ಹರಿಶ್ಚಂದ್ರ ಕಾವ್ಯ ಸಂಗ್ರಹ – (ಭಾಗ-೧)

ಲಕ್ಷ್ಮೀಯು ಯಾರನ್ನೂ ಕತ್ತೆತ್ತಿಯೂ ನೋಡದೇ ಶ್ರೀವಿಷ್ಣುವಿನ ಬಳಿಗೆ ಬಂದು ಅವನನ್ನು ವರಿಸಿದಳು. ಸೃಷ್ಟಿಯ ಹಿಂದೆ ಆ ಬ್ರಹ್ಮನಿದ್ದಾನೆ. ಆತನಿಗೆ ಇಂತಹ ಬುದ್ಧಿವಂತಿಕೆಯನ್ನು, ಜಾಣ್ಮೆಯನ್ನು, ಚತುರತೆಯನ್ನು ಕೊಟ್ಟವರು ಯಾರು???.ಹರಿಶ್ಚಂದ್ರ ಕಾವ್ಯ ಸಂಗ್ರಹದಿಂದ ಲೇಖಕರಾದ ರವೀಂದ್ರ ಕುಮಾರ್ ಎಲ್ವಿ ಅವರು ಓದುಗರ ಮುಂದೆ ಸಂಚಿಕೆಯ ರೂಪದಲ್ಲಿ ಹೊರ ತಂದಿದ್ದಾರೆ, ತಪ್ಪದೆ ಮುಂದೆ ಓದಿ…

ಕವಿ : ಶ್ರೀ ರಾಘವಾಂಕ.

ಪದ್ಯ ೧.

ಶ್ರೀಪತಿಗೆ ಸೊಬಗನುಡುಪತಿಗೆ ಶಾಂತಿಯನು ವಾ
ಣೀಪತಿಗೆ ಚಾತುರ್ಯಮಂ ದಿವಸ್ಪತಿಗೆ ಪ್ರ
ತಾಪಮಂ ಸುರಪತಿಗೆ ಭೋಗಮಂ ರತಿಪತಿಗೆ ಮೂಲೋಕವಾವರಿಸುವ l
ರೂಪಂ ಸರಿತ್ಪತಿಗೆ ಗಂಭೀರತೆಯನು ಸ್ವಾ
ಹಾಪತಿಗೆ ತೇಜಮಂ ಕೊಟ್ಟ ಗುರುಮೂರ್ತಿ ಪಂಪಾಪತಿ ವಿರೂಪಾಕ್ಷನೆಮಗಿಷ್ಟಸಿದ್ಧಿಯಂ ಮಾಳ್ಕೆ ಸಂತೋಷದಿಂದ ll

ಶ್ರೀಪತಿ, ಶ್ರೀ ಎಂದರೆ ಯಾರು?. ಲಕ್ಷ್ಮೀ,  ಈ ಲಕ್ಷ್ಮಿಯು ಕ್ಷೀರ ಸಾಗರ ಮಂಥನದಲ್ಲಿ ಆವಿರ್ಭವಿಸಿದವಳು.

ಶ್ರೀ – ಯು ಸೌಂದರ್ಯದ ಅಧಿದೇವತೆ. ಅಂತಹ ಸೌಂದರ್ಯ ದೇವತೆಯನ್ನು ಕಂಡು ಆಕೆಯನ್ನು ಹೊಂದಲು ದೇವ ದಾನವರಲ್ಲಿ ಪೈಪೋಟಿಯೇ ನಡೆಯಿತು. ಆದರೆ ಶ್ರೀ ವಿಷ್ಣುವು ಇದೆಲ್ಲವನ್ನೂ ನೋಡುತ್ತಾ ನಗುತ್ತಾ ನಿಂತಿದ್ದನು. ಆಗ ಲಕ್ಷ್ಮೀಯು ಯಾರನ್ನೂ ಕತ್ತೆತ್ತಿಯೂ ನೋಡದೇ ಶ್ರೀವಿಷ್ಣುವಿನ ಬಳಿಗೆ ಬಂದು ಅವನನ್ನು ವರಿಸಿದಳು. ಮಹಾವಿಷ್ಣುವು ಹೀಗೆ
ಸೌಂದರ್ಯದ ಅಧಿದೇವತೆಯಾದ ಶ್ರೀಯನ್ನು ವರಿಸಿ ಶ್ರೀಪತಿಯಾದ.

‘ಶ್ರೀಪತಿಗೆ ಸೊಬಗನ್ -‘ ಎನ್ನುತ್ತಾನೆ ಕವಿ ಇಲ್ಲಿ. ಸೊಬಗು ಎಂದರೆ ಅತಿಶಯವಾದ, ಅನನ್ಯವಾದ ಅಂದ, ಚಂದ ಚೆಲುವು ಎಂದರ್ಥ.

ಸೌಂದರ್ಯದ ಅಧಿದೇವತೆಯನ್ನೇ ವರಿಸಿದ ಆ ವಿಷ್ಣುವು ಎಂತಹ ಅತಿಶಯವಾದ ಚಲುವನ್ನು ಹೊಂದಿರಬೇಕು. ಎಂತಹ ಚಲುವ ನಾರಾಯಣನು ಅವನು. ಅವನಿಗೆ ಇಂತಹ ಚಲುವನ್ನು ಕೊಟ್ಟಿದ್ದ್ಯಾರು???

ಮುಂದೆ ನೋಡೋಣ,,,,

‘ಉಡುಪತಿಗೆ ಶಾಂತಿಯನು’

ಉಡು ಎಂದರೆ ನಕ್ಷತ್ರ. ಕೇಳಿಲ್ಲವೇ – ಪೂಜ್ಯ ಜಿ.ಎಸ್ ಶಿವರುದ್ರಪ್ಪನವರ ಗೀತೆ…”ಉಡುಗಣ ವೇಷ್ಟಿತ ಚಂದ್ರ ಸುಶೋಭಿತ ದಿವ್ಯಾ0ಬರ ಸಂಚಾರೀ. ಆಹಾ… ಅದು ಅಲ್ಲಿರಲಿ ಈಗ ಉಡುಪತಿ. ನಕ್ಷತ್ರಗಳ ಅಧಿಪತಿ ಚಂದ್ರ. ಈ ಚಂದ್ರನ ಬೆಳದಿಂಗಳು ಅದೆಷ್ಟು ಪ್ರಶಾಂತವಾದುದು. ಆ ಬೆಳದಿಂಗಳಿನ ತಂಪಿನ ಆನಂದವನ್ನು ಸವಿಯದಿದ್ದವರು ಯಾರು…?

ಡಿ ವಿ ಜಿ ಯವರು ತಮ್ಮ ಕಗ್ಗ ಪದ್ಯವೊಂದರಲ್ಲಿ ಹೇಳುತ್ತಾರೆ :

ಬಡವನಾರ್? ಮಡದಿಯೊಲವಿನ ಸವಿಯನರಿಯದನುl
ಹುಡುಗರಾಟದಿ ಬೆರೆತು ನಗಲರಿಯದವನುll
ಉಡುರಾಜನೋಲಗದಿ ಮೈ ಮರೆಯದವನ್l
ಬಡ ಮನಸೆ ಬಡತನವೊ – ಮರುಳ ಮುನಿಯ ll

ಉಡುರಾಜನ ಓಲಗ… ಸಭೆ.. ಚಂದ್ರ ರಾಜಸಭೆಯಲ್ಲಿ ಕುಳಿತು ಆ ಪ್ರಶಾಂತತೆಯನ್ನು ಅನುಭವಿಸುತ್ತಾ ತನ್ನ ತಾನೇ ಮರೆಯಲು ಆಗದವನು ಬಡವನು ಎನ್ನುತ್ತಾರೆ. ನಮಗೆಲ್ಲಾ ಒಂದು ವಿಷಯ ಗೊತ್ತಿದೆ. ಅದೆಂದರೆ ನಾವು ಯಾರಿಗಾದರೂ ಏನಾದರೂ ಕೊಡುವುದಾದಲ್ಲಿ ಅದು ಮೊದಲು ನಮ್ಮ ಬಳಿಯಿರಬೇಕು.

ಆ ಚಂದ್ರನು ತನ್ನ ಬೆಳದಿಂಗಳ ರಾತ್ರಿಯಲ್ಲಿ ಚಲ್ಲುವ ಪ್ರಶಾಂತತೆಯನ್ನು, ಆ ತಂಪನ್ನು ಆ ಆಹ್ಲಾದಕರ ಶಾಂತಿಯನ್ನು ಅವನಿಗೆ ಕೊಟ್ಟವರು ಯಾರು???… ಮುಂದೆ ನೋಡೋಣ.

‘ವಾಣೀಪತಿಗೆ ಚಾತುರ್ಯಮಂ’

ವಾಣಿ ಎಂದರೆ ಮಾತು, ನುಡಿ, ಶಬ್ದ, ಧ್ವನಿ, ಗಾನ, ಸಂಗೀತ ಹಾಗೂ ಇದೆಲ್ಲದರ ಅಧಿದೇವತೆ ಸರಸ್ವತಿ ಎಂದರ್ಥ. ವಾಣೀಪತಿ ಎಂದರೆ ಸಕಲ ವಿದ್ಯೆಯ ಅಧಿಪತಿಯಾದ ಸರಸ್ವತಿಯ ಪತಿಯಾದ ….ಬ್ರಹ್ಮ.

ಈತನಿಗೆ ‘ಚಾತುರ್ಯಮಂ’ – ಎಂದರೆ ಜಾಣತನ, ಬುದ್ಧಿವಂತಿಕೆ. ಬ್ರಹ್ಮನು ಸೃಷ್ಟಿಕರ್ತ. ಈ ವಿಶ್ವದ ಸೃಷ್ಟಿಯನ್ನು ಮಾಡಿದವನು ಅವನೇ. ಈ ಸೃಷ್ಟಿಯಲ್ಲಿನ ಜೀವ ವೈವಿಧ್ಯತೆ, ವಿಶಾಲತೆ, ಅಘಾದತೆ, ವೈಚಿತ್ರ್ಯತೆ ಮತ್ತು ಪ್ರಕೃತಿಯ ಹಿರಿಮೆ ಗರಿಮೆಯನ್ನು ನಾವೆಲ್ಲರೂ ಕಂಡು ಮೂಕ ವಿಸ್ಮಿತರಾಗಿದ್ದೇವೆ.

ಈ ಭೂಮ್ಯಾಕಾಶದ ವಿಶಾಲತೆಯೇನು?
ಇಲ್ಲಿನ ಸಾಗರಗಳ ಅಘಾದತೆಯೇನು?
ನದಿಕೊಳ್ಳಗಳು ಹರಿವ ಪರಿಯೇನು?
ಗುಡ್ಡ ಬೆಟ್ಟಗಳ ಹಿಂದಣ ಗುಟ್ಟೇನು? ಗಿರಿ ಗವ್ಹರ ಕಾನನಗಳೇನು?
ಪರ್ವತ, ಶಿಖರಗಳ ಔನ್ನತ್ಯದ ವಿವಿಧತೆಯೇನು?
ಮರುಭೂಮಿ, ಹಿಮಭೂಮಿ ರಚನೆಯದೇನು?
ಭೂಚರ, ವನಚರ, ಜಲಚರ, ಖೇಚರ ಜೀವ ಸಂಕುಲದ ವೈವಿದ್ಯತೆಯೇನು?
ಆಹಾ!!!

ಈ ಎಲ್ಲ ಸೃಷ್ಟಿಯ ಹಿಂದೆ ಆ ಬ್ರಹ್ಮ ಅಥವಾ ವಾಣೀಪತಿಯಿದ್ದಾನೆ. ಇಂತಹ ಅಧ್ಭುತ, ಅನಾದೃಶ್ಯ ಸೃಷ್ಟಿಯನ್ನು ರಚಿಸಿದವನು ಎಂತಹ ಬುದ್ಧಿವಂತನಿರಬೇಕು, ಎಂತಹ ಜಾಣ್ಮೆಯನ್ನು ಕೌಶಲವನ್ನು ವಶಪಡಿಸಿಕೊಂಡವನಿರಬೇಕು? ಆತನಿಗೆ ಇಂತಹ ಬುದ್ಧಿವಂತಿಕೆಯನ್ನು, ಜಾಣ್ಮೆಯನ್ನು, ಚತುರತೆಯನ್ನು ಕೊಟ್ಟವರು ಯಾರು???.

ಮುಂದೆ ನೋಡೋಣ…

‘ದಿವಸ್ಪತಿಗೆ ಪ್ರತಾಪಮಂ’

ದಿವ ಎಂದರೆ ಹಗಲು, ಆಕಾಶ,
ದಿವಸ್ಪತಿ ಎಂದರೆ ಸೂರ್ಯ.
ಪ್ರತಾಪ ಎಂದರೆ ಪ್ರಾತಾಪ, ಕಾವು, ಉಷ್ಣ, ಬೆಳಕು, ತೇಜಸ್ಸು, ಕಾಂತಿ, ಶಕ್ತಿ, ಸೂರ್ಯ ಒಂದು ಶಕ್ತಿಯ ಆಗರ, ಕೇಂದ್ರ.

ಸೂರ್ಯನ ಈ ಎಲ್ಲ ಪ್ರಾತಾಪದ ಪ್ರಾಕಾರಗಳ ಪರಿಚಯ ನಮಗೆಲ್ಲರಿಗೂ ಗೊತ್ತಿರುವಂತಹದ್ದೇ ಆಗಿದೆ. ಆತನ ಈ ಅನಾದೃಶ್ಯ ಶಕ್ತಿಯ ಮೂಲ ಸೆಲೆಯನ್ನು ಆತನಿಗೆ ಕೊಟ್ಟವರಾರು???

ಇದಕ್ಕೆ ಉತ್ತರವನ್ನು ಮುಂದೆ ನೋಡೋಣ.

‘ಸುರಪತಿಗೆ ಭೋಗಮಂ’

ಸುರಪತಿ, ಸುರ ಎಂದರೆ ದೇವತೆಗಳು, ಸುರಪತಿ ಎಂದರೆ ದೇವತೆಗಳ ರಾಜ ಎಂದರೆ ‘ಇಂದ್ರ’.

ಇಂದ್ರನು ಭೋಗ ಅಥವಾ ಸುಖವನ್ನು ಹೊಂದುವದು ಅಥವಾ ಅನುಭವಿಸುವುದರಲ್ಲಿ ಅಗ್ರಗಣ್ಯ. ಅವನ ಭೋಗವು ‘ಇಂದ್ರಭೋಗ’ ವೆಂದೇ ಪ್ರಸಿದ್ದಿ.
ಇಂತಹ ಭೋಗವು ಸುಖಾ ಸುಮ್ಮನೇ ಲಭ್ಯವಾಗುವಂತಹದಲ್ಲ. ಅದನ್ನೂ ಅನುಭವಿಸುವ ಯೋಗವಿರಬೇಕು. ಇಂದ್ರನಿಗೆ ಈ ‘ಇಂದ್ರಭೋಗವನ್ನು’ ಕೊಟ್ಟವನು ಯಾರು???

 ಮುಂದೆ ನೋಡೋಣ….

‘ರತಿಪತಿಗೆ ಮೂಲೋಕವಾವರಿಸುವ ರೂಪಮಂ’

ರತಿಪತಿ = ಮನ್ಮಥ.. ಕಾಮ.

ಮನ್ಮಥನು ಅತೀ ರೂಪವಂತನು ಎಂಬ ಪ್ರತೀತಿ. ಕಾಮನ ಈ ರೂಪವು ಅಸಾಮಾನ್ಯವಾದುದು. ಇದು ತ್ರಿಲೋಕಗಳಾದ ಸ್ವರ್ಗ, ಮರ್ತ್ಯ ಹಾಗೂ ಪಾತಾಳ ಲೋಕವನ್ನೂ ಆವರಿಸಿಕೊಳ್ಳುವಂತಹ ರೂಪ. ಅಂದರೆ ಈ ಕಾಮರೂಪಿಯು ಮೂರೂ ಲೋಕಗಳಲ್ಲಿ ತನ್ನ ಪ್ರಭಾವ ಬೀರಬಲ್ಲ ರೂಪಾಗ್ರಣಿ. ಈತನಿಗೆ ಇಂತಹ ಅಸದಳ ರೂಪವನ್ನು ಕೊಟ್ಟವರು ಯಾರು???.

ಮುಂದೆ ನೋಡೋಣ…

‘ಸರಿತ್ಪತಿಗೆ ಗಂಭೀರತೆಯನು’ –

ಸರಿತ್ಪತಿ -ಎಂದರೆ ಸಮುದ್ರ. ಸಮುದ್ರವು ಗಂಭೀರತೆಗೆ ಹೆಸರಾದುದು. ಸಾಗರದ ಆಳವು ಬಹು ಗಂಭೀರವಾಗಿರುತ್ತದೆಯೆನ್ನುತ್ತಾರೆ. ಹಾಗಾದರೆ ಸಾಗರಕ್ಕೆ ಸಮುದ್ರಕ್ಕೆ ಈ ಗಂಭಿರತೆಯನ್ನು ಕೊಟ್ಟವರಾರು ;

‘ಸ್ವಾಹಾಪತಿಗೆ ತೇಜಮಂ’

ಸ್ವಾಹಾಪತಿ ಎಂದರೆ ಅಗ್ನಿ. ಅಗ್ನಿಯು ತನಗೆ ಅರ್ಪಿಸಿದ ಎಲ್ಲವನ್ನೂ ಸ್ವಾಹಾ ಮಾಡುತ್ತಾನೆ. ಅಗ್ನಿಯ ತೇಜಸ್ಸು ಅಂದರೆ ಕಾಂತಿ, ಹೊಳಪು ವಿಶೇಷವಾದುದು. ಅಂತಹ ತೇಜಸ್ಸನ್ನು ಅಗ್ನಿಗೆ ಕೊಟ್ಟವರಾರು???

ಈಗ ಕವಿಯು ಈ ಮೇಲೆ ಹೇಳಿದ ಎಲ್ಲರಿಗೂ ಅಸದಳವಾದುದೆಲ್ಲವನ್ನೂ ಕೊಟ್ಟಾತನ ಹೆಸರನ್ನು ಹೇಳುತ್ತಾನೆ. ಅವನೇ ‘ಪಂಪಾಪತಿ ವಿರೂಪಾಕ್ಷ’ ಅಂದರೆ ಹಂಪೆಯ ಮತ್ತು ಕವಿಯ ಆರಾಧ್ಯ ದೈವ ವಿರೂಪಾಕ್ಷ ಈ ಎಲ್ಲರಿಗೂ ಉಲ್ಲೇಖಿಸಿದ್ದನ್ನು ಕೊಟ್ಟವನು ‘ಎಮಗೆ’ -ನಮಗೂ, ಸಂತೋಷದಿಂದ- ‘ಇಷ್ಟಸಿದ್ಧಿಯಂ ಮಾಳ್ಕೆ’ – ಇಷ್ಟ ಸಿದ್ಧಿ.. ‘ನಾವು ಇಷ್ಟ ಪಟ್ಟದ್ದನ್ನು ಮತ್ತು ಅವನು ಇಷ್ಟ ಪಟ್ಟು ಕೊಡುವುದೂ ನಮಗೆ ಸಿದ್ಧಿಸುವಂತೆ ಮಾಡಲಿ’ – ಎಂಬ ಕೋರಿಕೆಯೊಂದಿಗೆ ಈ ಕಾವ್ಯಾರಂಭವನ್ನು ಮಾಡುತ್ತಿದ್ದಾನೆ.

ಮುಂದುವರೆಯುವುದು.


  • ರವೀಂದ್ರ ಕುಮಾರ್ ಎಲ್ವಿ – ಮೈಸೂರು.
2 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW