ಕವಿ-ಸಾಹಿತಿಯಾಗಿ, ಸಾಹಿತ್ಯದ ಮೇಷ್ಟ್ರಾಗಿ, ಅನುವಾದಕನಾಗಿ ಮಾಡಿದ ಸಾಧನೆಗಳು ಹಲವಾರು. ತನ್ನ ಮೊದಲ ಪತ್ನಿ ಸಾವಿಗೀಡಾದಾಗ, ಎದೆಗುಂದಿದ ಕವಿ ತನ್ನನ್ನು ಸಂತೈಸಿಕೊಂಡಿದ್ದು ಹೀಗೆ. ಇವರ ಕುರಿತು ಲೇಖಕರಾದ ರಾಘವನ್ ಚಕ್ರವರ್ತಿ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
’ಮಾತು ಆಡಿದರೆ ಹೋಯಿತು
ಮುತ್ತು ಒಡೆದರೆ ಹೋಯಿತು’
ಆ ಮಾರ್ಮಿಕ ಮಾತುಗಳು ಕವಿಯೊಬ್ಬನ ಗ್ರಹಿಕೆಯಲ್ಲಿ ಹೇಗೆಲ್ಲಾ ಕಸುವು ಪಡೆಯುತ್ತದೆ ಎಂಬುದನ್ನು ಗಮನಿಸಿ. ’ಭಾವುಕತೆ ತುಂಬಿ ಬರೆಯುತ್ತಾನೆ’ ಎಂಬ ಹೆಗ್ಗಳಿಕೆಗೆ ಪಾತ್ರನಾದ ಎಚ್.ಡಬ್ಲು.ಲಾಂಗ್ ಫ಼ೆಲೋ (ಹೆನ್ರಿ ವಾಡ್ಸ್‌ವರ್ಥ್ ಲಾಂಗ್‌ಫ಼ೆಲೋ), ೧೮ನೆಯ ಶತಮಾನದ ಮಧ್ಯಭಾಗದಲ್ಲಿ ಬರೆದ ಈ ಸಾಲುಗಳು ಇಂದಿಗೂ ಪ್ರಸ್ತುತ. ಮೂಲತಃ ಅಮೆರಿಕದ ಸಂಯುಕ್ತ ಸಂಸ್ಥಾನದ ಮಯ್ನೆ (Maine) ರಾಜ್ಯದವನಾದ ಲಾಂಗ್‌ಫೆಲೊ, ಕವಿ-ಸಾಹಿತಿಯಾಗಿ, ಸಾಹಿತ್ಯದ ಮೇಷ್ಟ್ರಾಗಿ, ಅನುವಾದಕನಾಗಿ ಮಾಡಿದ ಸಾಧನೆಗಳು ಹಲವಾರು. ತನ್ನ ಮೊದಲ ಪತ್ನಿ ಗರ್ಭಪಾತವಾಗಿ ತೀರಿಕೊಂಡಾಗ ತೀವ್ರ ಖಿನ್ನತೆಗೆ ಒಳಗಾದ ಲಾಂಗ್‌ಫ಼ೆಲೊ, ತನ್ನನ್ನು ಸಂತೈಸಿಕೊಳ್ಳಲು ’ಕಾವ್ಯ’ಕ್ಕೆ ಶರಣಾದ. ಎರಡನೆಯ ಪತ್ನಿ ಬೆಂಕಿ ಆಕಸ್ಮಿಕದಲ್ಲಿ ತನ್ನ ಕಣ್ಣ ಮುಂದೆಯೇ ಕೊನೆಯುಸಿರೆಳೆದಾಗ, ಲಾಂಗ್‌ಫ಼ೆಲೋ ಪರಿಸ್ಥಿತಿಯನ್ನು ಸಾಕಷ್ಟು ಧೈರ್ಯವಾಗಿ ಎದುರಿಸಿದ. ಆಗಲೂ ಕಾವ್ಯವೇ ಆತನ ಅಗೋಚರ ಸಂಗಾತಿ. ಅದಕ್ಕೂ ಮೊದಲು ಯೂರೋಪ್ ಪ್ರವಾಸದಲ್ಲಿದ್ದಾಗ, ತನ್ನ ಪ್ರೀತಿ-ಪಾತ್ರ ತಂಗಿಯೂ ವಿಧಿವಶಳಾದಳು. ಸಾಂಸಾರಿಕವಾಗಿ ಜರ್ಝರಿತನಾದ ಲಾಂಗ್‌ಫ಼ೆಲೋ, ತನ್ನೆಲ್ಲಾ ಬೇನೆ-ಬೇಗುದಿ ಹತಾಶೆಗಳನ್ನು ಕಾವ್ಯದ ಸಾಲುಗಳಿಗೆ ಇಳಿಸಿದ.
ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತ, ಅಧ್ಯಯನಕ್ಕಾಗಿ ಯೂರೋಪ್ ಪ್ರವಾಸ ಮಾಡುತ್ತಿದ್ದ ಲಾಂಗ್‌ಫ಼ೆಲೋ, ಒಂದೆರೆಡು ಬಾರಿ ಹಲವು ವರ್ಷಗಳನ್ನು ಅಲ್ಲಿಯೇ ಕಳೆಯುತ್ತಿದ್ದ. ಅಲ್ಲಿನ ಕಾಲೇಜುಗಳಲ್ಲೂ ಪಾಠ ಮಾಡಿದ. ಮಿಲ್ಟನ್ ನ ’The paradise Lost’, ಗ್ರೀಕ್ ದುರಂತ ನಾಟಕಗಳನ್ನು ತನ್ನ ವಿಶಿಷ್ಟ ಹಾವ-ಭಾವ ಆಂಗಿಕಭಾಷೆಗಳಿಂದ, ಜೀವ ತುಂಬಿ ಬೋಧಿಸುತ್ತಿದ ಶೈಲಿಯಿಂದ ಜನಪ್ರಿಯನಾದ. ಹಾಗೆಂದು ಬರಿಯ ಬೋಧನೆಗೇ ತನ್ನನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಬಹುತೇಕ ಎಲ್ಲಾ ಯೂರೋಪಿಯನ್ ಭಾಷೆ-ಸಾಹಿತ್ಯಗಳ ಮೇಲೆ ಪರಿಶ್ರಮ ಸಾಧಿಸಿದ. ಅಮೆರಿಕಕ್ಕೆ ಮರಳಿದೊಡನೆಯೇ, ಡಾಂಟೆ(ದಾಂತೆ) ಯ ಇಟಾಲಿಯನ್ ಭಾಷೆಯಲ್ಲಿ ರಚಿತವಾಗಿದ್ದ ಅನುಪಮ ಸಾಹಿತ್ಯ ಕೃತಿ “Divine Comedy” ಯನ್ನು, ಅದರ ಎಲ್ಲಾ ಉತ್ಕೃಷ್ಟತೆ, ದೈವಿಕತೆ, ಭಾಷಾವಿನ್ಯಾಸಗಳೊಂದಿಗೆ, ಇಂಗ್ಲಿಶ್ ಭಾಷೆಗೆ ಅನುವಾದಿಸಿದ್ದು ಮಹತ್ಸಾಧನೆ.
ಇಲ್ಲಿ ಹಂಚಿಕೊಂಡಿರುವ ಲಾಂಗ್‌ಫ಼ೆಲೊ ನ ಸಾಲುಗಳು, ಆತನ ’The Arrow and the Song’ ಪದ್ಯದಿಂದ ಆಯ್ದದ್ದು. ಭಾವುಕ ಸನ್ನಿವೇಶವೊಂದರಲ್ಲಿ ನಡೆದಿರಬಹುದಾ ದ ಅವಿವೇಕದ ವರ್ತನೆ, ನಂತರದ ಪಶ್ಚಾತ್ತಾಪದ ಪರಿ, ಗಮನಾರ್ಹ. ಈ ಸಾಲುಗಳಲ್ಲಿ ಆಡುವ/ಆಡಿದ ಮಾತುಗಳಿಂದ ಸಂಭವಿಸಬಹುದಾದ ದುಷ್ಪರಿಣಾಮಗಳ ಬಗ್ಗೆ, ವಿವೇಕ ಪೂರ್ಣ ಎಚ್ಚರವಿದೆ. ಬಿಟ್ಟ ಬಾಣ ಮರಳಿ ಬಾರದು. ಹಾಗೆಯೇ ಮಾತು/ಭಾಷೆ ಕೂಡಾ. ಈ ಎರಡರ ಸ್ಥಾಯಿ(permanence) ಗುಣದ ಬಗ್ಗೆ ಎಚ್ಚರ ಅವಶ್ಯ.
I shot an arrow into the air,
It fell to earth, I knew not where;
For, so swiftly it flew, the sight
Could not follow it in its flight.
I breathed a song into the air,
It fell to earth, I knew not where;
For who has sight so keen and strong,
That it can follow the flight of song?
Long, long afterward, in an oak
I found the arrow, still unbroke;
And the song, from beginning to end,
I found again in the heart of a friend.
ಪದ್ಯದ ಕೊನೆಯ ಸಾಲುಗಳಲ್ಲಿ ಆತ್ಮಾವಲೋಕನವಿದೆ. ಆಡಬೇಕಾದ ಮಾತುಗಳ ನೈತಿಕ ಆಯಾಮವನ್ನು ಗುರಿತಿಸುವ ಸಂವೇದನೆಯಿದೆ.
’ಬಾಣವೆಲ್ಲೋ ಬಿದ್ದಿತ್ತು..ಮುರಿದಿರಲಿಲ್ಲ… ಹಾಡಿದ ಹಾಡು ಹಾಗೆಯೇ ಉಳಿದಿತ್ತು..ಮೊದಲಿಂದ ಕೊನೆವರೆಗೂ… ಗೆಳೆಯನ ಎದೆಯಲ್ಲಿ’ ಕೆಲವು ಮಾತುಗಳು ಹಾಗೆಯೇ ಶಾಶ್ವತ.
ಲಾಂಗ್‌ಫೆಲೊ ನ ಇಷ್ಟವಾಗಬಹುದಾದ ಮತ್ತಷ್ಟು ಸಾಲುಗಳು:
“Behind the clouds is the sun still shining
Thy fate is the common fate of all
Into each life some rain must fall
somedays must be dark and dreary..”
ಪ್ರತಿಯೊಬ್ಬನಿಗೂ ಕಷ್ಟ-ಕಾರ್ಪಣ್ಯಗಳಿವೆ. ಸೂರ್ಯನನ್ನು ಮೋಡಗಳು ಶಾಶ್ವತವಾಗಿ ಮುಚ್ಚಲಾರವು. ಇಲ್ಲಿ ‘day'(ದಿನ) ಎಂಬುದು ನಮ್ಮ ಜೀವನಕ್ಕೆ ರೂಪಕವಾಗಿದೆ. ತನ್ನ ಮೊದಲ ಪತ್ನಿ ಸಾವಿಗೀಡಾದಾಗ, ಎದೆಗುಂದಿದ ಕವಿ ತನ್ನನ್ನು ಸಂತೈಸಿಕೊಂಡಿದ್ದು ಹೀಗೆ. ಇದು ಕವಿಯ ಮನಃಸ್ಥಿತಿಗೆ ಹಿಡಿದ ಕನ್ನಡಿಯಾದರೂ, ಯಾವುದೇ ಪ್ರಸಂಗದಲ್ಲಿ ಆತ್ಮವಿಶ್ವಾಸ ಮೂಡಿಸುವ ಸ್ಪೂರ್ತಿಯ ಮಾತುಗಳು ಕೂಡಾ. ಮಳೆಬಂದ ದಿನಗಳಲ್ಲಿ ಕತ್ತಲು ಆವರಿಸಿದ್ದರೂ, ಮಂಕು ಕವಿದಿದ್ದರೂ, ಕಪ್ಪು ಮೋಡಗಳ ಹಿಂದೆ ಅವಿತಿರುವ ಸೂರ್ಯ, ಮುನ್ನೆಲೆಗೆ ಬಂದೇ ಬರುವ. ಅಬ್ರಹಾಂ ಲಿಂಕನ್, ಚಾರ್ಲ್ಸ್ ಡಿಕನ್ಸ್…ಲಾಂಗ್‌ಫೆಲೋನ ಅಪ್ಪಟ ಅಭಿಮಾನಿಗಳಾಗಿದ್ದವರು.
- ರಾಘವನ್ ಚಕ್ರವರ್ತಿ
