ಡಾ. ನಾಗರತ್ನ ಜಿ. ರಾವ್ ಅವರ ‘ನನ್ನ ಪೇಶಂಟ್ಸ್ ಹಾಗೂ ಇತರ ಪ್ರಸಂಗಗಳು’ ಇದೊಂದು ಹಾಸ್ಯ ಪ್ರಸಂಗಗಳ ಸಂಕಲನವಾಗಿದ್ದು, ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ನನ್ನ ಪೇಶಂಟ್ಸ್ ಹಾಗೂ ಇತರ ಪ್ರಸಂಗಗಳು(ಹಾಸ್ಯ ಪ್ರಸಂಗಗಳ ಸಂಕಲನ)
ಲೇಖಕರು: ಡಾ. ನಾಗರತ್ನ ಜಿ. ರಾವ್.
ಪ್ರಕಾಶನ : ಶ್ರೀನಿವಾಸ ಪುಸ್ತಕ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨೦೨೩.
ಪುಟಗಳು: ೧೦೪.
ಬೆಲೆ: ರೂ. ೧೧೦.
ವೃತ್ತಿಯಲ್ಲಿ ವೈದ್ಯರಾದ ಡಾ. ನಾಗರತ್ನ ಜಿ. ರಾವ್ ಅವರು ತಮ್ಮೊಳಗಿನ ಬರಹಗಾರ್ತಿಯನ್ನು ಇಲ್ಲಿನ ಹಾಸ್ಯ ಬರಹಗಳ ಮೂಲಕ ಪರಿಚಯಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ದಿನವೂ ಕಾಣುವ ಹಲವು ಬಗೆಯ ಸ್ವಭಾವಗಳ ಪೇಶಂಟ್ಸ್ ಗಳ ಕುರಿತು ಸರಳವಾದ ನಗೆ ಬರವಣಿಗೆಯ ನಾನಾ ಪ್ರಸಂಗಗಳನ್ನು ಲೇಖನವನ್ನಾಗಿಸಿ ಓದುಗರಮುಂದಿಟ್ಟಿದ್ದಾರೆ.
ಔಷಧ ಬರೆದು ಕೊಟ್ಟು ಫೀಜು ಕೇಳಿದ ಡಾಕ್ಟರಿಗೆ, ಮಜಭೂತಾದ ಕಲ್ಲಂಗಡಿ ಹಣ್ಣನ್ನು ಮೇಜಿನ ಮೇಲಿಟ್ಟು, ಕೆಜಿಗೆ ೨೫ ರಂತೆ,ಐದು ಕೆ.ಜಿ ಗಿಂತ ಜಾಸ್ತಿ ಇರುವ ಹಣ್ಣನ್ನು ತೆಗೆದುಕೊಂಡು, ಉಳಿದ ಚಿಲ್ಲರೆ ಕೊಡಿ.. ಎಂದು ಚೌಕಾಸಿ ಮಾಡುವ ರೋಗಿ.
ತನಗೆ ಕಾಲು ನೋವೆಂದು ‘ಚಪ್ಪಲಿ’ ಕೈಯಲ್ಲಿ ಹಿಡಿದು ಬಂದ ರೋಗಿಯೊಬ್ಬನನ್ನು ಕಂಡು ತಾವು ಗಾಬರಿಯಾದೆ. ಎನ್ನುವ ಡಾಕ್ಟರು. ಪಾತ್ರೆ ತೊಳೆಯುವಾಗ ಬೆರಳು ಕೊಯ್ದು ಕೊಂಡ ರಾಜವ್ವ ಅಮೃತಾಂಜನ ಹಚ್ಚಿ, ಸುಣ್ಣದ ನೀರಲ್ಲಿ ಕೈ ಅದ್ದಿ ಉರಿ ಎಂದು ಬಂದಾಗ ಸ್ವಯಂವೈದ್ಯ ಹೀಗೆ ರಣ ವೈದ್ಯವಾಗಿದ್ದಕ್ಕೆ ಮರುಕವಾಗಿದ್ದು, ‘ಕಾಲಿನ ಕಜ್ಜಿ ತುಂಬಾ ಕಡಿಯುತ್ತೆ. ಉಗುರಲ್ಲಿಯೇ ಕೆರೆದು ಕೊಂಡ್ರೆ ನಿಮ್ಮ ಆಯಿಂಟ್ಮೆಂಟಿಗಿಂತ ಹಾಯಾಗಿರುತ್ತೆ ಎಂದ ಸೀತೆಗೆ, ಬಾಚಣಿಕೆ ಉಪಯೋಗ್ಸಿ. ಇನ್ನೂ ಹಿತವಾಗಿರುತ್ತೆ ಎಂದು ಸಲಹೆ ಕೊಡುವ ಮತ್ತೊಬ್ಬಳು. ಟೂತ್ ಬ್ರೆಶ್ ಕೂಡಾ ಅಷ್ಟೇ ಖುಶಿ ಕೊಡುತ್ತೆ..ಎನ್ನುವ ನೇತ್ರಾ ಜೊತೆ ‘ಫೀಸು’ ಕೂಡಾ ಕೊಡದೇ ಮೂರೂ ಜನ ಮಾತಾಡಿ ಕೊಂಡು ಎದ್ದಾಗ ಡಾಕ್ಟರಿಗೆ ತನ್ನ ಬಗ್ಗೆಯೇ ‘ಪಾಪ’ ಎನಿಸಿತ್ತಂತೆ.

ಒಮ್ಮೆಇವರ ಖಾಸಾ ಗಿರಾಕಿ ಹಳ್ಳಿಯ ಹೆಂಗಸು ಕೆಂಪಮ್ಮ ಸುಸ್ತೆಂದು ಬಂದಿದ್ದಳು. ಕಾರಣ ಅವರ ಗೌಡಜ್ಜ ತೀರಿ ಕೊಂಡಾಗ ದಂಡವಾಗ ಬಾರದೆಂದು ಆತ ತೆಗೆದು ಕೊಳ್ಳುತ್ತಿದ್ದ ಮಾತ್ರೆಗಳನ್ನು ತಾನೇ ತೆಗೆದು ಕೊಂಡಿದ್ದೇನೆ ಎಂದಾಗ ಡಾಕ್ಟರಿಗೆ ಅಳ ಬೇಕೋ ನಗ ಬೇಕೋ ತಿಳಿಯದೇ ಪೆಚ್ಚಾಗಿತ್ತಂತೆ.
೨೯ ವರ್ಷದದವನಿಗೆ ‘ಮಗು’ ಎಂದು ಅರ್ಧಮಾತ್ರೆ ಕೊಟ್ಟು, ‘ಸ್ವಲ್ಪವೂ ಗುಣವಾಗಿಲ್ಲ’ ಎನ್ನುತ್ತಾ ಬಂದಿದ್ದಳಂತೆ, ವರಮಹಾಲಕ್ಷ್ಮಿ ಹಬ್ಬಕ್ಕೆ ಮುಟ್ಟುಮುಂದೆ ಹೋಗುವ ಮಾತ್ರೆ ತೆಗೆದುಕೊಂಡು ತೊಂದರೆ ಅನುಭವಿಸುವ ಹೆಂಗಸನ್ನು ಕುರಿತು ‘ದೇಹ ಹೆಚ್ಚೋ?… ಧಾರ್ಮಿಕ ಆಚರಣೆ ಹೆಚ್ಚೋ?…ಎಂಬ ಅವರ ಪ್ರಶ್ನೆಯಲ್ಲಿ ಒಂದು ಚಿಂತನೆಯೂ ಗೋಚರಿಸುತ್ತದೆ.
ಇಂತಹ ನೂರಾರು ಕೇಸುಗಳನ್ನು ನೋಡುವಾಗ ವಿದ್ಯಾವಂತರೂ ಕೂಡ ಕೆಲವೊಮ್ಮೆ ವೈದ್ಯರಲ್ಲಿ ನಂಬಿಕೆ ಇಡದೇ ಬುದ್ಧಿ ಇಲ್ಲದಂತೆ ಆಡುವಾಗ ಸಮಾಜ ಸುಧಾರಣೆ ಕಷ್ಟ ಎನ್ನುತ್ತಾರೆ. ಹೆತ್ತವರ ಬೆವರು ಹೀರಿ ಬೆಳೆದ ಮಕ್ಕಳೇ ಕೆಲವೊಮ್ಮೆ ಅವರಿಗೆ ನಿರಾಯಾಸ ವಾಗಿ ಸಾಯಲೂ ಅನುವು ಮಾಡಿಕೊಡದ ಬಗ್ಗೆ ವಿಷಾದ ವ್ಯಕ್ತ ಪಡಿಸಿದ್ದಾರೆ.
‘ಕುಳ್ಳು ಡಾಕ್ಟರ್’ ಎಂದು ರೋಗಿಯೊಬ್ಬರು ತನ್ನನ್ನು ಕರೆದದ್ದನ್ನು ಹೇಳುತ್ತಾ ತಮ್ಮನ್ನೇ ತಾವು ಗೇಲಿ ಮಾಡಿಕೊಂಡು ನಗಿಸಿದ್ದಾರೆ. ಹಾಗೇ ತಮಗೆ ಕಣ್ಣಿನ ಅಪರೇಷನ್ ಆದ ಸಮಯದಲ್ಲಿಯೇ ತಮ್ಮ ತಂದೆ ತೀರಿಕೊಂಡು ಅಳಲೂ ಆಗದ ಸಂದರ್ಭದಲ್ಲಿ ಮೊಮ್ಮಗು ವಿನ ಮುಗ್ಧ ನಗುವಿನಲ್ಲಿ ನೋವಿನ ಕ್ಷಣವನ್ನು ಮರೆಸಿದ್ದನ್ನು ನೆನಪಿಸಿ ಕೊಂಡಿದ್ದಾರೆ.
ಜನರನ್ನು ಸಂಕಷ್ಟಕ್ಕೆ ಈಡು ಮಾಡುವ ಹಲವು ಹತ್ತು ಸಂಪ್ರದಾಯಗಳು ನಮಗೆ ಬೇಕೆ? ಎನ್ನುತ್ತಾ ಗರ್ಭಿಣಿಯೊಬ್ಬಳ ಸಂಕಷ್ಟವನ್ನು ವಿವರಿಸಿದ್ದಾರೆ.ಮಕ್ಕಳಲ್ಲಿ ಕಾಣುವ ಕೆಲವು ಚಟಗಳ ಬಗ್ಗೆ ಅಮೃತಾಂಜನ ರೆಪ್ಪೆ ಮೇಲೆ ಹಚ್ಚಿ ನಿದ್ರೆ ಮಾಡುವುದು, ಪೇಪರ್ ಹರಿದು ಚೂಪು ಮಾಡಿ ಮೂಗಲ್ಲಿ ಹಾಕಿ ಶೀನೋ ಚಟ, ಪೆವಿಕಾಲ್ ಕರ್ಚೀಪ್ ತುದಿಗೆ ಹಾಕಿ ಸುಟ್ಟು, ವಾಸನೆ ನೋಡುವುದು ಇಂತಹವುಗಳನ್ನು ಉದಾಹರಿಸಿ, ಅದರ ನಿವಾರಣೆ ಬಗ್ಗೆಯೂ ಪೋಷಕರನ್ನು ಎಚ್ಚರಿಸಿದ್ದಾರೆ.

‘ಬಿಡಿಸದ ಪದರಂಗ ಈ ಜೀವನ’ ಎನ್ನುವ ಎಂತೆಂಥಾ ಮುಗ್ಧ ಪೇಶಂಟ್ಸ್ ಬಂದರೂ, ಅವರೇನೇ ಅದ್ವಾನ ಮಾಡಿದ್ದರೂ ಇವರೆಲ್ಲಾ ನನ್ನವರು ಎಂಬ ಆಪ್ತಭಾವ- ಮಾನವೀಯತೆ ತೋರುವ ಡಾಕ್ಟರ ಕಳಕಳಿಯೂ ಇಲ್ಲಿ ಮೆಚ್ಚುಗೆಯಾಗುತ್ತದೆ.
‘ವಯಸ್ಸಾಯಿತೆಂದು ಹೇಳಿ ಕೊಳ್ಳಲು ಕೀಳರಿಮೆ ಏಕೆ? ನಮ್ಮ ವ್ಯಕ್ತಿತ್ವವೇ ಉಡುಗೆ -ತೊಡುಗೆಯಾಗಲಿ. ಎನ್ನುವ ಗಂಭೀರ ಬುದ್ಧಿಮಾತೂ ಇಲ್ಲಿದೆ. ಇನ್ನು ಬಾಲ್ಯ- ಹಬ್ಬ -ಅಡುಗೆ, ಮೋಬೈಲ್, ಉದ್ಯೋಗದ ಮೊದಲ ದಿನ ಇತ್ಯಾದಿಗಳ ಒಂದಷ್ಟು ಬರಹಗಳಿವೆ. ನೀವೂ ಪುಸ್ತಕವನ್ನು ಓದಿ ಆನಂದಿಸಿ.
- ಮಾಲತಿ ರಾಮಕೃಷ್ಣ ಭಟ್
