ಅಪ್ಪ ಹೇಳುತ್ತಿದ್ದ ಕಟ್ಟು ಕಥೆಯಲ್ಲಿ ರಚನಾ ಯುವರಾಣಿಯಾಗಿದ್ದಳು, ಅಪ್ಪನ ನೆನಪು ಬಂದಾಗ ರಚನಾ ಕಣ್ಣುಗಳಲ್ಲಿ ನೀರು ಧುಮ್ಮುಕ್ಕಿತು. ಅಪ್ಪನ ಅಗಲಿಕೆಯನ್ನು ರಚನಾ ಹೇಗೆ ಎದುರಿಸಿ ಮುಂದೆ ಬಂದಳು…ಕತೆ ನೈಜ್ಯವಾಗಿದ್ದು, ಇದು ಯಾರ ಕತೆ ಎನ್ನುವುದನ್ನು ಗೌಪ್ಯವಾಗಿಡಲಾಗಿದೆ, ತಪ್ಪದೆ ಓದಿ…
ವಿಶ್ವನಾಥ್ ಅವರು ನಡೆಸುತ್ತಿದ್ದ ಅಂಗಡಿ ಬೇರೆಯವರಿಗೆ ಬಾಡಿಗೆ ಕೊಟ್ಟಾಗ ರಚನಾಳ ಮನದಾಳದ ಸಂಕಟ ಅವಳಿಗೆ ಮಾತ್ರ ಗೊತ್ತು. ಅಂದೇ ನಿರ್ಧಾರ ಮಾಡಿದಳು ತನ್ನ ಮುಂದಿನ ದಾರಿಯನ್ನು. ಕೂತು ತಿಂದರೆ ಕೊಪ್ಪರಿಗೆ ಹಣವಿದ್ದರೂ ಸಾಲದಂತೆ, ವಿಶ್ವನಾಥ್ ಅವರು ಮುಂದಿನ ದಿನಕ್ಕಾಗಿ ಅದೇನೆ ಹಣವನ್ನು ಜೋಡಿಸಿಟ್ಟರು. ಭವಿಷ್ಯದ ಯೋಚನೆ ಜಾನಕಿಯವರಿಗೂ ಕಾಡುತ್ತಿತ್ತು. ಅದಕ್ಕಾಗಿ ಎಂದೊ ತಾವು ಬಿಟ್ಟಿದ್ದ ಹವ್ಯಾಸ ಟೈಲರಿಂಗ್ ಮತ್ತೆ ಶುರು ಮಾಡಿದರು. ರಚನಾಳಿಗೆ ಮೊದಲಿಂದಲೂ ಸ್ನೇಹಿತರು ಅಷ್ಟಾಗಿರಲಿಲ್ಲ. ಅವಳ ಯೋಚನಾ ಲಹರಿಯೇ ವಿಚಿತ್ರ, ಎಲ್ಲಿ ಸ್ನೇಹ ಎಂದು ಹೋಗಿ ಅಪ್ಪನನ್ನು ಮರೆತುಬಿಟ್ಟರೆ ಇದೊಂದು ಹೆದರಿಕೆ ಯಾರ ಜೊತೆಯೂ ಅತಿಯಾಗಿ ಸ್ನೇಹ ಬೆಳೆಸಿಕೊಂಡು ಹೋಗುತ್ತಿರಲಿಲ್ಲ.
ಇಬ್ಬರೇ ಬಾಲ್ಯ ಸ್ನೇಹಿತರು ಚಿರು ಹಾಗೂ ತನ್ವಿ…
ಮೊದಲ ದಿನದ ಕಾಲೇಜ್ ಹೆದರುತ್ತಲೇ ಮನೆಯಿಂದ ಹೊರಟಿದ್ದಳು. ಅವಳು ಕೇಳುವ ಶಕ್ತಿ ಕಳೆದುಕೊಂಡ ಮೇಲೆ ಒಬ್ಬಳೇ ಮೊದಲ ಬಾರಿ ಮನೆ ಬಿಡುತ್ತಿರುವುದು. ಬಾಗಿಲ ಹತ್ತಿರ ಬಂದಾಗ ಅಪ್ಪನ ಸೈಕಲ್ ಕಂಡಿತ್ತು ಪ್ರೀತಿಯಿಂದ ಒಮ್ಮೆ ಸವರಿದಳು ತಕ್ಷಣ ತನ್ನ ಬ್ಯಾಗನ್ನು ಕಟ್ಟೆ ಮೇಲೆ ಇಟ್ಟಿ ಸೈಕಲ್ ತಳ್ಳಿಕೊಂಡು ಮನೆಯ ಹಿಂಬದಿಯಲ್ಲಿ ಇಟ್ಟು ಗೋಡನಲ್ಲಿದ್ದ ಟಾರ್ಪಲ್ ತೊಗೊಂಬಂದು ಮುಚ್ಚಿಬಿಟ್ಟಳು.
ಮತ್ತೆ ನೆನಪುಗಳ ದಾಳಿ ಅದೇ ಸೈಕಲ್ ಮೇಲೆ ಮೊದಲ ದಿನ ಶಾಲೆಗೆ ಹೋಗಿದ್ದ ನೆನಪು. ಶಾಲೆ ಹೋಗಲು ಹಠ ಮಾಡಿದ್ದಕ್ಕೆ, ಕೂಸು ಮರಿ ಮಾಡಿಕೊಂಡು ಶಾಲೆಯ ಒಳಗೆ ಬಿಟ್ಟಿದ ನೆನಪು, ಅಪ್ಪನ ಎರಡು ಪಾದಗಳ ಮೇಲೆ ತನ್ನ ಪಾದ ಉರಿ ಅಪ್ಪ ಹೇಳುತ್ತಿದ್ದ ಕಟ್ಟು ಕಥೆಗಳಲ್ಲಿ ತಾನೆ ಯುವರಾಣಿಯಾಗಿದ್ದ ನೆನಪು…
ಕಣ್ಣೀರು ಒರೆಸಿಕೊಂಡು ಐ ಮಿಸ್ ಯು ಅಪ್ಪ… ಹಾಗೆ ಮನಸ್ಸಲ್ಲಿ ಅಂದವಳು, ಸೀದಾ ಬ್ಯಾಗ್ ತೆಗೆದುಕೊಂಡು ಹೊರಟುಬಿಟ್ಟಳು. ರಸ್ತೆ ದಾಟುವಾಗ ನಡುಗುತ್ತಿತ್ತು ದೇಹ. ಯಾಕೆ ಅವಳಿಗೂ ತಿಳಿದಿಲ್ಲ” ಪುಟ್ಟಮ್ಮ ನೋಡಿಲ್ಲಿ ಆ ಕಡೆ, ಈ ಕಡೆ ನೋಡು… ನಿನಗೆ ಕೇಳೊಲ್ಲ ಅನ್ನೋದು ಮರೆತು ಬಿಡು..” ಹಾಗೆ ವಿಶ್ವನಾಥ್ ಅವರು ಅವಳ ಕಿವಿಯಲ್ಲಿ ಹೇಳಿದಂತಾಯಿತು, ತಕ್ಷಣ ತಿರುಗಿ ನೋಡಿದಳು. ಮುಖದಲ್ಲಿ ಮುಗುಳ್ನಗೆ ಅವಳ ಕೈ ಬೆರಳು ಹಿಡಿದು ರಸ್ತೆ ದಾಟಿದಸಿದಂತಾಯಿತು. ತಕ್ಷಣ ಮತ್ತೆ ನೋಡಿದರೆ ಯಾರು ಇಲ್ಲ. ಅವಳ ಹೆಗಲ ಮೇಲೆ ಎರಡು ಕೈ ಬೀಳಲು ತಿರುಗಿ ನೋಡಿದಳು. ಅವಳ ಬಾಲ್ಯ ಸ್ನೇಹಿತರು ತನ್ವಿ ಚಿರು ಒಂದೇ ಕಾಲೇಜಿಗೆ ಹೋಗುವುದು, ಒಂದೇ ಕ್ಲಾಸ್ ಕೂಡ ಹೌದು.
“ಒಬ್ಬಳೇ ಹೊರಟಿದ್ದಿಯಲ್ಲ ಅಷ್ಟು ಬುದ್ಧಿ ಇಲ್ವಾ ನಿನಗೆ..” ಚಿರು ಸ್ವಲ್ಪ ಜೋರಾಗಿ ಬೈದುಬಿಟ್ಟಿದ್ದ ಅವನ ಕಣ್ಣಲ್ಲಿ ಆತಂಕ ಸ್ಪಷ್ಟ.
“ನನಗೇನಾಗಿದೆ ಮೊದಲಿಂದಲೂ ನಾನೊಬ್ಬಳೇ ಹೋಗೋದು, ನಿಮ್ಗಳ ಕರುಣೆ ನನಗೆ ಬೇಕಾಗಿಲ್ಲ, ಹೇಟ್ ಮಾಡ್ತೀನಿ. ನನಗೆ ಯಾರಾದರೂ ಕರುಣೆ ತೋರಿಸಿದ್ರೆ…”ಅವಳ ಮುಖದಲ್ಲಿ ನೋವಿನ ಆಳ ಸ್ಪಷ್ಟವಾಗಿತ್ತು.
“ನಾವು ಕರುಣೆ ತೋರಿಸ್ತಿಲ್ಲ ರಚ್ಚು. ಆದರೆ ಒಬ್ಬಳೇ ಹೊರಟಿಯಲ್ಲ ಅದಕ್ಕೆ ಬೇಜಾರಾಯ್ತು ಅಷ್ಟೇ…” ಅವಳ ಮನಸ್ಥಿತಿ ಅರ್ಥ ಮಾಡಿಕೊಂಡು ಸಮಾಧಾನವಾಗಿ ಹೇಳಿದ್ದಳು ತನ್ವಿ.
“ಹೌದು …ಹೌದು… ನಿನಗೆ ಕರುಣೆ ತೋರ್ಸಕ್ಕೆ ನಿನಗೆ ಏನಾಗಿದೆ ? ಬಾರೆ ಇಲ್ಲೇ ಮಾತಾಡ್ತಿದ್ರೆ ಕಾಲೇಜ್ ಗೆ ಲೇಟಾಗುತ್ತೆ” ಹಾಗೆ ಅಂದವನೇ ಅವಳನ್ನು ಅಲ್ಲಿಂದ ಎಳೆದುಕೊಂಡು ಹೋಗಿದ್ದ.
ಕಾಲೇಜನಲ್ಲಿ ಪ್ರತಿಯೊಬ್ಬರ ಕರುಣೆ ನೋಟ ಅವಳ ಮನಸ್ಸಿಗೆ ಹಿಂಸೆ ಕೊಡುತ್ತಿದ್ದು ನಿಜ, ಆದರೆ ಅವಳ ಆತ್ಮಸ್ಥೈರ್ಯ ಅಪ್ಪನಾಗಿದ್ದ. “ಅವರ ಕರುಣೆ ನೋಟ ಬದಲಾಯಿಸಲು ಸಾಧ್ಯವಿಲ್ಲ ಪುಟ್ಟಮ್ಮ. ಆದರೆ ನಿನ್ನ ಕಣ್ಣಲ್ಲಿ ಮನಸಲ್ಲಿ ಮಾತ್ರ ಶಾಶ್ವತವಾಗಿ ಆತ್ಮಸ್ಥೈರ್ಯ ಇರಲೇಬೇಕು.” ಅಂದಿನಿಂದ ಅವಳ ದಿನಚರಿ ಪೂರ್ತಿ ಬದಲಾಯಿತು. ಬೆಳಗ್ಗೆ ಐದಕ್ಕೆ ಎಚ್ಚರವಾದರೆ ಫ್ರೆಶ್ ಆಗಿ ಒಂದು ಗಂಟೆ ಧ್ಯಾನ, ಕಾಫಿ ಮಾಡಿ ಅಮ್ಮನನ್ನು ಎಬ್ಬಿಸುವುದು ಅವಳೇ. ದೇವರ ಪೂಜೆ ಮಾಡಿ ಬೆಳಗ್ಗೆ ತಿಂಡಿಗೆ, ಮಧ್ಯಾಹ್ನಕ್ಕೆ ಅಡುಗೆಗೆ ರೆಡಿ ಮಾಡಿ ಕೊಟ್ಟ. ಕಾಲೇಜಿಗೆ ಹೊರಟರೆ ಸಂಜೆ ಬಂದು ಎರಡು ಗಂಟೆ ಕಾಲ ಓದು, ನಂತರ ಅಪ್ಪನ ರೆಸಿಪಿ ಬುಕ್ಕಿನಿಂದ ಅವರು ಬರೆದಿಟ್ಟ ಅಡುಗೆ ಮಾಡಿ ಅಮ್ಮನ ಮೇಲೆ ಪ್ರಯೋಗ ಹಾಗೆ ಮಾಡಲು ಕಾರಣವೂ ಇತ್ತು ಮುಂದೆ ಒಂದು ದಿನ ಮಹೋನ್ನತ ಬದುಕಿಗೆ. ಅವಳ ದಿನಚರಿ ಕೂಡ ಅಪ್ಪನನ್ನು ಹೋಲುತ್ತಿತ್ತು ಬೆಳಗಿನ ಕೆಲಸ ಪೂರ್ತಿ ವಿಶ್ವನಾಥ್ ಅವರೇ ಮಾಡುತ್ತಿದ್ದು.
ಕಾಲ ಹಾಗೇ ಉರಳಿ ಹೋಗುತ್ತದೆ, ಮನುಷ್ಯ ಭಾವನಾತ್ಮಕ ನೆನಪುಗಳು ಸ್ವಲ್ಪ ಸ್ವಲ್ಪ ಮಾಸಿ ಹೋಗುತ್ತದೆ. ಆದರೆ ಕೆಲವೊಬ್ಬರು ಭಾವನಾತ್ಮಕ ಕೊಂಡಿಯನ್ನು ಮನಸ್ಸಿನಲ್ಲಿ ಹಾಗೆ ಹಸಿಯಾಗಿಯೇ ಇಟ್ಟುಕೊಂಡಿರುತ್ತಾರೆ. ಅಂಥವರ ಸಾಲಿಗೆ ಸೇರುವುದು ರಚನಾ ಐದು ವರ್ಷ ಕಳೆದೆ ಹೋಗಿತ್ತು. ರಚನಾ ಈಗ ಎಂ ಎ ಮುಗಿಸಿದಳು. ಒಂದು ಕಾಲದಲ್ಲಿ ಫೇಲ್ ಸ್ಟೂಡೆಂಟ್ ಇಂದು ಗೋಲ್ಡ್ ಮೆಡ್ಲಿಸ್ಟ್. ಅಂದು ಆಡಿಕೊಂಡವರು ಇಂದು ಅವಳ ಬೆನ್ನು ತಟ್ಟುತ್ತಿದ್ದರು.
ಸೀದಾ ಅಪ್ಪನ ರೂಮಿಗೆ ಬಂದಳು ಅವರ ರೆಸಿಪಿ ಡೈರಿ ತೆಗೆದುಕೊಂಡು “ಸಾಧನೆ ಹಾದಿ ಮೊದಲ ಹೆಜ್ಜೆ, ಅಪ್ಪ ನನ್ನ ಸಾಧನೆ ಹಾದಿಯಲ್ಲ, ನಿನ್ನ ಸಾಧನೆ ಹಾದಿ ಅಪ್ಪನ ಹೆಸರು ಪ್ರತಿಯೊಬ್ಬರ ಬಾಯಲ್ಲೂ ರಾರಾಜಿಸಬೇಕು. ಅದಕ್ಕಾಗಿ ನಿಮ್ಮ ಮಗಳು ಮೊದಲ ಹೆಜ್ಜೆ ಇಟ್ಟಿದ್ದಾಳೆ. ಆಶೀರ್ವಾದ ಇರುತ್ತಲ್ವಾ ಅಪ್ಪ…”
ಮೊದಲು ಮಾಡಿದ ಕೆಲಸ ಅಪ್ಪನ ಅಂಗಡಿಯನ್ನು ಮತ್ತೆ ಬಿಡಿಸಿಕೊಂಡಿದ್ದು. ಅದಕ್ಕೊಂದು ಸುಂದರ ಹೆಸರು ವಿ ಎನ್ ದೇಸಿ ಫುಡ್. ಅವಳ ಹೆಸರಲ್ಲಿದೆ ಇನ್ಶೂರೆನ್ಸ್ ದುಡ್ಡು ತೆಗೆದು ಅಂಗಡಿಗೆ ಹೊಸ ರೂಪ ಕೊಟ್ಟಳು, ಅಪ್ಪ ತಯಾರಿಸುತ್ತಿದ್ದ ಅಷ್ಟು ಪುಡಿಗಳನ್ನು ತಾನು ತಯಾರಿಸಲು ಶುರು ಮಾಡಿದಳು, ಅವಳ ಜೊತೆಯಾಗಿ ತನ್ವಿ ಚಿರು ಕೂಡ ಜೊತೆಯಾದರೂ…
ಮೊದಲು ಬಾರಿ ನಷ್ಟವನ್ನೇ ಕಂಡಿತ್ತು ಹೆದರಲಿಲ್ಲ. ಅಪ್ಪನ ಆತ್ಮಸ್ಥೈರ್ಯದ ಮಾತುಗಳು ಅವಳ ಮನಸ್ಸಿನಲ್ಲಿ ಯಾವಾಗಲೂ ಗುನುಗುತ್ತಿದ್ದಳು. ಅವಳ ಸೋಲಲು ಜೊತೆಯಾಗಿ ನಿಂತಿದ್ದು ತನ್ವಿ ಚಿರು. ಶುದ್ಧ ದೇಸಿ ತಿಂಡಿಗಳು ಅವಳ ಅಂಗಡಿಯಲ್ಲಿ ತಯಾರಾಗಲು ಶುರುವಾಯಿತು. ಅವಳ ಯೋಚನಾ ಲಹರಿಯಿಂದ ಪ್ರತಿಯೊಬ್ಬರ ಬಾಯಲ್ಲಿ ವಿ ಎನ್ ಫುಡ್ ಪ್ರಾಡಕ್ಟ್ ಹೆಸರು ರಾರಾಜಿಸತೊಡಗಿತು.
ವಿ ಎನ್ ಹೋಟೆಲ್, ವಿ ಎನ್ ಫುಡ್ ಪ್ರಾಡಕ್ಟ್ ಹೀಗೆ ಹಲವಾರು ಕಂಪನಿಗಳು ತಲೆ ಎತ್ತಿದವು. ಅಂದು ಸೋತು ನೇಣಿಗೆ ಶರಣಾಗಬೇಕು ಎಂದುಕೊಂಡವಳು, ಇಂದು ಸತತ ಗೆಲುವು ಅವಳ ಕಣ್ಣು ಮುಂದೆ ಇತ್ತು. ಅದೊಂದು ಸಭಾ ಭವನ ಅವಳ ಕನಸಿನ ದಿನ. ಇಂದು ಅಪ್ಪನ ಕೈ ರುಚಿ ಪುಸ್ತಕ ಬಿಡುಗಡೆಯಾಯಿತು. ಅಮ್ಮನ ಕೈಯಿಂದ ಪುಸ್ತಕ ಬಿಡುಗಡೆಗೊಳಿಸಿದಳು. ಸಾವಿರಾರು ಚಪ್ಪಾಳೆ ಸುರಿಮಳೆ .
ಅವಳ ಕಿವಿಗೆ ಬಡಿದಿದ್ದು ಒಂದೇ ಚಪ್ಪಾಳೆ ಶಬ್ದ, ಅದು ಅವರ ಅಪ್ಪನ ಚಪ್ಪಾಳೆಯ ಶಬ್ದ. ಅವಳಿಗೆ ಮಾತನಾಡಲು ಹೇಳಿದಾಗ ಅವಳಿಂದ ಬಂದಿದ್ದು ಇಷ್ಟೇ ಉತ್ತರ.
“ಸಾವಿರಾರು ಜನಕ್ಕೆ ಊಟ ಹಾಕಿದ ಕೈ ನನ್ನ ಅಪ್ಪನದು. ಆದರೆ ಅವರು ಮಾತ್ರ ಬೆಳಕಿಗೆ ಬರಲೇ ಇಲ್ಲಾ. ಸಾಧನೆ ಮನಸ್ಸು ತೃಪ್ತಿಗಾಗಿ. ಲೋಕದ ಕಣ್ಣಿಗೆ ಅಲ್ಲ, ಆ ಮನಸ್ಸ ತೃಪ್ತಿ ನನ್ನ ಅಪ್ಪನ ಮನಸ್ಸಿಗೂ ಬೇಕಿತ್ತು. ಅವರೇ ಬರೆದ ನೂರಾರು ರೆಸಿಪಿಗಳು, ನಿಮ್ಮ ಮುಂದೆ ಅಕ್ಷರರೂಪದಲ್ಲಿ ಇಟ್ಟಿದ್ದೇನೆ, ಅಷ್ಟೇ ಅಲ್ಲ ಹಲವಾರು ಪ್ರಾಡಕ್ಟ್ ನಮ್ಮ ಕಂಪನಿಯಿಂದ ತಯಾರಾಗಿದೆ…” ಅಷ್ಟು ಮಾತನಾಡುವುದರೊಳಗೆ ಕಣ್ಣಂಚಲಿ ನೀರಿತ್ತು.
ದೂರದಲ್ಲಿ ಅಪ್ಪ ನಿಂತು ಚಪ್ಪಾಳೆ ತಟ್ಟಿದಂತೆ ಕಾಣಿಸಿತು, ನನ್ನ ಮಗಳು ಅಲ್ಲಿ ಯಾರೊ ಪಕ್ಕದಲ್ಲಿ ನಿಂತವರಿಗೆ ತೋರಿಸಿ ಹೇಳಿದಂತಾಯಿತು ನನ್ನ ಮಗಳು… ನನ್ನ ಮಗಳು… ಅಲ್ಲಿ ಯಾರೋ ಪಕ್ಕದಲ್ಲಿ ನಿಂತವರಿಗೆ ತೋರಿಸಿ ಹೇಳಿದಂತಾಯಿತು. ಪುಸ್ತಕದ ಮೇಲೆ ಕಣ್ಣು ಆಡಿಸಿದವಳಿಗೆ ಅದೇ ಬಿಳಿ ಪಂಚೆ, ಬಿಳಿ ಶರ್ಟ್ ಕೈಯಲ್ಲಿ ಸೌಟು ಹಿಡಿದು ನಿಂತಿರುವ ಮಾಸದ ಮುಗುಳ್ನಗೆಯ ವಿಶ್ವನಾಥ್ ಅವರ ಚಿತ್ರಪಟವಿತ್ತು.
ರಚನಾಳ ಮನಸಲ್ಲಿ ಪ್ರತಿಧ್ವನಿಸಿದ್ದು…
“ಐ ಲವ್ ಯೂ ಅಪ್ಪ…”
ಮುಕ್ತಾಯ ….
ಹಿಂದಿನ ಸಂಚಿಕೆಗಳು :
- ಅಪ್ಪಾ… ಅಪ್ಪಾ… ನೀನು ಬೇಕಪ್ಪಾ (ಭಾಗ-೧)
- ಅಪ್ಪಾ… ಅಪ್ಪಾ… ನೀನು ಬೇಕಪ್ಪಾ (ಭಾಗ-೨)
- ಅಪ್ಪಾ… ಅಪ್ಪಾ… ನೀನು ಬೇಕಪ್ಪಾ (ಭಾಗ-೩)
- ಅಪ್ಪಾ… ಅಪ್ಪಾ… ನೀನು ಬೇಕಪ್ಪಾ (ಭಾಗ-೪)
- ಅರ್ಚನಾ ರವಿ
