‘ಅಮ್ರಪಾಲಿ’ ಪುಸ್ತಕ ಪರಿಚಯ : ಮಾಲತಿ ರಾಮಕೃಷ್ಣ ಭಟ್

ಲೇಖಕಿ ಗಾಯತ್ರಿ ರಾಜ್ ಅವರು ಬರೆದ ಅದ್ಭುತ ಐತಿಹಾಸಿಕ ಕಾದಂಬರಿ ಅಮ್ರಪಾಲಿ. ಕ್ರಿ. ಪೂ. ೬೦೦ ರಲ್ಲಿ ಮಗಧ ಮತ್ತು ವೈಶಾಲಿ ದೊರೆಗಳ ಆಳ್ವಿಕೆಯ ಕಾಲದಲ್ಲಿ ನಡೆಯಿತೆನ್ನಲಾದ ಈ ಕಥೆಯನ್ನು ಲೇಖಕಿ ಆಧಾರ ಹಾಗೂ ಮಾಹಿತಿಗಳ ಸಂಗ್ರಹದಿಂದ ಅಧ್ಯಯನ ಪೂರ್ಣವಾಗಿ ಬರೆದಿದ್ದಾರೆ. ಅವರ ಈ ಪ್ರಯತ್ನ ಶ್ಲಾಘನೀಯವಾಗಿದೆ. ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಕೃತಿ : ಅಮ್ರಪಾಲಿ 
ಲೇಖಕರು: ಗಾಯತ್ರಿ ರಾಜ್
ಸಾಹಿತ್ಯಲೋಕ ಪಬ್ಲಿಕೇಷನ್ ಬೆಂಗಳೂರು
ಮುದ್ರಣದ ವರ್ಷ: ೨೦೨೪
ಪುಟಗಳು: ೨೪೮
ಬೆಲೆ: ರೂ. ೩೨೫

ಹುಟ್ಟಿನಿಂದ ಹಿಡಿದು ಕೊನೆಯ ತನಕವೂ ತನ್ನ ಹಕ್ಕುಗಳಿಗಾಗಿ ಹೋರಾಡಿದ ಆಮ್ರಪಾಲಿಯದು ದುರಂತದ ಬದುಕು.ಅನಾಥ ಶಿಶುವಾಗಿ ಮಾವಿನ ತೋಪಿನಲ್ಲಿ ಸಿಕ್ಕ ಕೂಸನ್ನು ಮಕ್ಕಳಿಲ್ಲದ ಆಚಾರ್ಯ ಕುಮಾರ ಭಟ್ಟ ಮತ್ತವರ ಪತ್ನಿ ಮಲ್ಲಿಕಾ ಸಾಕಿ ಬೆಳೆಸುತ್ತಾರೆ. ಅವಳೇ ಆಮ್ರಪಾಲಿ. ದೈವದತ್ತವಾದ ಅಪೂರ್ವ ಸೌಂದರ್ಯ ಹೊಂದಿದ ಅವಳ ರೂಪವೇ ಅವಳಿಗೆ ಶಾಪವಾಯಿತೇನೋ.

ತಂದೆ ನಾಟ್ಯ ಗುರುವಾಗಿದ್ದರೂ ಮಗಳಿಗೆ ನೃತ್ಯ ಕಲಿಕೆ ನಿಷಿದ್ಧವಾಗಿತ್ತು. ಆಸಕ್ತಿಯಿಂದ ಮರೆಯಲ್ಲಿ ನಿಂತು ನೋಡಿ -ಆಲಿಸಿಯೇ ನಾಟ್ಯ ಕಲಿತು ತಪ್ಪಾಗಿ ನರ್ತಿಸುತ್ತಿದ್ದ ಮಗಳಿಗೆ ಅಮ್ಮ ಮಲ್ಲಿಕಾ ಸರಿಯಾಗಿ ಹೇಳಿ ಕೊಟ್ಟು ತಿದ್ದುತ್ತಾಳೆ. ಮಲ್ಲಿಕಾ ನೃತ್ಯ ಕಲಾವಿದೆಯಾಗಿದ್ದರೂ ಅಜ್ಞಾತವಾಗಿರಲು ಕಾರಣವೇನು? … ತಾನು ನೃತ್ಯಕಲಿಸಿದ್ದನ್ನು ಎಲ್ಲೂ ಹೇಳಬಾರದು ಮತ್ತು ಆಮ್ರಪಾಲಿ ಎಂದಿಗೂ ಸಾರ್ವಜನಿಕವಾಗಿ ನರ್ತಿಸಬಾರದು ಎಂದು ವಚನ ತೆಗೆದು ಕೊಂಡಿದ್ದೇಕೆ?.

ಸ್ನೇಹಿತೆ ಜುನು ನರ್ತಿಸ ಬೇಕಾಗಿದ್ದ ವೇದಿಕೆಯಲ್ಲಿ ಆಮ್ರಪಾಲಿ ನರ್ತಿಸಿ “ಜನಪದ ಕಲ್ಯಾಣಿ” ಪ್ರಶಸ್ತಿಯನ್ನು ಗೆದ್ದಿದ್ದೇ ಮುಂದೆ ಅವಳ ಬದುಕಿನ ದಿಕ್ಕನ್ನೇ ಬದಲಾಯಿಸಿ ಬಿಟ್ಟಿತ್ತು.! ಅಂದು ತಾಯಿಗೆ ಕೊಟ್ಟ ಮಾತನ್ನು ಉಳಿಸಿ ಕೊಳ್ಳದೆ ವಚನಭ್ರಷ್ಟಳಾಗಿದ್ದಳು. ಆ ಕ್ಷಣದ ತಪ್ಪಿಗೆ “ಕುಲವಧು”ವಾಗಿ ಬಾಳ ಬೇಕಾಗಿದ್ದವಳು ಇಷ್ಟವಿಲ್ಲದಿದ್ದರೂ “ನಗರವಧು”ವಾಗಿ ಹೋಗಿದ್ದಳು. ದೇಶ ಭಕ್ತಿಗಾಗಿ ,ವಜ್ಜಿ ಸಮಾಜದ ಘನತೆ ಕಾಪಾಡಲು ಹೆತ್ತವರಿಂದ ದೂರವಾಗಿ ಗಣಿಕೆಯಾದಳು.

ಅಂದಿನ ಪುರುಷ ಪ್ರಧಾನವಾದ ಸಮಾಜದಲ್ಲಿ ಅರ್ಹೀನ ಸಂಪ್ರದಾಯಕ್ಕೆ ಬಲಿಯಾಗಿ, ವಿವಾಹವಾಗ ಬೇಕಾಗಿದ್ದ ತನ್ನ ಪ್ರಿಯಕರ ಪುಷ್ಪ ಕುಮಾರನನ್ನು ಕಳೆದುಕೊಂಡು ಗಣಿಕೆಯಾಗಿ ಮದುವೆ ಕನಸನ್ನು ತೊರೆಯುವಂತಾಯಿತು. ಆದರೂ ಆ ಬದುಕಲ್ಲೂ ಅವಳು ಎಲ್ಲರೂ ಮೆಚ್ಚುವಂತೆ ಬದುಕಿ ಸಾರ್ಥಕತೆ ಮೆರೆದಳು. ಅವಳ ಶೃಂಗಾರ, ಬಯಕೆ, ಹತಾಶೆ ನೋವು ಹಾಗೂ ಮನದ ಕೋಲಾಹಲಗಳನ್ನು ಲೇಖಕಿ ಇಲ್ಲಿ ಮನಮಿಡಿಯುವಂತೆ ನಿರೂಪಿಸಿದ್ದಾರೆ.

ಒಮ್ಮೆ ವೇಷ ಮರೆಸಿ ಬಂದ ಶತ್ರು ದೇಶದ ಬಿಂಬಸಾರ ಅವಳ ಪ್ರಾಣ ಕಾಪಾಡುತ್ತಾನೆ. ಆತನ ಪ್ರೀತಿಯಲ್ಲಿ ಸಿಕ್ಕು ಅವಳ ವೃತ್ತಿಗೆ ನಿಷಿದ್ಧವಾದ ತಾಯ್ತನದಲ್ಲಿ ರಹಸ್ಯವಾಗಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಸ್ನೇಹಿತೆ ಸುಪ್ರಭಾ ಆ ಮಗುವನ್ನು ರಕ್ಷಿಸುತ್ತಾಳೆ. ತನ್ನ ಹೆತ್ತ ಮಗನಿಗೆ ಎದೆಹಾಲನ್ನು ನೀಡಲಾಗದ ನತದೃಷ್ಠ ಹೆಣ್ಣು ಆಮ್ರಪಾಲಿಯ ಅಸಹಾಯಕತೆಗೆ ಕಣ್ತುಂಬಿ ಬರುತ್ತದೆ. ತಪ್ಪಿಲ್ಲದಿದ್ದರೂ, ದೇಶಭಕ್ತೆಯಾಗಿದ್ದವಳಿಗೆ ದೇಶದ್ರೋಹಿ ಪಟ್ಟ ನೀಡಿ ಅವಳನ್ನು ಸೆರೆಮನೆಗೆ ತಳ್ಳಲು ಒದಗಿದ ಘಟನೆಗಳೇನು?. ಎಂಬುದನ್ನು ಓದಿದರೇ ಇನ್ನೂಹೆಚ್ಚು ಪರಿಣಾಮಕಾರಿಯಾಗಿದೆ.

ಅರಮನೆಯ ವೈಭೋಗದ ಅಂತಃಪುರ ಜೀವನದ ನಡುವೆಯೂ, ನಿರಾಸೆಯ ನೋವು ಅನುಭವಿಸುತ್ತಿದ್ದ ವಳಿಗೆ ಗೌತಮ ಬುದ್ಧನ ಪ್ರವಚನಗಳು ಶಾಂತಿ ನೀಡುತ್ತದೆ. ಮಗಧ ದೊರೆ ಅಜಾತಶತ್ರು ಅವಳನ್ನು ರಾಣಿಯನ್ನಾಗಿ ಮಾಡಿಕೊಳ್ಳಲು ಬಯಸಿದರೂ, ತನ್ನ ಕಾರಣಕ್ಕೆ ನಡೆಯಿತೆನ್ನಲಾದ ಉಭಯ ದೇಶಗಳ ಯುದ್ಧದಲ್ಲಿ ಸತ್ತವರನ್ನು ನೆನೆದು ಅವಳು ಮದುವೆಗೆ ನಿರಾಕರಿಸುತ್ತಾಳೆ.

ರಾಜ್ಯದಲ್ಲಿ ಪ್ರಾಣಿಬಲಿಯನ್ನು ನಿಷೇಧಿಸಿ ಅಹಿಂಸೆ ಹಾಗೂ ಶಾಂತಿಮಂತ್ರವನ್ನು ಬೋಧಿಸಿದ ಬುದ್ಧನ ಅನುಯಾಯಿಯಾಗಿ ಮುಂದೆ ಅವಳು ಅರಮನೆಯ ಸಿರಿಯನ್ನು ತೊರೆಯುತ್ತಾಳೆ. ಕ್ಷಮೆ- ತ್ಯಾಗಗಳ ಮಹೋನ್ನತ ಚಿತ್ರಣವಿಲ್ಲಿದೆ. ವಿಧಿಯಾಟದಲ್ಲಿ ಸಿಕ್ಕು ನಲುಗಿದ ಚೆಲುವೆ ಆಮ್ರಪಾಲಿಯ ಹೆಸರು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಇಲ್ಲಿ ಕಥೆಯ ನಿರೂಪಣೆ, ವರ್ಣನೆ, ಭಾಷಾ ಫ್ರೌಢಿಮೆ ಇತಿಹಾಸದ ಅನೇಕ ವ್ಯಕ್ತಿಗಳ ಹಾಗೂ ಬೌದ್ಧ ಧರ್ಮದ ಕುರಿತ ಮಾಹಿತಿಗಳು ಮನ ಸೆಳೆಯುವ ಅಂಶಗಳು. ಇಂತಹ ಉತ್ತಮ ಕೃತಿಯನ್ನು ಸಾಹಿತ್ಯ ಲೋಕಕ್ಕೆ ನೀಡಿರುವ ಲೇಖಕಿ ಗಾಯತ್ರಿ ರಾಜ್ ಅವರು ಅಭಿನಂದನಾರ್ಹರು. ಇವರಿಂದ ಹೀಗೇ ಇನ್ನಷ್ಟು ಕೃತಿಗಳು ಓದುಗರಿಗೆ ಸಿಗಲಿ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW