“ಮೂಚಿಮ್ಮ”ಪುಸ್ತಕ ಪರಿಚಯ – ಮೋಹನ್ ಕುಮಾರ್ ಡಿ ಎನ್

ಲೇಖಕ ಡಾ. ಅಜಿತ್ ಹರೀಶಿ ಅವರ ‘ಮೂಚಿಮ್ಮ’ ಪುಸ್ತಕದ ಕುರಿತು ವಿಮರ್ಶಕ ಮೋಹನ್ ಕುಮಾರ್ ಡಿ ಎನ್ ಅವರು ಬರೆದ ಪುಸ್ತಕ ಪರಿಚಯ, ತಪ್ಪದೆ ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ …

ಪುಸ್ತಕ : ಮೂಚಿಮ್ಮ
ಲೇಖಕ : ಡಾ. ಅಜಿತ್ ಹರೀಶಿ
ಪ್ರಕಾಶನ : ಮೈಲ್ಯಾಂಗ್ ಬುಕ್ಸ್
ಪುಟಗಳು : 102,
ಬೆಲೆ : 170/-

 

ಸ್ನೇಹಿತರಾದ ಅಜಿತ್ ಹರೀಶಿ ಅವರು ಓದಿನ ಪ್ರೀತಿಗೆ ಕಳುಹಿಸಿದ ಪುಸ್ತಕವಿದು. ಕಳುಹಿಸಿ ಸುಮಾರು ದಿನಗಳಾಗಿದ್ದರೂ ಓದಲು ಆಗಿರಲಿಲ್ಲ. ಮೊನ್ನೆ ಓದಲೇಬೇಕೆಂದು ಪುಸ್ತಕ ಹಿಡಿದು ಕೂತದ್ದಷ್ಟೇ; ಮುಗಿದದ್ದು ತಿಳಿಯಲಿಲ್ಲ. ಸರಾಗವಾಗಿ ಓದಿಸಿಕೊಂಡು ಹೋಯ್ತು.

( ‘ಮೂಚಿಮ್ಮ’ ಲೇಖಕರು ಡಾ. ಅಜಿತ್ ಹರೀಶಿ)

ಮಲೆನಾಡಿನ ಹಿನ್ನೆಲೆಯುಳ್ಳ ಲೇಖಕರು ತಮ್ಮ ಕತೆಗಳಲ್ಲಿ ಕೂಡ ಅದನ್ನು ಛಾಪಿಸಿದ್ದಾರೆ. ಫಿಲ್ಟರ್ ಕಾಫಿಯ ಗಮಲಿನಂತೆ ಮಲೆನಾಡಿನ ಫ್ಲೇವರ್ ಹಲವು ಕತೆಗಳಲ್ಲಿ ಆವರಿಸಿಕೊಳ್ಳುತ್ತದೆ. ಮುಖ್ಯವಾಗಿ, ಬಳಸಿರುವ ಭಾಷೆ, ಕಟ್ಟಿಕೊಟ್ಟಿರುವ ಸುತ್ತಲಿನ ಪರಿಸರ ಶ್ರಾವಣ ಮಾಸದ ಮಳೆಯಂತೆ ಸಂಕಲನದುದ್ದಕ್ಕೂ ಹರಿದು ಬಂದಿದೆ. ಬೇರೆ ಮಾದರಿ ಕತೆಗಳಿದ್ದರೂ, ಲೇಖಕರು ಪಳಗಿದವರಂತೆ ಕಾಣುವುದು ತನ್ನ ಸುತ್ತಲ ಪರಿಸರದಲ್ಲಿ ನಡೆಯುವ ಕತೆಗಳನ್ನು ಹೇಳುವಾಗಲೇ.

ಲೇಖಕರು ಮೂಲತಃ ವೈದ್ಯರು. ಹೀಗಾಗಿ ಸಂಕಲನದ ಮೊದಲ ಕತೆ ‘ಆವಿ’ ಸಹಜವಾಗಿ ಅದೇ ಕ್ಷೇತ್ರದ ಸುತ್ತ ನಡೆಯುತ್ತದೆ. ಮಾನವ ಸಹಜ ಸಂಬಂಧಗಳು ವ್ಯಾಪಾರೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ, ಕಥಾ ನಾಯಕಿ ಸಂಕಷ್ಟದ ಸ್ಥಿತಿಯಲ್ಲಿ ನಮ್ಮ ಮಣ್ಣಿನ ಮೂಲ ಸೆಲೆಯನ್ನು ತ್ಯಜಿಸುವುದಿಲ್ಲ. ಮಗುವನ್ನು ಕಳೆದುಕೊಂಡರೂ, ಅವಳಲ್ಲಿನ ತಾಯಿ ಹೃದಯ ಕರಗುವುದಿಲ್ಲ. ಅಸಹಾಯಕ, ಅಸಮರ್ಥ ಗಂಡನನ್ನೂ ಒಪ್ಪಿ ನಡೆಯುತ್ತಾಳೆ. ಉದಾತ್ತ ಗುಣಕ್ಕೆ ಪ್ರತೀಕ ಭಾರತನಾರಿ ಎನ್ನುವುದನ್ನು ಕತೆ ಸಾರುತ್ತದೆ.
‘ನಟ’ ಕತೆಯಲ್ಲಿ ಮನುಷ್ಯ ಪ್ರತಿ ಕ್ಷಣ ಹತ್ತಾರು ಅವತಾರಗಳ ಮೂಲಕ ನಟಿಸುತ್ತಲೇ ಇರುವ ಅವಶ್ಯಕತೆಯನ್ನು ಹೇಳಲಾಗಿದೆ. ಒಬ್ಬೊಬ್ಬರದು ಒಂದೊಂದು ಪಾತ್ರ. ಪಾತ್ರಕ್ಕೆ ತಕ್ಕಂತೆ ನಟನೆ. ನಟನೆ ಮಾಡುವ ನಾಯಕಿ ನಾಯಕನನ್ನು ಅಸಹಜ ಎನ್ನುಸುವಂತೆ ಸೆಳೆಯುತ್ತಾಳೆ. ಸಾಮಾಜಿಕ ಸ್ಥಾನಮಾನಗಳ ಅಂತರವಿಲ್ಲದೆ ಪರಸ್ಪರರು ಹತ್ತಿರವಾಗುತ್ತಾರೆ. ಬದುಕು ತನ್ನ ಪಾತ್ರವನ್ನು ಬದಲಿಸುತ್ತದೆ; ನಟನೆಯೂ ಬದಲಾಗುತ್ತದೆ. ಜೀವನದ ಕ್ಷಣಭಂಗುರತೆಯನ್ನು, ಅನಿಶ್ಚಿತವನ್ನು ಕತೆಯಲ್ಲಿ ಬರುವ ಪಂಚಮಿ ಎನ್ನುವ ಜಿಂಕೆಯ ಮೂಲಕ ಸಂಕೇತಿಸುವಲ್ಲಿ ಕತೆ ಯಶಸ್ವಿಯಾಗುತ್ತದೆ.

ಮಠಾಧೀಶರ ಅತೃಪ್ತ ಬಯಕೆಗಳು, ನಿಗ್ರಹಿಸಲಾಗದ ಅಂತರಂಗದ ಮನೋಕಾಮನೆಗಳ ಕುರಿತಾದ ಕತೆ ‘ವಿಲಿಪ್ತ’ ಬಲಹೀನತೆಗಳನ್ನೇ ಬಂಡವಾಳ ಮಾಡಿಕೊಂಡ ಲೋಕವೊಂದು ಅರಿವಿಗೆ ಬಾರದಂತೆ ನಡೆಸುವ ಗುಪ್ತ ಕಾರ್ಯಾಚರಣೆ ಕತೆಯಲ್ಲಿದೆ. ಕತೆಯಲ್ಲಿ ಬರುವ ಸಮೀರಾ ಕೇವಲ ಸಿಂಬಾಲಿಕ್ ಅಷ್ಟೇ. ಅವಳಂತೆ ಕಬಳಿಸಲು ಬಾಯ್ದೆರೆದು ಕಾದಿರುವವರು ಕಣ್ಣೆದುರೇ ಇರುತ್ತಾರೆ. ಮೈಮರೆತರೆ ಅನಾಹುತ ತಪ್ಪಿದ್ದಲ್ಲ ಎನ್ನುವ ನೀತಿಯನ್ನು ಕತೆ ಸೂಚ್ಯವಾಗಿ ಹೇಳುತ್ತದೆ.

ವಂಶಪಾರಂಪರ್ಯವಾಗಿ ಬಂದ ಪೌರೋಹಿತ್ಯವನ್ನು ತ್ಯಜಿಸಿ, ಕರೋನಾ ಮಹಾಮಾರಿಯ ಕಾಟದಿಂದ ತನ್ನ ಸುತ್ತಲ ಪರಿಸರವನ್ನು ರಕ್ಷಿಸುವ, ಜಾಗೃತಿ ಮೂಡಿಸುವ, ದೀನರಿಗೆ ಸೇವೆ ಸಲ್ಲಿಸುವ ನಿರ್ಧಾರವನ್ನು ಬದುಕಿನ ಸಂಧ್ಯಾಕಾಲದಲ್ಲಿ ಕೈಗೊಳ್ಳುವ ಜನಾರ್ಧನ ಭಟ್ಟರು ಅಚ್ಚರಿ ಮೂಡಿಸುತ್ತಾರಾದರೂ, ಕೊನೆಗೆ ಮಹಾಮಾರಿಯ ಹೊಡೆತಕ್ಕೆ ಸಿಕ್ಕು ಬದುಕಿನ ಯಾತ್ರೆ ಮುಗಿಸುವ ಹಂದರ ‘ಜನಾರ್ಧನ’ ಕತೆಯಲ್ಲಿದೆ.

‘ಪರಿವರ್ತನೆ’ಯಲ್ಲಿ ತಾನು ನಂಬಿದ್ದೇ ಪಾರಮಾರ್ಥಿಕ ಸತ್ಯವೆಂದು ನಂಬಿದ ಅಜ್ಜನಿದ್ದಾನೆ. ಬದುಕು ಅನೂಹ್ಯ ಸಂಗತಿಗಳ ಸರಮಾಲೆ. ಇಲ್ಲಿ ತಿಳಿದುಕೊಂಡಿರುವುದಕ್ಕಿಂತ ತಿಳಿದುಕೊಳ್ಳಬೇಕಾದ ಹಲವು ಸಂಗತಿಗಳಿವೆ. ಕಾಲ ಬಂದಾಗ ಅವು ತಂತಾನೇ ಹೊರ ಬಂದು, ಜೀವನದಲ್ಲಿ ಅಲ್ಲಿಯ ತನಕ ಕಂಡುಕೊಂಡ ಸತ್ಯಗಳನ್ನು, ಜೀವನಾನುಭವವನ್ನು ಬುಡಮೇಲು ಮಾಡಿಬಿಡುವ ಸನ್ನಿವೇಶ ಅಜ್ಜನಿಗೆ ಎದುರಾದಾಗ ಅವನಲ್ಲಿ ಪರಿವರ್ತನೆ ಉಂಟಾಗುತ್ತದೆ. ಬದಲಾವಣೆಯೇ ಜಗದ ನಿಯಮ ಎನ್ನುವ ನೀತಿಯನ್ನು ಕತೆ ಸಾರುತ್ತದೆ.
ಅಜಿತ್ ಅವರು ಪಳಗಿದ ಕತೆಗಾರರಂತೆ ಕತೆಯನ್ನು ಕಟ್ಟುತ್ತಾರೆ. ಅವರು ಕತೆ ಕಟ್ಟುವ ಕ್ರಮ, ಆರಿಸಿಕೊಂಡ ವಿಷಯ ಕತೆಗಳಲ್ಲಿ ನಿಸ್ಸಂಶಯವಾಗಿ ಧ್ವನಿಸುತ್ತವೆ. ಕೆಲವು ಅಡಗಿಕೊಳ್ಳುತ್ತವೆ. ಇನ್ನೂ ಕೆಲವು ಕತೆಗಳು ಕುಸುರಿಯನ್ನು ಬೇಡುತ್ತವೆ ಅಥವಾ ಕತೆಗೆ ಅವಶ್ಯಕವಿತ್ತು ಅಂತ ಅನ್ನಿಸುತ್ತವೆ. ಆದರೆ ಅದೆಲ್ಲಾ ನಗಣ್ಯ. ಮುಖ್ಯವಾಗಿ, ಕತೆಗಳು ಓದಿಸಿಕೊಳ್ಳುತ್ತವೆ.

ಅವರು ಕಥಾಕೂಟದಲ್ಲಿ ಬಂದ ಕತೆಗಳನ್ನು ಓದಿ ಪ್ರತಿಕ್ರಿಯಿಸುವುದನ್ನು ಕಂಡ ನಂತರ ಮತ್ತು ಈಗ ಅವರೇ ಸ್ವತಃ ಬರೆದ ಕತೆಗಳನ್ನು ಓದಿದ ನಂತರ ನನಗನ್ನಿಸಿದ್ದಿಷ್ಟು; ಕತೆಗಾರ ಅಜಿತ್ ಅವರಿಗಿಂತ ವಿಮರ್ಶಕ ಅಜಿತ್ ಹೆಚ್ಚು ಆಪ್ತವಾಗುತ್ತಾರೆ. ಅವರೊಳಗಿನ ಕತೆಗಾರ ಇನ್ನಷ್ಟು ಹೊಮ್ಮಲಿ. ಹೊರಬರಲಿ. ಇದು ನನ್ನ ಪ್ರಾಮಾಣಿಕ ಅನಿಸಿಕೆ.


  • ಮೋಹನ್ ಕುಮಾರ್ ಡಿ ಎನ್  (ಲೇಖಕರು, ಪುಸ್ತಕ ವಿಮರ್ಶಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW