‘ಯುಗಾದಿ’ ಪುಸ್ತಕ ಪರಿಚಯ – ಎನ್.ವಿ.ರಘುರಾಂ

ವಸುಧೇಂದ್ರರವರು ಬರೆದ ‘ಯುಗಾದಿ’ ಪುಸ್ತಕಕ್ಕೆ ‘ಯು.ಆರ್.ಅನಂತಮೂರ್ತಿ’ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಪ್ರಶಸ್ತಿ ಪಡೆದ ಕಥಾ ಸಂಕಲನ. ಯುಗಾದಿ ಪುಸ್ತಕದ ಕುರಿತು ಲೇಖಕ ಎನ್.ವಿ.ರಘುರಾಂ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಓದಿ…

ಹೆಸರು : ಯುಗಾದಿ
ಸಾಹಿತಿ : ವಸುಧೇಂದ್ರ
ಕಾವ್ಯ ಪ್ರಕಾರ : ಕಥಾಸಂಕಲನ

ಪ್ರಕಾಶನ : ಛಂದ ಪುಸ್ತಕ ಪ್ರಕಾಶನ
ಏಳನೇಯ ಮುದ್ರಣ :೨೦೧೭
ಪ್ರಥಮ ಮುದ್ರಣ : ೨೦೦೪

ವಸುಧೇಂದ್ರ ಬರೆದ ‘ತೇಜೋ-ತುಂಗಭದ್ರ’ ಕಾದಂಬರಿ ಅನೇಕ ಪ್ರಶಸ್ತಿಗಳನ್ನು ಪಡೆದಿದೆ. ಈ ಪುಸ್ತಕ, ಇತ್ತೀಚಿಗೆ ಇಂಗ್ಲೀಷ್ ಭಾಷೆಗೆ ಅನುವಾದಗೊಂಡು ಪ್ರಕಟವಾಗಿದೆ. ಕನ್ನಡದ ಇತ್ತೀಚಿನ ದಿನಗಳಲ್ಲಿ ಬಹು ಚರ್ಚಿತ ಬರಹಗಾರರಲ್ಲಿ ಒಬ್ಬರಾದ ಇವರು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ೧೯೬೯ರಲ್ಲಿ ಜನಿಸಿದರು. ವಸುಧೇಂದ್ರ ಸುರತ್ಕಲ್ ನಿಂದ ಇಂಜಿನಿಯರಿಂಗ್ ಪದವಿ ಮತ್ತು ಇಂಡಿಯನ್ ಇನ್ಸಸ್ಟಿಟ್ಯೂಟ್ ಆಫ್ ಸೈನ್ಸ್ ನಿಂದ ಎಂ.ಇ. ಪದವಿ ಪಡೆದಿದ್ದಾರೆ. ೨೦ ವರ್ಷಗಳ ಕಾಲ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿ, ಈಗ ಸಂಪೂರ್ಣವಾಗಿ ಬರಹದಲ್ಲಿ ಮತ್ತು ತಮಗಿಷ್ಟವಾದ ಚಾರಣದಲ್ಲಿ ನಿರತರಾಗಿದ್ದಾರೆ. ಛಂದ ಪುಸ್ತಕ ಎಂಬ ಪ್ರಕಾಶನ ನಡೆಸುತ್ತಿದ್ದಾರೆ. “ಓದಿ, ಓದಿ ಮರುಳಾಗಿ!” ಅವರ ಪ್ರಕಾಶನದ ಟ್ಯಾಗ್ ಲೈನ್!

ಅನೇಕ ಕಥಾ ಸಂಗ್ರಹಗಳು, ಪ್ರಬಂಧ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾರೆ. “ನಮ್ಮಮ್ಮ ಅಂದ್ರೆ ನಂಗಿಷ್ಟ” ಪ್ರಬಂಧ ಸಂಕಲನ ಬಹಳ ಮುದ್ರಣಗಳನ್ನು ಕಂಡಿರುವುದಲ್ಲದೇ ಕೆಲವು ಭಾಷೆಗಳಿಗೆ ಅನುವಾದಗೊಂಡಿದೆ. ಈ-ಕಾಮರ್ಸ್’ ಇವರು ಬರೆದ ವಿಜ್ಞಾನದ ಕೃತಿ. ಅದೃಶ್ಯ ಕಾವ್ಯ (ಆಯ್ದ ಸುಲಲಿತ ಪ್ರಬಂಧಗಳ ಸಂಕಲನ) *ಬ್ರೈಲ್‌ ಲಿಪಿಯಲ್ಲಿ* ಪ್ರಕಟವಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯಶ್ರೀ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನಗಳ ಜೊತೆಗೆ ಅನೇಕ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಪಡೆದಿದ್ದಾರೆ. ಇವರು ಛಂದ ಪುಸ್ತಕ ಪ್ರಕಾಶನದಿಂದ ನಡೆಸುವ ಕಥಾಸ್ಪರ್ಧೆ ಓಳ್ಳೆಯ ಹೆಸರುಗಳಿಸಿದೆ. ಇತ್ತೀಚಿಗೆ ಕಥಾಕಮ್ಮಟಗಳನ್ನು ಹಮ್ಮಿಕೊಂಡು ಹೊಸ ಬರಹಗಾರರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಪುಸ್ತಕ ಪರಿಚಯ :

ಪ್ರತಿವರ್ಷ ಚೈತ್ರ ಮಾಸದಲ್ಲಿ ಬರುವ ಯುಗಾದಿ ಹಬ್ಬದ ಸಮಯದಲ್ಲಿ ಹಳೆಯ ಒಣಗಿದ ಎಲೆಗಳು ಉದುರಿ ಹೊಸ ಚಿಗುರು ಮೂಡಿ ಎಲ್ಲಡೆ ಪ್ರಕೃತಿ ನಳನಳಿಸಿದರೆ, ನಾವೆಲ್ಲ ಹಳೆಯ ಪಂಚಾಂಗ ತೆಗೆದು ಹೊಸ ಪಂಚಾಂಗವನ್ನಿಟ್ಟು ಪೂಜೆ ಮಾಡುವುದು ಬಹಳ ಕಾಲದಿಂದ ನಡೆದು ಬಂದಿದೆ. ಹೊಸ ಪಂಚಾಂಗ ಬರುವುದಕ್ಕೆ ಯುಗಾದಿ ಬರಬೇಕಾದಂತೆ ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಅವಿಷ್ಕಾರಗಳು ಯುಗಾದಿಗೆ ಕಾಯುವುದಿಲ್ಲ. ಆದರೆ ಹೊಸದೊಂದು ತಂತ್ರಜ್ಞಾನ ಎಲ್ಲರ ಮನೆ ಮುಟ್ಟಿದಾಗ ಅದು ಹೊಸ ಜೀವನದ ಪರಿಯನ್ನು ಪರಿಚಯಿಸುವುದನ್ನು ಕೈಗಾರಿಕಾ ಕ್ರಾಂತಿಯ ದಿನಗಳಿಂದಲೇ ನೋಡುತ್ತಿದ್ದೇವೆ. ಅದೇ ತರಹ ತೊಂಬತ್ತರ ದಶಕ ಪ್ರಾರಂಭದಲ್ಲಿ ಮಾಡಿದ ಅರ್ಥಿಕ ಸುಧಾರಣೆಗಳು ಮತ್ತು ಜಾಗತೀಕರಣದ ಫಲವಾಗಿ ಬಂದ ಗಣಕಯಂತ್ರ ನಮ್ಮ ನಡೆಯನ್ನು ಬದಲಾವಣೆ ಮಾಡಲು ಪ್ರಾರಂಭಮಾಡಿ ಈ ಶತಮಾನದ ಪ್ರಾರಂಭದ ಹೊತ್ತಿಗೆ ಎಲ್ಲಾ ಕಡೆ ವ್ಯಾಪಕವಾಗಿ ಹರಡಿತ್ತು. ಗಣಕಯಂತ್ರ ಮತ್ತು ಮಾಹಿತಿ ತಂತ್ರಜ್ಞಾನ, ಕೇವಲ ಆ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಲ್ಲಿ ಮಾತ್ರವಲ್ಲದೇ ಸಮಾಜದ ಎಲ್ಲ ಜನರ ಮೇಲೆ ಬೇರೆ, ಬೇರೆ ರೀತಿಯಲ್ಲಿ ಪ್ರಭಾವ ಬೀರಿದೆ. ಈ ಪ್ರಭಾವಗಳು ಈ ಶತಮಾನದ ಪ್ರಾರಂಭದಲ್ಲಿ ಕಂಡಂತೆ ಲೇಖಕರು ಚಿತ್ರಿಸಿರುವುದರಿಂದ ಇದನ್ನು ಯುಗದ + ಅದಿ =ಯುಗಾದಿ ಎಂಬ ಶೀರ್ಷಿಕೆ ಕೊಟ್ಟಿರುವುದು ಒಂದು ರೀತಿಯ ಅನ್ವರ್ಥನಾಮವಾಗಿದೆ.

ಇದೊಂದು ಸಣ್ಣ ಕಥೆಗಳ ಸಂಗ್ರಹ. ಪ್ರಾರಂಭವಾಗುವುದು ಯಾವುದೇ ಶೀರ್ಷಿಕೆ ಇಲ್ಲದ ಒಂದು ಬರಹದ ಮೂಲಕ. ಲೇಖಕರು ವಿದೇಶಕ್ಕೆ ಹೊರಟು ನಿಂತಿದ್ದಾರೆ. ಆಗ ಪ್ರತಿ ಬಾರಿ ವಿದೇಶಕ್ಕೆ ಹೊರಟಾಗಲೂ ‘ಬಡಾನ ಬಂದು ಬಿಡು, ತಡ ಮಾಡಬೇಡ’ ಎನ್ನುತ್ತಾ, ಕಾಲಿಗೆ ನಮಸ್ಕರಿಸಿದಾಗ ‘ಸುಸೂತ್ರ ಹೋಗಿ ಬಾಪ್ಪ’ ಎಂದು ಆಶೀರ್ವಾದ ಮಾಡುತ್ತಾ, ಕಾರು ಕಣ್ಮರೆಯಾಗುವರೆಗೂ ಬಾಗಿಲ ಬಳಿ ನಿಂತು ಕೈ ಬೀಸುತ್ತಾ ನಿಲ್ಲುತ್ತಿದ್ದ ತಂದೆ ತಾಯಿಯರಿಬ್ಬರೂ ಲೇಖಕರಿಗೆ ನೆನಪಾಗುತ್ತಾರೆ. ಈಗ ತಂದೆ ತಾಯಿ ಇಬ್ಬರೂ ಇಲ್ಲ. ಈ ಸಾರಿ ಮನೆ ಬಿಟ್ಟು ಹೊರಟಾಗ ಮನೆಯ ಮೇಲಿನ ಸಾಮಾನುಗಳ ಮೇಲೆ ಧೂಳಾಗುವುದು ತಪ್ಪಿಸಲು ಅಪ್ಪ, ಅಮ್ಮನ ಹಳೆಯ ವಸ್ತ್ರಗಳಿಂದ ಮುಚ್ಚಿ ಹೊರಡುತ್ತಾರೆ. ಪಾಸ್ ಫೋರ್ಟ ಮರೆತಿದ್ದು ನೆನಪಾಗಿ ಮತ್ತೆ ಬಾಗಿಲು ತೆರೆದಾಗ ‘ಮನೆಯ ತುಂಬೆಲ್ಲಾ ಅಪ್ಪ-ಅಮ್ಮ ನಿಂತಿದ್ದರು!’ ಎನ್ನುತ್ತಾರೆ. ಕೆಲವು ಕ್ಷಣಗಳ ನಂತರ ಅವೆಲ್ಲ ಅವರ ಬಟ್ಟೆ ಹೊದ್ದು ನಿಂತ ನಿರ್ಜೀವ ವಸ್ತುಗಳೆಂದು ಮತ್ತೆ ಅರಿವಾಗುತ್ತದೆ. ‘ಅರ್ಪಣೆ’ ಪದ ಉಪಯೋಗಿಸದೆ ತಂದೆ, ತಾಯಿಯರಿಬ್ಬರಿಗೂ ಕೃತಿ ಅರ್ಪಣೆ ಮಾಡಿರುವ ರೀತಿ ಮನಸ್ಸಿಗೆ ಬಹಳ ಆಪ್ತವಾಗುತ್ತದೆ.

ಮೊದಲ ಕಥೆಯೇ ‘ಯುಗಾದಿ’. ಗೋಪಣ್ಣ ಮೇಷ್ಟ್ರು ಸೇವೆಯಲ್ಲಿ ಇದ್ದಾಗ “ಖಡಕ್ ಮಾಸ್ತರ್ ” ಎಂದು ಹೆಸರು ತೆಗೆದುಕೊಂಡವರು. ಮಗನೂ ಅಪ್ಪನೊಡನೆ ಒಂದು ಬಗೆಯ ಹೆದರಿಕೆಯಿಂದಲೇ ನಡೆದುಕೊಳ್ಳುತ್ತಿದ್ದ. ಒಬ್ಬನೇಯ ಮಗ ಪಿ.ಯು.ಸಿ.ಯಲ್ಲಿ ಇರಬೇಕಾದರೆ ಮಡದಿ ಇಹಲೋಕದ ಕೋಟಾ ಮುಗಿಸಿ ಹೋಗಿಬಿಟ್ಟಿದ್ದರು. ಮಗನಿಗೆ ಮೋಸ ಮಾಡಬಾರದೆಂದು ಗಟ್ಟಿ ಮನಸ್ಸು ಮಾಡಿ ಇನ್ನೊಂದು ಮದುವೆ ಆಗಲಿಲ್ಲ. “ಗೋಪಣ್ಣ ಹಂಗಲ್ಲ” ಎಂದು ಯಾರದ್ರು ಹೇಳಿದರೆ ಒಳಗೊಳಗೇ ಹೆಮ್ಮೆಯಿಂದ ಬೀಗುತ್ತಿದ್ದರು. ಮಗ ಇಂಜನಿಯರಿಂಗ್ ಓದಲು ನಗರಕ್ಕೆ ಹೊರಟ. ಅದೂ ಗಂಡು ಹುಡುಗರಿಗೆ ಇಂಜನಿಯರಿಂಗ್ ಕಟ್ಟೆ ಹತ್ತಿದ ಮೇಲೆ ತಂದೆ ತಾಯಿಯರ ಸಂಪರ್ಕ ಎಷ್ಟರ ಮಟ್ಟಿಗೆ ಬೇಕಾದೀತು?

ಮಗ ಚೆನ್ನಾಗಿಯೇ ಒದುತ್ತಿದ್ದ. ಒಂದು ಸಾರಿ ಊರಿಗೆ ಬಂದಾಗ ಮಗ ಸಂಧ್ಯಾವಂದನೆ ಮಾಡದೆ ತಿಂಡಿ ತಿನ್ನುವುದನ್ನು ಕಂಡಾಗ ಸಿಟ್ಟೇರಿ ಸಂಧ್ಯಾವಂದನೆ ಮಾಡೇ ತಿನ್ನಬೇಕು ಎಂದಾಗ, “ನಂಗೆ ಅವೆಲ್ಲಾ ಮಾಡಲಿಕ್ಕೆ ಇಷ್ಟ ಇಲ್ಲಪ್ಪ” ಎಂದು ತಗ್ಗಿದ ಧ್ವನಿಯಲ್ಲಿಯಾದರೂ ಸ್ಪಪ್ಟವಾಗಿ ಹೇಳಿದ್ದ. ಇವರು ಸಿಟ್ಟಾಗಿ ” ಸಂಧ್ಯಾವಂದನೆ ಮಾಡಿದ್ರೇನೆ ಈ ಮನ್ಯಾಗೆ ಸ್ಥಳ……” ಅಂತ ನಿಷ್ಠುರವಾಗಿ ಹೇಳಿದ್ದರು. ಆದಿನ ಸಂಜೆ ಅವನು ಜನಿವಾರವನ್ನು ಹಿತ್ತಲಿನ ಕಣಗಲಿ ಗಿಡಕ್ಕೆ ನೇತುಹಾಕಿ ಊರಿಗೆ ಹಿಂತಿರುಗಿದ್ದ. ಹೆಂಡತಿ ಇದ್ದಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲವೆಂದು ಪೇಚಾಡಿಕೊಂಡು ಮಾರನೇಯ ದಿನ “ಇದೆಲ್ಲಾ ಮನಸ್ಸಿಗೆ ಹಚ್ಚಿಕೋ ಬೇಡ, ರಜಕ್ಕೆ ಬಾ” ಎಂದು ಕಾಗದ ಬರೆದು ಹಾಕಿ, ಮರು ಟಪಾಲು ಬರುವವರೆಗೆ ವಿಚಿತ್ರ ಅಸಮಾಧಾನದಿಂದ ಒದ್ದಾಡಿದ್ದರು.

ಮಗನ ಪದವಿ ಮುಗಿದಾಗ ಅಪ್ಪ ಕೊಡಿಸಿದ ರಿಟೈರ್ ಆದ ಮೇಲೋ ಪಿಂಚಣಿ ಕೊಡುವ ಸರ್ಕಾರಿ ಕೆಲಸ ಬಿಟ್ಟು ಮಲ್ಟಿ ನ್ಯಾಷನಲ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದಾಗ ಮಗನ ಬದುಕು ಹಾಳಾಯಿತೆಂದು ಎಣಿಸಿಬಿಟ್ಟರು.

ಮಗ ಅವರಿಗೆ ಆಶ್ಚರ್ಯವಾಗುವ ರೀತಿಯಲ್ಲಿ ಬೆಳೆದ. ರಿಟೈರ್ ಆದ ಮೇಲೆ ಅವರ ಮನೆ ಬಾಡಿಗೆ ಕೊಟ್ಟು ಮಗನ ಮನೆಗೆ ಬಂದರು. ಮಗನಿಗೆ ಎರಡನೇಯ ವರ್ಷಕ್ಕೆ ಇಪ್ಪತ್ತು ಸಾವಿರ ಸಂಬಳ. ಇಪ್ಪತ್ತು ಲಕ್ಷದ ಮನೆ ಕೊಂಡುಕೊಂಡ. ಆಫೀಸಿನ ಸಹೋದ್ಯೋಗಿಯ ಜೊತೆ ರಿಜಿಸ್ಟರ್ ಮದುವೆಯೂ ಆದ. “ನಮ್ಮ ಜನನಾ?” ಎಂದು ಕೇಳಿದಾಗ “ಗೊತ್ತಿಲ್ಲ. ಕೇಳೋ ದುರ್ಬದ್ಧಿ ತೋರಿಸಿಲ್ಲ…” ಎಂದಿದ್ದ. ಒಂದು ದಿನ ಚಿಕನ್ ಬಿರಿಯಾನಿ ಮಾಡಲ ಮಾವ ಎಂದು ಸೊಸೆ ಕೇಳಿದಾಗ “ಖಡಕ್ ಮಾಸ್ತರ್” ಎಂದು ಹೆಸರಾಗಿದ್ದ ಗೋಪಣ್ಣ ಮೇಷ್ಟ್ರು “ಪಾತ್ರೆ ಬೇರೆ ಉಪಯೋಗಿಸಮ್ಮ” ಎಂದು ಹೇಳಿ ಸುಮ್ಮನಾಗಿದ್ದರು.

ಹೀಗಿರಬೇಕಾದರೆ ಒಂದು ದಿನ ರಾತ್ರಿ ಸೊಸೆಗೆ ಹೆರಿಗೆ ನೋವು ಪ್ರಾರಂಭ ಆದಾಗ, ಮಗ ಮಾಮಾಲಾಗಿ ತೋರಿಸುತ್ತಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಆದರೆ ಆ ಅಸ್ಪತ್ರೆಯಲ್ಲಿ ಯಾವುದೋ ಸ್ಕಾಂಡಲ್ ಆಗಿ ಡಾಕ್ಟರಮ್ಮನ್ನ ಅರೆಸ್ಟ್ ಮಾಡಿರುವುದು ತಿಳಿಯುತ್ತದೆ. ಆಗ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಅನಿವಾರ್ಯತೆ ಉಂಟಾಗುತ್ತದೆ. ಅಲ್ಲಿ ಅವನಿಗೆ ಸರ್ಕಾರಿ ಆಸ್ಪತ್ರೆಯ ಪರಿಸ್ಥಿತಿಯ ಅನಾವರಣವಾಗುತ್ತದೆ. ಆ ಆಸ್ಪತ್ರೆಯ ಮುರಿದ ಬೆಂಚಿನ ಮೇಲೆ ಮಲಗಿದ್ದ ಸೊಸೆಯ ಜೊತೆ ಮಾಸ್ತರ್ ಆತಂಕದಲ್ಲಿ ಕೂತಿದ್ದಾಗ, ದಾದಿಯೊಬ್ಬಳು ಹತ್ತಿರ ಬಂದು “ಗೋಪಣ್ಣ ಮೇಸ್ತರರಲ್ಲೇನ್ರಿ?” ಎಂದು, “ನಾನ್ರೀ ಮಾಸ್ತರ…..ರಾಧ….ಅಕ್ಕಸಾಲಿಗರ ಗಂಗಣ್ಣನ ಮಗಳು….. ನಂಗೆ ಗಿಡ್ಡ ಪುಟಾಣಿ ಮಕ್ಕಳ ರಾಣಿ ಅಂತ ಕರಿತಾ ಇದ್ರಿ ನೋಡಿ” ಎಂದಳು. ನಂತರ ಮಾಸ್ತರ್ ರ ಹಳೆಯ ವಿದ್ಯಾರ್ಥಿನಿ ರಾಧಳ ದೆಸೆಯಿಂದ ಉಳಿದಿದ್ದೆಲ್ಲಾ ಸರಾಗವಾಗಿ ಆಯಿತು. ಗಂಡು ಮಗ ಹುಟ್ಟಿದ. ಅಂತೂ ಯಾವುದೇ ತೊಂದರೆ ಇಲ್ಲದೆ ಹತ್ತು ದಿನಗಳ ನಂತರ ಮನೆಗೆ ಹೊರಟಾಗ ರಾಧ ಅವರು ಕೊಟ್ಟ ಹಣ್ಣು-ಹಂಪಲು ಮಾತ್ರ ತೆಗೆದುಕೊಂಡು, ಮೇಲಿದ್ದ ನೋಟುಗಳನ್ನು ನಯವಾಗಿ ನಿರಾಕರಿಸಿ ಬಿಟ್ಟಳು. ಇಷ್ಟೆಲ್ಲ ಸಹಾಯ ಮಾಡಿದವಳಿಗ ಏನಾದ್ರು ಮಾಡ ಬೇಕಲ್ಲವೆ ಎಂದಾಗ “ಮಾಸ್ತರರ, ಬದುಕು ಮಾಡೋದು ಹೆಂಗೆ ಅಂತ ಕಲಿಸಿ ಕೊಟ್ಟೀರಿ. ಅದಕ್ಕಿಂತ ದೊಡ್ಡದು ಬೇರೆ ಏನು ಮಾಡಲಿಕ್ಕೆ ಆಗ್ತೈತೆ ಬಿಡ್ರಿ” ಎಂದು ಹೇಳಿ ಕಾರಿನ ತನಕ ಬಂದು ಬೀಳ್ಕೊಟ್ಟಳು.

ಕಾರಿನಲ್ಲಿ ಹೋಗುವಾಗ “ರಾದಳಂತಹ ವ್ಯಕ್ತಿ ನನ್ನ ಜೀವನದಲ್ಲಿ ಖಂಡಿತಾ ಸಿಗಂಗಿಲ್ಲ ಅನಿಸ್ತದೆ…. ಹಗಲು-ರಾತ್ರಿ ಖಬರಿಲ್ಲದಂಗೆ ದುಡಿದು ಯಾರೋ ಅಮೆರಿಕಾದವರು ಉಪಯೋಗಿಸುವಂತಹ ಸಾಫ್ಟ್ ವೇರ್ ಬರಿತೀವಿ. ಅವರಿಗೆ ನಾವ್ಯರೋ ಗೊತ್ತಿಲ್ಲ. ನಮಗೆ ಅವರ್ಯರೋ ಗೊತ್ತಿಲ್ಲ. ಇಬ್ಬರಿಗೂ ಗೊತ್ತಿರುವುದು ಆ ಕೆಲಸಕ್ಕಾಗಿ ನಿಗದಿಯಾಗಿರೋ ಬಡ್ಜೆಟ್ ಮಾತ್ರ..” ಎಂದು ಮಗ ಹೇಳುತ್ತಾನೆ. ಆಗ ಅಮ್ಮನ ತೊಡೆ ಮಲಗಿದ್ದ ಸುಕುಮಾರನಿಗೆ ಅದೇನರ್ಥವಾಯಿತೋ ಗೊತ್ತಿಲ್ಲ. ಸಣ್ಣಗೆ ನಕ್ಕ.

ಈ ಎಲ್ಲ ಕಥೆಯೂ ಗೋಪಣ್ಣ ಮಾಸ್ತರ್ ಕಂಡಂತೆ ಚಿತ್ರಿತವಾಗಿದೆ. ಜೊತೆಗೆ ಗೋಪಣ್ಣ ಮಾಸ್ತರ್ ಬೆಂಗಳೂರಿನಲ್ಲಿ ರಾಯರ ಮಠದಲ್ಲಿ ನೋಡಿದ ದೃಶ್ಯಗಳು, ಮಾಸ್ತರ್ ಬಹಳ ವರ್ಷಗಳಿಂದ ತಪ್ಪದೆ ಊರಿನಲ್ಲಿ ಮೊಹರಂ ದಿನ ದರ್ಗಾಕ್ಕೆ ಹೋಗಿ ಬೆಲ್ಲ ಮಂತ್ರಿಸಿ, ಹೊಸ ಬಟ್ಟೆಗಳನ್ನು ಪೀರ್ಲು ದೇವರಿಗೆ ಕೊಡುವ ಸಂಪ್ರದಾಯ ಮಾಡಿಕೊಳ್ಳಲು ಆದ ಘಟನೆ, ಇತ್ಯಾದಿಗಳ ವಿವರಗಳನ್ನು ಕಥೆಯಲ್ಲೇ ಓದಿಯೇ ಆನಂದಿಸಬೇಕು.

ಹಳೆಯ ಮಾಸ್ತರ್ ರವರ ಜೀವನ ರೀತಿ, ನೀತಿಗಳ ಬಗ್ಗೆ ಹೇಳುತ್ತಾ ಈ ಕಾಲದ ಮಗನ ಜೀವನ ಶೈಲಿಯ ಜೊತೆ ಹೊಂದಿಕೊಳ್ಳಲು ಅವರು ಪ್ರಯತ್ನ ಮಾಡುವ ಪರಿ ಬಹಳ ಚೆನ್ನಾಗಿ ಮೂಡಿಬಂದಿದೆ. ಎಲ್ಲ ಇದ್ದರೂ ಮಾನಸಿಕವಾಗಿ ದೂರವೇ ಇರುವ ಚಿತ್ರ ಯೋಚಿಸುವಂತೆ ಮಾಡುತ್ತದೆ. ತೀರ ಸಾಂಪ್ರದಾಯಿಕ ಪಾತ್ರವಾಗಿ ಮಾಸ್ತರ್ ಪಾತ್ರ ಮೂಡಿ ಬಂದಿಲ್ಲದ್ದಿದ್ದರು, ಬದಲಾಗುತ್ತಿರುವ ಸಮಾಜದ ಪಾತ್ರಗಳ ಅನಾವರಣ ಮಾಡುತ್ತಾ ಹೋಗುವಾಗ ಮಾಸ್ತರ್ ರವರ ದರ್ಪ, ಗತ್ತು, ಸಿಟ್ಟುಗಳು ಕಡಿಮೆ ಆಗುತ್ತಾ ಹೋಗುವುದನ್ನು ತೆರೆದಿಡುತ್ತಾರೆ. ಕೊನೆಯಲ್ಲಿ ಬದಲಾದ ಸಮಾಜದಲ್ಲೂ ರಾಧ ತರದವರು ಇದ್ದಾರೆ ಎಂದು ಹೇಳುತ್ತಾ ಸಮಾಜದಲ್ಲಿ ಆಳವಾಗಿ ಬೇರಿಳಿದಿರುವ ಮೌಲ್ಯಗಳ ಬಗ್ಗೆ ಹೇಳುವ ರೀತಿ ಮನಸ್ಸಿಗೆ ಆಪ್ತವಾಗುತ್ತದೆ.

ಈ ಯುಗಾದಿಯಲ್ಲಿ ಇನ್ನು ಇಪ್ಪತ್ತಕ್ಕೂ ಹೆಚ್ಚು ಸಣ್ಣ ಕಥೆಗಳು ತಮ್ಮದೇ ರೀತಿಯಲ್ಲಿ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯನ್ನು ದಾಖಲು ಮಾಡಿವೆ. ‘ಹೆಡ್ ಹಂಟರ್’, ‘ ಕಣ್ತರೆದು ನೋಡಲ್ಲಿ, ಗೆದ್ದಲು ಮರ ಕಡವಲಿದೆ’, ‘ನಮ್ಮ ನಮ್ಮೊಳಗೆ’, ಕಥೆಗಳು ಲೇಖಕರ ವೃತ್ತಿ ಜೀವನದಿಂದ ಪ್ರೇರಿತವಾದುದು. ಇದರಲ್ಲಿ ಮುಖ್ಯವಾಗಿ ಮೂಡಿ ಬಂದಿರುವುದು ಸಹೋದ್ಯೋಗಿಗಳ ನಡುವೆ ಇರುವ/ ಇಲ್ಲದೇ ಇರುವ ಸಂಬಂಧ, ಕಂಪನಿಗೆ ತೋರಿಸುವ/ತೋರಿಸದ ನಿಷ್ಠೆ, ಅನಿಶ್ಚಿತೆ, ಎಲ್ಲಾ ಚೆನ್ನಾಗಿ ಮೂಡಿಬಂದಿದೆ. ಸಾಫ್ಟವೇರ್ ಕಂಪನಿಯಲ್ಲಿ ಮೇಲಧಿಕಾರಿಯನ್ನು ಸರ್ ಎಂದು ಕರೆಯದೆ ಹೆಸರಿಟ್ಟು ಕರೆದರೂ ಯಾವುದೇ ರೀತಿಯ ಮಾನಸಿಕ ಸಂಬಂಧಗಳು ಮೂಡದೇ ಇರುವ ಚಿತ್ರಣ ಮತ್ತು ಹಣ ಸಿಗುತ್ತದೆಯೆಂದು ಇದ್ದ ಕೆಲಸಬಿಟ್ಟು ಈ ಕೆಲಸ ಹುಡುಕುವ ಜನರ ಬಗ್ಗೆ ಒಂದು ಎಚ್ಚರಿಕೆಯ ಪಾಠ ಇರುವ ಕಥೆ ಕೂಡ ಇದೆ. ಈಗ ಸಾಮಾನ್ಯವಾಗಿರುವ ‘ಮನೆಯಿಂದಲೇ ಕೆಲಸ’, ಆ ಕಾಲದಲ್ಲಿ ಪ್ರಥಮ ಬಾರಿಗೆ ಅಪಘಾತದಲ್ಲಿ ಹಾಸಿಗೆ ಹಿಡಿದಿದ್ದ ಉದ್ಯೋಗಿಯಿಂದ ಹೇಗೆ ಪ್ರಾರಂಭವಾಯಿತು ಎಂದು ಕಥೆಯೊಂದು ಹೇಳುತ್ತದೆ. ಕಾಶ್ಮೀರದ ಮೂಲದ ಸಹೋದ್ಯೋಗಿಯ ಜೊತೆ ಮನೆ ಹುಡುಕಿದಾಗ ಆಗುವ ಅನುಭವ ಕಥೆಯೊಂದರ ಮೂಲಕ ಬಂದು ಮನ ಮುಟ್ಟುತ್ತದೆ.

ಉಳಿದ ಕಥೆಗಳು ಬಳ್ಳಾರಿಯ ಪರಿಸರಿದಲ್ಲಿ, ಬಳ್ಳಾರಿಯ ಭಾಷೆಯ ಸೊಗಡಿನೊಂದಿಗೆ ಸೊಗಸಾಗಿ ಮೂಡಿ ಬಂದಿವೆ. ‘ಅಪಸ್ವರದಲ್ಲೊಂದು ಆರ್ತನಾದ” ಕಥೆ ತಾಯಿ ಮತ್ತು ಮಗಳ ಸಂಬಂಧದ ಸುತ್ತ ಮೂಡಿ ಬಂದಿದೆ. ಈ ಕಥೆಯಲ್ಲಿ ‘ಮಾನಸ ಸರೋವರ’ ಸಿನಿಮಾದ ದೃಶ್ಯವೊಂದನ್ನು ಬಳಸಿಕೊಂಡಿರುವ ಬಗೆ ಮನಸ್ಸೆಳೆಯುತ್ತದೆ. ‘ ಹುಲಿಗೆ ಕಾಡೇ ರಕ್ಷೆ, ಕಾಡಿಗೆ ಹುಲಿಯೇ ರಕ್ಷೆ’ ಕಥೆಯಲ್ಲಿ ಬಡ ಸಂಸಾರದ ಬವಣೆ, ಶೋಷಣೆಯ ಬಗ್ಗೆ ಇದ್ದರೆ, ‘ಸುಳ್ಳು ನಮ್ಮಲಿಲ್ಲವಯ್ಯ, ಸುಳ್ಳೆ ನಮ್ಮನಿ ದೇವರು’ ದೇವರು ಕಥೆಯಲ್ಲಿ ಅಜ್ಜಿಯ ಕಥೆಗಳ ರೂಪದಲ್ಲಿ ಬಂದಿರುವ ಬೂತದ ಕಥೆ ಕೂತೂಹಲ ಮೂಡಿಸುತ್ತದೆ. ‘ಮಂಗಳಾರತಿ ಗೋಪಣ್ಣ’ ಕಥೆಯಲ್ಲಿ ಅನಿವಾಸಿ ಭಾರತೀಯನೊಬ್ಬ ಮಠಕ್ಕೆ ಸಾವಿರ ಡಾಲರ್ ದೇಣಿಗೆ ಕೊಟ್ಟಾಗ ಆಗುವ ವಿಷಯವಿದ್ದರೆ, ‘ಪರಾಧೀನ’ ಕಥೆಯಲ್ಲಿ ರಾಯರ ಮಠದಲ್ಲಿ ಪೂಜೆ ಮಾಡುವ ವೆಂಕಣ್ಣಾಚಾರ್ಯರ ಹೊಸದನ್ನು ಅನ್ವೇಷಣೆ ಮಾಡುವ ಕಥೆಯಿದೆ.

ಇವರ ಊರಿನಲ್ಲಿ ಗಣೇಶನ ಹಬ್ಬದ ಸಮಯದಲ್ಲಿ ದಾಸರು ಮಾಡುತ್ತಿದ್ದ ‘ವಿದುರ ನೀತಿ’ ಹರಿಕಥೆಗೆ ಬರದ ಜನ ಮಾರನೇಯ ದಿನದ ‘ದ್ರೌಪತಿ ವಸ್ತ್ರಾಪಹರಣ’ ಕಥಾ ಪ್ರಸಂಗಕ್ಕೆ ಬರುವ ಒಂದು ಚಿಕ್ಕ ಪ್ರಸಂಗವಿದೆ. ಈ ತರಹದ ಅನೇಕ ಚಿಕ್ಕ ಕಥೆಗಳು ಇಲ್ಲಿವೆ. ಇದು ಕೂಡ ಬದಲಾಗುತ್ತಿರುವ ಮನಸ್ಥಿತಿಯ ದೃಶ್ಯವೆಂದು ಅನಿಸಿತು.

ಕೊನೆಯಲ್ಲಿ ‘ಬೇರೇನಿಲ್ಲ, ಒಂಚೂರು ಪ್ರೀತಿ!’ ಕಥೆಯಲ್ಲಿ ಆಫೀಸಿನಲ್ಲಿ ಅವಮಾನಿತನಾದ ವ್ಯಕ್ತಿಯೊಬ್ಬ ತನ್ನನ್ನು ತಾನೇ ಹಿಂಸಿಸಿಕೊಳ್ಳುವ ದೃಶ್ಯವೊಂದು ಅವನ ಮನೋ ವೈಫಲ್ಯವನ್ನು ತೋರಿಸಿದರೆ, ಎದುರು ಮನೆಯ ಅಜ್ಜಿಯೊಂದು ಆತನಿಗೆ ಆ ನಡು ರಾತ್ರಿ ಒಂಚೂರು ಪ್ರೀತಿಯನ್ನು ತೋರಿಸಿ, ಧೈರ್ಯ ಕೊಟ್ಟಾಗ, ಆತ ಮತ್ತೋಮ್ಮೆ ಮುಖ್ಯ ರಸ್ತೆಯಲ್ಲಿ ವಿಶ್ವಾಸದ ಹೆಜ್ಜೆಯಿಟ್ಟು ನಡೆಯುತ್ತಾನೆ. ಯಾವುದೇ ಪರಿಸ್ಥಿತಿಯಲ್ಲಿ ಬೇಕಾಗುವುದು ‘ಒಂಚೂರು ಪ್ರೀತಿ ಮಾತ್ರ’ ಎಂದು ಹೇಳುತ್ತಾ ಪುಸ್ತಕ ಮುಗಿಸಿದಂತಿದೆ.

ಹೊಸ ತಂತ್ರಜ್ಞಾನ ಸಮಾಜದ ವಿವಿಧ ವರ್ಗದ ಮೇಲೆ ಬೀರಿರುವ ಪ್ರಭಾವ, ತಂದ ಬದಲಾವಣೆ ಲೇಖಕರ ಅನುಭವದ ಜೊತೆ ಸೇರಿ ಮೂಡಿ ಬಂದಿರುವುದರಿಂದ ಕಥೆಗಳಲ್ಲಿ ಯಾವುದೇ ಕೃತಿಮತೆ ಕಾಣುವುದಿಲ್ಲ.

ಯುಗಾದಿಯಲ್ಲಿ ಪಂಚಾಂಗದ ಪೂಜೆಯ ನಂತರ ಬೇವು ಬೆಲ್ಲದ ಪ್ರಸಾದ ಕೊಟ್ಟಾಗ ಎಲ್ಲರಿಗೂ ಬೆಲ್ಲ ಮಾತ್ರ ತಿನ್ನುವ ಮನಸ್ಸಿದ್ದರೂ ಪ್ರಸಾದ ಎಂದುಕೊಂಡು ಒಂದು ಅತಿ ಚೂರು ಬೇವನ್ನು ಬಾಯಲ್ಲಿ ಹಾಕಿಕೊಂಡು, ಅಗಿಯದೆ ಹಾಗೆ ನುಂಗಿ ಬಿಡುತ್ತೇವೆ. ಜೀವನದಲ್ಲಿ ಕೂಡ ಹಾಗೆಯೇ. ಬದಲಾವಣೆ ತರುವ ಅನೇಕ ಕಹಿ ಘಟನೆಗಳನ್ನು ನುಂಗಿಕೊಂಡು ಸಿಹಿಯನ್ನು ಚಪ್ಪರಿಸುವ ಸ್ವಭಾವ ಇಲ್ಲಿಯ ಕಥೆಗಳಲ್ಲಿ ಬೇರೆ, ಬೇರೆ ಸ್ಥರಗಳಲ್ಲಿ ಅನಾವರಣವಾಗುತ್ತಾ ಹೋಗುತ್ತದೆ. ಯುಗಾದಿಯಲ್ಲಿ ಮೂಡುವ ಹೊಸ ಚಿಗುರು ಹಳೆಯ ಬೇರಿನಿಂದ ಬರುವ ಸತ್ವದಿಂದಲೇ ಬೆಳೆಯುವುದು. ಹಾಗೆಯೇ ಯಾವುದೇ ಸಂದರ್ಭದಲ್ಲಿಯೂ ಆಳವಾಗಿ ಬೇರು ಬಿಟ್ಟಿರುವ ಮೌಲ್ಯಗಳು ನಮ್ಮನ್ನು ಮುನ್ನೆಡುಸುತ್ತದೆ ಎಂದು ಇಲ್ಲಿಯ ಕಥೆಗಳು ಹೇಳುತ್ತವೆ.

ಉತ್ತಮ ಕಥಾ ಸಂಕಲನ ಕೊಟ್ಟು ಕವಿಗೆ ಧನ್ಯವಾದಗಳು.

ಧನ್ಯವಾದಗಳು.


  • ಎನ್.ವಿ.ರಘುರಾಂ. ನಿವೃತ್ತ ಅಧೀಕ್ಷಕ ಅಭಿಯಂತರ(ವಿದ್ಯುತ್) ಕ.ವಿ.ನಿ.ನಿ., ಬೆಂಗಳೂರು

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW