ಲೇಖಕರಾದ ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ‘ಶೌರ್ಯಮಲೆ ಅಯ್ಯಪ್ಪನ ಪೂಂಗಾವನ’ ಕಾದಂಬರಿಯಲ್ಲಿ ಪುಣ್ಯಕ್ಷೇತ್ರವಾದ ಶಬರಿಮಲೆಯ ಕುರಿತಾಗಿದ್ದು, ಈ ಕೃತಿಯ ಕುರಿತು ಚೇತನ ಭಾರ್ಗವ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ: ಶೌರ್ಯಮಲೆ
ಅಯ್ಯಪ್ಪನ ಪೂಂಗಾವನ
ಲೇಖಕರು: ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಪ್ರಕಾಶಕರು: ಸಾಹಿತ್ಯ ಲೋಕ ಪಬ್ಲಿಕೇಶನ್ಸ್
ಬೆಲೆ : 280
ಈ ಬಾರಿಯ ಪುಸ್ತಕಸಂತೆಯಲ್ಲಿ ಲೇಖಕರಾದ ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ಪರಿಚಯವಾಗಿದ್ದು ತುಂಬಾ ಸಂತೋಷವಾಯಿತು . ಅವರ ಹಸ್ತಾಕ್ಷರದೊಂದಿದೆ ಸಾಹಿತ್ಯ ಲೋಕ ಪಬ್ಲಿಕೇಶನ್ ಮಳಿಗೆಯಲ್ಲಿ ಖರೀದಿಸಿದ ಪುಸ್ತಕ ಶೌರ್ಯಮಲೆ ಅಯ್ಯಪ್ಪನ ಪೂಂಗಾವನ.
ರಮೇಶ್ ಶೆಟ್ಟಿಗಾರ್ ಮಂಜೇಶ್ವರ ರವರು ಬರೆದಿರುವ “ಶೌರ್ಯಮಲೆ, ಅಯ್ಯಪ್ಪನ್ ಪೂಂಗಾವನ” ಕಾದಂಬರಿಯು ಜಾತಿ ಮತ ಭೇದವಿಲ್ಲದೆ ಅಸಂಖ್ಯಾತ ಭಕ್ತರು ಭೇಟಿ ನೀಡುವ ಪುಣ್ಯಕ್ಷೇತ್ರವಾದ ಶಬರಿಮಲೆಯಲ್ಲಿ ನೆಲೆಸಿರುವ ಮಣಿಕಂಠನ ವೀರತ್ವ ಸಾಹಸ ಹಾಗೂ ಶಬರಿಮಲೆಯ ಪುನರ್ ನಿರ್ಮಾಣ ಮಾಡಿ ಹರಿಹರಸುತ ಧರ್ಮಶಾಸ್ತ್ರನಲ್ಲಿ ಮಣಿಕಂಠ ಐಕ್ಯನಾದ ಅದ್ಭುತವಾದ ಪೌರಾಣಿಕ ಕಥೆ.

ಈ ಕಾದಂಬರಿಯನ್ನು ಓದುತ್ತಾ ಹೋದಂತೆ ಸಿನಿಮಾವನ್ನು ನೋಡಿದ ಅನುಭವವಾಗುತ್ತದೆ. ಲೇಖಕರು ಇಲ್ಲಿ ಕಥೆಯ ಚಿತ್ರಣ ಮತ್ತು ದೃಶ್ಯಗಳನ್ನು ಪದಪುಂಜಗಳಲ್ಲಿ ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಈ ಕಥೆಗಾಗಿ ಲೇಖಕರು ಹಾಕಿದ ಶ್ರಮ ಹಾಗೂ ಇದಕ್ಕಾಗಿ ಅವರು ಮಾಡಿದ ಸಾಕಷ್ಟು ಅಧ್ಯಯನ ಓದುಗನಿಗೆ ಕಾದಂಬರಿಯನ್ನು ಓದುವಾಗ ಮನದಟ್ಟಾಗುತ್ತದೆ. ಈ ಕಥೆಗೆ ಪೂರಕವಾದ ಅನೇಕ ಪುರಾಣ ಕಥೆಗಳು ಇದರಲ್ಲಿದೆ. ಅಲ್ಲದೆ ಇದು ಮಣಿಕಂಠನ ಸ್ವಗತ ವಾಗಿರುವುದರಿಂದ ವಿಶೇಷ ಎಂದು ಅನಿಸುತ್ತದೆ.
ಲೇಖಕರ ನಿರೂಪಣೆ ಶೈಲಿ, ಪದಗಳ ಜೋಡಣೆ, ಸನ್ನಿವೇಶಕ್ಕೆ ತಕ್ಕಂತೆ ಬಳಸಿರುವ ಉಪಮೇಯಗಳು ಕಥೆಯ ಸ್ವಾರಸ್ಯವನ್ನು ಹೆಚ್ಚಿಸುವಂತಿದೆ. ಮೂಲ ಕಥೆಗೆ ಎಲ್ಲೂ ಧಕ್ಕೆ ಬರದಂತೆ ಎಚ್ಚರಿಕೆಯಿಂದ ಜಾಣ್ಮೆಯಿಂದ ಕಥೆಯನ್ನು ಹಣೆದಿರುವುದು ಮನಸೂರೆಗೊಳ್ಳುತ್ತದೆ.
ಕಥೆಯು, ಮಣಿಕಂಠನು ಕಾಯಂಕುಳುದಲ್ಲಿ ವಾವರನನ್ನು ಮಣಿಸಿ ಪಂದಳ ದೇಶಕ್ಕೆ ಹಿಂತಿರುಗುವ ಸನ್ನಿವೇಶದಿಂದ ಪ್ರಾರಂಭವಾಗುತ್ತದೆ. ಹೀಗೆ ವಿಜಯ ಸಾಧಿಸಿ ಮಣಿಕಂಠನು ಸ್ವಸ್ಥಾನಕ್ಕೆ ಹಿಂತಿರುಗುವಾಗ, ತನ್ನ ತಂದೆ ರಾಜಶೇಖರವರ್ಮ ಮಹಾರಾಜರ ಪೂರ್ವಿಕರ ಬಗ್ಗೆ ಹಾಗೂ ಸರ್ವಧರ್ಮ ಸಹಿಷ್ಣುತೆಯನು ಪಾಲಿಸುವ ರಾಜಶೇಖರವರ್ಮ, ಪಂದಳ ರಾಜ್ಯವನ್ನು ಸ್ಥಾಪಿಸಿದರ ವೃತ್ತಾಂತ ಹಾಗೂ ಅವನ ರಾಜ್ಯಭಾರವನ್ನು ಹೆಮ್ಮೆಯಿಂದ ನೆನೆಯುತ್ತಿರುವಾಗ, ಮಹಾರಾಣಿಯಾದ ಆತನ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿದೆ ಅದಕ್ಕೆ ಹುಲಿ ಹಾಲಿನ ಅವಶ್ಯಕತೆ ಇದೆ ಎಂದು ತಿಳಿಯುತ್ತದೆ. ಮಣಿಕಂಠನ ತಾಯಿಯ ಆರೋಗ್ಯವನ್ನು ವಿಚಾರಿಸಲು ಅರಮನೆಗೆ ಹೋದಾಗ ತಾಯಿ ಮತ್ತು ಮಗನ ನಡುವೆ ನಡೆಯುವ ಸಂಭಾಷಣೆಯನ್ನು ಲೇಖಕರು ಭಾವನಾತ್ಮಕವಾಗಿ ವಿವರಿಸಿದ್ದಾರೆ.
ಮಹಾರಾಣಿ ಪೆರುಮಾದೇವಿ ನೀನು ಕಾಡಿಗೆ ಹೋಗಿ ನನಗೆ ಅಪಕೀರ್ತಿ ತರುವೆಯಾ? ಎಂದು ಮಣಿಕಂಠನಿಗೆ ಹೇಳಿದಾಗ, ಆತನಿಗೆ ತಾಯಿಯೇ ನಾನು ಹೆತ್ತ ಮಗ ನೀನಲ್ಲ ಎಂದು ಪರೋಕ್ಷವಾಗಿ ಹೇಳಿದಳೇನೋ ಎಂದೆನಿಸಿ ಮನಸ್ಸಿಗಾಗುವ ನೋವನ್ನು ಓದುತ್ತಿದ್ದರೆ ಕಣ್ಣಂಚಲ್ಲಿ ನೀರನ್ನು ತರಿಸುತ್ತದೆ.
ರಾಜಶೇಖರನು ಮಣಿಕಂಠನಿಗೆ ಪಟ್ಟಾಭಿಷೇಕ ಮಾಡುವ ತಯಾರಿಯಲ್ಲಿ ಇದ್ದಾಗ, ಮಣಿಕಂಠನು ನಾನೇ ಕಾಡಿಗೆ ಹೋಗುತ್ತೇನೆ ಅದಕ್ಕಾಗಿ ನಿಮ್ಮ ಒಪ್ಪಿಗೆ ಬೇಕೆಂದು ಕೇಳಿದಾಗ, ಅವನು ಅವಾಕ್ಕಾಗಿ , ಹೆದರಿ ಹೋಗುತ್ತಾನೆ. ಅವನು ಸಮ್ಮತಿಯನ್ನು ನೀಡುವುದಿಲ್ಲ. ಈ ಪ್ರಸಂಗ ತಂದೆಯ ಮಮತೆ ಪ್ರೀತಿಯನ್ನು ಎತ್ತಿ ಹಿಡಿಯುತ್ತದೆ. ಆಗ ಅಚಾನಕ್ಕಾಗಿ ಯೋಗಿ ಒಬ್ಬರು ಪ್ರತ್ಯಕ್ಷರಾಗಿ ಇವನು ದೈವಾಂಶ ಸಂಭೂತ ಇವನಿಂದ ಮಹತ್ಕಾರ್ಯವಾಗುತ್ತದೆ. ಧೈರ್ಯವಾಗಿ ಇವನನ್ನು ಕಾಡಿಗೆ ಕಳುಹಿಸಿ ಎಂದು ಹೇಳುತ್ತಾರೆ.

ಮಣಿಕಂಠನು ಮಲೆ ಯನ್ನು ಏರಲು ಏಕಾಂಗಿಯಾಗಿ ಹೋದಾಗ ಕಾಡಿನಲ್ಲಿ ಕಾಡೆಮ್ಮೆಗಳು ಧಾಳಿ ಮಾಡುವುದು, ವಾಪುರಾನ್ ಅವುಗಳಿಂದ ರಕ್ಷಿಸಿದ ರೀತಿ, ಏರುಮೆ ಮಲೆ ಎಂದು ಆ ಕಾಡಿಗೆ ಏಕೆ ಹೆಸರು ಬಂತು ಈ ಎಲ್ಲಾ ಕಥೆಗಳು ರೋಚಕವಾಗಿವೆ.
ಶ್ರೀ ಗುರುನಾಥ ಶಿವ ಚೈತನ್ಯರ ಗುರುಕುಲಕ್ಕೆ ಶಸ್ತ್ರ ಶಾಸ್ತ್ರ ವಿದ್ಯಾಭ್ಯಾಸಕ್ಕೆ ತೆರಳಿದ್ದು, ಅಲ್ಲಿ ಚತುರ್ವೇದ, ಶಿಕ್ಷ ,ವ್ಯಾಕರಣ ಜ್ಯೋತಿಷ್ಯಗಳ ಕಠಿಣಾತಿ ಕಠಿಣ ಪ್ರಶ್ನೆಗಳಿಗೆ ಮಣಿಕಂಠ ಉತ್ತರಿಸುತ್ತಿದ್ದ ಪರಿ ನಂತರ ದೃಷ್ಟಿ ಹೀನನಾಗಿದ್ದು ದಿವ್ಯಾಂಗ ನಾಗಿದ್ದ ಬಾಲಕ ಎಂಬ ಹಣೆಪಟ್ಟೆಯನ್ನು ಹೊತ್ತಿದ್ದ ಗುರು ಪುತ್ರನನ್ನು ಮಣಿಕಂಠನು ಪರಿಪೂರ್ಣ ನಾಗಿಸಿದ್ದು, ಕಳರಿಪಟ್ಟು ವಿದ್ಯೆ ಕಲೆಯಲ್ಲಿ ಗುರುವನ್ನು ಮೀರಿಸಿದ ಸನ್ನಿವೇಶವನ್ನು ಲೇಖಕರು ಇಲ್ಲಿ ಕಣ್ಣಿಗೆ ಕಟ್ಟುವ ಹಾಗೆ ಅಪ್ಯಾಯಮಾನವಾಗಿ ಚಿತ್ರಿಸಿದ್ದಾರೆ.
ವಿದ್ಯೆಯಲ್ಲಿ ಯುದ್ಧ ಕಲೆಯಲ್ಲಿ ಅಸಾಧ್ಯ ಪರಿಣಿತಿಯನ್ನು ಪಡೆದ ಮಣಿಕಂಠನನ್ನು ಗುರುಗಳು ದೈವಾಂಶ ಸಂಭೂತ ಎಂದು ಏಕೆ ಕರೆದರೂ ಎನ್ನುವ ಪ್ರಶ್ನೆ, ನಾನೇಕೆ ಇವರಿಗೆ ದೇವರಂತೆ ಕಾಣುತ್ತಿದ್ದೇನೆ ಎಂದು ಮಣಿಕಂಠನಿಗೆ ಕಾಡುವ ದ್ವಂದ್ವ ತೊಳಲಾಟವು ಮನೋಜ್ಞವಾಗಿ ಮೂಡಿಬಂದಿದೆ. ಅಚ್ಚನ್ ಕೋವಿಲ್ ಎಂಬ ಶಾಸ್ತ್ರ ಕ್ಷೇತ್ರಕ್ಕೆ ಮಣಿಕಂಠ ಮತ್ತು ಆತನ ತಮ್ಮ ರಾಜರಾಜ ಗುಡ್ಡ ಬೆಟ್ಟಗಳನ್ನು ದಾಟಿ ಹೋಗುತ್ತಿರುವಾಗ ಆಕಸ್ಮಿಕವಾಗಿ ನಾಗರಹಾವೊಂದು ರಾಜರಾಜನಿಗೆ ಕಚ್ಚಿದ್ದು, ಅಲ್ಲಿ ನಡೆದ ವಿಸ್ಮಯ, ಶ್ರೀ ಧರ್ಮಶಾಸ್ತ್ರನೇ ವೈದ್ಯನಾಗಿ ದರ್ಶನವಿತ್ತ ಪ್ರಸಂಗಗಳು ಸ್ವಾರಸ್ಯಕರವಾಗಿ ಮೂಡಿಬಂದಿದೆ. ಹರಿಹರ ಸುತನಾದ ಶ್ರೀ ಧರ್ಮಶಾಸ್ತ್ರನ ಪುಣ್ಯ ಕಥೆ ಎಲ್ಲವೂ ಇಲ್ಲಿ ಮೂಡಿ ಬಂದಿದೆ.
ಮಣಿಕಂಠನ ಜನ್ಮ ವೃತ್ತಾಂತ ರಾಜಶೇಖರವರ್ಮ ನಿಗೆ ಹಸು ಕೂಸು ಸಿಕ್ಕಿದ ರೀತಿ ಎಲ್ಲವೂ ಮಣಿಕಂಠನಿಗೆ ಕನಸಿನಲ್ಲಿ ಹಾದು ಹೋದ ಕಥೆ, ಆ ಕಥೆ ನಿಜವೆಂದು ತನ್ನ ಹುಟ್ಟಿನಲ್ಲೊಂದು ಮರ್ಮವಿದೆ ಬದುಕಿಗೊಂದು ಗಮ್ಯವಿದೆ ಎಂದು ಕಾಣುವಲ್ಲಿ ಅದನ್ನು ನಾರದರು ಪುರಸ್ಕರಿಸಿದ ರೀತಿ ನಂತರ 12 ವರ್ಷದ ವಯಸ್ಸಿನ ಮಣಿಕಂಠ ಪುಂಗಾವನ ಪ್ರವೇಶಿಸಿ ಮಹಿಷಿಯನ್ನು ಮರ್ದಿಸಿದ ಪ್ರಸಂಗಗಳು ಮೈನವಿರೇಳಿಸುತ್ತದೆ.
ಗಾಲವ ಋಷಿಯ ಮಗಳು ಲೀಲಾ ತನ್ನ ಪತಿಯಿಂದ ಶಾಪಗ್ರಸ್ತಳಾಗಿದ್ದಳು. ಮಣಿಕಂಠನ ಪಾದಸ್ಪರ್ಶದಿಂದ ಶಾಪ ವಿಮೋಚನೆಯಾದ ಈ ಪುಣ್ಯ ಕಥೆ ರಾಮಾಯಣದಂತೆ ಸ್ವಾರಸ್ಯವಾಗಿದೆ.
ನಾರದರ ಭೇಟಿ ಮಹಿಶಿಯ ಪರಾಕ್ರಮ ಮಣಿಕಂಠನ ಸ್ವಸ್ವರೂಪ ದರ್ಶನ, ಭೂತಗಣಗಳ ಸ್ವಾಮಿನಿಷ್ಠೆ, ಮಣಿಕಂಠನಿಗೆ ಜನ್ಮದಾತನನ್ನು ಕಂಡು ಆದ ಆನಂದಮಯ ಕ್ಷಣ, ಋಷಿ ಪತ್ನಿಯ ಕಥೆ ವ್ಯಥೆ, ದೇವೇಂದ್ರನೆ ದಷ್ಟಪುಷ್ಟ ಹೆಣ್ಣು ಹುಲಿಯಾಗಿ ಮಾರ್ಪಟ್ಟು ವಾಯು ವರುಣ ಅಗ್ನಿ ಕುಬೇರರು ಗಂಡು ಹುಲಿಗಳಾಗಿ, ಅಶ್ವಿನಿ ದೇವತೆಗಳು ಮರಿ ಹುಲಿಗಳಾಗಿ, ಹೆಣ್ಣು ಹುಲಿಯ ಮೇಲೇರಿ ಮಣಿಕಂಠ ತನ್ನ ಪಯಣ ಬೆಳೆಸಿದ್ದ ಪ್ರಸಂಗ ನಂತರ ಶಬರರ ಭೇಟಿ, ಶೌರ್ಯಮಲೆ ಯಲ್ಲಿ ಶ್ರೀ ಧರ್ಮಶಾಸ್ತ್ರ ನ ಪ್ರಾಣ ಪ್ರತಿಷ್ಠೆಯ ಕಥೆ, ಶಬರಿಯು ಹರಿಹರಸುತನಿ ಗಾಗಿ ಕಾಯುತ್ತಿದ್ದ ಪ್ರಸಂಗ, ಶೌರ್ಯಮಲೆ ಶಬರಿಮಲೆ ಎಂದು ಲೋಕ ಪ್ರಸಿದ್ಧಿ ಹೊಂದಲು ಕಾರಣ, ಹುಲಿಯ ಸಮೇತ ಮಣಿಕಂಠ ಪಂದಳಕ್ಕೆ ತನ್ನ ತಂದೆಯ ಮುಂದೆ ನಿಂತಾಗ ಪಂಡಿತರು ಮಂತ್ರಿಗಳು ಅವರೊಂದಿಗೆ ಮಹಾರಾಣಿಯೂ ಕೈಜೋಡಿಸಿ ಮಾಡಿದ ಕುಟಿಲತೆಯನ್ನು ಕೇಳಿದ ರಾಜ ಜರ್ಜರಿತನಾದ ಸನ್ನಿವೇಶ ಹಾಗೂ ಉದಯನ್ ಅನ್ನು ಸೋಲಿಸಿ ಶೌರ್ಯಮಲೆಯನ್ನು ಪುನರ್ ನಿರ್ಮಿಸಿ ಮಣಿಕಂಠ ನು ಅಯ್ಯಪ್ಪನಾಗಿ ಶ್ರೀ ಧರ್ಮಶಾಸ್ತ್ರ ನೊಳಗೆ ಐಕ್ಯನಾಗುವ ಬಗೆಯನ್ನು ಲೇಖಕರು ಮನಮುಟ್ಟುವ ಹಾಗೆ ವಿವರಿಸಿದ್ದಾರೆ.
ಎಲ್ಲೂ ಬೇಸರ ತರಿಸದೆ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುವ ಒಂದೊಳ್ಳೆ ಪೌರಾಣಿಕ ಕಾದಂಬರಿ ಶೌರ್ಯಮಲೆ. ರಮೇಶ್ ಶೆಟ್ಟಿಗಾರ್ ಮಂಜೇಶ್ವರ ರವರ ಲೇಖನಿಯ ಮೋಡಿಯಿಂದ ಇನ್ನಷ್ಟು ಪುಸ್ತಕಗಳು ಹೊರಬರಲಿ ಈ ಅಪರೂಪದ ಹೊತ್ತಗೆ ನಿಮ್ಮ ಗ್ರಂಥಾಲಯವನ್ನು ಬೆಳಗಲಿ. ಮಣಿಕಂಠನ ಮಹಿಮೆಯನ್ನು ತಿಳಿಸುವ ಈ ಪುಸ್ತಕ ವಿಮರ್ಶೆ ಮಣಿಕಂಠನ ಕೃಪೆಯನ್ನೂ ಓದುಗರಿಗೆ ಹರಿಸಲಿ.
- ಚೇತನ ಭಾರ್ಗವ – ಅರಮನೆತೋಟ
