‘ಮಳೆ ಸಿಂಚನ’ ಕವನ – ಶಿವದೇವಿ ಅವನೀಶಚಂದ್ರ

‘ಮಳೆಯನ್ನು ನಿಂದಿಸಬೇಡ ಗೆಳತಿ, ನಮ್ಮಿಬ್ಬರನ್ನು ಒಂದೇ ಕೊಡೆಯಲ್ಲಿರಿಸೋದಕ್ಕೆ ಬೇಕು ಅದರ ಪ್ರೀತಿ’…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಈ ಲೇಖನಿಯಲ್ಲಿ ಅರಳಿದ ಮಳೆ ಸಿಂಚನವನ್ನು ತಪ್ಪದೆ ಮುಂದೆ ಓದಿ…

ಪರಿಮಳದ ಜಾಡು ಹಿಡಿದು ಹೋದಾಗ ದಕ್ಕಿಸಿಕೊಳ್ಳಲು
ಮೈತುಂಬಾ ಮುಳ್ಳುಗಳು
ಮೈಯ ತರಚಿದ ಗಾಯಗಳ ನೆತ್ತರು
ಅದು ತಾನು ಜಾಜಿ ಎಂದು ಸಾಬೀತುಪಡಿಸಿದಾಗ ಆಸ್ವಾದದ ಅಮಲು ಇಳಿದಿತ್ತು
*
ಹಣ್ಣಿಲ್ಲವೆಂದು ಹೊಂಗೆಯ
ಅವಗಣಿಸಿದ್ದೆ
ಅದೇ ಕೊನೆಗೆ
ಬಿರು ಬೇಸಿಗೆಯಲ್ಲಿ
ತಂಗಾಳಿ ಜಳಕದಲಿ‌‌
ನನ್ನ ಪುಳಕಿಸಿತ್ತು.
*
ಮಳೆಯನ್ನು ನಿಂದಿಸಬೇಡ
ಗೆಳತಿ
ನಮ್ಮಿಬ್ಬರನ್ನು ಒಂದೇ ಕೊಡೆಯಲ್ಲಿರಿಸೋದಕ್ಕೆ.
ಬೇಕು…ಅದರ ಪ್ರೀತಿ
*
ಹನಿಯ ಯವನಿಕೆಯೊಳಗೆ
ನಮ್ಮ ಪ್ರೇಮ ಸಲ್ಲಾಪ
ಗುಟ್ಟುರಟ್ಟಾಗದಂತೆ
ಮಾರುತನ ಸಂಗೀತ
*
ಸಂದೇಶವಿರಿಸಿದ್ದೇನೆ
ಜೋರಾಗಿ ಬೊಬ್ಬಿರಿಯದಿರು‌
ಮಹರಾಯ
ಇದು ಅವಳ ತಲುಪುವವರೆಗೆ
ನೀನು ಸಂಯಮದಿಂದಿರುವುದು
ಅನಿವಾರ್ಯ
*
ಯಾಕೋ ಮಳೆಯ
ತುಯ್ದಾಟದ ಮುಂದೆ
ನನ್ನ ಜೋಕಾಲಿ ತೀರಾ
ಸಪ್ಪೆ
ತುಂತುರಿಲ್ಲದ ಮೇಲೆ
ಅದೇತರ
ಸಂತೃಪ್ತಿ
*
ಏಕೆ ಬಿಸಿಯುಡುಗೆ
ತೊಡುಗೆ
ಮಳೆ ಬಂದಾಗ…
ಬರುವ ನಲ್ಲ
ತನುವನಪ್ಪಿ
ಬಿಸಿಯೇರಿಸಲು
ಕಾದಿರುವೆನಲ್ಲ..
*
ಮಳೆ ಆನಂದಿಸುತ್ತಿದೆ
ಜುಟ್ಟಾಜುಟ್ಟಿ
ಮಾರಾಮಾರಿ ಜಗಳವ
ಲಟಲಟನೆಂದು ಮುರಿದ
ಸೊಂಟದ ಆಕ್ರಂದನವ….
ಮಳೆಯೂ ಕಲಹಪ್ರಿಯ
*
ಮೆಲ್ಲ ಮೈತಟ್ಟಿ
ಕುಳಿರ ಮೀಯಿಸಲು ಹನಿ
ನನ್ನ ನಲ್ಲನೊಬ್ಬನಿಗೇ
ಈ ತುಂಟತನ ಎಂಬ
ಭ್ರಮೆ ಹುಸಿಯಾಯ್ತು
*
ಬಾರದಿದ್ದರೆ ಏನು ಇನಿಯ
ನನ್ನ ಬಳಿಗೆ
ತರುತ್ತಿದೆಯಲ್ಲ ತರತರ
ಲಾಸ್ಯದಲಿ
ತಾಳಮದ್ದಲೆಯೊಂದಿಗೆ
ನೆನಪುಗಳ ಮೆರವಣಿಗೆಯ
ಬನಿಯ
*
ಓಹೋ..ನಿನಗೂ
ಆರ್ಭಟಿಸಲು ಬರುತ್ತದೆ
ಎಂದು ತಿಳಿದದ್ದು
ನೀನು ಯಾರ ಮೇಲಿನ ಕೋಪದಲ್ಲೋ
ದಪ್ದಪ್ ಹೆಜ್ಜೆಯಿಡುತ್ತಾ
ಮಿಂಚುಗತ್ತಿ ಝಳಪಿಸುತ್ತಾ ಬರುವಾಗ
ನಿನ್ನ ಪೌರುಷ ಕಂಡು
ಬೀಗುತ್ತೇನೆ ಕಣೊ
ರಾಜ ಮಾರ್ತಾಂಡ…
ಈಗ ಸಾಬೀತಾಯಿತು
ನಿನ್ನ ಮಹಾರಾಣಿಯಾಗಿ
ನನ್ನನ್ನೇ ಏಕೆ ಆರಿಸಿಕೊಂಡೆಯೆಂದು
*
ಗಾಳಿ ಬೆರಳಲ್ಲಿ
ಸೂತ್ರದ ಗೊಂಬೆಯಂತೆ
ನರ್ತಿಸುವ ನೀನು
ಜಲಪಾತದಲ್ಲಿ ಧುಮ್ಮಿಕ್ಕಿ
ತುಂತುರಾಗುವ ಲಾವಣ್ಯವ
ಕಂಡು
ನಿನ್ನ ಅಳವಿಗೆ ತಲೆಬಾಗುತ್ತೇನೆ
ಹಾಗೆಯೇ ಪ್ರವಾಹದ‌ ರುದ್ರರಮಣೀಯತೆಯ ಶಕ್ತಿಗೆ
ವಿಸ್ಮಯಗೊಳ್ಳುತ್ತೇನೆ


  •  ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಲೇಖಕಿ, ಕವಿಯತ್ರಿ, ಕೊಡಗು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW