ನಾಲ್ಕು ವರುಷ ನೆನೆಗುದಿಗೆ ಬಿದ್ದಿದ್ದ, ಕರೋನಾ ಬೊಬ್ಬೆ ಹೊಡೆದು ಇನ್ನಷ್ಟೂ ಮೂಲೆ ಗುಂಪಾಗಿಸಿದ್ದು “ಕಾಶಿ ಯಾತ್ರೆ”ಯ ತವಕವನ್ನು. ಅಂತೂ ನವೆಂಬರ್ 2021 ರ ಕೊನೆಯ ವಾರ ವಿಶ್ವನಾಥನ ಅಣತಿಯಂತೆ ಕಾಶಿ ಯಾತ್ರೆ ನೆರವೇರಿತು. Its totally unplanned trip. ಬರೀಗಾಲ ಫಕೀರನಂತೆ ಗಲ್ಲಿ ಗಲ್ಲಿ ಸುತ್ತಾಡಿ, ಗಂಗೆಯಲ್ಲಿ ಮಿಂದೆದ್ದು, ದಿನಕ್ಕೆರಡು ಬಾರಿ ವಿಶ್ವನಾಥನ ಸನ್ನಿಧಿ ಸುತ್ತಾಡಿದೆ. ದಿನವೂ, ಅಲ್ಲಿನ ಸ್ಥಳೀಯ ಆಹಾರ ಸೇವಿಸಿ, ಮಂದಿರ ತಿರುಗಾಡಿದೆ. ಸಂಜೆಗೆ ಮುದನೀಡುತ್ತಿದ್ದುದು ಘಾಟ್’ಗಳ ಮೈತ್ರಿ, ಗಂಗೆಯ ಅಭೂತಪೂರ್ವ ಸೌಂದರ್ಯ.
ಸಂಜೆಯ ನಸುಗೆಂಪು “ನೇಸರ” ಗಂಗೆಯ ಆ ಕಡೆಯ ತಟ ದಾಟಿ ದೂರಕ್ಕೆ ಇಳಿದು.. ಮುಖಕ್ಕೆ ನಿಧಾನವಾಗಿ ಮುಸುಕು ಎಳೆದುಕೊಳ್ಳುತ್ತಿದ್ದ.
ಸುಕ್ಕುಗಟ್ಟಿದ ಮುದಿ ಬಿಸಿಲು…ಬೆಳಕನ್ನು ತೆಳುವಾಗಿ ಹರಡಿದೆ. ಸಂಜೆಯ ಗೋಧೂಳಿ ಸಮಯವದು. ಹರಿಶ್ಚಂದ್ರ ಘಾಟ್’ನಲ್ಲಿ ಮೈ ಮುದುರಿ ಬಿದ್ದುಕೊಂಡಿದ್ದ “ಬೆಂಚಿನ” ಮೇಲೆ ಕೂತು ಮಣ್ಣಿನ ಕುಡಿಕೆಯಲ್ಲಿ ಚಹಾ.. ಹೀರುವ ಸುಖ ಪದಗಳಿಗೆ ನಿಲುಕದು. ನಾಳೆ ಮತ್ತೆ ಊರಿಗೆ ಹೊಗಬೇಕಲ್ಲಾ..!! ಎನ್ನುವ ಕಾರ್ಯಕ್ಕಿಂತ, ಕಾಶಿ ಬಿಟ್ಟು ತೆವಳುವ ನೋವು ದಟ್ಟವಾಗಿ ಹೆಪ್ಪುಗಟ್ಟಿದೆ.
ಗಂಗೆ ನಿಧಾನವಾಗಿ ತೆವಳುತ್ತಿದ್ದಾಳೆ, ಅವಳ ಒಡಲಾಳದಲ್ಲಿ ಕಾಲು ಮಿಟುಕಿಸಿ ಈಜುವ “ಸೀಗಲ್ ವಲಸಿಗ ಹಕ್ಕಿಗಳ ತಂಡ. ಮೇಲ್ಮೈ ಮೇಲೆ ತೇಲುವ ಹುಟ್ಟಿಟ್ಟು ಜೀಕಿ ಮುಂದೋಡುವ ಚಿಕ್ಕ ದೋಣಿಗಳು, ಸಲೀಸು ಓಡುವ ಮೋಟಾರು ದೋಣಿಗಳು, ದೂರದಲ್ಲಿ ಗಂಗೆ ಸೆರಗ ಅಂಚಿಗೆ ಮುಳಿಗೆಳುವ ಸಾಧು ಸಂತರು.ಘಾಟ್ ತುಂಬಾ ಕೈ-ಕೈ ತಳುಕು ಹಾಕಿ ನಡೆಯುವ ಜೋಡಿಗಳು, ಬೆಂಕಿ ಬೇಡಿ ಬಂದು ಬೇಯುತ್ತಿರುವ ಶವಗಳು, ಚಹಾ ಮಾರುವ ಹುಡುಗರು, ಗಂಗೆಯ ವಿಶಿಷ್ಟ ಸೌಂದರ್ಯಕ್ಕೆ ಮಾರುಹೋಗಿ ಮೂಖ ವಿಸ್ಮಿತರಾಗಿ ಫೋಟೋ ಕ್ಲಿಕ್ಕಿಸುವ ಪ್ರವಾಸಿಗರು, ಗಂಗೆಯ ಜಲ ಬೊಗಸೆ ತುಂಬಿಕೊಂಡು ಕುಡಿದು ಧನ್ಯ ಭಾವದಿ ನಮಿಸುವ ಕೆಲವರು, ನನ್ನ ಹಾಗೆ ಕೂತು ಎದ್ದು ನಡೆಯುತ್ತಿದ್ದವರು, ಸೆಲ್ಫೀ ಗೀಳಿಗೆ ಬಿದ್ದು ಮೊಬೈಲ್ ಮಾಯಾಂಗನೆಗೆ ಜೋತು ಬಿದ್ದವರು ಹಲವರು….
ಅಬ್ಬಬ್ಬಾ..!! ಘಾಟ್ ತುಂಬಾ ಭಿನ್ನ ವಿಭಿನ್ನ ಮನಸ್ಥಿತಿಯವರು. ವಿಶ್ವವೇ ಒಂದೆಡೆಯಾದ ಭಾವ. ಆದರೂ ಶಿವನ ಸಖ್ಯ ಬಯಸಿ ಮಂದಸ್ಮೀತಳಾದ ಗಂಗೆ.
ಮೂಗಿಗಡರುತ್ತಿದ್ದ ವಿಭೂತಿ, ಗಂಧ, ಊದುಬತ್ತಿಯ ಮಧುರ ಗಂಧದಗಾಳಿ ಒಂದೆಡೆಯಾದರೆ, ನನ್ನ ಎಡ ಮಗ್ಗುಲಿಗೆ ಬೆಂಕಿ ಕೆನ್ನಾಲಿಗೆಗೆ ಧಗಿಧಗಿಸುತ್ತಿದ್ಧ ಶವದ ಕಮಟು ವಾಸನೆಯು ಸಹ ಮಿಶ್ರವಾಗಿತ್ತು. ಎಲ್ಲವೂ ಜಗದೊಡೆಯನ ಮಡಿಲಲ್ಲಿ. ಮಹಾಕಾಲನ ಲೀಲೆ.

ಆಗಲೇ…
ಸೂರ್ಯ ಮುಳುಗಿ… ಮೆಲ್ಲಗೆ ಮೈ ನಡುಗುವ ಚಳಿ ಶುರುವಾಯಿತು. ಕತ್ತಲೆ ಬೆಳಕನ್ನು ಸಂಪೂರ್ಣ ನುಂಗಿ ಹಾಕಿದೆ.. ಮಬ್ಬೆಳಕಿನ ಸುಳಿವು ಸಹ ಇಲ್ಲ. ದೂರದ ದಶಾಶ್ವಮೆಧ ಘಾಟ್’ನಲ್ಲಿ ಶಂಖ, ಜಾಗಟೆ, ಡಮರುಗ, ಶಾಸ್ತ್ರೋಕ್ತ ಮಂತ್ರ ತಾಳಕ್ಕೆ ತಕ್ಕ ಸಂಗೀತ, ಧೂಪ, ಆರತಿ, ಇವೆಲ್ಲವನ್ನು ಕಣ್ತುಂಬಿಕೊಳ್ಳುತ್ತಿದ್ದ ನೂರಾರು ಜನರ ಗುಂಪು. ಮನಸ್ಸಿಗೆ ಹಿತ ನೀಡುತ್ತಿದ್ದ ರಾತ್ರಿಯಾರಂಭ.
ಗಂಗೆಯ ತಟದಲ್ಲಿ 80 ಕ್ಕಿಂತ ಹೆಚ್ಚು ಘಾಟ್’ಗಳು, ಹಲವು ಸ್ನಾನ ಘಟ್ಟಗಳು, ಆಯಾ ಘಾಟ್’ಗೆ ಒಂದೊಂದು ಹೆಸರು, ವಿವಿಧ ಶೈಲಿಯ ಕಟ್ಟಡಗಳು, ಮಠ, ಮಂದಿರ , ಅಖಾಡಾಗಳು ಮತ್ತು ಅವುಗಳೆದುರಿನ ಪ್ರಖರ ದೀಪಗಳು ಕತ್ತಲೆಯನ್ನು ಸೀಳಿ ಕಣ್ಣಿಗೆ ರಾಚುತ್ತಿದ್ದವು.
ಧಣಿವರಿಯದೆ ಅಲ್ಲಲ್ಲಿ ಕತ್ತಲನ್ನು ಛಿದ್ರವಾಗಿಸಿ, ಶವ ಭಸ್ಮವಾಗಿಸುತ್ತಿದ್ದ ಚಿತೆಗಳು ಎದ್ದು ತೋರುತ್ತಿದ್ದದ್ದು ಮಣಿಕರ್ಣಿಕಾ ಘಾಟ್’ನಲ್ಲಿ.
ಹರಿಶ್ಚಂದ್ರ ಘಾಟ್ ವಿಶ್ರಾಂತಿ ತೆಗೆದುಕೊಳ್ಳುತ್ತಾ ಆವಾಗಾವಾಗ ಶವ ಸುಡುತ್ತಿತ್ತು…
ಆಗಲೇ ಸಮಯರಾತ್ರಿ 9 ಘಂಟೆ…..
ನನಗೆ ಹರಿಶ್ಚಂದ್ರ ಘಾಟ್ ಬಿಟ್ಟೇಳುವ ವಿಚಾರ ಮನಸ್ಸಲ್ಲಿ ತೇಲಿ ಬರಲು ಅವಕಾಶವಿಲ್ಲದಷ್ಟು ಕಾಶಿಗೆ ಮಾರು ಹೋಗಿದ್ದೆ.
ಬೆಳಗೆದ್ದರೆ… ಇಬ್ಬನಿ ಸಪೂರವಾಗುವ ನೋಟ, ಪಕ್ಷಿಗಳ ಕಲರವ.. ಗಂಗಾ ಆರತಿ.. ಗಂಗೆಯಲ್ಲಿ ಮಿಂದೇಳುವ ತವಕ, ಮಿಂದೆದ್ದ ರೋಮಾಂಚಕ ಅನುಭವ..
ತಿಂಡಿಗೆ ಕಚೋರಿ (ಪೂರಿ ಸಾಗು ತರಹದ್ದು) ಸಬ್ಜಿ, ಜಿಲೇಬಿ. ವಿವಿಧ ಸಿಹಿ ಭಕ್ಷ್ಯಗಳು. ಬರಿಗಾಲಲ್ಲಿ ಗಲ್ಲಿ ಗಲ್ಲಿ ಅಲೆಯುವ ದಿವ್ಯಾನುಭವ,.. ಹೆಜ್ಜೆಗೊಂದರಂತೆ ಸಿಗುವ ಶಿವಲಿಂಗ, ಭೋಲೆನಾಥನ ಗುಡಿಗಳು, ಮೈ ಚುರುಕೆನ್ನುವ ಬಿಸಿಲು, ತಂಪಾಗಿಸಲು ಲಸ್ಸಿ ಮೇಲೊಂದಿಷ್ಟು ಸಿಹಿ ರಬಡಿ, ಮಲಾಯೀ, ಥಂಡೈ. ಹಸಿವಾದರೆ ಅಂಗೈ ಅಗಲದ ಪರೋಟಾ, ಕೇಳರಿಯದ ತರಕಾರಿಗಳ ಪಲ್ಯ, ದಾಲ್,
ತುಪ್ಪ.
ಹೊಟ್ಟೆ ಸಂತೃಪ್ತಿಯಾದಾಕ್ಷಣ ಬಾಯಿಗೇರುವ “ಬನಾರಸ್ ಪಾನ್”, ದಸರೆಯಲ್ಲಿ ಮೈಸೂರು ಮಹಾರಾಜರು ಬಲರಾಮನನ್ನ ಏರಿದಂತೆ…ಸೈಕಲ್ ರಿಕ್ಷಾ ಏರಿ ಮಹಾರಾಜನಂತೆ ಮಂದಿರದಿಂದ ಮಂದಿರಕ್ಕೆ ಠೀವಿಯಿಂದ ಸಾಗುವ ಹಮ್ಮು, ಹುಮ್ಮಸ್ಸು. ಕಿರಿದಾದ ರಸ್ತೆಗೆ ಜನಸಾಗರ ತುಂಬಿ ಗಿಜಿಗಿಜಿ ಎನ್ನುತ್ತಿದ್ದ ಬಜಾರ್ ದಾರಿಗಳು. ಧ್ಯಾನಸ್ಥರಾಗಿಸುತ್ತಿದ್ದ ದೈವಿ ಅಲೆ ತುಂಬಿದ ಹಲವು ಮಂದಿರಗಳು, ಅತೀ ಪರಿಚಯದವರಂತೆ ಹರಟುವ ಬನಾರಸ್ಸಿಗರು, ಸಂಜೆ ಹಸಿವಿಗೆ ನಾಲಿಗೆ ಚಪ್ಪರಿಸುವ “ಕಾಶಿ ಚಾಟ್ ಭಂಡಾರ್”ನ ಹಲವು ಚಾಟ್’ಗಳು. ಮಗ್ಗಲಿಗೆ ಬಿಕರಿಯಾಗುತ್ತಿದ್ಧ ಬಾಟಿ ಚೋಖಾ. ಬರಸೆಳೆದು ಖುಷಿ ನೀಡುತ್ತಿದ್ದ ಮಣ್ಣಿನ ಮಡಕೆಗಳು.. ಚಹಾ ತುಂಬಿಕೊಂಡು ಕೈ ಬೀಸಿ ಕರೆಯುತ್ತಿದ್ದೆವು. ಸಂಜೆಯಾದರೆ ಘಾಟ್’ನ ದಿವ್ಯ ಒಮ್ಮೊಮ್ಮೆ ಗವ್ವೇನ್ನುವ ಶಾಂತಿಯಲ್ಲಿ ಕಳೆದು ಹೋಗುವ ಅರ್ಧ ರಾತ್ರಿಗಳು.
ಅಬ್ಬಾ..!! ಇವೆಲ್ಲವನ್ನು ನಾಳೆಯಿಂದ ಆಸ್ವಾದಿಸಲು ಆಗದು, ಶಿವನ ಸನ್ನಿಧಿಯ ಸಖ್ಯದಿಂದ ದೂರ ನಡೆದು ಮತ್ತದೆ ಭೌತಿಕ, ನಾಟಕೀಯ ಬದುಕಿಗೆ ಮರಳುವ… ಕಾಶಿಯ ಕೊನೆಯ ದಿನದ ರಾತ್ರಿ ಹೈರಾಣಾಗಿಸಿತು.
ಎದ್ದು ಗಂಗೆಗೆ, ಶಿವನ ಸನ್ನಿದಾನಕ್ಕೆ, ಆ ನೆಲಕ್ಕೆ, ಮಹಾತ್ಮರ ಪಾದದ ಧೂಳು ಆವರಿಸಿದ್ದ ಘಾಟ್’ಗಳಿಗೆ ಧನ್ಯವಾದ ರೂಪದಲ್ಲಿ ಕೈ ಮುಗಿದು ಎದ್ದೆ. ಊರಿಗೆ ಮರಳಿ ಹೊರಡುವ ಹುಕಿ ಒಂದಿಷ್ಟು ಇರದ ದಿನವಿದು. ಮೆಲ್ಲಗೆ ಘಾಟ್’ನಿಂದ ಘಾಟ್’ಗೆ ನಿಧಾನ ಪಾದ ಊರುತ್ತಾ ಭಾರ ಹೃದಯದಿಂದ ನಾನು ಉಳಿದುಕೊಂಡಿದ್ದ “ಕರ್ನಾಟಕ ವಸತಿ ಗೃಹ”ದತ್ತ ಸಾಗುತ್ತಿದ್ದೆ…..
ದೂರದ ಸ್ಮಶಾನದಲ್ಲಿ ತಾಂತ್ರಿಕ ಶಕ್ತಿ ಅರಸಿ ಧಗಧಗಿಸುತ್ತಿದ್ದ ದೀಪಗಳು, ವಿವಿಧ ಶಕ್ತಿ ಒಲಿಸಿಕೊಳ್ಳಲು ಮಂತ್ರ ಉಚ್ಚರಿಸುತ್ತಾ ಮಗ್ನರಾಗಿದ್ದ ಅಘೋರಿಗಳ ತಂಡ ಕಣ್ಣಿಗೆ ನಕ್ಷತ್ರದಷ್ಟು ಚಿಕ್ಕದಾಗಿ ದೂರದ ಘಾಟ್’ನಲ್ಲಿ ಮಿಣುಕುತಿತ್ತು.
ಸ್ಮೃತಿ ಪಟಲದ ಮೇಲೆ ಜಗದೊಡೆಯ ವಿಶ್ವನಾಥನ ಕೃಪೆ, ಗಂಗೆಯ ಹಾರೈಕೆ ಅಚ್ಚೊತ್ತಿದಂತಿತ್ತು….
ಅಂತರಾತ್ಮದ ಅವಲೋಕನಕ್ಕೆ ದಕ್ಕಿದ ಘಟನೆಗಳು…..
ಗಂಗೆಯ ದೂರದ ದಡದಿಂದ ಗಾಳಿಗೆ ತೂರಿ ಚದುರುತ್ತಿದ್ದ ಭಾರತ ರತ್ನ “ಬಿಸ್ಮೀಲ್ಲಾ ಖಾನ್”‘ರ ಶಹನಾಯಿ ವಾದನ.. ಭಾರತ ರತ್ನ “ರವಿ ಶಂಕರ”ರ ಸಿತಾರದ ಹಿಮ್ಮೇಳ, “ಜಾನ್ಸಿ ರಾಣಿ’ ಲಕ್ಷ್ಮೀ ಬಾಯಿ ಕುದುರೆ ಏರಿ ತೆರಳುತ್ತಿದ್ದ ಸಪ್ಪಳ, ಮಗ್ಗುಲಿನಿಂದ ನುಗ್ಗಿ ನಡೆದ ಜೈನ ತೀರ್ಥಂಕರ ಮಹಾವೀರ, ಮಂದಸ್ಮೀತನಾಗಿ ಧ್ಯಾನಸ್ಥನಾಗಿದ್ದ ಬುದ್ಧ, ಆದಿ ಶಂಕರರು ಪಾಂಡಿತ್ಯ ಪೂರ್ಣ ಶಾಸ್ತ್ರಾರ್ಥ ನಡೆಸಿ ಸರ್ವಜ್ಞ ಪೀಠ ಏರಿ ಕೂತಿದ್ದ ಮನೋದೃಶ್ಯ..

ಸಂತ ತುಲಸಿದಾಸರು “ಶ್ರೀ ರಾಮಚರಿತ ಮಾನಸ” ಬರೆಯುತ್ತಾ ಮಗ್ನರಾಗಿದ್ದು… ಪಂಚಗಂಗಾ ಘಾಟ್’ನಲ್ಲಿ ಸಂತ ಕಬೀರ ದಾಸರು ತಮ್ಮ ಗುರುಗಳಾದ ರಾಮನಾಥರನ್ನು ಭೇಟಿಯಾಗುವ ತವಕದಲ್ಲಿದ್ದರು. ಕ್ರಾಂತಿ ಶಿರೋಮಣಿ ಚಂದ್ರಶೇಖರ ಆಜಾದ್ ಗುಡುಗುತ್ತಿದ್ದರು, ಸತ್ಯಕ್ಕಾಗಿ ಸರ್ವತ್ಯಾಗ ಮಾಡಿ ಸ್ಮಶಾನ ಕಾಯುತ್ತಾ ಹರಿಶ್ಚಂದ್ರ, ಹೆಣ ಸುಡುತ್ತಾ… ಸತ್ಯ ಹರಿಶ್ಚಂದ್ರನಾಗಿ ರೂಪಾಂತರನಾಗುತ್ತಿದ್ದ ಪರಿವರ್ತನೆಯ ನೆನಪು.
ಮುಗುಳ್ನಗೆ ಬೀರುತ್ತಾ ಗಂಗೆಯ ದಡದತ್ತ ಮೆಟ್ಟಿಲಿಳಿದು ಬರುತ್ತಿದ್ದ ರಾಣಿ “ಅಹಲ್ಯಾಭಾಯಿ ಹೋಳ್ಕರ್”.
“ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ” ಕಾಮಗಾರಿ ಅಹೋರಾತ್ರಿ ಭರದಿಂದ ನಡೆಯುತ್ತಿದ್ದು, ಅಲ್ಲಿ ಕಾರ್ಮಿಕರು ಬಳಸುತ್ತಿದ್ದ ಕರ್ಣ ಪಟಲ ಅದರುವ ಯಂತ್ರಗಳ ಶಬ್ದಕ್ಕೆ… ಘಾಟ್ ಮೆಟ್ಟಿಲೇರುವಾಗ ತಪ್ಪು ಹೆಜ್ಜೆ ಹಾಕಿ, ಧಿಡೀರ್ ಇನ್ನೇನೂ ಆಯತಪ್ಪಿ ಬೀಳುವ ಭರದಲ್ಲಿದ್ದಾಗ ಗಕ್ಕನೆ ಎಚ್ಚರವಾದಂತಾಗಿ ಸಾವರಿಸಿ ಮೆಟ್ಟಿಲೇರತೊಡಗಿದೆ……. ವಾಸ್ತವಕ್ಕೆ ಮರಳುತ್ತಾ.
ಎಲ್ಲವನ್ನೂ… ಅನುಭವದ ತೆಕ್ಕೆಯಲ್ಲಿ ಬೆಚ್ಚಗೆ ಮೈ ದಡವುತ್ತಾ… ರೂಮ್ ಹೊಕ್ಕೆ.
ನಾಳೆಯ ಮುಂಜಾವಿಗೆ ಹೊರಡಲು ಬ್ಯಾಗ್ ತುಂಬಿ… ಕಾಶಿಯ ಕೊನೆಯ ರಾತ್ರಿಗೆ ನಿದ್ರಾ ದೇವಿಯ ಮಡಿಲು ಸೇರತೊಡಗಿದೆ……
ನನ್ನ ಎಂಟು ದಿನದ ಕಾಶಿ ಯಾತ್ರೆ ಮುಗಿಸಿ ನಾಳೆ ಮುಂಜಾವಿಗೆ, ಊರಿನತ್ತ ಸಾಗಲು, ರೈಲು ಏರಲು ಅಣಿಯಾಗತೊಡಗಿದೆ.
ಜೈ ಜೈ ಶಂಕರ..ಭೋಲೆನಾಥ..ಮಹಾಕಾಲ..
- ಕಾಶಿ ಅನುಭವ (ಭಾಗ೧)
- ಕಾಶಿ ಅನುಭವ (ಭಾಗ೨)
- ಕಾಶಿ ಅನುಭವ (ಭಾಗ೩ )
- ಕಾಶಿ ಅನುಭವ (ಭಾಗ೪)
- ಕಾಶಿ ಅನುಭವ (ಭಾಗ೫)
- ಕಾಶಿ ಅನುಭವ (ಭಾಗ ೬)
- ಕಾಶಿ ಅನುಭವ (ಭಾಗ ೭)
- ಕಾಶಿ ಅನುಭವ (ಭಾಗ ೮)
- ಕಾಶಿ ಅನುಭವ (ಭಾಗ ೯)
- ಕಾಶಿ ಅನುಭವ (ಭಾಗ ೧೦)
- ಕಾಶಿ ಅನುಭವ (ಭಾಗ ೧೧)
- ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ
