ನಮಗೆ ನಾವೇ ಜಾಣರು ಎಂದುಕೊಂಡು ಬೇರೆಯವರನ್ನು ತಮಾಷೆ ಮಾಡಿ ಮಜಾ ತೆಗೆದುಕೊಳ್ಳುವವರು ನಿಜವಾಗಿಯೂ ಮೂರ್ಖರಾಗಿರುತ್ತಾರೆ. ವೀಣಾ ಹೇಮಂತ್ ಗೌಡ ಪಾಟೀಲ್ ಅವರು ‘ಸ್ನೇಹ ಬಂಧ ’ ಕುರಿತು ಇಂದಿನ ಲೇಖನದಲ್ಲಿ ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…
ಅದೊಂದು ತರಗತಿಯ ಕೋಣೆ. ಆ ತರಗತಿಯಲ್ಲಿರುವ ಅತ್ಯಂತ ಜಾಣ ವಿದ್ಯಾರ್ಥಿಗೆ ಆತನ ಹಿಂದೆ ಕುಳಿತ ವಿದ್ಯಾರ್ಥಿ ನಾನು ಮೂರ್ಖ ಎಂಬ ಚೀಟಿಯನ್ನು ಬರೆದು ಅಂಟಿಸಿದ. ತರಗತಿಯ ಉಳಿದೆಲ್ಲ ವಿದ್ಯಾರ್ಥಿಗಳು ಈತನ ಬೆನ್ನಿಗೆ ಅಂಟಿಸಿದ ಚೀಟಿಯನ್ನು ನೋಡಿ ಮುಸಿ ಮುಸಿ ನಕ್ಕರೇ ಹೊರತು ಆ ವಿದ್ಯಾರ್ಥಿಗೆ ಏನನ್ನೂ ಹೇಳಲಿಲ್ಲ.
ನಂತರದ ಅವಧಿಗೆ ಬಂದ ಗಣಿತದ ಶಿಕ್ಷಕರು ಹಿಂದಿನ ದಿನ ತಾವು ಪಾಠ ಮಾಡಿದ ವಿಷಯದ ಲೆಕ್ಕವನ್ನು ಕಪ್ಪು ಹಲಗೆಯ ಮೇಲೆ ಬರೆದು ಬಿಡಿಸಲು ಹೇಳಿದರು. ಉಳಿದೆಲ್ಲ ವಿದ್ಯಾರ್ಥಿಗಳ ಲೆಕ್ಕಗಳು ತಪ್ಪಾಗಿದ್ದರೆ ಆ ಜಾಣ ವಿದ್ಯಾರ್ಥಿ ಮಾತ್ರ ಸರಿಯಾಗಿ ಲೆಕ್ಕ ಮಾಡಿದ್ದ. ಆತನನ್ನು ತಾವು ನಿಂತುಕೊಂಡ ವೇದಿಕೆಯ ಬಳಿ ಕರೆದ ಗಣಿತದ ಶಿಕ್ಷಕರು ಉಳಿದೆಲ್ಲ ವಿದ್ಯಾರ್ಥಿಗಳಿಗೆ ಚಪ್ಪಾಳೆಯ ಮೂಲಕ ಆತನಿಗೆ ಮೆಚ್ಚುಗೆ ಸೂಸಲು ಹೇಳಿದರು. ಇದೀಗ ಎಲ್ಲ ವಿದ್ಯಾರ್ಥಿಗಳು ಗಂಭೀರವಾಗಿ ಚಪ್ಪಾಳೆ ಬಾರಿಸಿದರು. ಎಲ್ಲರಿಗೂ ಧನ್ಯವಾದಗಳನ್ನು ಹೇಳಿದ ಬಾಲಕ ಮರಳಿ ತನ್ನ ಜಾಗಕ್ಕೆ ಹೋಗುವಾಗ ಆತನ ಬೆನ್ನಿಗೆ ಅಂಟಿಸಿದ್ದ ಚೀಟಿಯನ್ನು ಶಿಕ್ಷಕರು ನೋಡಿದರು.
ಯಾರು ಹೀಗೆ ಮಾಡಿದ್ದು ಎಂದು ವಿದ್ಯಾರ್ಥಿಗಳನ್ನು ಕೇಳಲು ಎಲ್ಲ ವಿದ್ಯಾರ್ಥಿಗಳು ತಲೆತಗ್ಗಿಸಿ ನಿಂತರು. ಕೇವಲ ಓರ್ವ ವಿದ್ಯಾರ್ಥಿ ತಾನೇ ಮಾಡಿದ್ದು ಎಂದು ಎದ್ದು ನಿಂತ.
ಆತನ ಬೆನ್ನ ಮೇಲಿನ ಚೀಟಿಯನ್ನು ತೆಗೆಸಿದ ಗುರುಗಳು ಇದರಿಂದ ನಾವು ಎರಡು ರೀತಿಯ ಪಾಠವನ್ನು ಕಲಿಯಬಹುದು. ಮೊದಲನೆಯದ್ದು ನಮಗೆ ನಾವೇ ಜಾಣರು ಎಂದುಕೊಂಡು ಬೇರೆಯವರನ್ನು ತಮಾಷೆ ಮಾಡಿ ಮಜಾ ತೆಗೆದುಕೊಳ್ಳುವವರು ನಿಜವಾಗಿಯೂ ಮೂರ್ಖರಾಗಿರುತ್ತಾರೆ ಎಂದು ಹೇಳಿದರು.
ಇನ್ನು ಎರಡನೆಯದು ನಮಗೆ ಒಬ್ಬಿಬ್ಬರಾದರೂ ನಂಬುಗೆಯ ಸ್ನೇಹಿತರು ಇರಲೇಬೇಕು.. ಕನಿಷ್ಠ ತಮಗೆ ಈ ವಿಷಯವನ್ನು ಹೇಳುವಷ್ಟು ಆತ್ಮೀಯತೆ ಮತ್ತು ನಂಬಿಕೆಯನ್ನು ಹೊಂದಿರುವ ಉತ್ತಮ ಸ್ನೇಹಿತರನ್ನು ನಾವು ಹೊಂದಿರಲೇಬೇಕು ಎಂದು ಆ ಜಾಣ ವಿದ್ಯಾರ್ಥಿಯೆಡೆ ನೋಡುತ್ತಾ ಮಾರ್ಮಿಕವಾಗಿ ನುಡಿದರು. ಜಾಣ ವಿದ್ಯಾರ್ಥಿಗೆ ಗುರುಗಳ ಮಾತಿನ ಅರಿವಾಯಿತು.
ತನ್ನ ಜಾಣ್ಮೆಯ ಅಹಂಭಾವದಲ್ಲಿ ಯಾರೊಂದಿಗೂ ಸ್ನೇಹ ಮಾಡದೆ ಇದ್ದುದರ ಪರಿಣಾಮವೇ ತಾನು ಇಂದು ಅನುಭವಿಸಿರುವ ಸ್ಥಿತಿ ಎಂದು ಅರಿತ ಆತ ಮುಂದೆ ಎಲ್ಲರೊಂದಿಗೂ ಸ್ನೇಹ ಭಾವದಿಂದ ಇರತೊಡಗಿದನು.
ನೋಡಿದಿರಾ ಸ್ನೇಹಿತರೆ! ಬದುಕಿನಲ್ಲಿ ಸ್ನೇಹಿತರ ಮಹತ್ವದ ಕುರಿತು ಮೇಲಿನ ಕಥೆ ನಮಗೆ ತಿಳಿಸಿಕೊಡುವ ಪಾಠವನ್ನು. ಪ್ರತಿದಿನದ ಮಾತು ಕತೆಗಳಿಂದ ಇಲ್ಲವೇ ಹೆಚ್ಚು ಹೊತ್ತು ಜೊತೆಯಾಗಿ ಕಾಲ ಕಳೆಯುವುದರಿಂದ ಸ್ನೇಹ ಗಟ್ಟಿಯಾಗುತ್ತದೆ ಎಂಬ ಮಾತು ಸಂಪೂರ್ಣ ಸುಳ್ಳು. ಸ್ನೇಹ ಎಂಬುದು ಯಾವುದೇ ಅಪೇಕ್ಷೆಗಳಿಲ್ಲದ ನಿರೀಕ್ಷೆಗಳಿಲ್ಲದ ಶುದ್ಧವಾದ ಬಂಧ. ಅದೆಷ್ಟೇ ಸಮಯ ಕಳೆದರೂ, ಅದೆಷ್ಟೇ ದೂರ ಇದ್ದರೂ, ಅದೆಷ್ಟೇ ವಸ್ತು ಜೀವನ ಶೈಲಿಯನ್ನು ಹೊಂದಿದ್ದರು ಕೂಡ ನಿಮ್ಮನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ನೀವು ಹೇಳದೆಯೇ ನಿಮ್ಮ ಮನದ ಭಾವಗಳನ್ನು ಅರಿಯುವ ನೀವು ಕೇಳದೆ ನಿಮಗೆ ಅವಶ್ಯಕವಾದ ಭಾವನಾತ್ಮಕ ಬಲವನ್ನು ಕೊಡ ಮಾಡುವ ಬಂಧವೇ ಸ್ನೇಹ.
ಜೀವನ ಬದಲಾಗುತ್ತದೆ ಸಮಯಕ್ಕೆ ತಕ್ಕಂತೆ ನಾವು ಕೂಡ ಬದುಕಿನಲ್ಲಿ ಮುಂದೆ ಸಾಗಬೇಕು ಜವಾಬ್ದಾರಿಗಳು ಹೆಚ್ಚಾದಂತೆ ನಮ್ಮ ಆಯ್ಕೆಗಳು ಮತ್ತು ಅವಶ್ಯಕತೆಗಳು ಕೂಡ ಬದಲಾಗುತ್ತವೆ ಎಂಬುದನ್ನು ಅರಿತಿದ್ದರು ಕೂಡ ನಿಜವಾದ ಸ್ನೇಹಿತರಲ್ಲಿ ಅವರ ಸ್ನೇಹದ ಮೇಲಿನ ನಂಬಿಕೆ ಮತ್ತು ವಿಶ್ವಾಸಗಳು ಎಂದೂ ಕೊನೆಯಾಗುವುದಿಲ್ಲ.
ನಿಜವಾದ ಸ್ನೇಹಿತ ನಮ್ಮ ಕಷ್ಟದ ಸಮಯದಲ್ಲಿ ನಮ್ಮೊಂದಿಗೆ ಇರುತ್ತಾನೆ ನಮ್ಮ ತಪ್ಪುಗಳನ್ನು ಸೂಕ್ಷ್ಮವಾಗಿ ಹೇಳಿ ತಿದ್ದುವುದಲ್ಲದೇ, ನಾವು ಒಪ್ಪಿಕೊಳ್ಳದೆ ಹೋದಾಗ ನಿರ್ಧಾಕ್ಷಿಣ್ಯವಾಗಿ ಮುಖದ ಮೇಲೆ ಹೇಳುತ್ತಾನೆ. ನೀವು ನಿರಂತರ ಅವರ ಸಂಪರ್ಕದಲ್ಲಿ ಇರದೇ ಇದ್ದರೂ ಕೂಡ ನಿಮ್ಮೆಲ್ಲ ಸಾಧನೆಗಳನ್ನು ಅವರು ಸಂಭ್ರಮಿಸುತ್ತಾರೆ. ನಿಮ್ಮ ತೊಂದರೆಯ ಸಮಯದಲ್ಲಿ ನಿಮಗೆ ಹೆಗಲೆಣೆಯಾಗಿ ನಿಲ್ಲುತ್ತಾರೆ. ನಿಮಗೆ ಅವಶ್ಯಕತೆ ಇದ್ದಾಗ ನಿಮಗೆ ಬೆಂಗಾವಲಾಗಿ ನಿಲ್ಲುತ್ತಾರೆ.
ನಿಜವಾದ ಸ್ನೇಹಿತರು ನಿಮ್ಮ ಸಮಯವನ್ನು ಕಸಿಯುವುದಿಲ್ಲ…. ಆದರೆ ನಿಮ್ಮೊಂದಿಗೆ ಕಳೆದ ಸಮಯವನ್ನು ನೆನೆದು ಮುದಗೊಳ್ಳುತ್ತಾರೆ. ದಿನ ವಾರವಿರಲಿ ತಿಂಗಳುಗಳು ಕಳೆದರೂ ಕೂಡ ಅವರು ನಮ್ಮೊಂದಿಗೆ ಅದೇ ರೀತಿಯ ಹಾರ್ದಿಕ ಸಂಬಂಧವನ್ನು ಉಳಿಸಿಕೊಳ್ಳುತ್ತಾರೆ.
ಸ್ನೇಹ ಎಂಬುದು ಭರವಸೆ, ನಂಬಿಗೆ ಮತ್ತು ಪರಸ್ಪರರಿಗೆ ನಾವು ಕೊಡುವ ಗೌರವವಾಗಿರುತ್ತದೆ. ನಿಜವಾದ ಸ್ನೇಹಿತರಿಗೆ ಪ್ರತಿದಿನದ ಮಾತುಕತೆಯ ಅವಶ್ಯಕತೆ ಇರುವುದಿಲ್ಲ. ಜೀವನ ಕರೆದೊಯ್ಯುವ ಹಾದಿಯಲ್ಲಿ ಸಾಗುವ ಸ್ನೇಹಿತರು ಸಮಯ ಬಂದಾಗ ನಮ್ಮ ಸಹಾಯಕ್ಕೆ, ಬೆಂಬಲಕ್ಕೆ ಇದ್ದೇ ಇರುತ್ತಾರೆ. ಒಂದು ಪುಟ್ಟ ಸಂದೇಶ ಒಂದು ಫೋನ್ ಕರೆ ಇಲ್ಲವೇ ಒಂದು ನೆನಪಿಸುವಿಕೆಗಳಲ್ಲಿ ಸ್ನೇಹ ಜೀವಂತವಾಗಿರುತ್ತದೆ. ತಮ್ಮ ಬಾಲ್ಯದಲ್ಲಿ ಹೊಂದಿದ ಸ್ನೇಹಿತರೇ ತಮ್ಮ ವೃದ್ಧಾಪ್ಯದಲ್ಲೂ ಇದ್ದರೆ ಅವರಂತಹ ಪುಣ್ಯವಂತ ಬೇರೊಬ್ಬರಿಲ್ಲ.
ನಿಮ್ಮ ಹೃದಯದಲ್ಲಿ ಮನೆ ಮಾಡಿಕೊಂಡಿರುವ ಸ್ನೇಹಿತರಿಗೆ ಮನ್ನಣೆ ನೀಡಿ… ನಿಮ್ಮಿಬ್ಬರ ಬದುಕಿನ ಹಾದಿಗಳು ಅದೆಷ್ಟೇ ಬದಲಾಗಿದ್ದರು ಅವರೊಂದಿಗಿನ ಒಡನಾಟ ನಿಮ್ಮಲ್ಲಿ ಚೈತನ್ಯವನ್ನು ತುಂಬುತ್ತದೆ. ನಿಜವಾದ ಸ್ನೇಹ ಪರಸ್ಪರರ ಮೇಲಿನ ನಂಬುಗೆ, ಪ್ರೀತಿ ಮತ್ತು ವಿಶ್ವಾಸದ ಮೇಲೆ ನಿಂತಿರುತ್ತದೆಯೇ ಹೊರತು ನಿರಂತರ ಜೊತೆಯಾಗುವಿಕೆಯೇ ಅಲ್ಲ.
ಏನಂತೀರಾ?
ಹಿಂದಿನ ಸಂಚಿಕೆಗಳು :
- ಬದುಕಿಗೊಂದು ಸೆಲೆ (ಭಾಗ -೧)
- ಬದುಕಿಗೊಂದು ಸೆಲೆ (ಭಾಗ -೨)
- ಬದುಕಿಗೊಂದು ಸೆಲೆ (ಭಾಗ -೩)
- ಬದುಕಿಗೊಂದು ಸೆಲೆ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ (ಭಾಗ – ೪)
- ಬದುಕಿಗೊಂದು ಸೆಲೆ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ (ಭಾಗ- ೫)
- ಬದುಕಿಗೊಂದು ಸೆಲೆ ‘ಹೌದು! ನನಗೆ ವಯಸ್ಸಾಗುತ್ತಿದೆ’ (ಭಾಗ – ೬)
- ಬದುಕಿಗೊಂದು ಸೆಲೆ‘ಕಾಯುತ್ತಿದ್ದಾರೆ ನಿಮ್ಮವರು… ನಿಮಗಾಗಿ’ (ಭಾಗ -೭)
- ಬದುಕಿಗೊಂದು ಸೆಲೆ ‘ಹೆಣ್ಣು ಮಕ್ಕಳೇ ಎಚ್ಚರವಾಗಿ’ (ಭಾಗ – ೮)
- ಬದುಕಿಗೊಂದು ಸೆಲೆ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ (ಭಾಗ – ೯)
- ಬದುಕಿಗೊಂದು ಸೆಲೆ ‘ಶ್ರಾವಣ ಮಾಸ… ಶ್ರವಣ ಮಾಸ’ (ಭಾಗ – ೧೦)
- ಬದುಕಿಗೊಂದು ಸೆಲೆ ‘ಪ್ಯಾರಿಸ್ ಸುಗಂಧದ ಖ್ಯಾತಿಯ ಕೋಕೋ ಚಾನೆಲ್…. ಸತತ ಪ್ರಯತ್ನದ ಸಾಫಲ್ಯ’ (ಭಾಗ – ೧೧)
- ಬದುಕಿಗೊಂದು ಸೆಲೆ ವರಮಹಾಲಕ್ಷ್ಮಿ ಹಬ್ಬ (ಭಾಗ – ೧೨)
- ಬದುಕಿಗೊಂದು ಸೆಲೆ ‘ಸಿತಾರೆ ಜಮೀನ್ ಪರ್’ (ಭಾಗ – ೧೪)
- ಬದುಕಿಗೊಂದು ಸೆಲೆ ‘ಸಾಧನೆಯ ಶಿಖರ ಏರಲು…ಬೇಕು ಬದ್ಧತೆ’ (ಭಾಗ – ೧೫)
- ಬದುಕಿಗೊಂದು ಸೆಲೆ ‘ನನ್ನ ಪ್ರೀತಿಯ ಗಣೇಶ’ (ಭಾಗ – ೧೬)
- ಬದುಕಿಗೊಂದು ಸೆಲೆ ‘ಗಣೇಶ….ವಿಗ್ರಹ ಒಂದು ಸಂಕೇತಗಳು ನೂರು’ (ಭಾಗ – ೧೭)
- ಬದುಕಿಗೊಂದು ಸೆಲೆ ‘ನಮ್ಮ ಬದುಕು ಮತ್ತು ಆಯ್ಕೆಗಳು’ (ಭಾಗ – ೧೮)
- ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ ಗದಗ
