮತ್ತೂ ಬರೆದಾಗ ಬದಲಾಗುತ್ತ ಹೋಗುತ್ತವೆ. ಆದರೆ ಎಲ್ಲಕ್ಕೂ ಮೂಲ ದ್ರವ್ಯವೇ ಬಂಡವಾಳ ಆಗಿರುತ್ತದೆ ಎಂಬುದನ್ನು ಮರೆಯುವಂತಿಲ್ಲ.

Screenshot (19)

ಆಗಿನ ಕಾಲದಲ್ಲಿ ರಾಕ್ಷಸರು ನಿಜವಾಗಲೂ ಇದ್ದರೆ?

ಆಯಾ ಲೇಖಕರ ಪಾಂಡಿತ್ಯಕ್ಕೆ ತಕ್ಕಂತೆ ಟೀಕೆಗಳು, ವ್ಯಾಖ್ಯಾನಗಳು ಕಾಲಕಾಲಕ್ಕೆ ನಡೆದಿವೆ. ನಿಜವಾಗಲೂ ಮಹಾಭಾರತದ ಕಾಲದಲ್ಲಿ ಅಷ್ಟೊಂದು ಹೆಣಭಾರ ಬಂಗಾರವನ್ನು ಮೈಯ ಮೇಲೆ ಹೇರಿಕೊಂಡು ಓಡಾಡುತ್ತಿದ್ದರೆ? ಯುದ್ಧ ಮಾಡುತ್ತಿದ್ದರೆ? ಅಷ್ಟೊಂದು ಆನೆ, ಕುದುರೆಗಳ ಬಳಕೆ ಆಗ ನಡೆಯುತ್ತಿತ್ತೆ? ಆದಿವಾಸಿಗಳೇ ಹೆಚ್ಚಿದ್ದ ಆಗಿನ ಕಾಲದಲ್ಲಿ ರಾಕ್ಷಸರು ಎಲ್ಲಿಂದ ಬಂದರು? ‘ ರಾಕ್ಷಸರು’ ಎಂಬ ಪ್ರಭೇದ ಇತ್ತೆ? ಅತೀಂದ್ರಯ ಶಕ್ತಿ ಅವರಿಗೆ ಹೇಗೆ ಬಂತು. ಅಥವಾ ನಾನು ಮೊದಲು ಹೇಳಿದಂತೆ ಬುಡಕಟ್ಟು ಮನುಷ್ಯರಿಗೇ ರಾಕ್ಷಸರು ಎಂದು ಕರೆಯಲಾಯಿತೆ?

ಕೀಚಕ, ಬಕಾಸುರ, ಹಿಡಂಬ, ಹಿಡಂಬಿ, ಘಟೋತ್ಗಜ ಮುಂತಾದವರು ನಿಜವಾಗಲೂ ರಾಕ್ಷಸರೇ? ಅಥವಾ… ಅವರೂ ಇಲ್ಲಿಯ ಮೂಲ ಬುಡಕಟ್ಟು ಆದಿವಾಸಿಗಳೇ? ಬುಡಕಟ್ಟು ಜನ ಸಾತ್ವಿಕ ಆಹಾರ ಸೇವಿಸುವವರಲ್ಲ? ಅವರಿಗೆ ಮಾಂಸಾಹಾರವೇ ಮುಖ್ಯ. ಅಂಥವರು ನಾಗರೀಕತೆಯನ್ನು ಒಪ್ಪಲು ಸಾಧ್ಯವಿರಲಿಲ್ಲ. ಹಾಗಾಗಿ ಅವರಿಗಿದ್ದ ಸಂಸ್ಕಾರವೇ ಬೇರೆ ರೀತಿಯದ್ದು. ಅವರವರ ಸಂಸ್ಕಾರಕ್ಕೆ ಅನುಗುಣವಾಗಿ ಮಹಾಭಾರತದ ಪಾತ್ರಗಳು ಸೃಷ್ಟಿಯಾದುವು ಎಂಬುದನ್ನೂ ಒಪ್ಪಬಹುದೇ?

ಗುರುಕುಲದಲ್ಲಿ ವರ್ಗ ಭೇದ

Screenshot (20)

ತ್ರೇತಾ ಯುಗದಿಂದಲೂ ರೂಢಿಯಲ್ಲಿದ್ದ ಗುರುಕುಲಗಳ ಸಂಸ್ಕಾರವು ಕೇವಲ ರಾಜರ ಮಕ್ಕಳು, ಪಾಳೇಗಾರರ ಮಕ್ಕಳು, ಅಧಿಕಾರಿ- ಶ್ರೀಮಂತರ ಮಕ್ಕಳಿಗೆ ಮಾತ್ರ ಸೀಮಿತವಾಗಿದ್ದವು. ಗುರುಕುಲದಲ್ಲಿ ಶಿಕ್ಷಣ ಕೊಡುವವರು ಕೇವಲ ಬ್ರಾಹ್ಮಣರಾಗಿದ್ದರು. ಆ ಕಾರಣದಿಂದ ರಾಜಕೀಯವಾಗಿಯೂ ಬ್ರಾಹ್ಮಣರು ಪ್ರಭಾವ ಬೀರಲು ಕಾರಣವಾಗಿತ್ತು. ರಾಜರ ಕುಲಗುರುಗಳಾಗಿಯೂ, ಮಂತ್ರಿಗಳಾಗಿಯೂ, ಅವರ ಮಾರ್ಗದರ್ಶಕರಾಗಿಯೂ ಅವರೇ ಇದ್ದುದರಿಂದ ಬ್ರಾಹ್ಮಣರಿಗೆ ವಿಶೇಷ ಸಾಮಾಜಿಕ ಗೌರವ ಇರುತ್ತಿತ್ತು.ತದ್ವಿರುದ್ಧವಾಗಿ ಬುಡಕಟ್ಟು ಜನರಿಗೆ ಅಂಥ ಯಾವ ಮನ್ನಣೆಯೂ ಇರಲಿಲ್ಲ. ಬುಡಕಟ್ಟು ಜನ ಹುಂಬರು. ಆಚಾರ-ವಿಚಾರಗಳಿಂದ ದೂರ ಇದ್ದವರು. ಮಹಾ ಶಕ್ತಿವಂತರು. ನಾಗರಿಕ ಸಮಾಜದ ಯುದ್ಧ ಅವರಿಗೆ ಗೊತ್ತಿಲ್ಲ. ಯಾಕಂದರೆ ಅವರಿಗೆ ಹೆಣ್ಣು-ಹೊಣ್ಣು-ಮಣ್ಣು [ರಾಜ್ಯ] ಗಳು ಬೇಕು ಅನಿಸುತ್ತಿರಲಿಲ್ಲ. ಬುಡಕಟ್ಟು ಜನಕ್ಕೆ ಶಿಕ್ಷಣಕೊಡಲು ಯಾರೂ ಮುಂದೆ ಬರುತ್ತಿರಲಿಲ್ಲ. ಅದೇ ಕಾರಣಕ್ಕೆ ಏಕಲವ್ಯನ ಕತೆ, ಕರ್ಣ -ಪರಶುರಾಮರ ಕತೆ ಮಹಾಭಾರತದಲ್ಲಿ ಹುಟ್ಟಿಕೊಳ್ಳುತ್ತವೆ. ಆಗ ವಿದ್ಯೆ ಹೊಂದಿದವರು ಶ್ರೀಮಂತರೂ, ಶಸ್ತ್ರ-ಶಾಸ್ತ್ರ ಪಾರಂಗತರೂ, ಐಹಿಕ ಭೋಗ ಸಂಪನ್ನರೂ ಆದರು. ಅಂಥ ಜನರದ್ದೇ ಒಂದು ವರ್ಗವಾಗಿತ್ತು. ಈ ವರ್ಗ ಶಾಸ್ತ್ರ ಪುರಾಣ ಓದಿದವರ, ಅದನ್ನು ಕೇಳಿದವರ, ಕೇಳಿದ್ದನ್ನು ನಂಬಿದವರ ವರ್ಗವಾಗಿತ್ತು. ಅವರು ಮಾಡುತ್ತಾರೆಂದು ಇವರು ಮಾಡುವುದೂ, ಅವರು ಹೇಳಿದರೆಂದು ಇವರು ಕೇಳುವುದೂ ಇತ್ತು. ಅವರು ರಾಜನಿಷ್ಠರೂ [ಸಿಂಹಾಸನ ನಿಷ್ಠರೂ] ಆಗಿದ್ದರು. ಅವರು ಮಾಡುವ ಯುದ್ಧಗಳಲ್ಲಿ ನಿಯಮಗಳಿರುತ್ತಿದ್ದವು.

ಹೆಣ್ಣು, ಹೊನ್ನು,ಮಣ್ಣುಗಳಿಗಾಗಿ ನಡೆಯುತ್ತಿದ್ದ ಯುದ್ಧಗಳು

ಯುದ್ಧಗಳೋ…! ಹೆಣ್ಣು-ಹೊಣ್ಣು-ಮಣ್ಣಿಗಾಗಿಯೇ ಇರುತ್ತಿದ್ದವು ಅನ್ನುವುದನ್ನು ಬಿಟ್ಟರೆ ಬೇರೆ ಕಾರಣಗಳೇ ಇರಲಿಲ್ಲ. ಅವರ ಕತೆಗಳೇ ಆದರ್ಶಗಳಾಗಿಯೂ, ಕಥಾನಕಗಳಾಗಿಯೂ ಬರೆಯಲ್ಪಟ್ಟವು. ಮುಂದೆ ಇವರೇ ದ್ವಾಪರ ಯುಗದ ನಾಗರೀಕರಾದರು. ಇಂಥ ನಾಗರಿಕರ ಕಥೆಯೇ ಮಹಾಭಾರತವಾದದ್ದು.

ಈಗಿನವರು ಯೋಚಿಸುವಂತೆ ಅನಿಸಿದ್ದೆಲ್ಲಾ ಆಗ ತಮ್ಮ ಅಪ್ಪನ ಆಸ್ತಿ, ಈಗ ನಮ್ಮ ಆಸ್ತಿ, ಮುಂದೆ ಮಗನ ಆಸ್ತಿ ಎಂದು ಅವರೆಂದೂ ಭಾವಿಸಿರಲಿಲ್ಲ. ಅವರಿಗೆ ಬೇಕಾದದ್ದು ಅನ್ನಾಹಾರಗಳು. ಉತ್ತಮ ಬಟ್ಟೆಗಳು ಅವರಿಗೆ ಬೇಕೆನಿಸಲಿಲ್ಲ. ಬದಲಾಗುವ ಕಾಲಮಾನಕ್ಕೆ ತಕ್ಕಂತೆ ನಿಸರ್ಗದಲ್ಲಿಯೇ ಸಿಗುತ್ತಿದ್ದ ವಸ್ತುಗಳನ್ನು ಉಪಯೋಗಿಸುವುದು ಅವರಿಗೆ ಗೊತ್ತಿತ್ತು. ಕೊಂದು ತಿಂದ ಪ್ರಾಣಿಗಳ ಚರ್ಮಗಳು,ಅವುಗಳ ಕೊಂಬುಗಳು, ಉಗುರುಗಳು ಅವರ ಅಂಗದುಡುಗೆಗಳಾಗಿದ್ದವು.

ಅಕ್ಷರ ಕಲಿತ ರಾಜಕುಮಾರರು, ಶ್ರೀಮಂತರು ತಲೆಗೆ ಚಿನ್ನದ ಕಿರೀಟ, ಮೈತುಂಬ ಮುತ್ತು-ರತ್ನ ಹಾಕುತ್ತಿದ್ದರು. ಪಿತಾಂಬರುಗಳನ್ನು ಉಡುತ್ತಿದ್ದರು. ಮೈಗೆ ಸುಗಂಧಗಳನ್ನು ಲೇಪಿಸಿಕೊಳ್ಳುತ್ತಿದ್ದರು. ಸುರಾಪಾನ ಮಾಡುತ್ತಿದ್ದರು. ಮೃಷ್ಟಾನ್ನ ಉಣ್ಣುತ್ತಿದ್ದರು. ರೇಶ್ಮೆಯ ಸುಖಾಸೀನ, ಸುಪ್ಪತ್ತಿಗೆಯಲ್ಲಿ ಮಲಗುತ್ತಿದ್ದರು. ದಾಸಿಯರನ್ನೂ ಬಿಡದೆ ಸ್ತ್ರೀ ಲೋಲುಪರಾಗಿರುತ್ತಿದ್ದರು. ‘ರಾಜಾ ಪ್ರತ್ಯಕ್ಷ ದೇವತಾಃ’ ಎಂದು ಗುರುಕುಲದಲ್ಲಿ ಪಾಠವಿರುತ್ತಿತ್ತು. ಅರಸು ಕುಲದಲ್ಲಂತೂ ಕುಂತೀ ಪುತ್ರ [ಪಾಂಡವರು], ಗಾಂಧಾರೀ ಪುತ್ರ [ಕೌರವರು], ಗಂಗಾ ಪುತ್ರ [ಭೀಷ್ಮ], ದೇವಕೀ ನಂದನ [ಕೃಷ್ಣ],ದಾಸೀ ಪುತ್ರ [ವಿಧುರ] ಅನ್ನುತ್ತಿದ್ದರೇ ವಿನಃ ಜನ್ಮದಾತನ ಹೆಸರು ಎಂದೂ ಹೇಳುತ್ತಿರಲಿಲ್ಲ. ‘ನೀರಿನ ಮೂಲ, ಹೆಣ್ಣಿನ ಮೂಲ’ ಹುಡುಕಬಾರದೆಂಬ ವೇದವಾಕ್ಯ ಬೇರೆ. ಈ ವಿಷಯದಲ್ಲಿ ಮಹಾಭಾರತದ ಕತೆಯಂತೂ ಗೊಂದಲಮಯ.

ಆದರೆ ರಾಕ್ಷಸರು ಎಂದು ಕರೆಸಿಕೊಳ್ಳುವ ಆದಿವಾಸಿ ಬುಡಕಟ್ಟು ಕುಲಕ್ಕೆ ಇಂಥವುಗಳಿಗೆ ಅವಕಾಶವೇ ಇರಲಿಲ್ಲ. ಅವರಿಗೆ ಹುಟ್ಟು-ಸಾವು ಅಷ್ಟು ಮಹತ್ವದ್ದಾಗಿರಲಿಲ್ಲ. ಲಗ್ನ ಮಾಡಿಕೊಂಡು ಸಂಸಾರ ಮಾಡುವ ಬಂಧನ ಅವರಿಗೆಲ್ಲಿತ್ತು? ಹೇಳಿ-ಕೇಳಿ ತಿರುಗಾಡುತ್ತಲೇ ಇರುವ ಸಂಚಾರಿಗಳು. ಹಾಗೆಂದೇ ಇವರಿಗೆ ನಿಶಾಚರರೆಂದೂ ಆಗಿನ ಶಿಷ್ಟ ಸಮಾಜ ಇವರನ್ನು ಕರೆಯಿತು. ಶಿಕ್ಷಣ ಇವರಿಗೆ ಬೇಕಾಗಿಯೂ ಇರಲಿಲ್ಲ. ಅದನ್ನು ಕಲಿಸುವ ಗುರುಗಳೂ ಇರಲಿಲ್ಲ. ಹಾಗಾಗಿ ಇವರಲ್ಲಿ ಸ್ವಜನಪಕ್ಷಪಾತವಾಗಲೀ, ಸ್ವಾರ್ಥವಾಗಲೀ, ಕೀರ್ತಿ, ಧನ, ಸಂಪತ್ತಿನ ಹಂಬಲವಾಗಲೀ, ಕೂಡಿಡಬೇಕು, ಎಲ್ಲವೂ ತನಗೇ ಬೇಕು ಅನ್ನುವ ಹಪಾ-ಹಪಿಯಾಗಲೀ ಇರಲಿಲ್ಲ. ಇವರಿಗೆಂದೂ ಧನ ಮದವಾಗಲೀ, ಸೌಂದರ್ಯ ಮದವಾಗಲೀ, ಅಧಿಕಾರ ಮದವಾಗಲೀ, ಶಕ್ತಿ ಮದವಾಗಲೀ ಇರಲಿಲ್ಲ. ಯಾಕಂದರೆ ಇವರು ಗುರುಕುಲದಲ್ಲಿ ಓದಲಿಲ್ಲ. ಆಚಾರ್ಯರಿಂದ ಪಾಠ ಹೇಳಿಸಿಕೊಳ್ಳಲಿಲ್ಲವಲ್ಲ. ಆದರೆ ಇತಿಹಾಸ ಬರೆದವರ ದೃಷ್ಟಿಯಲ್ಲಿ ಅವರು ರಾಕ್ಷಸರೂ, ದುಷ್ಟರೂ, ಶಿಷ್ಟರಿಂದ ಹತರಾಗುವದಕ್ಕಾಗಿಯೇ ಹುಟ್ಟಿದವರೆಂದೂ ರೂಪಿಸಲ್ಪಟ್ಟರು. ನಗರವಾಸಿಗಳು, ಅಕ್ಷರ ಗೊತ್ತಿದ್ದವರೂ ಇವರನ್ನು ಹಾಗೇ ಬಿಂಬಿಸಿದರು.

ಈ ಬುಡಕಟ್ಟಿನವರಿಗೆ ನಡೆದಾಡಲು ರಸ್ತೆಗಳಿರಲಿಲ್ಲ. ರಥ-ಕುದುರೆಗಳಿರಲಿಲ್ಲ. ಬದಲಾಗಿ ಕಾಡು-ಮೇಡುಗಳು, ಗಿಡ-ಮರಗಳ ಟೊಂಗೆಗಳು, ಗುಡ್ಡ-ಕಣಿವೆಗಳೇ ಇವರ ಸಂಚಾರಕ್ಕೆ ಇದ್ದ ಮಾರ್ಗಗಳು. ಕುಡಿಯಲು ಕೆರೆ- ಭಾವಿಗಳಿರಲಿಲ್ಲ. ನಿಸರ್ಗದತ್ತ ನದಿ- ಸರೋವರಗಳೇ ಇವರಿಗೆ ಆಶ್ರಯ ಕೊಟ್ಟಿದ್ದವು. ಅಡುಗೆ ಮಾಡುವ ಪರಿಕಲ್ಪನೆಯೇ ಇವರಿಗೆಲ್ಲಿತ್ತು? ಅದಕ್ಕಾಗಿ ಪಾತ್ರೆ-ಪಗಡೆಗಳಿರಲಿಲ್ಲ. ಹಸಿ ಮಾಂಸ, ಇಲ್ಲವೆ ಸುಟ್ಟ ಮಾಂಸಗಳೇ ಇವರಿಗೆ ಆಹಾರ. ಅದುಬಿಟ್ಟರೆ ಕಾಡಿನಲ್ಲಿ ಸಿಗುತ್ತಿದ್ದ ಜೇನು, ಹಣ್ಣು, ಗಡ್ಡೆ ಗೆಣಸುಗಳೇ ಗತಿ. ಹಾಲು-ಹೈನ, ಬೆಣ್ಣೆ-ತುಪ್ಪ, ಮೊಸರು ಇವರಿಗೆ ಗೊತ್ತಿಲ್ಲ. ಅವೆಲ್ಲ ನಾಗರಿಕ ಸಮುದಾಯದ ಸೊತ್ತುಗಳಾಗಿದ್ದವು. ಅವು ಬೇಕು ಅನಿಸಿದ್ದೇ ಇಲ್ಲ ಇವರಿಗೆ.

ಕೂಟಯುದ್ಧ, ತಂತ್ರಯುದ್ಧ ಗೊತ್ತಿಲ್ಲದವರನ್ನು ಕೊಂದು ಬೀಗಿದ್ದು ಯಾರು?

ನಾಗರಿಕ ಜನ ಉಪಯೋಗಿಸುತ್ತಿದ್ದ ಕತ್ತಿ, ಗುರಾಣಿ, ಸುಂದರ ಗದೆ, ಉತ್ತಮ ದರ್ಜೆಯ ಈಟಿ, ಖಡ್ಗಗಳು, ಸುಧಾರಿತ ಅಸ್ತ್ರಗಳು ಇವರ ಬಳಿ ಎಲ್ಲಿತ್ತು? ಪಾಶು ಪತಾಸ್ತ್ರ, ನಾಗಾಸ್ತ್ರ, ಅಗ್ನಿ, ವರುಣಾಸ್ತ್ರಗಳು ಪಾಪ ಇವರಿಗೆ ಗೊತ್ತೇ ಇರಲಿಲ್ಲ. ಇವರಿಗೆ ಗೊತ್ತಿದ್ದದ್ದು ಹುಲಿಯ ಉಗುರು, ಆನೆ-ಕೋಣಗಳ ದಂತಗಳು, ಕಲ್ಲು, ಗಿಡ-ಮರಗಳ ಆಯುಧಗಳು. ಕೈಯಲ್ಲಿ ಒರಟು ದೊಣ್ಣೆಗಳು.

ನಾಗರೀಕ ಜನರಂತೆ ಮನೆ-ಅರಮನೆಗಳನ್ನು ಕಟ್ಟಿ ಅವರು ವಾಸಿಸಲಿಲ್ಲ. ಗುಹೆಗಳು, ಗುಡ್ಡಗಳ ಸಂದುಗಳು ಕಾಡಿನಲ್ಲಿಯ ದೊಡ್ಡ ಮರಗಳು ಅವರ ಆಶ್ರಯ ತಾಣಗಳಾಗಿದ್ದವು. ಥೇಟ್‌ ಕಾಡು ಪ್ರಾಣಿಗಳ ಹಾಗೆ ಇದ್ದರು. ಅವರಿಗೆ ಗೊತ್ತಿರುವುದು ಹಸಿವು. ಹಸಿವು ಹೆಚ್ಚಾದಾಗ ನಿಜಕ್ಕೂ ಹಿಂದೆ ಮುಂದೆ ನೋಡದೆ ಕಂಡಲ್ಲಿ ನುಗ್ಗುತ್ತಿದ್ದರು. ಕೈಗೆ ಸಿಕ್ಕದ್ದನ್ನು ಕಬಳಿಸುತ್ತಿದ್ದರು. ಮಾಂಸಾಹಾರಿಗಳಾದ ಅವರು ಏನೂ ಸಿಗದಿದ್ದರೆ ಸಿಕ್ಕ ಮನುಷ್ಯರನ್ನೂ [ಬಲಹೀನರನ್ನು] ಕೊಂದು ತಿನ್ನುತ್ತಿದ್ದರು. ಅವರು ರಾಕ್ಷಸರಂತೆ ವರ್ತಿಸುತ್ತಿದ್ದರು. ತ್ರೇತಾಯುಗದ ರಾಮಾಯಣ ಕಾಲದಿಂದಲೂ ಈ ಬುಡಕಟ್ಟುಗಳು ರಾಕ್ಷಸರಾಗಿಯೇ ಇದ್ದರು. ಹಾಗೇ ಕರೆಯಲ್ಪಟ್ಟರು.

ಇಂಥವರನ್ನು ಕೊಂದು ವಿಜಯ ಪಾತಾಕೆ ಹಾರಿಸಿದವರು ಆಗಿನ ಶಿಷ್ಟ ಸಮಾಜದ ರಾಮ, ಲಕ್ಷ್ಮಣ, ಹನುಮಂತ, ಸುಗ್ರೀವ ಇತ್ಯಾದಿಗಳು. ಹಾಗೆ ನೋಡಿದರೆ ತ್ರೇತಾಯುಗದ ರಾವಣನೂ ಶಿಷ್ಟನೇ. ಅವನೂ ಓದಿದ್ದ. ಶಾಸ್ತ್ರ-ಪುರಾಣಗಳ ಬಗ್ಗೆ ಮಾತಾಡುತ್ತಿದ್ದ. ಆತ ಮಹಾನ್‌ ಶಿವಭಕ್ತ. ಉಗ್ರ ತಪಸ್ಸು ಮಾಡಿ ಬ್ರಹ್ಮ-ಮಹಾದೇವರಿಂದ ವರ ಪಡೆದ ಸಾಧಕ. ಆದರೆ ಅವನ ಗುರಿ ಗುರುಕುಲದ ಸಾಧಕರನ್ನು ನಾಶ ಮಾಡುವುದಾಗಿತ್ತು. ದೇವ ವಿರೋಧಿಯಾಗಿತ್ತು. ಅವನಲ್ಲೂ ನಾನಾ ಅಸ್ತ್ರಾದಿಗಳು ಇದ್ದರೂ ಅವನಿಗೆ ರಾಕ್ಷಸ ಪಟ್ಟ ಕಟ್ಟಿ ಅವು ವಿಫಲವಾಗುವಂತೆ ನೋಡಿಕೊಳ್ಳ ಲಾಯಿತು. ಪರರ ಹೆಂಡತಿಯನ್ನು ಅಪಹರಿಸಿದ ಕಾರಣಕ್ಕೆ ಅವನಿಗೆ ಮರಣ ದಂಡನೆ ಕೊಟ್ಟದ್ದಲ್ಲದೆ ರಾಕ್ಷಸ ಎನ್ನುವ ಮತ್ತೊಂದು ಶಿರೋನಾಮೆ ನೀಡಲಾಯಿತು. ಆದರೆ ದ್ವಾಪರ ಯುಗದ ದುರ್ಯೋಧನ ಪರರ ಹೆಂಡತಿಯನ್ನು ರಾಜ ಸಭೆಗೆ ಎಳೆ ತಂದು ಅವಮಾನಿಸಿದರೂ ಅವನಿಗೆ ಮರಣ ಶಿಕ್ಷೆ ಕೊಟ್ಟರೇ ವಿನಹ ಆತನಿಗೆ ರಾಕ್ಷಸ ಎಂದು ಕರೆಯಲಿಲ್ಲ. ಯಾಕಂದರೆ ಆತನಿಗೆ ರಾಕ್ಷಸ ಪಟ್ಟ ಕಟ್ಟಿದ್ದರೆ ಇಡೀ ‘ಕುರು-ಪಾಂಡು’ ಕುಲವೆಲ್ಲ ರಾಕ್ಷಸರಾಗುವ ಅಪಾಯವಿತ್ತು. ಅದರಿಂದ ಇಡೀ ಕ್ಷತ್ರಿಯ ಕುಲಕ್ಕೇ ದೊಡ್ಡ ಕಳಂಕ ತಟ್ಟುತ್ತಿತ್ತು. ಹಾಗಾಗಿ ದುರ್ಯೋಧನ ರಾಕ್ಷಸ ನಾಗದೆ ‘ದುಷ್ಟ’ ಎಂದು ಕರೆಯಲ್ಪಟ್ಟ.

ಅನಾಗರಿಕರದ್ದು ಕಥೆಯೂ ಆಗಲಿಲ್ಲ. ವ್ಯಥೆಯೂ ಆಗಲಿಲ್ಲ ! ಅವರು ಮಹಾಭಾರತದ ರಾಕ್ಷಸರಾದರುಎಂದು ಒತ್ತಿ ಹೇಳುತ್ತೇನೆ. ರಾಕ್ಷಸರ ಕುಲ ಇತ್ತು ಅನ್ನುವವರು ಆ ಕುಲ ಹೇಗೆಲ್ಲ ನಾಶವಾಯಿತು ಎಂದು ಹೇಳುವುದಿಲ್ಲ. ಆ ಹಂತದಲ್ಲಿ ಬುಡಕಟ್ಟು ಜನರ ವಂಶ ನಾಶವಾಗಲಿಲ್ಲ. ಯಾಕಂದರೆ ವಾಸ್ತವದಲ್ಲಿ ಅವರ್ಯಾರೂ ರಾಕ್ಷಸರಾಗಿರಲಿಲ್ಲ. ಅದೆಲ್ಲ ಕಟ್ಟುಕತೆಯಾಗಿತ್ತು.

ದೇವ ದಾನವರ ನಡುವೆ ಯುದ್ಧ ನಡೆಯಿತು ಅನ್ನುವುದಕ್ಕೆ ‘ಅಮೃತ’ ಕಾರಣವಾಗುತ್ತದೆ. ಆದರೆ ಮಹಾಭಾರತ ಕಾಲದಲ್ಲಿ ರಾಕ್ಷಸರಿಗೂ ಪಾಂಡವರಿಗೂ ಯುದ್ಧ ನಡೆಯಲು ಅಂಥ ಮಹತ್ತರ ಕಾರಣವಿರಲಿಲ್ಲ. ವಾಸ್ತವದಲ್ಲಿ ಅವು ಯುದ್ಧಗಳೇ ಅಲ್ಲ. ಅವರು ಬಂದರು. ಇವರು ಕೊಂದರು ಅಷ್ಟೇ. ಈ ಮಾತನ್ನು ಬಕಾಸುರ, ಹಿಡಂಬಾಸುರರ ವಿಷಯದಲ್ಲಿ ಹೇಳಬಹುದು. ಇಲ್ಲಿ ರಾಕ್ಷಸರ ಪ್ರವೇಶವಾಗುವುದು ಪಾಂಡವರ ಕತೆಗೆ ಶ್ರೇಷ್ಟತೆ ನಿರ್ಮಿಸುವುದೇ ಆಗಿದೆ. ನಡೆದಿರುವ ಇತಿಹಾಸಕ್ಕೆ ಕತೆ ಬರೆದವನ ಜ್ಞಾನದ ಲೇಪನ ಅತಿಯಾಗಿದೆ ಅನ್ನುವುದೇ ನನ್ನ ವಾದ.

ಬುಡಕಟ್ಟಿನ ಜನ ಮಹಾನ್‌ ಶಕ್ತಿವಂತರು ನಿಜ. ಆದರೆ ಬುದ್ಧಿವಂತರಲ್ಲ. ಅದೇ ಕಾರಣಕ್ಕೆ ಇರಬೇಕಾದಷ್ಟು ಆತ್ಮ ವಿಶ್ವಾಸ ಅವರಲ್ಲಿ ಇರಲಿಲ್ಲ. ಯುದ್ಧ ಪರಿಣಿತಿಯಾಗಲೀ, ತಂತ್ರಗಳಾಗಲೀ ಅವರಿಗೆ ಇರಲಿಲ್ಲ. ದಿವ್ಯಾಸ್ತ್ರಗಳನ್ನು ಸಂಪಾದಿಸುವ ಜಾಣ್ಮೆಯೂ ಅವರಿಗಿರಲಿಲ್ಲ. ಹಾಗಾಗಿ ಗುರುಕುಲದಲ್ಲಿ ಶಾಸ್ತ್ರಬದ್ಧವಾಗಿ ತರಬೇತಿ ಪಡೆದವರು ಇವರನ್ನು ಸಂಹರಿಸಲು ಸಾಧ್ಯವಾಯಿತು. ನಾಗರೀಕ ಜನರ ಕುಲ ಜಾತಿಗಳು ಬೆಳೆದು ಮುಂದುವರೆದಂತೆ ರಾಕ್ಷಸರು ಅನ್ನುವ ಈ ಆದಿವಾಸಿಗಳ ಸಂತತಿ ಮುಂದುವರೆಯಲಿಲ್ಲ ಯಾಕೆ? ಇದ್ದವರೂ ಇವರಿಗೆ ದಾಸರಾಗಿ ಮುಂದೆ ಕುರುಕ್ಷೇತ್ರ ಯುದ್ಧದಲ್ಲಿ ಅವರಿಗಾಗಿ ಜೀವ ಪಣಕ್ಕಿಟ್ಟರು ಅನ್ನುವ ಸಂಗತಿಗಳನ್ನು ಮಹಾಭಾರತದಲ್ಲಿಯೇ ಕಾಣುತ್ತೇವೆ.

ತ್ರೇತಾಯುಗದಲ್ಲಿ ವಿಭೀಷಣ ರಾಕ್ಷಸನಾಗಿದ್ದರೂ ರಾಮನಿಗೆ ಸಂದಿಗ್ಧ ಸಮಯದಲ್ಲಿ ಸಹಾಯ ಮಾಡಿ ಕೊನೆಗೆ ತನ್ನ ಕುಲವನ್ನೇ ಪಕ್ಷಾಂತರ ಮಾಡಿಸಿಬಿಟ್ಟನೇನೋ ಎಂಬಂತೆ ರಾವಣನ ನಂತರ ಅವನ ಕುಲಜಾತಿ ಶ್ರೀಲಂಕಾದಲ್ಲಿ ಮತ್ತೆ ಏಳಲೇ ಇಲ್ಲ.

ಮುಂದಿನ ದ್ವಾಪರ ಯುಗದ ಕತೆಯೂ ಹೀಗೇ ಆಯಿತು. ಬಕಾಸುರ, ಘಟೋತ್ಘಜ, ಹಿಡಂಬಾಸುರನ ಮಕ್ಕಳು ಅಥವಾ ಅವರ ವಂಶದ ಕತೆ ಏನಾಯಿತೆಂದು ಮಹಾಬಾರತ ಬರೆದವರು ಹೇಳಲೇ ಇಲ್ಲ. ಅಭಿಮನ್ಯುವಿನ ಮಗ ಪರೀಕ್ಷಿತನ ಕತೆ ಹೇಳುತ್ತ ಹೋದರೇ ಹೊರತು ಈ ಬುಡಕಟ್ಟು ರಾಕ್ಷಸರು ಮುಂದೆ ಏನಾದರೆಂದು ಹೇಳದೇ ಹೋದರು. ಇದೇ ಮಾತನ್ನು ಏಕಲವ್ಯನ ಬಗ್ಗೆಯೂ ಹೇಳಬಹುದೇನೋ. ನಾನು ಈ ಮಾತನ್ನು ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ ಈ ಬುಡಕಟ್ಟು…, ಈ ಆದಿವಾಸಿಗಳು…, ಈ ರಾಕ್ಷಸರು ಭರತ ವರ್ಷದ ಕತೆಗಳಲ್ಲಿ ಮುಂದೆ ಯಾಕೆ ಮತ್ತೆ ಕಾಣಿಸಿಕೊಳ್ಳದೇ ಹೋದರು. ಇವೆಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನಾನು ‘ಪೀಟರ್‌ ಬ್ರೂಕ’ನ ಮಹಾ ಭಾರತ ಸಿನಿಮಾವನ್ನು ನೋಡಬಯಸುತ್ತೇನೆ. ಮಹಾಭಾರತದ ಕುರಿತು ವಿದೇಶಿಯರು ಗ್ರಹಿಸಿದ ಹೊಸ ವಿಚಾರಗಳನ್ನು, ಹೊಸ ನೋಟಗಳನ್ನು ಕಾಣಬಯಸುತ್ತೇನೆ.

ಯಾರು ಈ ಪೀಟರ ಬ್ರೂಕ ಮಹಾಶಯ?

Screenshot (21)

(ರಂಗ ನಿರ್ದೇಶಕ ಮತ್ತು ಸಿನಿಮಾ ನಿರ್ದೇಶಕ ಪೀಟರ್‌ ಬ್ರೂಕ)

– ಮುಂದಿನ ಭಾಗದಲ್ಲಿಓದಿ

ನಿಮ್ಮ ಅಭಿಪ್ರಾಯಗಳನ್ನು ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಮತ್ತು ಇದಕ್ಕೆ ಸಂಬಂಧಪಟ್ಟಂತಹ ಲೇಖನವಿದ್ದರೆ ಅದನ್ನುಇ- ಮೇಲ್ ಕಳುಹಿಸಿ   aakritikannada@gmail.com

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW