ಸರಳ ಬದುಕು ಅಪೇಕ್ಷಿಸಿದ ಅರಸ ‘ಚದುರಂಗ’



ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕತೆ, ಕಾದಂಬರಿ ಪ್ರಕಾರಗಳಲ್ಲಿ ಸಾಧನೆ ಮಾಡಿದ ಹಲವರಲ್ಲಿ ಚದುರಂಗ ಅವರು ಪ್ರಮುಖರು. ಕತೆಗಾರರಾಗಿ, ಕಾದಂಬರಿಕಾರರಾಗಿ, ಚಲನಚಿತ್ರ ನಿರ್ದೇಶಕರಾಗಿ ಹೆಸರಾಗಿದ್ದ ಚದುರಂಗರ ನಿಜ ಹೆಸರು ಸುಬ್ರಹ್ಮಣ್ಯರಾಜು ಅರಸು. ಅವರ ಕುರಿತು ಲೇಖಕ ಶಿವಕುಮಾರ್ ಬಾಣಾವರ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಚದುರಂಗ ಕನ್ನಡದ ಸಾಹಿತ್ಯಾಭ್ಯಾಸಿಗಳಿಗೆ ಗೊತ್ತು. ಸುಬ್ರಹ್ಮಣ್ಯರಾಜೇ ಅರಸ್ – ಅದು ಅವರ ಹೆಸರು. ಅವರು ಅರಸು ಮನೆತನಕ್ಕೆ ಸಂಬಂಧಿಸಿದವರು. ಆದರೆ ಅರಸೊತ್ತಿಗೆಯ ವೈಭವ, ಆಡಂಬರ, ಅದರ ಸುಖ ಸೌಕರ್ಯ ಅಪೇಕ್ಷಿಸದೆ ಸರಳ ಬದುಕು ಇಷ್ಟಪಟ್ಟ ವರು. ಕಲ್ಲಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ಬೇಸಾಯ ಮಾಡಿಕೊಂಡು ಜೀವನ ನಡೆಸಿದರು.

ಅವರೇ ಚದುರಂಗ ಎಂಬ ಹೆಸರಿನಿಂದ ಕನ್ನಡ ಸಾಹಿತ್ಯ , ಚಲನಚಿತ್ರ ರಂಗಗಳಲ್ಲಿ ಖ್ಯಾತಿವೆತ್ತವರು. ೧೯೧೬ ಜನೆವರಿ ೧ ರಂದು ಜನಿಸಿದ ಸುಬ್ರಹ್ಮಣ್ಯ ರಾಜೇ ಅರಸ್ ಜಯಚಾಮರಾಜ ಒಡೆಯರ್ ಅವರ ಓರಗೆಯವರು. ಕನ್ನಡ ಕಾವ್ಯಕ್ಷೇತ್ರದಲ್ಲಿ ದಾಖಲಾಗಿರುವ “ಮಂಗರಸಕವಿ” ಇವರ ವಂಶದ ಪೂರ್ವ ಕವಿ. ಆದ್ದರಿಂದಲೇ ಕನ್ನಡ ಸಾಹಿತ್ಯದ ಒಲವು ಬಂತೇನೋ. ಶ್ರೀಮಂತ ಮನೆತನದ ಹೆಣ್ಣನ್ನು ಮದುವೆಯಾಗುವ ಅವಕಾಶ ತಪ್ಪಿಸಿಕೊಂಡು ಇವರು ಸಾಮಾನ್ಯ ಕುಟುಂಬದ ಹುಡುಗಿಯನ್ನು ಹುಡುಕಿ ಮದುವೆ ಮಾಡಿಕೊಂಡು ಕಲ್ಲಹಳ್ಳಿಯಲ್ಲಿ ಸಂಸಾರ ಸಾಗಿಸತೊಡಗಿದರು.
ಮಹಾರಾಜಾ ಕಾಲೇಜಿನಲ್ಲಿ ಪದವಿ ಪಡೆದ ಅವರು ಪುಣೆಗೆ ಕಾನೂನು ಶಿಕ್ಷಣ ಪಡೆಯಲು ಹೋದರೂ ಆ ಶಿಕ್ಷಣ ಅರ್ಧಕ್ಕೇ ನಿಂತಿತು. ಆದರೆ ಚಲನಚಿತ್ರ ರಂಗದಲ್ಲಿ ಆಸಕ್ತಿ ಬೆಳೆಯಿತು. ಸಿನಿಮಾ ರಂಗದ ಸಂಪರ್ಕ ಬಂತು. ಪುಣೆಯ ಮೋಷನ್ ಪಿಕ್ಚರ್ಸ್ ಮ್ಯಾಗೆಝಿನ್ ನಲ್ಲಿ “ರ್ಯಾಂಡಮ್ ಶಾಟ್ಸ್ ” ಎಂಬ ಅಂಕಣವನ್ನು ಬರೆದರು. “ಮಾಯಾ” ಎಂಬ ಆಂಗ್ಲ ಚಿತ್ರಕ್ಕೆ ಸಹನಿರ್ದೇಶನ ಮಾಡಿದರು.

೧೯೪೮ ರಲ್ಲಿ ತಮ್ಮ ಸೋದರ ಸಂಬಂಧಿ‌ ಕೆಂಪರಾಜೇ ಅರಸ್ ಅವರ ” ಭಕ್ತ ರಾಮದಾಸ” ಎಂಬ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಹಾಡು ಬರೆದು ನಿರ್ದೇಶಿಸಿದರು.

ಆರಂಭದಲ್ಲಿ ಗಾಂಧೀಜಿ ಮತ್ತು ಎಂ. ಎನ್. ರಾಯರಂಥವರ ವಿಚಾರ ಧಾರೆಯ ಪ್ರಭಾವಕ್ಕೊಳಗಾಗಿದ್ದ ಚದುರಂಗರು ಕುವೆಂಪು, ಮಾಸ್ತಿ, ಗೊರೂರು, ಅನಕೃ, ತರಾಸು ಮೊದಲಾದವರ ಒಡನಾಟದಿಂದ ಕಾದಂಬರಿ ರಚನೆಗೆ ತೊಡಗಿದರು. ಉಯ್ಯಾಲೆ, ಸರ್ವಮಂಗಳಾ, ವೈಶಾಖ ಮೊದಲಾದ ಕಾದಂಬರಿಗಳನ್ನು ಬರೆದರು. ಉಯ್ಯಾಲೆ ಖ್ಯಾತ ನಿರ್ದೇಶಕ ಲಕ್ಷ್ಮೀನಾರಾಯಣ ನಿರ್ದೇಶನದಲ್ಲಿ ತೆರೆಗೆ ಬಂತು. ರಾಜಕುಮಾರ್, ಕಲ್ಪನಾ ಅಭನಯಿಸಿದ್ದ ಆ ಚಿತ್ರ ಕನ್ನಡದ ಹೊಸ ಅಲೆಯ ಕಲಾತ್ಮಕ ಚಿತ್ರವಾಗಿ ಪ್ರಸಿದ್ಧವಾಯಿತು. ಅದಕ್ಕೆ ರಾಜ್ಯ ಪ್ರಶಸ್ತಿಯೂ ದೊರಕಿತು.
ನಂತರ “ಸರ್ವಮಂಗಳಾ” ಕಾದಂಬರಿಯೂ ಸಿನಿಮಾ ಆಗಿ ರಾಜ್ಯ ಚಲನಚಿತ್ರ ಪ್ರಶಸ್ತಿ ಗಳಿಸಿತು. ವೈಶಾಖ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. ಚದುರಂಗರು ಕುವೆಂಪು, ನಾಟ್ಯ ವಿದುಷಿ ವೆಂಕಟಲಕ್ಷ್ಮಮ್ಮನವರ ಕುರಿತು ಕಿರು ಸಾಕ್ಷ್ಯಚಿತ್ರಗಳನ್ನೂ ತಯಾರಿಸಿದರು.

೧೯೯೪ ರಲ್ಲಿ ಮಂಡ್ಯದಲ್ಲಿ ಜರುಗಿದ ೬೩ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಅವರಿಗೆ ದೊರಕಿತು. ಮೈಸೂರು ವಿಶ್ವ ವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ೧೯೯೮ ರ ಅಕ್ಟೋಬರ್ ೧೯ ರಂದು ಚದುರಂಗರು ನಿಧನರಾದರು.


  • ಶಿವಕುಮಾರ್ ಬಾಣಾವರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW