ರಕ್ತ ಕಂಬನಿಯನ್ನು ಸುರಿಸಿದರೂ, ಗೋಳು ಮುಗಿಯುವುದಿಲ್ಲ…ಮೈ ಮುರಿದು ದುಡಿದರೂ, ಅನುದಿನವೂ ನೋವು ತಪ್ಪುವುದಿಲ್ಲ …ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಮೂಡಿದ ಬದುಕಿನ ಚಿತ್ರಣವನ್ನು ತಪ್ಪದೆ ಮುಂದೆ ಓದಿ…
ಅವರೊಳಗಿನ ನಿಟ್ಟುಸಿರ ಮೌನ
ಯಾರೂ ಅರಿಯುವುದೇ ಇಲ್ಲ
ಸುರಿಸಿದ ಬೆವರ ಹನಿಗಳಿಗೆ
ಇಲ್ಲಿ ಯಾವುದೇ ಬೆಲೆಯಿಲ್ಲ
ನೊಂದ ಮನಸಿನ ನೋವು
ಯಾರಿಗೂ ಕಾಣಿಸುವುದೇ ಇಲ್ಲ
ಸದ್ದು ಗದ್ದಲವಿಲ್ಲದೆ ದುಡಿವ
ಕಾರ್ಮಿಕರ ಗೊಳಿಗೆ ಕೊನೆಯಿಲ್ಲ
ದುಡಿದುಡಿದು ಕೃಶವಾದರೂ
ಕೇಳುವವರು ಯಾರಿಲ್ಲವಿಲ್ಲಿ
ರಕ್ತ ಕಂಬನಿಯನ್ನು ಸುರಿಸಿದರೂ
ಗೋಳು ಮುಗಿಯುವುದಿಲ್ಲ
ಮೈ ಮುರಿದು ದುಡಿದರೂ
ಅನುದಿನವೂ ನೋವು ತಪ್ಪುವುದಿಲ್ಲ
ಇವರಿಗೆ ವಿರಮಿಸಲು ಸಿಗದು
ಬಾಳಿನಲ್ಲಿ ನೆಮ್ಮದಿಯ ನೆರಳಿನ ಛತ್ರಿ
ಇವರ ಜೀವ ಜೀವನಕ್ಕೆ ಇಲ್ಲ
ಯಾವುದೇ ತೆರನಾದ ಖಾತ್ರಿ
ಇವರ ಪಾಲಿನ ಸುಖ ಸಂತೋಷ
ಸಂಭ್ರಮಗಳಿಗೆ ಬೀಳುವುದು ಸದಾ ಕತ್ರಿ
ಇವರ ಶೋಷಣೆಗಳಿಗೆ ಕೊನೆಯಿಲ್ಲ
ಅರೆ ಬರೆ ನೆಮ್ಮದಿಗೂ ನೆಲೆಯಿಲ್ಲ
ಕತ್ತಲೆಯ ಕೂಪದಲ್ಲೇ ಜೀವನವು
ಕಳೆದು ಹೋಗುವುದು ಬೆಳಕ ಕಾಣದೆ
- ನಾಗರಾಜ ಜಿ. ಎನ್. ಬಾಡ – ಕುಮಟ, ಉತ್ತರ ಕನ್ನಡ.
