ಓಹ್… ಬದುಕೇ ಇಷ್ಟೇ ಸಾಕೆ? (ಭಾಗ-2)

ಸತತ ಕೆಲ್ಸದ ಮಧ್ಯೆ ಒಂದು ಪುಟ್ಟ ವಿರಾಮ ಬೇಕು. ಆ ವಿರಾಮಕ್ಕಾಗಿ ಹಾತೊರೆತ್ತಾರೆ. ಆ ವಿರಾಮ ಸಿಕ್ಕಾಗ ಕೆಲಸ ವೇಗವಾಗಿ ಸಾಗುತ್ತದೆ. ಆ ವಿರಾಮ ಹೇಗೆ ಪಡೆದುಕೊಳ್ಳಬೇಕು ಎನ್ನುವುದು ನೀವೇ ನಿರ್ಧರಿಸಿ…

ನಾನು ಊರಿಗೆ ಹೋಗಿ ಬಂದ ಮೇಲೆ ಪ್ರವಾಸದ ಫೋಟೋಗಳನ್ನು ಜಾಲತಾಣದಲ್ಲಿ ಹಾಕಿದ್ದೆ. ಅದನ್ನು ನೋಡಿದ ಸ್ನೇಹಿತರು ಕೇಳಿದ ಮೊದಲ ಪ್ರಶ್ನೆ : ಯಾರ್ ಜೊತೆಗೆ ಹೋಗಿದ್ದೀಯಾ?…

ನಮ್ಮ ಮಡಿವಂತಿಕೆ ಸಮಾಜದಲ್ಲಿ ಇದು ಸಹಜ ಪ್ರಶ್ನೆ. ನಾನು ಯಾವುದೇ ಮುಜುಗರವಿಲ್ಲದೇ ಹೇಳಿದೆ, ಈ ಹಿಂದೆ ಸ್ನೇಹಿತರ ಜೊತೆಗೆ ಹೋಗಿದ್ದೆ. ಈ ಸಲ ಅಪ್ಪ ಅಮ್ಮನ ಜೊತೆಗೆ ಹೋಗಿದ್ದೆ.

ಅವರ ಮುಂದಿನ ಪ್ರಶ್ನೆ: ಹೀಗೆ ಓಡಾಡ್ತೀದ್ರೆ ಮಕ್ಕಳು, ಗಂಡನಿಗೆ ಬೇಸಿ ಹಾಕೋರು ಯಾರು?…

ಹ್ಹ… ಹ್ಹ್… ನಗುತ್ತಾ ಬೇಸಿ ಹಾಕೋಕೆ ಹೆಂಡತಿ, ತಾಯಿ ಬೇಕಾ?… ಅಂದೆ. ಅವರ ಮುಖ ನೋಡಿ ಗೊತ್ತಾಯ್ತು. ಎಂತ ಹೆಣ್ಣಪ್ಪ…. ಅಂತ ಮನಸ್ಸಲ್ಲೇ ಬೈಕೊಂಡ್ರು ಅಂತ. ಹೋಗ್ಲಿ ಕುತೂಹಲಕ್ಕೆ ಎನೋ ಪ್ರಶ್ನೆ ಕೇಳಿದ್ದಾರೆ ಅನ್ಕೊಂಡು ದೋಸೆ ಹಿಟ್ಟು, ಚಟ್ನಿ ಪೌಡರ್ ಮಾಡಿಟ್ಟಿದ್ದೀನಿ. 2 ದಿನ ಬರುತ್ತೆ. ಹಾಕೊಂಡು ತಿಂತಾರೆ ಅಂದೆ. ಎರಡು ದಿನ ಮೂರು ಹೊತ್ತು ದೋಸೆನೇ ತಿಂತಾರಾ…ಮರು ಪ್ರಶ್ನೆ.

ನನ್ನ ಗಂಡ, ಮಕ್ಕಳಿಗೆ ಬಾರದ ಚಿಂತೆ ಇವರಿಗ್ಯಾಕೆ ಅನ್ನೋನಾ ಅನ್ಕೊಂಡೆ ಮತ್ತೆ ತಾಳ್ಮೆ ತಗೆದುಕೊಂಡು ಒಂದೊಂದು ಹೊತ್ತು ಸ್ವಿಗಿ, ಜೋಮ್ಯಾಟೋ ತಾಯಿಯಿಂದ ಊಟ ಬರುತ್ತೆ ಅಂದೆ. ಅವರಿಗೆ ನನ್ನ ಬಾಯಿಂದ ಅದನ್ನು ಹೊರಕ್ಕೆ ಹಾಕಿಸಬೇಕಿತ್ತು. ಓಹ್… ಸ್ವಿಗಿ, ಜೋಮ್ಯಾಟೋಯಿಂದ ಬರುತ್ತಾ… ಖರ್ಚು ಜಾಸ್ತಿ ಆಗೋಲ್ವಾ ಅಂತ. ಮತ್ತೊಂದು ಪ್ರಶ್ನೆ ಹಾಕಿದರು. ಆಗುತ್ತೆ, ನೀವು ಫಾರೆನ್ ಟ್ರಿಪ್, ಬ್ಯೂಟಿಪಾರ್ಲರ್ ಹೋದಷ್ಟು ಬರೋಲ್ಲ ಅಂದಾಗ ಅವರು ಅಸಮಾಧಾನಗೊಂಡು ಪ್ರಶ್ನೆಗಳಿಗೆ ವಿರಾಮ ಕೊಟ್ಟರು.

***

ಅವರೆಲ್ಲ ಯಾಕೆ ಈ ರೀತಿ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಕುತೂಹಲದಿಂದ ಯೋಚಿಸಿದಾಗ ಅವರೆಲ್ಲ ಮದುವೆಯಾದ ಮೇಲೆ ಮನೆ, ಗಂಡ, ಮಕ್ಕಳು ಎನ್ನುವ ಜವಾಬ್ದಾರಿಯಿಂದ ಸಣ್ಣ ವಿರಾಮವನ್ನು ತಗೆದುಕೊಳ್ಳದೆ ನಾಲ್ಕು ಗೋಡೆಗಳ ಮಧ್ಯೆಯೇ ಕಳೆದಿದ್ದಾರೆ. ಕಷ್ಟನೋ ಸುಖವೋ ಅಲ್ಲೇ ಖುಷಿ ಹುಡುಕುವ ಪ್ರಯತ್ನ ಮಾಡುತ್ತಾರೆ. ಅವರಿಗೆ ಯಾವಾಗ ನಲ್ವತ್ತು ವರ್ಷ ದಾಟ್ಟುತ್ತದೆಯೋ ಆಗ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳು ಕಾಡತೊಡಗುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮಂತ ಆತ್ಮಗಳು ಸ್ವಲ್ಪ ದಿನದ ಮಟ್ಟಿಗೆ ಗಂಡ, ಮಕ್ಕಳನ್ನು ಬಿಟ್ಟು ಪ್ರವಾಸಕ್ಕೆ ಹೋದಾಗ ಅತೃಪ್ತ ಆತ್ಮಗಳು ಕೊರಗಲು ಹೆಚ್ಚು ಶುರು ಮಾಡುತ್ತವೆ. ಮತ್ತು ಮೇಲ್ನೋಟಕ್ಕೆ ಅವರೆಲ್ಲ ಸತಿ ಸಾವಿತ್ರಿಯಂತೆ ಕಂಡರೂ ಮನಸ್ಸಿನೊಳಗೆ ಹೊರ ಜಗತ್ತು ನೋಡಲಿಲ್ಲ ಎನ್ನುವ ಕೊರಗು ಕಾಡುತ್ತಲೇ ಇರುತ್ತದೆ.

ಹಿಂದೆ ಹೆಣ್ಮಕ್ಕಳು ರಜೆ ಬಂದಾಗ ಮಕ್ಕಳ ಸಮೇತ ತವರು ಮನೆಗೆ ಹೋಗಿ ವಿಶ್ರಾಂತಿ ಪಡೆದು ಹೊಸ ಹುಮ್ಮಸ್ಸಿನಿಂದ ಮತ್ತೆ ತಮ್ಮ ಕಾಯಕದಲ್ಲಿ ತೊಡಗಿಕೊಳ್ಳುತ್ತಿದ್ದಳು. ತವರುಮನೆಯಲ್ಲಿಯೂ ಅಷ್ಟೇ ಸಂಭ್ರಮದಿಂದ ಹೆಣ್ಣುಮಗಳನ್ನು ಬರಮಾಡಿಕೊಳ್ಳುತ್ತಿದ್ದರು. ದಿನಗಳು ಕಳೆದಂತೆ ಹೆಣ್ಣು ಮಕ್ಕಳಿಗೂ ಹಾಗೂ ತವರುಮನೆ ನಡುವೆ ನಂಟು ಕಮ್ಮಿಯಾಗುತ್ತಾ ಹೋಯಿತು. ಬಹುತೇಕ ಹೆಣ್ಣುಮಕ್ಕಳಿಗೆ ತವರುಮನೆ ಇದ್ದರೂ ಇಲ್ಲದಂತಾಗಿದೆ. ಒಂದೋ ಎರಡೋ ಮಕ್ಕಳಿರುವ ಕಾಲದಲ್ಲಿ ತಂದೆ ತಾಯಿ ಮಗಳ ಮನೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಒಂದು ವೇಳೆ ಮಗಳು ತವರಮನೆಗೆ ರಜೆಗೆ ಬರುತ್ತಾಳೆ ಎಂದರೆ ಮೊದಲಿನಂತೆ ತವರುಮನೆಯಲ್ಲಿ ಸಂಭ್ರಮವಿಲ್ಲ. ಗಂಡ, ಮಕ್ಕಳನ್ನು ಬಿಟ್ಟು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋದರೆ ಸಮಾಜ ಏನೆಂದು ಕೊಳ್ಳುತ್ತದೆಯೋ, ಒಂದು ವೇಳೆ ನಾನು ಪ್ರವಾಸಕ್ಕೆ ಹೋದರೆ ಗಂಡ, ಮಕ್ಕಳು ಊಟಕ್ಕೆ ಏನು ಮಾಡುತ್ತಾರೋ… ಹೀಗೆ ನೂರಾರು ತೋಳಲಾಟ ಅವಳನ್ನು ಕಾಡುತ್ತದೆ.

ಇತ್ತ ತವರುಮನೆ ಇಲ್ಲದೆ, ಆಕೆ ಯಾರೊಂದಿಗೂ ಮುಕ್ತವಾಗಿ ಮಾತಡಲಾಗದೆ, ಸ್ನೇಹಿತರ ಜೊತೆಗೆ ಹೊರಗೆ ಹೋಗಲಾಗದೆ, ತನ್ನ ಜವಾಬ್ದಾರಿಯಿಂದ ಮುಕ್ತವಾಗದೆ, ಭಾವನೆಗಳನ್ನು ಹಂಚಿಕೊಳ್ಳಲಾಗದೆ ಅಂತರಮುಖಿಯಾಗುತ್ತಿದ್ದಾಳೆ. ಹೆಣ್ಣಿಗೆ ತನ್ನ ಒತ್ತಡ ಬದುಕಿನಲ್ಲಿ ಒಂದು ಪುಟ್ಟ ವಿರಾಮ ಬೇಕೇ ಬೇಕೇನಿಸುತ್ತದೆ. ತಮ್ಮ ಸ್ನೇಹಿತರು ಪ್ರವಾಸ ಹೋದಾಗ ಕಣ್ಣರಳಿಸಿ ನೋಡುವುದಷ್ಟೇ ಅಲ್ಲ, ನನ್ನಿಂದ ಇದು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗಿನಲ್ಲಿ ಒಳಒಳಗೆ ದುಃಖಿಸುತ್ತಾಳೆ. ತನ್ನ ಸಿಟ್ಟು, ಅಸಹಾಯಕತೆಯನ್ನು ನೂರಾರು ಪ್ರಶ್ನೆ ಕೇಳುವ ಮೂಲಕ ಹೊರಕ್ಕೆ ಹಾಕುತ್ತಾಳೆ.


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW