ಲೇಖನ : ಪ್ರಭುಸ್ವಾಮಿ (ಲೇಖಕರು, ಪತ್ರಕರ್ತರು)
ಸಿಲಿಕಾನ್ ಸಿಟಿ ಬೆಂಗಳೂರಿನ ವಾಹನ ದಟ್ಟಣೆಯಿಂದ ಮತ್ತು ಕೆಲಸದ ಒತ್ತಡದಿಂದ ದೂರ ಇದ್ದು, ಕೊಂಚ ರಿಲ್ಯಾಕ್ಸ್‌ಗಾಗಿ ಇತ್ತೀಚೆಗೆ ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನ ಬೆಟ್ಟದ ಸೌಂದರ್ಯ ಸವಿಯಲು ಪ್ರಯಾಣ ಬೆಳೆಸಿದ್ವಿ.
ಬಿಳಿಗಿರಿ ಬೆಟ್ಟವನ್ನು ಚಿಕ್ಕದಾಗಿ ಬಿ.ಆರ್.ಹಿಲ್ಸ್ ಎಂತಲೂ ಕರೆಯುತ್ತಾರೆ. ಅಲ್ಲಿನ ಪ್ರಕೃತಿ ಸೊಬಗು ನೋಡಲು ಕಾರಣಕರ್ತರು ಡಾ.ಮಲ್ಲಿಕಾರ್ಜುನ್. ವೃತ್ತಿಯಲ್ಲಿ ವೈದ್ಯರಾದರೂ ನಿಸರ್ಗ ಸ್ಥಳಗಳ ವೀಕ್ಷಣೆಯಲ್ಲಿ, ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದರಲ್ಲಿ ಸಿದ್ಧಹಸ್ತರು. ಹಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹುಮ್ಮಸ್ಸಿನಿಂದ ಕರೆದೊಯ್ಯಲು ಸದಾ ಮುಂಚೂಣಿಯಲ್ಲಿ ರುತ್ತಾರೆ. ಅವರೊಂದಿಗೆ ಪ್ರಯಾಣ ಬೆಳೆಸುವುದೇ ಸಂತಸ. ಅವರ ಕಾರಿನಲ್ಲಿ ಬಿ.ಆರ್.ಹಿಲ್ಸ್‌ನಲ್ಲಿ ಪಯಣ ರೋಚಕ ಅನುಭವ.
ಬಿಳಿಗಿರಿಯ ಬನದಲ್ಲಿ ನಮ್ಮ ಕಲ್ಪನೆಗೆ ನಿಲುಕದ ಅದೆಷ್ಟೋ ಕೌತುಕಗಳು ಅಡಗಿವೆ ಎಂಬುದು ಬೆಟ್ಟದೊಳಗೆ ಹೋಗುತ್ತಿದ್ದಂತೆ ಭಾಸವಾಗ ತೊಡಗಿದವು. ಪ್ರಕೃತಿ ಸೌಂದರ್ಯ ಸವಿಯಲು ನಿಸರ್ಗ ಪ್ರೇಮಿಗಳಿಗೆ ನಿಜಕ್ಕೂ ಹೇಳಿ ಮಾಡಿಸಿದ ತಾಣ. ಕಣ್ಣು ಹಾಯಿಸಿದಷ್ಟು ನೈಸರ್ಗಿಕ ಕಾನನ. ಪ್ರಕೃತಿಯ ವಿಹಂಗಮ ನೋಟವು ನಮ್ಮೆಲ್ಲಾ ಜಂಜಾಟಗಳನ್ನು ಮರೆಸಿ ಉಲ್ಲಾಸ ತುಂಬುತ್ತದೆ. ಕಾಡಿನ ನಡುವಿನ ಅಂಕುಡೊಂಕಿನ ರಸ್ತೆಯಲ್ಲಿ ಛಂಗನೆ ನೆಗೆದು ಓಡುವ ಜಿಂಕೆಗಳು… ಪಕ್ಷಿಗಳ ಕಲರವ.. ಹೀಗೆ ಒಂದಲ್ಲ, ಎರಡಲ್ಲ ಹತ್ತಾರು ವಿಸ್ಮಯ ನೋಟಗಳು ಬಿಳಿಗಿರಿರಂಗನ ಬೆಟ್ಟದಲ್ಲಿ ಹಾದು ಹೋಗುತ್ತವೆ.
ಚಾಮರಾಜನಗರ ಜಿಲ್ಲೆಯ ಯಳಂದೂರ ತಾಲೂಕಿನಲ್ಲಿನ ಒಂದು ಬೆಟ್ಟ ಶ್ರೇಣಿ. ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸಂಗಮ ಇದಾಗಿದೆ. ಹಸಿರು ಸಿರಿ ನಡುವೆ ಮೈದಳೆದು ನಿಂತಿರುವ ಪ್ರಕೃತಿ ರಮಣೀಯ ತಾಣದ ಹವಾಮಾನ ಕೈ ಬೀಸಿ ಕರೆಯುತ್ತದೆ. ಬೆಟ್ಟದ ತುದಿಯಲ್ಲಿನ ಬಿಳಿಗಿರಿ ರಂಗನಾಥ ದೇವಾಲಯದ ಬಳಿನಿಂತು ಕಣ್ಣಾಡಿಸಿದರೆ ಪ್ರಕೃತಿ ಆವರಿಸಿದ ಮಂಜು, ನೀಲಿ ಆಗಸದಲ್ಲಿ ತೇಲಿ ಭೂಮಿ-ಆಕಾಶ ಒಂದಾದಂತೆ ಗೋಚರಿಸುತ್ತದೆ. ಸಮುದ್ರ ಮಟ್ಟದಿಂದ 5,091 ಅಡಿ ಎತ್ತರದಲ್ಲಿದೆ ಈ ಸುಂದರ ತಾಣ. ಯಾವ ದಿಕ್ಕಿಗೆ ಹೋಗಿ ನೋಡಿದರೂ ಅಳವಾದ ಪ್ರಪಾತ. ಇಳಿಜಾರಿನ ತುಂಬಾ ದೊಡ್ಡ ಕಾನನ. ಮುಗಿಯದ ಕಾಡು, ನೀಲಿ ಅಂಬರ.
ನೂರಾರು ಅಚ್ಚರಿಗಳ ತವರಾಗಿರುವ ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಕೊಂಡಿಯಂತಿರುವ ಬಿಳಿಗಿರಿರಂಗನ ಬೆಟ್ಟವು ಕಾಡುಗಳ್ಳ ವೀರಪ್ಪನ್ ಅಡಗಿದ್ದ ಸತ್ಯಮಂಗಲ ರಕ್ಷಿತಾರಣ್ಯದೊಂದಿಗೆ ಬೆಸೆಯುತ್ತದೆ. ಬೆಟ್ಟದಲ್ಲಿ ಬಿಳಿಯ ಬಣ್ಣದ ಶಿಲೆಗಳಿದ್ದ ಕಾರಣ ಬಿಳಿಗಿರಿ ಎಂದು ಹೆಸರು ಬಂದಿದೆಯಂತೆ. ಜನಪದರು ಬಿಳಿಕಲ್ಲು ಬೆಟ್ಟ ಎಂದು ಕರೆದರೆ, ಪಂಡಿತರು ಶ್ವೇತಾದ್ರಿ ಎಂದೂ ಕರೆದಿದ್ದಾರೆ. ಇನ್ನೂ ಬ್ರಹ್ಮಾಂಡ ಪುರಾಣದಲ್ಲಿ ಈ ಬೆಟ್ಟವನ್ನು ದಕ್ಷಿಣ ತಿರುಪತಿ ಎಂದೂ ಉಲ್ಲೇಖನ ಮಾಡಲಾಗಿದೆ. ವಿಷ್ಣುವರ್ಧನ ಕಾಲದಲ್ಲಿ ದೇವಾಲಯ ನಿರ್ಮಾಣವಾಗಿದೆ ಎಂಬ ಮಾತಿದೆ.
ಒಂದು ಕಾಲದಲ್ಲಿ ಕಾಡುಜನರು ಇದ್ದ ಸೋಲಿಗರ ನೆಲೆ ಬೀಡು, ಇದೀಗ ಪಟ್ಟಣವಾಗಿದೆ. ಕಾಡಿನ ಮಧ್ಯದಲ್ಲಿ ಮನೆಗಳು ಗೋಚರಿಸುತ್ತವೆ. ಸೋಲಿಗರ ಅಭಿವೃದ್ಧಿಗಾಗಿ ಆಸ್ಪತ್ರೆ, ಕೇಂದ್ರಗಳನ್ನು ಆರಂಭಿಸಲಾಗಿದೆ. ಹೀಗಾಗಿ ಅಲ್ಲಿನ ಜನರ ಬದುಕು ಬದಲಿಸಿದೆ. ಅಂದಹಾಗೆ ಇಲ್ಲಿ ಒಬ್ಬೊಬ್ಬರು ಓಡಾಡುವ ಆಗಿಲ್ಲ. ಒಂದು ವೇಳೆ ಓಡಾಡುವ ಧೈರ್ಯವೇನಾದರೂ ಅಪ್ಪಿ-ತಪ್ಪಿ ಮಾಡಿದರೆ ಜಿಂಕೆ, ಕಾಡೆಮ್ಮೆ, ಆನೆಗಳು, ಹುಲಿಗಳು ಪ್ರತ್ಯಕ್ಷವಾಗುತ್ತವೆ.
ಇನ್ನೂ ಇದೇ ಹಾದಿಯಲ್ಲಿ ಸಾಗಿದರೆ ಕೆ-ಗುಡಿ ಸಿಗುತ್ತದೆ. ಕ್ಯಾತೆ ದೇವರು ಗುಡಿ ಇದೆ. ಹೀಗಾಗಿ ಅದನ್ನು ಕೆ-ಗುಡಿ ಅಂತಾ ಕರೀತಾರೆ. ಇಲ್ಲಿ ಜಂಗಲ್ ರೆಸಾರ್ಟ್, ಅರಣ್ಯ ಇಲಾಖೆ ಸಿಬ್ಬಂದಿಯ ವಸತಿ ಗೃಹಗಳಿವೆ. ಮೊದಲೇ ಯೋಚನೆ ಮಾಡಿ ಅಲ್ಲಿಗೆ ಹೋಗುವುದಾದರೆ ಸಫಾರಿ ಬುಕ್ ಮಾಡಬಹುದು. ಬೇಸಿಗೆಯ ಬಿಸಿಲಿನಿಂದ ಮುಕ್ತಿ ಪಡೆದು ರಜೆಯಲ್ಲಿ ಕೆಲ ದಿನ ಕಳೆಯಲು ಸುಂದರ ತಾಣ. ವರ್ಷದ ಎಲ್ಲಾ ದಿನವೂ ಆಹ್ಲಾದಕರ ಹವಾಮಾನ ಇರುತ್ತದೆ ಎನ್ನುತ್ತಾರೆ ಸ್ಥಳೀಯರು.
ಲೇಖನ : ಪ್ರಭುಸ್ವಾಮಿ (ಲೇಖಕರು, ಪತ್ರಕರ್ತರು)