ಕನ್ನಡದಲ್ಲಿ ಹೊಸ ಅಲೆಯ ಚಿತ್ರಗಳ ‘ಮೂಲಪುರುಷ’ ನಾದ ‘ನಾಂದಿ’ ಚಿತ್ರ, ಕಿವುಡು-ಮೂಗ ಮಗುವನ್ನು ಹೆತ್ತ ಆದರ್ಶ ಶಿಕ್ಷಕನ ಕತೆಯಿದು. ಈ ಕುರಿತು ಲೇಖಕರಾದ ರಾಘವನ್ ಚಕ್ರವರ್ತಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
೧೯೬೪ ರಲ್ಲಿ ಬಿಡುಗಡೆಯಾದ ಎನ್.ಲಕ್ಷ್ಮೀನಾರಾಯಣ್ (ಎನ್ನೆಲ್) ನಿರ್ದೇಶಿಸಿದ ’ನಾಂದಿ’ ಚಿತ್ರದ ಒಂದು ದೃಶ್ಯ. ಅಣ್ಣಾವ್ರು, ಕಲ್ಪನ, ಹರಿಣಿಯವರ ಹೃದಯಸ್ಪರ್ಶಿ ಅಭಿನಯದ ‘ನಾಂದಿ’, ಕಿವುಡ-ಮೂಗ ವ್ಯಕ್ತಿಗಳ ಕುರಿತಾದ ಚಿತ್ರ.
ಆದರ್ಶ ಶಿಕ್ಷಕ ಮೂರ್ತಿ ಸುಖ ಸಂಸಾರಿ. ಕಿವುಡು-ಮೂಗು ಮಗುವನ್ನು ಹೆತ್ತ ಮೂರ್ತಿಯ ಪತ್ನಿ (ಕಲ್ಪನ) ತೀರಿಕೊಳ್ಳುತ್ತಾಳೆ. ಮೂರ್ತಿ ಸಂಸಾರ ನಿರ್ವಹಿಸಲು ಕಿವುಡು-ಮೂಗಿಯಾದ (ಹರಿಣಿ) ಹೆಣ್ಣುಮಗಳನ್ನು ಎರಡನೇ ಮದುವೆಯಾಗುತ್ತಾನೆ. ಮಗು ಬೆಳೆಯಲಾರಂಭಿಸುತ್ತದೆ. ಆಕೆ ಮತ್ತು ಮಗುವಿಗೆ ಕಿವುಡು-ಮೂಕ ಶಿಕ್ಷಣ ನಿಪುಣರಿಂದ ಮಾತು ಕಲಿಸುವ ಎಲ್ಲಾ ಪ್ರಯತ್ನಗಳನ್ನು ಮೂರ್ತಿ ಮಾಡುತ್ತಾನೆ. ಆದರೆ ಮಗು ದುರ್ಘಟನೆಯೊಂದರಲ್ಲಿ ಸಾಯುತ್ತದೆ. ಆ ಸಂದರ್ಭದಲ್ಲಿ ಮಗು ಕಿರುಚಿಕೊಂಡರೂ ಕಿವುಡಿಯಾದ ತಾಯಿಯ ಗಮನಕ್ಕೆ ಬರುವುದೇ ಇಲ್ಲ. ಮೂರ್ತಿ ಹಾಗವನ ಪತ್ನಿ ತಮ್ಮ ಅಸಹಾಯಕತೆಗೆ ತೀವ್ರ ನೊಂದುಕೊಳ್ಳುತ್ತಾರೆ. ಕಾಲ ಅವರ ಸಂಸಾರದಲ್ಲಿ ಸಮಾಧಾನ ತರುತ್ತದೆ. ಬದುಕು ಸಾಗಲಾರಂಭಿಸುತ್ತದೆ. ಆಕೆಯ ಸಮಸ್ಯೆಯಿಂದ ಸಂಸಾರಕ್ಕೆ ಅಡ್ಡಿ ಬಾರುವುದಿಲ್ಲ. ಕಾಲಾಂತರದಲ್ಲಿ ಆಕೆಗೆ ಮತ್ತೊಂದು ಮಗುವಾಗುತ್ತದೆ. ಆ ಮಗುವಿಗೆ ಯಾವುದೇ ವೈಕಲ್ಯಗಳಿರುವುದಿಲ್ಲ. ಆ ಮಗು ಮುಂದೆ ತಾಯಿಯ ’ಧ್ವನಿ’ಯಾಗುತ್ತದೆ. ಇದಿಷ್ಟು ’ನಾಂದಿ’ಯ ಸಂಕ್ಷಿಪ್ತ ಕಥೆ.
ಮೇಷ್ಟ್ರು ಪಾಠಮಾಡುವಾಗ ಕಣ್ಣು-ಬಿಟ್ಟುಕೊಂಡು ನೋಡುವ ಮುಗ್ಧಮಕ್ಕಳು, ಮೇಷ್ಟ್ರ ಸೈಕಲ್ ನ ಗಾಳಿ ತೆಗೆದು ಸದ್ದಿಲ್ಲದೇ ಓಡಿಬಿಡುವ ತುಂಟರು..ಕಿವುಡಿ-ಮೂಗಿಯಾದ ನಾಯಕಿ ವೀಣೆಯನ್ನು ಮೀಟಿ ಸಂತಸಗೊಳ್ಳುವುದು.ಪತ್ನಿ ಹೆರಿಗೆಕೋಣೆಯಲ್ಲಿದ್ದಾಗ ಶಾಲಾ ವಾರ್ಷಿಕೋತ್ಸವದಲ್ಲಿ ’ಗೋವಿನಹಾಡಿ’ನ ನಾಟಕವೊಂದನ್ನು ಮಕ್ಕಳಿಂದ ಆಡಿಸುವ ಮೂರ್ತಿ, ತಾಯಿ ಹಸು ಹುಲಿಗೆ ಆಹಾರವಾಗಿ ಹೋಗಬೇಕಾದ ಸಂದರ್ಭದಲ್ಲಿ ತನ್ನ ಮೊದಲ ಪತ್ನಿಯನ್ನು ನೆನೆದು ಭಾವುಕನಾಗುವುದು. ಹೀಗೆ ನೈಜವಾದ ಸಂವೇದನಾಶೀಲವಾದ ಸನ್ನಿವೇಶಗಳು ಸ್ಮರಣೀಯವಾಗಿವೆ. ನಾಂದಿ ಒಂದು ’ಕ್ಲಾಸಿಕ್’ ಆಗಿದ್ದು ಇಂತಹ ನೈಜ ನಿರೂಪಣೆಯಿಂದ.

ಅಚ್ಚರಿ ಎನಿಸುವ ವಿಚಾರವೆಂದರೆ, ಇದು ಎನ್ನೆಲ್ ರ ಮೊದಲ ಚಿತ್ರ. (ಇದಕ್ಕೆ ಮೊದಲು ಅವರು ’ಬ್ಲಿಸ್’ ಎಂಬ ಇಂಗ್ಲೀಷ್ ಕಿರುಚಿತ್ರವೊಂದನ್ನೂ ನಿರ್ದೇಶಿಸಿದ್ದರು). ವಿಪರೀತ ಭಾವೋದ್ವೇಗಕ್ಕೆ ಅವಕಾಶವಿರುವ ಕಥೆಯನ್ನು, ತುಂಬಾ ವಿವೇಕದಿಂದ ಚಿತ್ರಿಸಿರುವ ಎನ್ನೆಲ್ ಬಗ್ಗೆ ಮೆಚ್ಚುಗೆ ಮೂಡುತ್ತದೆ. ಸರಳತೆ, ಸಹಜಾಭಿನಯದ ’ನಾಂದಿ’, ಪ್ರಯೋಗಾತ್ಮಕ ಚಿತ್ರಗಳಿಗೆ ನಾಂದಿ ಹಾಡಿತು. ಇದು ಕನ್ನಡದ ಮೊದಲ ಪ್ರಯೋಗಾತ್ಮಕ ಚಿತ್ರ. ಅರವತ್ತರ ದಶಕದಲ್ಲಿಯೇ ಇಂತಹ ಒಂದು ಚಿತ್ರ ಬಂದಿದ್ದು ಕನ್ನಡಿಗರ ಹೆಮ್ಮೆ.
ಹರಿಣಿ (ಚಿತ್ರ ನಿರ್ಮಾಪಕರಾದ ಜವಹರ್-ವಾದಿರಾಜ್ ರ ಸೋದರಿ) ಅಭಿನಯ ಕೆಲೆವೆಡೆ ಕೃತಕವೆನಿಸಿದರೂ ಮನಸಲ್ಲುಳಿಯುತ್ತದೆ. ಅಣ್ಣಾವ್ರ ಅಭಿನಯ ಕಣ್ಣಿಗೆ ಕಟ್ಟುತ್ತದೆ. ’ಹಾಡೊಂದ ಹಾಡುವೆ’ ಹಾಡಿನ ಸನ್ನಿವೇಶ ಮರೆಯಲಾಗುವುದಿಲ್ಲ. ಜಯಗೋಪಾಲ್ ರಚಿಸಿದ ಮುಪ್ಪೇ ಬಾರದ ’ನಾಂದಿ’ಯ ಗೀತೆಗಳಿಗೆ ಸ್ವರ ಸಂಯೋಜನೆ ವಿಜಯಭಾಸ್ಕರ್ ರವರದು.

ಸಂಪೂರ್ಣವಾಗಿ ಪ್ರಯೋಗಾತ್ಮಕವಾಗಿ ಮೂಡಿ ಬರಬೇಕೆಂಬ ಹಂಬಲವಿದ್ದದ್ದರಿಂದ ಎನ್ನೆಲ್, ಈ ಚಿತ್ರಕ್ಕೆ ಹಾಡುಗಳೇ ಬೇಡ ಎಂಬ ಹಠದಲ್ಲಿದ್ದರು. ಆದರೆ ನಿರ್ಮಾಪಕ ವಾದಿರಾಜ್, ಕಥೆಗೆ ಪೂರಕವಾದ ಹಾಡುಗಳಿರಲೇಬೇಕೆಂದು ಪಟ್ಟು ಹಿಡಿದರು. ಎನ್ನೆಲ್ ಕೊನೆಗೂ ಒಪ್ಪಿದರು. ಕನ್ನಡದ ಸದಾಹಸಿರಾದ ಗೀತೆಗಳು ’ನಾಂದಿ’ಯಿಂದ ದೊರಕಿದವು.
ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರಕಬೇಕಿತ್ತು. ಅದಿರಲಿ…ಆ ದಿನಗಳಲ್ಲೂ ಚೆನ್ನಾಗಿ ಸ್ವೀಕೃತವಾಗಿದ್ದ ’ನಾಂದಿ’ಚಿತ್ರವನ್ನು ’ಕೆಂಪೇಗೌಡ’ ಚಿತ್ರಮಂದಿರದಿಂದ ಎತ್ತಂಗಡಿ ಮಾಡಲಾಗಿತ್ತು. ಎನ್ನೆಲ್ ಸಂದರ್ಶನವೊಂದರಲ್ಲಿ ನೊಂದು ನುಡಿದಿದ್ದರು.
೧೯೭೨ ರಲ್ಲಿ ಗುಲ್ಜ಼ಾರ್ ಸಾಹೇಬರು ನಿರ್ದೇಶಿಸಿದ ’ಕೋಶಿಶ್’ ಗೆ ’ನಾಂದಿ’ ಸ್ಪೂರ್ತಿಯಾದದ್ದು ಇತಿಹಾಸ. ’ಕೋಶಿಶ್’ ಅನ್ನು ಹಿರಿಯ ನಿರ್ದೇಶಕ ಟಿ.ಎನ್.ಬಾಲು ತಮಿಳಿಗೆ ’ರೂಪಾಂತರಿ’ಸಿದರು. ’ಉಯರಂದವರ್ಗಳ್’ ಹೆಸರಿನ ಈ ಚಿತ್ರದಲ್ಲಿ ಕಮಲ್-ಸುಜಾತ ಅಭಿನಯಿಸಿದ್ದರು. ಕನ್ನಡ ರಾಜ್ಯೊತ್ಸವದ ಶುಭ ಸಂದರ್ಭದಲ್ಲಿ, ಸಾಮಾಜಿಕ ಕಾಳಜಿಯನ್ನು ಹೊಂದಿದ, ಜೀವಪರ ’ನಾಂದಿ’ ಚಿತ್ರವನ್ನು ಕನ್ನಡಿಗರಿಗೆ ನೀಡಿದ ಅಣ್ಣಾವ್ರು-ಎನ್ನೆಲ್ ಆದಿಯಾಗಿ ಚಿತ್ರತಂಡವನ್ನು ನೆನೆಯುವುದು ಅಭಿಮಾನದ ಸಂಗತಿ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು…
- ರಾಘವನ್ ಚಕ್ರವರ್ತಿ
