ಕಾದಂಬರಿಗಾರ್ತಿ ಮೀನಾ ಎಚ್ ವಿ ಅವರ ‘ಎವಿಡೆನ್ಸ್ ನಂಬರ್ 5/A ‘ ಪತ್ತೇದಾರಿ ಕಾದಂಬರಿಯ ಕುರಿತು ಲೇಖಕ ಚನ್ನಕೇಶವ ಜಿ ಲಾಳನಕಟ್ಟೆ ಅವರು ತಮ್ಮ ಆಶಯ ನುಡಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಕೃತಿ : ಎವಿಡೆನ್ಸ್ ನಂಬರ್ 5/A
ಪ್ರಕಾರ : ಪತ್ತೇದಾರಿ
ಕೃತಿಕಾರರು : ಶ್ರೀಮತಿ ಮೀನಾ ಎಚ್ ವಿ
ಪ್ರಕಾಶಕರು : ಸೆಂಚುರಿ ಪ್ರಕಾಶನ
ಬೆಲೆ: 200.00
ಖರೀದಿಗಾಗಿ : 97311 11234
ಮುಖವಾಡ ಧರಿಸಿದ ಮುಖಗಳ ಸುತ್ತ ಒಂದು ಸುತ್ತು. ಒಂದು ಕೊಲೆಯ ಸುತ್ತ, ಹಲವು ಗೊಂದಲಗಳ ಹುತ್ತ, ಅದ ಹೆಕ್ಕುವ ಪರಿ ನೋಡಲು ಓದುಗರ ಚಿತ್ತ.
ಒಬ್ಬ ಮನುಷ್ಯನ ಮುಖದ ಭಾವ ಅವನೊಳಗಿರುವ ಕರಾಳತೆ, ಮಮತೆ, ಬೀಭತ್ಸತೆಯನ್ನು ಅವಲಂಭಿಸಿರುವುದನ್ನು ಗ್ರಹಿಸುವುದು ಅತ್ಯಂತ ಕಷ್ಟ ಸಾಧ್ಯ. ನಮ್ಮ ನಿಮ್ಮಗಳ ನಡುವೆ ಹಲವು ವ್ಯಕ್ತಿತ್ವಗಳು ಬಂದು ಹೋದರು, ಅವರ ಮನಸಿನಾಳವನ್ನು ಅರಿಯುವುದು ಬಲು ಕಷ್ಟ ಅದಕ್ಕೇ ದೊಡ್ಡವರ ಒಂದು ನುಡಿ “ಮುಖ ನೋಡಿ ಮಣೆ ಹಾಕಬರದು”.
ಈಗಾಗಲೆ ಸಾಕಷ್ಟು ಕಾದಂಬರಿಗಳು ನಮ್ಮ ನಿಮ್ಮೆಲ್ಲರನ್ನು ಆಕರ್ಷಿಸಿವೆ ಆದರೆ ಕೆಲವು ಕಾದಂಬರಿಗಳು ಮಾತ್ರ ನಮ್ಮನ್ನು ಇನ್ನೂ ಹಿಡಿದಿಟ್ಟುಕೊಂಡಿವೆ, ಎಲ್ಲೋ ಹುಟ್ಟುವ ನದಿ ಹಲವು ಉಪನದಿಗಳನ್ನು ಸೆಳೆದುಕೊಂಡು ಕೊನೆಗೆ ಸಮುದ್ರ ಸೇರುವಂತೆ, ಈ ಕಾದಂಬರಿ ಕೂಡ ಅರಂಭದಿಂದ ಹಲವು ಆಯಾಮಗಳಲ್ಲಿ ಓದುಗರಲ್ಲಿ ಉತ್ಸುಕತೆಯನ್ನು ಉಂಟುಮಾಡಿ ಕೊನೆಯ ಭಾಗದಲ್ಲಿ ನೈಜ ಕರಾಳತೆಯ ಮುಖ ಬಿಚ್ಚಿಡುತ್ತದೆ. ಅಲ್ಲಿಯವರೆಗೂ ಓದುಗನ ಭಾವದಲ್ಲಿ ಹಾಗೆ ಆಗಿರಬಹುದು ಇವನೇ ಕೊಲೆಗಾರನಿರಬಹುದು ಹೀಗೆ ನೂರೆಂಟು ಯೋಚನೆಗಳು ಬರುವುದು ಸಹಜ ಆದರೆ ಅವನ್ನೆಲ್ಲ ಮೀರಿದ ಒಂದು ರೋಚಕ ತಿರುವು ಪಡೆದು ಕೊನೆಮೆಟ್ಟಿಲೇರುತ್ತದೆ.

ಅದೊಂದು ನಿಗೂಢ ಆರ್ತನಾದದ ಸದ್ದು, ಆ ಸದ್ದನ್ನು ಆದರಿಸಿ ಪೋಲಿಸ್ ಇನ್ಸಪೆಕ್ಟರ್ ತನ್ನ ಚಾಕಚಕ್ಯತೆ ತೋರಿಸಿ ಒಂದು ಇನ್ವೆಸ್ಟಿಗೇಶನ್ ಆರಂಭಿಸಿ, ಆ ಒಂದು ಕೊಲೆಗೆ ಸಿಕ್ಕ ಹಲವು ಎವಿಡೆನ್ಸ್ ಗಳನ್ನು ಸಂಗ್ರಹಿಸಿ ಕೊನೆಗೆ ಎವೆಡೆನ್ಸ್ ನಂಬರ್05 ಎಂದು ಗುರುತು ಮಾಡಿಕೊಂಡು ಕೊಲೆಯ ಸಂದೇಹ ನಿಜವಾದ ಮೇಲೆ ತನ್ನ ಇನ್ವೆಸ್ಟಿಗೇಶನ್ ಮೂಲಕ ಕೊಲೆಗಾರನ್ನು ಬಲೆಗೆ ಕೆಡವುತ್ತಾನೆ ಇದೇ ಈ ಕಥೆಯ ರಣರೋಚಕಥೆ. ಕಾದಂಬರಿಯಲ್ಲಿ ಬರಿ ಇಷ್ಟಕ್ಕೇ ಸೀಮಿತವಾಗದೆ ಒಂದು ಹೆಣ್ಣಿಗೆ ಒಂದು ಗಂಡಿನಾಸರೆ ಬೇಕೆ ಬೇಕು, ಇದನ್ನೆ ಆಹಾರ ಮಾಡಿಕೊಳ್ಳುವ ದುಷ್ಟರ ಭಂಢಗೇಡಿತನವನ್ನು ಲೇಖಕಿ ಅನಾವರಣ ಮಾಡಿದ್ದಾರೆ. ಈ ಕಾದಂಬರಿಯಲ್ಲಿ ಕೇವಲ ಮೂಲ ಕಥೆಗೆ ಹೊತ್ತು ಕೊಟ್ಟಿಲ್ಲ, ನೈಜ ಜೀವನದಲ್ಲಿ ನಡೆಯುವ ಸಣ್ಣಪುಟ್ಟ ಎಳೆಯನ್ನು ಜೀವನ ಶೈಲಿಯನ್ನು ಅತ್ಯಂತ ಅರ್ಥಪೂರ್ಣವಾಗಿ ನಿರೂಪಿಸಿದ್ದಾರೆ.


ಈಗಾಗಲೆ ಸಾಹಿತ್ಯ ಲೋಕದಲ್ಲಿ ಹಲವಾರು ಕಾದಂಬರಿಗಳನ್ನು ಬರೆದು ಯಶಸ್ಸು ಗಳಿಸಿರುವ ಖ್ಯಾತ ಕಾದಂಬರಿಕಾರರು ಹಾಗೂ ಖ್ಯಾತ ವಿಮರ್ಶಕರು ಆದ ಶ್ರೀಮತಿ ಎಚ್ ವಿ ಮೀನಾರವರು ಈ ಕಥೆಯನ್ನು ಯಾವ ಸಿನಿಮಾ ಕಥೆಗೂ ಕಡಿಮೆ ಇಲ್ಲದಂತೆ ಬರೆದಿದ್ದಾರೆ. ಮುಂದೊಂದು ದಿನ ಈ ಕಾದಂಬರಿ ಸಿನಿಮಾ ಆದರೂ ಯಾವುದೇ ಅಚ್ಚರಿಯಿಲ್ಲ ಅಷ್ಟು ಸಲಿಸಾಗಿ ಹಲವಾರು ತಿರುವುಗಳ ಮೂಲಕ ಮುಂದಿನ ಭಾಗಗಳಿಗೆ ಉತ್ಸುಕತೆಯನ್ನು ಉಂಟುಮಾಡತ್ತಾ ಸಾಗುತ್ತದೆ. ಈ ಕಾದಂಬರಿ ಓದುಗರ ಮನಸನ್ನು ಸೆಳೆದು ಹಲವು ಪ್ರಶಸ್ತಿ ಪುರಸ್ಕಾರವನ್ನು ಪಡೆಯಲಿ ಎಂದು ಆಶಿಸುತ್ತಾ ಈ ಕಾದಂಬರಿ ಲೋಕಾರ್ಪಣೆಯಾಗಿ ಓದುಗರ ಮನಸ್ಸನ್ನು ಗೆಲ್ಲಲಿ ಎಂದು ಮನದ ವಾಂಛೆಯನ್ನು ತೋರ್ಪಡಿಸಿ ಶುಭಕೋರುತ್ತೇನೆ.
- ಚನ್ನಕೇಶವ ಜಿ ಲಾಳನಕಟ್ಟೆ – ಛಂದೋಬದ್ಧ ಬರಹಗಾರ.
