ಇಂಗ್ಲಿಶ್ ಭಾಷೆಯಲ್ಲಿ ಮೊದಲ “ನವ್ಯ” (ಮಾಡರ್ನ್ ಪೊಯೆಮ್) ಕವಿತೆ ಬರೆದವರು ಯಾರು ಎಂದು ಪ್ರಶ್ನಿಸಿದರೆ, ಹೆಚ್ಚಿನ ಉತ್ತರಗಳು “ಎಜ್ರಾ ಪೌಂಡ್” ಎಂದಾಗಿರುತ್ತದೆ. ಆದರೆ ಪೌಂಡ್ ಗಿಂತಲೂ ಮೊದಲು ಇಂಗ್ಲಿಶ್ ನಲ್ಲಿ ನವ್ಯ ಕವಿತೆ ಬರೆದವನು ಟಿ.ಇ.ಹುಲ್ಮೆ. ಅವರ ಕವಿತೆಯ ಕುರಿತು ಕವಿ ಮೇಗರವಳ್ಳಿ ರಮೇಶ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
೧೯೦೮ ರ ಮೇ ೨೬ ರಂದು ಫ್ರಾನ್ಸ್ ನ ಒಂದು ಹೋಟೆಲ್ಲಿನಲ್ಲಿ ಕುಳಿತು ಹೋಟೆಲ್ಲಿನ ಬಿಲ್ಲಿನ ಹಿಂಭಾಗದಲ್ಲಿ ಅವನು ಬರೆದ ” ಏ ಸಿಟಿ ಸನ್ಸೆಟ್” ಮೊದಲ ಇಂಗ್ಲಿಶ್ ನವ್ಯ ಕವಿತೆ. ಎಜ್ರಾ ಪೌಂಡ್ ಹಾಯ್ಕು ಮಾದರಿಯ ಕವಿತೆಗಳ ಪ್ರಯೋಗದಲ್ಲಿ ತೊಡಗಿಕೊಳ್ಳುವ ಮೊದಲೇ ಹುಲ್ಮೆ ಬರೆದ ಚಿಕ್ಕ ಚಿಕ್ಕ ಕವಿತೆಗಳು ” ಪ್ರತಿಮಾ” ವಿಧಾನದ ಕವಿತೆಗಳ ಹುಟ್ಟಿಗೆ ಕಾರಣವಾಯಿತು.
೧೬ ಸೆಪ್ಟೆಂಬರ್ ೧೮೮೩ ರಂದು ಯುನೈಟೆಡ್ ಕಿಂಗ್ಡಂ ನ ಎನ್ಡನ್ ನಲ್ಲಿ ಜನಿಸಿದ ಥಾಮಸ್ ಅರ್ನೆಸ್ಟ್ ಹುಲ್ಮೆ ಇಂಗ್ಲಿಶ್ ಸಾಹಿತ್ಯದ ಪ್ರಸಿದ್ಧ ವಿಮರ್ಷಕ ಮತ್ತು ಕವಿ. ತತ್ವ ಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದ ಹುಲ್ಮೆ ಜರ್ಮನಿಯಲ್ಲಿ ತತ್ವ ಶಾಸ್ತ್ರದ ಅಧ್ಯಯನ ಮಾಡಿದ. ಹಲವು ಜರ್ಮನ್ ತತ್ವಶಾಸ್ತ್ರಜ್ನರ ಕೃತಿಗಳನ್ನು ಇಂಗ್ಲಿಶ್ ಭಾಷೆ ಗೆ ಅನುವಾದಿಸಿದ ಹುಲ್ಮೆ ಸೌಂದರ್ಯ ಮೀಮಾಂಸಕನೂ ಆಗಿದ್ದ. ವಿಕ್ಟೋರಿಯನ್ ಯುಗದ ರೊಮ್ಯಾಂಟಿಕ್ ಕಾವ್ಯ ಪ್ರಾಕಾರವನ್ನು ಅಲ್ಲಗಳೆದ ಕವಿ ಹುಲ್ಮೆ ಮುಕ್ತ ಛಂದ ದ “ಪ್ರತಿಮಾ” ವಿಧಾನದ ನವ್ಯ ಕಾವ್ಯದ ಆದ್ಯ ಪ್ರವರ್ತಕ ಎನ್ನುವುದು ನಿರ್ವಿವಾದಿತ.
ಅವನು ಸ್ವಪ್ರೇರಣೆಯಿಂದ ಮೊದಲ ಜಾಗತಿಕ ಯುದ್ಧದ ಸಂದರ್ಭದಲ್ಲಿ ೧೯೧೪ ರಲ್ಲಿ ಸೇನೆಯನ್ನು ಸೇರಿ “ಆನರಬಲ್ ಆರ್ಟಿಲರಿ ಕಂಪೆನಿ” ಮತ್ತು “ರಾಯಲ್ ಮರೀನ್ ಆರ್ಟಿಲರಿ” ಗಳಲ್ಲಿ ಫ್ರಾನ್ಸ್ ಮತ್ತು ಬೆಲ್ಜಿಯಂ ಗಳಲ್ಲಿ ಸೇವೆ ಸಲ್ಲಿಸಿದ. ೧೯೧೭ ಸೆಪ್ಟೆಂಬರ್ ೨೮ ರಂದು ಅವನ ಮೂವತ್ತನಾಲ್ಕನೇ ಹುಟ್ಟು ಹಬ್ಬವಾದ ಕೆಲವೇ ದಿನಗಳ ನಂತರ ಶೆಲ್ ದಾಳಿಗೆ ತುತ್ತಾಗಿ ಅವನ ದೇಹ ಚೂರು ಚೂರಾಯಿತು. ವೀರ ಯೋಧನಾಗಿ ಮಡಿದ ಹುಲ್ಮೆ ಇಂಗ್ಲಿಶ್ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಉಳಿಸಿ ಹೊದ.

ನಾನು ಅನುವಾದಿಸಿದ ಹುಲ್ಮೆಯ ಮೂರು ಪ್ರಾತಿನಿಧಿಕ ಚಿಕ್ಕ ಪದ್ಯಗಳು :
೧. ಒಂದು ನಗರದ ಸೂರ್ಯಾಸ್ತ
ಹೃದಯ ಅರಳಿಸುವ ಕಡುಗೆಂಪು
ಹರಡಿದ ಆಗಸದ ವೈಭವ.
ಸ್ವರ್ಗದ ಉಲ್ಲಾಸ ಭರಿತ ಕನ್ನಿಕೆ ನಗರದ
ವಿವಿಧ ನಮೂನೆಯ ಮಾಡುಗಳ ಮೇಲೆ ತನ್ನ
ಕೆಂಪು ಉಡುಪಿನ ಹಿಂಜೂಲನ್ನು ಹಾಸುತ್ತಾ
ಜನರ ಗುಂಪು ಮನೆಗಳಿಗೆ ತೆರಳುವ ಸಮಯ
ನಿರರ್ಥಕವಾಗಿ ಸುಳಿದಾಡುತ್ತಾ
ಒಲ್ಲದ ಮನಸ್ಸಿನಲ್ಲಿ ನಡೆದಳು.
(ಪದ್ಯ: ಏ ಸಿಟಿ ಸನ್ಸೆಟ್)
***
೨. ಥೇಮ್ಸ್ ನದಿಯ ಒಡ್ಡು
( ಕಡು ಚಳಿಯ ಒಂದು ರಾತ್ರಿ ಪತಿತ ಮಹನೀಯನೊಬ್ಬನ ಕಲ್ಪನಾ ವಿಲಾಸ)
ಹಿಂದೊಮ್ಮೆ ಪಿಟೀಲುಗಳ ರಾಗ ರತಿಯಲ್ಲಿ,
ಕಲ್ಲು ಹಾಸಿದ ಪಾದ ಚಾರಿ ಹಾದಿಯ ಹೆಣ್ಣ
ಬಂಗಾರದ ಹಿಂಮಡಿಯ ಮಿಂಚಲ್ಲಿ
ನಂಜೇರಿದ್ದೆ ನಾನು.
ನಾನೀಗ ಕಾಣುತ್ತೇನೆ
ಯಾವುದು ಕಾವ್ಯದ ಒಳತಿರುಳನ್ನು ಬೆಚ್ಚಗಿಡುವುದೋ ಅದನ್ನು.
ಓ ದೇವರೇ, ಚಿಕ್ಕದಾಗಿಸು
ನಕ್ಷತ್ರಗಳು ತಿಂದು ಹಳೆಯದಾದ ಆಗಸದ ಕಂಬಳಿಯನ್ನು!
ನಾನದನ್ನು ನನ್ನ ಮೈಗೆ ಸುತ್ತಿಕೊಂಡು
ಸುಖವಾಗಿ ನಿದ್ರಿಸ ಬಹುದಿಲ್ಲಿ!
( ಪದ್ಯ: ಎಂಬ್ಯಾಂಕ್ಮೆಂಟ್)
( ಕವಿತೆಯ ಶೀರ್ಷಿಕೆಎಂಬ್ಯಾಂಕ್ಮೆಂಟ್ ಥೇಮ್ಸ್ ಎಂಬ್ಯಾಂಕ್ಮೆಂಟ್ ನ್ನು ಕುರಿತದ್ದಾಗಿದೆ. ಬಹಳಷ್ಟು ಜನ ಬಡವರು ಮತ್ತುನಿರ್ಗತಿಕರು ಥೇಮ್ಸ್ ಎಂಬ್ಯಾಂಕ್ಮೇಂಟ್ ನ ಕಟ್ಟೆಯ ಮೇಲೆ ರಾತ್ರಿ ವಿಶ್ರಮಿಸುತ್ತಾರೆ)
***
- ಶರದೃತು
ಶರದೃತುವಿನ ರಾತ್ರಿಯ ಕೊರೆವ ಚಳಿ –
ಮನೆಯಿಂದ ಹೊರ ಹೊರಟೆ.
ಕೆಂಪು ಮುಖದ ರೈತನ ಹಾಗೆ
ಕೆಂಪೇರಿದ್ದ ಚಂದ್ರ ಬೇಲಿಯ ಮೇಲೆ ವಾಲಿದ್ದ.
ಮಾತನಾಡಿಸಲು ನಾನು ನಿಲ್ಲಲಿಲ್ಲ, ಸುಮ್ಮನೆ ತಲೆದೂಗಿದೆ.
ಮತ್ತಲ್ಲಿ ಸುತ್ತ ಮುತ್ತ ಆಸೆ ತುಂಬಿದ
ಬಿಳಿ ಮುಖದನಕ್ಷತ್ರಗಳು-
ಪಟ್ಟಣದ ಮಕ್ಕಳ ಹಾಗೆ!( ಪದ್ಯ: ಆಟಮ್ನ್)
- ಮೇಗರವಳ್ಳಿ ರಮೇಶ್ – ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ, ಕವಿಗಳು.
