‘ಹೂಲಿ ಶೇಖರರ ನಾಟಕಗಳು’ ಕೃತಿ ಪರಿಚಯ

ಶ್ರೀಯುತ ಹೂಲಿ ಶೇಖರ್ ಅವರು ರಂಗನಾಟಕಗಳಲ್ಲಿ ದೊಡ್ಡ ಹೆಸರು ಮಾಡಿದವರು. ಇವರು ೩೦೦ ಕ್ಕೂ ಹೆಚ್ಚು ಸಣ್ಣ ಕಥೆ, ೧೫ ಕಾದಂಬರಿ, ಆಕಾಶವಾಣಿ/ಬೀದಿ ನಾಟಕಗಳು, ದೂರದರ್ಶನ ಧಾರಾವಾಹಿ ಹಾಗೂ ರಂಗಲೇಖನಗಳನ್ನು ಬರೆದಿದ್ದಾರೆ. ಅವರ ‘ಹೂಲಿ ಶೇಖರರ ನಾಟಕಗಳು’ ಕೃತಿಯ ಕುರಿತು ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಹೂಲಿ ಶೇಖರರ ನಾಟಕಗಳು
ಲೇಖಕರು: ಹೂಲಿ ಶೇಖರ್
ಪ್ರಕಾಶನ : ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ 
ಮುದ್ರಣದ ವರ್ಷ:೨೦೧೬
ಪುಟಗಳು: ೩೩೨
ಬೆಲೆ: ರೂ. ೨೨೦

‘ಜೋಕುಮಾರ ಸ್ವಾಮಿ ಕಲಾಬಳಗ’ ಎಂಬ ರಂಗತಂಡ ಕಟ್ಟಿ, ರಾಜ್ಯದಾದ್ಯಂತ ರಂಗ ಪ್ರದರ್ಶನಗಳನ್ನು ನೀಡಿದ್ದಾರೆ.’ಅಕ್ಷರಬ್ರಹ್ಮ ಮತ್ತು ಅಕ್ಷರ ಹುಲಿ’ ಎಂಬ ಬಿರುದಿಗೆ ಪಾತ್ರರಾದ ಇವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.ಇವರ ಈ ಕೃತಿಯಲ್ಲಿ ಸತ್ವಯುತವಾದ ಆರು ನಾಟಕಗಳಿವೆ.

ಕಥೆಯ ಜೊತೆಗೆ ನಾಟಕದ ಮೂಲಬೇರು ಅಲ್ಲಿ ಬರುವ ಸಂಭಾಷಣೆಗಳು. ಅವೇ ಪಾತ್ರಧಾರಿಯ ಅಭಿನಯದ ಮೂಲಕ ಪ್ರೇಕ್ಷಕನಿಗೆ ಕತೆಯನ್ನು ಹೇಳುತ್ತವೆ. ಅಂತಹ ಒಂದು ಉತ್ತಮ ಗುಣಮಟ್ಟದ ಸಂಭಾಷಣೆಗಳನ್ನು ಇಲ್ಲಿ ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ನವರಸ ತುಂಬಿ ಲೇಖಕರು ರೂಪಿಸಿ ಬರೆದ ಪರಿ ತುಂಬಾ ಇಷ್ಟವಾಯಿತು.

ನಾನು ಈ ಕೃತಿಯಲ್ಲಿನ ಎರಡು ಕಿರು ನಾಟಕಗಳನ್ನು ಪರಿಚಯಿಸುವೆ. ಮೊದಲನೆಯ ನಾಟಕದ ಶೀರ್ಷಿಕೆ ‘ಬೆಕುವ’. ಕೆಲವರು ರಾಜಕೀಯದ ಸಮಯ ಸಾಧಕ ಪ್ರವೃತ್ತಿಯಿಂದ ಹೇಗೆಲ್ಲಾ ತಮ್ಮ ಸ್ವಾರ್ಥ ಈಡೇರಿಸಿ ಕೊಳ್ಳುತ್ತಾರೆ ಎಂಬ ಅಂಶವನ್ನು ಸಾರುವ ನಾಟಕವಿದು.

ನಾಟಕದ ಆರಂಭದಲ್ಲಿ ಲಕುಮಿ ಮತ್ತು ಕೊಂಡಯ್ಯ ದಂಪತಿಗಳು ಸಾಕಿರುವ ಎರಡು ಕೋಳಿಗಳು ಕಾಣೆಯಾಗುತ್ತವೆ. ಲಕುಮಿ ಕೋಳಿ ತತ್ತಿಗಳನ್ನು ಮಾರಿ ಕಾಲಿಗೆ ಚೈನು ಮಾಡಿಸಿ ಕೊಳ್ಳುವಾಶೆ ಹೊಂದಿದ್ದರೆ, ಕೊಂಡಯ್ಯ ಕೋಳಿ ಸಂಸಾರ ಬೆಳೆಸಿ ಸೂರು ಕಟ್ಟುವ ಕನಸಿನಲ್ಲಿದ್ದ. ಈಗ ಕೋಳಿಗಳು ಕಾಣೆಯಾದ್ದರಿಂದ ಇಬ್ಬರೂ ಕಂಗಾಲಾಗುತ್ತಾರೆ.

ಆಗ ತಾನು ಕೋಳಿಗಳನ್ನು ಹುಡುಕಿ ಕೊಡುತ್ತೇನೆ ಎಂದು ಬಂದ ನೆರೆ ಮನೆಯ ‘ಬೆಕುವ’ ಎಂಬ ವ್ಯಕ್ತಿ ಈ ಸಣ್ಣ ಸಂಗತಿಯನ್ನು ಬಳಸಿಕೊಂಡು ಗಲ್ಲಿಯ ರೌಡಿ ಮಾಬಲಿಯನ್ನು, ಪೊಲೀಸರನ್ನು, ಬೀದಿ ವರ್ತಕರು ಮತ್ತು ಯುವಕರನ್ನು ಮಂತ್ರಿಗಳವರೆಗೆ ಒಯ್ದು ಚಾಣಾಕ್ಷತೆಯಿಂದ ಗದ್ದಲವೆಬ್ಬಿಸುತ್ತಾನೆ.

ಒಂದು ಬೆಂಕಿಕಿಡಿಯಿಂದ ಊರನ್ನೇ ಸುಡುವ ಧೂರ್ತ ಬುದ್ಧಿಯಿಂದ ಎಲ್ಲರನ್ನೂ ಮಟ್ಟ ಹಾಕುವುದಲ್ಲದೆ ತಾನು ಬಯಸಿದ ಕೊಂಡಯ್ಯನ ಹೆಂಡತಿ ಲಕುಮಿಯನ್ನೂ ವಶ ಮಾಡಿಕೊಳ್ಳುತ್ತಾನೆ.! ಇದು ನಾಟಕದಲ್ಲಿ ಕೆಲವೊಮ್ಮೆ ಅತಿ ರಂಜಿತವೆನಿಸಿದರೂ, ವಾಸ್ತವಕ್ಕೆ ಹತ್ತಿರವಾದ ಹಲವು ಅಂಶಗಳಿಲ್ಲಿವೆ.

ಈ ನಾಟಕದಲ್ಲಿ ಬರುವ ಮುಖ್ಯ ಪಾತ್ರಗಳು :
೧. ಕೊಂಡಯ್ಯ.
೨.ಲಕುಮಿ
೩. ಬೆಕುವ.
೪. ಮಾಬಲಿ.
೫. ಹವಾಲ್ದಾರ.
೬. ಎಮ್ಮೆಲ್ಲೆ.
೭. ಜನರು.. ಇತ್ಯಾದಿ.

ಸನ್ನಿವೇಶ: (ರಂಗದ ತುಂಬಾ ಕತ್ತಲು. ಹಿನ್ನಲೆಯಲ್ಲಿ ಸುಪ್ರಭಾತ ನಿಧಾನವಾಗಿ ಕೇಳುತ್ತಿದೆ. ಕೊಂಡಯ್ಯ ಆಕಳಿಸುತ್ತಾ ಎದ್ದು ಹೆಂಡತಿಗೆ ಕೋಳಿಗಳನ್ನು ಗೂಡಿನಿಂದ ಹೊರಬಿಡು… ಎನ್ನುವುದರೊಂದಿಗೆ ನಾಟಕ ಪ್ರಾರಂಭವಾಗುತ್ತದೆ)

ಲಕುಮಿ: ಕೇಳಿದೇನ…. ಬಾಯಿಲ್ಲೆ…

ಕೊಂಡಯ್ಯ: ತಡೀ ಒಂದೀಟ ಬೀಡಿಗೆ ಕಡ್ಡಿ ಕೊರಿಯಾಕ ಹತ್ತೇನಿ.

ಲಕುಮಿ: ಅಲ್ಲ… ನಿನ ಕೋಳಿಗೂಡು ನೋಡ ಬಾಯಿಲ್ಲೆ.

ಕೊಂಡಯ್ಯ: ಎಲೀ ಇವಳ.. ಗೂಡಿನ ಬಾಗಲಾs ತಗಿಯಾಕ ಬರೂದಿಲ್ಲ ಅಂದರ ಯಾರರ ನಕ್ಕಾರು! . ಮೈಯಾನ
ಕಸುವನ್ನ ರಟ್ಟೀಗೆ ತಗೊಂಡು ಎಳೀ ಬಾರದ. ಬಂದs ಬರತತಿ.

ಲಕುಮಿ: ಕಸುವಿನ ಮಾರೀಗೆ ಬೆಂಕಿ ಬಿತ್ತು. ಗೂಡಿನಾಗ ಕೋಳಿಗೂಳs ಇಲ್ಲ. ಬಂದು ನೋಡ ಬಾರದ.

ಇದು ಇಲ್ಲಿನ ಸಂಭಾಷಣೆಗಳ ಮಾದರಿಯ ತುಣುಕು. ಮೇಲೆ ವಿವರಿಸಿದ ಪೂರ್ತಿ ಕಥೆಯನ್ನು ಲೇಖಕರು ಇಂತಹ ಒಂದು ಪಾತ್ರದ ಮೂಲಕ ಅನಾವರಣ ಮಾಡುತ್ತಾರೆ.
ಓದುವಾಗ ಬಹಳ ಮಜವೆನಿಸುವ ಉತ್ತರ ಕರ್ನಾಟಕ ಕನ್ನಡದ ನುಡಿಗಟ್ಟುಗಳ ಮಾತುಗಳನ್ನು ಪ್ರತ್ಯಕ್ಷ ಕೇಳುವಾಗ ಇನ್ನೂ ಖುಶಿ ಕೊಡುತ್ತವೆ.

ಕೋಳಿ ಕಾಣೆಯಾದ ಪ್ರಕರಣ ಏನೆಲ್ಲಾ ರೋಚಕ ತಿರುವು ಪಡೆದು ಕೊಳ್ಳುತ್ತಾ ಹೋಗುತ್ತದೆ ಎನ್ನುವುದನ್ನು ಓದಿ… ಸಾಧ್ಯವಿದ್ದರೆ ನಾಟಕ ನೋಡಿ ತಿಳಿಯ ಬೇಕು.

*ಎರಡನೆಯ ನಾಟಕ * ಸತ್ಯವತಿ.

ಜಾನಪದ ಕಥಾನಕಗಳನ್ನು ರೂಪಕಕ್ಕೆ ಆಳವಡಿಸುವ ಯೋಜನೆಯಲ್ಲಿ ಲೇಖಕರು ೧೯೯೬ ರಲ್ಲಿ ಬರೆದ ನಾಟಕವಿದು. ಗೋಕಾಕ್ ನಾಡಿನ ಪ್ರತಿಭಾವಂತ ಜಾನಪದ ಕವಿ ‘ಕ್ಯಾಮಣ್ಣ’ ರಚಿಸಿದ ಸಾವಿರಾರು ಲಾವಣಿಗಳಲ್ಲಿ ‘ಸತ್ಯವತಿ’ ಯೂ ಒಂದು. ಇದರ ಮೊದಲ ಪ್ರಯೋಗ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನಲ್ಲಿ ನಡೆಯಿತೆನ್ನಲಾಗಿದೆ.

‘ಮನುಷ್ಯ ಎತ್ತರಕ್ಕೆ ಹೋಗುವುದು ಜಾತಿಯಿಂದ ಅಲ್ಲ. ಗುಣದಿಂದ’ ಎಂದು ಸಾರುವ ಈ ಲಾವಣಿ ಮನುಷ್ಯನ ಸ್ವಭಾವದಲ್ಲಿ ಸಾತ್ವಿಕಗುಣ ಉಂಟು ಮಾಡುವ ವಿಧಾನವನ್ನು ತಿಳಿಸುತ್ತದೆ.

ಇಲ್ಲಿನ ಪಾತ್ರಧಾರಿಗಳು :

೧. ಮುಮ್ಯಾಳ.
೨. ಹಿಮ್ಯಾಳ.
೩. ರಾಜಾ ಕೇಸರಿ.
೪. ಸತ್ಯವತಿ.
೫. ದುರುಗ.
೬. ತಾರಿ ಹಾಗೂ ಸೈನಿಕರು, ಮೇಳದ ಮಂದಿ.

( ಇಲ್ಲಿ ರಂಗದ ಸನ್ನಿವೇಶದ ವರ್ಣನೆ ಇದೆ. ಗಣಪತಿಯ ವೇಷಧಾರಿ ಕಾಣುತ್ತಾನೆ. ಮೊದಲು ಮಾತಿನೊಂದಿಗೆ ನಾಂದಿ ಹಾಡು ಕೇಳುತ್ತದೆ. ಅದು ಹೀಗಿದೆ ನೋಡಿ…)

” ಅಪಾ ಗಣಪತೀ. ಎಲ್ಲಿದಿಯೋs ಮಾರಾಯ… ಆಟಕ್ಕ ಹೊತ್ತಾತು. ನಿನ್ನ ಪೂಜಾ ಮಾಡಿ ನಟರೆಲ್ಲಾ ಕತೀ ಸುರೂ ಮಾಡಾವ್ರದಾರ…. ಲಗೂs ಬಾರೋ ನಿನಾಪ್ನ….” ಹೀಗೆ ಗಣಪತಿಗೆ ‘ನಿಂದನೆಪೂಜೆ’ ನಂತರ ‘ಸ್ತುತಿ’ ಹಾಡು ನೋಡಿ…

ಗಣಪತಿ ಮಂಗಳ ಮೂರ್ತಿ l
ಆಗ ನೀ ನಮಗ ಪ್ರಸನ್ನಾ l
ವಿಗ್ನದಿ ಬಂಧನ ಸಭಾಜನl
ರಂಜನ ಮಾಡು ಎನ್ನ ಪಾನ l
ಕ್ಯಾಮಣ್ಣಗ ಯಶ ಕೊಡೋ ಭಗವಂತಾl
ಯಶ ಕೊಡೋ ಭಗವಂತಾl

ಈಗ ಮುಮ್ಯಾಳ ಮತ್ತು ಹಿಮ್ಯಾಳ ಪಾತ್ರಗಳ ಮೂಲಕ ಹಾಸ್ಯಮಯವಾಗಿ ಕತೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಆ ಕಥಿ ಏನಪ್ಪಾ ಅಂದ್ರ….

ಆ ಊರಿನ ರಾಜಕುಮಾರಿ ಸತ್ಯವತಿ ಚೆಂದೊಳ್ಳಿ ಚೆಲುವೆ. ಆಕೀ ಹೂವಿನಂತಾಕಿ !. ಎಂಥಾ ರೂಪಾ..ಎಂಥಾ ನಡಿಗಿ..ಎಂಥಾ ದನಿ… ಅಂತಾಕಿs..ತನ್ನ ಗೆಳತ್ಯಾರ ಜೋಡಿ ‘ಪಾಯಿಖಾನಿ’ಗೆ ಹೋಗಲು ಅರಮನೆಯಿಂದ ಹೊರಗೆ ಬರುತ್ತಿದ್ದಳು. !

ರಾಜಕುಮಾರಿಯ ‘ಪಾಯಿಖಾನಿ’ ಸ್ವಚ್ಛ ಮಾಡಲು ಒಬ್ಬಾಕಿ ನಮ್ರ- ನಂಬುಗೆ- ಸಲಿಗಿಯ ಮುದುಕಿ ಇದ್ದಳು. ಆಕೀ ಹೆಸರಾs ತಾರಿ.!

ಆಕೀ ತೊಳೆದ ಪಾಯಖಾನೀ ಅಂದರ ಹೆಂಗೈತಿ ಅಂತೀರಿ.. ಏನ ಗ್ವಾಡಿ.. ಏನ ಬಣ್ಣ.. ಒಳಗ ಕುಂತರ ನಾನಾ ನಮೂನಿ
ಚಿತ್ತಾರಗಳು.! ಬಂಗಾರದ ತಗಡು ಬಡಿದಿರೋ ಬಾಗಲ.. ಮುತ್ತಿನ ಗೊಂಡೆ ಹಚ್ಚಿರೋ ಕದಾ.. ಒಳಗ ಹೋಗಿ
ಕುಂಡ್ರೂದs ತಡಾ. ಗಂಧದ ಎಣ್ಣೆದೀಪ ಬೆಳಗತಾವು. ಸ್ವರ್ಗ ಅರಮನ್ಯಾಗೂ ಐತಿ… ಪಾಯಿಖಾನ್ಯಾಗೂ ಐತಿ.!!

ಮುಮ್ಯಾಳ ತಾರಿ ಜೊತೆ ಮಾತಾಡ್ತಾ ನಿಂತಾಗ…

ರಾಜಕುಮಾರಿ ಬಂದಿದ್ದು ನೋಡಿ ಬೇಗನೆ ತಲೆಗೆ ಸೆರಗು ಹೊದ್ದು ಹೆಂಗಸಂತೆ ನಟಿಸಿ ತಾನು ‘ತಾರಿ ಓರಗಿತ್ತಿ’ ಮಾಳವ್ವ ಊರಿಂದ ಬಂದೇನೀ ಎಂದು ಸುಳ್ಳು ಹೇಳುತ್ತಾನೆ. ಯಾಕೆಂದರೆ ರಾಜಕುಮಾರಿಯ ಅರಮನೆಗೆ ಗಂಡಸರಿಗೆ ಪ್ರವೇಶವಿರಲಿಲ್ಲ.! ಹಾಗಾಗಿ ಬೆಣ್ಣೆ ಮಾತಾಡಿ ತಾರೀನ ಊರಿಗೆ ಕರಕೊಂಡು ಹೋಗಲು ಅನುಮತಿ ಬೇಡುತ್ತಾನೆ.ಆಗಲೇ ‘ಆಕೀ ಹೋದ್ರೆ ಪಾಯಿಖಾನಿ ತೊಳೆಯೋರು ಯಾರು?’ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಮಾಳವ್ವನು ತಾರಿ ಮಗ ‘ದುರುಗ’ ಯಾವಾಗಲೂ ಅರಮನೆ ನೋಡಬೇಕೆಂದು ಕನಸು ಕಾಣುತ್ತಿದ್ದನ್ನು ನೆನಪಿಸಿ, ‘ಅವನು ರಾತ್ರಿ ಬಂದು ಸ್ವಚ್ಛತೆ ಮುಗಿಸಿ ಹೋಗುತಾನ ಅಷ್ಟೇ ಹಗಲು ಬರುವುದಿಲ್ಲ…’ಎಂದು ಹೇಗೋ ಸತ್ಯವತಿಯನ್ನು ಒಪ್ಪಿಸುತ್ತಾಳೆ.

ಮರುದಿನ ಪಾಯಿಖಾನಿ ಉಡುಗಲು ಬಂದ ದುರುಗ ‘ಹಾಲಿನಲ್ಲಿ ಜಳಕಾ’ ಮಾಡಿ ಬಂದಂತ ಸತ್ಯವತಿ ರಾಜಕುಮಾರಿಯನ್ನು ಕಂಡು ಮೋಹಗೊಳ್ಳುತ್ತಾನೆ!.

ದುರುಗ: ‘ಮಿಂಚಿನಬಳ್ಳಿ ನನ್ನ ಕಾಲನ್ನ ಸುತ್ಯಾವ… ನಾ ಹ್ಯಾಂಗ ನಡೆಯಲಿ ಮುಂದs .ಯವ್ವಾ..ನಂಗ ಆಕೀನ ಲಗ್ನ ಮಾಡಿಸು.’ಎಂದು ಹಲುಬುತ್ತಾನೆ.

‘ಮಗನs.. ನಿನ್ನ ವಯಸಿನಾಗೆ ಮನಸು ಕುದುರೆ ಆಗಿರತತಿ.

ಲಗಾಮು ಕೈಯಾಗ ಇದ್ದರ ಸವಾರಿ ಬರೋಬರಿ ಆಗತತಿ. ಕಾಮದ ಹುಚ್ಚು ಭಾಳ ಕೆಟ್ಟದ್ದು. ಬಿಟ್ಟು ಬಿಡೋ..’ ಎಂದೆಷ್ಟು ಬುದ್ಧಿ ಹೇಳಿದರೂ, ದುರುಗ ಕೇಳದಾದಾಗ ತಾರಿ ಒಂದು ಉಪಾಯ ಮಾಡುತ್ತಾಳೆ.

ರಾಜಕುಮಾರಿ ಸತ್ಯವತಿಯನ್ನು ಮೆಚ್ಚಿಸಲು ತಾರಿ ಪಾಯಿಖಾನಿಯನ್ನು ಗಂಧದ ಎಣ್ಣೆ ಸಿಡಿಸಿ ಹೂ ವಾಸನೆ ಮಾಡಿ, ಬಾಗಿಲನ್ನು ನಾನಾ ಜಾತಿ ಹೂವು ಸುರುವಿ ಸಿಂಗರಿಸಿ ‘ಮಗಳ.. ನಾ ಇರೂದ ನಿನ್ನ ಸೇವಾ ಮಾಡೂದಕ್ಕಾ.’…ಎಂದು ಅಕ್ಕರೆ ವ್ಯಕ್ತಪಡಿಸುತ್ತಾಳೆ.

ಆಗ ಸತ್ಯವತಿ ‘ಎಂಥಾ ವಿಶ್ವಾಸ ಇಟಗೊಂಡಿ ನಮಮ್ಯಾಲ. ಪ್ರೀತಿ ತೋರಿದಾವ್ರಿಗೆ ಪ್ರತಿ ಏನಾರೂ ಕೊಡಬೇಕು. ನನ್ನಿಂದ ಏನಾಗ ಬೇಕು?…..ಕೇಳುತ್ತಾಳೆ.

ಹಂಗಾದರೆ ನನ್ನ ಕೈ ಮೇಲೆ ಕೈಹಾಕು ಕೇಳತೀನಿ ಎನ್ನುತ್ತಾ… ‘ಯವ್ವಾ ಮಗಳಾ.. ನನ್ನ ಮಗ ನಿನ್ನ ರೂಪಕ್ಕೆ ಮಳ್ಳಾಗಿ ಹಾಸಿಗೆ ಹಿಡಿದು ಬಿದ್ದಾನು. ನೀ ಅವ್ನ ಕೈ ಹಿಡಿದು ಜೀವಾ ಕಾಯಿ ತಾಯಿ…’ ಎಂದಾಗ.. ಸತ್ಯವತಿ ‘ಮುದುಕ್ಯಾದಿ ತಿಳಿಲಿಲ್ಲೇನಾ.. ಶೂದ್ರ ಕುಲದ ನಿನ್ನ ಮಗ ನನಗ ಸಾಟಿಯೇನಾ? ‘ಎಂದು ತಾರೀಯನ್ನು ಜರಿದಾಗ, ನೀನು ವಚನ ಕೊಟ್ಟಿದ್ದೀ.. ತಪ್ಪ ಬೇಡ ಎಂದು ನೆನಪಿಸುತ್ತಾಳೆ.

ಆಗ ೪೨ ದಿನ ಅತ್ತಿತ್ತ ನೋಡದೇ, ಉಪವಾಸದಿಂದಿದ್ದು ಶಿವನ ಪೂಜೆ ಮಾಡಿದರೆ ಮಾತ್ರ ತಾನು ದುರುಗನನ್ನು ವರಿಸುವೆ ಎಂದು ರಾಜಕುಮಾರಿ ಷರತ್ತು ಹಾಕುತ್ತಾಳೆ. ನಂತರ ದುರುಗ ಈ ಷರತ್ತು ಗೆದ್ದರೂ…ಮಾನಸಿಕವಾಗಿ ಬದಲಾಗಿ ನಿಜವಾಗಿಯೂ ಶಿವಭಕ್ತನೇ ಆಗಿರುತ್ತಾನೆ!!.

ಈಗ ಸತ್ಯವತಿ ಸೋತು ದುರುಗನಲ್ಲಿ ಬಂದಾಗ ‘ಓಂ ಸಿವ ಸಿವಾ.. ‘ಎಂದು ಮಂತ್ರದೊಂದಿಗೆ ಕಣ್ಮುಚ್ಚಿ ಕುಳಿತವ ಮದುವೆಯನ್ನು ನಿರಾಕರಿಸುತ್ತಾನೆ.

ಸತ್ಯವತಿಯ ತಂದೆ ರಾಜಕೇಸರಿ ಈಗ ಮಗಳಿಗೆ ಬುದ್ಧಿ ಹೇಳಲು ರಂಗಪ್ರವೇಶ ಮಾಡುತ್ತಾನೆ. ! ‘ಅರಮನೆಗೆ ಹೋಗೋಣು ನಡಿs ಮಗಳಾ.. ಚಂದ ಯುವರಾಜನ್ನ ತಂದು ಮದುವೆ ಮಾಡತೇನಿ.. ನಿನಗ…’ ಎಂದರೆ ಆಕೆ ಕೇಳುವುದಿಲ್ಲ.

‘ಮೋಹ ಗೆದ್ದ ಮಹಾಪುರುಷ ಆಗ್ಯಾನು ದುರುಗ. ಎಂದಿದ್ದರೂ ಅವನೇ ನನ್ನ ಗಂಡ. ಅವ ಹೇಳುs ಹಂಗ ಆತ್ಮಕ್ಕೆ ಕುಲ -ಗೋತ್ರ ಶ್ರೀಮಂತಿಕಿ ಎಲ್ಲೆತಿ? ಇಬ್ಬರ ಆತ್ಮಕ್ಕ ಆಗಲಿ ಮದುವಿ.. ಅವನ ನೆರಳಾಗಿ ನಾನಿರತೀನಿ…’ ಎನ್ನುವಳು.

ಹಂಗಾರs ಆಕಿ ಏನ್ ಮಾಡಿದಳು?… ಎನ್ನುವ ನಂತರದ ನಾಟಕದ ಮುಕ್ತಾಯದ ಸನ್ನಿವೇಶದ ಚಿತ್ರಣವಿದೆ. ವಿನೋದಮಯವಾದ ಈ ನಾಟಕ ಅರ್ಥಪೂರ್ಣವೂ ಆಗಿದೆ.

ಇಂದಿಗೂ ಜಾತ್ರೆ ಹಾಗೂ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ನಡೆಯುವ ಎಷ್ಟೋ ನಾಟಕಗಳು ತಮ್ಮದೇ ಆದ ಮೆರಗಿನ ಮೂಲಕ ಜನಾಕರ್ಷಣೆಯನ್ನು ಉಳಿಸಿಕೊಂಡಿವೆ. ಈ ಸಾಂಸ್ಕ್ರತಿಕ ಕಲಾಪ್ರಕಾರದಲ್ಲಿ ಇಂತಹ ಹೊಸ ಹೊಸ ಪ್ರಯೋಗಗಳಾಗುತ್ತಿರುವುದೇ ಬಹಳ ಸಂತೋಷದ ವಿಷಯ.

ಇಲ್ಲಿರುವ ಎಲ್ಲಾ ನಾಟಕಗಳೂ ಮನೋರಂಜನೆಯ ಜೊತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶವೊಂದನ್ನು ನೀಡುತ್ತದೆನ್ನುವುದು ಸತ್ಯ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW