ಸೌಭಾಗ್ಯ ಕಡೆಗೆ ತೆರಳಿದ ವ್ಯೆದ್ಯ ‘ಶ್ರೀ ಕೃಷ್ಣಚೊಕ್ಕಾಡಿ’

ಕಳಂಜ ಗ್ರಾಮದಲ್ಲಿ ಏಕಮಾತ್ರ ವ್ಯೆದ್ಯ, 77 ನೇ ವಯಸ್ಸಿನ ‘ಶ್ರೀ ಕೃಷ್ಣ ಚೊಕ್ಕಾಡಿ’ ಅವರ ಕುರಿತು ಲೇಖಕ ಬಾಲು ದೇರಾಜೆ ಅವರು ಬರೆದ ಈ ಲೇಖನವನ್ನು ತಪ್ಪದೆ ಓದಿ….

ಜನರಿಗೆ ಒಂದಲ್ಲ ಒಂದು ಕಾರಣದಿಂದ ಪ್ರಾಮುಖ್ಯವಾಗಿದೆ ವೈದ್ಯಕೀಯ ಚಿಕಿತ್ಸೆ. ಹೀಗಾಗಿ ಹಣಕ್ಕಿಂತ ಜನರೇ ಮುಖ್ಯ ಎಂಬುದು ಸಾಬೀತಾಗಿದೆ ಜನತಾ ಚಿಕಿತ್ಸಾಲಯದಿಂದ. ಇದು ಇರುವುದು ನಮ್ಮ-ನಿಮ್ಮಜನರ ನಡುವೆ, ಬಾಳದಾರಿ ದೀಪಗಳನ್ನು ಕಂಡ‌ ವೈದ್ಯ.

ಹಲವಾರು ವರ್ಷಗಳ ಹಿಂದೆ ದಕ್ಷಿಣ ಕನ್ನಡ -ಪುತ್ತೂರು ತಾಲೂಕಿನ (ಈಗ ಬಂಟ್ವಾಳ ತಾಲೂಕು) ಕೆದಿಲ ಗ್ರಾಮದ ಪಂಜಿಬಲ್ಲೆ ಮನೆಯಲ್ಲಿ ವಾಸಿಸುತ್ತಿದ್ದ ಶ್ರೀ ಶಂಭಟ್ಟರು ಜೀವನೋಪಾಯಕ್ಕಾಗಿ ಹೋಟೆಲ್ ನ್ನು ನಡೆಸುತ್ತಿದ್ದರು. ಇವರ ಪತ್ನಿ ಶ್ರೀಮತಿ ಸೌಭದ್ರಮ್ಮಹಾಗು ಒಂದು ಹೆಣ್ಣು, ಎರಡು ಗಂಡು ಮಕ್ಕಳಲ್ಲಿ ಮೊದಲೆನೆಯವರಾದ ಶ್ರೀ ಕೃಷ್ಣರು ಪುತ್ತೂರು-ಕೆದಿಲ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳಲ್ಲಿ ತಂದೆಯವರು ಹೇಳುತ್ತಿದ್ದ ಪೌರಾಣಿಕ ಕಥೆಗಳಿಂದ ಪುರಾಣ ಜ್ಞಾನದಿಂದಾಗಿ ಸ್ಥಳೀಯ ಯಕ್ಷಗಾನ ಕೂಟಗಳಲ್ಲಿ ಚಿಕ್ಕಪಾತ್ರದ ಅರ್ಥಗಾರಿಕೆಯಲ್ಲಿ ಭಾಗವಹಿಸುತ್ತಿದ್ದರು. ಶಾಲೆಗಳಲ್ಲಿ ಭಾಷಣವನ್ನು ಮಾಡುವುದಲ್ಲದೆ, ಕಲಿಕೆಯಲ್ಲಿ ಬಹುಮಾನಗಳು ಲಭಿಸುತ್ತಿದ್ದವು.

ಕಾಫಿಕುಡಿದ ನಂತರವೇ..ಕಿಟ್ಟಪ್ಪಣ್ಣ……

ಶ್ರೀ ಕೃಷ್ಣರು ವಿದ್ಯಾಭ್ಯಾಸದ ನಂತರ ಉದ್ಯೋಗ ನಿಮಿತ್ತ 1960 ನೇ ಇಸವಿಯಲ್ಲಿ ಸುಳ್ಯ ತಾಲೂಕಿನ ಕುಕ್ಕುಜಡ್ಕಕ್ಕೆ ಬಂದು, ಹಳೆಯ ಎಲ್.ಐ.ಎಂ.ಪದವೀಧರಾದ ಪೈಲೂರು ಡಾ.ಶ್ರೀ ಗೋಪಾಲಕೃಷ್ಣರವರ ಜೊತೆಗೆ ಸಹಾಯಕರಾಗಿ ಸೇರ್ಪಡೆ ಗೊಂಡರು. ರೋಗದ ಪರೀಕ್ಷೆ ಹಾಗೂ ಚಿಕಿತ್ಸೆಯ ಅನುಭವಗಳಿಸಿಕೊಂಡರು. ಅಜ್ಜನ ಗದ್ದೆ ಶ್ರೀ ಗಣಪಯ್ಯಭಾಗವತರು ಹಾಗೂ ಮಗನಾದ ಖ್ಯಾತ ಕವಿ ಶ್ರೀ ಸುಬ್ರಾಯಚೊಕ್ಕಾಡಿಯವರ ಜೊತೆಗೆ ಒಡನಾಟದಿಂದ ಯಕ್ಷಗಾನದಲ್ಲಿ ಅಭಿರುಚಿ ಮತ್ತಷ್ಟೂ ಹೆಚ್ಚಾಗಿದ್ದಲ್ಲದೆ ಸಾಹಿತ್ಯಾಸಕ್ತಿಯೂ ಜಾಸ್ತಿಯಾಯಿತು. ಸುಶ್ರೂಷೆಗಾಗಿ ಚುಚ್ಚುಮದ್ದಿನ ಸಿರಿಂಜಿಯನ್ನು ಬಳಸಿಕೊಂಡಂತೆ, ತನ್ನಸಾಹಿತ್ಯಾಸಕ್ತಿಯಿಂದ ಲೇಖನಿಯನ್ನೂ ಬಳಸಿಕೊಂಡರು.

ಒಂದೆಡೆ ರೋಗಗಳು ವಾಸಿಯಾಯಿತು. ಇನ್ನೊಂದೆಡೆ ಬರಹಗಳು ಜಾಸ್ತಿಯಾಗಿ, “ಶ್ರೀ ಕೃಷ್ಣ ಚೊಕ್ಕಾಡಿ” ಎಂದೆನಿಸಿಕೊಂಡರು. ಶ್ರೀ ಕೃಷ್ಣ ಚೊಕ್ಕಾಡಿಯವರು ಓದುವ ಹವ್ಯಾಸದಲ್ಲಿ ತೊಡಗಿ, ಬರಹಗಳಿಗೆ ಪ್ರಾಮುಖ್ಯತೆ ಕೊಟ್ಟರು. ಪ್ರಜಾವಾಣಿ, ಪ್ರಕಾಶ, ಮನುಕುಲ, ಯುಗಪುರುಷ, ತಾಯಿ ನುಡಿ, ಹೊಸದಿಗಂತ ಮೊದಲಾದ ಪತ್ರಿಕೆಗಳಲ್ಲಿ ಕಥೆ-ಕವನಗಳು ಪ್ರಕಟಗೊಂಡವು. ಅಲ್ಲದೆ ಯಕ್ಷಗಾನ ಕಲಾವಿದರ ಪರಿಚಯ ಲೇಖನಗಳು ಹಾಗೂ ಯಕ್ಷಗಾನ ಪ್ರದರ್ಶನಗಳ ವಿಮರ್ಶಾ ಲೇಖನಗಳನ್ನು ಪತ್ರಿಕೆಗಳ ಮೂಲಕ ಜನರಮುಂದಿಟ್ಟರು.

“ಕೃಷಿಕರ ಸಂಘಟನೆ” ಎಂಬ ಪತ್ರಿಕೆಯಲ್ಲಿ “ಜೀವನಯಾತ್ರೆ” ಕಾದಂಬರಿಯು ಧಾರವಾಹಿಯಾಗಿ ಪ್ರಕಟಗೊಂಡಿದೆ. 1974ನೇ ಇಸವಿಯಲ್ಲಿ ಕಳಂಜ ಗ್ರಾಮದ ಮುಂಡುಗಾರಿನಲ್ಲಿ
“ಜನತಾ ಚಿಕಿತ್ಸಾಲಯ” ವನ್ನು ಪ್ರಾರಂಬಿಸಿದರು. ಜನರ ಒಡನಾಟ ಜಾಸ್ತಿಯಾಯಿತು. ಚಿಕಿತ್ಸಾಲಯಕ್ಕೆ ಬರುವ ರೋಗಿಗಳನ್ನುಸಮರ್ಪಕ ರೀತಿಯಲ್ಲಿ ಪರೀಕ್ಷೆಮಾಡಿ, ಬೇಕಾದ ಗುಳಿಗೆ-ಔಷಧಿಗಳನ್ನು ಕೊಡುದರ ಜೊತೆಗೆ ಸೌಹಾರ್ದಯುತವಾಗಿ ಮಾತನಾಡಿಸಿ ಕಳುಹಿಸುತ್ತಿದ್ದರು.

ಬಿಡುವಿನ ವೇಳೆಯನ್ನುಓದುವುದರಲ್ಲೇ ಕಳೆಯುತ್ತಿದ್ದರು. ಇವರ ಮೊದಲ ಕಥೆ “ರಾಜುಮರಳಿ ಬರಲಾರ” ಪಾಟೀಲ ಪುಟ್ಟಪ್ಪನವರ ಪ್ರಪಂಚಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. 1979ನೇ ಇಸವಿಯಲ್ಲಿ “ನಿರೀಕ್ಷೆ” ಎಂಬ ಕಥಾಸಂಕಲನವು ಪ್ರಕಟಗೊಂಡು, ಕಳಂಜ ಯುವಕ ಮಂಡಲದ ರಜತೋತ್ಸವ ಸಮಾರಂಭದಲ್ಲಿ ಬಿಡುಗಡೆಗೊಂಡಿತ್ತು. ಸುಮನಸಾ ವಿಚಾರವೇದಿಕೆ, ಚೊಕ್ಕಾಡಿಯ ಬಳಗಕ್ಕೆ ಸೇರ್ಪಡೆಗೊಂಡು ಸಾಹಿತ್ಯದಲ್ಲಿ ಮುಂದುವರೆಯಲು ಸಾಧ್ಯವಾಯಿತು.

ಕೆಲವೊಂದುಬಾರಿ ರಾತ್ರಿಗೆ ನಮ್ಮಮನೆಗೆ ಬರುತ್ತಿದ್ದರು.”ನಿಂಗಳೆಲ್ಲಾನೋಡದ್ದೆ-ಮಾತಾಡದ್ದೆ ಅಸಕ್ಕಾಗಿ ಬಂದೆ “ಎಂದು ಅಣ್ಣನಲ್ಲಿ (ದಿ!ಸತ್ಯಮೂರ್ತಿದೇರಾಜೆ) ಹೇಳುತ್ತಿದ್ದರು. ಅಣ್ಣಂದಿರ ಜೊತೆಯಲ್ಲಿ ಯಕ್ಷಗಾನ ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ ಭಾಗಿಯಾಗುತ್ತಿದ್ದರಲ್ಲದೆ,ಪ್ರದರ್ಶನಗಳಲ್ಲಿ ವೇಷಧಾರಿಯಾಗಿಯೂ ಕಾಣಿಸಿಕೊಂಡವರು.ಒಂದು ಬಾರಿ ನಮ್ಮಮನೆಗೆ ಬಂದಾಗ ನಮ್ಮಬಂಧು ವೊಬ್ಬರ ಸೊಂಟನೋವಿನಿಂದಾಗಿ ಮಂಗಳೂರಿನ ಪ್ರಸಿದ್ದ ವ್ಯೆದ್ಯರಿಂದ ನಡೆಯಬೇಕಿದ್ದ ಶಸ್ತ್ರಚಿಕಿತ್ಸೆಯ ವಿಷಯವನ್ನು ತಿಳಿದು, ಅವರಿಗೆ ಚಿಕಿತ್ಸೆ ನೀಡಿ, ಶಸ್ತ್ರಚಿಕಿತ್ಸೆಯಿಂದ ಪಾರುಮಾಡಿದವರು. ವಾಡಿಕೆ ಮಾತಲ್ಲಿ ಹೇಳುದಾದರೆ ಇವರ ಕೈಗುಣ ಒಳ್ಳೆಯದಿದೆ, ಎನ್ನಬಹುದು. ಇದಕ್ಕೆ ಬೇಕಾದಷ್ಟು ನಿದರ್ಶನಗಳಿವೆ. ಕೇವಲ
ತನ್ನ ಪರೀಕ್ಷಾ ಸಾಧನದಿಂದ ಮತ್ತು ಕೈಗಳ ಸ್ಪರ್ಶದಿಂದ ರೋಗದ ವಿವರಗಳನ್ನುತಿಳಿದು ಕೊಂಡು ಅದಕ್ಕೆಸರಿಯಾದ ಚಿಕಿತ್ಸೆಯನ್ನು ನೀಡಿ ಗುಣಪಡಿಸುತ್ತಾರೆ.ಅವರು ಹೇಳಿದ
ನಿಯಮಗಳಿಗೆ ನಾವು ಬದ್ದರಾಗಿರ ಬೇಕಾಗಿರುದು ನಮ್ಮಕರ್ತವ್ಯ.

ಇತ್ತೀಚೆಗಿನ 4 ವರ್ಷಗಳ ಹಿಂದೆ ಕೋಟೆಮುಂಡುಗಾರಿನಲ್ಲಿದ್ದ ಜನತಾ ಚಿಕಿತ್ಸಾಲಯವನ್ನು ಮನೆಯಾದ ” ಸೌಭಾಗ್ಯ “ಕ್ಕೆ ಸ್ಥಳಾಂತರಿಸಿಕೊಂಡು, ವೃತ್ತಿಯ ಕಡೇಗೆ ಗಮನ ಹರಿಸಿದ್ದಾರೆ.
ಇವರ ಪತ್ನಿ ಲಕ್ಷ್ಮಿ,ಮಗಳಿಗೆ ಮದುವೆಯಾಗಿದ್ದು, ಇಬ್ಬರು ಮಗಂದಿರು ಸಂಸಾರಸ್ತರಾಗಿ ಬೆಂಗಳೂರಿನಲ್ಲಿ ನೌಕರಿಯಲ್ಲಿದ್ದಾರೆ. ಶ್ರೀ ಕೃಷ್ಣ ಚೊಕ್ಕಾಡಿ ಯ ರು ಕಳಂಜ ಯುವಕ ಮಂಡಲದ ಉಪಾಧ್ಯಕ್ಷ, ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕ, ಸದಸ್ಯರಲ್ಲೊಬ್ಬರಾಗಿದ್ದು, 10 ವರ್ಷ ಉಪಾಧ್ಯಕ್ಷರಾಗಿದ್ದರು.

ಸಾರ್ವಜನಿಕ ಗಣೇಶೋತ್ಸವ ಸಮಿತಿ, ಕೋಟೆಮುಂಡುಗಾರು ಇದರ ಸ್ತಾಪಕ, ಕಾರ್ಯದರ್ಶಿ, ಸದಸ್ಯರಾಗಿದ್ದರು. ಸುಳ್ಯತಾಲೂಕು19ನೇಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ‘ಕನ್ನಡಸಿರಿ’ ಎಂದು ಸನ್ಮಾನ ಪತ್ರ ನೀಡಿ ಗೌರವಿಸಿದ್ದಾರೆ. ಸುದ್ದಿಬಿಡುಗಡೆ, ಸುಳ್ಯ ಬೆಳ್ಳಿವರ್ಷಾಚರಣೆಯ ಪ್ರಯುಕ್ತ ” ಸುದ್ದಿಗ್ರಾಮೋತ್ಸವ”ಪ್ರಶಸ್ತಿ ಲಭಿಸಿದೆ.
ಇವರು ಯಾವುದಕ್ಕೂ ಪ್ರಚಾರ ಗಿಟ್ಟಿಸಿ ಕೊಂಡವರಲ್ಲ. ಯಾವುದನ್ನೂ ಅಪೇಕ್ಷಿದವರಲ್ಲ.

ಈ ತನಕ ಕಳಂಜಗ್ರಾಮದಲ್ಲಿ ಏಕಮಾತ್ರ ವ್ಯೆದ್ಯರಾಗಿ, ಮನೆಯ ಪಕ್ಕದ ಕೋಣೆಯೊಂದರಲ್ಲಿ ತನ್ನ 77 ನೇವಯಸ್ಸಿನಲ್ಲಿ ವ್ಯೆದ್ಯಕೀಯ ವೃತ್ತಿಯನ್ನು ಮುಂದುವರೆಸುತ್ತಿದ್ದು, ಊರಿಗೇ ಶ್ರೀ ಕೃಷ್ಣ ಚೊಕ್ಕಾಡಿಯಾಗಿ, ಹಿಂದಿನಿಂದಲೂ – ಈಗಲೂ ನಮ್ಮೊಳಗಿನ ಒಡನಾಟದಿಂದ ನಮಗೆ ಇವರು ಕಿಟ್ಟಪ್ಪಣ್ಣ..ನೇ…


  • ಬಾಲು ದೇರಾಜೆ, ಸುಳ್ಯ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW