ಕೇವಲ ತನ್ನ 39ನೇ ವಯಸ್ಸಿಗೇ ತೀವ್ರ ಹೃದಯಾಘಾತದಿಂದ ಇಂದು ಶಾಶ್ವತವಾಗಿ ಮರೆಯಾದ ಕನ್ನಡತಿ ರಚನಾ, ಸುಂದರ ಕನ್ನಡವನ್ನು ಮನಸಾರೆ ಹಚ್ಚಿಕೊಂಡಿದ್ದ ನನ್ನಂಥವರಿಗೆ ಸಕತ್ ಷಾಕ್ !! ಮುಂದೆ ಓದಿ…
ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಒಂದಷ್ಟು ಕಾಲ ಸೇವೆಯಲ್ಲಿದ್ದಾಗ ನನ್ನ ಬೆಳಿಗ್ಗೆ ಶುರುವಾಗುತ್ತಿದ್ದುದೇ ರೇಡಿಯೋ ಮಿರ್ಚಿ 98.3 ಎಫ಼್ ಎಂ ನಿಂದ . ಅದಕ್ಕೆ ಕಾರಣ ಬೆಳ್ಳಂ ಬೆಳಿಗ್ಗೆ ತನ್ನ ಸುಮಧುರ ಸುಲಲಿತ , ಸುಶ್ರಾವ್ಯ ಕಂಠದಿಂದ ಹಾಗೂ ಹಲಸು ಜೇನು ಸವಿದಾಗ ಸಿಗುವ ಸವಿಯಂತೆ ಮನದುಂಬಿ ಕೇಳಿಬರುತ್ತಿದ್ದ ಮಧುರ ಕನ್ನಡ ಪದಗಳ ನಿರರ್ಗಳ ದನಿಯಿಂದ ಕಟ್ಟಿಕೊಡುತ್ತಿದ್ದ ರೇಡಿಯೋ ಕಾರ್ಯಕ್ರಮ. ಅದರ ಒಡತಿ ರೇಡಿಯೋ ಜಾಕಿ ಪೋರಿ ಟಪೋರಿ ರಚನಾ ಎಂಬ ಸ್ನಿಗ್ಧ ನಗುವಿನ ಮುದ್ದು ಮಾತಿನ ಚಂದದ ಬೆಡಗಿ !!!
ಅಸ್ಖಲಿತವಾದ ಮಾತು , ಚಂದದ ಕಂಠಸಿರಿ, ಸ್ವಲ್ಪವೂ ತಪ್ಪಿಲ್ಲದ ಎಲ್ಲರೂ ಒಪ್ಪುವಂತಹ ಸಿರಿಗನ್ನಡ, ಎಲ್ಲಕ್ಕಿಂತ ಹೆಚ್ಚಾಗಿ ನಿತ್ಯವೂ ಆರಿಸಿಕೊಳ್ಳುತ್ತಿದ್ದ ಆಸಕ್ತಿದಾಯಕ ವಿಚಾರಗಳು, ಕೇಳುಗರೊಂದಿಗೆ ತಲೆಹರಟೆಯಲ್ಲದ ಸಂವಾದ, ಇವೆಲ್ಲಕ್ಕೂ ಕಳಶವಿಟ್ಟಂತೆ ಕೊನೆಗೆ ” ನೀವ್ ಕೇಳ್ತಾ ಇದೀರಾ #ರೇಡಿಯೋ_ಮಿರ್ಚಿ 98.3 ಎಫ಼್.ಎಂ, ನಾನು ನಿಮ್ ಜೊತೆ ಪೋರಿ ಟಪೋರಿ ರಚ್ ನಾ…. ಸಕತ್ ಹಾಟ್ ಮಗಾ …. ಎನ್ನುತ್ತಿದ್ದ ಸ್ವೀಟ್ ಶೈಲಿಗೆ ಕ್ಲೀನ್ ಬೋಲ್ಡ್ ಆಗಿದ್ದೆ. ರಚನಾ ಎಂಬ ಮಾತಿನ ಮಲ್ಲಿಯ ಸೊಗಸಾದ ಮಾತುಗಳನ್ನು ಕೇಳುತ್ತಾ ಬುಲ್ ಟೆಂಪಲ್ ರೋಡಿನಲ್ಲಿ , ಬಸವನಗುಡಿಯ ಗಲ್ಲಿಗಳಲ್ಲಿ ಬೊಂಬಾಟಾಗಿ ಬೈಟು ಕಾಫ಼ೀ ಹೀರುತ್ತಾ ಜಗವನ್ನೇ ಮರೆತು ಬಿಡುವ ಸಮಯ ಅದಾಗಿತ್ತು .

ಫೋಟೋ ಕೃಪೆ : The News Minutes
ವರ್ಷಾನುಗಟ್ಟಲೆ ಅವರ ಧ್ವನಿ ಕೇಳುತ್ತಾ ಬಂದಿದ್ದರೂ ಅದು ಎಂದೂ ಮುಕ್ಕಾಗಿರಲಿಲ್ಲ , ಕಂಠ ಎಂದೂ ಸುಕ್ಕಾಗಿರಲಿಲ್ಲ. ಅದೇ ರಿದಮ್ , ಅದೇ ಟೆಂಪೋ, ಅದೇ ಆಕರ್ಷಕ ಮಾತುಗಾರಿಕೆ. ಹೀಗಾಗಿಯೇ ರಚನಾರ ಮಾತು ಕೇಳಲಿಕ್ಕಾಗಿಯೇ ಆಗ ಎಫ಼್.ಎಂ ರೇಡಿಯೋ , ಎಫ಼್ ಎಂ ಚೆನ್ನಾಗಿರುವ ಹೊಸ ಮೊಬೈಲ್ ಖರೀದಿಸಿದ್ದೆ. ನಿತ್ಯ ಸುಪ್ರಭಾತದಲ್ಲಿ ಹಾಡುಗಳ ಬಗೆಗೆ ವ್ಯಾಖ್ಯಾನ ಕೊಡುವಾಗಲೂ, ಪ್ರಸ್ತುತ ವಿಚಾರಗಳನ್ನು ಪ್ರಚುರಪಡಿಸುವಾಗಲೂ, ಗಂಭೀರವಾದ ಸಬ್ಜೆಕ್ಟನ್ನು ಹೇಳುವಾಗಲೂ ಅವರ ನಗೆಮಿಶ್ರಿತ ಮಾತು ಕತೆ ಎಂದೂ ಬಾಡಿರಲಿಲ್ಲ.
ಹೀಗೆ…..ಪೋರಿಯಂತೆ ಟಪೋರಿಯಂತೆ ರೇಡಿಯೋ ಕೇಳುಗರನ್ನು ಮಾತಲ್ಲೇ ಕೆಣಕುತ್ತಾ ಆಸಕ್ತಿ ತುಂಬಿದ್ದ ರಚನಾ, ಶುದ್ಧ ಕನ್ನಡದ ಪ್ರತಿನಿಧಿಯಾಗಿದ್ದ ರಚನಾ, ರೇಡಿಯೋ ಜಾಕಿ ಎಂಬ ಸ್ಥಾನಕ್ಕೆ ಮಾನ್ಯತೆ ತಂದು ಕೊಟ್ಟಿದ್ದ ರಚನಾ, ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಯಲ್ಲಿ ಸಿಂಪಲಾಗ್ ಬಂದರೂ ಆಂಪಲ್ ಆದ ಇಂಪ್ರೆಷನ್ ಬಿಟ್ಟಿದ್ದ ಅದೇ #ರಚನಾ…… ಇಂದು ಇದ್ದಕ್ಕಿದ್ದಂತೆ ತನ್ನ ಮುವ್ವತ್ತೊಂಭತ್ತನೆಯ ಚಿಕ್ಕ ವಯಸ್ಸಿನಲ್ಲೇ ಕೊನೆಯುಸಿರೆಳಿದಿರುವ ಸುದ್ದಿ ಆಘಾತಕಾರಿಯಾಗಿದೆ.
ಕೇವಲ ತನ್ನ 39ನೇ ವಯಸ್ಸಿಗೇ ತೀವ್ರ ಹೃದಯಾಘಾತದಿಂದ ಇಂದು ಶಾಶ್ವತವಾಗಿ ಮರೆಯಾದ ಕನ್ನಡತಿ ರಚನಾ, ಈ ಕೆಟ್ಟ ಸುದ್ದಿಯ ಕಾರಣಕ್ಕಾಗಿ ಮನದ ಮೂಲೆಯಲ್ಲೆಲ್ಲೋ ಭಧ್ರವಾಗಿ ಬೇರೂರಿದ್ದ ಸುಂದರ ನೆನಪಿನ ಕನ್ನಡಿಯನ್ನು ಈ ರೀತಿ ಚೂರು ಮಾಡಬಾರದಿತ್ತು. ಮೂರು ವರ್ಷಗಳ ಹಿಂದಷ್ಟೇ ರೇಡಿಯೋ ಮಿರ್ಚಿಗೆ ಗುಡ್ ಬೈ ಹೇಳಿದ್ದ ರಚನಾ ಆರೋಗ್ಯ ಹಾಗೂ ಫ಼ಿಟ್ ನೆಸ್ ಅತ್ಯಂತ ಕಟ್ಟುನಿಟ್ಟಾಗಿ ಕಾಪಾಡಿಕೊಂಡು ಬಂದಿದ್ದರು. ಮ್ಯಾಸ್ಸೀವ್ ಕಾರ್ಡಿಯಾಕ್ ಅರೆಸ್ಟ್ ನಿಂದಾಗಿ ಚಿಕ್ಕ ವಯಸ್ಸಿಗೇ ಅಗಲಿದ್ದು ಅವರನ್ನು ತುಂಬಾ ಮೆಚ್ಚಿಕೊಂಡಿದ್ದ ಸಾವಿರಾರು ಅಭಿಮಾನಿಗಳಿಗೆ ತೀವ್ರ ದುಃಖವಾಗಿದ್ದರೆ ಅವರ ಮಾತಿನ ಶೈಲಿ ಹಾಗೂ ಸುಂದರ ಕನ್ನಡವನ್ನು ಮನಸಾರೆ ಹಚ್ಚಿಕೊಂಡಿದ್ದ ನನ್ನಂಥವರಿಗೆ ಸಕತ್ ಷಾಕ್ !!
** ಮರೆಯುವ ಮುನ್ನ **
ಆರೋಗ್ಯ ಮತ್ತು #ಫ಼ಿಟ್_ನೆಸ್ ವಿಚಾರದಲ್ಲಿ ಅತ್ಯಂತ ಶ್ರದ್ಧೆವಹಿಸುತ್ತಾ ಬಂದ ಯುವಜನರೇ ಹೀಗೆ ಸಡನ್ ಆಗಿ ಕಣ್ಮರೆಯಾಗಿ ಹೋಗುತ್ತಿರುವುದು ತುಂಬಾ ನೋವಿನ ಸಂಗತಿ. ಬಾಡಿ ಫ಼ಿಟ್ ನೆಸ್ಸಿಗೆ ಮಾದರಿಯಾಗಿದ್ದ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ರ ಅಕಾಲಿಕ ಅಗಲಿಕೆ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದಂತೆ ಇಂದು ರೇಡಿಯೊ ಜಾಕಿ ರಚನಾರ ಧಿಡೀರ್ ಸಾವು, ಫ಼ಿಟ್ ಆಗಿರುವುದೇ ತಪ್ಪಾ ಎಂಬ ಜಿಜ್ಞಾಸೆಯ ಮತ್ತಷ್ಟು ಹರವನ್ನು ಹೊರಚೆಲ್ಲಿದೆ. ಆರೋಗ್ಯದ ಬಗೆಗೆ ಸ್ವಲ್ಪವೂ ಕಾಳಜಿಯಿಲ್ಲದ ಲಕ್ಷಾಂತರ ಮಂದಿ ದೀರ್ಘಾಯುಷ್ಯಿಗಳಾಗಿ ಬದುಕು ಸವೆಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಆರೋಗ್ಯವನ್ನು- ದೇಹವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಮಾತಿಗೆ ಜೀವಂತ ಉದಾಹರಣೆಯಾಗಿದ್ದವರೇ ಕಣ್ಮರೆಯಾಗುತ್ತಿರುವ ವಿಚಿತ್ರ ಸನ್ನಿವೇಶಗಳು ಭಯಾನಕವಾಗಿವೆ. ಇದು ಕಾಲನ ಕರಾಳತೆಯ ಮತ್ತೊಂದು ಮಾಸ್ಕ್ ಥರಾ ಕಾಣುತ್ತಿದೆ.
ಏನೇ ಆದರೂ ಈ ಸಾವು ನ್ಯಾಯವಲ್ಲ ! ಅಸಲಿಗೆ ಯಾವ ಸಾವೂ, ಎಂಥವರ ನೋವೂ ತರವಲ್ಲ.
ರೇಡಿಯೋ ಮಿರ್ಚಿಯ ಭದ್ರವಾದ ಕುರ್ಚಿಯಲ್ಲಿ ದಶಕಗಳ ಕಾಲ ಕನ್ನಡಮ್ಮನ ಸೇವೆಗೈದ ಈ ಪೋರಿ ಟಪೋರಿಗೆ ಭಾರವಾದ ಹೃದಯದಿಂದ ಭಾವಪೂರ್ಣ ಅಶ್ರುತರ್ಪಣ………
ಏನೇ ಆಗ್ಲೀ……
” ಈ ಸಾವು ಸಕತ್ ಕೆಟ್ಟದ್ದು ಮಗಾ…….!!
ನೋವಿನಿಂದ…..
- ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು) ಹಿರಿಯೂರು
