‘ ವಚನ ಬೋಧಿ’ ಕೃತಿ ಪರಿಚಯ

ಶರಣತತ್ವ’ದ ಒಟ್ಟು ಸಾರವೇ ಡಾ.ಶಿವಕುಮಾರರ ‘ ವಚನಬೋಧಿ’ಕೃತಿ. ಈ ಕೃತಿಯ ಕುರಿತು ಲೇಖಕಿ ಡಿ.ಶಬ್ರಿನಾ ಮಹಮದ್ ಅಲಿ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ… 

ನಮ್ಮ ಕನ್ನಡ ನೆಲದ ಇತಿಹಾಸದಲ್ಲಿ ಸಮಾನತೆ’ ಸಾರಿದ ‘ಮಾನವೀಯತೆ’ ತುಂಬಿದ ,ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಅಧ್ಯಾಯವೆಂದರೆ ಅದು ‘ಶರಣರ ಅಧ್ಯಾಯ’ ಎಂದು ನಾವೆಲ್ಲರೂ ಹೆಮ್ಮೆಯಿಂದ ಹೇಳಬೇಕಾದ ಸಂಗತಿಯಾಗಿದೆ. ಕಾರಣ ೧೨ ನೇ ಶತಮಾನದಲ್ಲಿ,ಜನರು ಜಾತಿ ಬೇಧ, ಲಿಂಗಬೇಧ,ವರ್ಗಬೇಧ,ವರ್ಣಬೇಧ ಎಂಬ ಘನಘೋರ ಶೋಷಣೆಯ ಕಗ್ಗತ್ತಲಿನಲ್ಲಿ ನೊಂದು ಬೆಂದು ಜೀವಂತ ಶವವಾಗಿದ್ದರು‌. ಆ ಜೀವಂತ ಶವಗಳಿಗೆ ‘ಶರಣತತ್ವ’ದ ಮೂಲಕ ಜೀವ ತುಂಬಿ, ನೀವು…. ನಮ್ಮಂತೆ ಮನುಷ್ಯರು ಬನ್ನಿ….ಎಂದು ಹೇಳಿ ಜಾತಿ,ಲಿಂಗ,ವರ್ಗ,ವರ್ಣಬೇಧವಿಲ್ಲದೆ ಎಲ್ಲರ ಕೈ ಹಿಡಿದು ಎತ್ತಿ ಅಂಧಕಾರದಲ್ಲಿದ್ದ ಜನರ ಬದುಕಿಗೆ ಬೆಳಕು ಹರಿಸಿದವರು ‘ಮಹಾಮಾನವತವಾದಿ’ ‘ಜಗಜ್ಯೋತಿ’ ಬಸವಣ್ಣನವರು ಎಂಬುದನ್ನ ನಾವು ಮರೆಯುವಂತಿಲ್ಲ!

ಇದನ್ನರಿತವರು ಯಾರೇಯಾಗಲಿ ತಮ್ಮ ಮಾತುಗಳಲ್ಲಿ,ಬರಹಗಳಲ್ಲಿ ವಚನಸಾಹಿತ್ಯವನ್ನ ಮತ್ತೆ ಮತ್ತೆ ಮೆಲುಕು ಹಾಕುತ್ತಾರೆ. ಈ ನಿಟ್ಟಿನಲ್ಲಿ ‘ಶರಣತತ್ವ’ವನ್ನ ಒಪ್ಪಿ ಅಪ್ಪಿಕೊಂಡ ‘ಅಕ್ಕಾ ಐಎಎಸ್ ಅಕಾಡೆಮಿ'(ದೆಹಲಿ,ಬೆಂಗಳೂರು,ಮೈಸೂರು)ಯ ನಿರ್ದೇಶಕರಾದ ಡಾ.ಶಿವಕುಮಾರ ಅವರು ‘ಶರಣತತ್ವ’ದ ಸಾರವನ್ನೆ ಒಟ್ಟುಮಾಡಿ ‘ವಚನಬೋಧಿ’ ಎಂಬ ಅತ್ಯಮೂಲ್ಯವಾದ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯಲ್ಲಿ ೬೦ ಶರಣ-ಶರಣೆಯರ ವಚನಗಳನ್ನು ಸರಳವಾಗಿ ಅರ್ಥೈಸಿದ್ದಾರೆ.

ಈ ಕೃತಿಗೆ ಮುನ್ನುಡಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮೆಯ ಪ್ರಶಸ್ತಿ ಪುರಸ್ಕೃತರಾದ ಡಾ.ಮೂಡ್ನಕೂಡು ಚಿನ್ನಸ್ವಾಮಿ ಸರ್ ಅವರು ಬರೆದಿದ್ದಾರೆ. ಅದರಲ್ಲಿ ಲೇಖಕರ ಕುರಿತು .”ಡಾ.ಶಿವಕುಮಾರ್ ಅವರು ಜಗತ್ತಿನ ತಾರತಮ್ಯದ ರಾಜಧಾನಿಯಾದ ಭಾರತದ ಜಾತಿವ್ಯವಸ್ಥೆಯನ್ನ ಬಹುಜನರೆದುರು ಬಿಚ್ಚಿಡುತ್ತಾ ಯುವಕರಲ್ಲಿ ಸ್ವಾಭಿಮಾನವನ್ನು ತುಂಬುತ್ತಾ ಬಂದಿದ್ದಾರೆ….ಎಂದು ಹೇಳುತ್ತಾರೆ.” ಚಿನ್ನಸ್ವಾಮಿಯವರ ಈ ಮಾತಿನಲ್ಲಿ ‘ಜಗತ್ತಿನ ತಾರತಮ್ಯದ ರಾಜಧಾನಿ ಭಾರತ’ ಎಂಬ ಸಾಲು ನನ್ನನ್ನು ಬಹುವಾಗಿ ಕಾಡತೊಡಗಿತು!

ಭಾರತದ ಇತಿಹಾಸ ಮೆಲುಕು ಹಾಕಿದಾಗ ಅವರ ಈ ಮಾತು ಸತ್ಯವೆಂದೆನಿಸಿತು. ಜೊತೆಗೆ ‘ಶರಣತತ್ವ’ ಇದರ ಹೊರತಾಗಿತ್ತು ಎಂಬುದು ನೆನೆದು ಮನಸ್ಸಿಗೆ ಆನಂದವಾಯಿತು.

ಪುಟ ತೆರೆದಂತೆ ಮೊದಲಿಗೆ ‘ಪೀಠಿಕಾ ವಚನಗಳು’ ಎಂಬ ಶೀರ್ಷಿಕೆಯಡಿ ಬಸವಣ್ಣನವರ ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ….ಎಂಬ ವಚನದಿಂದ ಪ್ರಾರಂಭಿಸಿದ್ದಾರೆ. ಮುಂದುವರೆದು ಜೇಡರ ದಾಸಿಮಯ್ಯ,ಅಲ್ಲಮಪ್ರಭುಗಳು, ಅಕ್ಕಾ ಮಹಾದೇವಿ &ಚೆನ್ನಬಸವಣ್ಣನವರ ಅತ್ಯದ್ಭುತ ವಚನಗಳನ್ನು ಪರಿಚಯಿಸಿದ್ದಾರೆ. ಪರಿಚಯಿಸಿದ ಪ್ರತಿಯೊಬ್ಬ ಶರಣರ,ಪ್ರತಿಯೊಂದು ವಚನಗಳ ಪ್ರತಿ ಪದವೂ ಕೂಡ ಓದುಗನ ಅಂತರಂಗದ ಅರಿವನ್ನ ಅರಳಿಸುವ ಕಾಯಕ ಮಾಡುತ್ತಿವೆ ಎಂಬುದು ನನಗಾದ ಅನುಭವವೆಂದು ಹೇಳಲಿಚ್ಛಿಸುತ್ತೇನೆ!

ಅವುಗಳಲ್ಲಿ ಕೆಲವನ್ನ ಪ್ರಸ್ತಾಪಿಸುವುದಾದರೆ….

ಬಸವಣ್ಣನವರ ವಚನ ಹೀಗಿದೆ…..

ಕೆಂಚ ಕರಿಕನ ನೆನೆದಡೆ ಕರಿಕನಾಗಬಲ್ಲನೆ ಕರಿಕ ಕೆಂಚನ ನೆನೆದಡೆ ಕೆಂಚನಾಗಬಲ್ಲನೆ ದರಿದ್ರನು ಸಿರಿವಂತನ ನೆನೆದಡೆ ಸಿರಿವಂತನಾಗಬಲ್ಲನೆ ಸಿರಿವಂತ ದರಿದ್ರನ ನೆನೆದಡೆ ದರಿದ್ರನಾಗಬಲ್ಲನೆ ! ಮುನ್ನಿನ ಪುರಾತನರ ನೆನೆದು ಧನ್ಯನಾದೆಹೆನೆಂಬ ಮಾತಿನ ರಂಜಕರನೇನೆಂಬೆ ಕೂಡಲಸಂಗಮದೇವಾ.

ಯಾವುದೇ ನಿಘಂಟಿನ ಸಹಾಯವಿಲ್ಲದೆ ಓದಿದವರಿಗೆಲ್ಲಾ ಅರ್ಥವಾಗುವ ಬಸವಣ್ಣನವರ ಈ ವಚನ ನಿಜವಾದ ದೇವರಾದ ನಿರಾಕಾರ ಶಿವನನ್ನ ಬಿಟ್ಟು ದೇವರಲ್ಲದ ಅನ್ಯರನ್ನ ನೆನೆಯುವವರ ವ್ಯರ್ಥ ಪ್ರಯತ್ನದ ಕುರಿತು ನೇರವಾಗಿ ವಿಡಂಬಿಸಿದ್ದಾರೆ. ಕೆಂಪುಗಿರುವವನು ಕರಿಯನನ್ನ ನೆನೆದಾಗ ಕರಿಯನಾಗಬಲ್ಲನೆ? ಅದೇ ರೀತಿ ಕಪ್ಪಗಿದ್ದವನು ಕೆಂಪನನ್ನ ನೆನೆದರೆ ಕೆಂಪಾಗಿ ಬಿಡುವನೆ? ಬಡವ ಶ್ರೀಮಂತನನ್ನ ನೆನೆದರೆ ಶ್ರೀಮಂತನಾಗಬಲ್ಲನೆ..? ಎಂದು ಪ್ರಶ್ನಿಸುತ್ತಾ ಅದು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಪುರಾತನರನ್ನ ಸ್ಮರಿಸಿದ ಮಾತ್ರಕ್ಕೆ ನಾನು ಧನ್ಯನಾದೆ ಎನ್ನುವುದು ಕೂಡ ಶುದ್ಧ ಸುಳ್ಳು! ಪುರಾಣದ ಪುಣ್ಯ ಪುರುಷರನ್ನ ನೆನೆಯುವ ಮೂಲಕ ದೇವರನ್ನ ಕಂಡುಕೊಂಡೆ ಎಂಬುದನ್ನ ಅಲ್ಲಗಳೆದಿದ್ದಾರೆ.

ಅಲ್ಲಮರ ವಚನ:

ಮದ್ಯಮಾಂಸಾದಿಗಳ ಮುಟ್ಟೆವೆಂದೆಂಬಿರಿ
ನೀವು ಕೇಳಿರೇ-?!
ಮದ್ಯವಲ್ಲವೇನು ಅಷ್ಟಮದಂಗಳು?
ಮಾಂಸವಲ್ಲವೇನು ಸಂಸಾರಸಂಗ?
ಈ ಉಭಯವನತಿಗಳೆದಾತನೇ ಗುಹೇಶ್ವರಲಿಂಗದಲ್ಲಿ ಲಿಂಗೈಕ್ಯನು.

ಈ ದೇಹ ಮಾಂಸ ರಕ್ತ ಇತ್ಯಾದಿ ಸಪ್ತಧಾತುಗಳಿಂದ ಆಗಿದೆ ಎಂಬುದರ ಅರಿವಿದ್ದರೂ ಕೆಲವರು ‘ಮಾಂಸ’ ಎಂಬ ಪದವೇ ‘ವಾಕಾರಿಕೆ’ ಎಂಬಂತೆ ವರ್ತಿಸುತ್ತಾರೆ! ಇನ್ನೂ ಮಾಂಸ ತಿನ್ನುವವರನ್ನಂತೂ ಮೃಗಗಳಿಗಿಂತ ಕಡೆಯಾಗಿ ನೋಡುತ್ತಾರೆ. ಅದಕೆ ಅಲ್ಲಮರು ಈ ವಚನದಲ್ಲಿ ಅಷ್ಟಮದಗಳನ್ನ ಮಧ್ಯವೆಂದಿದ್ದಾರೆ, ಸಂಸಾರಸಂಗವನ್ನ ಮಾಂಸವೆಂದಿದ್ದಾರೆ. ಬಾಹ್ಯವಾಗಿ ತಿನ್ನುವ ಮಾಂಸಾಹಾರಿಗಳಿಗಿಂತ ತನ್ನೊಳಗಿರುವ ಅಷ್ಟಮದಗಳನ್ನ ಪೋಷಿಸುವವರೆ ಅಪಾಯ ಎಂದಿದ್ದಾರೆ.

ತದನಂತರದಲ್ಲಿ ಶಿವಕುಮಾರ ಅವರು ಒಟ್ಟು ೬೦ ವಚನಕಾರರನ್ನ ಅವರ ವಚನಗಳ ಮೂಲಕ ನಮಗೆ ತುಂಬಾ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ‌‌. ‘ವಚನಬೋಧಿ’ಯ ಮತ್ತೊಂದು ವಿಶೇಷವೆಂದರೆ ಸುಖಾಸುಮ್ಮನೆ ವಿಷಯವನ್ನ ಅನಾವಶ್ಯಕವಾಗಿ ಎಳೆದುಕೊಂಡು ಹೋಗಿಲ್ಲ. ಸುದೀರ್ಘ ವಿವರಣೆ ಓದುಗರನ್ನ ತಲುಪಲು ಸಾಧ್ಯವಿಲ್ಲ ಎಂಬುದನ್ನರಿತ ಡಾ.ಶಿವಕುಮಾರರು ವಿದ್ಯಾರ್ಥಿಗಳಿಗೆ, ಓದುಗರಿಗೆ ಅನುಕೂಲವಾಗುವಂತೆ ಪ್ರತಿ ವಚನಕ್ಕೆ ಅಗತ್ಯವಿದ್ದಷ್ಟನ್ನ ಮಾತ್ರ ಅತ್ಯಂತ ಸರಳವಾಗಿ ಅರ್ಥೈಸಿದ್ದಾರೆ. ಆದಯ್ಯ ಅವರ ಒಂದು ವಚನ ಹೀಗಿದೆ..

ಮಂಡೆ ಬೋಳಾದರೇನು ಹುಟ್ಟು ಬೋಳಾಗದನ್ನಕ್ಕರ ?
ತನಹ ನಿರ್ವಾಣವಾದರೇನೋ
ಆಶೆ ನಿರ್ವಾಣವಾಗದನ್ನಕ್ಕರ?
ಇಂದ್ರಿಯ ನಿಗ್ರಹವ ಮಾಡಿದೊಡೇನೊ,
ಷಟ್ಸ್ಥಲಾನುಗ್ರಹವಾಗದನ್ನಕ್ಕರ?
ಸೌರಾಷ್ಟ ಸೋಮೇಶ್ವರಲಿಂಗ ಬರಿದೆ ಒಲಿವೆನೊ.

ಭಕ್ತಿ& ಭಕ್ತ ಈ ಎರಡರ ನಿಜ ಅರ್ಥ ತಿಳಿಯುವಲ್ಲಿ ಶರಣರಿಗೆ ಶರಣರೆ ಸಾಟಿ! ಬಸವಾದಿ ಶರಣರು ಆಡಂಬರದ ಬಾಹ್ಯ ಆಚರಣೆಗಳನ್ನು ಎಂದೂ ಒಪ್ಪಲಿಲ್ಲ ಪಾಲಿಸಲಿಲ್ಲ! ಅವರ ಬದುಕಿನ ಅನುಭಾವದ ಪ್ರತಿ ಸಾಲು ಅಂತರಂಗದ ಅರಿವಿನ ವಿಸ್ತಾರ ಹೇಗೆ ಮಾಡಿಕೊಳ್ಳಬೇಕು ಎಂಬುದರ ಕುರಿತದ್ದೆಯಾಗಿದೆ ಎಂಬುದನ್ನ ಈ ಮೇಲಿನ ವಚನ ಸಾರುತ್ತಿದೆ.

ಕೇತಲದೇವಿ ವಚನ

ಹದ ಮಣ್ಣಲ್ಲದೆ ಮಡಕೆಯಾಗಲಾರದು
ವ್ರತಹೀನನ ಬೆರೆಯಲಾಗದು
ಬೆರೆದಡೆ ನರಕ ತಪ್ಪದು;
ನಾನೊಲ್ಲೆ ಬಲ್ಲೆನಾಗಿ ಕುಂಭೇಶ್ವರಾ.

ಮಡಿಕೆ ಮಾಡಲು ಹದವಾದ ಮಣ್ಣೇ ಆಗಬೇಕು. ಒಂದುವೇಳೆ ಹದವಿಲ್ಲದ ಮಣ್ಣಿನಿಂದ ಮಡಿಕೆ ಮಾಡ ಹೊರಟರೆ ಅದು ಮತ್ತೆ ಮತ್ತೆ ಮುರಿದುಬೀಳುವುದು. ಹಾಗೆಯೇ ಸದ್ಗುಣವಲ್ಲದವರೊಂದಿಗೆ ಸ್ನೇಹ ಮಾಡಿದರೆ ನಮಗೆ ನರಕದ ದರ್ಶನವಾಗುತ್ತದೆ ಎಂದು ಮಡಿಕೆಯ ಹೋಲಿಕೆ ನೀಡುವ ಮೂಲಕ ಸ್ನೇಹ ಯಾರೊಂದಿಗೆ ಮಾಡಬೇಕು ಎಂಬ ಬದುಕಿನ ಸತ್ಯವನ್ನ ಕೇತಲದೇವಿ ಈ ವಚನದಲ್ಲಿ ಅರುಹಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಜಗಕೆಲ್ಲಾ ಸಮಾನತೆಯತತ್ವ ಸಾರಿದ ವಚನಕಾರರು ಎಂದ ತಕ್ಷಣ ನಮಗೆ ಬಸವಣ್ಣನವರು,ಅಲ್ಲಮರು,ಜೇಡರದಾಸಿಮಯ್ಯಾ,ಅಂಬಿಗರ ಚೌಡಯ್ಯಾ,ಅಕ್ಕಾಮಹಾದೇವಿ,ಚೆನ್ನಬಸವಣ್ಣ, ಮಾದಾರ ಚೆನ್ನಯ್ಯಾ,ಡೋಹರ ಕಕ್ಕಯ್ಯಾ,ಸೂಳೆ ಸಂಕವ್ವೆ…ಹೀಗೆ ಒಂದಷ್ಟು ವಚನಕಾರರು ಮಾತ್ರ ನೆನಪಿಗೆ ಬರುತ್ತಾರೆ. ಆದರೆ ಈ ಕೃತಿ ನಮಗೆ ಬಿಡಿಬಿಡಿಯಾಗಿ ನಮ್ಮ ಅರಿವನಲ್ಲಿ ಇಲ್ಲದ ಅದರಲ್ಲೂ ನಾವು ಕೇಳದ ಸಾಕಷ್ಟು ವಚನಕಾರರ ವಚನಗಳನ್ನು ಪರಿಚಯಿಸಿದೆ. ಉದಾ: ಸಕಲೇಶ ಮಾದರಸ,ಘಟ್ಟಿವಾಳಯ್ಯ,ಚಂದಿಮರಸ,ಮನುಮುನಿ ಗೊಮ್ಮಟಯ್ಯಾ,ಅವಸರದ ರೇಚಣ್ಣ, ಆದಯ್ಯಾ ಕಾಡಸಿದ್ದೇಶ್ವರ,ಗೋರಕ್ಷ,ಗುಪ್ತ ಮಂಚಣ್ಣ, ಗುಡ್ಡವ್ವೆ, ಕೇತಲದೇವಿ, ಗೊಗ್ಗವ್ವೆ,ಕೋಲಶಾಂತಯ್ಯ. ಹೀಗೆ ಸಾಲು ಸಾಲು ವಚನಕಾರರನ್ನ ಅವರ ವಚನಗಳ ಮೂಲಕ ನಮಗೆ ಕಟ್ಟಿಕೊಟ್ಟಿದ್ದಾರೆ‌‌. ನಾನಂತು ಈ ‘ವಚನಬೋಧಿ’ ಕೃತಿ ಓದಿ ಕೃತಿಕಾರರಾದ ಡಾ.ಶಿವಕುಮಾರ್ ಸರ್ ಅವರಿಗೆ ಹಾಗೂ ಈ ಕೃತಿ ನಮಗೆ ಕಳಿಸುವಂತೆ ಸೂಚಿಸಿದ ಮೈಸೂರಿನ ಆಧ್ಯಾತ್ಮಿಕ ಚಿಂತಕರಾದ ಶಂಕರ ದೇವನೂರು ಗುರುಗಳಿಗೂ ಧನ್ಯಳಾಗಿದ್ದೇನೆ! ಶರಣರ ಚಿಂತನೆಗಳು ನಮ್ಮ ಅಂತರಂಗ ಬೆಳಗುವ ನಂದಾದೀಪವಾಗಿರುವ ಕಾರಣ ನಾವೆಲ್ಲರೂ ಆ ಹಾದಿಯಲ್ಲಿ ಸಾಗಿದರೆ ನಮಗೂ ಬೆಳಕಿನ ದರ್ಶನವಾಗುವುದು. ಏನಂತೀರಿ…?

*ಶರಣು ಶರಣಾರ್ಥಿಗಳು*


  • ಡಿ.ಶಬ್ರಿನಾ ಮಹಮದ್ ಅಲಿ – ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW