ನಿರ್ಮಲಾ ಹಾಗೂ ರಾಜೇಶ್ ಗೆ ಇಬ್ಬರು ಹೆಣ್ಣುಮಕ್ಕಳಿದ್ದರು, ಅವರನ್ನು ನನ್ನ ಕ್ಯಾಬಿನ್ ನಿಂದ ಹೊರಕ್ಕೆ ಕರೆದು, ಅವರ ಮನಸ್ಸಲ್ಲಿ ಅಪ್ಪ ಅಮ್ಮ ಬೇರೆಯಾಗುವುದರ ಬಗ್ಗೆ ಅವರ ಅಭಿಪ್ರಾಯ ಏನಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದೆ. ಮಕ್ಕಳು ಅಷ್ಟೋತ್ತಿಗಾಗಲೇ ಮಾಯಾವಿ ನಗರ ಬೆಂಗಳೂರಿಗೆ ಒಗ್ಗಿಕೊಂಡಿದ್ದರು. ವಕೀಲೆ ಹೆಚ್.ಆರ್.ಪವಿತ್ರ ಧರ್ಮಪ್ಪ ಅವರು ನಿರ್ಮಲಾ ಹಾಗೂ ರಾಜೇಶ್ ಗೆ ಡೈವೋರ್ಸ್ ಕೊಡಿಸುವಲ್ಲಿ ಸಫಲರಾದರಾ?… ಇಲ್ವಾ…ಮುಂದಿನ ಭಾಗವನ್ನು ತಪ್ಪದೆ ಓದಿ…
ನಾನು ಕೊಟ್ಟ ಗಡವು ಮುಗಿದಿತ್ತು, ಮರಳಿ ಬಂದ ನಿರ್ಮಲಾ ನನಗೆ ವಿಚ್ಚೇದನ ಬೇಕು ಎಂಬ ಹಠವನ್ನು ಸಡಿಲಿಸದೆ ಇದ್ದಿದ್ದು ನನಗೆ ಅರಿವಾಯ್ತು, ಯಾಕಿಷ್ಟು ಹಠ ನಿಮ್ಮಿಬ್ಬರ ಜಗಳದಲ್ಲಿ ಮಕ್ಕಳ ಭವಿಷ್ಯ ಯೋಚನೆ ಮಾಡಿದ್ದಿರಾ??… ಅದರಲ್ಲೂ ಹೆಣ್ಣು ಮಕ್ಕಳು, ವಿಚ್ಚೇದನ ಕೊಡಿಸುವುದು ದೊಡ್ಡವಿಚಾರವಲ್ಲ, ವಿಚ್ಚೇದನದ ನಂತರ ನಿಮಗೂ ಮತ್ತು ನಿಮ್ಮ ಗಂಡನಿಗೂ ಭವಿಷ್ಯ ಇದೆ. ನೀವು ಒಪ್ಪುವ, ಎಲ್ಲಾ ರೀತಿಯಲ್ಲೂ ಸರಿ ಹೊಂದುವವರು ಇಬ್ಬರಿಗೂ ಸಂಗಾತಿಗಳಾಗಿ ಸಿಗಬಹುದು!! ಆದರೆ ಈ ಮಕ್ಕಳಿಗೆ ಎಂದಿಗೂ ನೀವಿಬ್ಬರೇ ಅಪ್ಪ- ಅಮ್ಮ, ಈ ಸ್ಥಾನವನ್ನು ಮತ್ಯಾರಿಂದಲೋ ತುಂಬಲು ಸಾಧ್ಯವಾ..?? ಸ್ವಲ್ಪ ಯೋಚಿಸಿ, ನೀವು ಹೇಳುತ್ತಿರುವ ಯಾವುದೇ ವಿಚಾರಗಳು ಬಲವಾದ ಕಾರಣಗಳಲ್ಲ ವೀಚ್ಚೆದನ ಪಡೆಯಲು. ಇಬ್ಬರೂ ಮುಕ್ತವಾಗಿ ಪರಸ್ಪರ ಕುಳಿತು ಮನಸ್ಸು ಬಿಚ್ಚಿ ಒಮ್ಮೆ ಮಾತಾಡಿದ್ರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ, ಬೇಕಿದ್ದರೆ ನನ್ನ ಕಛೇರಿಯಲ್ಲಿ ಅದಕ್ಕೆ ವ್ಯವಸ್ಥೆ ಮಾಡುವೆ”…. ಎಂದಗಾಲೂ ಆಕೆ ಸುತರಾಂ ಒಪ್ಪಲಿಲ್ಲ!! ಇಲ್ಲ ನನಗೆ ವಿಚ್ಚೇದನ ಬೇಕು ಎಂಬ ಮಾತನ್ನು ಮುರಿಯಲು ತಯಾರಿರಲಿಲ್ಲ.
ಮತ್ತೆ ಒಂದಷ್ಟು ಕಾರಣ ಹೇಳಿ ಎರಡು ತಿಂಗಳು ಮುಂದೆ ತಳ್ಳಿದೆ. ಆಗಲೂ ಆಕೆ ನಿರ್ಧಾರ ಬದಲಿಸಲಿಲ್ಲ. ಬದಲಿಗೆ ತಾನಿದ್ದ ಮನೆಯಿಂದ ಎಲ್ಲಾ ಅವಳ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು ಬಾಡಿಗೆ ಮನೆಯನ್ನು ಮಾಡಿ ಅಲ್ಲಿಟ್ಟು ವಾಸ ಮಾಡೋಕೆ ಶುರುಮಾಡಿದ್ಲು. ಮಕ್ಕಳು ಅಮ್ಮನ ಮನೆಗೂ ಅಪ್ಪನ ಬಳಿಗೂ ಓಡಾಡಿಕೊಂಡು ಇದ್ದವು.

ನ್ಯಾಯಾಲಯ ಸಕಾರಣವಿಲ್ಲದೆ ವಿಚ್ಚೇದನ ಕೊಡುವುದಿಲ್ಲ ಮತ್ತು ನೀವು ಹೇಳುವ ಕಾರಣಗಳು ಅಷ್ಟು ಸಮಂಜಸ ಆಗಿಲ್ಲ ಅಂದಾಗ ಅವಳು ಇನ್ನೊಂದು ರೀತಿ ಗಂಡನ ಬಗ್ಗೆ ಹೇಳತೊಡಗಿದಳು..!!
ನನ್ನ ಗಂಡ ನನಗೆ ಗೊತ್ತಿಲ್ಲದ ಹಾಗೆ ನನ್ನ ತವರಿನವರು ಕೊಟ್ಟ ಚಿನ್ನವನ್ನು ಮಾರಾಟ ಮಾಡಿದ್ದಾನೆ, ಬ್ಯಾಂಕಿನಲ್ಲಿಟ್ಟ ಫಿಕ್ಸೆಡ್ ಡೆಪಾಜಿಟ್ಟನ್ನು ತೆಗೆದಿದ್ದಾನೇ. ನಾಲ್ಕು ವರ್ಷಗಳಿಂದ ಮಕ್ಕಳ ಶಾಲೆಯ ಫೀಜು ತುಂಬುತ್ತಿಲ್ಲಾ, ನನ್ನ ಯಾವುದೇ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದಿಲ್ಲಾ,ನಾನು ಯಾರೊಂದಿಗಾದರೂ ಮಾತಾಡಿದ್ರೆ ಅನುಮಾನದಿಂದ ನೋಡುತ್ತಾರೆ, ಮಾತಿನ ಮೂಲಕ ಚುಚ್ಚಿ ನೋಯಿಸುತ್ತಾರೆ..ಇದರಿಂದ ಬೆಸತ್ತು ನಾನೀಗ ಬೇರೆ ಮನೆ ಮಾಡಿರೋದು ಎಂದು ಹೇಳುತ್ತಾ ಹಲವಾರು ದೂರುಗಳ ಪಟ್ಟಿಯನ್ನು ನೀಡಿದಾಗ ಇದರಲ್ಲಿ ಸತ್ಯ ಇತ್ತೋ ಇಲ್ವೊ ಗೊತ್ತಿಲ್ಲ ನಮ್ಮ ಬಳಿ ಬರುವ ಪ್ರತಿ ಕಕ್ಷಿದಾರರನ್ನು ನಾವು ನಂಬಲೇಬೇಕು. ಕಕ್ಷಿದಾರನದೆ ತಪ್ಪು ಇದ್ದರೂ ಅವನನ್ನು ರಕ್ಷಿಸುವ ಜವಾಬ್ದಾರಿ ನಮ್ಮದು.. ಹಾಗಾಗಿ ಕೊನೆಗೆ ಕೇಸ್ ಫೈಲ್ ಮಾಡಿದೆ.
ಆಕೆಯ ಗಂಡನಿಗೆ ಕೋರ್ಟನಿಂದ ನೋಟಿಸ್ ಹೋಗಿ ಅವನು ಅವರ ವಕೀಲರ ಜೊತೆಗೆ ನ್ಯಾಯಾಲಯಕ್ಕೆ ಹಾಜರಾದ , ಆತನ ಪರವಾಗಿ ವಕೀಲರು ಈಕೆಯ ನಡವಳಿಕೆ ಸರಿಯಿಲ್ಲ ಎಂಬುದನ್ನು ಸಾಬೀತು ಮಾಡುವ ಐಷಾರಾಮಿ ಬದುಕಿನ ಕಡೆಗೆ ವಾಲಿರುವ ಜೀವನಶೈಲಿಯ ಹಲವಾರು ಪೋಟೋಗಳನ್ನು ನೀಡುವ ಮೂಲಕ ಪ್ರಯತ್ನ ಮಾಡಿದ್ದರು.. ಅದು ಸುಳ್ಳೆಂದು ನಾನು ವಾದ ಮಾಡಬೇಕಾಯ್ತು, ಅದನ್ನು ಸರಿಯಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಯಶ್ವಸ್ವಿಯಾಗಿದ್ದೆ ನಂತರ ಆತನದೆ ತಪ್ಪಿದೆ ಎಂಬುದನ್ನು ಮನಸಿಲ್ಲದ ಮನಸಿನಿಂದಲೇ ಸಮರ್ಥಿಸಿದ್ದೆ.ಆಗಲೂ ಆತ ತನಗೆ ಹೆಂಡತಿ ಬೇಕು ಎಂದೆ ಹೇಳಿದ್ದು,ಆದರೆ ಹೆಂಡತಿ ಜೊತೆಗೆ ಬಾಳಲು ಒಪುತ್ತಿಲ್ಲಾ.!!
ಇದನ್ನೆಲ್ಲಾ ಗಮನಿಸಿದ್ದ ನ್ಯಾಯಾಧೀಶರು ಮಧ್ಯಸ್ಥಿಕೆ ಕೇಂದ್ರಕ್ಕೆ ಕೇಸನ್ನು ಶಿಫಾರಸು ಮಾಡಿದ್ರು..ಅಲ್ಲಿ ಮಧ್ಯಸ್ಥಿಕೆ ಕೇಂದ್ರದಲ್ಲಿ ಗೌರವಾನ್ವಿತ ಮಧ್ಯಸ್ಥಗಾರ ವಕೀಲರು ಮೂರು ಬಾರಿ ಕೌನ್ಸೆಲಿಂಗ್ ಮಾಡಿದ್ರು!! ಆಕೆ ಗಂಡನ ಜೊತೆಗೆ ಹೋಗಲು ಸಿದ್ದಳಿರಲಿಲ್ಲಾ.!! ನಮ್ಮ. ಎದುರಿನಲ್ಲೆ ಕೌನ್ಸೆಲಿಂಗ್ ಸಹ ನಡೆಯಿತು, ಆತನ ಪರವಾಗಿ ವಕಾಲತ್ತು ವಹಿಸಿದ್ದವರು ತುಂಬಾ ಹಿರಿಯ ಪ್ರಭಾವಿ ವಕೀಲರು.. ಅವರು ನನಗೆ ಪವಿತ್ರ ನೀನಾದರೂ ಹೇಳಮ್ಮ ನಮ್ಮವನು ಹೆಂಡತಿ ಬೇಕು ಎಂದು ನಿತ್ಯ ಆಫೀಸ್ಗೆ ಬಂದು ಗೋಳಾಡುತ್ತಾನೆ ಅನ್ನೋರು.. ಸರ್ ನಾನೇನು ಹೇಳಲಿ ಈ ಕೇಸ್ ಫೈಲ್ ಮಾಡುವ ಮೊದಲೇ ನನ್ನ ಆಫೀಸಿನಲ್ಲಿ ಅವಳ ಮನಸ್ಸನ್ನು ಬದಲಾಯಿಸಲು ತುಂಬಾ ಪ್ರಯತ್ನಪಟ್ಟಿರುವೆ ಆದರೆ ಅದು ಸಾಧ್ಯವಾಗದೆ ಇದ್ದಿದ್ದಕೆ ಇಲ್ಲಿಯವರೆಗೆ ಬಂದಿದೆ ಕೌನ್ಸೆಲಿಂಗ್ನಲ್ಲೂ ಇಬ್ಬರೂ ಒಪ್ಪುತ್ತಿಲ್ಲ ಎಂದಾಗ ಮತ್ತೆ ಇನ್ನೊಮ್ಮೆ ನಾನು ಮತ್ತು ಆತನ ವಕೀಲರ ಸಮ್ಮುಖದಲ್ಲಿ ಅವರಿಬ್ಬರನ್ನು ಕೂರಿಸಿಕೊಂಡು ಮಾತಾಡಿಸಿದ್ವಿ.. ಆತ ಪಟ್ಖಣದಲ್ಲಿ ಮನೆಮಾಡುವೆ, ಅಪ್ಪ ಅಮ್ಮನನ್ನು ಊರಲ್ಲಿರುಸುವೆ,ನನ್ನೊಂದಿಗೆ ಬಾ ಇಬ್ಬರೂ ಕೂಡಿ ಬಾಳೋಣ ಅಂದಾಗ ಅವನೊಂದಿಗೆ ಹೋಗಲು ಆಕೆ ಒಪ್ಪಲಿಲ್ಲ,ಆಗ ಆಕೆಯ ಗಂಡ ಮಕ್ಕಳು ನನ್ನ ವಶಕ್ಕೆ ಬೇಕು ಅಂತ ಹೇಳಿದಾಗ ಮಕ್ಕಳು ನಿಮ್ಮೊಡನೇ ಬಂದರೆ ಕರೆದುಕೊಂಡು ಹೋಗಿ ನನಗೇನು ಅಭ್ಯಂತರವಿಲ್ಲ ಅಂದಾಗ ಆತ ಚಿಕ್ಕ ಮಗಳು ನಾನಿಲ್ಲ ಅಂದ್ರೆ ನಿದ್ದೆ ಮಾಡಲ್ಲಾ ಮೇಡಂ, ನನ್ನ ಎದೆಯ ಮೇಲೆ ತಲೆಯಿಟ್ಟು ಮಲಗುವುದು ಅವಳಿಗೆ ನಿತ್ಯ ನಾನು ಕಥೆ ಹೇಳಿ ಮಲಗಿಸಿದರಷ್ಟೆ ನೆಮ್ಮದಿಯಾಗಿ ಮಲಗುತ್ತಾಳೆ ಎಂದರು.. ಅದು ಸುಳ್ಳು ಅವರಿಗೆ ಮಕ್ಕಳ ಮೇಲೆ ಪ್ರೀತಿ ಇದ್ದಿದ್ದರೆ ಮಕ್ಕಳ ಫೀಜು ಯಾಕೇ ಕಟ್ಟಲಿಲ್ಲ ಹೇಳಿ ಮೇಡಂ..?? ಒಮ್ಮೆಯಾದರೂ ಮಕ್ಕಳಿಗೆ ಐದಾರು ವರ್ಷಗಳಿಂದ ಹೊಸ ಡ್ರೆಸ್ ಕೊಡಿಸಿದ್ದಾರ..ಕೇಳಿ..?? ಅಂದಾಗ ಆತನ ವಕೀಲರು ಯಾಕಮ್ಮ ಅಷ್ಟೊಂದು ಸುಳ್ಳು ಹೇಳುವೆ ಗಂಡ ಹೆಂಡತಿ ಎಲ್ಲಾ ಚೆನ್ನಾಗಿರುವುದರಿಂದಲೆ ಇವತ್ತು ಮಧ್ಯಾಹ್ನ ಇಬ್ಬರೂ ಒಟ್ಟಿಗೆ ಹೋಟೆಲ್ಗೆ ಹೋಗಿದ್ದಿರೀ..ಈಗ ನೋಡಿದ್ರೆ ಬೇರೆ ತರಹವೆ ಮಾತಾಡುತ್ತಿರಲ್ಲಾ ಅಂದಾಗ ಅಚ್ಚರಿಗೊಳಾಗುವ ಸರದಿ ನನ್ನದಾಗಿತ್ತು. ಆವಳ ಮುಖ ನೋಡಿದೆ ಇಲ್ಲ ಮೇಡಂ ಊಟಕ್ಕೆ ಕರೆದ್ರು ಅವರ ಕಾರಿನಲ್ಲೆ ಹೋಗಿದ್ದೆ ಆದರೆ ಊಟ ಬಿಲ್ ನಾನೇ ಪಾವತಿಸಿದೆ ಎಂದಳು.. ಈ ಮಾತಿಗೆ ನಾನು ಎದುರುದಾರ ವಕೀಲರು ಏನು ಹೇಳ್ಬೇಕಿತ್ತು ಅದನ್ನು ಮತ್ತೊಮ್ಮೆ ಸ್ಪಷ್ಟವಾಗಿ ಹೇಳಿದ್ವಿ..ಮದುವೆ ಅನ್ನುವ ಸಂಬಂಧ ಏಳು ಜನ್ಮದ ನಂಟು ಅಂತ್ತಾರೇ ಹಿರಿಯರು,ಬಂಧುಬಳಗ, ಸಮ್ಮುಖದಲ್ಲಿ ದೇವರ ಆರ್ಶೀವಾದದೊಂದಿಗೆ ಸಪ್ತಪದಿ ತುಳಿದು ಕಷ್ಟವಿರಲಿ, ಸುಖವಿರಲಿ ಒಂದಾಗಿ ಬಾಳ್ವೆ ಮಾಡುತ್ತಿವಿ ಎಂದು ಒಂದಾಗಿ ಇಷ್ಟು ವರ್ಷ ದಾಂಪತ್ಯ ನೆಡಸಿ ಈಗ ಮುರಿದು ಕೊಳ್ಳೋದು ಸರಿಯಲ್ಲ, ಇಬ್ಬರೂ ತಮ್ಮಲ್ಲಿರುವ ಪರಸ್ಪರ ಇಗೋವನ್ನು ಬಿಟ್ಟರೆ ಚಿನ್ನದಂತಹ ಸಂಸಾರ ನಿಮ್ಮದಾಗುತ್ತದೆ. ಎಂದಗಾಲೂ ಆಕೆಯ ಮನಸ್ಥಿತಿ ಬದಲಾಗಲಿಲ್ಲ.

ಸಾಂದರ್ಭಿಕ ಚಿತ್ರ (ಫೋಟೋ ಕೃಪೆ : google)
ಗಂಡನ ಬೇಜವಾಬ್ದಾರಿತನ, ಚಿಕ್ಕ ಪುಟ್ಟದಕ್ಕೆಲ್ಲಾ ಸಂಶಯ ಪಟ್ಟು ಕುಟೀಲತೆಯ ಮನೋಭಾವದಿಂದ ನೋಡುವ ಪರಿಪಾಠ, ಹೆಂಡತಿ ಮಾತಿಗೆ ಹೆಚ್ಚಿನ ಮಾನ್ಯತೆ ಕೊಡದೆ ಇರೋದು ಅವಳ ಮನಸ್ಸನ್ನು ಕಲ್ಲಾಗಿಸಿದ್ದವು.
ಇಷ್ಟಾದರೂ.. ಆತ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವೆ ನನಗೆ ಹೆಂಡತಿ ಮಕ್ಕಳು ಬೇಕು ಎನ್ನುವ ಪಟ್ಟನ್ನು ಸಡಿಸಲಿಲ್ಲಾ..ಕೊನೆಯ ಅಸ್ತ್ರವಾಗಿ ಆಕೆಯ ತಾಯಿ ಮತ್ತು ಅಣ್ಣನನ್ನು ಕರೆಯಿಸಿ ಕೇಳಿ, ಅವರು ಸಹ ಇವಳು ನಮ್ಮೊಂದಿಗೆ ಇರಬೇಕು ಎಂದೆ ಬಯಸೋದು ನಾವಿಬ್ಬರೂ ಬೇರೆ ಆಗೋದು ಅವರುಗಳಿಗೆ ಇಷ್ಟ ಇಲ್ಲ ಅಂದಾಗ ಅನಿವಾರ್ಯತೆಯಿಂದ ಅವರಿಬ್ಬರನ್ನು ಕರೆಯಿಸಿ ಇಬ್ಬರೂ ಕಡೆಯ ವಕೀಲರು ಕೇಳಿದಗಾಲೂ ಅವರ ಸಹ ಅಳಿಯ ಒಳ್ಳೆಯವ ಅವನೊಂದಿಗೆ ಇರಲಿ ಎಂದೆ ಹೇಳಿದರು ಹೊರತು ಅಳಿಯಬಗ್ಗೆ ಯಾವುದೇ ದೂರುಗಳು ತಮ್ಮ ಮಗಳು ದೂರ ಇಡಲು ಇರಲಿಲ್ಲ.!! ಆದರೆ ಆಕೆ ತಾಯಿಯ ಜೊತೆಗೆ ನನಗೆ ಇಷ್ಟವಿಲ್ಲದಿದ್ದರೂ ಬೆಂಗಳೂರಿನಲ್ಲೆ ಹುಟ್ಟಿ ಬೆಳೆದ ನನ್ನನ್ನು ಈ ಹಳ್ಳಿಯವನಿಗೆ ಮದುವೆ ಮಾಡಿದ್ದು ಅಲ್ಲದೆ ಈಗ ಮತ್ತೆ ಅದೆ ಅಳಿಯನನ್ನು ಹೊಗಳುತ್ತಿದ್ದಿರಾ ಎಂದು ಜಗಳವಾಡಿದಳೇ ಹೊರತು ನಿರ್ಧಾರವನ್ನು ಸಡಿಲಿಸಲಿಲ್ಲಾ. ಇಬ್ಬರೂ ಕಡೆಯ ವಕೀಲರು ತುಂಬಾ ಪ್ರಯತ್ನ ಮಾಡಿದಗಲೂ ಇಬ್ಬರು ಜೊತೆಯಾಗಿ ಬಾಳಲು ಒಪ್ಪದೆ ಇರುವಾಗ ಪುನಃ ನ್ಯಾಯಾಲಯದ ಅಂಗಳಕ್ಕೆ ಚೆಂಡು ಬಂದು ಬಿತ್ತು. ನ್ಯಾಯಾದೀಶರು ಸಹ ಸಾಕಷ್ಟು ಮನವೋಲಿಸುವ ಪ್ರಯತ್ನ ಮಾಡಿದ್ರು. ಯಾವುದೇ ಪ್ರಯೋಜನ ಆಗದೆ ಇದ್ದ ಕಾರಣ ಮಕ್ಕಳ ಅಭಿಪ್ರಾಯ ಕೇಳುವ ತೀರ್ಮಾನಕ್ಕೆ ಬಂದು.. ಮಕ್ಕಳನ್ನು ನ್ಯಾಯಾಲಯ ಕರೆಸಲು ಆದೇಶ ಮಾಡಿತು.

ಸಾಂದರ್ಭಿಕ ಚಿತ್ರ (ಫೋಟೋ ಕೃಪೆ : google)
ನ್ಯಾಯಾಲಯಕ್ಕೆ ಬಂದ ಮಕ್ಕಳನ್ನು ನ್ಯಾಯಾಧೀಶರು ಮುಂದೆ ಹಾಜರುಪಡಿಸುವ ಮೊದಲು ನಾನು ಇಬ್ಬರು ಮಕ್ಕಳನ್ನು ನ್ಯಾಯಾಲಯದ ಆವರಣದಲ್ಲಿರುವ ಕ್ಯಾಟಿನ್ ಗೆ ಕರೆದುಕೊಂಡು ಹೋದೆ. ಮಕ್ಕಳಿಬ್ಬರು ತಾಯಿ ಜೊತೆಗೆ ಇದ್ದಿದ್ದು ಅಲ್ಲದೆ.. ಕೇಸ್ ಈ ಹಂತಕ್ಕೆ ತಲುಪುವ ಸಮಯದಲ್ಲಿ ನನ್ನ ಕಕ್ಷಿದಾರರಳು ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ದೊಡ್ಡ ಮಗಳು ಹತ್ತನೆಯ ತರಗತಿ ಪಾಸುಮಾಡಿ ಪಿಯುಸಿಗೆ ಬೆಂಗಳೂರಿನಲ್ಲಿ ಕಾಲೇಜಿಗೆ ಸೇರಿಸಿದ್ಲು,ಚಿಕ್ಕ ಮಗಳು ಸಹ ತಾಯಿಯೊಂದಿಗೆ ಇತ್ತು.. ಈ ಸಂದರ್ಭದಲ್ಲಿ ಒಂದೆರಡು ಬಾರಿ ತಂದೆಯ ಬಳಿ ಫೋನಿನಲ್ಲಿ ಮಾತಾಡಿದ್ದು ಬಿಟ್ಟರೆ ತಂದೆಯೊಂದಿಗೆ ಯಾವುದೇ ಅಟ್ಯಾಚಮ್ಮೆಂಟ್ ಇರಲಿಲ್ಲ, ಕಾರಣ ಇಡಿ ಜಗತ್ತಿನ ಜನರನ್ನೆ ತನ್ನೆಡೆಗೆ ಸೆಳೆಯುತ್ತಿರುವ ಮಾಯಾವಿ ಬೆಂಗಳೂರು ಈ ಪುಟ್ಟ ಮಕ್ಕಳನ್ನು ಆಕರ್ಷಿಸದೆ ಇರುತ್ತದೆಯೆ.. ಮಕ್ಕಳು ತಾಯಿಯೊಂದಿಗೆ ಬೆಂಗಳೂರಿನ ವಾತಾವರಣಕೆ ಫೀದಾ ಆಗಿ ಹೊಂದಿಕೊಂಡಿರೋದನ್ನ ತಿಳಿಯಲು ನನಗೆ ಜಾಸ್ತಿ ಸಮಯ ಬೇಕಾಗಿರಲಿಲ್ಲ.. ಅದರೂ ನನ್ನ ವೃತ್ತಿ ಧರ್ಮ ಮಕ್ಕಳನ್ನು ಒಂದಷ್ಟು ಪ್ರಶ್ನೆಗಳನ್ನು ಕೇಳುವಂತೆ ಪ್ರೇರೆಪಿಸಿತ್ತು.. ನಿಮ್ಮಿಬ್ಬರಿಗೂ ಅಪ್ಪ ಇಷ್ಟ ಇಲ್ವಾ ಅಂದ ಮಾತಿಗೆ ಅಪ್ಪ ತುಂಬಾ ಇಷ್ಟ ಅನ್ನುವ ಉತ್ತರ ನೋಡಿ ಖುಷಿ ಆದ್ರೂ ಆದನ್ನು ತೋರ್ಪಡಿಸದೆ ಅಪ್ಪನೊಂದಿಗೆ ಯಾಕೇ ಜೊತೆ ಇಲ್ಲ ಎಂದಾಗ ಅಮ್ಮ ನಮ್ಮನ್ನು ಒಳ್ಳೆಯ ಕಾಲೇಜು, ಸ್ಕೂಲಿಗೆ ಸೇರಿಸಿದ್ದಾಳೆ. ಎಲ್ಲಾ ಕಡೆಯೂ ಸುತ್ತಾಡಿಸುತ್ತಾಳೆ. ಈ ಊರಿನ ಶಾಲೆ ಕಾಲೇಜಿಗಿಂತಲೂ ಚೆನ್ನಾಗಿದೆ ಹಾಗಾಗಿ ಅಮ್ಮನೊಂದಿಗೆ ಇರ್ತಿವಿ. ರಜೆ ಸಿಕ್ಕಾಗ ಅಪ್ಪನ ಮನೆಗೆ ಹೋಗ್ತಿವಿ ಅಂದಾಗ ಮಕ್ಕಳ ಮನಸ್ಸಿಗೆ ಹೆಚ್ಚು ಘಾಸಿ ಮಾಡಲು ಸಾಧ್ಯವಾಗದೆ ನ್ಯಾಯಾಧೀಶರ ಛೆಂಬರಿನಲ್ಲಿ ಎರಡು ಕಡೆಯ ವಕೀಲರ ಸಮುಖದಲ್ಲಿ ಮಕ್ಕಳನ್ನು ನ್ಯಾಯಾಧೀಶರು ಗುಪ್ತವಾಗಿ ಕೇಳಿದಾಗ ಮಕ್ಕಳು ನನ್ನ ಬಳಿ ಹೇಳಿದ್ದನ್ನೆ ನ್ಯಾಯಾಧೀಶರ ಮುಂದೆ ಇನ್ ಕ್ಯಾಮೆರಾ ಪ್ರೋಸಿಡಿಂಗ್ನಲ್ಲಿ ಅಪ್ಪ ಅಮ್ಮ ವಿಚ್ಚೇದನ ಪಡೆಯಲಿ, ನಾವು ಅಮ್ಮನ ಬಳಿ ಇರುತ್ತೀವಿ. ಶಾಲೆಗೆ ರಜೆ ಸಿಕ್ಕಾಗ ಅಪ್ಪನ ಮನೆಗೆ ಬರುತ್ತಿವಿ ಎಂದರು. ಆದರೆ ನಿರ್ಮಲಾಳ ತಾಯಿ ಮತ್ತು ಅಣ್ಣನಿಗೆ ಚಿನ್ನದಂತಹ ಅಳಿಯನ್ನು ಕಳೆದು ಕೊಳ್ಳಲು ಇಷ್ಟವಿರಲಿಲ್ಲ. ಅಣ್ಣ ತಂಗಿಗೆ ಸಾಧ್ಯವಾದಷ್ಟು ಬುದ್ಧಿವಾದ ಹೇಳಿದ, ಆದರೆ ಈಕೆ ಕೇಳುವ ಹಂತದಲ್ಲಿ ಇರಲಿಲ್ಲ, ನಾನು ಸಹ ಬಹಳಷ್ಟು ಮನವೋಲಿಸಲು ಪ್ರಯತ್ನಿಸಿದೆ ಆಕೆಯ ಮನಸ್ಸು ಬದಲಾಗಲೇ ಇಲ್ಲ ಇನ್ನೇನು ಮಾಡಲು ಸಾಧ್ಯ ಕೇಸನ್ನು ನಡೆಸಿದೆ.

ಫೋಟೋ ಕೃಪೆ : google
ಮದುವೆ ಎಲ್ಲರ ಸಮ್ಮಖದಲಿ ದೈವಸಾಕ್ಷಿಯಾಗಿ ನಡೆಯುತ್ತದೆ. ಇಂತಹ ಪವಿತ್ರ ಬಂಧನದ ಬಿಡುಗಡೆ ಮಾತ್ರ ನಾಲ್ಕು ಗೋಡೆಗಳ ಮಧ್ಯೆ ಕಪ್ಪು ಧಿರಿಸು ತೊಟ್ಟ ನ್ಯಾಯಾವಾಧಿಗಳ ಸಮ್ಮುಖದಲ್ಲಿ ಸಿಗುವುದಂತಹದ್ದು ಬಂಧನವನ್ನು ಒಪ್ಪಿಕೊಳ್ಳುವ ಮಂತ್ರ ಘೋಷಗಳು, ನಗು ಸಂತೋಷ, ಮಂಟಪದ ಸುತ್ತಲೂ ಅಲಂಕಾರ ಮಾಡಿದ ಹೂವಿನ ಪರಿಮಳವಿದ್ದರೆ, ಬಿಡುಗಡೆ ದಿನ ಹತಾಶೆ, ಕಣ್ಣೀರು, ದ್ವೇಷ, ಅಷ್ಟೆ ತುಂಬಿರುತ್ತದೆ. ಇಂತಹ ಮನಗಳಲ್ಲಿ ಮತ್ತೆ ಹೂವರಳಿಸಲು ಹೋಗುವ ನಮ್ಮಂತಹ ವಕೀಲರು ಮಾನಸಿಕ ಹಿಂಸೆ ಅನುಭವಿಸಿ ಬಿಡುತ್ತೀವಿ.
ನನಗೆ ಮಕ್ಕಳ ಭವಿಷ್ಯದ ಚಿಂತೆ ಇದ್ದುದರಿಂದ ಆತನ ಆಸ್ತಿಯನ್ನು ಇಬ್ಬರೂ ಮಕ್ಕಳಿಗೆ ಹದಿನೆಂಟು ವಯಸ್ಸು ತುಂಬುವರಿಗೂ ಮಾರಾಟ ಮಾಡುವಂತ್ತಿಲ್ಲ. ಹದಿನೆಂಟರ ನಂತರ ಮಕ್ಕಳಿಗೆ ಆಸ್ತಿಯನ್ನು ನೀಡಬೇಕು. ಅಲ್ಲಿಯವರೆಗೆ ಆ ಆಸ್ತಿಗೆ ಮಕ್ಕಳ ಪರವಾಗಿ ತಾಯಿಯನ್ನು ಸಂರಕ್ಷಳಾಗಿ ಮಾಡಬೇಕು ಎಂಬ ಅರ್ಜಿಸಲ್ಲಿಸಿದೆ. ನ್ಯಾಯಾಲಯ ನನ್ನ ಅರ್ಜಿಯನ್ನು ಪುರಸ್ಕರಿಸಿತು ಮತ್ತು ಮಕ್ಕಳ ಶಾಲೆಯ ಫೀಜು, ಇತರೆ ಖರ್ಚುಗಳನ್ನು ಇಬ್ಬರೂ ಭರಿಸತಕ್ಕದ್ದು, ತಾಯಿಯೊಡನೆ ಮಕ್ಕಳು ಇದ್ದರೂ ಅವರನ್ನು ತಿಂಗಳಿಗೊಮ್ಮೆ ರಜಾ ದಿನಗಳಲ್ಲಿ ತಂದೆಗೆ ನೋಡಲು ಅನುಮತಿಯನ್ನು ನೀಡಬೇಕು, ಮಕ್ಕಳು ಒಪ್ಪಿದಲ್ಲಿ ತಂದೆಯ ಜೊತೆಗೆ ರಜಾ ದಿನಗಳಲ್ಲಿ ಬಂದು ಇರಬಹುದು ಎಂಬ ಷರತ್ತುಗಳೊಂದಿಗೆ, ಈಕೆಗೆ ಯಾವುದೇ ಜೀವನಾಂಶ ಬೇಕಿಲ್ಲದ ಕಾರಣ ನ್ಯಾಯಾಲಯ ಮ್ಯೂಚುವಲ್ ಒಪ್ಪಂದಕ್ಕೆ ವಕೀಲರು ಪರಸ್ಪರ ಮಾತಾಡಿ ಒಂದು ಅರ್ಜಿಯನ್ನು ನ್ಯಾಯಾಲಯ ಸಲ್ಲಿಸಿದೆ. ಅದನ್ನು ಗೌರವಾನ್ವಿತ ನ್ಯಾಯಾಲಯ ಪುರಸ್ಕರಿಸಿ ವೈವಾಹಿಕ ಬಂಧನ ರದ್ದುಪಡಿಸಿ ವಿಚ್ಚೇದನ ನೀಡಿ ಆದೇಶ ಹೊರಡಿಸಿ ತೆರೆದ ನ್ಯಾಯಾಲಯದಲ್ಲಿ ತೀರ್ಪು ಘೋಷಿಸಿತು.
ಅಲ್ಲೆಯೇ ಇದ್ದ ನಾನು ಆದೇಶ ಪ್ರತಿಗೆ ಇಬ್ಬರನ್ನು ಸಹಿ ಮಾಡಲು ಕರೆದಾಗ ನಿರ್ಮಲಾ ಖುಷಿಯಿಂದ ಸಹಿ ಮಾಡಿದ್ರೆ, ರಾಜೇಶ್ ಮಾತ್ರ ಒಲ್ಲದ ಮನಸಿನಿಂದಲೇ ಸಹಿ ಮಾಡುವಾಗ ಅವನ ಕಣ್ಣೀರ ಹನಿ ಆದೇಶ ಪ್ರತಿಯ ಮೇಲೆ ಬಿತ್ತು.
ಅದನ್ನು ನೋಡಿ ನನ್ನ ಮನಸ್ಸು ಸಹ ಮೂಕವಾಯ್ತು.
- ಹೆಚ್.ಆರ್.ಪವಿತ್ರ ಧರ್ಮಪ್ಪ – ವಕೀಲರು
