“ಇವು ನಾಲಿಗೆಯೆಂಬ ನಂಜಿನಾಸ್ತ್ರದ ಮೇಲಿನ ಐದು ಹನಿಗವಿತೆಗಳು. ನಾಲಿಗೆಯ ವಿಕಾರ, ಅಂಧಕಾರ ಬಿಂಬಿಸುವ ಭಾವಪ್ರಣತೆಗಳು. ಈ ಜಗತ್ತಿನಲ್ಲಿ ನಾಲಿಗೆಯೆಂಬ ನಂಜಿನಾಯುಧ ಜನರ ಕೊಂದಷ್ಟು, ಬೇರಾವ ಆಯುಧವೂ ಕೊಲ್ಲಲಿಲ್ಲ. ನಾಲಿಗೆ ನಮ್ಮನ್ನು ನರಳಿಸಿದಷ್ಟು, ಬೇರಾವ ಅಂಗವೂ ನರಳಿಸಲಿಲ್ಲ. ಏನಂತೀರಾ.?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
1. ವಿನಾಶಿ.!
ಎಲುಬಿಲ್ಲದ ನಾಲಿಗೆಗೆ
ಕೊಟ್ಟುಬಿಟ್ಟರೆ ಸಲಿಗೆ
ಬಂದೀತು ಬದುಕು
ಅಕ್ಷರಶಃ ಬೀದಿಗೆ.!
******
2. ಕಾರಣ..!
ಬದುಕಿನಲಿ ಬಹಳ ಸಲ
ಎಡವಟ್ಟಾಗುವುದು..
ಎಡಬಿಡಂಗಿಯಾಗುವುದು..
ಎಡವಿದ ನಡಿಗೆಯಿಂದಲ್ಲ
ಎಲುಬಿಲ್ಲದ ನಾಲಿಗೆಯಿಂದ.!
******
3. ಅಪಾಯಕಾರಿ.!
ಎಂಟೆದೆ ಎಲುಬುಳ್ಳವರೂ
ಹೆದರುವುದು ಮಾತ್ರ
ಎಲುಬಿಲ್ಲದ ನಾಲಿಗೆಗೆ.!
ಎಡವದೆ ನಡೆವವರೂ
ಬೆದರುವುದು ಮಾತ್ರ
ಎಗ್ಗಿಲ್ಲದ ಜನರ ಛಾಳಿಗೆ.!
ಚುಚ್ಚು ನುಡಿಯ ದಾಳಿಗೆ.!
*******
4. ಮಾರಕ.!
ಅಪ್ಪಿತಪ್ಪಿ ಎಡವುದನೇ
ಎಲ್ಲರೆದುರು ಎತ್ತಾಡುತ್ತ
ಅವರಿವರ ಎಡವಟ್ಟುಗಳನೇ
ಎಡಬಿಡದೆ ಎಣಿಸಿಡುತ್ತ
ಮೆರೆವ ಇರಿವ ಝರಿವ
ಓ ಎಲುಬಿಲ್ಲದ ನಾಲಿಗೆ
ಮಾರಕ ಅಶಾಂತಿ ಕಾರಕ
ನೀ ಲೋಕದ ಪಾಲಿಗೆ.!
*******
5. ಸ್ವಭಾವ.!
ಎಡಬಲದಿ ಯಾರಿದ್ದರೂ
ಎಗ್ಗಿಲ್ಲದ ಎಡಬಿಡಂಗಿಗಳ
ನಡೆಗೆ ನಿಯಂತ್ರಣವಿಲ್ಲ
ಎಲುಬಿಲ್ಲದ ನಾಲಿಗೆಗಳ
ನುಡಿಗಳಿಗೆ ಕಡಿವಾಣವಿಲ್ಲ.!
- ಎ.ಎನ್.ರಮೇಶ್. ಗುಬ್ಬಿ. (ಲೇಖಕರು, ಕವಿಗಳು), ಕೈಗಾ
