ಇಂದಿನ ಪುರುಷರು ಭಾವುಕರಾಗಿದ್ದಾರೆ. ಹೆಣ್ಣು ಮಕ್ಕಳು ಮಾನಸಿಕವಾಗಿ ಬಲಿಷ್ಠರಾಗುತ್ತಿದ್ದಾರೆ. ಗಂಡಸರು ಸ್ತ್ರೀ ಸಂವೇದನೆಗಳನ್ನು ಹೊಂದುತ್ತಿದ್ದರೆ ಹೆಣ್ಣು ಮಕ್ಕಳು ಪುರುಷ ಸಾಮರ್ಥ್ಯವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ವೀಣಾ ಹೇಮಂತ್ ಗೌಡ ಪಾಟೀಲ್ ಅವರು ‘ಗಂಡು ಹೆಣ್ಣು…. ಒಂದು ಸಾಮಾಜಿಕ ವಿಶ್ಲೇಷಣೆ’ ಕುರಿತು ಇಂದಿನ ಅಂಕಣದಲ್ಲಿ, ತಪ್ಪದೆ ಮುಂದೆ ಓದಿ…
ಅಯ್ಯೋ ನನಗೆ ಯಾಕೆ ಬೇಕಿತ್ರಿ ಈ ಕರ್ಮ! ನನ್ನ ಗಂಡ ಎನಿಸಿಕೊಂಡಾತ ತಾನು ದುಡಿದು ತಂದು ಹಾಕಿ ಮನೆಯನ್ನು ನಡೆಸಿದ್ದರೆ ನಾನು ಯಾಕೆ ಹೊರಗೆ ಬಂದು ದುಡೀತಿದ್ದೆ. ಈಗಲೂ ಕಾಲ ಮಿಂಚಿಲ್ಲ. ಆತ ದುಡಿದು ತಂದು ಹಾಕಿ ಮನೆಯನ್ನು ನಡೆಸಲಿ ನಾನು ಆರಾಮಾಗಿ ಅಡುಗೆ, ಮನೆ ಕೆಲಸ ಮಾಡಿಕೊಂಡು ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎಂದು ಹೇಳುವ ನೂರಾರು ಹೆಣ್ಣು ಮಕ್ಕಳನ್ನು ನಾವು ಈ ಸಮಾಜದಲ್ಲಿ ನೋಡುತ್ತೇವೆ. ಬೇರೆಯವರು ಏನೆಂದುಕೊಂಡಾರು ಎಂಬ ಸಂಕೋಚವಿಲ್ಲದೆ ಅವರು ಆಡುವ ಮಾತುಗಳು ಹೀಗಿರುತ್ತವೆ. ಆದರೆ ದುಡಿಮೆಯ ಅನಿವಾರ್ಯತೆಗೆ ಒಳಗಾಗಿ ಮನೆಯಿಂದ ಹೊರ ಬರುವ ಲಕ್ಷಾಂತರ ಹೆಣ್ಣುಮಕ್ಕಳ ದನಿ ಹೊರಬರದೇ ಗಂಟಲಲ್ಲಿ ಸಿಲುಕಿಕೊಂಡಿದ್ದರೂ ಮೂಲತಃ ಅದೇ ಭಾವ ಅವರಲ್ಲಿದೆ.
ಇನ್ನು ಮಧ್ಯಮ ವರ್ಗದ ಕುಟುಂಬಗಳಲ್ಲಿ ತಾವು ದುಡಿಯಲು ಮನೆಯವರು ಅವಕಾಶ ಒದಗಿಸಿ ಕೊಟ್ಟಿರುವುದೇ ತಮ್ಮ ಮೇಲೆ ಮಾಡಿರುವ ಉಪಕಾರ ಎಂಬಂತಹ ಪರಿಸ್ಥಿತಿ ಹೆಣ್ಣುಮಕ್ಕಳದು. ಅಕಸ್ಮಾತ್ ಅವರೇನಾದರೂ ಕೊಂಚ ಸಮಾನತೆಯ ಮಾತನ್ನು ಆಡಿದರೆ ದುಡಿಯುತ್ತೇನೆ ಎಂಬ ಹಮ್ಮು ನಿನಗೆ, ನೀನೇನು ಕೆಲಸ ಮಾಡಿ ನಮ್ಮನ್ನು ಸಾಕೋದು ಬೇಕಾಗಿಲ್ಲ… ನಾಳೆಯಿಂದಲೇ ನೀನು ಕೆಲಸವನ್ನು ಬಿಟ್ಟು ಬಿಡು ಎಂಬ ತಿವಿತಗಳು. ಈಗಾಗಲೇ ಕೆಲಸ ಮಾಡಬೇಕು ಎಂಬ ಮಹದಾಕಾಂಕ್ಷೆಯನ್ನು ಹೊಂದಿರುವ ಹೆಣ್ಣು ಮಕ್ಕಳು ಬಾಯಿ ಮುಚ್ಚಿಕೊಂಡು ಮನೆಯವರ ಅಸಹನೆ ಅಸಮಾಧಾನವನ್ನು ಸಹಿಸಿಕೊಳ್ಳುತ್ತಾರೆ. ಇದರ ಮೇಲೆ ತಾವು ದುಡಿದ ತಮ್ಮದೇ ಹಣದ ಮೇಲೆ ಅವರು ಯಾವುದೇ ಅಧಿಕಾರವನ್ನು ಹೊಂದಿರುವುದಿಲ್ಲ.

ಇದು ನಾಣ್ಯದ ಒಂದು ಮುಖವಾದರೆ…. ಮತ್ತೊಂದು ಮುಖ ಹೀಗಿದೆ. ಅನಿವಾರ್ಯವಾಗಿಯಾದರೂ ಪರಿಸ್ಥಿತಿ ಬದಲಾಗುತ್ತಿದೆ.
ಗಂಡಸರು ತಮ್ಮ ಮೊದಲಿನ ಗತ್ತು ಗೈರತ್ತುಗಳನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಹೆಣ್ಣನ್ನು ತಮ್ಮ ದರ್ಪದಿಂದ ಆಳುವ ಮನಸ್ಥಿತಿ ಕಡಿಮೆಯಾಗಿ ಪ್ರೀತಿ ವಿಶ್ವಾಸಗಳ ಮೂಲಕ ಆಕೆಯ ಮನಸ್ಸನ್ನು ಗೆಲ್ಲಬಹುದು ಎಂಬ ಭಾವ ಪುರುಷರಲ್ಲಿ ಮೂಡಿ ಬರುತ್ತಿದೆ. ಉಗುರಿಗೆ ಹೋಗುವುದರಲ್ಲಿ ಕೊಡಲಿ ಯಾಕೆ! ಎಂಬ ಅರಿವು ತಡವಾಗಿಯಾದರೂ ಅವರಿಗೆ ಬರುತ್ತಿರುವುದಕ್ಕೆ ನಗಬೇಕೋ ಅಳಬೇಕೋ ತಿಳಿಯದು. ಗಂಡಸರು ತಿಳಿದಿರುವಂತೆ ಆಕೆಯ ಆಸೆಗಳು ಬಹಳ. ಆದರೆ ಅವಶ್ಯಕತೆಗಳು ಅತ್ಯಂತ ಕಡಿಮೆ. ಖಂಡಿತವಾಗಿಯೂ ತನ್ನ ಮನದ ಆಸೆಗಳನ್ನು ಆಕೆ ತನ್ನ ಸಂಗಾತಿಯ ಮುಂದೆ ಹೇಳಿಕೊಳ್ಳಬಹುದು ಆದರೆ ತನ್ನ ಸಂಗಾತಿ ದುಡಿದು ತಂದು ಹಾಕುವುದರಲ್ಲಿಯೇ ಮನೆಯನ್ನು ವಿಭಾಯಿಸುವ ಶಕ್ತಿ ಕೂಡ ಆಕೆಗಿದೆ. ಎಲ್ಲಾ ಆಸೆ ಆಶಯಗಳನ್ನು ಈಡೇರಿಸಿಕೊಳ್ಳಲು ಆಗುವುದಿಲ್ಲ ಎಂಬ ಭೂಮಿ ತೂಕದ ಸತ್ಯದ ಅರಿವು ಆಕೆಗಿದೆ. ಆದರೆ ಅದನ್ನು ಅರಿಯದ ಪುರುಷ ತನ್ನ ಮುಂದೆ ತನ್ನ ಸಂಗಾತಿ ವ್ಯಕ್ತಪಡಿಸಿದ ಎಲ್ಲವೂ ಆಕೆಗೆ ದೊರೆಯಬೇಕು ಎಂಬ ಆಶಯವನ್ನು ಆಕೆ ಹೊಂದಿದ್ದಾಳೆ ಎಂಬ ಹುಸಿ ಭ್ರಮೆಯಲ್ಲಿ ಬದುಕುತ್ತಾನೆ. ಶಕ್ತಿಮೀರಿ ಅವುಗಳನ್ನು ಪೂರೈಸಲು ಒದ್ದಾಡುತ್ತಾನೆ, ಆದರೆ ಒಂದೊಮ್ಮೆ ಆಕೆಯ ಕಂಗಳಲ್ಲಿ ಆತ ಮತ್ತಷ್ಟು ಇಣುಕಿ ನೋಡಿದಾಗ ಅಲ್ಲಿ ಈ ಎಲ್ಲಾ ಅವಶ್ಯಕತೆಗಳಿಗಿಂತ ಮಿಗಿಲಾಗಿ ಗಂಡನ ಆರೋಗ್ಯ, ಮಕ್ಕಳ ಶಿಕ್ಷಣ, ನೆಮ್ಮದಿಯ ಬದುಕು ಮಾತ್ರ ಆಕೆಯ ಮೊದಲ ಆದ್ಯತೆಯಾಗಿರುತ್ತದೆ ಎಂಬ ಮೂಲಭೂತ ಸತ್ಯವನ್ನು ಕಾಣಬಹುದು.
ಇಂದಿನ ಗಂಡಸರಲ್ಲಿ ದೈಹಿಕವಾಗಿ ಅದೆಷ್ಟೇ ಬಲಿಷ್ಠತೆ ಇದ್ದರೂ ಒಂದು ಮನೆಯನ್ನು ಸಂಭಾಳಿಸುವ ಕನಿಷ್ಠ ಶಕ್ತಿ, ಸಾಮರ್ಥ್ಯಗಳು ಅವರಲ್ಲಿರುವುದು ಕಡಿಮೆಯಾದ್ದರಿಂದ ಅವರು ದುರ್ಬಲರೇ ಸರಿ. ಇದಕ್ಕೆ ತದ್ವಿರುದ್ಧವಾಗಿ ಅಡುಗೆ ಮನೆಯ ನಾಲ್ಕು ಗೋಡೆಗಳಿಂದ ಹೊರಬಂದ ಹೆಣ್ಣುಮಗಳು ಪುರುಷ ಅಧಿಕಾರದ ಎಲ್ಲಾ ಎಲೆಗಳನ್ನು ತಾಗುತ್ತಿದ್ದಾಳೆ. ಇಲ್ಲಿಯವರೆಗೂ ಔದ್ಯೋಗಿಕ ಪ್ರಪಂಚ, ವ್ಯವಹಾರಿಕ ಬದುಕು ಕೇವಲ ಗಂಡಸಿನ ಸ್ವತ್ತು ಎಂಬಂತೆ ಭಾವಿಸುತ್ತಿದ್ದ ಜಗತ್ತಿಗೆ ಹೆಣ್ಣು ಮಕ್ಕಳು ಕೇವಲ ಅಡಿಯನ್ನು ಇಟ್ಟಿಲ್ಲ ಅಲ್ಲೂ ಕೂಡ ಅವರು ತಮ್ಮ ಸ್ವಸಾಮರ್ಥ್ಯದಿಂದ ಆ ಜಗತ್ತನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೆಂದು ಪುರುಷರನ್ನು ಮೆಟ್ಟಿ ನಿಲ್ಲುವ ದಾಷ್ಟಿಕತೆ ಅವರದಲ್ಲ ಬದಲಾಗಿ ನೀನೇರುವ ಎತ್ತರವನ್ನು ನಾನು ಏರಬಲ್ಲೆ ಲಿಂಗ ಅಸಮಾನತೆ ಸಲ್ಲದು ಎಂಬ ಸಾತ್ವಿಕ ಆದರೆ ಅಷ್ಟೇ ದೃಢವಾದ ಪ್ರತಿಭಟನೆ ಆಕೆಯದು. ಸ್ವಭಾವತಃ ಯಾವುದೇ ಕೆಲಸವನ್ನು ಮಾಡಿದರೂ ಕೂಡ ಅದರಲ್ಲಿ ಪರಿಪೂರ್ಣತೆಯನ್ನು ಸಾಧಿಸುವ ಹೆಣ್ಣು ಮಕ್ಕಳು ಇದೀಗ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಹರಡಿದ್ದಾರೆ.
ಪುರುಷರು ಭಾವುಕರಾಗಿದ್ದಾರೆ. ಮೊದಲಿನಿಂದಲೂ ಪುರುಷರು ತಮ್ಮ ಅಹಂಕಾರ, ಗಂಭೀರ ನಡೆ-ನುಡಿಗಳಲ್ಲಿ, ದರ್ಪವನ್ನು ತೋರುವ, ಮೀಸೆಯ ಮರೆಯಲ್ಲಿ ಭಾವನೆಗಳನ್ನು ಮುಚ್ಚಿಡುವುದರಲ್ಲಿಯೇ ಇದ್ದರು ಅವರ ಭಾವನೆಗಳು ಗಂಡಸು ಜಗತ್ತನ್ನು ಆಳಬಲ್ಲ ಎಂಬ ಪೊಳ್ಳು ವಾದದ ಅಡಿಯಲ್ಲಿ ಮರೆಯಾಗಿತ್ತು. ಬದಲಾದ ಕಾಲಮಾನ, ಪರಿಚಯವಾದ ಸಾಂಸ್ಕೃತಿಕ ವಿಭಿನ್ನತೆಗಳು, ಹೊಸ ಜಗತ್ತಿನ ಅವಶ್ಯಕತೆಗಳು,ಜಾಗತಿಕ ವಿದ್ಯಮಾನಗಳ ಅರಿವು ಅವರಲ್ಲಿರುವ ಮಾನವೀಯ ಸಂವೇದನೆಗಳನ್ನು ಇನ್ನಿಲ್ಲದಂತೆ ಬಡಿದೆಬ್ಬಿಸಿದೆ. ಮತ್ತೆ ಕೆಲವರು ಅದೇ ಪೂರ್ವಾಗ್ರಹದ ಪುರುಷ ಮೇಲರಿಮೆಯ ಕೂಪದಲ್ಲಿ ಮಂಡೂಕದಂತೆ ಬದುಕುತ್ತಿದ್ದಾರೆ. ಅವರನ್ನು ಬದಲಿಸಲು ಆಗುವುದಿಲ್ಲ. ಅವರನ್ನು ಬಿಟ್ಟುಬಿಡಿ.
ವಿಪರ್ಯಾಸವೆಂದರೆ ಹೆಣ್ಣು ಮಕ್ಕಳು ಮಾನಸಿಕವಾಗಿ ಬಲಿಷ್ಠರಾಗುತ್ತಿದ್ದಾರೆ. ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ, ಭಾವನಾತ್ಮಕವಾಗಿಯೂ ಅವರು ದಿಟ್ಟರಾಗುತ್ತಿದ್ದಾರೆ ತಮಗೇನು ಬೇಕು ಎಂಬುದರ ಸ್ಪಷ್ಟ ಅರಿವನ್ನು ತುಸು ಹೆಚ್ಛೇ ಹೊಂದಿದ್ದಾರೆ. ಕೌಟುಂಬಿಕ ಭಾರವನ್ನು ಇಂದಿಗೂ ಅವರೇ ಹೊತ್ತುಕೊಂಡಿದ್ದರೂ ಕೂಡ ಮತ್ತಷ್ಟು ಗಟ್ಟಿಯಾಗಿ ಬೇರೂರುತ್ತಿದ್ದಾರೆ….. ಹೆಣ್ಣು ಮಕ್ಕಳು ಸಬಲರಾಗುತ್ತಿದ್ದಾರೆ. ಪ್ರಬಲರಾಗುತ್ತಾರೆ ಕೂಡ.

ಪ್ರಸ್ತುತ ಜಗತ್ತಿನಲ್ಲಿ ಪುರುಷರು ಒತ್ತಡದ ಬದುಕನ್ನು ನಡೆಸುತ್ತಿರುವುದನ್ನೂ ಮಹಿಳೆಯರು ತಮ್ಮ ಬದುಕನ್ನು ತಮ್ಮ ಹಿಡಿತದಲ್ಲಿಯೇ ಇಟ್ಟುಕೊಂಡಿರುವುದನ್ನು ಕಾಣುತ್ತಿದ್ದೇವೆ. ಪುರುಷರು ಆರಾಮದಾಯಕ ಬದುಕಿಗಾಗಿ ಹಪಹಪಿಸಿದರೆ ಹೆಣ್ಣು ಮಕ್ಕಳು ಸವಾಲನ್ನು ಎದುರಿಸಲು, ಎದುರಿಸಿ ಮುಂದೆ ಸಾಗಲು ತಯಾರಾಗುತ್ತಿದ್ದಾರೆ.
ಗಂಡಸರು ತಮ್ಮ ನೆಮ್ಮದಿಯನ್ನು ಅರಸಲು ಸುರಕ್ಷಿತ ತಾವಿಗಾಗಿ ಹುಡುಕಾಡುತ್ತಿದ್ದರೆ ಹೆಣ್ಣು ಮಕ್ಕಳು ತಾವೇ ಆ ಸುರಕ್ಷತೆಯ ಗೂಡಾಗಿದ್ದಾರೆ. ಈ ಹಿಂದೆ ರಕ್ಷಕ, ಕುಟುಂಬವನ್ನು ನಿರ್ವಹಿಸುವ ಪಾಲಕ ಎಂದು ಕರೆಯಲ್ಪಡುತ್ತಿದ್ದ ಪುರುಷನನ್ನು ಹಿಂದಿಕ್ಕಿ ಹೆಣ್ಣು ಮಕ್ಕಳು ಕೌಟುಂಬಿಕ ಜವಾಬ್ದಾರಿಗಳನ್ನು ಆರ್ಥಿಕವಾಗಿ ತಾವೇ ನಿರ್ವಹಿಸುವಷ್ಟು ಸಬಲರಾಗಿದ್ದಾರೆ. ಈ ಹಿಂದೆ ಯಾವುದೇ ರೀತಿಯ ಬಿಲ್ ಗಳನ್ನು ಪಾವತಿಸಲು ಗಂಡಸರ ಮುಖ ನೋಡುತ್ತಿದ್ದ ಹೆಣ್ಣುಮಕ್ಕಳು ಇದೀಗ ತಮ್ಮದೇ ಎಟಿಎಂ ಇಲ್ಲವೇ ಮೊಬೈಲ್ ಬ್ಯಾಂಕಿಂಗ್ ನ ಮೂಲಕ ಹಣ ಸಂದಾಯ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಗಂಡು ಹುಡುಗರು ಇಂದಿಗೂ ಹುಡುಗಿಯರು, ಸಿಗರೇಟು, ಬಿಯರು, ಕ್ಲಬ್ಬು, ಪಬ್ಬು ಮುಂತಾದ ನಶೆಗಳಲ್ಲಿ ಹುಡುಗುತನದಿಂದ ಓಲಾಡುತ್ತಿದ್ದರೆ ಹೆಣ್ಣು ಮಕ್ಕಳು ತಮ್ಮ ತಂದೆಯ ಆರ್ಥಿಕ ಭಾರವನ್ನು ಹಂಚಿಕೊಳ್ಳುತ್ತಿದ್ದಾರೆ. ತಾಯಿಗೆ ಆಸರೆಯಾಗುತ್ತಿದ್ದಾರೆ. ತಮ್ಮ ಶೈಕ್ಷಣಿಕ ಸಾಲವನ್ನು ತೀರಿಸುತ್ತಿರುವುದಲ್ಲದೆ ತಮ್ಮ ಬೆನ್ನ ಹಿಂದೆ ಹುಟ್ಟಿದ ಒಡಹುಟ್ಟಿದವರಿಗೆ ಅವರ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಸಹಾಯ ಹಸ್ತ ಎಸಗುತ್ತಿದ್ದಾರೆ ಆ ಕಾರಣಕ್ಕಾಗಿಯೇ ತಮ್ಮ ಮದುವೆಯನ್ನು ತುಸು ಮುಂದೂಡುತ್ತಿದ್ದಾರೆ….. ಇದಕ್ಕೆ ಅಪವಾದ ಇಲ್ಲವೆಂದಿಲ್ಲ. ಆದರೆ ಶೇಕಡವಾರು ದೃಷ್ಟಿಯಲ್ಲಿ ನೋಡಿದಾಗ ಹೆಣ್ಣು ಮಕ್ಕಳು ಹೆಚ್ಚು ಕ್ರಿಯಾಶೀಲರಾಗುತ್ತಿದ್ದಾರೆ.
ಹಾಗೆಂದು ಹೆಣ್ಣು ಮಕ್ಕಳು ಸಂಪೂರ್ಣ ಸೊಬಗರು ಎಂದು ಹೇಳುವುದಿಲ್ಲ…. ಆದರೆ ಅವರಿಗೆ ಗೊತ್ತಿದೆ ವೇರ್ ಅಂಡ್ ವೆನ್ ಟು ಸ್ಟಾಪ್ ! ಎಂದು.ಬಹುಶಹ ಅದು ಅವರಿಗೆ ಪ್ರಾಕೃತಿಕವಾಗಿ ಒಲಿದ ವಿದ್ಯೆ.
ಗಂಡಸರು ಸ್ತ್ರೀ ಸಂವೇದನೆಗಳನ್ನು ಹೊಂದುತ್ತಿದ್ದರೆ ಹೆಣ್ಣು ಮಕ್ಕಳು ಪುರುಷ ಸಾಮರ್ಥ್ಯವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ನಿಧಾನವಾಗಿ ಅವರ ಪಾತ್ರಗಳು ಬದಲಾಗುತ್ತಿವೆ. ಆದರೆ ಹೀಗೆ ಬದಲಾಗುತ್ತಿರುವ ಪಾತ್ರದ ಹಿಂದಿನ ಹೆಣ್ಣು ಮಕ್ಕಳ ಮನದಾಳದಲ್ಲಿ ಹೊಕ್ಕು ನೋಡಿದರೆ ಇಂದಿಗೂ ಕೂಡ ಆಕೆ ತನ್ನ ಸಂಗಾತಿಯಾಗಿ ಓರ್ವ ಪುರುಷನನ್ನು, ಒಬ್ಬ ಜವಾಬ್ದಾರಿಯುತ ವ್ಯಕ್ತಿಯನ್ನು ಹೊಂದಲು ಬಯಸುತ್ತಾಳೆಯೇ ಹೊರತು ತನ್ನ ಮಕ್ಕಳ ಜೊತೆ ಮತ್ತೊಂದು ( ಗಂಡ ಎಂಬ ) ಮಗುವನ್ನು ಅದೂ ಬೆಳೆದ ಮಗುವನ್ನು ಸಂಭಾಳಿಸಲು ಇಷ್ಟಪಡುವುದಿಲ್ಲ.
ನಿಜವಾದ ಸತ್ಯ ಇಲ್ಲಿದೆ ಹೆಣ್ಣು ಮಕ್ಕಳು ಹೆಜ್ಜೆಯನ್ನು ಬಯಸುವುದಿಲ್ಲ ಅವರಿಗೆ ಪರಿಪೂರ್ಣತೆ ಬೇಕಾಗಿಲ್ಲ. ಆರಂಕಿಯ ಸಂಬಳದ ಸಂಗಾತಿಯನ್ನಾಗಲಿ ಅವರು ಬಯಸುತ್ತಿಲ್ಲ…. ಕಾರಣ ಅವರು ಕೂಡ ದುಡಿಯುತ್ತಿದ್ದಾರೆ ಅವರು ಕೂಡ ಸಂಸಾರದ ನೊಗವನ್ನು ಆತನಷ್ಟೇ ಸಮರ್ಥವಾಗಿ ಆತನ ಜೊತೆಗೂಡಿ ಹೊರಬಲ್ಲರು. ಗಂಡಸಿನ ಸಿಕ್ಸ್ ಪ್ಯಾಕ್ ಆಬ್ಸ್ ಬಗ್ಗೆ ಆಕೆಗೆ ಆಕರ್ಷಣೆ ಇಲ್ಲ…ಅದರ ನಿರರ್ಥಕತೆಯ ಅರಿವು ಆಕೆಗಿದೆ. ಬದಲಾಗಿ ತನ್ನನ್ನು ಅರ್ಥ ಮಾಡಿಕೊಳ್ಳುವ ಸಂವೇದನಾಶೀಲ ಪುರುಷನ ಅವಶ್ಯಕತೆಯನ್ನು ಆಕೆ ಮನಗಂಡಿದ್ದಾಳೆ. ತನ್ನನ್ನು ಬಲಹೀನಗೊಳಿಸುವ ಬದಲು ಮತ್ತಷ್ಟು ಸಶಕ್ತಳಾಗಿಸುವ, ಅತಂತ್ರಗೊಳಿಸುವ ಬದಲು ತನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ತರದಿರುವ, ತನ್ನ ಬದುಕನ್ನು ಡೋಲಾಯಮಾನಗೊಳಿಸುವ ಬದಲು ದೃಢವಾಗಿ ಜೊತೆಯಾಗಿ ನಿಲ್ಲುವ ಸಂಗಾತಿಯ ಅವಶ್ಯಕತೆ ಆಕೆಗಿದೆ.
ಪುರುಷ ಅಸಹಾಯಕನಾದಾಗ ಅಭದ್ರನಾದಾಗ, ಜವಾಬ್ದಾರಿಯಿಂದ ವಿಮುಖನಾದಾಗ ಹೆಣ್ಣು ಮಕ್ಕಳು ಬಲವಂತವಾಗಿ ಬಲಿಷ್ಠರಾಗುವ ಸಾಧ್ಯತೆಗಳು ತಲೆದೋರುತ್ತವೆ. ಇದು ಈಗಾಗಲೇ ಆಕೆಗಿರುವ ಸಾಮಾಜಿಕ ಸಾಮರ್ಥ್ಯವನ್ನು ದ್ವಿಗುಣವಾಗಿಸುವ ನಿಟ್ಟಿನಲ್ಲಿ ಆಕೆಯನ್ನು ದೂಡುತ್ತದೆ. ಬದುಕಿನ ಚುಕ್ಕಾಣಿಯನ್ನು ಗಂಡ ಎಂಬ ಸಂಗಾತಿ ಹಿಡಿಯಲು ನಿರಾಕರಿಸಿದರೆ, ಸರಿಯಾದ ದಾರಿಯಲ್ಲಿ ನಡೆಸಲು ಅಸಮರ್ಥನಾದರೆ ಬೇರೆ ದಾರಿಯಿಲ್ಲದೆ ಹೆಣ್ಣು ಮಕ್ಕಳು ಪರಿಸ್ಥಿತಿಯನ್ನು ತಮ್ಮ ನಿಯಂತ್ರಣಕ್ಕೆ ಒಳಪಡಿಸಬೇಕಾಗುತ್ತದೆ.
ಹೆಣ್ಣು ಮಕ್ಕಳು ತುಸು ಹೆಚ್ಚಿನದನ್ನು ಹೊಂದುವ ಸಾಮರ್ಥ್ಯವನ್ನು ಪಡೆದಿದ್ದಾರೆ. ಹೆಣ್ಣು ಮಕ್ಕಳು ತನ್ನ ವೈಯಕ್ತಿಕ ಭಾರವನ್ನು ತಾನೇ ಹೊರುವ ಗಂಡಸಿನ ಆಸರೆಯನ್ನು ಬಯಸುತ್ತಾರೆಯೇ ಹೊರತು ಎಲ್ಲವನ್ನು ತನ್ನ ಮೇಲೆ ಹೊರಿಸಿ ನಿಶ್ಚಿಂತರಾಗುವ ಗಂಡನನ್ನಲ್ಲ. ಹೆಣ್ಣು ಮಕ್ಕಳು ಇಂದಿಗೂ ಕೂಡ ತನ್ನ ಸಂಗಾತಿಯ ಎದೆಯ ಮೇಲೆ ನಿಶ್ಚಿಂತವಾಗಿ ನಿರಾಳವಾಗಿ ತಲೆ ಇಟ್ಟು ಮಲಗುವ ತನ್ನ ಹೆಣ್ತನವನ್ನು ಅನುಭವಿಸಲು ಆಶಿಸುತ್ತಾರೆಯೇ ಹೊರತು ದುಪ್ಪಟ್ಟು ಶ್ರಮವನ್ನಲ್ಲ. ಹೆಣ್ಣು ಮಕ್ಕಳು ಹೆಣ್ಣು ಮಕ್ಕಳಾಗಿಯೇ ಇರಲು ಆಶಿಸುತ್ತಾರೆ….. ಅಂದ ಚಂದ, ಸೀರೆ ಬಟ್ಟೆ, ಒಡವೆ, ಅಲಂಕಾರ, ಕೌಟುಂಬಿಕ ನಿರ್ವಹಣೆ ಜೊತೆಗೆ ತನ್ನನ್ನು ತಾನು ರೂಪಿಸಿಕೊಳ್ಳುವ ಮಾನಸಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಹಾಗೂ ತನ್ನನ್ನು ತಾನಿರುವಂತೆಯೇ ಒಪ್ಪಿ ಅಪ್ಪಿಕೊಳ್ಳುವ ಸಂಗಾತಿಯ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಗಳು ಆಕೆಯ ಸದ್ಯದ ಅವಶ್ಯಕತೆ.
ಗಂಡು ಮಕ್ಕಳೇ… ಹೆಣ್ಣು ಮಕ್ಕಳ ಹೃದಯದ ಈ ಪಿಸು ಮಾತುಗಳನ್ನು ಗಮನವಿಟ್ಟು ಆಲಿಸಿ ಅವುಗಳಲ್ಲಿರುವ ಸ್ಪಷ್ಟತೆ ಮತ್ತು ದೃಢತೆಯನ್ನು ಅರಿಯಿರಿ. ಬದುಕಿನಲ್ಲಿ ಚೆನ್ನಾಗಿ ಬೆಳೆಯಿರಿ, ಬೆಳೆದು ತೋರಿಸಿರಿ. ಮಾನವೀಯ ಸೂಕ್ಷ್ಮ ಸಂವೇದನೆಗಳನ್ನು ಹೊಂದಿರುವ ಪುರುಷರು ನೀವಾಗಿರಿ. ಅಂತಿಮವಾಗಿ ನೀವು ನೀವಾಗಿಯೇ ಇದ್ದರೆ ಹೆಣ್ಣು ಕೂಡ ತಾನು ತಾನಾಗಿಯೇ ಇರುತ್ತಾಳೆ. ಏನಂತೀರಾ?
ಹಿಂದಿನ ಸಂಚಿಕೆಗಳು :
- ಬದುಕಿಗೊಂದು ಸೆಲೆ (ಭಾಗ -೧)
- ಬದುಕಿಗೊಂದು ಸೆಲೆ (ಭಾಗ -೨)
- ಬದುಕಿಗೊಂದು ಸೆಲೆ (ಭಾಗ -೩)
- ಬದುಕಿಗೊಂದು ಸೆಲೆ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ (ಭಾಗ – ೪)
- ಬದುಕಿಗೊಂದು ಸೆಲೆ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ (ಭಾಗ- ೫)
- ಬದುಕಿಗೊಂದು ಸೆಲೆ ‘ಹೌದು! ನನಗೆ ವಯಸ್ಸಾಗುತ್ತಿದೆ’ (ಭಾಗ – ೬)
- ಬದುಕಿಗೊಂದು ಸೆಲೆ‘ಕಾಯುತ್ತಿದ್ದಾರೆ ನಿಮ್ಮವರು… ನಿಮಗಾಗಿ’ (ಭಾಗ -೭)
- ಬದುಕಿಗೊಂದು ಸೆಲೆ ‘ಹೆಣ್ಣು ಮಕ್ಕಳೇ ಎಚ್ಚರವಾಗಿ’ (ಭಾಗ – ೮)
- ಬದುಕಿಗೊಂದು ಸೆಲೆ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ (ಭಾಗ – ೯)
- ಬದುಕಿಗೊಂದು ಸೆಲೆ ‘ಶ್ರಾವಣ ಮಾಸ… ಶ್ರವಣ ಮಾಸ’ (ಭಾಗ – ೧೦)
- ಬದುಕಿಗೊಂದು ಸೆಲೆ ‘ಪ್ಯಾರಿಸ್ ಸುಗಂಧದ ಖ್ಯಾತಿಯ ಕೋಕೋ ಚಾನೆಲ್…. ಸತತ ಪ್ರಯತ್ನದ ಸಾಫಲ್ಯ’ (ಭಾಗ – ೧೧)
- ಬದುಕಿಗೊಂದು ಸೆಲೆ ವರಮಹಾಲಕ್ಷ್ಮಿ ಹಬ್ಬ (ಭಾಗ – ೧೨)
- ಬದುಕಿಗೊಂದು ಸೆಲೆ ‘ಸಿತಾರೆ ಜಮೀನ್ ಪರ್’ (ಭಾಗ – ೧೪)
- ಬದುಕಿಗೊಂದು ಸೆಲೆ ‘ಸಾಧನೆಯ ಶಿಖರ ಏರಲು…ಬೇಕು ಬದ್ಧತೆ’ (ಭಾಗ – ೧೫)
- ಬದುಕಿಗೊಂದು ಸೆಲೆ ‘ನನ್ನ ಪ್ರೀತಿಯ ಗಣೇಶ’ (ಭಾಗ – ೧೬)
- ಬದುಕಿಗೊಂದು ಸೆಲೆ ‘ಗಣೇಶ….ವಿಗ್ರಹ ಒಂದು ಸಂಕೇತಗಳು ನೂರು’ (ಭಾಗ – ೧೭)
- ಬದುಕಿಗೊಂದು ಸೆಲೆ ‘ನಮ್ಮ ಬದುಕು ಮತ್ತು ಆಯ್ಕೆಗಳು’ (ಭಾಗ – ೧೮)
- ಬದುಕಿಗೊಂದು ಸೆಲೆ ‘ಸ್ನೇಹ ಬಂಧ ’ (ಭಾಗ-೧೯)
- ಬದುಕಿಗೊಂದು ಸೆಲೆ ‘ಮಕ್ಕಳ ಕುರಿತು ಅತಿ ಕಾಳಜಿ…. ಖಂಡಿತ ಬೇಡ’ (ಭಾಗ-೨೦)
- ಬದುಕಿಗೊಂದು ಸೆಲೆ ‘ಮಕ್ಕಳ ಸಂಸ್ಕಾರದಲ್ಲಿ ತಾಯಿಯ ಪಾತ್ರ’ (ಭಾಗ-೨೧)
- ಬದುಕಿಗೊಂದು ಸೆಲೆ ‘ಮಗನಿಗೆ ಶಿಸ್ತಿನ ಪಾಠದ ಪತ್ರ’ (ಭಾಗ-೨೨)
- ಬದುಕಿಗೊಂದು ಸೆಲೆ ‘ಭಿತ್ತಿಯಲ್ಲಿ ನೆನಪಾಗಿ ಉಳಿದ… ಎಸ್ ಎಲ್ ಭೈರಪ್ಪ’ (ಭಾಗ-೨೩)
- ಬದುಕಿಗೊಂದು ಸೆಲೆ “ದ ಹ್ಯಾಪಿಯಸ್ ಮ್ಯಾನ ಆನ್ ದ ಅರ್ಥ’ (ಭಾಗ-೨೪)
- ಬದುಕಿಗೊಂದು ಸೆಲೆ ‘ಎಲ್ಲ ಏಟಿಗೂ ಇದಿರೇಟು….ಉತ್ತರವಲ್ಲ’ (ಭಾಗ-೨೫)
- ವೀಣಾ ಹೇಮಂತಗೌಡ ಪಾಟೀಲ್ – ಮುಂಡರಗಿ ಗದಗ
