‘ಮರೆತು ಹೋಗುವ ಮುನ್ನ’ ಕೃತಿ ಪರಿಚಯ

ಸೃಜನಶೀಲ ಕವಿ ಮನದ ಖಾದರ್ ಮೊಹಿಯೊದ್ದೀನ್ ಅವರು ನಿಸರ್ಗದ ಕೂಸು. ತಮ್ಮ ಕಾವ್ಯಾತ್ಮಕ ಶೈಲಿಯಲ್ಲಿ ವರ್ಣಿಸುವ ಬಗೆಗೆ ಶರಣಾಗಬೇಕೆನಿಸುತ್ತದೆ. ಅವರ ‘ಮರೆತು ಹೋಗುವ ಮುನ್ನ’ ಕೃತಿಯ ಕುರಿತು ಕವಿ ಜಬೀವುಲ್ಲಾ ಎಂ. ಅಸದ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಮರೆತು ಹೋಗುವ ಮುನ್ನ
ಲೇಖಕರು : ಖಾದರ್ ಮೊಹಿಯೊದ್ದೀನ್ ಕೆ ಎಸ್

ಬರವಣಿಗೆ ಎನ್ನುವುದು ಅದೊಂದು ಸ್ವಯಂ ಪ್ರೇರಿತ ಮನದ ಅನುಭವದ ಆಧಾರದ, ಕಲ್ಪನೆಯ ವರದಾನದ, ಆಲೋಚನೆಯ ಅನುಕ್ರಮದ ಜೀವನ ವಿಧಾನ ಮತ್ತು ದೃಷ್ಟಿಕೋನವನ್ನೊಳಗೊಂಡ ಭಾವಯಾನ. ಏನನ್ನಾದರೂ ಬರೆಯಲೇ ಬೇಕು ಎಂದು ಹೊರಟವರೆಲ್ಲ ಯಾವ ಗಮ್ಯವನ್ನು ಸಹ ತಲುಪುವುದಿಲ್ಲ. ಅಂತೆಯೇ ‘ಈ ಕ್ಷಣ ಬರೆಯಲಾರದೆ ಇರಲಾರೆ’ ಎಂಬ ತುಡಿತದ ಸಂವೇದನೆಯೊಂದಿಗೆ ಬರೆಯಲು ಅನುವಾದಾಗ ಮಾತ್ರ ಬರಹ ಒಲಿಯುವಂಥದ್ದು. ಓದುಗರ ಎದೆಯಲ್ಲಿ ನೆಲೆಸುವಂಥದ್ದು.

ನಾವು ಮನುಷ್ಯರು ಅಲ್ಪರು. ಅರಳಿದ ಹೂವನ್ನು ಕೊಯ್ಯುವ ಸುಖದ ನಡುವೆ ಗಿಡದ ಸಂತಸವನ್ನು ಕೊಂದು ಹಾಕುತ್ತೇವೆ. ಆಗಸದಲ್ಲಿ ಸ್ವಚ್ಛoಧವಾಗಿ ಹಾರಬೇಕಿದ್ದ ಹಕ್ಕಿಯನ್ನು ಹಿಡಿದು ತಂದು ಪಂಜರದಲ್ಲಿ ಬಂಧಿಸಿಟ್ಟು ವಿಕೃತ ಆನಂದ ಪಡುತ್ತೇವೆ. ಸ್ವತಃ ನಾವೇ ಎಂದಾದರು ಕೋಣೆಯೊಂದರಲ್ಲಿ ಸಿಕ್ಕಿಹಾಕಿಕೊಂಡರು ಸಾಕು ಪ್ರಾಣ ಹೋದವರಂತೆ ಆಡುತ್ತೇವೆ. ಈ ಆಧುನಿಕತೆಯ ಮುಖವಾಡ ಹಾಕಿಕೊಂಡ ನರನಿಬಿಡ ಜಗತ್ತಿನಲ್ಲಿ ಜಮಾಯಿಸಿದ ವಾಹನಗಳು, ಅವುಗಳ ಧ್ವನಿವರ್ಧಕಗಳು, ಮೊಬೈಲ್ ರಿಂಗಣಗಳು, ಮಿಷನರಿಗಳ ಆರ್ಭಟದ ನಡುವೆ ಹಕ್ಕಿಗಳ ಚಿಲಿಪಿಲಿ ಕಲರವ ಎಲ್ಲೊ, ಅದೆಲ್ಲೋ ಕಳೆದು ಹೋಗುತ್ತಿದೆ. ಮುಸುಕಿದ ದಟ್ಟ ಹೊಗೆಯ ನಡುವೆ ಹತ್ತಿಯ ಶುಭ್ರ ಉಂಡೆಗಳಂತೆ ಮೋಡಗಳು ಗೋಚರಿಸುವುದೇ ಇಲ್ಲ. ಆ ಕಂದು/ಕಪ್ಪು ಕಲುಷಿತ ಮೋಡಗಳನ್ನೇ ನಾವು ಮಳೆಯ ಗರ್ಭಧರಿಸಿದ ಕಾರ್ಮೋಡಗಳೆಂದು ಭ್ರಮಿಸಿಕೊಳ್ಳುತ್ತೇವೆ. ಝಗಮಘಿಸುವ ನಿಯಾನ್ ವಿದ್ಯುತ್ ದೀಪಗಳ ನಡುವೆ ಮಿಂಚು ಹುಳುಗಳು ಕಾಣಸಿಗುವುದೇ ಇಲ್ಲ. ಈಗೆಲ್ಲ ಬೆಟ್ಟಗಳ ನಡುವಿನಿಂದ ಸೋರಿಯೋದಯವಾಗುವುದಿಲ್ಲ! ಕೆರೆ, ತೊರೆಯ ಹಿನ್ನೆಲೆಯಲ್ಲಿ ಸೂರ್ಯಸ್ತವೂ ಆಗುವುದಿಲ್ಲ. ತೆಂಗಿನ ಗರಿಗಳ ನಡುವೆ ಬೆಳದಿಂಗಳ ಮುದ್ದು ಚಂದಿರ ನಸುನಗುತ ಬಂದು ನಿಲ್ಲುವುದಿಲ್ಲ. ಅಂತೆಯೇ ಬೆರಗು ಸಹ ಹುಟ್ಟಿಸುವುದಿಲ್ಲ. ಈಗೆಲ್ಲ ಅಮ್ಮಂದಿರು ಸಹ ಚಂದಿರನನ್ನು ತೋರಿಸಿ ಪುಟ್ಟ ಕಂದಮ್ಮರಿಗೆ ಬೆಳದಿಂಗಳ ಕೈ ತುತ್ತನ್ನು ಉಣಬಡಿಸುವುದಿಲ್ಲ. ಅಷ್ಟೆ ಏಕೆ, ನಾವೆಲ್ಲಾ ದಿನದಲ್ಲಿ ಒಮ್ಮೆಯಾದರು ನಿಂತು ತಲೆ ಎತ್ತಿ ಅಗಸ ಕಂಡು ಖುಷಿ ಪಡುವುದಿಲ್ಲ. ಈಗ ಕಾಲ(Generation) ಬದಲಾಗಿದೆ. ಕಾಂಕ್ರೀಟ್ ಕಾಡಿನ ತರಹೇವಾರಿ ಗಗನ ಚುಂಬಿ ಬಹುಮಹಡಿ ಕಟ್ಟಡಗಳ ನಡುವಿನಿಂದ ತಾನೂ ಸಹ ಅತ್ಯಾಧುನಿಕ(Ultra modern) ಎಂಬಂತೆ ಸೂರ್ಯ ಹುಟ್ಟಿ ಬಂದು ಹಾಯ್ ಹೇಳುತ್ತಾನೆ. ಹಾಗೆ ಬಂದಂತೆಯೇ ಭೂಮಿಯ ಕಛೇರಿಯ ತನ್ನ ಕೆಲಸ ಮುಗಿಯಿತೆಂಬಂತೆ ಪಗಾರ ಪಡೆಯದೆ ಮೊಬೈಲ್ ಟವರಗಳಿಗೆ ಜೋತುಬಿದ್ದು ಕಳೆದು ಹೋಗುತ್ತಾನೆ. ಈಗಿನ ಅಮ್ಮಂದಿರು ಸಹ ಮಗುವಿನ ಕೈಗೆ ಮೊಬೈಲ್ ಕೊಟ್ಟು ಊಟ ಮಾಡಿಸುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ.

ಧಾವಂತದ ಈ ಬದುಕಿನಲ್ಲಿ ನಾವು ಕೇವಲ ಅರೋಗ್ಯ, ನೆಮ್ಮದಿಯನ್ನಷ್ಟೇ ಅಲ್ಲ ಪ್ರಕೃತಿಯನ್ನು ಅಸ್ವಾದಿಸುವ ಗುಣವನ್ನು ಸಹ ಕಳೆದುಕೊಂಡಿದ್ದೇವೆ. ಮಕ್ಕಳಾಗಿದ್ದಾಗ ಇದ್ದ ಸಹಜ ಕುತೂಹಲ ನಾವು ಬೆಳೆದಂತೆ ಮರೆಯಾಗುತ್ತದೆ. ಆದರೆ ಮೂಲತಃ ರಾಜಕಾರಣದಲ್ಲಿ ಸಕ್ರಿಯರಾಗಿದ್ದು, ಈಗ ಹೋಟೆಲ್ ಉದ್ಯಮಿಯೂ ಆಗಿ, ಓದು ಮತ್ತು ಬರಹಗಳಲ್ಲಿಯೂ ಸಿದ್ಧಹಸ್ತರಾಗಿರುವ ಖಾದರ್ ಮೊಹಿಯೊದ್ದೀನ್ ಅವರು ಇಂದಿಗೂ ಸಹ ಪ್ರಬುದ್ಧತೆಯೊಂದಿಗೆ ಪ್ರೀತಿ, ಅಂತಃಕರಣ, ಅರಿವು, ಸೌಂದರ್ಯ ಪ್ರಜ್ಞೆ, ಮಾನವೀಯ ಮೌಲ್ಯಗಳ ಜೊತೆಗೆ ಮಗುವಿನ ಮುಗ್ಧತೆ ಮತ್ತು ಕುತೂಹಲಗಳನ್ನು ಉಳಿಸಿಕೊಂಡಿದ್ದಾರೆ. ಈ ಎಲ್ಲಾ ಗುಣಲಕ್ಷಣಗಳ ಒಡಂಬಡಿಕೆಯ ಮೂಸೆಯಲ್ಲಿ ಅರಳಿದ ಮರೆತು ಹೋಗುವ ಮುನ್ನ ನೆನಪಿನಂಗಳದಿಂದ… ಕೃತಿಯ ಲೇಖನಗಳು ವೈಚಾರಿಕೆಯನ್ನು ಸಹ ಅಳವಡಿಸಿಕೊಂಡಿರುವುದು ವಿಶೇಷ.

“ಪ್ರತಿ ಹಗಲು, ಪ್ರತಿ ರಾತ್ರಿ ದಿನದ ಎಂಟು ಪ್ರಹರಗಳಲ್ಲಿಯೂ ಹೆತ್ತ ತಾಯಿಯ ಮೋಕ್ಷಕ್ಕಾಗಿ ನನ್ನ ಎರಡೂ ಕೈಗಳು ಪ್ರಾರ್ಥನೆಗಾಗಿ ಮೇಲೇಳಲಿ. ನನ್ನ ಹೃದಯ, ನನ್ನ ಆತ್ಮ, ನನ್ನ ಬೊಗಸೆಗಳು ಅವಳಿಗಾಗಿ ಅಂಗಲಾಚಲಿ. ತಾಯಿಯ ದಾರಿಯಲ್ಲಿ ನನ್ನ ನಾಲಿಗೆಯು ಪವಿತ್ರ ಶ್ಲೋಕಗಳನ್ನು ಉಲಿಯಲಿ. ಇದು ಸಾಧ್ಯವಾಗದ ದಿನ ಅದು ನನ್ನ ಬದುಕಿನ ಕೊನೆಯ ದಿನವಾಗಲಿ” ಹೀಗೆ… ಕನ್ನಡದ ಪದಗಳನ್ನು ಭಾವ ಸುಮಗಳಾಗಿಸಿ ಅವುಗಳನ್ನು ಅಮೃತದಲ್ಲಿ ಅದ್ದಿ ಬರೆದಂತೆ ಭಾಸವಾಗುವ ಹಾಗೆ, “ಅಮ್ಮ ನನಗೆ ಎಲ್ಲವೂ ನೆನಪಿದೆ” ಎನ್ನುತ್ತ ಹೆತ್ತ ತಾಯಿಯ ತ್ಯಾಗ ಮತ್ತು ಮಮತೆಯನ್ನು, ಆಕೆಯ ಶ್ರಮವನ್ನು ಅನುದಿನವೂ ಸ್ಮರಿಸುತ್ತ ‘ಈ ಬದುಕು ಆಕೆಯ ಮೂಲಕ ದೇವರಿತ್ತ ವರವೆಂದು ಪರಿಗಣಿಸಿ, ಅದಕ್ಕಾಗಿ ಜೀವನಪರ್ಯಂತ ಋಣಿಯಾಗಿರುವ, ವರವಾಗಿ ದಕ್ಕಿದ ಬಾಳನ್ನು ಸಾರ್ಥಕತೆಯತ್ತ ಕೊಂಡೋಯ್ಯುವ ಪರಿಯ ಹಲವು ಲೇಖನಗಳು ಓದುವ ಹೃದಯಗಳನ್ನು ಭಾರವಾಗಿಸುತ್ತವೆ.

ಸೃಜನಶೀಲ ಕವಿ ಮನದ ಖಾದರ್ ಮೊಹಿಯೊದ್ದೀನ್ ಅವರು ನಿಸರ್ಗದ ಕೂಸು. ಪ್ರಕೃತಿಯನ್ನು ತಮ್ಮೊಳಗೆ ಮಿಳಿತಗೊಳಿಸಿಕೊಂಡು ಮಿಡಿಯುವ ಅವರ ಹೃದಯ ನಾದಮಯವಾಗಿ ಪ್ರತಿಧ್ವನಿಸುತ್ತದೆ. ಇಲ್ಲಿ ಅವರಿಗೆ ಹಸಿರು ಗರಿಕೆ, ಅದರ ಮೇಲಿನ ಇಬ್ಬನಿ, ಆ ಇಬ್ಬನಿಯಲ್ಲಿ ಪ್ರತಿಫಲಿಸುವ ಸೂರ್ಯಕಿರಣ, ಆ ಕಿರಣಗಳ ಹೊಂಬಣ್ಣ, ಅದರ ಬೆಳಕು, ಆ ಬೆಳಕಿನ ಪ್ರಕಾಶ, ಪ್ರಖರತೆ ಮತ್ತದರ ಮೋಹಕತೆಗಳನ್ನು ಪ್ರತಿಫಲಿಸುವ ನೀಲಾ ಬಾನು. ಅಲ್ಲಿ ಹಗುರ ತೇಲುವ ಮೇಘ ಮಂಜುಷಗಳು, ಅವು ಸುರಿಸುವ ವರ್ಷಧಾರೆ, ಮಣ್ಣಿಂದ ಹೊಮ್ಮುವ ಘಮ, ಸಪ್ತವರ್ಣ ಕಾಮನಬಿಲ್ಲು, ಅದರ ಸುತ್ತ ವಿಹರಿಸುವ ತಂಗಾಳಿ, ಅದರ ನಡುವೆ ರೆಕ್ಕೆ ಬಡಿಯುತ ಸಂಭ್ರಮಿಸುವ ಹಕ್ಕಿ ಸಂಕುಲ, ಅವುಗಳು ಹೆಣೆಯುವ ಚಂದದ ಗೂಡುಗಳು, ಅದಕ್ಕೆ ನೆರಳಾಗುವ ಹಸಿರೆಲೆ-ಹೂ-ಹಣ್ಣುಗಳು, ಅವುಗಳ ಸುತ್ತ ಝೆoಕರಿಸುವ ದುಂಬಿ-ಚಿಟ್ಟೆ-ಪತಂಗಗಳು, ಮತ್ತವುಗಳ ರೆಕ್ಕೆಗಳ ಮೇಲಿನ ಚಿತ್ತ ಚಿತ್ತಾರದ ವರ್ಣಮಯ ವೈಭವ. ಚಂದಿರ-ಚುಕ್ಕಿಗಳು. ಝರಿ, ಜಲಪಾತ, ನದಿ, ಸಮುದ್ರ. ಅವುಗಳ ಅಲೆಗಳ ನಿನಾದ, ಮೋಹಕತೆ ಮತ್ತು ಶಿಸ್ತು. ಅದರಾಳದ ಜಲಚರ ಜಗತ್ತು. ಇರುವೆ ಸಾಲಿನಿಂದ ಹಿಡಿದು ಆಳವಾದ ಕಣಿವೆಗಳು, ಎತ್ತರವಾದ ಪರ್ವತಗಳು, ಘನವಾದ ಕಾಡುಗಳು ಒಂದೇ… ಎರಡೇ… ಎಲ್ಲವೆಂದರೆ ಎಲ್ಲಾ….! ಇಡೀ ಪ್ರಕೃತಿಯ ಅನು ಕಣವು ಖಾದರ್ ಮೊಹಿಯೊದ್ದೀನ್
ಅವರಲ್ಲಿ ಬೆರಗನ್ನು ಹುಟ್ಟಿಸುತ್ತದೆ. ಪ್ರತಿ ಸೃಷ್ಟಿಯೂ ಅವರಲ್ಲಿ ಕುತೂಹಲ ಮೂಡಿಸುತ್ತದೆ. ಒಂದೊಂದು ಪ್ರಬೇಧವು ವಿಸ್ಮಯವಾಗಿ ಕಾಣುತ್ತದೆ. ಎಲ್ಲವೂ ವಿಶಿಷ್ಟವಾಗಿ ತೋರುತ್ತದೆ. ಹಾಗಾಗಿಯೇ ಅವರಿಗೆ ಎಲ್ಲವೂ ಇಷ್ಟವಾಗುತ್ತದೆ. ಪ್ರಕೃತಿಯಲ್ಲಿ ಎಲೆ ಎಲೆಯೂ ಹೂವಾಗುವುದನ್ನು, ಹೂ ಹಣ್ಣಾಗಿ, ಬೀಜವಾಗಿ, ಭೂಗರ್ಭದ ಮಣ್ಣ ಮಡಿಲಲ್ಲಿ ಮೊಳಕೆಯಾಗಿ, ಗಾಳಿ-ನೀರು-ಬೆಳಕಿಗೆ ಮರವಾಗಿ, ಸಕಲ ಜೀವರಾಶಿಗಳಿಗೂ ಆಹಾರವಾಗಿ, ನೆಲೆಯಾಗಿ, ನೆರಳಾಗಿ, ಭೂಮಿಗೂ ಬಾನಿಗೂ ನಡುವಿನ ಸೇತುವೆಯಂತಾಗಿ, ಮಳೆಯನ್ನು ಕರೆಯುವ ಕರವಾಗಿ, ಜಗದ ಮಹಾ ಶಕ್ತಿಯಾಗಿ ರೂಪತಳೆಯುವುದನ್ನು ತಮ್ಮ ಕಾವ್ಯಾತ್ಮಕ ಶೈಲಿಯಲ್ಲಿ ವರ್ಣಿಸುವ ಬಗೆಗೆ ಶರಣಾಗಬೇಕೆನಿಸುತ್ತದೆ. ಇದೆಲ್ಲಾ ಸಿದ್ಧಿಸಿದ್ದು ಎಂದೂ ಬತ್ತದ ಜೀವಕಾರುಣ್ಯದ ಚಿಲುಮೆಯಾಗಿದ್ದ ತನ್ನ ತಂದೆಯಿಂದ ಎಂದು ಹೇಳುವ ಖಾದರ್ ಅವರು “ನಿಸರ್ಗದ ಹಾಡು: ಅಪ್ಪ” ಎಂಬ ಲೇಖನದುದ್ದಕ್ಕೂ ತಮ್ಮ ತಂದೆಯ ದೃಷ್ಟಿಕೋನವನ್ನು, ಪ್ರಕೃತಿಯ ಕುರಿತಾದ ಕಾಳಜಿಯನ್ನು, ಮನುಷ್ಯ ಸಮಾಜದ ಬಗೆಗಿನ ಕಳಕಳಿಯನ್ನು, ಅವರ ವೈಚಾರಿಕ ಪ್ರಜ್ಞೆಯನ್ನು ಪರಿಚಯಿಸುವ ಪ್ರಯತ್ನ ಆಪ್ತತೆಯಿಂದ ಕೂಡಿದೆ.

ಬರವಣಿಗೆಯನ್ನು ಒಂದು ತಪಸ್ಸು ಎಂದು ಅರಿತಿರುವ ಖಾದರ್ ಮೊಹಿಯೊದ್ದೀನ್ ಅವರು ಹೇಳುವಂತೆ, “ಪ್ರತಿಭಾವಂತ ಲೇಖಕನೊಬ್ಬ ತನ್ನ ಬರಹಗಳ ವಿಮರ್ಶಕನೂ, ಅಂತರಂಗದ ವಿಶ್ಲೇಷಕನೂ ಆಗಿರುತ್ತಾನೆ. ತನ್ನ ಒಳ ದನಿಯನ್ನು ತಾನೇ ಕೇಳಿಸಿಕೊಳ್ಳುವಷ್ಟು ಸೂಕ್ಷ್ಮತೆಯನ್ನು ಹೊಂದಿರುತ್ತಾನೆ. ತನ್ನ ಹೃದಯವೆಂಬ ನ್ಯಾಯದೇಗುಲದಲ್ಲಿ ತನ್ನನ್ನು ತಾನೇ ಕಾಟಕಟೆಯಲ್ಲಿ ನಿಲ್ಲಿಸಿ ನ್ಯಾಯ-ಅನ್ಯಾಯಗಳ ಪರಾಮರ್ಶೆ ಮಾಡಿಕೊಳ್ಳಬೇಕು ” ಹೀಗೆ ಇತ್ಯಾದಿ ವಿಚಾರಗಳನ್ನು ಹೊಂದಿರುವ
“ಮೌನದೊಂದಿಗೆ ಸಂವಾದ” ಎಂಬ ಲೇಖನವು ಬರವಣಿಗೆಯ ಕುರಿತಾದ ಅತ್ಯುತ್ತಮ ಆಕಾರವಾಗಿ ಮೂಡಿಬಂದಿದೆ.

“ಪ್ರೀತಿ ನಮ್ಮ ಮುಗ್ಧ ಹೃದಯಗಳಲ್ಲಿ ನೆಲೆಸುತ್ತದೆ” ಎಂಬ ಅಡಿ ಬರಹ ಪ್ರೀತಿಯ ಸತ್ವವನ್ನು ವಿವರಣೆಗೆ ಒಳಪಡಿಸಿ ಅದರ ಪಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ.

ಅಷ್ಟೇ ಅಲ್ಲ…. ಇಲ್ಲಿ ಹಳ್ಳಿಯ ಅಸ್ಮಿತೆಯ ವೈಭವ ಸಾರುವ ನೆನಪುಗಳ ಹೂರಣವಿದೆ. ಬಾಲ್ಯದ ನೆನಪಿನ ಬುತ್ತಿಯ ಸವಿಯಿದೆ. ಅಜ್ಞಾತ ಸಖಿಗಾಗಿ ಹಂಬಲಿಸುವ ಹುಡುಗನೊಬ್ಬನ ಹೃದಯದ ಪ್ರೀತಿಯ ಹಾಡಿದೆ. ಶುಭ ಹಾರೈಕೆಗಳ ಪಾಲಿದೆ. ಹೊಸತನಕ್ಕಾಗಿ ಹಾತೊರೆಯುವ ಮನಸ್ಸಿನ ಅಹವಾಲಿದೆ. ಬದುಕಿನ ಬಂಡಾಯದ ದನಿ ಅಡಗಿದೆ. ರೈತರ ನೋವು, ಕೃಷಿಯ ಆದ್ಯತೆ, ಮಣ್ಣಿನ ಗುಣದ ಬಗ್ಗೆ ವಿಶೇಷ ಕಾಳಜಿ ಇದೆ. ಪುಸ್ತಕಗಳು ಮತ್ತು ಓದಿನ ಕುರಿತಾದ ವಿಶ್ಲೇಷಣೆಗಳಿವೆ. ಸೂಫಿ ತತ್ವದ ಜಿಕ್ರ್ ಇದೆ. ಕೆಲವು ಕೃತಿಗಳ ವಿಮರ್ಶೆಯೂ ಇಲ್ಲಿ ಅಡಕವಾಗಿದೆ. ಮಹಾತ್ಮಾ ಗಾಂಧೀಜಿಯವರ ಕುರಿತಾದ ಲೇಖನ ಅವರ ಬದುಕಿನ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ.

“Beauty lies in the eyes of the beholder” ಎಂಬ ಗಾದೆ ಮಾತೊಂದಿದೆ. ಅರ್ಥಾತ್ ‘ಸೌಂದರ್ಯವು ನೋಡುಗರ ದೃಷ್ಟಿಯಲ್ಲಿರುತ್ತದೆ.’ ಸೌಂದರ್ಯವು ವ್ಯಕ್ತಿನಿಷ್ಠ ಮತ್ತು ವಯಕ್ತಿಕವಾದುದಾಗಿದೆ. ಏಕೆಂದರೆ ವ್ಯಕ್ತಿಯಿಂದ ವ್ಯಕ್ತಿಗೆ ಹುಟ್ಟಿ ಬೆಳೆದ ಪರಿಸರ, ಆಲೋಚನಾ ವಿಧಾನ, ದೃಷ್ಟಿಕೋನ, ಓದು ಮತ್ತು ಬದುಕಿನ ಅನುಭವಗಳು ಭಿನ್ನವಾಗಿರುತ್ತವೆ. ಒಬ್ಬರು ಚಂದಿರನನ್ನು ಗ್ರಹಿಸಿದಂತೆ ಮತ್ತೊಬ್ಬರು ಗ್ರಹಿಸದೆ ಹೋಗಬಹುದು. ಒಬ್ಬ ವ್ಯಕ್ತಿಯು ಸುಂದರವಾಗಿ ಕಾಣುವುದನ್ನು ಇನ್ನೊಬ್ಬರು ವಿಭಿನ್ನ ದೃಷ್ಟಿಕೋನಗಳು, ಆದ್ಯತೆಗಳು ಮತ್ತು ಅನುಭವಗಳಿಂದಾಗಿ ಕಂಡುಕೊಳ್ಳದೆ ಇರಬಹುದು. ಸೌಂದರ್ಯ ಎನ್ನುವುದು ವಸ್ತುವಿನ ಅಂತರ್ಗತ ಗುಣವಲ್ಲ, ಬದಲಿಗೆ ಅದು ವಯಕ್ತಿಕ ಗ್ರಹಿಕೆ, ಮೆಚ್ಚುಗೆ ಮತ್ತು ತೀರ್ಪಿನ ವಿಷಯವಾಗಿದ್ದು, ಅದು ವಸ್ತುನಿಷ್ಠ ಸತ್ಯವಲ್ಲ! ಎನ್ನಲಾಗುತ್ತದೆ.

“Truth is beauty, beauty is truth” ಎಂಬ ಜಾನ್ ಕೀಟ್ಸ್ ಕವಿಯ ಪ್ರಗಥದ “ಸತ್ಯವೇ ಸೌಂದರ್ಯ, ಸೌಂದರ್ಯವೇ ಸತ್ಯ” ಎಂಬ ರೋಮ್ಯಾಂಟಿಕ್ ಕವಿ ಜಾನ್ ಕೀಟ್ಸ್ ನ “ಓಡ್ ಆನ್ ಎ ಗ್ರೇಸಿಯಸ್ ಅರ್ನ್” ಕವಿತೆಯ ಪ್ರಸಿದ್ಧ ಸಾಲು, ಸೌಂದರ್ಯ ಮತ್ತು ಸತ್ಯವು ಮೂಲಭೂತವಾಗಿ ಸಂಪರ್ಕ ಹೊಂದಿವೆ ಮತ್ತು ಮೂಲಭೂತವಾಗಿ ಒಂದೇ ಆಗಿವೆ ಎಂಬ ಅವರ ತತ್ವಶಾಸ್ತ್ರವನ್ನು ವ್ಯಕ್ತಪಡಿಸುತ್ತದೆ. ಕೀಟ್ಸ್ ನಿಜವಾದ ಸೌಂದರ್ಯವು ಅದರ ಶಾಶ್ವತತೆಯಲ್ಲಿದೆ ಮತ್ತು ಸತ್ಯವು ಆಂತರಿಕ ಸೌಂದರ್ಯವನ್ನು ಹೊಂದಿದೆ ಎಂದು ಸೂಚಿಸುತ್ತದೆ, ವಿಶೇಷವಾಗಿ ದೈನಂದಿನ ಜೀವನದ ಕ್ಷಣಿಕ ಮತ್ತು ನಾಶವಾಗುವ ಸ್ವಭಾವಕ್ಕೆ ವ್ಯತಿರಿಕ್ತವಾಗಿ, ಸಾಂತ್ವನ ಮತ್ತು ವಸ್ತುನಿಷ್ಠ ಆದರ್ಶವನ್ನು ಒದಗಿಸುತ್ತದೆ. ಅದರೆ ಅದು ವಯಕ್ತಿಕ ವ್ಯಾಖ್ಯಾನವಾಗಿದೆ. ಹಾಗಾಗಿಯೇ ಖಾದರ್ ಮೊಹಿಯೊದ್ದೀನ್ ಅವರ ಅನನ್ಯ ಅನುಭವಗಳು, ಜೀವನ ಮೌಲ್ಯಗಳು, ಚಿಂತನ ಕ್ರಮ, ಆಗಾಧ ಓದಿನ ಹಿನ್ನೆಲೆಯು ಅವರ ವಯಕ್ತಿಕ ಸೌಂದರ್ಯ ಪ್ರಜ್ಞೆಯನ್ನು ರೂಪಿಸಿದೆ ಎನ್ನಬಹುದು.

ಇಲ್ಲಿನ ಬಹುತೇಕ ಲೇಖನಗಳು ತಾಯಿ, ಪ್ರಕೃತಿ, ಪ್ರೀತಿ, ಸೌಂದರ್ಯ, ಬರವಣಿಗೆ ಮತ್ತು ಬದುಕಿನ ಕುರಿತಾಗಿದ್ದು ಓದುಗರಲ್ಲಿ ಹೊಸ ಹೊಳಹುಗಳನ್ನು ಮೂಡಿಸುವುದರ ಜೊತೆಗೆ ಆತ್ಮವಲೋಕನಕ್ಕೆ ಹಚ್ಚುತ್ತವೆ.

ಖಾದರ್ ಮೊಹಿಯೊದ್ದೀನ್ ಅವರ ಲೇಖನಗಳನ್ನು ಒಂದೊಂದಾಗಿ ಓದುತ್ತ ಹೋದಂತೆ ಅವರು ತಾಯಿಯ ಕುರಿತು ಹೇಳುವಾಗ ಲೇಬನಾನಿನ ದಾರ್ಶನಿಕ ಕವಿ ‘ಖಲೀಲ್ ಗಿಬ್ರಾನ್’ ನಂತೆ, ಪ್ರೇಮವನ್ನು ವ್ಯಾಖ್ಯಾನಿಸುವಾಗ ‘ಜಲಾಲುದ್ದಿನ್ ರೂಮಿ’ ಯಂತೆ, ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸುವಾಗ ‘ಚಾರ್ಲ್ಸ್ ಡಾರ್ವಿನ್’ ನಂತೆ, ಬದುಕನ್ನು ವಿಮರ್ಶಿಸುವಾಗ ‘ಲಿಯೋ ಟಾಲ್ ಸ್ಟಾಯ್’ ರಂತೆ, ಪ್ರಕೃತಿಯನ್ನು ವರ್ಣಿಸುವಾಗ “High priest of Nature” ಎನಿಸಿಕೊಂಡ ‘ವಿಲಿಯಂ ವರ್ಡ್ಸ್ ವರ್ಥ್’ ನಂತೆ, ತಮ್ಮ ಕಲ್ಪನೆಗಳನ್ನು ಕಾವ್ಯಾತ್ಮಕ ಪರಿಭಾಷೆಯಲ್ಲಿ ವಿವರಣೆಗೆ ಒಳಪಡಿಸುವಾಗ ‘ರವೀಂದ್ರನಾಥ ಟ್ಯಾಗೋರ್’ ರಂತೆಯೂ, ವಿಚಾರಗಳನ್ನು ಬಿಡಿಸಿ ಹೇಳುವಾಗ ‘ಓಶೋ’ ಅಂತೆಯೂ, ಕವಿತೆಗಳನ್ನು ಓದುವಾಗ ಕಬೀರನ ಕಾವ್ಯವಾಣಿಯಂತೆಯು ಅನ್ನಿಸಿದಂತೂ ನಿಜ; ಅತಿಶಯೋಕ್ತಿಯ ಮಾತಲ್ಲ. ಹೊರ ಜಗತ್ತಿಗೆ ತೆರೆದುಕೊಳ್ಳದ ಒಬ್ಬ ಸಂತ ಸುಪ್ತವಾಗಿ ಅವರೊಳಗೆ ನೆಲೆಸಿದ್ದಾನೆ. ಜ್ಞಾನೋದಯ ಹೊಂದಿ ತಥಾಗತನಾದ ಬುದ್ಧನಾಗಿ ಅವನು ತನಗೆ ತಿಳಿದ ಸತ್ಯ ವಾಕ್ಯಗಳನ್ನು ಬರೆಯುತ್ತಾನೆ. ಹಾಗಾಗಿಯೇ ಇಲ್ಲಿಯ ಲೇಖನಗಳಿಗೆ ಬದುಕಿನ ಅನುಭವಗಳಿಂದ ಅನುಭಾವದೆಡೆಗೆ ಸಂಚಾರಿಸುವ ಗುಣವಿದೆ. ಅರಿವಿನ ನಡಿಗೆಯ ದಾರ್ಶನೀಕ ನೋಟ ದಕ್ಕಿದೆ. ಎಲ್ಲಕ್ಕೂ ಮಿಗಿಲಾಗಿ ಖಾದರ್ ಮೊಹಿಯೊದ್ದೀನ್ ಅವರು ಬಳಸುವ ಪದಗಳು, ಅವುಗಳ ಲಾಲಿತ್ಯ, ತಾಕಿದರೆ ಅಂಗೈ ಬೆರಳುಗಳಿಗಂಟಿ ಘಮ್ ಎನ್ನುತ್ತವೆ ಏನೋ ಅನ್ನುವಷ್ಟರ ಮಟ್ಟಿಗೆ ತಮ್ಮದೇ ಅನನ್ಯ, ಮೋಹಕ ಶೈಲಿಯನ್ನು ರೂಢಿಸಿಕೊಂಡಿರುವ ಭಾಷೆ ಇಲ್ಲಿಯ ಬರವಣಿಗೆಯ ಜೀವಾಳ ಎನ್ನಬಹುದು. ಇಂತಹ ಕೃತಿಗೆ ಮುನ್ನುಡಿ ಬರೆಯುವುದೆಂದರೆ ಹಾರುವ ಹಕ್ಕಿಗೆ ಕನ್ನಡಿ ಹಿಡಿದಂತೆಯೇ ಸರಿ. ಮರೆತು ಹೋಗುವ ಮುನ್ನ ಕೃತಿ ಓದುಗರ ಹೃದಯಗಳನ್ನು ಬೆಳಗಲಿ, ನೆನಪಿನಲ್ಲಿ ಉಳಿಯಲಿ, ಕನ್ನಡ ಸಾರಸ್ವತ ಲೋಕದಲ್ಲಿ ಕವಿ ಮತ್ತು ಲೇಖಕನಾಗಿ ಇಡುತ್ತಿರುವ ಈ ಮೂರು ಹೆಜ್ಜೆಗಳು ನೂರಾಗಲಿ, ತಮ್ಮ ಬರಹಗೀತೆಗಳಿಂದ ಓದುಗರ ಮನಗಳನ್ನು ಹೀಗೆಯೇ ತಣಿಸುತ್ತಿರಲಿ ಎಂಬ ಆಶಯ ಮತ್ತು ಹಾರೈಕೆಗಳೊಂದಿಗೆ….


  • ಜಬೀವುಲ್ಲಾ ಎಂ. ಅಸದ್ – ಕವಿ ಮತ್ತು ಚಿತ್ರಕಲಾವಿದರು, ಮೊಳಕಾಲ್ಮೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW