ಆನ್‌ಲೈನ್ ಸ್ನೇಹಗಳ ಸಂಖ್ಯೆಯು ಹೆಚ್ಚಿದಷ್ಟೂ, ನಿಜವಾದ ಸ್ನೇಹಗಳ ಗುಣಮಟ್ಟ ಕುಸಿಯುತ್ತಿದೆ. ಒಂದು ಮೆಸೇಜ್‌ಗೆ ಪ್ರತಿಕ್ರಿಯೆ ಸಿಗದಿದ್ದರೆ ಸಂಬಂಧ ಮುರಿಯುವಷ್ಟು ಮೇಲ್ಮೈಯಾದ ಸಂಪರ್ಕಗಳು ಇಂದು ಸಾಮಾನ್ಯವಾಗಿವೆ. ಪಾರ್ವತಿ ಜಗದೀಶ್ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
ಡಿಜಿಟಲ್ ಯುಗವನ್ನು ಯುವಜನತೆಯ ಸ್ವರ್ಣಯುಗವೆಂದು ಕೊಂಡಾಡಲಾಗುತ್ತಿದೆ. ಆದರೆ ಇದೇ ಯುಗವು ಯುವ ಮನಸ್ಸನ್ನು ಅತ್ಯಂತ ಅಪಾಯಕಾರಿ ಮೌನದೊಳಗೆ ತಳ್ಳುತ್ತಿದೆ ಎಂಬ ಸತ್ಯವನ್ನು ನಾವು ಗಮನಿಸುವುದಿಲ್ಲ. ಆನ್‌ಲೈನ್ ಸಂಪರ್ಕಗಳ ಅಬ್ಬರ ಹೆಚ್ಚಿದಷ್ಟೂ, ಆಫ್‌ಲೈನ್ ಬದುಕಿನ ಸಂಬಂಧಗಳು ಶಿಥಿಲವಾಗುತ್ತಿರುವುದು ಇಂದಿನ ಸಮಾಜದ ಗಂಭೀರ ವೈಫಲ್ಯ.
ಸಾಮಾಜಿಕ ಜಾಲತಾಣಗಳು ಯುವಜನತೆಗೆ ಅಭಿವ್ಯಕ್ತಿಯ ವೇದಿಕೆ ನೀಡಿವೆ ಎನ್ನುವ ಮಾತು ಅರ್ಧಸತ್ಯ. ವಾಸ್ತವದಲ್ಲಿ ಅವು ಅಭಿವ್ಯಕ್ತಿಯನ್ನು ಪ್ರದರ್ಶನಕ್ಕೆ ಇಳಿಸಿವೆ. ಬದುಕನ್ನು ಬದುಕುವುದಕ್ಕಿಂತ, ತೋರಿಸುವುದೇ ಮುಖ್ಯವಾಗಿರುವ ಸಂಸ್ಕೃತಿ ರೂಪುಗೊಂಡಿದೆ. ಲೈಕ್‌ಗಳು, ಫಾಲೋವರ್ಸ್‌ಗಳು ಮತ್ತು ಟ್ರೆಂಡಿಂಗ್ ಪಟ್ಟಿಗಳು ಯುವ ಮನಸ್ಸಿನ ಮೌಲ್ಯವನ್ನು ನಿರ್ಧರಿಸುವ ಮಾನದಂಡಗಳಾಗಿ ಬದಲಾಗಿವೆ. ಇದರ ಪರಿಣಾಮವಾಗಿ ವ್ಯಕ್ತಿಯ ಅಂತರಂಗ, ಆಲೋಚನೆ ಮತ್ತು ಭಾವನೆಗಳು ಅಂಚಿಗೆ ತಳ್ಳಲ್ಪಟ್ಟಿವೆ. ಯುವಜನತೆ ಇಂದು ನಿರಂತರ ಹೋಲಿಕೆಯ ಕಾರಾಗೃಹದಲ್ಲಿ ಸಿಲುಕಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸಲ್ಪಡುವ ಅತಿರಂಜಿತ ಯಶಸ್ಸು ಮತ್ತು ಸುಖಸಮೃದ್ಧಿಯ ಚಿತ್ರಣಗಳು “ನಾನು ಸಾಕಷ್ಟು ಅಲ್ಲ” ಎಂಬ ಭಾವನೆಯನ್ನು ಬೆಳೆಸುತ್ತಿವೆ. ಈ ಹೋಲಿಕೆಯ ಮನೋಭಾವ ಆತ್ಮವಿಶ್ವಾಸವನ್ನು ಕುಗ್ಗಿಸಿ, ಅಸಮಾಧಾನ ಮತ್ತು ನಿರಾಶೆಯನ್ನು ಸಹಜ ಸ್ಥಿತಿಯನ್ನಾಗಿ ಮಾಡಿದೆ. ಇದು ವೈಯಕ್ತಿಕ ದುರ್ಬಲತೆ ಅಲ್ಲ; ಇದು ಡಿಜಿಟಲ್ ಸಂಸ್ಕೃತಿಯಿಂದ ನಿರ್ಮಿತವಾದ ಮನೋವೈಕಲ್ಯ.
ಆನ್‌ಲೈನ್ ಸ್ನೇಹಗಳ ಸಂಖ್ಯೆಯು ಹೆಚ್ಚಿದಷ್ಟೂ, ನಿಜವಾದ ಸ್ನೇಹಗಳ ಗುಣಮಟ್ಟ ಕುಸಿಯುತ್ತಿದೆ. ಒಂದು ಮೆಸೇಜ್‌ಗೆ ಪ್ರತಿಕ್ರಿಯೆ ಸಿಗದಿದ್ದರೆ ಸಂಬಂಧ ಮುರಿಯುವಷ್ಟು ಮೇಲ್ಮೈಯಾದ ಸಂಪರ್ಕಗಳು ಇಂದು ಸಾಮಾನ್ಯವಾಗಿವೆ. ಸಂಕಷ್ಟದ ಸಂದರ್ಭದಲ್ಲಿ ಜೊತೆಯಾಗಿ ನಿಲ್ಲುವ ಸಂಬಂಧಗಳ ಕೊರತೆ ಯುವ ಮನಸ್ಸನ್ನು ಭಾವನಾತ್ಮಕವಾಗಿ ದಿವಾಳಿಯನ್ನಾಗಿಸಿದೆ. “ಎಲ್ಲರ ಜೊತೆ ಇದ್ದರೂ ಯಾರೊಂದಿಗೂ ಇಲ್ಲ” ಎಂಬ ಸ್ಥಿತಿ ಯುವಜನತೆಯ ನಿಜವಾದ ದುರಂತ.
ಯುವಕರು ಸದಾ ಸಂಪರ್ಕದಲ್ಲಿದ್ದಾರೆ. ಆದರೆ ಸಂವೇದನೆಯಲ್ಲಿ ದರಿದ್ರರಾಗುತ್ತಿದ್ದಾರೆ. ಆನ್‌ಲೈನ್ ಜಗತ್ತು ಸಂವಹನವನ್ನು ನೀಡುತ್ತದೆ, ಆದರೆ ಸಹಾನುಭೂತಿಯನ್ನು ನೀಡುವುದಿಲ್ಲ. ವೇಗದ ಪ್ರತಿಕ್ರಿಯೆಗಳ ನಡುವೆ ಕೇಳುವ ಕಿವಿ, ಅರ್ಥಮಾಡಿಕೊಳ್ಳುವ ಮನಸ್ಸು ಮತ್ತು ಮಾನವೀಯ ಸ್ಪರ್ಶ ಅಳಿದುಹೋಗಿವೆ. ಇದರ ಪರಿಣಾಮವಾಗಿ ಆತಂಕ, ಒತ್ತಡ, ನಿರಾಶೆ ಮತ್ತು ಅಸ್ತಿತ್ವದ ಗೊಂದಲ ಯುವ ಜೀವನದ ಸಹಜ ಭಾಗಗಳಾಗಿ ಪರಿಣಮಿಸುತ್ತಿವೆ.
ಇಲ್ಲಿ ತಂತ್ರಜ್ಞಾನವನ್ನು ಮಾತ್ರ ದೋಷಾರೋಪಣೆ ಮಾಡುವುದು ತಪ್ಪಿಸಿಕೊಳ್ಳುವ ಪ್ರಯತ್ನ. ನಿಜವಾದ ಪ್ರಶ್ನೆ ನಮ್ಮ ಸಮಾಜದ ಮುಂದೆ ಇದೆ ಯುವಜನತೆಯನ್ನು ಡಿಜಿಟಲ್ ಕೌಶಲ್ಯಗಳಲ್ಲಿ ಸಿದ್ಧಪಡಿಸಿದ್ದೇವೆ. ಆದರೆ ಭಾವನಾತ್ಮಕವಾಗಿ ಬಲಿಷ್ಠರಾಗಲು ವಿಫಲರಾಗಿದ್ದೇವೆ. ಕುಟುಂಬ, ಶಿಕ್ಷಣ ವ್ಯವಸ್ಥೆ ಮತ್ತು ಸಮಾಜ ಯುವ ಮನಸ್ಸಿನ ಒಳಜಗತ್ತಿನತ್ತ ನಿರ್ಲಕ್ಷ್ಯ ತೋರಿದ ಪರಿಣಾಮವೇ ಈ ಮೌನ ಕುಸಿತ.
ಯುವಜನತೆಗೆ ಇಂದು ಬೇಕಾಗಿರುವುದು ಮತ್ತೊಂದು ವೇದಿಕೆ ಅಲ್ಲ, ಮತ್ತೊಂದು ಆಪ್ ಅಲ್ಲ, ಬದಲಾಗಿ ಆಫ್‌ಲೈನ್ ಬದುಕಿನ ಮೌಲ್ಯವನ್ನು ಮರಳಿ ಕಟ್ಟುವ ಜಾಗೃತಿ. ತಂತ್ರಜ್ಞಾನ ಬದುಕಿಗೆ ಪೂರಕವಾಗಬೇಕು, ಪರ್ಯಾಯವಾಗಬಾರದು. ಸಂಬಂಧಗಳಿಲ್ಲದ ಸಂಪರ್ಕಗಳು ಸಮಾಜವನ್ನು ಉಳಿಸಲಾರವು.
ಆನ್‌ಲೈನ್ ಅಬ್ಬರದ ಹಿಂದೆ ಅಡಗಿರುವ ಯುವ ಮನಸ್ಸಿನ ಈ ಮೌನ ಕುಸಿತವನ್ನು ಗುರುತಿಸದಿದ್ದರೆ, ನಾವು ಸಂಪರ್ಕದಲ್ಲಿರುವ ಆದರೆ ಸಂಬಂಧವಿಲ್ಲದ ಒಂದು ತಲೆಮಾರನ್ನು ನಿರ್ಮಿಸುತ್ತೇವೆ. ಅದು ಕೇವಲ ಯುವಜನತೆಯ ಸಮಸ್ಯೆಯಲ್ಲ; ಅದು ಸಮಾಜದ ಭವಿಷ್ಯದ ಎಚ್ಚರಿಕೆಯ ಸಂಕೇತ.
- ಪಾರ್ವತಿ ಜಗದೀಶ್
