ಬದುಕಿಗೊಂದು ಸೆಲೆ (ಭಾಗ-೩೯)

ಬಹುಶಃ ಸ್ಮೃತಿ ಮಂದಾನ ತನ್ನ ಮದುವೆ ಮುರಿದದ್ದಕ್ಕಿಂತ ಹೆಚ್ಚು ಮಾಧ್ಯಮಗಳ ಹಾಗೂ ಜಾಲತಾಣಗಳ ಸುದ್ದಿ ಸಂಭ್ರಮದಿಂದ ನೊಂದದ್ದೇ ಹೆಚ್ಚಾಗಿರಬಹುದು. ವೀಣಾ ಹೇಮಂತ್ ಗೌಡ ಪಾಟೀಲ್ ಅಂಕಣದಲ್ಲಿ ‘ಮಾಧ್ಯಮಗಳ ವೈಭವೀಕೃತ ಸುದ್ದಿ ನಿರೂಪಣೆ…. ಒಂದು ವಿವೇಚನೆ’ , ತಪ್ಪದೆ ಮುಂದೆ ಓದಿ…

ಕಳೆದ ಎರಡು ದಿನಗಳಿಂದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಸ್ಮೃತಿ ಮಂದಾನ ಅವರ ಹೇಳಿಕೆಯು ನಮ್ಮ ದೇಶವಷ್ಟೇ ಅಲ್ಲ, ಇಡೀ ಜಗತ್ತಿನ ಜನರ ಮನಸ್ಥಿತಿ ಹೇಗೆ ಬದಲಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಸಮಾಜದ ವಿಕೃತ ಮಾನಸಿಕತೆಯು ದೇಶ, ಭಾಷೆಯನ್ನು ಮೀರಿ ವ್ಯಕ್ತಿತ್ವವನ್ನು ಹನನ ಮಾಡುವಲ್ಲಿ ನಿರತವಾಗಿದೆ ಎಂದರೆ ತಪ್ಪಿಲ್ಲ.

ಸ್ಮೃತಿ ಮಂದಾನ ಅವರ ಬದುಕಿನಲ್ಲಿ ನಡೆಯಿತು ಎನ್ನಲಾದ ವೈಯುಕ್ತಿಕ ಘಟನೆಯನ್ನು ಹಾಟ್ ಕೇಕ್ ಎಂಬಂತೆ ಮಾಧ್ಯಮದಲ್ಲಿ ಪ್ರಚಾರ ಮಾಡಿದ್ದೇ ಮಾಡಿದ್ದು. ತಮ್ಮ ವೈಯುಕ್ತಿಕ ತೆವಲಿಗಾಗಿ ಒಬ್ಬರ ಬದುಕಿನ ಅತ್ಯಂತ ವೈಯುಕ್ತಿಕ ಘಟನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಪರ, ವಿರೋಧ ಮಾತುಗಳನ್ನು ಆಡುತ್ತಾ ಅವರು ಬದುಕಿರುವಾಗಲೇ ಅವರ ಚಾರಿತ್ರ್ಯದ ಪೋಸ್ಟ್ ಮಾರ್ಟಂ ಮಾಡಿದ ಅಸಭ್ಯ, ಅನುಚಿತವಾದ ವರ್ತನೆ ಬಹುತೇಕ ಜಾಲತಾಣಿಗರದಾಗಿತ್ತು.

ಫೋಟೋ ಕೃಪೆ : google

ಇನ್ನು ಮಾಧ್ಯಮಗಳು ಜನರ ಯೋಚನೆಗಿಂತ ಸಾವಿರ ಪಾಲು ಹೆಚ್ಚು ತೋರಿಸುವದನ್ನೇ ತಮ್ಮ ಕಸುಬಾಗಿಸಿಕೊಂಡಿದ್ದಾರೆ. ಯಾವುದು ಹೆಚ್ಚು ಬಿಕರಿಯಾಗುತ್ತದೆಯೋ ಅದನ್ನೇ ಹೆಚ್ಚು ಪ್ರಸಾರ ಮಾಡಬೇಕು ಎಂಬ ಚಾನಲ್ ನ ಟಿ ಆರ್ ಪಿ ಯ ವೈಯುಕ್ತಿಕ ಅನುಕೂಲವನ್ನು ಹೊರತುಪಡಿಸಿ ಮತ್ತಾವುದನ್ನು ಕಣ್ಣೆತ್ತಿಯೂ ನೋಡದ ಗಾಂಧಾರಿಯ ಕುರುಡುತನ ಹಾಗೂ ಅಂಧ ದ್ರೃತರಾಷ್ಟ್ರನ ಪುತ್ರ ವ್ಯಾಮೋಹ ಅದರದ್ದು. ದೃಶ್ಯಮಾಧ್ಯಮಗಳು ಹೇಗಿರಬೇಕು ಎಂದರೆ ಬೆತ್ತಲೆಯನ್ನು ಕೂಡ ವೈಭವೀಕರಿಸುವಂತಹ ರೀತಿಗಳು.

ನೀತಿ ಎಂದರೇನು?! ಆ ಪದದ ಅರ್ಥವೇ ಅವರಿಗೆ ಗೊತ್ತಿಲ್ಲ. ಜಾಲತಾಣಗಳಲ್ಲಿ ನಮ್ಮ ಪ್ರತಿಕ್ರಿಯೆ ಹೇಗಿರಬೇಕು ಎಂದು ಗೊತ್ತಿದ್ದು ಕೂಡ ಮತ್ತೊಬ್ಬರ ವೈಯುಕ್ತಿಕ ಬದುಕನ್ನು ಕೆದಕಿ ನೋಡುವುದಲ್ಲದೇ ತಮ್ಮ ವೈಯುಕ್ತಿಕ ಗ್ರಹಿಕೆಗಳನ್ನು ಕಮೆಂಟ್ಗಳ ಮೂಲಕ ತುರುಕುವುದು. ಬಹುಶಹ ಸ್ಮೃತಿ ಮಂದಾನ ತನ್ನ ಮದುವೆ ಮುರಿದದ್ದಕ್ಕಿಂತ ಹೆಚ್ಚು ಮಾಧ್ಯಮಗಳ ಹಾಗೂ ಜಾಲತಾಣಗಳ ಸುದ್ದಿ ಸಂಭ್ರಮದಿಂದ ನೊಂದದ್ದೇ ಹೆಚ್ಚಾಗಿರಬಹುದು.

ಪುಂಖಾನುಪುಂಖವಾಗಿ ಸುದ್ದಿಗಳನ್ನು ಶಂಖದಂತೆ ತಿದಿಯೊತ್ತಿ ಊದುವುದೇ ಪ್ರಸ್ತುತ ದಿನಮಾನಗಳಲ್ಲಿ ಸಾಮಾನ್ಯವಾಗಿದ್ದು ಒಬ್ಬರ ವೈಯುಕ್ತಿಕ ಬದುಕಿನಲ್ಲಿ ಹಣಿಕಿ ನೋಡುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಅರಿಯದೆ ಇರುವಷ್ಟು ನಾವು ಮೂಢರಾಗಿದ್ದೇವೆ. ಅದರಲ್ಲೂ ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಗಳ ಬದುಕನ್ನು ಓಡಾಟವನ್ನು ಇನ್ನಷ್ಟು ಮತ್ತಷ್ಟು ಕುಂತಲ್ಲಿ, ನಿಂತಲ್ಲಿ, ಊಟ ತಿಂಡಿ ಮಾಡುವುದರಿಂದ ಹಿಡಿದು, ದೊಡ್ಡ ದೊಡ್ಡ ಹೋಟೆಲ್ಗಳ, ಮಾಲ್ ಗಳ, ಬಾರುಗಳ, ಪಬ್ಬುಗಳತನಕ, ಏರ್ಪೋರ್ಟ್ ಗಳಲ್ಲಿ ನಡೆದು ಬರುವವರೆಗೆ ಹೌದು ಕೆಲ ತಾರೆಯರು ವ್ಯಕ್ತಪಡಿಸಿದ ಹಾಗೆ ತಮ್ಮನ್ನು ಏರ್ಪೋರ್ಟ್ಗಳಲ್ಲಿ ಇನ್ನಿಲ್ಲದಂತೆ ಹಿಂಬಾಲಿಸುವ ಕಾರಣ ಅಲ್ಲೂ ಕೂಡ ತಾವು ಎಚ್ಚರಿಕೆಯ ಹೆಜ್ಜೆಯನ್ನು ಹಾಗೂ ಸಹನೆಯ ಭಾವವನ್ನು ಹೊಂದಿರಲೇಬೇಕು (ಮತ್ತೆ ಕೆಲವರು ಬೇಕೆಂದೇ ತಾವು ಬರುವ ಸಮಯವನ್ನು ಮಾಧ್ಯಮದವರಿಗೆ ತಿಳಿಯಪಡಿಸುತ್ತಾರೆ ಅದು ಅವರ ವೈಯಕ್ತಿಕ ವಿಚಾರ) ಅವರ ಬದುಕಿನ ಪ್ರತಿಯೊಂದು ಘಟನೆಯನ್ನು ಜನರ ಮುಂದಿಡುವ ಮೂಲಕ ತಾವೇನೋ ದೊಡ್ಡ ವಿಷಯವನ್ನು ಸಾಧಿಸಿದ್ದೇವೆ ಎಂಬ ಭ್ರಮೆಯನ್ನು ಹೊತ್ತ ಕೆಲ ಮಾಧ್ಯಮದ ಜನರಿಗೆ ಇದೇ ಅವಘಡ ತಮ್ಮ ಮನೆಯಲ್ಲಿ ಆದರೆ ಇಷ್ಟೇ ಸಹಜವಾಗಿ ಅದನ್ನು ಸ್ವೀಕರಿಸುವ ಮನಸ್ಥಿತಿ ತಮಗೂ ಇರುತ್ತದೆಯೇ ಎಂದು ಕೇಳಬೇಕೆನ್ನಿಸುತ್ತದೆ… ಅಲ್ಲವೇ?

ಫೋಟೋ ಕೃಪೆ : google

ಭಾರತದ ಮಹಿಳಾ ಕ್ರಿಕೆಟ್ ತಂಡದಲ್ಲಿ ಅತ್ಯಂತ ಪ್ರಮುಖ ಸ್ಥಾನದಲ್ಲಿರುವ ಸ್ಮೃತಿ ಮಂದಾನ ಅವರ ಆಟದ ವೈಖರಿಯನ್ನು ಒಮ್ಮೆಯಾದರೂ ಬಾಯಿ ತುಂಬ ಹೊಗಳದ, ಟೀಕೆ ಟಿಪ್ಪಣಿಗಳನ್ನು ಮಾಡದ ಎಲ್ಲ ಬಗೆಯ ದೃಶ್ಯ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳೆಂಬ ವಿಶ್ವವಿದ್ಯಾಲಯಗಳು ಮಹಿಳಾ ಕ್ರಿಕೆಟ್ ನ ವಿಶ್ವಕಪ್ ಎತ್ತಿ ಹಿಡಿದ ತಂಡದ ಪ್ರಮುಖ ಆಟಗಾರ್ತಿ ಸ್ಮೃತಿ ಮಂದಾನ ಅವರ ಬದುಕನ್ನು ಮಾತ್ರ ಹತ್ತಿಯ ಅರಳಿಯಂತೆ ಹಿಂಜಿ ಹಿಂಜಿ ಸುದ್ದಿಯನ್ನು ಹಂಚುವ ತಮ್ಮ ತೆವಲಿಗೆ ಬಲಿ ಕೊಟ್ಟರು.

ಸ್ಮೃತಿ ಮಂದಾನ ಹಾಗೂ ಆಕೆಗೆ ನಿಶ್ಚಿತನಾಗಿದ್ದ ವರ ಪತ್ರಿಕಾ ಹೇಳಿಕೆಯನ್ನು ನೀಡಿ ತಮ್ಮ ಮದುವೆ ರದ್ದಾದದ್ದು ಒಂದು ಅತ್ಯಂತ ವೈಯುಕ್ತಿಕ ನಿರ್ಧಾರವಾಗಿದ್ದು ತಮ್ಮ ಎರಡು ಕುಟುಂಬಗಳ ಒಪ್ಪಿಗೆಯ ಮೇರೆಗೆ ಈ ನಿರ್ಧಾರವನ್ನು ಕೈಗೊಂಡಿದ್ದು, ವೈಯಕ್ತಿಕತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಾಧ್ಯಮದವರು ಇದನ್ನು ವೈಭವೀಕರಿಸುವ ಅಗತ್ಯ ಇರಲಿಲ್ಲ ಎಂದು ಹೇಳಿಕೆಯನ್ನು ಬಿಡುಗಡೆ ಮಾಡುವಷ್ಟರಮಟ್ಟಿಗಿನ ಲಜ್ಜೆಗೇಡಿತನ ಅವರದಾಗಿತ್ತು.

ಮಹಾರಾಷ್ಟ್ರದ ಅತ್ಯಂತ ಪುಟ್ಟ ಜಿಲ್ಲೆ ಸಾಂಗ್ಲಿಯ ಸ್ಮೃತಿ ಮಂದಾನ ಇದುವರೆಗೆ ತನ್ನ ವೃತ್ತಿ ಜೀವನದಲ್ಲಿ ಸಾಧಿಸಿದ ಸಾಧನೆಗಳಿಗಿಂತ ಹೆಚ್ಚು ಆಕೆಯ ವೈಯುಕ್ತಿಕ ಜೀವನದ ಘಟನೆ ಸುದ್ದಿ ಮಾಡಿ ಸಾರ್ವಜನಿಕರ ಗಮನವನ್ನು ಸೆಳೆದಿದೆ.

ಸಾಮಾಜಿಕ ಜಾಲತಾಣಗಳು ತಮ್ಮ ಪರಿಮಿತಿಯನ್ನು ಮೀರಿ ಈ ರೀತಿ ವರ್ತಿಸುತ್ತಿರುವುದು ಇದೇ ಮೊದಲ ಬಾರಿ ಏನಲ್ಲ. ಡಿಸೆಂಬರ್ 7ರಂದು ಸ್ಮೃತಿ ಮಂದಾನ ಹಾಗೂ ಪಲಾಶ್ ಮುಚ್ಚಳ್ ಎರಡು ಬೇರೆ ಬೇರೆ ಸಮಯದಲ್ಲಿ ಪತ್ರಿಕಾ ಹೇಳಿಕೆಗಳನ್ನು ನೀಡಿ ತಮ್ಮ ವೈಯಕ್ತಿಕತೆಯನ್ನು ಗೌರವಿಸಿ ಎಂದು ಕೇಳಿಕೊಳ್ಳುವಷ್ಟರ ಮಟ್ಟಿಗೆ ಇವರ ವರ್ತನೆ ಮೀರಿ ಹೋಗಿತ್ತು ಎಂಬುದು ಬೇಸರದ ಸಂಗತಿ.

ಅದೆಷ್ಟೇ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯೋರ್ವ ತನ್ನ ಬದುಕಿನ ಅತಿ ದೊಡ್ಡ ಸಂಭ್ರಮವು ಅತ್ಯಂತ ವೈಯುಕ್ತಿಕ ದುರ್ಘಟನೆಯಾಗಿ ದಾಖಲಾದಾಗ ಅದೆಷ್ಟು ನೋವು ಅವಮಾನಗಳನ್ನು ಅನುಭವಿಸುತ್ತಾರೆ ಎಂಬುದರ ಅರಿವನ್ನು ಹೊಂದದೆ ಇರುವಷ್ಟು ನಮ್ಮ ಮಾನವೀಯ ಪ್ರಜ್ಞೆ ಕುಸಿದು ಹೋಗಿದೆಯೇ? ಇನ್ನು ಮುಂದಾದರೂ ನಮಗೆ ನಾವು ಪ್ರಾಮಾಣಿಕವಾಗಿರೋಣ. ತನ್ನ ವೃತ್ತಿ ಜೀವನದ ಯಶಸ್ಸಿನ ಉತ್ತುಂಗದ ಸಮಯವನ್ನು ಮತ್ತಷ್ಟು ಸಂತಸಕರವಾಗಿಸಿಕೊಳ್ಳುವ ನಿಟ್ಟಿನಲ್ಲಿ ಶೃತಿ ಮದುವೆಯ ತಯಾರಿ ನಡೆದಿದ್ದು ವೃತ್ತಿ ಜೀವನದ ಯಶಸ್ಸು ಆಕೆಯ ವೈಯಕ್ತಿಕ ಜೀವನವನ್ನು ಕಳೆದುಕೊಳ್ಳುವಷ್ಟರ ಮಟ್ಟಿಗೆ ಬೆಲೆ ತರಬೇಕಾಯಿತು.

ಫೋಟೋ ಕೃಪೆ : google

ಈ ದೇಶ ಕಂಡ ಅತ್ಯಂತ ಪ್ರತಿಭಾನ್ವಿತ ಕ್ರಿಕೆಟಿಗರಲ್ಲಿ ಒಬ್ಬರಾದ ಸ್ಮೃತಿ ಮಂದಾನ ಮೈದಾನದಲ್ಲಿ ಏನು ಮಾಡುತ್ತಾರೆ ಎಂಬುದನ್ನು ಮಾತ್ರ ನಾವು ಗಮನಿಸೋಣ, ಆಕೆಯ ಆಟದ ದಾಖಲೆಗಳತ್ತ ನಮ್ಮ ಗಮನ ಇರಲಿ ವಿಶ್ವಕಪ್ ನ ಸಂಭ್ರಮ ಆಕೆಯ ಬದುಕಿನಲ್ಲಿ ತಂದ ಬದಲಾವಣೆಗಳ ಕುರಿತು ನಮ್ಮ ಆಸಕ್ತಿ ಇರಲಿ. ಮುಂದಿನ ದಿನಮಾನಗಳಲ್ಲಿ ಆಕೆಯ ಕ್ರೀಡಾ ಚಟುವಟಿಕೆ ಯಾವ ರೀತಿಯ ತಿರುಗಳನ್ನು ತೆಗೆದುಕೊಳ್ಳುತ್ತದೆ ಎಂಬುದರ ಕುರಿತು ನಮ್ಮ ನಿರೀಕ್ಷೆಗಳಿರಲಿ ಹೊರತು ಆಕೆಯ ವೈಯುಕ್ತಿಕ ಬದುಕಿನ ಏರಿಳಿತಗಳ ಕುರಿತಲ್ಲ.

ಆಕೆಯು ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯಳು. ತನ್ನ ಸಾಧನೆ ಮತ್ತು ಪ್ರಯತ್ನಗಳ ಮೂಲಕ ಜಾಗತಿಕ ಸ್ಥಾನಮಾನವನ್ನು ಗಳಿಸಿಕೊಂಡಿದ್ದರು ಆಕೆ ಕೂಡ ಮಾನವೀಯ ಭಾವನೆಗಳನ್ನು ಒಳಗೊಂಡ ಹೆಣ್ಣುಮಗಳು ಎಂಬುದನ್ನು ಮರೆಯದೆ ಇರೋಣ.

ಇಂತಹ ವಿಷಯಗಳನ್ನು ಆಕೆಯ ವೈಯಕ್ತಿಕ ಬದುಕು ಎಂದು ಕೈಬಿಟ್ಟರೆ ನೀವು ಹಳೆಯ ಕಾಲದವರು ಎಂದು ನಿಮ್ಮನ್ನು ಮೂದಲಿಸಬಹುದು ಇಂತಹ ವಿಷಯಗಳನ್ನು ಕುರಿತು ಅತಿಯಾಗಿ ಚರ್ಚಿಸದೆ ಹೋದರೆ ನೀವು ಇಂದಿನ ಯುವ ಜನತೆ ಹೇಳುವ ರೀತಿಯ ಕೂಲ್ ಅಲ್ಲದೆ ಹೋಗಬಹುದು ನೀವು ಸಾಮಾಜಿಕ ಜಾಲತಾಣದ ಮೂರ್ಖರು ಎನಿಸಿಕೊಳ್ಳಬಹುದು.

ತನ್ನ ವೈಯಕ್ತಿಕ ಸಾಧನೆಯ ಮೂಲಕ ಅತಿ ದೊಡ್ಡ ಎತ್ತರವನ್ನು ಕ್ರಮಿಸಿದ ಸ್ಮೃತಿ ಮಂದಾನ ರಸ್ತೆ ಬದಿಯ ಕೀಳು ಅಭಿರುಚಿಯ ಮಾತುಕತೆಗಳಿಂದ ಕುಸಿದು ಹೋಗದೆ ಇರುವಂತೆ ಆಕೆಯ ವ್ಯಕ್ತಿತ್ವದ ಘನತೆಯನ್ನು ಉಳಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಕೈಯಲ್ಲಿ ಚಾಕು ಇದ್ದರೆ ಹಣ್ಣು ಮತ್ತು ತರಕಾರಿಗಳನ್ನು ಸುಂದರವಾಗಿ ಕೆತ್ತಿ ಪ್ರದರ್ಶನಕ್ಕೂ ಇಡಬಹುದು ಒಬ್ಬರನ್ನೂ ಚುಚ್ಚಿ ಗಾಯಗೊಳಿಸಲೂಬಹುದು. ಅಂತೆಯೇ ಸಾಮಾಜಿಕ ಜಾಲತಾಣಗಳು ಹಾಗೂ ದೃಶ್ಯ ಮಾಧ್ಯಮಗಳು ಇರುವುದು ವ್ಯಕ್ತಿತ್ವದ ಘನತೆಯನ್ನು ಎತ್ತಿ ಹಿಡಿಯಲೇ ಹೊರತು ಕೀಳು ಅಭಿರುಚಿಯನ್ನು ತೋರಿಸಲು ಅಲ್ಲ ಎಂಬುದನ್ನು ಮರೆಯದೆ ಇರೋಣ. ಏನಂತೀರಾ ಸ್ನೇಹಿತರೆ ?.


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW