ನರ್ಮದಾ ನದಿ ನೋಡುವ ಹಂಬಲವಿದ್ದರಿಂದ.. ಹೈವೇಯಿಂದ ಕೇವಲ 4 ಕಿ.ಮೀ ಎಡಕ್ಕೆ ನುಗ್ಗಿದಾಗ “ಕೀರಪಾನಿ” ಎಂಬ ಹಳ್ಳಿಗೆ ಹೋದೆ, ಮುಂದೇನಾಯಿತು ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾ ಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…
ಚಳಿಯ ಪ್ರಭಾವ ತೀರಾ ಇದ್ದರೂ. ನನ್ನ ಯಥಾವತ್ತು ಪ್ರಯಾಣ ಮುಂದುವರಿಸಿದೆ. ಪ್ರತಿ ದಿನವೂ ಊರಿಂದ ಊರಿಗೆ ನೈಜ ಭಾರತ ದರ್ಶನ ಮಾಡುತ್ತಾ “ರಮ್ತಾ ಜೋಗಿ ” ತರಹ ನಡೆಯುತ್ತಿರುವೆ, ಉದ್ದೇಶ ಸಂಪೂರ್ಣ ನರ್ಮದಾ ನದಿಯ ಪ್ರದಕ್ಷಿಣೆ.
ರಾಷ್ಟ್ರೀಯ ಹೆದ್ದಾರಿ 12 ರಲ್ಲಿ ನಂದಿ ಓಡತೊಡಗಿದ. ಬೆಳಿಗ್ಗೆ 7 ಕ್ಕೆ ಆರಂಭವಾದ ಪ್ರಯಾಣ ಎಲ್ಲೂ ನಿಲ್ಲದೆ ಮುಂದೆ ಮುಂದೆ ಹೋಗುತ್ತಿದ್ದೆ, ಸಮಯ 10 ಕ್ಕೆ 25 ಕಿ. ಮೀ ದೂರಕ್ಕೆ ಓಡುತ್ತಿದ್ದೆ ಆವಾಗ ಹೈವೇ ಪಕ್ಕದ “ಗಜಾನನ ಹೋಟೆಲ್” ಮಾಲೀಕ ಕೂಗಿ ಬರುವಂತೆ ಕೈ ಮಾಡಿದ.
ನಂದಿಯನ್ನು ತಿರುಗಿಸಿ ಹೊಟೆಲ್ ಗೆ ಹೋಗಿ, ಏನು ಹೇಳಿ ಎಂದು ಕೇಳುವ ಮೊದಲೆ , ಪರಿಕ್ರಮದ ಬಗ್ಗೆ ವಿಚಾರಿಸಿ ‘ಟಿಫನ್ ಮಾಡಿ ಮುಂದುವರೆಯಿರಿ, ಇದು ನಮ್ಮ ಸೇವೆ” ಎಂದರು, ಅದರಂತೆ ಅವಲಕ್ಕಿ, ಚಹಾ, ಬಿಸ್ಕಿಟ್ ಕೊಟ್ಟು ಮುಂದುವರೆಯಲು ಅವಕಾಶ ಕೊಟ್ಟರು.
ಇಲ್ಲಿನವರಿಗೆ ತಾಯಿ ನರ್ಮದೆಯ ಮೇಲಿನ ನಂಬಿಕೆ ತೀವ್ರ. ಮಧ್ಯಾಹ್ನಕ್ಕೆ ಸೂರ್ಯ ನಿಗಿ ನಿಗಿ ಉರಿಯುತ್ತಿದ್ದರೂ… ತಂಪನೆಯ ಗಾಳಿ ಬೀಸುತ್ತಿತ್ತು ಏಕೆಂದರೆ ರಸ್ತೆಯ ಅಕ್ಕ ಪಕ್ಕ ಹಚ್ಚು ಹಸಿರಾದ ಹೊಲಗಳು. ಹುಲುಸಾಗಿ ಬೆಳೆದ ಬೆಳೆ ಕಾರಣ ನರ್ಮದಾ ನದಿಯ ನೀರು. ಇಲ್ಲಿಯ ರೈತ ಸಂತೋಷದಿಂದ ಬಾಳುತ್ತಿದ್ದಾನೆ ನೆಮ್ಮದಿಯೊಂದಿಗೆ.
ನರ್ಮದಾ ನದಿ ನೋಡುವ ಹಂಬಲವಿದ್ದರಿಂದ.. ಹೈವೇಯಿಂದ ಕೇವಲ 4 ಕಿ.ಮೀ ಎಡಕ್ಕೆ ನುಗ್ಗಿದಾಗ “ಕೀರಪಾನಿ” ಎಂಬ ಹಳ್ಳಿಗೆ ಹೋದೆ, ಅದು ನದಿಯ ದಂಡೆಗೆ ಅಂಟಿಕೊಂಡಿದೆ.
ತಾಯಿ ನರ್ಮದೆಯ ತಟಕ್ಕೆ ಹೋಗಿ ಬರುವಷ್ಟರಲ್ಲಿ, ದಂಡೆಯ ಮೇಲಿದ್ದ “ಧರ್ಮಶಾಲೆಯಲ್ಲಿ ಊಟ ನನಗಾಗಿ ಕಾಯುತ್ತಿತ್ತು. ಅನ್ನದ ಅಗುಳಿನ ಮೇಲೆ ತಿನ್ನುವವನ ಹೆಸರಿರುತ್ತೆ, ಅದು ಅವನಿಗೆ ಮೀಸಲು ಎಂಬ ಮಾತು ಬಹು ಸಮಯ ಸತ್ಯವಾಗಿದೆ.
ಅಲ್ಲಿಂದ ಹೊರಟು ಬೆಟ್ಟ, ಕಾಡು ಕೊರೆದು ನಿರ್ಮಿಸಿದ್ದ ರಸ್ತೆಯ ಮೇಲೆ ಓಡುತ್ತಾ, ಒಟ್ಟು ದೂರ 84 ಕಿ. ಮೀ ಕ್ರಮಿಸಿದಾಗ.. ಸೂರ್ಯ ಮನೆಕಡೆ ಹೆಜ್ಜೆ ಹಾಕತೊಡಗಿದ್ದ ಸಮಯ 5:20. ನನಗೆ ಸಿಕ್ಕಿದ್ದು “ಮೇರೆಗಾಂವ್” ಎಂಬ ಹಳ್ಳಿ., ಉಳಿದುಕೊಳ್ಳಲು ಯಾವುದೇ ಮಾರ್ಗ ಹೊಳೆಯಲಿಲ್ಲ.

“ರಾಜೇಶ್ ಢಾಬಾ” ಎಂಬುದು ರಸ್ತೆಯ ಪಕ್ಕವಿದೆ, ಕೊನೆಗೆ ಅವರಿಗೆ ಇಲ್ಲಿ ಉಳಿದುಕೊಳ್ಳಬಹುದೆ ಎಂದು ಕೇಳಿಕೊಂಡಾಗ.. ಅವರು ಖುಷಿಯಿಂದ ಒಪ್ಪಿಕೊಂಡು ಒಂದು ರೂಮು ಸಹ ಕೊಟ್ಟರು ಜೊತೆಗೆ ಊಟ. ಇದಕ್ಕೆಲ್ಲ ಕಾರಣೀಭೂತ ತಾಯಿ ನರ್ಮದೆ. ಇಂದಿನ ನನ್ನ ತಂಗುದಾಣ “ಮೇರೆಗಾಂವ್”ನ ಢಾಬಾ.
“ಮೇರೆಗಾಂವ್”ನ ಢಾಬಾದಲ್ಲಿ ಬೆಳಿಗ್ಗೆ ಚಹಾ ಕುಡಿದವನೆ, ನನ್ನ ಮುಂದಿನ ದಾರಿ ಸವೆಸತೊಡಗಿದೆ. NH 12 ಲ್ಲಿ ಮುಂದುವರೆದಿತ್ತು ಇಂದಿನ ಪಯಣ, ಮಾತೆ ನರ್ಮದಾ ನದಿಯಿಂದ ಕೇವಲ 2 ಕಿ.ಮೀ ಅಂತರದಲ್ಲಿ, ನದಿಯ ದಡವನ್ನೆ ಹಿಡಿದು ಹೋಗೋಣ ಎಂದರೆ, ಹೊಲಗಳು ಅಡ್ಡಿ. ಹೊಲಗಳ ನಡುವಿನ ಬದುವಿನಲ್ಲಿ ಹೋಗಲು ಆಗದಷ್ಟು ಕೆಸರು ಅದಕ್ಕೆ ರಸ್ತೆ ಮಾರ್ಗವೇ ಸೂಕ್ತ.

ಮೇರೆಗಾಂವ್’ನಿಂದ 38 ಕಿ.ಮೀ ದೂರದಲ್ಲಿನ “ಹೀರಾಪುರ” ಎಂಬ ಹಳ್ಳಿಯಲ್ಲಿ “ಶಾಂತಿನಾಥ ಆಶ್ರಮದ”ಲ್ಲಿ ಭೋಜನವಾಯಿತು. ಅಲ್ಲಿನ ಹಿರಿಯ ಗುರುಗಳಿಗೆ ನಾನು ಕರ್ನಾಟಕದವ ಎಂದು ಗೊತ್ತಾದ ತಕ್ಷಣ ತಮ್ಮ ರೂಮಿಗೆ ಕರೆದು ವಿಶೇಷ ಆತಿಥ್ಯ ನೀಡಿದರು ಕಾರಣ ಅವರು ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಪದವಿ ಓದಿದ್ದಂತೆ. ಕರ್ನಾಟಕವೆಂದರೆ ಅವರಿಗೂ ಪ್ರೀತಿ.
ಅವರ ಅಪ್ಪಣೆ ಪಡೆದು ಮುಂದೆ ಹೊರಟೆ. “ನರ್ಮದಾ ಪರಿಕ್ರಮ ಪಥ ಮಾರ್ಗದರ್ಶಿಕಾ”ಪುಸ್ತಕದಲ್ಲಿ ಕಾಲುದಾರಿ ಮತ್ತು ರಸ್ತೆ ಮಾರ್ಗವನ್ನು ಪರಿಕ್ರಮವಾಸಿಗಳ ಅನುಕೂಲಕ್ಕಾಗಿ ಸಂಗ್ರಹಿಸಿ ಬರೆದವರು ಮುಂಬೈನ ಸೀಮಾ ದೀದಿ. ಜಬಲ್ಪುರದಲ್ಲಿ ಅವರು ಇಂದು ಭೇಟಿಯಾಗಿ, ಮುಂದಿನ ಪಯಣಕ್ಕೆ ಶುಭ ಹಾರೈಸಿ ಹೊರಟರು. ಅವರ ಮತ್ತು ನಿಮ್ಮೆಲ್ಲರ ಪ್ರೀತಿ, ಹಾರೈಕೆ ದೊಡ್ಡದು.

ಮಧ್ಯಪ್ರದೇಶದ ನರಸಿಂಗಪುರ ಜಿಲ್ಲಾ- ರಾಯಸೇನ ಜಿಲ್ಲಾ- ಪಾರು ಮಾಡಿ ಇಂದು ಸಾಯಂಕಾಲದ ಹೊತ್ತಿಗೆ ಬಂದು ಸೇರಿದ್ದು ಜಬಲ್ಪುರ್’ಕ್ಕೆ, ಇದು ಮಧ್ಯಪ್ರದೇಶದ ಪ್ರಮುಖ ನಗರ ಮತ್ತು ಜಿಲ್ಲಾ ಕೇಂದ್ರವು ಹೌದು. ಜಾಬಾಲಿ ಋಷಿ ಅನೇಕ ವರ್ಷ ಈ ಊರಿನ ನರ್ಮದಾ ತಟದಲ್ಲಿ ಧ್ಯಾನದಲ್ಲಿದ್ದರಂತೆ ಆದ್ದರಿಂದಲೇ ಈ ಊರಿಗೆ ಜಬಲ್ಪುರ ಎಂದು ಕರೆಯುವರು.
ಇಂದು ಜಬಲ್ಪುರದ “ಗ್ವಾರಿಘಾಟ್” ಗೆ ಬಂದೆ.

ಗರುಡ ಪುರಾಣದಲ್ಲಿ ಉಲ್ಲೇಖಿಸಿದ ಸ್ಥಳವಿದಂತೆ, ಮೋಕ್ಷಕ್ಕಾಗಿ ಹಿಂದೂಗಳು ಇಲ್ಲಿ ದಹನಕ್ರೀಯೆ ನಡೆಸುತ್ತಾರೆ. ಈ ಘಾಟ್’ನಲ್ಲಿ ನದಿಯ ಮಧ್ಯಕ್ಕೆ ನರ್ಮದಾ ದೇವಿ ದೇವಸ್ಥಾನವಿದೆ. ದೋಣಿಯ ಮುಖಾಂತರ ಹೋಗಬಹುದು. ಆದರೆ ಪರಿಕ್ರಮ ಮಾಡುವವರು ಹೋಗುವಂತಿಲ್ಲ.
‘ಗುರು ನಾನಕ್’ರು ಇಲ್ಲಿಗೆ ಬಂದು ತಂಗಿದ್ದರು. ಹಲವು ದುಷ್ಟ ಪ್ರವೃತ್ತಿಯುಳ್ಳವರ ಮನಸ್ಸನ್ನು ಬದಲಾಯಿಸಿದ್ದರು…. ಹೀಗಾಗಿ ಸಿಖ್ಖರಿಗೆ ಇದೊಂದು ಪವಿತ್ರ ತೀರ್ಥ ಸ್ಥಳ.
ಜೈನ ಮಂದಿರಗಳು ಇವೆ. ಜೈನರಿಗೂ ಪ್ರಮುಖ ಸ್ಥಳವಿದು. ಕಾಶಿಯ “ದಶಾಶ್ವಮೇಧ ಘಾಟ್”ನಲ್ಲಿ ನಡೆಯುವ ಬೃಹತ್ ಗಂಗಾ ಆರತಿಯಂತೆ ಇಲ್ಲಿಯೂ ಸಹ ಸಾಯಂಕಾಲ “ನರ್ಮದಾ ಆರತಿ” ನಡೆಯುತ್ತದೆ. ಇಂದು ಸಾಗರೋಪಾದಿಯಲ್ಲಿ ಜನ ಸೇರಿದ್ದರು. 5 ಜನ ಪುರೋಹಿತರು ನದಿಯತ್ತ ಮುಖ ಮಾಡಿ ಬೃಹತ್ ಆರತಿ ನಡೆಸಿಕೊಟ್ಟರು. ಆ ಹಿನ್ನೆಲೆಯ ಮಂತ್ರ, ನರ್ಮದಾಷ್ಠಕ, ನರ್ಮದಾ ಆರತಿ ಗೀತೆಯ ಜೊತೆ ಬೃಹತ್ ದೀಪಗಳು, ಧೂಪ, ಆರತಿ ಎಲ್ಲವೂ ಪ್ರಜ್ವಲಿಸುತ್ತಿದ್ದವು ಮಾತೆಯ ಪ್ರಾರ್ಥನೆಗೆ, ಹಸನ್ಮುಖಿ ದೇವಿ ನರ್ಮದೆ ಅಭಯ ನೀಡುತ್ತಾ ಶಾಂತವಾಗಿ ಹರಿಯುತ್ತಿದ್ದಳು.

ರೋಮಾಂಚಕ ಸಂಧ್ಯಾ ಆರತಿ. ನಾನು ಉಳಿದುಕೊಂಡದ್ದು ಗ್ವಾರಿಘಾಟ್ ಪಕ್ಕದ “ಜಲಹರಿ ಘಾಟ್”ನ ಪ್ರಾಚೀನ ಕುಶಾವರ್ತೇಶ್ವರ ಮಹಾದೇವ ಮಂದಿರದಲ್ಲಿ. ಇಲ್ಲಿ ಮಹಾರಾಷ್ಟ್ರದವರು ಪರಿಕ್ರಮ ಮಾಡುವವರಿಗೆ ಊಟ ಮತ್ತು ವಸತಿ ವ್ಯವಸ್ಥೆ ನೋಡಿಕೊಳ್ಳುತ್ತಾರೆ.
ಮುಂದಿನ ಪಯಣ ನಾಳೆಗೆ..
ನರ್ಮದೆ ಹರ್
ಹಿಂದಿನ ಸಂಚಿಕೆಗಳು :
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೩)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೪)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೫)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ –೬)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೭)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೮)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೯)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೦)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೧)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೨)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೩)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೪)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೫)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೬)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೭)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೮)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೯)
- ಡಾ. ಪ್ರಕಾಶ ಬಾರ್ಕಿ – ವೈದ್ಯರು, ಲೇಖಕರು, ಕಾಗಿನೆಲೆ.
