ಪುರೋಹಿತರು ನಿಗದಿ ಪಡಿಸಿದ ಮಹೂರ್ತ ತಪ್ಪಿ ಹೋದಾಗ ಪುರೋಹಿತರಲ್ಲಿ ವಿನಂತಿ ಮಾಡಿಕೊಂಡು ತಪ್ಪಿ ಹೋದ ಮೂಹರ್ತದಲ್ಲೇ ಉದ್ಯಮಿ, ಲೇಖಕರಾದ ಅರುಣ್ ಪ್ರಸಾದ್ ಅವರು ಮದುವೆಯಾದರು. ಈಗ ಅವರು ಮದುವೆಯಾಗಿ 36 ವರ್ಷ ಕಳೆದಿದೆ. ಅವರ ಮದುವೆಯ ನೆನಪುಗಳನ್ನು ಮೇಲುಹಾಕಿದ ಲೇಖಕರು…
ಮಹೂರ್ತ ತಪ್ಪಿ ಹೋದ ಆವೇಳೆಯಲ್ಲಿ ನಡೆದ ನನ್ನ ಮದುವೆಗೆ 36 ವರ್ಷ. ಆಗಸ್ಟ್ 23, 1989 ನನ್ನ ವಿವಾಹ ಆದ ದಿನಾಂಕ. ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಈವರೆಗೂ ನಾನು ಆಚರಿಸಿಲ್ಲ.
ನನ್ನ ಮದುವೆ ಮೊದಲಿಗೆ ಗುಟ್ಟಾಗಿ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೊಂದಾಯಿಸಿದ್ದೆ. ಹೋರಾಟಗಾರ ತೀ.ನಾ.ಶ್ರೀನಿವಾಸ್ ನನ್ನ ರಹಸ್ಯವಾಗಿ ನಡೆದ ಮದುವೆಗೆ ಗಾರ್ಡಿಯನ್ ಆಗಿ ಸಹಿ ಮಾಡಿದ್ದರು. ನಂತರ ಎರೆಡು ವರ್ಷದ ನಂತರ ನಮ್ಮ ತಂದೆಯನ್ನು ಒಪ್ಪಿಸಿ ಶಿವಮೊಗ್ಗದ ಕೋಟೆ ಆಂಜನೇಯ ದೇವಸ್ಥಾನದಲ್ಲಿ 23 ಆಗಸ್ಟ್ 1989ರಲ್ಲಿ ಅಧಿಕೃತವಾಗಿ ಮದುವೆ ಆಗಿದ್ದೆ. ಇವತ್ತಿಗೆ 36 ವರ್ಷ ಆಯಿತು. ಅವತ್ತು ಇಡೀ ದಿನ ವಿಪರೀತ ಮಳೆ, ನಮ್ಮ ತಂದೆ ಕೊನೆಕ್ಷಣದಲ್ಲಿ ನನ್ನ ಮದುವೆಗೆ ಬರುವುದಿಲ್ಲ ಅಂತ ಘೋಷಣೆ ಮಾಡಿದಾಗ ಇಡೀ ಸನ್ನಿವೇಶ ಕ್ಲೈಮ್ಯಾಕ್ಸ್ ಗೆ ಹೋಗಿ ಸುಖಾಂತ್ಯವಾಗಲು ತುಂಬಾ ಸಮಯ ಬೇಕಾಯಿತು.

50 ಕಿಲೋ ಮೀಟರ್ ದೂರದ ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯ ತಲುಪಲು ಇದರಿಂದ ವಿಳಂವಾಗಿತ್ತು. ಇದರಿಂದ ವಿವಾಹ ಮಹೂರ್ತದ ವೇಳೆ ತಪ್ಪಿ ಹೋಗಿತ್ತು.
ಮದುವೆಗೆ ಮಹೂರ್ತ ಇಲ್ಲದ ವೇಳೆಯಲ್ಲಿ ಮದುವೆ ಆಗಬಾರದು ಮತ್ತು ಪುರೋಹಿತ್ಯ ವಹಿಸಿದರೆ ತಮ್ಮದೂ ತಪ್ಪು ಎಂದು ಆಗಿನ ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯದ ಪ್ರದಾನ ಅರ್ಚಕರಾಗಿದ್ದ ಮತ್ತು ಸಂತರ ಸಮಾವೇಶಗಳ ಸಂಚಾಲಕರಾಗಿದ್ದ ವಿಶ್ವ ಹಿಂದೂ ಪರಿಷತ್ ನ ಪ್ರಮುಖರಾಗಿದ್ದ ನರಸಿಂಹಮೂರ್ತಿ ಅಯ್ಯಂಗಾರರು ತಿಳಿಸಿದಾಗ ನನಗೆ ತಲೆಯ ಮೇಲೆ ಬಾಂಬ್ ಬಿದ್ದ ಹಾಗಾಯಿತು.
ನಂತರ ಅವರಿಗೆ ನನ್ನ ಪ್ರೇಮ ವಿವಾಹ ಮತ್ತು ಅಂತರ್ಜಾತಿ ವಿವಾಹ ಇದಕ್ಕೆ ಎರೆಡೂ ಕುಟುಂಬ ಒಪ್ಪಿಸಿ, ಇಲ್ಲಿಗೆ ನನ್ನ ತಂದೆಯನ್ನ ಒಪ್ಪಿಸಿ ಕರೆತರಲು ವಿಳಂಬವಾಗಿ ಮಹೂರ್ತ ತಪ್ಪಿ ಹೋಯಿತು. ಆದ್ದರಿಂದ ನನಗೆ ಏನೇ ತೊಂದರೆಯಾದರೂ ಪರವಾಗಿಲ್ಲ. ದಯಮಾಡಿ ನನ್ನ ಮದುವೆ ಶಾಸ್ತ್ರ ಇವತ್ತೇ ಮಾಡಿ ಕೊಡಿ, ಮುಂದೆ ಹಾಕಿದರೆ ಕಷ್ಟ ಅಂತ ವಿನಂತಿಸಿದ್ದೆ.
ನಂತರ ಮಹೂರ್ತ ಇಲ್ಲದ ಸಮಯದಲ್ಲಿಯೇ ನನ್ನ ವಿವಾಹ ನೆರವೇರಿತು.
ನನ್ನ ಮದುವೆಗೆ ವಿವಾಹ ಆಹ್ವಾನ ಪತ್ರಿಕೆ ಮಾಡಿಸಿರಲಿಲ್ಲ, ಅವತ್ತಿಗೆ ಅತ್ಯಾಪ್ತರಾಗಿದ್ದವರನ್ನು ಕರೆದಿದ್ದೆ ನನ್ನ ಅವತ್ತಿನ ಮದುವೆಗೆ ಕೇವಲ 25 ಜನ ಅಷ್ಟೇ ಭಾಗವಹಿಸಿದ ಸಾಕ್ಷಿದಾರರು.
ನಂತರ ಶಿವಮೊಗ್ಗದ ಜ್ಯೂವೆಲ್ ರಾಕ್ ಹೋಟೆಲ್ ನಲ್ಲಿ ಅತಿಥಿಗಳಿಗೆ ಅವರಿಷ್ಟದ ವೆಜ್ – ನಾನ್ ವೆಜ್ – ಆಲ್ಕೋಹಾಲ್ ಸಹಿತ ಬೋಜನ ಮಾಡಿಸಿ ನವ ವಿವಾಹಿತನಾಗಿ ಊರಿಗೆ ಬಂದು ಮನೆ ಸೇರಿದ್ದೆ.

ಈವರೆಗೂ ನಾನು, ನನ್ನ ಪತ್ನಿ, ನನ್ನ ಇಬ್ಬರ ಮಕ್ಕಳೂ ಬರ್ತಡೇ ಸೆಲೆಬ್ರೇಷನ್ ಮಾಡಿಲ್ಲ, ಕೇಕ್ ಕಟ್ ಮಾಡಿಲ್ಲ ಮತ್ತು ವಿವಾಹ ವಾರ್ಷಿಕೋತ್ಸವ ಕೂಡ ಆಚರಿಸುವುದಿಲ್ಲವಾದ್ದರಿಂದ ಆಗಸ್ಟ್ 23 ನನ್ನ ವಿವಾಹ ವಾರ್ಷಿಕೋತ್ಸವ ಅಂತ ನೆನಪು ನನಗೂ ಕೆಲವೊಮ್ಮ ಆಗುವುದಿಲ್ಲ. ನನ್ನ ಪತ್ನಿಗೂ ನೆನಪಾಗುವುದಿಲ್ಲ, ಕೆಲವೊಂದು ವರ್ಷ ಮಗ – ಮಗಳಿಗೆ ನೆನಪಾಗಿ ಶುಭ ಹಾರೈಸುತ್ತಾರೆ.
ಬೂದಿ ಬಸಪ್ಪ ನಾಯಕರು ನಮ್ಮ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ತ್ಯಾಗರ್ತಿ ಸಮೀಪದ ಹೊಸಂತೆಯಲ್ಲಿ ನಡೆಸಿದ ರೈತ ಸಮಾವೇಶದ ದಿನ ಕೂಡ ಆಗಸ್ಟ್ 23 (23- ಆಗಸ್ಟ್ – 1830) ಆದ್ದರಿಂದ ಇತ್ತೀಚೆಗೆ ನನ್ನ ವಿವಾಹದ ದಿನ ನೆನಪಾಗುತ್ತದೆ.
- ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು.
