ತುಳಸಿ ಗೌಡರು ಬೆಳೆಸಿದಂತಹ ಗಿಡ ಮರಗಳು ಒಂದೆರಡು ಅಲ್ಲ, ಸಾವಿರ ಅಲ್ಲ, 30,00,000ಕ್ಕೂ ಮಿಗಿಲು. ಆ ವೃಕ್ಷಮಾತೆ ,ಪದ್ಮಶ್ರೀ ಪುರಸ್ಕೃತರಾದ ತುಳಸಿ ಗೌಡರು ನಿಧನರಾಗಿದ್ದು, ಅವರನ್ನು ಭೇಟಿಯಾಗಿ ಅವರೊಂದಿಗೆ ಸಮಯ ಕಳೆದ ಅನುಭವವನ್ನು ನಿತಿನ್ ಅಂಕೋಲಾ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಇಲ್ಲಿ ತನಕ ನಮ್ಮ ಉತ್ತರ ಕನ್ನಡ ಜಿಲ್ಲೆಗೆ ಪದ್ಮಶ್ರೀ ದೊರೆತಿದ್ದರೆ ಅದು ಮೂರೆ ಮೂರು ಜನರಿಗೆ ವಿಶೇಷವಾಗಿ ಹೇಳಬೇಕೆಂದರೆ ಈ ಮೂರರಲ್ಲಿ ನಮ್ಮ ಅಂಕೋಲಾ ತಾಲೂಕಿನ ಒಂದೇ ಜಾತಿಯ ವಿಭಿನ್ನ ಕ್ಷೇತ್ರಗಳ ಇಬ್ಬರು ಸಾಧಕರಿಗೆ ದೊರೆತಿದೆ ಎಂದರೆ ಹುಬ್ಬೇರಿಸುವಂತದ್ದು. ಮೊದಲನೇಯದು ಹೊನ್ನಾವರದವರಾದ ಯಕ್ಷ ಸಾರ್ವಭೌಮ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಯಕ್ಷಗಾನ ಕ್ಷೇತ್ರದಲ್ಲಿ, ಎರಡನೆಯದ್ದು ಸುಕ್ರಿ ಬೊಮ್ಮು ಗೌಡ ರವರಿಗೆ ಜಾನಪದ ಕ್ಷೇತ್ರದಲ್ಲಿ.. ಮೂರನೆಯದ್ದು ತುಳಸಿ ಗೌಡರಿಗೆ ಹಸಿರು ಸಮೃದ್ಧಿಯನ್ನು ಉನ್ನತಿಗೊಳಿಸಿದ ಪರಿಸರ ಸೇವೆಗೆ..

ಅಕ್ಷರ ಕಲಿತವಳಲ್ಲ ಹುಟ್ಟುತ್ತಾ ಕಡುಬಡುತನ ಅಪ್ರಾಪ್ತ ವಯಸ್ಸಿನಲ್ಲಿ ವಿವಾಹ ಏನು ಅರಿಯದ ವಯಸ್ಸಿನಲ್ಲಿ ತಾಯ್ತನ ಕನಸು ಮನಸ್ಸಿನಲ್ಲಿ ಊಹಿಸದೇ ಇದ್ದಂತಹ ಸಹಚರನಾಗಿ ಜೀವಮಾನವಿಡಿ ಬದುಕಿ ಬಾಳಬೇಕಿದ್ದ ಪತಿಯ ಅಕಾಲಿಕ ಮೃತ್ಯು ಕೈಯಲ್ಲಿ ಎರಡು ಪುಟ್ಟ ಮಕ್ಕಳು ಗಂಡನಿಲ್ಲದೆ ಬಾಳಬೇಕಾದ ಅನಾಯಾಸದ ಸವಾಲು ಇನ್ನೊಂದು ಕಡೆ ಬದುಕು ನಡೆಸುವ ಮಕ್ಕಳನ್ನು ಸಾಕಿಸಲಹುವ ದೊಡ್ಡ ಜವಾಬ್ದಾರಿ.ಕಾಡು ನದಿ ಝರಿ ಬೆಟ್ಟ ಪುಟ್ಟ ಗುಡಿಸಲು ಮನೆಯಿಂದ ನರ್ಸರಿ ನರ್ಸರಿ ನರ್ಸರಿಯಿಂದ ಮನೆಗೆ ಇದೆ ಈಕೆಯ ಪ್ರಪಂಚವಾಗಿತ್ತು. ಅಕ್ಷರಸ್ಥರು ಎಂದು ಕರೆಸಿಕೊಳ್ಳುವ ಕೆಲವು ಹಿಂಸಾರಸಿಕರಿಂದ ಕೂಡಿದ ಮೋಸದ ಜಗತ್ತು.ಇವೆಲ್ಲ ಕಷ್ಟ ಕಾರ್ಪಣ್ಯಗಳ ನಡುವೆ ಪ್ರಕೃತಿಯನ್ನೇ ತನ್ನ ಜೀವಾಳವನ್ನಾಗಿಸಿ ಜೀವನದ ತೂಗು ಉಯ್ಯಾಲೆಯನ್ನು ತೂಗಿ ಅಲ್ಲಿಯೇ ಸಂತೃಪ್ತಿ ಬದುಕನ್ನ ನಡೆಸಿದವರು ತುಳಸಿ ಗೌಡ.ಪ್ರತಿದಿನ ಒಂದು ಪುಟ್ಟ ಗಿಡ ನೆಟ್ಟಿ ನರ್ಸರಿಗೆ ಹೋಗಿ ಕೆಲಸ ಮಾಡಿ ಮಧ್ಯಾಹ್ನ ಮೂರರ ಹೊತ್ತಿಗೆ ಗಂಜಿ ಊಟ ಮಾಡಿ ರಾತ್ರಿ ಎಂಟರ ಹೊತ್ತಿಗೆ ಗುಡಿಸಲು ಸೇರಿ ಮಕ್ಕಳಿಗೆ ಊಟ ಬಡ್ಸಿ ತಾನು ಊಟ ಮಾಡಿ ಮತ್ತೆ ಮಾರನೇ ದಿನ ಬೆಳಗ್ಗೆ ನಾಲ್ಕು ಗಂಟೆಗೆ ಏಳೋದೇ ಆಕೆಯ ದೈನಂದಿನ ಕರ್ತವ್ಯವಾಗಿತ್ತು. ದಶಕಗಳ ಹಿಂದೆ ಆಕೆ ನೆಟ್ಟಿದ ಪುಟ್ಟ ಸಸಿಯಲ್ಲ ಇಂದು ಜವರಾಯನ ರೂಪ ತಳೆದು ಗಗನಚುಂಬಿ ಕಟ್ಟಡದಂತೆ ಬಾನಂಗಳಕ್ಕೆ ಮುತ್ತಿಡುವಷ್ಟು ದಷ್ಟಪುಷ್ಟವಾಗಿ ಕಡುಹಸಿರಿನಿಂದ ಸಮೃದ್ಧಿಗೊಂಡು ಎತ್ತರವಾಗಿ ಹೆಮ್ಮರವಾಗಿದೆ.ತುಳಸಿ ಗೌಡರು ಬೆಳೆಸಿದಂತಹ ಗಿಡ ಮರಗಳು ಒಂದೆರಡು ಅಲ್ಲ ಸಾವಿರ ಅಲ್ಲ 30,00,000ಕ್ಕೂ ಮಿಗಿಲು…

ರಸಋಷಿ ಕುವೆಂಪು ಪ್ರಕೃತಿಯಲ್ಲಿ ದೇವರನ್ನು ಕಂಡರು. ದೇವರು ರುಜು ಮಾಡಿದನು ರಸವಶನಾಗುತ ಕವಿ ಅದ ನೋಡಿದನು ಎಂದು ತಮ್ಮ ಕವನ ಸಂಕಲನ ಪಕ್ಷಿ ಕಾಶಿಯಲ್ಲಿ ಭಾವಪಂಜರದ ಗಿಣಿಯನ್ನು ಬಿಡುಗಡೆಗೊಳಿಸಿದರು. ಅಂತೇ ತುಳಸಿ ಗೌಡರು ಪ್ರಕೃತಿಯಲ್ಲೇ ದೇವರನ್ನು ಕಂಡುಕೊಂಡವರು.ವನದೇವಿಯ ಸೌಂದರ್ಯವನ್ನು ಇನ್ನಷ್ಟು ಸಂಪತ್ಧ್ಭರಿತವಾಗಿ ವೈಭವೀಕರಣಗೊಳಿಸಲು ಇನ್ನಷ್ಟು ವೃದ್ಧಿಗೊಳಿಸಲು ತಮ್ಮ ಬದುಕನ್ನೇ ಸಮರ್ಪಿಸಿದವರು..
“ನಾನು ನನ್ನ ಮಕ್ಕಳನ್ನ ಯಾವ ರೀತಿಯಾಗಿ ಪ್ರೀತಿಸುತ್ತೇನೋ ಆ ರೀತಿಯಾಗಿ ನಾನು ಬೆಳೆಸಿದ ಗಿಡ ಮರಗಳನ್ನು ಪ್ರೀತಿಸಿದ್ದೇನೆ.ಕಳೆದ 65-70 ವರ್ಷಗಳಿಂದ ಅಜ್ಞಾತವಾಗಿ ನಾನು ಈ ಸೇವೆ ಸಲ್ಲಿಸುತ್ತಾ ಬಂದಿದ್ದೆ.ನನಗೆ ಯಾವ ಪ್ರಶಸ್ತಿ ಪುರಸ್ಕಾರದ ನಿರೀಕ್ಷೆಯು ಇರಲಿಲ್ಲ.ಅ ನಾ ಯಲ್ಲಪ್ಪ ರೆಡ್ಡಿ ಯವರು ನನ್ನ ಸೇವೆಯನ್ನ ಗುರುತಿಸಿ ನನ್ನನ್ನು ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ ಆಗುವಂತೆ ಮಾಡಿದರು. ನಾನು ಪ್ರಚಾರ ಬಯಸಿದವಳೇ ಅಲ್ಲ. ಪ್ರಶಸ್ತಿಯನ್ನು ನಾನು ಅರಸಿ ಹೋಗಲಿಲ್ಲ ಪ್ರಶಸ್ತಿ ನನ್ನ ಮನೆಗೆ ಅರಸಿ ಬಂದಿತು.ನಮಗೆಲ್ಲ ಏಕೆ ಪ್ರಶಸ್ತಿ?? ಪ್ರಶಸ್ತಿ ತೆಗೆದುಕೊಳ್ಳುವಷ್ಟು ದೊಡ್ಡ ಕೆಲಸ ನಾನು ಏನು ಮಾಡಿದ್ದೇನೆ??”
ಎಂದು ನಮ್ಮ ಪ್ರಶ್ನೆಗೆ ಸರ್ವೇಸಾಮಾನ್ಯರಂತೆ ಇದೆ ಹಾಲಕ್ಕಿ ಒಕ್ಕಲಿಗರ ಭಾಷಾ ಸೊಗಡಲ್ಲಿ ಮುಗ್ಧ ಮಗುವಿನಂತೆ ಉತ್ತರಿಸಿದ್ದ ತುಳಸಿ ಗೌಡರ ಪ್ರತಿಕ್ರಿಯೆ ಕಂಡು ತಬ್ಬಿಬ್ಬಾಗಿ ನಾನು ನನ್ನ ಗುರು ನೀಲಪ್ಪಾ ನಾಯಕ ಒಬ್ಬರ ಮುಖ ಒಬ್ರು ನೋಡಿಕೊಂಡೆವು.
ನಿಮ್ಮ ಪರಿಸರ ಸೇವೆಯನ್ನು ಗಮನಿಸಿ ಪಾರ್ಲಿಮೆಂಟ್ ನಿಮಗೆ ಕರೆಸಿಕೊಂಡು ಪ್ರಶಸ್ತಿ ಕೊಡ್ತು.ಪ್ರಧಾನಿ ಮೋದಿಜಿ ನಿಮ್ಮ ಹತ್ತಿರ ಬಂದು ಏನಂದ್ರು?? ಯಾವ ರೀತಿ ಶುಭಾಷಯ ಕೋರಿದ್ರು??

ಅಯ್ಯೋ ಅವರಿಗ್ ಕನ್ನಡ ಬರುದೆಲ್ಲ ನಂಗೆಲ್ ಹಿಂದಿ ಬತ್ತೆದು?? ಎಂದು ಚಿಕ್ಕ ಮಗು ಮುಗ್ಧರಂತೆ ಉತ್ತರಿಸುತ್ತದಲ್ಲ ಆ ರೀತಿಯಾಗಿ ಉತ್ತರಿಸಿತ್ತು ತುಳಸಿ ಗೌಡರ ಒಂದೊಂದು ಪದಗಳು.ಅಂಕೋಲಾಗೆ ಮೋದಿಜಿ ಅವರು ಬಂದಾಗ ಅವರು ನನಗೆ ನಮಸ್ಕಾರ ಮಾಡಿ ನಾನು ಕಾಲಿಗೆ ಬಿದ್ರು.ನಾನು ಅವರ ತಲೆ ನೇವರಿಸದೆ
ಉಭಯ ಕುಶಲೋಪರಿ ನಡೆಸುತ್ತಾ ತಮ್ಮ ನಿಂಗೆ ಗನ ಆಗ್ಲ್ ಅಪ್ಪು ನಿಂಗೆಲ್ ಆಯ್ತು ಅಂಕೋಲಿಲೆ?? ಅಂದು ನನಗೂ ನನ್ನ ಗುರುಗಳಿಗೂ ಒಂದು ಪಾನಕ ಮಾಡಿಸಿ ಬೀಳ್ಕೊಟ್ರು…
ತಾನು ಅಷ್ಟು ದೊಡ್ಡ ಸಾಧನೆ ಮಾಡಿದ್ದೇನೆ ತಾನು ಇಷ್ಟು ದೊಡ್ಡ ಸಾಧನೆ ಮಾಡಿದ್ದೇನೆ ನನ್ನನ್ನ ದಯಮಾಡಿ ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸು ಮಾಡಿಸಿ ಎಂದು ತಮ್ಮ ಮಾಹಿತಿ ಪತ್ರಗಳನ್ನೆಲ್ಲ ಕಳಿಸಿ ಅಲ್ಲಿ ಆ ಒಂದು ಜಾಲತಾಣಕ್ಕೆ ಹೋಗಿ ನಮಗೆ ಮತ ಹಾಕಿ ಎಂದು ಪ್ರಶಸ್ತಿಗೆ ಆ ತೊರೆಯುವ ದಾಹಪಿಪಾಸುಗಳ ನಡುವೆ ಎಂದಿಗೂ ಪ್ರಶಸ್ತಿ ಪ್ರಚಾರ ಬಯಸದೆ ವರ್ಷ ಪೂರ್ತಿ ಜೂನ್ 5 ರ ಪರಿಸರ ದಿನಾಚರಣೆಯನ್ನು ವರ್ಷದ 365 ದಿನಗಳಲ್ಲಿಯೂ ಆಚರಿಸಿ ಪ್ರತಿದಿನ ಒಂದು ಪುಟ್ಟ ಗಿಡವನ್ನು ನೆಟ್ಟು ತನ್ನ ಜೀವಮಾನವಿಡಿ ಅದನ್ನೇ ದಿನಚರಿಯನ್ನಾಗಿ ಪಾಲಿಸಿ ಪೋಷಿಸಿಕೊಂಡು ಬಂದು ಕರಾವಳಿ ತಪ್ಪಲಿಗೆ ಅಂಟಿದ ಮಲೆನಾಡನ್ನು ಇನ್ನಷ್ಟು ಉನ್ನತೀಕರಣಗೊಳಿಸಿದ ಹಸಿರು ಕ್ರಾಂತಿಯ ಅಡವಿ ದೇವಿ ಅಜ್ಞಾತವಾಗಿ ವನ ಸಂಪತ್ತನ್ನು ಸಮೃದ್ಧಿಗೊಳಿಸಿದಾತೆ ಎಲ್ಲರಿಗೂ ಮಾದರಿಜೀವ. ಇನ್ಮೇಲೆ ಕೇವಲ ನೆನಪು. ನಿನ್ನೆ ಬಾರದ ಲೋಕಕ್ಕೆ ತೆರಳಿದ್ದಾರೆ ಎಂಬ ಸುದ್ದಿ ತಡರಾತ್ರಿ ತಿಳಿಯಿತು.ಪದ್ಮಶ್ರೀ ತುಳಸಿ ಗೌಡರ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲಿ..
ಫೋಟೋ ಕೃಪೆ – ನೀಲಪ್ಪ ನಾಯ್ಕ್
- ನಿತಿನ್ ಅಂಕೋಲಾ
