ಪ್ರತಿಬಾರಿಯೂ ಕಾಡುವ ಬಾಲ್ಯದ ದೀಪಾವಳಿ

ನಾಲ್ಕು ಸಣ್ಣ ಪಟಾಕಿ ಸರ, ಎರಡು ಲಕ್ಷ್ಮಿ ಪಟಾಕಿ ಪ್ಯಾಕೆಟ್, ಒಂದು ಆನೆ ಪಟಾಕಿ ಪ್ಯಾಕೆಟ್, ನಾಲ್ಕು ನೆಲಚಕ್ರ, ನಾಲ್ಕು ವಿಷ್ಣುಚಕ್ರ, ಐದು ಹೂಕುಂಡ, ಕೆಂಪು ಮತ್ತು ಹಸಿರು ಕಲರ್ ಬರುವ ಮತಾಪು, ಎರಡು ಪ್ಯಾಕೆಟ್ ಸುರ್ ಸುರ್ ಬತ್ತಿ. ಈಗ ಗೊತ್ತಾಯಿತ ದೀಪಾವಳಿ ಯಾಕೆ ಗಮ್ಮತ್ತು ಎಂದು?  ಲೇಖಕ ಎನ್.ವಿ.ರಘುರಾಮ್ ಅವರ ನೆನಪಿನಂಗಳದಲ್ಲಿ ದೀಪಾವಳಿ ಸಂಭ್ರಮ ಹೇಗಿತ್ತು. ತಪ್ಪದೆ ಮುಂದೆ ಓದಿ…

ರಂಗಪ್ಪ ಡ್ರೈವರ್ ಕಾರನ್ನು ಹಳ್ಳಿಮನೆ ಮುಂದೆ ನಿಲ್ಲಿಸಿದಾಗ ಆಗಲೇ ಸಾಯಂಕಾಲ ಆರು ಗಂಟೆ ಆಗಿರುತ್ತಿತ್ತು. ಹಳ್ಳಿ ಯಾರಿಗೆ ಇಷ್ಟ ಆಗಲ್ಲ ಹೇಳಿ? ಪ್ರಶಾಂತವಾದ ವಾತಾವರಣ. ವಿಶಾಲವಾದ ಅಂಗಳ, ಆಟ ಆಡಲು ಮನೆ ತುಂಬ ಮಕ್ಕಳು, ತಿನ್ನಲು ರುಚಿ ರುಚಿಯಾದ ತಿಂಡಿಗಳು. ಇದೆಲ್ಲದರ ಜೊತೆಗೆ ದೀಪಾವಳಿ!

ನಮಗೆಲ್ಲ ಅತ್ಯಂತ ಕಾತರದ ಕ್ಷಣ ಎಂದರೆ ಮಾವ ಬೆಂಗಳೂರಿನ ಜನತಾ ಬಜಾರ್ ನಿಂದ ತಂದ ಪಟಾಕಿಯನ್ನು ಎಲ್ಲರಿಗೂ ಪಾಲು ಹಾಕಿಕೊಡುವುದು! ಈ ಸಾರಿ ತಂದಿರುವುದು ಐವತ್ತು ರೂಪಾಯಿ ಪಟಾಕಿಯಂತೆ! ಮಾವ ಅವರೇ ಒಂದು ದೊಡ್ಡ ರಟ್ಟಿನ ಪೆಟ್ಟಿಗೆ ತೆಗೆದುಕೊಂಡು ನೆಲದ ಮೇಲೆ ಕೂತರೆ ನಾವೆಲ್ಲ ಅವರ ಸುತ್ತ. ಒಟ್ಟು ಹದಿನಾಲ್ಕು ಪಾಲು ಆಗಬೇಕು! ಒಂದೊಂದೇ ತರಹದ ಪಟಾಕಿಯನ್ನು ಡಬ್ಬಿಯಿಂದ ಹೊರ ತೆಗೆದು ಸುತ್ತಲೂ ಹರಡಿರುವ 14 ಕಾಗದದ ಮೇಲೆ ಇಸ್ಪೀಟ್ ಎಲೆಯಂತೆ ಹಂಚುವ ಪ್ರಕ್ರಿಯೆ ಪ್ರಾರಂಭ. ಮೊದಲಿಗೆ ರೋಲ್ ಕೇಪ್! ಎಲ್ಲರಿಗೂ ಹನ್ನೆರಡು ಡಬ್ಬಿಗಳಿರುವ ಒಂದು ರೋಲ್. ನಂತರ ನಾಲ್ಕು ಸಣ್ಣ ಪಟಾಕಿ ಸರ, ಎರಡು ಲಕ್ಷ್ಮಿ ಪಟಾಕಿ ಪ್ಯಾಕೆಟ್, ಒಂದು ಆನೆ ಪಟಾಕಿ ಪ್ಯಾಕೆಟ್, ನಾಲ್ಕು ನೆಲಚಕ್ರ, ನಾಲ್ಕು ವಿಷ್ಣುಚಕ್ರ, ಐದು ಹೂಕುಂಡ, ಕೆಂಪು ಮತ್ತು ಹಸಿರು ಕಲರ್ ಬರುವ ಮತಾಪು, ಎರಡು ಪ್ಯಾಕೆಟ್ ಸುರ್ ಸುರ್ ಬತ್ತಿ. ಈಗ ಗೊತ್ತಾಯಿತ ದೀಪಾವಳಿ ಯಾಕೆ ಗಮ್ಮತ್ತು ಎಂದು?

ಆ ಕಡೆ ಗಂಗೆ ಪೂಜೆಗೆ ತಯಾರಿ ನಡೆದಿರುತ್ತಿತ್ತು. ಶೇಷ ಬಂದು ಬಾವಿಗೆ ಮಾವಿನ ಸೊಪ್ಪಿನ ತೋರಣ ಕಟ್ಟುತ್ತಿದ್ದ. ಮನೆಯವರೆಲ್ಲ ಬಾವಿಗೆ ಅರಿಸಿನ, ಕುಂಕುಮ ಏರಿಸಿ, ಒಂದು ಕೊಡ ನೀರು ಸೇದಿ, ಆ ನೀರನ್ನು ಸ್ನಾನದ ಮನೆಯಲ್ಲಿ ಇರುವ ಹಂಡೆಗೆ ಸುರಿದು ಅದಕ್ಕೆ ಪೂಜೆ. ಕಹಿ ಹಿಂಡ್ಲ ಸೌತೆಕಾಯಿ ಬಳ್ಳಿ ಆ ತಾಮ್ರದ ಹಂಡೆಗೆ ಸುತ್ತಿರುತ್ತಿದ್ದರು. ಅದಕ್ಕೆ ಅರಸಿನ, ಕುಂಕುಮ, ಮಂಗಳಾರತಿ. ಕೆಲಸದ ಶೇಷ ತೋಟದ ಒಂದು ಬ್ಯಾರಲ್ 0.303 ಕೋವಿಯಿಂದ ಅಂಗಳದಲ್ಲಿ ನಿಂತು ಆಕಾಶಕ್ಕೆ ಒಂದು ಗುಂಡು “ಢಮಾರ್” ಎಂದು ಹೊಡೆಯುತ್ತಿದ್ದ. ಆಗ ದೀಪಾವಳಿ ಪ್ರಾರಂಭ ಆಯಿತು ಎಂದು ಈಡೀ ಹಳ್ಳಿಗೆ ತಿಳಿಯುತ್ತಿತ್ತು.

ಫೋಟೋ ಕೃಪೆ : ಅಂತರ್ಜಾಲ

ಈಗ ಪಾಲಿಗೆ ಬಂದಿರುವ ಪಟಾಕಿಯನ್ನು ಹೊಡೆಯುವ ಆತುರ ಜೊತೆಗೆ ಮೂರು ದಿನಕ್ಕೂ ಇಟ್ಟುಕೊಳ್ಳುವ ಲೆಕ್ಕಚಾರ ಬೇರೆ. ನಾಳೆ ನರಕ ಚತುರ್ದಶಿ. ನರಕಾಸುರ ಭೂಮಿಗೆ ವರ್ಷಕ್ಕೆ ಒಂದು ದಿನ ಭೇಟಿ ಕೊಡುವ ದಿನ ಅಂತೆ. ಮಾರನೆಯ ದಿನ ಲಕ್ಷ್ಮಿ ಪೂಜೆ. ಮೂರನೇಯ ದಿನ ಬಲೀಂದ್ರ ಪೂಜೆ. ಅಂತು ಎರಡು ರೋಲ್ ಕೇಪ್, ಒಂದು ಸಣ್ಣ ಪಟಾಕಿ ಸರಕ್ಕೆ ಕಷ್ಟಪಟ್ಟು ಪಟಾಕಿ ಹೊಡೆಯುವುದು ನಿಲ್ಲಿಸಿ ಪಗಡೆ ಆಟಕ್ಕೆ ಹೊರಡುತ್ತಿದ್ದವು.

ಊಟ ಮಾಡುವಾಗಲೂ “ಬೆಳಗ್ಗೆ ಬೇಗ ಏಳಬೇಕು” ಎಂದು ಅತ್ತೆ ಜ್ಞಾಪಕ ಮಾಡುತ್ತಿದ್ದರು. ಶೇಷ ಅಪ್ಪನ ಪಾದಗಳಿಗೆ ತೈಲ ಹಚ್ಚುತ್ತಿದ್ದ.

ಹಾಲಿನಲ್ಲಿ ಉದ್ದಗಲಕ್ಕೆ ಹಾಸಿದ ಜಮಖಾನ, ಆ ಕಡೆಯಿಂದ ಈ ಕಡೆಯವರೆಗೆ ಜೋಡಿಸಿದ ದಿಂಬು. ಎಲ್ಲರಿಗೂ ಒಂದೊಂದು ಬೆಡ್ ಷೀಟ್, ಕಂಬಳಿ. ಪಟಾಕಿಯ ಸುತ್ತ ಮಾತನಾಡುತ್ತಾ ನಿದ್ದೆಗೆ ಒಬ್ಬೊಬ್ಬರೇ ಜಾರುತ್ತಿದ್ದೆವು.

ಸ್ವಲ್ಪ ಹೊತ್ತಿನಲ್ಲೇ ಎಲ್ಲೋ ಅಲರಾಮ್ ಗಂಟೆ ಹೊಡೆದ ಶಬ್ದ ಕೇಳಿಸುತ್ತಿತ್ತು. ಸ್ವಲ್ಪ ಕಣ್ಣು ಬಿಟ್ಟು ನೋಡಿದರೆ ಇನ್ನೂ ಕತ್ತಲೆಯೇ. ಇನ್ನೊಂದು ಚೂರು ಎಂದು ಕೊಂಡು ಕಂಬಳಿಯನ್ನು ಮುಸುಕು ಎಳೆದುಕೊಂಡು ತಿರುಗಿ ಮಲಗುವ ಹೊತ್ತಿಗೆ ದಿಂಬಿನ ಕೆಳಗಡೆಯಿಂದ ತಲೆಯನ್ನು ನಿಧಾನವಾಗಿ ಮೇಲಿತ್ತಿದ ಹಾಗೆ ಆಗುತ್ತಿತ್ತು. ಅಪ್ಪ ನಿಂತುಕೊಂಡೇ ನಿಧಾನವಾಗಿ ಪಾದವನ್ನು ದಿಂಬಿನ ಕೆಳಗೆ ತೂರಿಸಿ, ದಿಂಬನ್ನು ಪಾದದಿಂದ ಎತ್ತುತ್ತಿದ್ದರು. ಇದು ಅಪ್ಪ ಮಕ್ಕಳನ್ನು ಎಬ್ಬಿಸಿಲು ಮಾಡುತ್ತಿದ್ದ ನೂತನ ವಿಧಾನ!

ಆತ್ತೆ ಯಾವಾಗ ಮಲಗಿದರು?ಯಾವಾಗ ಎದ್ದರು? ಯಾರಿಗೂ ಗೊತ್ತಿಲ್ಲ. ಆಗಲೇ ಇಡ್ಲಿ ಕೊಳದಪ್ಪಲೆ ಒಲೆಯ ಮೇಲೆ ಇಡಲು ತಯಾರಿ ನಡೆಸಿರುತ್ತಿದ್ದರು!

ಶೇಷ ಆಗಲೇ ಎಣ್ಣೆ ಬಟ್ಟಲು ಹಿಡಿದು ನಿಂತಿರುತ್ತಿದ್ದ. ಅಪ್ಪ ಅಂಗಳದಲ್ಲಿ ಕೂತುಕೊಂಡಾಗ ಶೇಷ ಭೃಂಗಾಮಲಕ ತೈಲವನ್ನು ಅಪ್ಪನ ತಲೆಗೆ ಹಚ್ಚಲು ಪ್ರಾರಂಭ ಮಾಡುತ್ತಿದ್ದ. ತಲೆಗೆ ಎಣ್ಣೆ ಹಚ್ಚಿದ ಎಂದು ಹೇಳಿದರೆ ಅದು ಸುಳ್ಳು! ಅವನು ಅದನ್ನು ತಲೆಗೆ ಹಾಕಿ ಚೆನ್ನಾಗಿ ತಟ ತಟ ಎಂದು ತಟ್ಟುತ್ತಿದ್ದ!

ಈ ಕಡೆ ಎಲ್ಲರಿಗೂ ಎಣ್ಣೆ ಮೆತ್ತುವ ಸಂಭ್ರಮ. ಕೆಲವರಿಗೆ ಹರಳೆಣ್ಣೆ! ಕೆಲವರಿಗೆ ಕೊಬ್ಬರಿ ಎಣ್ಣೆ. ತಲೆಯೊಂದೇ ಅಲ್ಲ, ಮೈ, ಕೈ, ಕಾಲು ಎಲ್ಲಾ. ತಲೆಯಿಂದ ಎಣ್ಣೆ ಹಣೆಯ ಮೇಲೆ ಇಳಿಯುತ್ತಿತ್ತು. ಇಬ್ಬರು, ಮೂವರು ಮಕ್ಕಳಿಗೆ ಬಚ್ಚಲು ಮನೆಯಲ್ಲಿ ಒಟ್ಟಿಗೆ ಕೂರಿಸಿ ಬಿಸಿ, ಬಸಿ ನೀರು ಸುರಿಯುತ್ತಿದ್ದರು. ಸೀಗೇಕಾಯಿ ಪುಡಿ ಹಾಕಿ ತಿಕ್ಕದ್ದಿದ್ದರೆ ಆಪಾಟಿ ಎಣ್ಣೆ ಹೋಗುತ್ತದೆಯೇ? ಅದು ಕಣ್ಣಿಗೆ ಹಾರಿದಾಗ ಕಣ್ಣುರಿ ಆಗದೇ ಇರುತ್ತದೆಯೇ? ಆ ಕಡೆ ಸೌದೆ, ಅಡಿಕೆ ಕೊನೆ, ಅಡಿಕೆಸಿಪ್ಪೆ ಒಲೆಗೆ ತುಂಬಿಸುತ್ತಲೇ ಇರುತ್ತಿದ್ದರು. ನೀರು ಕಾಯುತ್ತಲೇ ಇರುತ್ತಿತ್ತು. ಈ ಕಡೆ ತಲೆ ಸ್ನಾನ ನಡೆಯುತ್ತಲೇ ಇರುತ್ತಿತ್ತು. ಅಪ್ಪನಿಗೆ ಶೇಷ ನೀರೆತ್ತಿ ಸುರಿಯುತ್ತಿದ್ದ. ಅಪ್ಪ ಸ್ನಾನ ಆದ ತಕ್ಷಣ ರೂಮಿನಲ್ಲಿ ಕಂಬಳಿ ಹೊದ್ದು ಎರಡು ನಿಮಿಷ ಮಲಗಿ ಎದ್ದರೆ ಮೈ ಎಲ್ಲಾ ಬೆವರಿರುತ್ತಿತ್ತು!

ದೇವರಕೋಣೆಯಲ್ಲಿ ಬೆಳಗಿನಿಂದಲೇ ಪೂಜೆ ನಡೆದಿರುತ್ತಿತ್ತು. ಯಾವಾಗಲೂ ಕುಲ ಪುರೋಹಿತರಾದ ಗುರುಭಟ್ಟರಿಂದ ಪೂಜೆ. ಹಿಂದಿನ ದಿನ ರಾತ್ರಿಯೇ ಅವರು ಬಂದು ಮನೆಯಲ್ಲಿ ಉಳಿದಿರುತ್ತಿದ್ದರು. ನಮ್ಮ ಮನೆಯ ಎಲ್ಲಾ ಪೂಜೆ ಮಾಡುವುದು ಅವರೇ. ಅಪ್ಪ ಮುಗುಟ ಉಟ್ಟು ಬಂದ ಮೇಲೆ ಮಂಗಳಾರತಿ.

ಫೋಟೋ ಕೃಪೆ : ಅಂತರ್ಜಾಲ

ಹೊಸಬಟ್ಟೆ ಧರಿಸಿ ಮಕ್ಕಳೆಲ್ಲ ಅಂಗಳಕ್ಕೆ ಓಟ. ಟನ್, ಟನ್ ಎಂದು ಹೊಡೆಯುವ ಗೋಡೆ ಗಡಿಯಾರ ಬೆಳಗ್ಗೆ ಐದು ಮೂವತ್ತು ಎಂದು ತೋರಿಸುತ್ತಿತ್ತು. ಶೇಷ ಬಂದು ಅಂಗಳದಲ್ಲಿ ನಿಲ್ಲುತ್ತಿದ್ದ. ಅವನ ಕೈಯಲ್ಲಿ ಒಂದು ಪೈಪಿನ ಗನ್ ಇರುತ್ತಿತ್ತು. ಒಂದು ನಾಲ್ಕು ಅಡಿ ಉದ್ದದ ನೀರಿನ ಪೈಪಿಗೆ ಕೆಳಗಡೆ ಬಟ್ಟಲು ಆಕಾರ ಇರುತ್ತದೆ. ಅಲ್ಲಿ ಗಂಧಕದ ಪುಡಿಯನ್ನು ಪೊಟ್ಟಣ ಕಟ್ಟಿ ಇಟ್ಟು, ಮೇಲಿನಿಂದ ಕಬ್ಬಿಣದ ಸರಳಿನಿಂದ ಜೋರಾಗಿ ಹೊಡೆದರೆ ನಿಜವಾದ ಗನ್ ಹೊಡೆದ ಶಬ್ದ ಬರುತ್ತೆ. ಗದ್ದೆಗೆ ಹಂದಿ ನುಗ್ಗಿದಾಗ ಇದನ್ನು ಹೊಡೆಯುತ್ತಾರೆ ಎಂದು ಶೇಷ ಹೇಳುತ್ತಿದ್ದ. ನಾವು ಹೊಡೆದರೆ ಠುಸ್ ಎನ್ನುತ್ತಿದ್ದ ಪೈಪ್ ಗನ್ ಶೇಷ ಹೊಡೆದರೆ ಮಾತ್ರ “ಢಂ” ಎನ್ನುತ್ತದೆ! ಶೇಷ ಗನ್ ಹೊಡೆದ ಮೇಲೆ ನಾವು ಸುರ್ ಸುರು ಬತ್ತಿ ಹಚ್ಚಿದರೆ ದೀಪಾವಳಿಯ ಸಂಭ್ರಮಕ್ಕೆ ನಾಂದಿ ಹಾಡಿದ ಹಾಗೆ.

ಎದರುಗಡೆ ಸೂರ್ಯ ಇಬ್ಬಿನಿಯ ಮಧ್ಯ ಇಣುಕುತ್ತಿದ್ದ. ಹೊಂಗಿರಣ ಸೂಸುತ್ತಾ ಬೆಳಕು ಎಲ್ಲೆಡೆ ಹರಡುತ್ತಿದ್ದಾಗ ಅಪ್ಪ ಬಂದಿರುವ ವಿಷಯ ತಿಳಿದು ಕಣದ ಮಂಜ ಬರುತ್ತಿದ್ದ. ಯಾರ ಮನೆ ಎತ್ತಿಗೆ ಜ್ವರ ಬಂದರೂ ಇವನದ್ದೇ ಔಷದಿ. ಕಾಡಿನಲ್ಲಿ ಯಾವದೋ ಎಲೆಗಳನ್ನು ತಂದು, ಅರೆದು, ಸ್ವಲ್ಪ ಬೆಲ್ಲ ಸೇರಿಸಿ ಬಿದರಿನಲ್ಲಿ ಮಾಡಿದ ಗೊಟಾರದಲ್ಲಿ ಮೂಗುದಾರ ಹಿಡಿದು ಕುಡಿಸಿದರೆ, ಎಂಥಾ ಜ್ವರ ಇದ್ದರೂ ಎರಡು ಗಂಟೆಯೊಳಗೆ ಬಿಟ್ಟು ಹೋಗಿ ಎತ್ತು ಎದ್ದು ನಿಲ್ಲುತ್ತಿತ್ತು. ಮಂಜ ಅಪ್ಪನನ್ನು ನೋಡಲು ಬಂದಾಗ ಎಂಟ್ಹತ್ತು ಸೌತೆಕಾಯಿ ಹಿಡಿದುಕೊಂಡು ಬರುತ್ತಿದ್ದ! ದೊಡ್ಡವರನ್ನು ನೋಡಲು ಎನಾದ್ರೂ ತೆಗೆದುಕೊಂಡು ಹೋಗಬೇಕು ಎಂದು ಅಮ್ಮ ಹೇಳುತ್ತಿದ್ದ ಮಾತು ನೆನಪಾಗುತ್ತಿತ್ತು. ಮಂಜ ಅವರ ಮನೆಯಲ್ಲಿ ಬೆಳದಿದ್ದ ಸೌತೆಕಾಯಿ ಮತ್ತು ಒಂದು ಕಟ್ಟು ವೀಳೆದೆಲೆ ಕೊಟ್ಟು ಅಪ್ಪನಿಗೆ ನಮಸ್ಕರಿಸುತ್ತಿದ್ದ.

ಇದ್ದಕ್ಕಿದ್ದಂತೆ “ಢಂ” ಎಂಬ ಶಬ್ದದೊಂದಿಗೆ ಅಡಿಕೆ ಸಿಪ್ಪೆಗಳು ಅಲ್ಲಿ ಹಾರಿ ಅಂಗಳದ ತುಂಬ ಹಾರುತ್ತಿತ್ತು. ಒಂದು ವಾರ ಹಿಂದೆ ತಾನೆ ಅಡಿಕೆ ಸುಲ್ತ ಪ್ರಾರಂಭವಾಗಿರುತಿತ್ತು. ಅಂಗಳದಲ್ಲಿ ಅಡಿಕೆಸಿಪ್ಪೆಯ ರಾಶಿಯೇ ಇರುತ್ತಿತ್ತು. ಆ ಸಿಪ್ಪೆಯ ರಾಶಿಯ ಮಧ್ಯ ಆಟಂಬಾಂಬ್ ಇಟ್ಟು ಶೇಷನ ಸಣ್ಣ ಮಗ ಆಬು ಆಟಂಬಾಂಬ್ ಹೊಡೆಯುತ್ತಿದ್ದ. ಅದರ ಪ್ರಭಾವ ಅಂಗಳದ ತುಂಬ ಅಡಿಕೆ ಸಿಪ್ಪೆ!

ಬೆಳಗ್ಗೆ ತಟ್ಟೆ ಇಡ್ಲಿ ಮತ್ತು ಚಟ್ನಿ, ಮಧ್ಯಾಹ್ನಕ್ಕೆ ಎರಡು ಕೋಸಂಬರಿ, ಎರಡು ಪಲ್ಯ, ಬಿಸಿಬೇಳೆಬಾತ್, ಹೋಳಿಗೆ, ಕಜ್ಜಾಯ, ಸಾಯಂಕಾಲಕ್ಕೆ ಬೋಂಡ, ಎಲ್ಲಾ ಒಂದಕ್ಕಿಂತ ಇನ್ನೊಂದು. ಮಧ್ಯ ಚೌಕಾಬಾರ, ಚನ್ನಮಣೆ, ಕೇರಂ ಆಟ. ಇದರ ಜೊತೆಗೆ ಅಡಿಕೆ ಚಪ್ಪರದ ಮಧ್ಯ ಕಟ್ಟಿದ್ದ ಉಯ್ಯಾಲೆಯನ್ನು ಜೊರಾಗಿ ಜೀಕಿ ಅದರ ತುದಿಯನ್ನು ಚಪ್ಪರಕ್ಕೆ ಮುಟ್ಟಿಸುವ ಪ್ರಯತ್ನ. ಬಿದ್ದಾಗ ಏನೂ ಆಗಿಲ್ಲ ಎಂಬ ಸೋಗು ಬೇರೆ!

ಸೆಗಣಿಯಲ್ಲಿ ಮಾಡಿದ ಎರಕಪ್ಪ. ಅದರ ಮೇಲೆ ಚೆಂಡು ಹೂವು. ಮುಂದುಗಡೆ ಬಾಗಿಲು ತೆಗೆದು, ಹೊಸ್ತಿಲಿನಲ್ಲಿ ಇಟ್ಟು ಪೂಜೆ ಮಾಡುತ್ತಿದ್ದರು. ಅದರ ಎದುರುಗಡೆ ಎರಡು ಮೀನಾಕ್ಷಿ ಬೆಳ್ಳಿ ದೀಪ ಇಟ್ಟು ಬೆಳಗಿಸಿದರೆ ಸಂಜೆ ಪಟಾಕಿ ಹೊಡೆಯಲು ನಮಗೆಲ್ಲ ‘ಪರ್ಮಿಸನ್’ ಸಿಕ್ಕ ಹಾಗೆ.

ಒಂದು ವಾರದ ಮೊದಲೇ ಆಕಾಶ ಬುಟ್ಟಿ ತಯಾರು ಮಾಡುವ ಕೆಲಸ ಪ್ರಾರಂಭವಾಗಿರುತ್ತಿತ್ತು. ಅಟ್ಟದಲ್ಲಿ ಇಟ್ಟಿದ್ದ ಹೋದ ವರ್ಷದ ಬಿದಿರಿನ ಕಡ್ಡಿಗಳು ಕೆಲವೊಂದು ಹಾಳಾಗಿರುತ್ತಿತ್ತು. ಮಳೆಗಾಲದಲ್ಲಿ ಒರಲು ಹಿಡಿಯದಿದ್ದರೆ ಅದೇ ಪುಣ್ಯ. ಅದನ್ನು ಸರಿ ಪಡಿಸಿ ಹೊಸ ಬಣ್ಣದ ಪೇಪರ್ ಹಚ್ಚಿ ಇಟ್ಟಿದ್ದರೆ, ಅಣ್ಣ ಬಂದು ಅದಕ್ಕೊಂದು ಜೀರೋ ಕ್ಯಾಡೆಂಲ್ ಬಲ್ಬ್ ಹಾಕಿ ಸರಿಯಾಗಿ ಕೂತಿದೆಯಾ ನೋಡಿ ಮಹಡಿಯ ಮೇಲೆ ಮರದ ತೊಲೆಗೆ ಕಟ್ಟುತ್ತಿದ್ದರು.

ಮನೆಯ ಸುತ್ತ ಕಾಂಪೌಂಡ್ ಮೇಲೆ ಹಣತೆ ಇಟ್ಟು ಬತ್ತಿ ಮತ್ತು ಎಣ್ಣೆ ಹಾಕಿ ದೀಪ ಹಚ್ಚುತ್ತಿದ್ದರು. ಮಣ್ಣಿನ ಹಣತೆ ಕಡಿಮೆ. ಸರಿಯಾಗಿ ಅರ್ಧ ಭಾಗ ಆಗಿರುವ ಅಡಿಕೆ ಸಿಪ್ಪೆ ಹುಡುಕಿ ತೆಗೆದು ಕಾಂಪೌಂಡ್ ಮೇಲೆ ಇಡುತ್ತಿದ್ದರು. ಆ ಅಡಿಕೆ ಸಿಪ್ಪೆಗೆ ಒಂದು ಚೂರು ಸೆಗಣಿಯ ಸಿಂಹಾಸನ. ಈ ರೀತಿಯ ಹಣತೆ ಉಪಯೋಗಿಸಿರುವುದೇ ಜಾಸ್ತಿ. ಎಲ್ಲಾ ಕಿಟಕಿಗಳಲ್ಲಿ ಹಣತೆ ಹಚ್ಚಿ ಅಂಚಿನ ಮೇಲೆ ಇಡುತ್ತಿತ್ತು. ಇಡೀ ಮನೆಯೇ ಪ್ರಕಾಶ ಮಾನವಾಗುತ್ತಿತ್ತು.

ಒಬ್ಬೊಬ್ಬರು ಒಂದೊಂದು ಪಟಾಕಿ ಹೊಡೆಯುತ್ತಿದ್ದರು. ಕಲ್ಲಿನ ಕಾಂಪೌಂಡ್ ಮೇಲೆ ಒಂದು ಕಡೆ ಹೂಕುಂಡ ಹತ್ತಿಸಿದರೆ, ಆಕಡೆ ವಿಷ್ಣು ಚಕ್ರ. ಅದಿನ್ನು ಮಗಿದಿಲ್ಲ ಆಗಲೇ ಈ ಕಡೆ ಹನುಮಂತನ ಬಾಲ ಹಚ್ಚಿ ಅದನ್ನು ತಿರುಗಿಸಿ ವೃತ್ತಾಕಾರ ಮಾಡುವ ಪ್ರಯತ್ನ! ಐದು ನಿಮಿಷ ಅಡಿಗೆ ಮನೆಗೆ ವಿಶ್ರಾಂತಿ ಇರಲಿ ಎಂದು ಹೇಳುತ್ತಾ ಆತ್ತೆಯನ್ನು ಹೊರಗೆ ಕರೆದುಕೊಂಡು ಬರುವ ಪ್ರಯತ್ನ ಅಕ್ಕ ಮಾಡುತ್ತಿದ್ದರು. ಮಧ್ಯದಲ್ಲಿ ಒಂದು ವಿಷ್ಣು ಚಕ್ರ ಪಟಾಕಿ ‘ಢಂ’ ಎಂದು ಎಲ್ಲರನ್ನೂ ಆಶ್ಚರ್ಯಗೊಳಿಸಿತ್ತು. ‘ಢಂ, ಢಂ, ಢಮಾರ್’ ಮುಂದುವರೆಯುತ್ತಿತ್ತು.

ರಾತ್ರಿ ಊಟದ ಮಧ್ಯ ‘ಠುಸ್’ ಎಂದ ಪಟಾಕಿಗಳ ಬಗ್ಗೆ ಚರ್ಚೆ. ನಾಳೆ ಲಕ್ಷ್ಮೀ ಪೂಜೆ. ಅಮ್ಮ ಪೂಜೆ ಮಾಡುವಾಗ ಹಾಡು ಹೇಳುತ್ತಾರೆ. ಅಕ್ಕಂದಿರು ಯಾವಾಗಲೂ “ಅಂಬಿಗ ನಾ ನಿನ್ನ ನಂಬಿದೆ…” ಹಾಡು ಹೇಳಿದರೆ ಅಮ್ಮ “ಭಾಗ್ಯದ ಲಕ್ಷ್ಮಿ” ಬಾರಮ್ಮ ಹಾಡು ಹೇಳುತ್ತಿದ್ದರು. ನಾನು ಲಕ್ಷ್ಮಿ ಪೂಜೆಯ ದಿವಸ ಹೊಡೆಯಲು “ಲಕ್ಷ್ಮೀ ಪಟಾಕಿ” ಇಟ್ಟುಕೊಂಡಿರುತ್ತಿದ್ದೆ! ಅಕ್ಕ ಜಾಸ್ತಿ ಹೊಡೆಯುತ್ತಿರಲಿಲ್ಲ. ಏನಾದರೂ ಗೋಗರೆದರೆ ಒಂದೆರಡು ಪಟಾಕಿ ಕೊಡುತ್ತಾಳೆ ಎಂದು ಲೆಕ್ಕ ಹಾಕುತ್ತಿದ್ದೆ! ಆದರೂ ಆ ಹಾವಿನ ಮಾತ್ರೆ ಯಾಕೆ ‘ಢಂ’ ಅನ್ನಲ್ಲ ಎಂದು ಯೋಚಿಸುತ್ತಾ  ನಿದ್ದೆಗೆ ಜಾರುತ್ತಿದ್ದೆ.

ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು…


  • ಎನ್.ವಿ.ರಘುರಾಮ್ – ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW