ಈ ದುಸ್ಥರ ಕಾಲಘಟ್ಟದಲ್ಲಿ ಮಾಂಟೋ ಇರಬೇಕಿತ್ತು

ಮಾಂಟೋ ಹಿಂದೂಸ್ಥಾನದಲ್ಲೂ, ಪಾಕಿಸ್ತಾನದಲ್ಲೂ ಬದುಕಿದ್ದ, ಕೋಮು ಗಲಭೆಯಲ್ಲಿ  ಒಂದು‌ ಲಕ್ಷ ಮುಸಲ್ಮಾನರು, ಒಂದು ಲಕ್ಷ ಹಿಂದೂಗಳು ಸತ್ತರೂ‌ ಅನ್ನುವುದು ಸರಿಯಲ್ಲ. ಬದಲಾಗಿ ಎರಡು ಲಕ್ಷ ಮನುಷ್ಯರು ಸತ್ತರು ಎನ್ನುವ ಅವನ ಮಾತು ಅವನೊಬ್ಬ ಮಾನವತಾವಾದಿ ಎಂದು ಎತ್ತಿ ತೋರಿಸುತ್ತದೆ. ಸೂಕ್ಷ್ಮಮನಸ್ಸಿನ ಕಥೆಗಾರ ಮಾಂಟೋವಿನ ಕುರಿತು ಲೇಖಕ ರಂಜಿತ್ ಕವಲಪಾರ ಅವರು ಬರೆದ ಲೇಖನವನ್ನು ತಪ್ಪದೆ ಓದಿ….

ಭಯೋತ್ಪಾದನೆ, ಕೋಮು ಸಂಘರ್ಷದ ಈ‌‌ ಕಾಲಘಟ್ಟದಲ್ಲಿ ಮಾಂಟೋ ಇರಬೇಕಿತ್ತು.

ನಾನು ಇತಿಹಾಸ ಓದುವುದಿಲ್ಲ. ಅದಕ್ಕೆ ಬಹುಮುಖ್ಯ ಕಾರಣ ಎಂದರೆ ಇತಿಹಾಸದಲ್ಲಿ ಆ ಕಾಲಘಟ್ಟದಲ್ಲಿ ಬದುಕಿದ ಸಾಮಾನ್ಯ ಜನರ ಕಥೆಗಳು ನಮಗೆ ಬಹುತೇಕ ಕಾಣುವುದಿಲ್ಲ. ಸಾದತ್ ಹಸನ್ ಮಾಂಟೋ ಅನ್ನುವ ಉರ್ದು ಕಥೆಗಾರನ ಮೊದಲ ಪರಿಚಯ ಆಗಿದ್ದು ನನಗೆ ಕೆಂಡ ಸಂಪಿಗೆಯಲ್ಲಿ ಬಂದ ಭಾರತಿ ಬಿ.ವಿ ಅವರ ‘ಯಕ್’ ಕಥೆಯ ಮೂಲಕ. ಅವರನ್ನು ಬಹುವಾಗಿ ಕಾಡಿ, ಇನ್ನಷ್ಟು ಕಥೆಗಳನ್ನು ನಾನು ಕನ್ನಡಕ್ಕೆ ಅನುವಾದ ಮಾಡುವಂತೆ ಒತ್ತಾಯಿಸಿದ ನಂತರ ಅವರು ಒಂದಿಷ್ಟು ಮಾಂಟೋ ಕಥೆಗಳನ್ನು ಅನುವಾದಿಸಿ ಅದು ಬಹುರೂಪಿ ಪ್ರಕಾಶನದ ಮೂಲಕ ಅದೇ ‘ಯಕ್’ ಅನ್ನುವ ಹೆಸರಿನಲ್ಲಿ ಪ್ರಕಟವಾಯಿತು. ಪುಸ್ತಕ ತರೆಸಿಕೊಂಡೆ. ಪುಸ್ತಕ ಬರುವುದಕ್ಕೂ ಮುನ್ನ ಅದೇ ಕೆಂಡ ಸಂಪಿಗೆಯಲ್ಲಿ ಪುಸ್ತಕದಿಂದ ಆಯ್ದ ‘ದಾದ ಮೊಹಮ್ಮದ್’ ಕಥೆಯನ್ನು ಪ್ರಕಟಿಸಿದ್ದನ್ನು ಓದಿ ರೋಮಾಂಚಿತನಾಗಿದ್ದೆ.

‌ಕೆಲ ವಿಮರ್ಶಕರು ಭಾರತ-ಪಾಕಿಸ್ತಾನ ವಿಭಜನೆಯ ಕಥೆಗಳನ್ನು ಮಾಂಟೋವಿನಷ್ಟು ಪರಿಣಾಮಕಾರಿಯಾಗಿ ಇನ್ಯಾರೂ ಬರೆದೇ ಇಲ್ಲಾ ಅನ್ನುತ್ತಾರೆ. ಆದರೆ ಬಿ.ವಿ ಭಾರತಿಯವರ ಆಯ್ಕೆ ವಿಭಜನೆಯ ಕಥೆಗಳಿಗಿಂತ ಭಿನ್ನ ಕಥೆಗಳಾಗಿತ್ತು‌. ಮಾಂಟೋ ನವಿರಾದ ಪ್ರೇಮಕಥೆಯನ್ನೂ ಬರೆದಿದ್ದ, ಮಾನವೀಯ ನೆಲಗಟ್ಟಿನ ಬುಡವನ್ನೇ ಅಲುಗಾಡಿಸುವ ರೀತಿಯಲ್ಲಿ ಆತ ಹೃದಯ ಸ್ಪರ್ಶಿ ಘಟನೆಗಳನ್ನು ಪದಗಳಿಗೆ ಇಳಿಸುವಂತಹಾ ಚಾಣಾಕ್ಷ ಕಥೆಗಾರನಾಗಿದ್ದ. ಅವನ ಕಥಾಜಗತ್ತು ಸ್ವತಂತ್ರವಾಗಿತ್ತು ಹಾಗೂ ಅದು ವಿಶಾಲವಾಗಿತ್ತು ಎನ್ನುವುದನ್ನು ಅವರ ‘ಯಕ್’ ಸಂಕಲನ ಹೇಳುವ ಪ್ರಯತ್ನ ಮಾಡಿದೆ.

ಆ ಪುಸ್ತಕದ ಓದಿನ ನಂತರ ಮಾಂಟೋನ ಇನ್ನಷ್ಟು ಕನ್ನಡಾನುವಾದಕ್ಕಾಗಿ ಹುಡುಕಿದಾಗ ‘ಸದ್ಯಕ್ಕಿದು ಹುಚ್ಚರ ಸಂತೆ’ ಪುಸ್ತಕ ಸಿಕ್ಕಿತು. ಹಸಂ ನಯೀಂ ಸುರಕೋಡ ಅವರು ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದನ್ನು ಓದುತ್ತಾ ಹೋದಂತೆ ನನಗೆ ಮಾಂಟೋ ಒಬ್ಬ‌ ಚತುರ ಕಥೆಗಾರ ಅನ್ನುವುದು ಇನ್ನಷ್ಟು ಸಾಬೀತಾಯಿತು. ವಿಭಜನೆಯ ಕಥೆಗಳನ್ನು ಆತ ಕಣ್ಣಾರೆ ಕಂಡು, ಅನುಭವಿಸಿ, ತಣ್ಣಗೆ ಹೇಳುವ ಪರಿಯಿದೆಯಲ್ಲಾ ಅದು ಓದುಗನ ರಕ್ತ ಹೆಪ್ಪುಗಟ್ಟಿಸುವ ಅನುಭವ ಕೊಡುತ್ತದೆ. ಆತ ಸಾವನ್ನು ಸಹಜವೆನ್ನುವಂತೆ ಬರೆದಿದ್ದಾನೆ ಅನ್ನಿಸುತ್ತದೆ. ಲಕ್ಷಾಂತರ ಮಂದಿ ವಿನಾಕಾರಣ ಸಾಯುತ್ತಿದ್ದರೆ, ಅದನ್ನು ಕಥೆಗಾರನೊಬ್ಬನ ಸೂಕ್ಷ್ಮ ಕಣ್ಣುಗಳು ಕಾಣುತ್ತಿದ್ದರೆ, ಒಂದಿಷ್ಟು ಸಾವಿನ ನಂತರ ಅದು ಸಹಜ ಅನ್ನಿಸುವುದು ಸಾಮಾನ್ಯವೇ. ಮಾಂಟೋಗೆ ಸುಮಾರು 75ವರ್ಷಗಳ ಹಿಂದೆ ಇದ್ದ ಧೈರ್ಯ, ಹುಚ್ಚುತನ, ಆಸಕ್ತಿ ಬೆರಗುಂಟು ಮಾಡುತ್ತದೆ.

ಕ್ರೌರ್ಯವನ್ನು ಆತ ದಾಖಲಿಸಿರುವ ಪರಿ ಆಪ್ತ ಹಾಗೂ ಹೃದಯ ಸ್ಪರ್ಶಿಯಾಗಿದೆ. ಅಸಲಿಗೆ ಮಾಂಟೋ ಇಷ್ಟವಾಗುವುದು ಆತ ಬರೆದ ಸಾಮಾನ್ಯರ ಕಥೆಗಳಿಂದ. ವಿಭಜನೆಯಂತಹಾ ತುರ್ತು ಪರಿಸ್ಥಿತಿಯಲ್ಲೂ ಪ್ರೇಮಿಗಳು ಪ್ರೇಮಿಸುತ್ತಾರೆ, ಕಾಮಿಸುವವರು‌ ಕಾಮಿಸುತ್ತಾರೆ, ಎಂತಹಾ ದುರಂತ ಕಣ್ಣಮುಂದೆ ನಡೆಯುತ್ತಿದ್ದರು‌ ಮನುಷ್ಯ ಸಹಜ ಗುಣಗಳಿಂದ ಆತ ಕಳಚಿಕೊಳ್ಳದೆ ಬದುಕಲು ಹವಣಿಸುವುದನ್ನು ಮಾಂಟೋ ಹೇಳುತ್ತಾನೆ. ಸಂದರ್ಭದ ದುರ್ಬಳಕೆ, ಭಯ, ಆತಂಕ, ಪ್ರೀತಿ, ಕ್ರೌರ್ಯ, ಕಾಮ, ಹಸಿವು, ದಾಹ ಜೊತೆಗೆ ಒಂದಿಷ್ಟು ಹಾಸ್ಯಪ್ರಜ್ಞೆಯನ್ನೂ ಇಟ್ಟುಕೊಂಡು ಕಥೆಕಟ್ಟುವ ಮಾಂಟೋ ಸಾರ್ವಕಾಲಿಕ ಕಥೆಗಾರ.

ಒಂದು‌ ಲಕ್ಷ ಮುಸಲ್ಮಾನರು, ಒಂದು ಲಕ್ಷ ಹಿಂದೂಗಳು ಕೋಮುಗಲಭೆಯಲ್ಲಿ ಸತ್ತರೂ‌ ಅನ್ನುವುದು ಸರಿಯಲ್ಲ. ಎರಡು ಲಕ್ಷ ಮನುಷ್ಯರು ಸತ್ತರು ಅನ್ನುವುದು ಸರಿ ಎನ್ನುವ ಮಾಂಟೋ ಮಾನವತಾವಾದಿ ಹೌದು. ಮನುಷ್ಯನ ಸಾವಿಂದ, ಚಾಕು, ಚೂರಿ, ಬಂದೂಕಿನಿಂದ ಧರ್ಮಗಳನ್ನು ಅಳಿಸಲು ಸಾಧ್ಯವಿಲ್ಲ ಅನ್ನುವ ಆತ ಧರ್ಮದ ಹೆಸರಿ‌ನಲ್ಲಿ ಸಾವುಗಳು ಸಂಭವಿಸಿತ್ತಾ ಹೋದಂತೆ ಧರ್ಮಗಳು ಇನ್ನಷ್ಟು ‌ಛಲವಾಗುತ್ತದೆಯೇ ಹೊರತು ಧರ್ಮಗಳನ್ನು ಕೊಲೆಗಳಿಂದ ನಿರ್ನಾಮ ಮಾಡಲು ಸಾಧ್ಯವಿಲ್ಲ‌ ಎಂದು ಛಲವಾಗಿ ನಂಬುತ್ತಾನೆ.

ಹಿಂದೂಸ್ಥಾನದಲ್ಲೂ, ಪಾಕಿಸ್ತಾನದಲ್ಲೂ ಬದುಕಿದ ಆತನ ಬದುಕು ಅವನ ಕಥೆಗಷ್ಟು ಶ್ರೀಮಂತಿಕೆಯಿಂದ ಇರಲಿಲ್ಲ, ಮಾಂಟೋನ ವೈಯುಕ್ತಿಕ ಬದುಕು ಯಾರಿಗೂ ಆದರ್ಶವಲ್ಲಾ. ಒಂದು‌‌ ಕೈಯಲ್ಲಿ ಲೇಖನಿ, ಮತ್ತೊಂದು ಕೈಯಲ್ಲಿ ಹೆಂಡದ ಗ್ಲಾಸು ಹಿಡಿದುಕೊಂಡಿದ್ದ ಆತನ ಲೇಖನಿಗಳಿಸಿದ್ದನ್ನೆಲ್ಲಾ ಮತ್ತೊಂದು ಕೈಯಲ್ಲಿದ್ದ ಹೆಂಡ ನುಂಗಿ ಹಾಕುತ್ತಿತ್ತು. ಪಾಕಿಸ್ತಾನಕ್ಕೆ ಹೊರಟು ಹೋದ ಮಾಂಟೋ ಅಲ್ಲಿನ ಬಿಕ್ಕಟ್ಟಿನ ಹೊಡೆತಕ್ಕೆ, ಜೊತೆಗೆ ಅತಿಯಾದ ಹೆಂಡದ ದೆಸೆಯಿಂದ ಎರಡೆರಡು ಬಾರಿ ಹುಚ್ಚಾಸ್ಪತ್ರೆಗೆ ದಾಖಲಾಗ ಬೇಕಾಯಿತು.

ಸೂಕ್ಷ್ಮಮನಸ್ಸಿನ ಕಥೆಗಾರ ಮಾಂಟೋಗೆ ವಿಭಜನೆಯಿಂದ ಉಂಟಾದ ಹಿಂಸಾಚಾರ ಮಾನಸಿಕ ನೆಮ್ಮದಿ ಭಂಗಮಾಡಿದೆ ಅನ್ನುವುದು ನಿಜ. ಮಾಂಟೋ ನೆಮ್ಮದಿ ಕಂಡುಕೊಳ್ಳುವಲ್ಲಿ ಕೊನೆವರೆಗೂ ಸಫಲನಾಗಿಲ್ಲ ಅನ್ನುವುದು ಅವನ ಬದುಕಿನ ದುರಂತ.

ಜೀವನದ ದೃಷ್ಟಾಂತಗಳನ್ನು ದಾಖಲಿಸಿದ ಕಥೆಗಾರನ ಬದುಕು ದೃಷ್ಟಾಂತ ವೃತ್ತದಲ್ಲಿ ಒಂದು ದುರಂತ ಕಥೆಯಂತೆ ಅಂತ್ಯವಾಗುತ್ತದೆ. ಸಂಪಾದಕರ ಎದುರಿಗೆ ಕುಳಿತುಕೊಂಡೇ ಕಥೆ ಬರೆದು ಕೊಟ್ಟು, ಹೆಂಡಕ್ಕೆ ಕಾಸು ಗಿಟ್ಟಿಸಿಕೊಂಡು ಹೋಗುತ್ತಿದ್ದ ಮಾಂಟೋ ಇನ್ನಷ್ಟು ಕಾಲ ಬದುಕ ಬೇಕಿತ್ತು ಅಂತ ನನಗೆ ಈಗಲೂ ಅನಿಸುತ್ತದೆ.

‘ಓಪನ್ ಮಾಡು’ ಕಥೆಯೊಂದಕ್ಕೆ ಪಾಕಿಸ್ತಾನದಲ್ಲಿ ಮೂರು ತಿಂಗಳು ಜೈಲು ಶಿಕ್ಷೆಗೆ ಗುರಿಯಾದ ಮಾಂಟೋ ಒಂದಿಷ್ಟು ಕಾಲ ತಲೆಮರೆಸಿಕೊಂಡು ಬದುಕ ಬೇಕಾಗುತ್ತದೆ. ಆತ ಮನಸ್ಸು ಮಾಡಿದರೆ ಸಿನಿಮಾ ಕಥೆಗಳಲ್ಲೇ ಸಾಕಷ್ಟು ದುಡಿದು, ನೆಮ್ಮದಿಯಾಗಿ ಬದುಕಬಹುದಿತ್ತು. ದಿನಾ ಕುಡಿದು ಬರುವ ಗಂಡನನ್ನು ಸುಧಾರಿಸುವ ದಾರಿದ್ರ್ಯ ಆತನ ಹೆಂಡತಿಗೆ ತಪ್ಪುತ್ತಿತ್ತು. ವಿಭಜನೆಯ ಹೊಡೆತಕ್ಕೆ ಮಾನಸಿಕ ಆಘಾತಗೊಂಡಿದ್ದ ಆತ ಅತೃಪ್ತ ಆತ್ಮನಂತಾಗಿ ಹೋಗಬೇಕಾಗಿ ಇರಲಿಲ್ಲ.

ಮಾಂಟೋ ಕಥೆಗಳು ಆತನ ಅನುಭವದ ಮೂಸೆಯಿಂದ ರೂಪಿತಗೊಂಡಿದ್ದೆ ಹೊರತು ಕೇಳಿ, ಓದಿ ರಚಿಸಲ್ಪಟ್ಟದ್ದಲ್ಲ. ಹಾಗಾಗಿ ಆತನ ಸಾವಿನ ನಂತರವೂ ಕಥೆಗಳು‌ ಇನ್ನೂ ಜೀವಂತವಾಗಿದೆ. ಇತಿಹಾಸವನ್ನು ಜನಸಾಮಾನ್ಯರ ಕಥೆ ಹೇಳುವ ಮೂಲಕ ದಾಖಲಿ ಸಿಡುವುದು ಭಾರತೀಯ ಸಾಹಿತ್ಯಕ್ಕೆ ಈಗಲೂ ಅವಶ್ಯಕತೆ ಇದೆ. ಭಯೋತ್ಪಾದನೆ, ಕೋಮು ಸಂಘರ್ಷಗಳ ಈ‌ ಕಾಲಘಟ್ಟದಲ್ಲಿ ಮಾಂಟೋನಂತಹ ನಿಷ್ಠುರ ಕಥೆಗಾರರೂ ಇರಬೇಕಿತ್ತು ಎಂದು ನನಗೆ ಅನ್ನಿಸುತ್ತಿದೆ. ತೆಳ್ಳನೆಯ ದೇಹದ, ಶ್ವಾಸಕೋಶದಲ್ಲಿ ಸೋಂಕಿದ್ದ, ಗಟ್ಟಿ ಮನಸ್ಸಿನ ಕಥೆಗಾರ ಮಾಂಟೋ ನನ್ನನ್ನು ಬಲುವಾಗಿ ಕಾಡುತ್ತಿದ್ದಾನೆ.

ಕಡಲು, ಭೂಮಿ ಒಂದಾದಂತೆ ಕಾಣುವ ದಿಕ್ಕಿನತ್ತಾ ಮಾಂಟೋವನ್ನು ಹುಡುಕುತ್ತಾ ಹೊರಡಬೇಕು ಅಂತಲೂ ಅನ್ನಿಸ ತೊಡಗಿದೆ. ಮಾಂಟೋ ಜೀವಿಸಿ ಬರೆದ. ಮಾಂಟೋನ ಹುಡುಕಾಟಕ್ಕೆ ಅಷ್ಟು ದೂರ ಹೋಗುವುದು ಬೇಡ ಅನ್ನುವ ಅರಿವು ನನ್ನೊಳಗೆ ಜಾಗೃತವಾಗಿದೆ. ಇನ್ನಷ್ಟು ಮಾಂಟೋ ಬೇಕು ಅನ್ನಿಸುತ್ತಿರುವುದರಿಂದ ಮತ್ತೊಂದು ಪುಸ್ತಕವನ್ನು ಇದು‌ ಬರೆದು ಮುಗಿಸಿ ಹುಡುಕಿ ತರೆಸಲಿದ್ದೇನೆ.


  • ರಂಜಿತ್ ಕವಲಪಾರ –  ಪತ್ರಕರ್ತರು, ಲೇಖಕರು, ಮಡಿಕೇರಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW