ಬೆಂಗಳೂರಿನ ರಂಗಾಸ್ಥೆ ತಂಡ ನೀಡುವ ಈ ಪ್ರಶಸ್ತಿಯನ್ನು ಈ ಬಾರಿ ಮೈಸೂರಿನ ಯುವ ರಂಗ ಕರ್ಮಿ ಶ್ರೀ ರಾಜೇಶ್ ಬಸವಣ್ಣ ಅವರಿಗೆ ನೀಡಲಾಗಿದೆ.ರಾಜೇಶ್ ಅವರು ಮೈಸೂರಿನಲ್ಲಿ ರಂಗವಲ್ಲಿ ಎಂಬ ತಂಡ ಕಟ್ಟಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಮೂಲತಃ ಮೈಸೂರಿನವರಾದ ರಾಜೇಶ ಬಿ.ಎಸ್.ಸಿ ಪದವೀಧರರಾಗಿದ್ದು ಪತ್ರಿಕೋದ್ಯಮದ ವಿದ್ಯಾರ್ಥಿಯೂ ಆಗಿದ್ದಾರೆ. ಇಂಗ್ಲಿಷ್ ಭಾಷೆಯಲ್ಲು ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ವಿಜಯ ಕರ್ನಾಟಕ ಮತ್ತು ವಿಜಯ ಟೈಮ್ಸನಲ್ಲಿ ಕೆಲಸ ಮಾಡಿದ ನಂತರ ಈಗ ಹಿಂದೂ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಮೊದಲಿನಿಂದಲೂ ರಂಗಾಸಕ್ತರಾದ ಇವರು ಚಾಮರಾಜನಗರದ ಶಾಂತಲಾ ರಂಗತಂಡದಲ್ಲಿ ತಮ್ಮನು ತೊಡಗಿಸಿಕೊಂಡರು. ಅಲ್ಲಿ ನಾಲ್ಕುವರ್ಷ ಅನೇಕ ನಾಟಕಗಳಲ್ಲಿ ಭಾಗಿಯಾಗಿ ಮೈಸೂರಿಗೆ ಬಂದರು. ಅಲ್ಲಿ ರಂಗವಲ್ಲಿ ತಂಡಕ್ಕೆ ಸೇರಿ ಕಾರ್ಯದರ್ಶಿಯೂ ಆಗಿ ಈಗ ತಂಡವನ್ನು ಮುನ್ನಡಿಸುತ್ತಿದ್ದರಾರೆ. ಈಗ ಅಲ್ಲಿ ರಂಗ ನೇಪಥ್ಯದಲ್ಲಿ, ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಹೊಸಬಗೆಯ ಅನೇಕ ನಾಟಕಗಳನ್ನು ಆಡುತ್ತ ಮೈಸೂರಲ್ಲಿ ಜನಪ್ರಿಯವಾಗಿರುವ ಈ ತಂಡ ತುಂಬ ಸಕ್ರಿಯವಾಗಿದೆ. ಅಲ್ಲಿ ನಟನಾಗಿ, ರಂಗ ಪರಿಚಾರಕನಾಗಿ, ಸಂಘಟಕನಾಗಿ ದುಡಿಯುತ್ತಿದ್ದಾರೆ. ಜೊತೆಗೆ ರಂಗಕ್ಕೆ ಸಂಬಂಧಿಸಿದ ಲೇಖನ, ಕವಿತೆಗಳನ್ನು ಬರೆಯುವ ರಾಜೇಶ್ ಬಿಡುವಿಲ್ಲದೆ ಓಡಾಡುವ ರಂಗಪ್ರಿಯ. ಅವರಿಗೆ ಬೆಂಗಳೂರಿನ ರಂಗಾಸ್ಥೆ ತಂಡ ತನ್ನ ದ್ವಿತೀಯ ವರ್ಷಾಚರಣೆಯಲ್ಲಿ ಡಾ. ಹೆಚ್.ಎನ್. ನೆನಪಿನ ಪ್ರಶಸ್ತಿ ಕೊಡುತ್ತಿದೆ.
ಪ್ರಶಸ್ತಿ ಸಮಾರಂಭದ ಅಧ್ಯಕ್ಷತೆಯನ್ನು ನಾಟಕಕಾರ ಹೂಲಿಶೇಖರ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಾಟಕ ಅಕ್ಯಾಡೆಮಿಯ ಮಾಜಿ ಅಧ್ಯಕ್ಷರೂ, ರಂಗ ನಿರ್ದೇಶಕರೂ ಆದ, ಬಿ.ವಿ ರಾಜಾರಾಮ್ ಮತ್ತು ರಂಗಸಂಘಟಕ ಶ್ರೀ ಗಣೇಶ್ ಶೆಣೈ ಅವರು ವಹಿಸಿದ್ದರು. ಕಾರ್ಯಕ್ರಮಕ್ಕೆ ಮೊದಲು ರಂಗಾಸ್ಥೆ ತಂಡದ ಕಲಾವಿದರು ರಂಗ ಗೀತೆಗಳನ್ನು ಪ್ರಸ್ತುತ ಪಡಿಸಿದರು.
ಯುವಕರಿಗೆ ಮಾದರಿಯಾದ ‘ರಂಗಾಸ್ಥೆ’ ತಂಡ
ರಂಗಾಸ್ಥೆ ತಂಡ ಬೆಂಗಳೂರಿನ ಉತ್ಸಾಹಿ ಕಾಲೇಜು ಹುಡುಗರು ಕಟ್ಟಿಕೊಂಡ ಒಂದು ಗುಂಪು. ಕ್ರೈಸ್ಟ ಕಾಲೇಜಿನ ವಿದ್ಯಾರ್ಥಿ ಧನುಷ್ಯ ಇದರ ನೇತಾರ. ಸುಮಾರು ಇಪ್ಪತ್ತು ಜನ ಹುಡುಗ-ಹುಡುಗಿಯರಿರುವ ಈ ತಂಡ ನಾಟಕವೇ ತಮ್ಮ ದೈವ ಅನ್ನುವಂತೆ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಎರಡು ವಸಂತಗಳನ್ನು ಪೂರೈಸಿರುವ ಈ ತಂಡ ಅಷ್ಟರಲ್ಲೇ ಅನೇಕ ಹೊಸ ಬಗೆಯ ನಾಟಕಗಳನ್ನು ರಂಗಕ್ಕೆ ತಂದಿದೆ. ಈ ತಂಡದಲ್ಲಿ ನಾಟಕ ರಚಿಸುವ ಬರಹಗಾರರಿದ್ದಾರೆ. ಹಾಡಬಲ್ಲ ಕಲಾವಿದರಿದ್ದಾರೆ. ಪಾದರಸದಂಥ ನಟರಿದ್ದಾರೆ. ಇದುವರೆಗೆ ಈ ತಂಡವು ‘ನಾವು ನಾಟಕ ಮಾಡ್ತಿಲ್ಲ’ ‘ನಮ್ಮೂರ ರಾಮಾಯಣ’ ‘ದೇವರೇ ಕಾಪಾಡ್ಬೇಕು’ ‘ರಾಣಿ ಆದಿಲ್‌ಶಾಹ್’ ‘ನೀವು ಕರೆಮಾಡಿರುವ ಚಂದಾದಾರರು’ ಒಳಗೊಂಡು ಐದು ನಾಟಕಗಳನ್ನು ಪ್ರಯೋಗಿಸಿದ್ದು ಹೂಲಿ ಶೇಖರ ಅವರ ರಚನೆಯ ರಾಣಿ ಆದಿಲ್‌ಶಾಹಿ ಹೊರತು ಮಡಿಸಿ ಉಳಿದೆಲ್ಲ ನಾಟಕಗಳನ್ನು ಈ ತಂಡದ ಯುವ ನಿರ್ದೇಶಕ ಎಸ್. ಶ್ರೀನಿಧಿ ಅವರೇ ರಚಿಸಿ ನಿರ್ದೇಶಿದ್ದಾರೆ. ಈಗಲೂ ಇವರು ಕಾಲೇಜು ವಿದ್ಯಾರ್ಥಿಯೇ ಆಗಿರುವುದು ವಿಶೇಷ. ಎರಡು ವರ್ಷದ ಪಯಣದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ರಂಗ ಪ್ರಯೋಗಗಳನ್ನು ನೀಡಿದ್ದು ಎಲ್ಲವೂ ಹೊಸ ಕೃತಿಗಳಾಗಿವೆ. ಹೂಲಿಶೇಖರರ ‘ರಾಣಿ ಆದಿಲ್‌ಶಾಹಿ’ ನಾಟಕ ಇನ್ನೂ ಹಸ್ತಪ್ರತಿಯಲ್ಲಿದ್ದಾಗಲೇ ಪ್ರಯೋಗಿಸಿದೆ. ಅಲ್ಲದೆ ಸಾಮಾಜಿಕ ಜಾಗೃತಿ ವಿಷಯ ಕುರಿತು ಬೀದಿ ನಾಟಕಗಳನ್ನು ಆಡಿದೆ. ಹಾಗೂ ಯುವಕರಲ್ಲಿ ರಂಗಾಸಕ್ತಿ ಚಿಗುರುವಂತೆ ಮಾಡಿದೆ.
ತಂಡವು ರಂಗಭೂಮಿಯಲ್ಲಿ ಎಲೆಮರೆಕಾಯಿಯಂತೆ ಕೆಲಸ ಮಾಡಿದ ಕಿರಿಯ ರಂಗಕರ್ಮಿಗಳನ್ನು ಗುರುತಿಸಿ, ಡಾ.ಹೆಚ್.ಎನ್.ನರಸಿಂಹಯ್ಯ ಪ್ರಶಸ್ತಿಯನ್ನು ನೀಡಲು ಕಟಿಬದ್ಧವಾಗಿದೆ.
#ಆಕತನಯಸ