ಅಜ್ಞಾತ ಲೇಖಕನ ಅಂತರಂಗದಿಂದ… ವಿಚಾರ ಸಮರ

ಹೂಲಿಶೇಖರ

ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಕೇವಲ ಮುಲ್ಕಿವರೆಗೆ ಓದಿದ ದುಂಡಪ್ಪ ಕೋರಿಯವರು ರಚಿಸಿದ ವಿದ್ವತ್‌ಪೂರ್ಣ ಲೇಖನಗಳು.

ಪಾಂಡಿತ್ಯ ಕೇವಲ ವಿಶ್ವವಿದ್ಯಾಲಯಗಳಿಂದ ಬರುತ್ತದೆ ಅನ್ನುವುದು ತಪ್ಪು. ಅದು ಸರಿಯಾಗಿದ್ದರೆ. ಇಲ್ಲಿಯವರೆಗೆ ವಿಶ್ವವಿದ್ಯಾಲಯಗಳಿಂಗ ಪದವಿ ಪಡೆದವರು, ಡಾಕ್ಟರೇಟ್‌ ಪಡೆದವರು, ನಾನಾ ಶಾಸ್ತ್ರಗಳನ್ನು ಓದಿದವರು ನಮ್ಮ ದೇಶದಲ್ಲಿ ಹಾದಿ-ಬೀದಿಗಳಲ್ಲಿ ನೂರಾರು ಜನ ಸಿಗುತ್ತಾರೆ. ಬಿಎ, ಎಂಎ, ಬಿಎಸ್ಸಿ, ಎಮ್ಮೆಸ್ಸಿ, ಬಿಕಾಂ, ಎಂಮ್ಕಾಮು, ನಾನಾ ಇಂಜಿನೀಯರ ಪದವೀಧರರು, ಡಾಕ್ಟರ ಪದವಿ ಪಡೆದವರು, ಹೀಗೆ ವಿಶ್ವವಿದ್ಯಾಲಯ ಎಂಬ ಫ್ಯಾಕ್ಟರಿ ಹೊರ ಹಾಕಿದ ಲಕ್ಷಾಂತರ ಪದವಿದಾರರು ಪಾಂಡಿತ್ಯ ಪೂರ್ಣರೇ ಆಗಿದ್ದರೆ ಇವತ್ತು ಇಂಡಿಯಾ ಅನ್ನುವುದು ಪಾಂಡಿತ್ಯದ ಹಿಮಾಲಯವೇ ಆಗುತ್ತಿತ್ತು. ಆದರೆ ಹಾಗಾಗಿಲ್ಲ. ಯಾಕಂದರೆ ಪದವಿ ಗಳಿಕೆ ಅಂದರೆ ಪಾಂಡಿತ್ಯ ಗಳಿಕೆಯಲ್ಲ. ಪಾಂಡಿತ್ಯವೆನ್ನುವುದು ಅಗೋಚರ. ಅದು ಎಲ್ಲಿ, ಯಾರಿಂದ, ಹೇಗೆ, ಯಾವ ರೂಪದಲ್ಲಿ ಹುಟ್ಟುತ್ತದೆ ಎಂದು ಹೇಳಲಾಗದು. ಸರ್ವಜ್ಞ ಯಾವ ವಿಶ್ವವಿದ್ಯಾಲಯದಲ್ಲೂ ಕಲಿಯಲಿಲ್ಲ. ಆದರೆ ಜೀವನ ಸಾರವನ್ನೇ ಅರೆದು ಕುಡಿದ. ಅದನ್ನೇ ಜಗತ್ತಿಗೆ ಬಿತ್ತಿದ. ಪುರಂದರದಾಸರು, ಕನಕದಾಸರು, ಶಿಶುನಾಳ ಶರೀಫರ ಕಾಲದಲ್ಲಿ ಯಾವ ವಿಶ್ವವಿದ್ಯಾಲಯಗಳೂ ಇರಲಿಲ್ಲ. ವಿಶ್ವವಿದ್ಯಾಲಯಗಳು ಕುಶಲತೆಯನ್ನು ಕಲಿಸುತ್ತವೆಯಷ್ಟೆ. ಉತ್ತರ ಕರ್ನಾಟಕದಲ್ಲಿ ಆಗಿ ಹೋದ ಸಾಧು-ಸಜ್ಜನರು ಹೆಚ್ಚು ಓದಿದವರಲ್ಲ. ಅವರು ಬದುಕಿನ ಸಾಲಿಯಲ್ಲೇ ಪರಿಣಿತಿ ಪಡೆದವರು.

ದುಂಡಪ್ಪ ನಿಂಗಪ್ಪ ಕೋರಿ ಅನ್ನುವ ಒಬ್ಬ ಹಳ್ಳಿಗಾಡಿನ ವ್ಯಕ್ತಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನವರು. ಎಂಭತ್ತರ ದಶಕದಲ್ಲಿ ಕಣ್ಮರೆಯಾದ ಇವರು ಓದಿದ್ದು ಕೇವಲ ಪ್ರಾಥಮಿಕ ಆರನೇ ತರಗತಿ. ಆದರೆ ಬರೆದದ್ದು ವಿದ್ವತ್ವಪೂರ್ಣ ಲೇಖನಗಳನ್ನು. ಯಾವುದೇ ಶೈಕ್ಷಣಿಕ ಹಿನ್ನೆಲೆಯಾಗಲಿ, ಕೌಟಂಬಿಕ ಹಿನ್ನೆಲೆಯಾಗಲಿ, ಪರಿಸರದ ಹಿನ್ನೆಲೆಯಾಗಲಿ ಇವರಿಗಿರಲಿಲ್ಲ. ಬೈಲಹೊಂಗಲ ತಾಲೂಕಿನ ಅಮಟೂರು ಗ್ರಾಮದಲ್ಲಿ ರೈತನಾಗಿದ್ದುಕೊಂಡೇ ಜೀವನವನ್ನು ಒಳಗಣ್ಣಿಂದ ನೋಡಿದರು. ಹೊಲದ ಬದುವಿನಲ್ಲಿ ಕೂತು ಬರೆದು ದೊಡ್ಡ ದಪ್ತರ್‌ ಮಾಡಿಕೊಂಡಿದ್ದ ದುಂಡಪ್ಪ ಅವರ ಲೇಖನಗಳನ್ನು ಯಾವ ವಿಶ್ವವಿದ್ಯಾಲಯವೂ ಪ್ರಕಟಿಸಲು ಸಾಧ್ಯವಿರಲಿಲ್ಲ. ಆದರೆ ೧೯೮೧ ರಲ್ಲಿ ಅವರ ಎಲ್ಲ ಲೇಖನಗಳನ್ನು ಒಗ್ಗೂಡಿಸಿ ವಿಚಾರ ಸಮರ ಎಂಬ ಪುಟ್ಟ ಪುಸ್ತಕವನ್ನು ಪ್ರಕಟಿಸಿದವರು ಬೈಲಹೊಂಗಲಿನ ಲಯನ್ಸ್‌ ಕ್ಲಬ್‌ನ ಸಹೃದಯಿಗಳು. ಅವರೂ ಮನಸ್ಸು ಮಾಡದಿದ್ದರೆ ದುಂಡಪ್ಪನವರು ಬರೆದ ಲೇಖನಗಳು ರದ್ದಿಯಾಗಿಯೇ ಹೋಗುತ್ತಿದ್ದವೇನೋ.

ಇಲ್ಲಿ ದುಂಡಪ್ಪ ಕೋರಿ ಅಜ್ಞಾತ ಸಾಹಿತಿಗಳ ಆಯ್ದ ಲೇಖನಗಳನ್ನು ನಾವು ಮತ್ತೆ ನಿಮ್ಮ ಮುಂದಿಡುತ್ತೇವೆ. ಭಾಷೆ ಉತ್ತರ ಕರ್ನಾಟಕ ಮಿಶ್ರಿತವಾಗಿದೆ. ಓದಲು ತೊಂದರೆಯಿಲ್ಲ. ಬರವಣಿಗೆಯಲ್ಲಿ ಹಾಸ್ಯದ ಹೊಳಪೂ ಇದೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತವಿದೆ. ಬರೆಯಿರಿ. – aakritikannada.com

ರೈತ ದುಂಡಪ್ಪ ಕೋರಿಯವರ ಲೇಖನಗಳ ಕುರಿತು ಅಭಿಪ್ರಾಯಗಳು

* ಕನ್ನಡದ ಜನ ಕುರುತೋದದೆಯಿಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್‌ ಎಂಬ ಕವಿಯ ವಾಣಿಗೆ ‘ವಿಚಾರ ಸಮರ’ದ ಕರ್ತೃ ಅಮಟೂರಿನ ದುಂಡಪ್ಪ ಕೋರಿಯವರು ಪ್ರತ್ಯಕ್ಷ ಉದಾಹರಣೆ. – ಪ್ರೋ.ಎಸ್.ಬಿ.ಸಿದ್ದಣ್ಣವರ

* ‘ಜನಾಂತರ್ದೃಷ್ಟಿಯೇ ಕಾವ್ಯ’ ಅನ್ನುವ ನಾಗಚಂದ್ರನ ಅಭಿಮತ ಹಾಗೂ ‘ಜನಾನುರಾಗವೇ ಕಾವ್ಯ’ ಅನ್ನುವ ರಾಘವಾಂಕನ ಅಭಿಮತಗಳನ್ನು ಮೇಳಯಿಸಿ ದುಂಡಪ್ಪ ಕೋರಿಯವರು ತಮ್ಮ ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ. ಸಣ್ಣ ಅನುಭವದವರಿಗೂ, ವಿದ್ಯೆಯ ಸರ್ಟಿಫಿಕೇಟನವರಿಗೂ ಇದು ತಲೆಗೇ ಹತ್ತುವದಿಲ್ಲವೆಂದರೂ ತಪ್ಪೇನಿಲ್ಲ. ಇವರ ಬರಹ ಬಂಗಾರದ ಬೆಳಕೂ, ಸುವಾಸನೆಯ ಸೆಳಕೂ ಹೊಂದಿವೆ.

– ಎನ್‌.ಜಿ.ಬಿರಾದಾರ ಪಾಟೀಲ, ಪ್ರಾಚಾರ್ಯರು

* ಕೇವಲ ಮುಲ್ಕೀ ಪರೀಕ್ಷೆವರೆಗೆ ಓದಿದ ದುಂಡಪ್ಪ ಕೋರಿಯವರು ಇಂಥಹ ವಿದ್ವತ್‌ ಪೂರ್ಣವಾದ ಲೇಖನಗಳ ಸೃಷ್ಟಿ ಮಾಡುತ್ತಾರೆ ಎಂಬುದು ಹಲವರಿಗೆ ಅಚ್ಚರಿ ತರಬಹುದು. ಶ್ರೀ ದುಂಡಪ್ಪನವರು ಬಲ್ಲಿದರೊಡನಾಡಿ ಅವರ ಸೇವೆಯನ್ನು ನಿಷ್ಠೆಯಿಂದ ಮಾಡಿ ಸ್ವಂತ ಬುದ್ಧಿಯನ್ನು ಹದಗೊಳಿಸಿ ಲೇಖನ ಕಾರ್ಯದಲ್ಲಿ ಯಶಸ್ವಿಯಾದ ಕುರುಹುಗಳು ‘ವಿಚಾರ ಸಮರ’ ಎಂಬ ಗ್ರಂಥದುದ್ದಕ್ಕೂ ಸಾಕ್ಷಿ ಹೇಳುತ್ತವೆ. ಇದು ಹೊಸ ಮಾದರಿ ಬರಹ. ಉಪಯುಕ್ತ ಕೃತಿ ಅನ್ನಬಹುದು. – ಉಳವೀಶ ಹುಲೆಪ್ಪನವರ ಮಠ, ಸಾಹಿತಿಗಳು

ವಿಚಾರ ಸಮರ -೧ * ಲೇಖಕ- ದುಂಡಪ್ಪ ಕೋರಿ

ಸಾಹಿತ್ಯ ಅಂದರೇನು?

ಸಾಹಿತ್ಯ ಅಂದರೆ ಸಲಕರಣೆಗಳು ಎಂದರ್ಥ. ಸಲಕರಣೆಗಳು ಸರಿಯಾಗಿ ಕೂಡಿದರೆ ಕಷ್ಟವು ಕಡಿಮೆಯಾಗಿ ಕ್ರಿಯೆಯು ಸರಳವಾಗಿ ಸುಲಭ ಸಾಧ್ಯವಾಗುತ್ತದೆ. ಗಡಿಗೆ ಮಾಡುವಾಗ ಬಟ್ಟು[ಬೆರಳು] ಮುರಿದರೆ, ಅಡುಗೆ ಮಾಡುವಾಗ ಹುಟ್ಟು[ಸೌಟು] ಮುರಿದರೆ, ಯುದ್ಧ ಮಾಡುವಾಗ ಕತ್ತಿ ಮುರಿದರೆ, ಅದು ಸೋಲೂ ಅಲ್ಲ. ಗೆಲುವೂ ಅಲ್ಲ. ಅದಕ್ಕಾಗಿ ಸಲಕರಣೆಗಳು ಅಂದರೆ ಸಾಹಿತ್ಯವು ಸರಿಯಾಗಿ ಇರಲೇಬೇಕಾದುದು ಅಗತ್ಯವಾಗಿದೆ. ಅದಕ್ಕಾಗಿ ಕೃತಿ ರಚನೆ ಮಾಡುವಾಗ ಅಸಾಂಭವ್ಯವೂ, ಅಸಮರ್ಥತೆಯೂ, ಅತ್ಯಧೀಕತೆಯೂ, ಅನವಶ್ಯಕತೆಯೂ ಆಗದೆ, ಅದು ಅನಿವಾರ್ಯವೇ ಆಗಿರಬೇಕು. ಸರಳತೆ, ಸಂಕ್ಷಿಪ್ತತೆ, ನಿರ್ಲಿಪ್ತತೆ ಹಾಗೂ ಉಪಯುಕ್ತತೆಗಳನ್ನು ಮುಂದಿಟ್ಟುಕೊಂಡು ದೀರ್ಘವಾಗಿ ಆಲೋಚಿಸಿ, ನಿರುಪಯೋಗಾಂಶವನ್ನು ದುರುಪಯೋಗಾಂಶವನ್ನೂ ಅಲ್ಲಿ ತೋರಗೊಡದೆ ಕೃತಿ ರಚನೆ ಮಾಡಬೇಕು.

ಈ ದೃಷ್ಟಿಯಲ್ಲಿ ಸಾಹಿತ್ಯವು ಸಮಾಜದ ಸಮರಕ್ಕೆ ಕಾರಣವಾಗದೆ ಅದು ಸ್ವತಂತ್ರವೂ, ನಿಸರ್ಗದತ್ತವೂ, ಸತ್ಯಕ್ಕೆ ಸಮೀಪವೂ, ಸತ್ವ ಸಂಪೂರ್ಣವೂ ಆಗಿ ವಾಚಕರ ಮನಸ್ಸಿಗೆ ಹೊಸ ಜೀವ ಕಳೆಯನ್ನು ಪೂರೈಸಲು ತಕ್ಕುದಾಗಿರಬೇಕು.

***

ನಾನು ಯಾರು?

ದಾರಿಯಲ್ಲಿ ಬರುವಾಗ ಒಬ್ಬ ಹೆಣ್ಣು ಮಗಳನ್ನು ನೋಡಿ, ‘ಓ ತಂಗೀ… ನೀನು ಯಾರು’ ಎಂದು ಕೇಳುತ್ತೇವೆ. ಅದಕ್ಕೆ ಉತ್ತರವಾಗಿ ಅವಳು – ‘ಇಂಥ ಊರಿನಲ್ಲಿ ಇಂಥ ಹೆಸರಿನ ಒಬ್ಬ ಯಜಮಾನಿತಿ ಇದ್ದಾಳೆ. ಅವಳ ಬಗ್ಗೆ ತಮಗೆ ಗೊತ್ತೇ?’ ಎಂದು ಕೇಳಿದಾಗ ಹೌದು ಅನ್ನುತ್ತೇವೆ. ಯಾಕಂದರೆ ದೊಡ್ಡ ದೊಡ್ಡ ಊರುಗಳ ವ್ಯಕ್ತಿಗಳ, ಶಕ್ತಿಗಳ ಪರಿಚಯ ಸರ್ವೇ ಸಾಮಾನ್ಯ ಇದ್ದೇ ಇರುತ್ತದೆ. ಈಕೆ ಅವಳ ಮಗಳೋ, ಸೊಸೆಯೂ, ಮೊಮ್ಮಗಳೋ ಆಗಿರುತ್ತಾಳೆ. ಇದರಿಂದ ಆ ಹೆಣ್ಣುಮಗಳ ಪರಿಚಯ ನಮಗೆ ಬಹು ಮಟ್ಟಿಗೆ ಆಗದಿದ್ದರೂ ತುಸು ಮಟ್ಟಿಗಾದರೂ ಆಗಿರುತ್ತದೆ.

ಇದರಂತೆ ಸ್ವಾಮಿ ವಿವೇಕಾನಂದರನ್ನು ಪರಿಚಯಿಸುವಾಗ ರಾಮಕೃಷ್ಣ ಪರಮಹಂಸರನ್ನೂ, ರಾಮನನ್ನು ಪರಿಚಯಿಸುವಾಗ ದಶರಥನನ್ನೂ, ಪರಶುರಾಮನನ್ನು ಪರಿಚಯಿಸುವಾಗ ಜಮದಗ್ನಿಯನ್ನೂ ಆಧಾರ ಇಟ್ಟು ಪ್ರಯೋಗಿಸುತ್ತೇವೆ. ಈಗಲೂ ನಾವು ನಮ್ಮ ಹೆಸರಿನ ಮುಂದೆ ಅಪ್ಪನ ಹೆಸರನ್ನು ಸೇರಿಸುತ್ತೇವೆ. ಅಪ್ಪನ ಹೆಸರು ಹೇಳಿದರೇ ನಾನು ಯಾರು ಎಂದು ಗೊತ್ತಾಗುವುದು. ಅದರ ಮೂಲಕ ನಾನು ಯಾರು, ಯಾರ ಮಗ, ಮಗಳು ಎಂದು ಹೇಳಲು ಯತ್ನಿಸುತ್ತೇವೆ. ಅದು ಸ್ಪಷ್ಟವಾದಾಗಲೇ ‘ನಾನು ಯಾರು’ ಎಂಬುದರ ಅರ್ಥವೂ ಹೊಳೆಯುತ್ತದೆ.

ಅಜ್ಜ ಅಂದರೆ ಯಾರು?

ಹಿಂದೂ ಪೌರಾಣಿಕ ಪಕ್ಷಿ ನೋಟದಲ್ಲಿ ಈ ವಿಶ್ವವು ಒಂದು ಬ್ರಹ್ಮಾಂಡವಾಗಿದೆ. ಅಂದರೆ ಆ ಬ್ರಹ್ಮನೇ ಇದೆಲ್ಲವನ್ನೂ ಹುಟ್ಟಿಸಿದನೆಂದೂ ಆದರೆ ತಾನು ಮಾತ್ರ ಹುಟ್ಟು ಇಲ್ಲದವನೆಂದೂ ಕಾಣುವುದು. ಅದನ್ನೇ ಎಲ್ಲರೂ ಹೇಳುತ್ತಾರೆ. ಅವನು ಹುಟ್ಟಲಿಲ್ಲದ್ದಕ್ಕಾಗಿಯೇ ಅವನಿಗೆ ಅಜ್ಜ ಎಂಬ ಹೆಸರು ಬಂದಿದೆ. ದೊಡ್ಡದಾದ ಬಿಳೀ ಗಡ್ಡದ ಅಜ್ಜನ ರೂಪದಲ್ಲಿಯೇ ನಮಗೆ ಅವನು ಕಾಣುತ್ತಾನೆ. ‘ಅ’ ಅಂದರೆ ಇಲ್ಲ. ‘ಜ’ ಅಂದರೆ ಜನನ. ಜನನವು ಯಾವನಿಗೆ ಇಲ್ಲವೋ ಅವನೇ ಅಜ. ಈ ಅಜ ಎಂಬ ಶಬ್ದವೇ ನಮ್ಮೆಲ್ಲರ ಬಾಯಲ್ಲಿ ಅಜ್ಜ ಆಗಿದೆ. ನಮ್ಮೆಲ್ಲರ ಅಜ್ಜ ಅಂದರೆ ಬ್ರಹ್ಮ. ವಿಶ್ವದ ಹಿರಿಯನೇ ಬ್ರಹ್ಮ. ಹಾಗೆಯೇ ಮನೆತನದ ಹಿರಿಯನಿಗೂ ನಾವು ಅಜ್ಜ ಎಂದು ಕರೆಯುತ್ತೇವೆ. ಆದರೆ ನಮ್ಮ ಅಜ್ಜ, ಬ್ರಹ್ಮ ಆಗಲಾರ. ನಾವು ಅಜ್ಜ ಅನ್ನಿಸಿಕೊಳ್ಳಬೇಕಾದರೆ ಮಗ ಅನ್ನುವನು ಹುಟ್ಟಬೇಕು. ಅವನಿಗೆ ಸಂತಾನ ಹುಟ್ಟಬೇಕು. ಈ ಕ್ರಿಯೆಗೆ ಕಾರಣ ಯಾರು? ಯಾರೆಂದರೆ ಇದರೆ ನಡುವೆ ಅಮ್ಮ ಇಲ್ಲದೆ ಏನೂ ಆಗಲಾರದು. ಅಮ್ಮ ಇದ್ದಾಗಲೇ ಮಗ ಹುಟ್ಟುವುದು. ಮೊಮ್ಮಗನಿಗೂ ಅಮ್ಮ ಇದ್ದರಷ್ಟೇ ಆತ ಭೂಮಿಗೆ ಬರುವುದು. ಹಾಗಾದರೆ ಈ ಅಮ್ಮ ಯಾರು?

ಅಮ್ಮ ಅಂದರೆ ಯಾರು?

ಮೇಲೆ ಹೇಳಿದ ಹಾಗೆ ‘ಅ’ ಅಂದರೆ ಇಲ್ಲ. ‘ಮ’ ಅಂದರೆ ಮರಣ. ಸರಳಾರ್ಥದಲ್ಲಿ ಯಾವಾಕಿಗೆ ಮರಣ ಎಂಬುದು ಇಲ್ಲವೋ ಆಕೆಯೇ ಅಮ. ಬ್ರಹ್ಮ ಮಾತ್ರ ಅಯೋನಿಜ. ಆದರೆ ಸಂಸಾರದ ಅಜ್ಜ ಯೋನಿಜ. ಅವನ ಮಗ, ಮೊಮ್ಮಗ ಹಾಗಿಲ್ಲ. ಅಪ್ಪ ಮತ್ತು ಅಮ್ಮರ ಸಹಕಾರೀ ತತ್ವದಲ್ಲಿ ಹುಟ್ಟಿದವನೇ ಮಗ. ಅಥವಾ ಮೊಮ್ಮಗ. ಜೀವಕ್ಕೆ ಸಾವಿದ್ದರೂ ಪದನಾಮಕ್ಕೆ ಸಾವಿಲ್ಲ. ಹಾಗಾಗಿ ‘ಅಮ’ ಅನ್ನುವುದೇ ಅಮ್ಮನಾಗಿ ಪ್ರಪಂಚದಲ್ಲಿ ಎಲ್ಲರ ಬಾಯಲ್ಲಿದೆ.

ಅಪ್ಪ ಅಂದರೆ ಯಾರು?

ಅಪ್ಪ ಅಂದರೆ ನೀರು. ಪಂಚಭೂತಗಳನ್ನು ವರ್ಣಿಸುವಾಗ ಪೃಥ್ವಿ, ಅಫ್‌, ತೇಜ, ವಾಯು, ಆಕಾಶಗಳೆಮದು ಕರೆಯುತ್ತೇವೆ. ಅಫ್‌ ಅನ್ನುವಾಗ ನೀರು ಎಂದು ಒಮ್ಮೊಮ್ಮೆ ಹೇಳುವದಿಲ್ಲ. ಈ ನೀರು ನಿಜವಾಗಲೂ ಜಗತ್ತಿನ ಜನಕವಾಗಿದೆ. ತಂದೆಯಾಗಿದೆ. ಹೇಗಂದರೆ- [ಮುಂದಿನ ವಾರ]

#ಪಸತಕ #ಸಹತಯ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW