ಗೋಗ್ರಾಸ.. ಆಗದಿರಲಿ ಗೋಮಾತೆಗೆ ಪ್ರಾಣಾಂತಕ !!

ಹಸು ಅಥವಾ ಗೋವು ಭಾರತೀಯರ ಜೀವನದಲ್ಲಿ ಹಾಸು ಹೊಕ್ಕು. ಅದರ ಹಾಲು, ಮಜ್ಜಿಗೆ, ತುಪ್ಪ, ಗೊಬ್ಬರ ಉಪಯೋಗಿಸದ ಜನರಿಲ್ಲ. ಕಾರಣ ಅದು ಗೋಮಾತೆ. ಡಾ. ಎನ್ ಬಿ.ಶ್ರೀಧರ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ದೀಪಾವಳಿ ಮತ್ತು ಬಲಿಪಾಡ್ಯಮಿ ಹಬ್ಬದ ಪ್ರಯುಕ್ತ ಅನೇಕ ಕಡೆ ಗೋಪೂಜೆಗಳು ನಡೆಯುತ್ತಿವೆ. ಗೋವಿನ ಮೇಲಿನ ಪ್ರೀತಿ ಅಭಿಮಾನದಿಂದ ಜನ ಗೋವಿಗೆ ಗೋಪೂಜೆ ಸಮಯದಲ್ಲಿ ಅಕ್ಕಿ, ಬೆಲ್ಲ, ಪಾನಕ, ಬಾಳೆಹಣ್ಣು ಇತ್ಯಾದಿಗಳನ್ನು ನೀಡುತ್ತಾರೆ. ಒಬ್ಬರು ನೀಡಿದರೆ ಪರವಾಗಿಲ್ಲ. ಆದರೆ ಅನೇಕ ಜನ ಹೀಗೆ ಅದಕ್ಕೆ ಅದರದಲ್ಲದ ಮನುಷ್ಯನ ಕೊಟ್ಟಾಗ ಅದಕ್ಕೆ ಅಜೀರ್ಣ ಮತ್ತು “ಎಸಿಡಿಟಿ”ಯಾಗಿ ಮರಣವನ್ನು ಹೊಂದುವ ಸಾಧ್ಯತೆ ಜಾಸ್ತಿ ಇದೆ. ಅದಕ್ಕೆ ಈ ಲೇಖನ.

ಹಸು ಅಥವಾ ಗೋವು ಭಾರತೀಯರ ಜೀವನದಲ್ಲಿ ಹಾಸು ಹೊಕ್ಕು. ಅದರ ಹಾಲು, ಮಜ್ಜಿಗೆ, ತುಪ್ಪ, ಗೊಬ್ಬರ ಉಪಯೋಗಿಸದ ಜನರಿಲ್ಲ. ಕಾರಣ ಅದು ಗೋಮಾತೆ. ಅಂತಹ ಗೋವಿಗೆ ನಾವು ಕೊಡುವ ಭೋಜನ(ಆಹಾರ) ಅತ್ಯಂತ ಶುದ್ಧವಾಗಿ ಅತ್ಯಂತ ಪ್ರಾಮಾಣಿಕವಾಗಿಯೂ ಮತ್ತು ಅಲ್ಪವೇ ಕಲ್ಪವೆಂದು ಭಾವಿಸಿ ನೀಡಬೇಕು ಎಂಬುದು ಪ್ರತೀತಿ. ಯಾಕೆಂದರೆ ನಾವು ನೀಡುವ ಆಹಾರ ಅದು ಅದಕ್ಕೆ ಸಂಕಟವಾಗಬಾರದು. ಸುಂದರವಾಗಬೇಕು. ಅಂತಹ ಗೋವಿನ ಆಹಾರವನ್ನು ಗೋಗ್ರಾಸ ರೂಪದಲ್ಲಿ ಕೊಡುವಾಗ ಸಂಸ್ಕೃತದಲ್ಲಿ ಹೇಳುವ ಶ್ಲೋಕ ಒಂದಿದೆ.

“ಸುರಭಿಃ ವೈಷ್ಣವಿ ಮಾತ ಸುರಲೋಕೆ ಮಹೀಯತೆ।
ಗ್ರಾಸಮುಷ್ಟಿಂ ಮಯಾದತ್ತಂ ಸುರಭಿಃ ಪ್ರತಿಗೃಹ್ಯತಾಮ್॥

ಇದರರ್ಥ, ಹೇ ಗೋಮಾತೆಯೇ, ನೀನು ಸುರಭಿ, ನೀನು ವೈಷ್ಣವಿ ತಾಯಿ ಆಗಿದ್ದೀಯ. ದೇವಲೋಕದಲ್ಲಿಯೂ ಸಹ ನಿನಗೆ ಮಹಿಮೆ ಇದೆ. ನಿನಗೆ ನಾನು ಕೊಡುವ ಒಂದು ಮುಷ್ಟಿ ಅಥವಾ ತುತ್ತು ಗೋಗ್ರಾಸವನ್ನು ಸ್ವೀಕರಿಸಿ ನನ್ನನ್ನು ಹರಸು”.

ಇಲ್ಲಿ ಮುಷ್ಟಿ ಎಂದರೆ ಹಿಡಿ ಅಥವಾ ನಮ್ಮ ತುತ್ತಿನ ಪ್ರಮಾಣದ್ದಾಗಿರಬೇಕೇ ಹೊರತು ಯಥೇಚ್ಛತೆಯಿಂದ ಕೂಡಿರಬಾರದು. ಅಂತಹ ಹಸುವಿಗೆ ನಾವು ಯಥೇಚ್ಛವಾಗಿ ಆಹಾರ ಕೊಡಬೇಕಾಗಿದ್ದು ಅದರ ನೈಸರ್ಗಿಕ ಆಹಾರವಾದ ಹುಲ್ಲು, ಹಿಂಡಿ, ಬೂಸಾ ಇತ್ಯಾದಿಗಳನ್ನು. ಗೋಗ್ರಾಸ ಏನಿದ್ದರೂ ಒಂದು ಮುಷ್ಟಿಯಷ್ಟಿರಬೇಕು ಎಂದು ನಾಗಸುಬ್ರಮಣ್ಯ ದೇವಾಲಯದ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಸಂದೇಶ ಉಪಾಧ್ಯಾಯ ಹೇಳುತ್ತಾರೆ.

ಈ ಲೇಖನ ಇಂದೇ ಬರೆಯಲು ಎರಡು ಘಟನೆಗಳು ಪ್ರೇರಣೆ.

ಮೊದಲನೆಯದು:

ಪಟ್ಟಣದಲ್ಲಿ ಹಸು ಸಾಕಿದವರೊಬ್ಬರ ಕಥೆ. ಅವರ ಮನೆಯಲ್ಲಿಯೇ ಒಂದು ಗೋವು. ಅಕ್ಕ ಪಕ್ಕದ ಹತ್ತು ಹಲವು ಮನೆಗಳಲ್ಲಿ ಯಾವುದೇ ಗೋವುಗಳಿಲ್ಲ. ಹಿಂದಿನ ಹಬ್ಬದಲ್ಲಿ ಗೋಗ್ರಾಸ ನೀಡಬೇಕಲ್ಲ. ಇವರೂ ಸೇರಿದಂತೆ ೧೨ ಜನ ಇವರ ಮನೆಯಲ್ಲಿನ ಗೋವಿಗೆ ಯಥಾನುಶಕ್ತಿಯಾಗಿ ಗ್ರಾಸ ನೀಡಿದರು. ಪರಿಣಾಮ? ಹಸು ಅಡ್ಡ ಬಿತ್ತು, ಹೊಟ್ಟೆಯಲ್ಲಿ ಆಮ್ಲತೆ ಉಕ್ಕಿತು, ಹಸುವಿನ ಕಣ್ಣು ಮೇಲೆ ಸಿಕ್ಕಿದವು, ನಿಶ್ಯಕ್ತವಾದ ಹಸು ಯಾವ ಚಿಕಿತ್ಸೆಗೂ ಬಗ್ಗದೇ ಪ್ರಾಣ ಬಿಟ್ಟಿತು.

ಎರಡನೆಯದು:

ಬಡ ರೈತನೊಬ್ಬನ ಕಥೆ. ಅವರಮನೆಯಲ್ಲೊಂದು ಹಸು. ಆ ಊರಿನಲ್ಲಿ ಎಲ್ಲಿಯೇ ಹೊಸ ಮನೆಯ ಗೃಹ ಪ್ರವೇಶವಾಗಲಿ ಅಲ್ಲಿ ಇವರದೇ ಹಸು ಮನೆ ಬೆಳಗುವುದು. ಆ ದಿನ ಹೊಸಮನೆಯ ಗೃಹ ಪ್ರವೇಶ ಹಸುವಿನ ಪಾಲಿಗೆ ಕೊನೆಯ ದಿನವಾಯಿತು. ಹಸು ಮನೆ ಪ್ರವೇಶಿಸಿತಲ್ಲ. ಎಲ್ಲರೂ ಅದಕ್ಕೆ ಇಷ್ಟವಾಗಲೆಂದು ಗೋಗ್ರಾಸ ಎಂದು ಅನ್ನ, ಪಾಯಸ, ಮೈಸೂರು ಪಾಕ, ಜಿಲೇಬಿ ರಸ ನೀಡಿದ್ದೇ ನೀಡಿದ್ದು. ಇನ್ನೇನು? ಎಸಿಡಿಟಿ, ಹೊಟ್ಟೆ ತುಂಬಾ ಅನ್ನದ ಬಾಂಡ, ಜಿಲೇಬಿ ಪಾಕ. ಬದುಕಲು ಬೇರೆ ದಾರಿಯೇ ಇರಲ್ಲ.

ನನಗೆ ಪ್ರತಿ ಹಬ್ಬ ಹರಿದಿನಗಳ ನಂತರ ಪ್ರತಿ ವರ್ಷ ಬರುವ ದೂರವಾಣಿ ಕರೆಗಳು ಇತ್ಯಾದಿಗಳ ಮೂಲಕ ತಿಳಿದಿದ್ದು ಎಂದರೆ ಕರ್ನಾಟಕ ರಾಜ್ಯದಲ್ಲಿ ಸುಮಾರು ೫೦೦-೬೦೦ ಗೋವುಗಳು ಮರಣ ಹೊಂದಬಹುದು. ನೈಜ ಅಂಕಿ ಅಂಶಗಳನ್ನು ವರದಿ ಮಾಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ನಾಳೆಯ ನಂತರ ನಮ್ಮ ರಾಜ್ಯದ ಮತ್ತು ದೇಶದ ಅನೇಕ ಪಶುವೈದ್ಯರು ಪಶುಗಳಲ್ಲಿ ಆಗುವ ಮನುಷ್ಯನ ಆಹಾರವನ್ನು ತಿನ್ನಿಸುವ ಪ್ರಯುಕ್ತ ಅಗುವ ಲ್ಯಾಕ್ಟಿಕ್ ಎಸಿಡೋಸಿಸ್ ಇದರ ಚಿಕಿತ್ಸೆಯಲ್ಲಿ ಮಗ್ನರಾಗುತ್ತಾರೆ. ಜಾಸ್ತಿ ಗೋಗ್ರಾಸ ತಿಂದ ಪಶುಗಳು ಉಳಿಯುವ ಸಾಧ್ಯತೆ ಕಡಿಮೆ.

ಗೋಗ್ರಾಸ ಎಂದು ಎಲ್ಲರಿಗೂ ತಿಳಿದೇ ಇದೆ. ಗೋವು ಅಥವಾ ಹಸುವಿಗೆ ಭಕ್ತಿಯಿಂದ ತಿನ್ನಲು ನೀಡುವ ಆಹಾರ. ಅತಿಯಾದರೆ ಅಮೃತವೂ ವಿಷ. ಮನುಷ್ಯನ ಆಹಾರ ಗೋವಿನ ಆಹಾರವಲ್ಲ. ಅದಕ್ಕೆ ಬೇಕಾಗಿರುವುದು ಹಿಂಡಿ, ಮತ್ತು ಒಣ ಮತ್ತು ಹಸಿ ಹುಲ್ಲು.


ಇದಲ್ಲದೇ ಗೋಗ್ರಾಸದ ಬಗ್ಗೆ ಕಡಿರುದ್ಯಾವರದ ಶ್ರಿ ಪ್ರಭಾಕರ ಕಾರಂತ್ ಸಹಾ ಗೋಗ್ರಾಸ ಎಂದರೆ ಕೊನೇ ಪಕ್ಷ ಪ್ರತಿದಿನ ಉಣ್ಣುವುದಕ್ಕೆ ಮುಂಚೆ ಒಂದು ಮುಷ್ಟಿ ಅನ್ನವನ್ನಾದರೂ ಗೋವಿಗಾಗಿ ತೆಗೆದಿಡಬೇಕು. ಅಲ್ಲದೇ ಗೋಗ್ರಾಸ ದಾನವು ಗ್ರಹಸ್ಥನ ನಿತ್ಯಕರ್ಮ. ಯಾವುದನ್ನು ಮಾಡದಿದ್ದರೆ ಪಾಪ ಬರುವುದೋ ಅದು ನಿತ್ಯಕರ್ಮ. “ತಾನು ಉಣ್ಣುವ ಅನ್ನದಲ್ಲಿ ಒಂದು ಮುಷ್ಟಿಯನ್ನಾದರೂ ಗೋವುಗಳಿಗಾಗಿ ತೆಗೆದಿಡಬೇಕು ಎನ್ನುತ್ತದೆ ಶಾಸ್ತ್ರ. ಆದರೆ ಅದೇ ಅತಿಯಾದರೆ?. ಹೆಚ್ಚಿನ ಶರ್ಕರ ಪಿಷ್ಟ ಹೊಂದಿದ ಅಕ್ಕಿ, ಬೇಳೆ ಇತ್ಯಾದಿ ದವಸ ಧಾನ್ಯಗಳನ್ನು ಬೇಕಾದಷ್ಟು ಗೋಮಾತೆಗೆ ನೀಡಿದರೆ ಅದರ ಅಜೀರ್ಣ ಅಥವಾ ಒಮ್ಮೊಮ್ಮೆ ಮರಣವಾಗಿ ಗೋಹತ್ಯ ದೋಷ ಬರಲೂಬಹುದು.

ವಿವಿಧ ಹಬ್ಬಗಳ ಸಮಯದಲ್ಲಿ ಹಸುಗಳಿಗೆ ಗೋಗ್ರಾಸ ನೀಡುವುದು ವಾಡಿಕೆ. ಹಸುಗಳ ಸಂಖ್ಯೆ ಕಡಿಮೆಯಾದ ಈ ಸಮಯದಲ್ಲಿ ಒಂದೇ ಹಸುವಿಗೆ ಅಕ್ಕಿ, ಬೆಲ್ಲ ಇತ್ಯಾದಿ ಶರ್ಕರ ಪಿಷ್ಟ ಹೊಂದಿದ ವಸ್ತುಗಳು ಏಕಕಾಲದಲ್ಲಿ ಉದರಕ್ಕೆ ಸೇರುವ ಸಾಧ್ಯತೆ ಇದೆ. ಹಸುವಿನ ಉದರ ಮನುಷ್ಯರ ಆಹಾರ ಜೀರ್ಣ ಮಾಡಿಕೊಳ್ಳಲು ತಕ್ಕುದಲ್ಲ. ಅದರ ಆಕಾರ ಮತ್ತುವಿನ್ಯಾಸ ಇರುವುದು ಮನುಷ್ಯನಿಗೆ ಬಳಸಲು ಯೋಗ್ಯವಲ್ಲದ ಹುಲ್ಲು ತಿಂದು ಅತ್ಯಂತ ಶ್ರೇಷ್ಟವಾದ ಹಾಲು ನೀಡುತ್ತವೆ.

ದನಗಳಿಗೆ ಅಧಿಕ ಆಹಾರ ಬೇಕು. ಜೊತೆಗೆ ಅವು ಒಮ್ಮೆ ತಿಂದ ಆಹಾರವನ್ನು ಬಿಡುವಾದಾಗ ಪುನಃ ಬಾಯಿಗೆ ತಂದುಕೊಂಡು ಮೆಲುಕು ಹಾಕುವ ಮೂಲಕ ಚೆನ್ನಾಗಿ ನುರಿಸಿ ಆಮೇಲೆ ನುಂಗುತ್ತವೆ. ಮನುಷ್ಯರಿಗೆ ಈ ಸೌಲಭ್ಯವಿಲ್ಲ. ಒಮ್ಮೆ ತಿಂದರೆ ಮುಗಿಯಿತು, ಆಹಾರದ ಮುಮ್ಮುಖ ಪ್ರಯಾಣ ಆರಂಭವಾದಂತೆಯೇ. ಆದರೆ ಜಾನುವಾರುಗಳು ಒರಟಾದ ಮತ್ತು ಕಡಿಮೆ ಗುಣಮಟ್ಟದ ಮೇವನ್ನು ತಿಂದು ಜೀರ್ಣಿಸಿಕೊಳ್ಳಲು ವಿಶಿಷ್ಟವಾದ ಜೀರ್ಣಾಂಗವ್ಯೂಹವನ್ನು ಹೊಂದಿವೆ. ಇದರ ರಚನೆ ಮತ್ತು ಕಾರ್ಯವಿಧಾನಗಳು ನಿಜಕ್ಕೂ ಅದ್ಭುತ ಮತ್ತು ಕುತೂಹಲಕರ. ಈ ಕುರಿತು ಈಗಾಗಲೇ ಅನೇಕ ಸಲ ಬರೆದಿರುವುದರುತ್ತೇನೆ.

ಹಸುವಿನ ಹೊಟ್ಟೆಯಲ್ಲಿ ಮನುಷ್ಯನ ಆಹಾರವಾದ ಅನ್ನ, ಪಾಯಸ, ಜಿಲೇಬಿ ಪಾಕ ಇತ್ಯಾದಿ ಜಾಸ್ತಿ ನೀಡಿದಲ್ಲಿ ಆಮ್ಲೀಯತೆ ಹಠಾತ್ತನೆ ಜಾಸ್ತಿಯಾದರೆ ಈ ಸೂಕ್ಷ್ಮಾಣುಜೀವಿಗಳು ಅವು ಸತ್ತುಹೋಗುತ್ತವೆ ಎಂಬುದು ಸಾರಾಂಶ ಮತ್ತು ಪಶುವೈದ್ಯನಾಗಿ ನನ್ನ ಕಳಕಳಿ.

ಒಮ್ಮೆಯೇ ಹಸುವಿಗೆ ಅನೇಕರು ಏಕಕಾಲದಲ್ಲಿ ಗೋಗ್ರಾಸ ನೀಡಿದಾಗ ಅಥವಾ ಗೃಹ ಪ್ರವೇಶ ಸಂದರ್ಭದಲ್ಲಿ ಗೋಗ್ರಾಸ ಶಾಸ್ತ್ರಕ್ಕೆ ತಕ್ಕ ಹಾಗೆ ನೀಡಿ ಅದಕ್ಕೆ ಒಂದು ಚೀಲ ಹಿಂಡಿ ಮತ್ತು ಒಳ್ಳೆಯ ಹುಲ್ಲು ಕೊಡಿಸಿದಲ್ಲಿ ಗೋವಿಗೆ ಅದನ್ನು ಹಾಕಿಯೇ ಹಾಕುತ್ತಾರೆ. ಮನೆಗೆ ಪ್ರವೇಶದ ಸಮಯದಲ್ಲಿ ಬರುವ ಹಸುವಿನ ಮಾಲಕರಿಗೆ ಹಣದ ಬದಲಾಗಿ ಹಿಂಡಿ, ಹೊಸ ಹುಲ್ಲು ಹಸಿ ಹುಲ್ಲು ಕೊಡಿಸಿ. ಹಸುಗಳು ನಗರಗಳಲ್ಲಿ ಮನೆ ಬಾಗಲಿಗೆ ಬಂದಾಗ ಅವುಗಳಿಗೆ ಮನೆಯಲ್ಲಿ ಉಳಿದ ಅನ್ನ, ಪಾಯಸ, ಕೊಳೆತ ಹಣ್ಣುಗಳು ಇವುಗಳನ್ನು ಹಾಕುವುದು ಸಹ ಬಹಳ ಸಾಮಾನ್ಯ. ಇದಕ್ಕೆ ಒಗ್ಗಿಕೊಂಡ ಹಸುಗಳು ಜೀರ್ಣಿಸಿಕೊಳ್ಳುತ್ತವೆ. ಇಲ್ಲದಿದ್ದರೆ ಅವುಗಳಿಗೆ ತೊಂದರೆ.

ಈ ವಿಷಯವನ್ನು ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ನಾಗಸುಬ್ರಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸಂದೇಶ ಉಪಧ್ಯಾಯ ಇವರಿಗೆ ಹಿಂದಿನ ಕೆಲ ವರ್ಷಗಳಲ್ಲಿ ಗೋಪೂಜೆಯ ದಿನ ತಿಳಿಸಿದ್ದೆ. ಅವರಿಗೂ ಸಹ ಪೂಜೆಯ ಮರುದಿನ ಹಸುಗಳು ಅಜೀರ್ಣದಿಂದ ತೊಂದರೆಗೊಳಗಾಗಿ ಕೆಲವು ಪ್ರಾಣತ್ಯಾಗವನ್ನೇ ಮಾಡಿದ ವಿಷಯವೂ ಸಹ ತಿಳಿಯಿತಂತೆ. ಅವರು ಈ ವರ್ಷದಿಂದ ಕಡ್ಡಾಯವಾಗಿ ಗೋವುಗಳಿಗೆ ಹಿಂಡಿ ಮತ್ತು ಹುಲ್ಲನ್ನು ಮಾತ್ರ ನೀಡಿ ಗೋಪೂಜೆಯನ್ನು ಮಾಡುವುದನ್ನು ಕಡ್ಡಾಯಗೊಳಿಸಿದ್ದಾರೆ. ಆದರೂ ಸಹ ಧ್ವನಿವರ್ಧಕದ ಮೂಲಕ ನಮ್ರವಾಗಿ ವಿನಂತಿಸುತ್ತಿದ್ದರೂ ಸಹ ಮಾತೆಯರು ಅಕ್ಕಿ, ಬೆಲ್ಲ, ತೆಂಗಿನ ಕಾಯಿ ತುರಿ ಹೀಗೆ ಆಕಳಿಗೆ ತಿನ್ನಿಸುವ ಪ್ರಯತ್ನ ಮಾಡುತ್ತಲೇ ಇದ್ದರು. ಈ ಮೂಲಕ ಅವರಿಗೆ ಗೋಮಾತೆಯ ಜೀವ ಉಳಿಸಿರುವ “ಸಂದೇಶ” ನೀಡಿರುವುದಕ್ಕೆ ಶ್ರೀ ಸಂದೇಶ ಉಪಧ್ಯಾಯರಿಗೆ ಅನಂತ ಧನ್ಯವಾದಗಳು. ನಾನೂ ಸಹ ಗೋಪೂಜೆಯಲ್ಲಿ ಭಾಗವಹಿಸಿದೆ. ಜನ ತಿನ್ನುವುದನ್ನು ಜನ ತಿನ್ನಲಿ, ಗೋಮಾತೆ ಭುಜುಸುವುದನ್ನು ಅವಳೇ ಭುಜಿಸಲಿ.

ಸರ್ವರಿಗೂ ಹಬ್ಬದ ಶುಭಾಶಯಗಳು. ಶುಭವಾಗಲಿ.


  • ಡಾ. ಎನ್ ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW