‘ಜನ ಅರಣ್ಯ’ ಚಿತ್ರದ ಚಿತ್ರೀಕರಣ ಸಂದರ್ಭ

ಆದರ್ಶಗಳನ್ನು ಹೊತ್ತ ಪದವೀಧರ ಯುವಕನೊಬ್ಬ, ನೈತಿಕತೆಯನ್ನೇ ಪಣಕ್ಕಿಟ್ಟು ಹಣ ಸಂಪಾದನೆಗಾಗಿ ಭ್ರಷ್ಟಗೊಳ್ಳುವ ಕಥೆಯೇ ‘ಜನ ಅರಣ್ಯ’. ಇದನ್ನು ಸತ್ಯಜಿತ್ ರೇ ನಿರ್ದೇಶಿಸಿದ್ದಾರೆ. ಸತ್ಯಜಿತ್ ರೇ ಹಾಗೂ ‘ಜನ ಅರಣ್ಯ’ ಚಿತ್ರದ ಕುರಿತು ಲೇಖಕರಾದ ರಾಘವನ್ ಚಕ್ರವರ್ತಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

‘ಜನ ಅರಣ್ಯ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಕಾರಿನ ಡಿಕ್ಕಿಯ ಒಳಗೆ ಪಟ್ಟಾಗಿ ಕುಳಿತು ತಾವೇ ಕ್ಯಾಮೆರಾ ಹಿಡಿದಿರುವ ನಿರ್ದೇಶಕ ಸತ್ಯಜಿತ್ ರೇ. ಸಹನಿರ್ದೇಶಕಿ (ಸುಹಾಸಿನಿ ಮುಳೆ) ಯ ಪಕ್ಕ ನಿಂತಿರುವವರು, ರೇ ಅವರ ಬಹುತೇಕ ಚಿತ್ರಗಳ ಛಾಯಾಗ್ರಾಹಕ ಸೌಮೇಂದು ರಾಯ್. ಲೈಟ್ ಬಾಯ್ ಯಿಂದ, ಕಲಾ ನಿರ್ದೇಶಕನ ವರೆಗಿನ ಎಲ್ಲಾ ಇಲಾಖೆಗಳಲ್ಲೂ ನಿರ್ಭಿಡೆಯಿಂದ ಒಗ್ಗಿಕೊಳ್ಳುವ ಮನೋಭಾವದ ರೇ, ’ಶ್ರೇಷ್ಟ’, ’ಮಹಾನ್’ ಮುಂತಾದ ಕ್ಲೀಷೆಗಳನ್ನು ಕಳಚಿಕೊಂಡು, ಸೆಟ್ ನಲ್ಲಿ ತಾವೂ ದುಡಿದು ಎಲ್ಲರಿಂದಲೂ ’ಬೆಳೆ’ ತೆಗೆಸುತ್ತಿದ್ದವರು. ತಮ್ಮ ಓರಗೆಯ ರಿತ್ವಿಕ್ ಘಟಕ್, ಮೃಣಾಲ್ ಸೇನ್, ಬಿಮಲ್ ರಾಯ್, ಬುದ್ಧದೇವ್ ದಾಸ್ ಗುಪ್ತ, ಬಸು ಚಟರ್ಜಿ, ಹೃಷಿ ದಾ ಮುಂತಾದವರ ಏಳಿಗೆಯನ್ನು ಪ್ರಜ್ಞಾಪೂರ್ವಕವಾಗಿ ಗಮನಿಸುತ್ತಾ ತಮ್ಮ ಹಾದಿ, ಸ್ಥಾನಗಳನ್ನು ಎಚ್ಚರದಿಂದ ಕಾದುಕೊಂಡರು.

ರಿತ್ವಿಕ್-ರೇ ದ್ವಯರ ಮುಂದೆ ಮೃಣಾಲ್ ಸೇನ್ ಸಪ್ಪೆ ಎನಿಸುವುದು ಸಹಜವಾದರೂ, ಪ್ರತಿಭೆಯಲ್ಲಿ ಅವರೇನೂ ಕಡಿಮೆಇರಲಿಲ್ಲ. ನಿರೂಪಣೆಯಲ್ಲಿನ ತೀವ್ರತೆ, ಸೂಕ್ಷ್ಮಗಳನ್ನು ಕಟ್ಟಿಕೊಡುವ ಕುಸುರಿ, ಸಾಮಾಜಿಕ ವಾಸ್ತವಗಳನ್ನು ಸಿನಿಮಾದ ಭಾಷೆಗೆ ಎಳೆತರುವ ಜಾಣ್ಮೆಗಳಲ್ಲಿ, ರಿತ್ವಿಕ್ ಈ ಎಲ್ಲರಿಗಿಂತ ಮುಂದಿದ್ದರು. ಆದರೆ ರೇ ಅವರಲ್ಲಿದ್ದ sophistication ರಿತ್ವಿಕ್ ರಲ್ಲಿ ಇರಲಿಲ್ಲ. ರೇ ಭಾರತದ ಆಚೆ ತಲೆ ನಿಮಿರಿಸಿ ನೋಡಿದರು. ರಿತ್ವಿಕ್, ಭಾರತದ ವಿಶೇಷವಾಗಿ ಬಂಗಾಳದ ಸಮಾಜವನ್ನು ಸೂಕ್ಷ್ಮದರ್ಶಕದಲ್ಲಿ ನೋಡುತ್ತಾ ಸಾಗಿದರು. ಸಾಗರದಾಚೆಗೆ ಅವರ ದೃಷ್ಟಿ ಹೋಗಲಿಲ್ಲ.

ಅದೇನೇ ಇರಲಿ…ವಿಶ್ವ ಸಿನಿಮಾ ರಂಗ ಭಾರತದತ್ತ ಬೆರಗುಗಣ್ಣಿನಿಂದ, ಈರ್ಷ್ಯೆಯಿಂದ ನೋಡುವಂತೆ ಮಾಡಿದ ರೇ, ಭಾರತೀಯರ ಹೆಮ್ಮೆ. ಫೋಟೋಗ್ರಫಿ-ಪೇಂಟಿಂಗ್ ಮೊದಲಾದ ಹಲವು ಕಲೆಗಳಲ್ಲಿ, ಕಥೆ-ಕಾವ್ಯ-ಪ್ರಬಂಧ ಮೊದಲಾದ ಹಲವು ಸಾಹಿತ್ಯ ಪ್ರಾಕಾರಗಳಲ್ಲಿ ಅಪಾರ ಪರಿಶ್ರಮವಿದ್ದ ರೇ, ಆ ಎಲ್ಲಾ ಪರಿಶ್ರಮಗಳನ್ನೂ ಹೆಪ್ಪುಗಟ್ಟಿಸಿ ಸಿನಿಮಾ ಕೃಷಿ ಮಾಡಿದರು. ೫೦ರ ದಶಕದವರೆಗೂ ಸಿನಿಮಾವನ್ನು ಓದುತ್ತಾ ಬೆಕ್ಕಸಬೆರಗಾಗುತ್ತಿದ್ದ ರೇ , ತಾವೂ ಒಂದುದಿನ ಸಿನಿಮಾ ನಿರ್ದೇಶನ ಮಾಡಿಬಿಡಬೇಕೆಂದು ಸಂಕಲ್ಪಿಸಿಕೊಂಡರು. ಆದರೆ ಧೈರ್ಯವಿರಲಿಲ್ಲ. ೧೯೫೦ರ ಒಂದು ದಿನ, ಆಗಷ್ಟೇ ಬಿಡುಗಡೆಯಾಗಿ ಒಂದು ವರ್ಷವಾಗಿದ್ದ, ವಿಟ್ಟೊರಿಯೊ ಡಿ ಸಿಕಾ ನಿರ್ದೇಶಿಸಿದ ಅವಿಸ್ಮರಣೀಯ ಚಿತ್ರ ’ಬೈಸಿಕಲ್ ಥೀವ್ಸ್’ ನೋಡಿದ ರೇ, ರೋಮಾಂಚನಕ್ಕೊಳಗಾದರು. ತಾವು ಸಿನಿಮಾ ಲೋಕ ಪ್ರವೇಶಿಸಲು ಸಕಲ ತಯಾರಿ ಮಾಡಿಕೊಂಡರು. ಬಹಳಷ್ಟು ಹೊಸಬರನ್ನು ಸೇರಿಸಿಕೊಂಡು ೧೯೫೬ ರಲ್ಲಿ, ಭಾರತೀಯ ಸಿನಿಮಾಗೆ ವಿಶಿಷ್ಟ ಅಸ್ಮಿತೆ ತಂದುಕೊಟ್ಟ ‘ಪಥೇರ್ ಪಾಂಚಾಲಿ’ ಮಾಡಿದರು. ಅಲ್ಲಿಂದ ಮುಂದೆ ಭಾರತೀಯ ಸಿನಿಮಾದ ಪಾಲಿಗೆ ಕುರೊಸಾವ, ಬರ್ಗ್ ಮನ್, ಎಲ್ಲವೂ ಆದರು.

ಫೋಟೋ ಕೃಪೆ : ಅಂತರ್ಜಾಲ

ರೇ ಅವರ ಬಗ್ಗೆ ಹೆಚ್ಚು ಬರೆಯುವುದೇನೂ ಇಲ್ಲ. ಅಪೂರ್ ಸಂಸಾರ್, ಅಶೋನಿ ಸಂಕೇತ್ ತರದ ಚಿತ್ರಗಳನ್ನು ಬಹುಶಃ ಇನ್ನ್ಯಾವ ನಿರ್ದೇಶಕರೂ ಮಾಡಲಾರರು. (ರಿತ್ವಿಕ್ ರ ಅಜಾಂತ್ರಿಕ್, ನಾಗರಿಕ್ ಚಿತ್ರಗಳೂ ಸಹಾ). ಅಪೂರ್ ತ್ರಿವಳಿ (ಪಥೇರ್ ಪಾಂಚಾಲಿ, ಅಪರಜಿತೊ, ಅಪೂರ್ ಸಂಸಾರ್)ಅಥವಾ ಅಶೋನಿ ಸಂಕೇತ್ ಮಟ್ಟದಲ್ಲದ ಚಿತ್ರವಾದರೂ ’ಜನ ಅರಣ್ಯ’(’ಮಧ್ಯವರ್ತಿ’ Middlemanಅಥವಾ ಸೇಲ್ಸ್ ಮ್ಯಾನ್)ಕ್ಕೆ ರೇ ದಿಗ್ದರ್ಶಿಸಿದ ಚಿತ್ರಗಳಲ್ಲೇ ಒಂದು ವಿಶಿಷ್ಟ ಸ್ಥಾನವಿದೆ. ೭೦ರ ದಶಕದ ಕಲ್ಕತ್ತೆಯ ಯುವಜನಾಂಗದ ಕೋಟಲೆ, ಗೊಂದಲ, ಅಸಹನೆ,ಅಸಹಾಯಕತೆ, ಕನಸುಗಳು ನನಸಾಗಲಾರವೆಂಬ ವಾಸ್ತವದ ಅರಿವಾದಾಗ ಏರ್ಪಡುವ ಹತಾಶೆಗಳನ್ನು ರೇ ಸಿನಿಮಾದ ಭಾಷೆಯಲ್ಲಿ ಲೀಲಾಜಾಲವಾಗಿ ಹೇಳುವ ಶೈಲಿ ಬೆರಗಾಗಿಸುತ್ತದೆ. ಚಿತ್ರಮಾಧ್ಯಮದ ಮೇಲೆ, ಚಿತ್ರ ವ್ಯಾಕರಣದ ಮೇಲೆ ರೇ ಅವರಿಗಿದ್ದ ಹಿಡಿತಕ್ಕೆ ’ಜನ ಅರಣ್ಯ’ ಮತ್ತೊಂದು ನಿದರ್ಶನವಾಗಿದೆ. ಇದು ಮಣಿ ಶಂಕರ್ ಮುಖರ್ಜೀ (ಶಂಕರ್) ಅವರ ಕಾದಂಬರಿಯನ್ನು ಈ ಚಿತ್ರ ಆಧರಿಸಿದೆ.

ಚಿತ್ರದ ನಾಯಕ ಸೋಮನಾಥ್ ಬ್ಯಾನರ್ಜಿ ಪದವೀಧರ. ಕೆಳ ಮಧ್ಯಮವರ್ಗದ ಕುಟುಂಬ. ತಂದೆಗೆ ಆರೊಗ್ಯವಿಲ್ಲ. ತಾಯಿ ಮನೆಕೆಲಸಕ್ಕೆ ಸೀಮಿತೆ. ಪ್ರತಿಭಾವಂತನೇನೂ ಅಲ್ಲದ ಸೋಮನಾಥ್ ಮುಕ್ಕರಿದು ಪದವಿ ಮುಗಿಸಿದ್ದಾನೆ. ಆದರೆ ಕನಸುಗಳು ವಿಪರೀತ. ಕಲ್ಕತ್ತೆಯ ಗಲ್ಲಿಗಳಲ್ಲಿ ಹುಡುಕಿದರೂ ಕೆಲಸವಿಲ್ಲ. ಕೆಲಸ ಸಿಗುವವರೆಗೂ ಅನುಭವ ಸಿಗಲಾರದು. ಎಲ್ಲರೂ ಅಪೇಕ್ಷಿಸುವ ಅನುಭವ ಸೋಮನಾಥ್ ಬಳಿ ಇಲ್ಲ. ಸ್ವಂತ ಕೆಲಸ ಮಾಡಲು ಬಂಡವಾಳವಿಲ್ಲ.

೭೦ರ ದಶಕದ ಕಲ್ಕತ್ತೆಯ ಕಾಲೇಜು-ವಿಶ್ವವಿದ್ಯಾಲಯಗಳನ್ನು ಚಿತ್ರಿಸಿರುವ ರೀತಿಯೇ ಅಚ್ಚರಿಗೊಳಿಸುತ್ತದೆ. ಪರೀಕ್ಷಾ ಕೊಠಡಿಗಳ ಮೇಲೆ ರಾರಾಜಿಸುವ ಎಡಪಂಥೀಯರ ಘೋಷವಾಕ್ಯಗಳು, ರಾಜಾರೋಷವಾಗಿ ಕಾಪಿ ಹೊಡೆಯುವ ವಿದ್ಯಾರ್ಥಿಗಳನ್ನು ಕಂಡೂ ಏನೂ ಮಾಡಲಾಗದ, ನಿವೃತ್ತಿಯ ವಯಸ್ಸು ತಲುಪುತ್ತಿರುವ ಪ್ರಾಧ್ಯಾಪಕರು ನಮ್ಮ ಕಣ್ಣ ಮುಂದೆಯೇ ಹಾದುಹೋಗುವಂತಹ ಸಹಜ ಅನುಭವ ಕೊಡುತ್ತಾರೆ. ಉತ್ತರಪತ್ರಿಕೆಗಳನ್ನು ಹೊತ್ತು ಮೂರನೆಯ ಮಹಡಿಯ ಮೂಲೆಯಲ್ಲೆಲ್ಲೋ ಸಣ್ಣ ಮನೆ ಹೊಂದಿರುವ ಸಂಬಳ ಸಾಲದ, ಭೂಭಾರವನ್ನೆಲ್ಲಾ ತಾನೇ ಹೊತ್ತಿರುವೆನೆಂಬ ವಿಚಿತ್ರ ಭ್ರಮೆಯ ಅಧ್ಯಾಪಕನಿಗೆ ಕಣ್ಣಿನ ಸಮಸ್ಯೆ ಇದೆ. ಆತನ ದಪ್ಪ ಕನ್ನಡಕದ ದಪ್ಪ ಗಾಜಿಗೂ, ಸೋಮನಾಥನ ಸಣ್ಣ ಅಕ್ಷರಗಳು ಗೋಚರಿಸುತ್ತಿಲ್ಲ. ಹೊಸ ಕನ್ನಡಕ ಕೊಳ್ಳಲು ಸಂಬಳ ಸಾಲದು. ’ಪಕ್ಕದ ಮನೆ ಅಂಕಲ್ ಗೆ ಒಂದು ಗಂಟೆ ಹೊತ್ತು ಅವರ ಕನ್ನಡಕ ಬೇಕು ಅಂತ ಕೇಳಿ ತೆಗೆದುಕೊಂಡು ಬಾ’ ಎಂದು ಮಗನಿಗೆ ಆಜ್ಞಾಪಿಸುವ ಮೇಷ್ಟ್ರು ಮಹಾಶಯನಿಗೆ ಹೆಂಡತಿಯಿಂದ ತಿವಿತ. ’ಅವರಿವರ ಕನ್ನಡಕ ಯಾಕೆ…ನೀವೇ ಒಂದು ತೊಗೋಬಾರ್ದೇ?’..ಅಧ್ಯಾಪಕ ಗುಡುಗುತ್ತಾನೆ. ’ನಾವು ಭೂತಗಾಜು ಇಟ್ಟುಕೊಂಡು ಇವರ ಪೇಪರ್ ನ ನೋಡಬೇಕಾ?…ದುಡ್ಡು ಯಾರು ಕೊಡ್ತಾರೆ??’. ಅಷ್ಟರಲ್ಲಿ ಕನ್ನಡಕ ಎರವಲು ಪಡೆಯಲು ಹೋದ ಮಗ ’ಅಂಕಲ್ ಊರಲ್ಲಿಲ್ಲವಂತೆ’ ಎನ್ನುತ್ತಾ ಬರಿಗೈಲಿ ವಾಪಸಾಗುತ್ತಾನೆ. ತನ್ನ ಕಣ್ಣಿಗೆ ಕಂಡಷ್ಟು ಉತ್ತರಗಳಿಗೆ ಅಂಕ ಹಾಕಿದ ಅಧ್ಯಾಪಕ ಕೈ ತೊಳೆದುಕೊಳ್ಳುತ್ತಾನೆ. ಮಧ್ಯಮವರ್ಗದ ಸಿನಿಕ ಮೇಷ್ಟ್ರೊಬ್ಬರ ಹಪಾಹಪಿಯನ್ನು ರೇ, ನಮ್ಮ-ನಿಮ್ಮ ಮನೆಗಳಲ್ಲೇ ನಡೆಯಬಹುದಾದ ಕೋಟಲೆಯಷ್ಟೇ ಸಹಜವಾಗಿ ತೆರೆಯ ಮೆಲೆ ಮೂಡಿಸುತ್ತಾರೆ.

೭೦ರ ದಶಕದ ಹಿರಿಯ-ಕಿರಿಯರ ಮನಃಸ್ಥಿತಿಯ್ ಅನಾವರಣಗೊಳ್ಳುವ ಹಲವು ದೃಶ್ಯಗಳನ್ನು ರೇ ಕಟ್ಟಿಕೊಡುತ್ತಾ ಹೋಗುತ್ತಾರೆ. ಆ ಕಾಲಘಟ್ಟದಲ್ಲಿ ಪ್ರಖರ ಅಸ್ಮಿತೆ ಕಂಡುಕೊಳ್ಳುತ್ತಿದ್ದ ನಕ್ಸಲ್ ಚಳುವಳಿಯ ಬಗ್ಗೆ ಸೋಮನಾಥನ ತಂದೆಗೆ ತೀವ್ರ ಆತಂಕ..ಅಷ್ಟೇ ಕುತೂಹಲ ಕೂಡಾ..ತಮ್ಮ ಮಕ್ಕಳೂ ಯುವಕರು. ಅವರೇನಾದರೂ ದಾರಿ ತಪ್ಪಿ ಬಿಟ್ಟಾರು ಎಂಬುದೇ ಆತಂಕಕ್ಕೆ ಕಾರಣ. ’ಈ ಯುವಕ-ಯುವತಿಯರಿಗೆ ಏನಾಗಿದೆ. ಸ್ವಲ್ಪವೂ ವಿವೇಚನೆಯೇ ಇಲ್ಲದೇ ಏಕೆ ಸಾವಿಗಾಗಿ ಪರಿತಪಿಸುತ್ತಾರೆ?..’ ಎಂಬ ಪ್ರಶ್ನೆಯನ್ನು ಮಕ್ಕಳಲ್ಲಿ ಕೇಳುತ್ತಾನೆ. ಸ್ವತಃ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಆತನಿಗೆ ’ಯುವಕರ ಮನಃಸ್ಥಿಯೇ’ ಅರ್ಥವಾಲೊಲ್ಲದು. ಬ್ರಿಟಿಷರು ಹೊರಗಿನ ಶತ್ರುಗಳಾಗಿದ್ದು ಅವರು ಹೊರನಡೆದ ಮೇಲೆ ಆಂತರಿಕ ಶತ್ರುಗಳು ಹೆಚ್ಚಾಗಿ ಬಹಳ ಸಮಸ್ಯೆಗಳನ್ನು ಸೃಷ್ಟಿಸಿದ್ದನ್ನು ಆತ ಒಪ್ಪಲಾರ. ಆತನಿಗೆ ಇದೆಲ್ಲಾ ’ತಮ್ಮ ಪೀಳಿಗೆಗಳ ನಡುವಿನ ಹೆಚ್ಚುತ್ತಿರುವ’ ಅಂತರವಾಗಿಯೇ (generation gap)ಕಾಣುತ್ತಿದೆ. ಡಿಗ್ರೀ ಮುಗಿಸಿದ ಮೇಲ್ಜಾತಿಯ ಸೋಮನಾಥ್ ಗೆ ಬಿಸಿನೆಸ್ ಮಾಡಲು’ ಆಸಕ್ತಿಯಿಲ್ಲ. ಸಂಬಳ ಬರುವ ’ಆರಾಮ’ವಾಗಿ ಇರುವ ಉದ್ಯೋಗಕ್ಕಾಗಿಯೇ ಆತ ಎದುರು ನೋಡುತ್ತಾನೆ. ’ನಮ್ಮ ಕುಟುಂಬದಲ್ಲೇ ಯಾರೂ ಬಿಸಿನೆಸ್ಸ್ ಮಾಡಿಲ್ಲಾ’ ಎಂದು ತಂದೆಯ ತಿರಸ್ಕಾರ ಬೇರೆ.

ಸೋಮನಾಥ್ ‘ಮಧ್ಯವರ್ತಿ’ಯ ಕೆಲಸ ಮಾಡಲು ನಿರ್ಧರಿಸುತ್ತಾನೆ. ದೂರದ ಬೆಟ್ಟ ನುಣ್ಣಗೆ ಕಾಣುತ್ತದೆ. ನಂಬಿಕೆ-ಮೌಲ್ಯಗಳ ಅಧಃಪತನ ಕಾಣುತ್ತಿರುವ ಕಲ್ಕತ್ತೆಯಲ್ಲಿ ಸೋಮನಾಥ್, ಮಧ್ಯವರ್ತಿಯ ಕೆಲಸ ಮಾಡುವುದೂ ದುಸ್ತರ ಎಂಬುದು ಮನದಟ್ಟಾಗುತ್ತದೆ. ತಾನು ಬೆಳೆದು ಬಂದ ಬಗೆ, ತನ್ನ ಸಾತ್ವಿಕ ವೆನಿಸುವ ಸ್ವಭಾವಗಳನ್ನೆಲ್ಲಾ ಪಕ್ಕಕ್ಕಿರಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸೋಮನಾಥ್ ಒಗ್ಗಿಕೊಳ್ಳಲಾರಂಭಿಸುತ್ತಾನೆ. ತನ್ನ ಈ ಮಧ್ಯವರ್ತಿಯ ಉದ್ಯೋಗಪರ್ವದಲ್ಲಿ, ತನ್ನಂತೆಯೇ ಹತಾಶನಾದ ಟ್ಯಾಕ್ಸಿ ಚಾಲಕ ಸುಕುಮಾರ್ ನ ಪರಿಚಯವಾಗುತ್ತದೆ. ಕೆಲವೇ ದಿನಗಳಲ್ಲಿ ಸುಕುಮಾರ್ ಆತ್ಮೀಯನಾಗಿಬಿಡುತ್ತಾನೆ. ಸೋಮನಾಥ್ ಮೌಲ್ಯ-ನೈತಿಕತೆಗಳನ್ನು ಇಷ್ಟಪಡದ ಮಧ್ಯವರ್ತಿಯ ಕಸುಬಿಗೆ ಕ್ರಮೇಣ ಹೊಂದಿಕೊಳ್ಳುತ್ತಾ ಸಾಗುತ್ತಾನೆ. ಸಂಸಾರ ಹೇಗೆಯೋ ನಡೆಯುತ್ತಿದೆ.

ಫೋಟೋ ಕೃಪೆ : ಅಂತರ್ಜಾಲ

ಒಂದು ದಿನ ಸೋಮನಾಥ್ ಗೆ ಧೂರ್ತ ಗಿರಾಕಿಯೊಬ್ಬನ ಪರಿಚಯವಾಗುತ್ತದೆ. ಒಂದು ಒಳ್ಳೆಯ ಕಾಂಟ್ರಾಕ್ಟ್ ಇದೆಯೆಂದೂ ಅದನ್ನು ನಿನಗೆ ಕೊಡಿಸುವ ಇಚ್ಛೆ ಇದೆಯೆಂದೂ ಅವನು ಹೇಳಿದಾಗ ಸೋಮನಾಥ್ ಗೆ ಅಚ್ಚರಿ-ಸಂತೋಷ. ಮಗನಿಗೆ ಏನೋ ಒಳ್ಳೆಯದಾಗುತ್ತಿದೆ ಎಂದು ವೃದ್ಧ ತಂದೆಗೂ ಸಂತೋಷ. ಆದರೆ ಈ ಸಂತೋಷ ಕ್ಷಣಿಕ. ಆ ಗಿರಾಕಿಯೊಬ್ಬ ಹೆಣ್ಣುಬಾಕ. ‘ತನಗೊಬ್ಬಳು ವೇಶ್ಯೆಯನ್ನು ಗೊತ್ತು ಮಾಡಿಕೊಂಡು ತಾನಿರುವ ಪಂಚತಾರಾ ಹೋಟೇಲಿಗೆ ಕರೆತರಬೇಕು. ಹಾಗಾದರೆ ಕಾಂಟ್ರಾಕ್ಟ್ ತಕ್ಷಣವೇ ನಿನಗೆ’ ಎಂಬ ಕಟ್ಟಳೆಯನ್ನು ಗಿರಾಕಿ ವಿಧಿಸುತ್ತಾನೆ. ಸೋಮನಾಥ್ ಗೆ ತೀವ್ರ ಸಂದಿಗ್ಧ. ಆದರೆ ’ಅನಿವಾರ್ಯತೆ’ ಒಂದು ಭೂತವಾಗಿ ಕಾಡುತ್ತದೆ. ‘ತಾನು ಅಂಥವನಲ್ಲ’ ಎಂದಾಗ ಗಿರಾಕಿಯ ತಾತ್ಸಾರದ, ಅಟ್ಟಹಾಸದ ನೋಟ. ಅಲ್ಲದೇ ಆ ‘ಒಳ್ಳೆಯ’ ಕಾಂಟ್ರಾಕ್ಟ್ ತನಗಿಲ್ಲ. ಸೋಮನಾಥ್ ವಾಸ್ತವವನ್ನು ಒಪ್ಪುತ್ತಾನೆ. ‘ವಿಟ’ ನೊಬ್ಬನನ್ನು ಹಿಡಿಯುತ್ತಾನೆ. ಆ ವಿಟನೋ ಮಹಾ ಬಾಯಿಬಡುಕ. ಕಲ್ಕತ್ತೆಯ ಹಲವು ವೇಶ್ಯೆಯರ ಹೆಸರನ್ನು ಚಟಪಟನೇ ಹೇಳುತ್ತಾ, ‘ಆ ಇವಳಿದ್ದಾಳಲ್ಲ….ಅವಳು ಪರವಾಗಿಲ್ವಾ??..ಬಹಳಾ ರೇಟು ಇವಾಗ’ ಎನ್ನುತ್ತಾ ಸೋಮನಾಥ್ ಗೆ ತೀವ್ರ ಇರುಸು-ಮುರುಸು ಉಂಟುಮಾಡುತ್ತಾನೆ.

ಕೊನೆಗೆ ವೇಶ್ಯೆಯೊಬ್ಬಳನ್ನು ಸಂಪರ್ಕಿಸುತ್ತಾನೆ. ಅವಳನ್ನು ಮಾತನಾಡಿಸುತ್ತಿದ್ದಾಗ, ಆಕೆ ಡ್ರೈವರ್ ಸುಕುಮಾರ್ ನ ತಂಗಿ ಎಂಬ ಕಹಿಸತ್ಯದ ಅರಿವಾಗಿ ಸೋಮನಾಥ್ ಗೆ ಆಕಾಶ ಕಳಚಿಬಿದ್ದಂತಾಗುತ್ತದೆ. ಮಾತು ಹೊರಡದಾಗುತ್ತದೆ. ಆಕೆಯ ನಿಜ ಹೆಸರು ಕವನ ಅಥವಾ ಕೌನಾ (ಸುಧೇಷ್ಣಾ ದಾಸ್). ಆದರೆ ಕಸುಬಿನಲ್ಲಿ ಆಕೆಗೆ ’ಝೂತಿಕಾ’ (ಬಂಗಾಲೀ ಉಚ್ಛಾರಣೆಯ ’ಜ್ಯೋತಿಕಾ’) ಎಂಬ ಹೆಸರಿದೆ. ತನ್ನ ಕಸುಬು ನಾಮಧೇಯವನ್ನು ಆಕೆ ಪದೇ ಪದೇ ಉಚ್ಛರಿಸುತ್ತಾಳೆ. ಸೋಮನಾಥ್ ಗೆ ತೀವ್ರ ಮುಖಭಂಗದ ಸನ್ನಿವೇಶ. ಒಂದಷ್ಟು ಹಣ ಹೊಂದಿಸಿ ಅವಳ ಮುಂದೆ ಹಿಡಿದು, ‘ದಯವಿಟ್ಟು ತೆಗೆದುಕೊ. ಇಲ್ಲಿಂದ ಹೊರಟು ಹೋಗು’ ಎಂದು ಹೇಳುತ್ತಾನೆ. ಆದರೆ ಆಕೆ ಒಪ್ಪಳು. ‘ಇದು ನನ್ನ ಕಸುಬು. ನೀನು ಮಧ್ಯವರ್ತಿಯ ಕೆಲಸ ಮಾಡುತ್ತಿದ್ದೀಯಲ್ಲಾ..ಹಾಗೇ..ಸಂಪಾದನೆಯಿಂದ ಬಂದ ಹಣ ಮಾತ್ರ ಮುಟ್ಟುತ್ತೇನೆ. ಭಿಕ್ಷೆ ಕಾಸನ್ನಲ್ಲ. ಯಾಕೆಂದರೆ ನನ್ನ ಹೆಸರು ಝೂತಿಕಾ..’ ಎಂದು ಆವೇಶದಿಂದ ನುಡಿಯುತ್ತಾಳೆ. ಮೂಲತಃ ‘ಕವನ’ ಆದ ಆಕೆ ‘ಝೂತಿಕಾ’ ಆಗಿದ್ದಕ್ಕೆ ಆಕೆಗೆ ತೀವ್ರ ರೋಷ-ಜಿಗುಪ್ಸೆಗಳಿವೆ. ದಿಜ್ಞ್ಮೂಢನಾದ ಸೋಮನಾಥ್ ಗತ್ಯಂತರವಿಲ್ಲದೇ ಆಕೆಯನ್ನು ಗಿರಾಕಿಯಿದ್ದ ರೂಮಿಗೆ ಕರೆದೊಯ್ಯುತ್ತಾನೆ. ಆಕೆಯನ್ನು ಒಳಗಡೆ ಕರೆಸಿಕೊಂಡ ಗಿರಾಕಿಯಿಂದ ‘ಕೆಳಗಡೆ ಇರಿ…ಬರುತ್ತೇನೆ’ ಎಂಬ ಆದೇಶ ಬರುತ್ತದೆ. ಸೋಮನಾಥ್ ಯಾಂತ್ರಿಕವಾಗಿ ಕೆಳಗಿಳಿದು ಬರುತ್ತಾನೆ.
ತಡರಾತ್ರಿ ಭಾರವಾದ ಮುಖದೊಂದಿಗೆ ಸೋಮನಾಥ್ ಮನೆ ತಲುಪುತ್ತಾನೆ. ತಂದೆ-ತಾಯಿ ನಿರೀಕ್ಷೆಯಿಂದ ಪ್ರಶ್ನಾರ್ಥಕವಾಗಿ ಮಗನತ್ತ ನೋಡುತ್ತಾರೆ. ಅವರಿಗೆ ಯಾವ ಘಟನೆಗಳೂ, ಹಿನ್ನಲೆಯ ಅರಿವೂ ಇಲ್ಲ. ‘ಅಪ್ಪಾ..ಕಾಂಟ್ರಾಕ್ಟ್ ಸಿಕ್ತು’ ಎಂದು ಸೋಮನಾಥ್ ತಲೆತಗ್ಗಿಸಿ ಉದ್ಗರಿಸುತ್ತಾನೆ. ನಡೆದ ಯಾವುದೇ ಘಟನೆಯ ಅರಿವೇ ಇಲ್ಲದ ವೃದ್ಧ ತಂದೆ ’ಸದ್ಯ ಸಿಕ್ತಲ್ಲಪ್ಪ…ನಿರಾಳ ಆಯ್ತೋ ಮಗನೇ’ ಎನ್ನುತ್ತಾ ಬೆರಳಿನಿಂದ ಕಣ್ಣು ಮುಚ್ಚಿಕೊಂಡು ಅನಿರ್ವಚನೀಯ ನೆಮ್ಮದಿ ಅನುಭವಿಸುತ್ತಾನೆ.

ಝೂತಿಕಾಳ ಬಗ್ಗೆ ಗಾಢ ವಿಷಾದವೊಂದು ನೋಡುಗನಲ್ಲಿ ಉಳಿಯುತ್ತದೆ. ಮೌನಕ್ಕೆ ದೂಡಿಬಿಡುವ, ಚಿಂತಾಕ್ರಾಂತರಾಗಿಸಿಬಿಡುವ ನೇರ-ಗಂಭೀರ ಶೈಲಿಯಲ್ಲಿ ಕಥೆ ಹೇಳುವ ಕಲೆ ರೇ ಅವರಿಗೆ ಸಿದ್ಧಿಸಿತ್ತು. ರೇ ಅವರಂತವರಿಗೆ ಹೇಳಿ ಮಾಡಿಸಿದ ತಂತ್ರಜ್ಞ ಸೌಮೇಂದು. ಕಪ್ಪು-ಬಿಳುಪಿನಲ್ಲಿ ನಗರ ಜೀವನದ ಜಂಜಾಟವನ್ನು ಮನಮುಟ್ಟುವಂತೆ ಚಿತ್ರಿಸುವುದು ಸೌಮೇಂದು ಅವರಿಗೆ ರೇ ಹೇಳಿಕೊಟ್ಟ ಪಾಠ. ಕಪ್ಪು-ಬಿಳುಪಿನ ಕ್ಯಾಮೆರಾದಲ್ಲಿ ಈತ ನೆರಳು-ಬೆಳಕಿನ ಜೊತೆ ಆಟವಾಡುವುದು ಕುತೂಹಲ ಉಂಟುಮಾಡುತ್ತದೆ. ಕತ್ತಲೆಯಲ್ಲಿನ ಕಲ್ಕತ್ತೆಯ ’ಕಪ್ಪು ಜೀವನ’ವನ್ನು ಈತ ಕಟ್ಟಿಕೊಡುವ ಪರಿಯೇ ಸೋಜಿಗವುಂಟುಮಾಡುತ್ತದೆ. ತಡರಾತ್ರಿಯೂ ಜನನಿಬಿಡವಾದ ಕಲ್ಕತ್ತೆಯ ರಸ್ತೆಗಳಲ್ಲಿ ನಿಧಾನವಾಗಿ, ಒಮ್ಮೊಮ್ಮೆ ವೇಗವಾಗಿ ಚಲಿಸುವ ಟ್ಯಾಕ್ಸಿ, ಎದುರು ಬರುವ ವಾಹನಗಳ ಪ್ರಖರ ಬೆಳಕು ಟ್ಯಾಕ್ಸಿಯಲ್ಲಿ ಕುಳಿತ ಸೋಮನಾಥ್-ಝೂತಿಕಾರ ಮುಖದ ಮೇಲೆ ಬಿದ್ದೊಡನೆಯೇ ಸ್ಪಷ್ಟವಾಗಿ ಕಾಣುವ ಅವರ ಮುಖಭಾವ, ಟ್ಯಾಕ್ಸಿ ಮುಂದೆ ಹೋದಂತೆ ಮತ್ತೆ ಕಪ್ಪಾಗುವ ಆದರೆ ಕ್ಲೋಸ್-ಅಪ್ ನಲ್ಲೇ ಉಳಿಯುವ ದೃಶ್ಯಗಳು…ಹೋಟೇಲಿನ ಕಾರಿಡಾರ್ ನಲ್ಲಿ ದೀಪಗಳೆಲ್ಲಾ ಆರಿಸಿರುವುದರಿಂದ ಸೋಮನಾಥ್-ಝೂತಿಕಾ ಅರ್ಧ-ಕತ್ತಲೆ, ಅರ್ಧ-ಬೆಳಕಿನಯ ದಾರಿಯಲ್ಲೇ ರೂಮ್ ವರೆಗೂ ಸಾಗುತ್ತಾರೆ. ರೂಮಿನ ಬಾಗಿಲು ತೆರೆದಾಗ ರೂಮ್ ಒಳಗಿನಿಂದ ಬೀಳುವ ಬೆಳಕಿನಿಂದ ಸೋಮನಾಥ್ ನ ದುಗುಡ, ಗೊಂದಲ ಸ್ಪಷ್ಟವಾಗಿ ಕಾಣುತ್ತದೆ. ಹಾಗೆಯೇ ಝೂತಿಕಾಳ ನಿರಾಶೆ, ಅಸಹನೆ ಕೂಡಾ. ಝೂತಿಕಾ ರೂಮ್ ಪ್ರವೇಶಿಸುತ್ತಿದಂತೆ ಮುಚ್ಚುವ ಬಾಗಿಲು..ಮತ್ತೆ ಸೋಮನಾಥ್ ಮುಖದಲ್ಲಿ ಸ್ಪಷ್ಟತೆ ಇಲ್ಲ. ಮತ್ತದೇ ಅರ್ಧ ಕತ್ತಲೆಯ ದಾರಿ…ಕತ್ತಲಲ್ಲಿ ಸಾಗಬೇಕಾದ ಅಸ್ಪಷ್ಟ-ಅಸಹಾಯಕ ಬದುಕಿನ ಚಿತ್ರಣವನ್ನು ರೇ-ಸೌಮೇಂದು ಜೋಡಿ ಪ್ರತಿ ಚಿತ್ರದಲ್ಲೂ ವಿಶಿಷ್ಟವಾಗಿ ಕಟ್ಟಿಕೊಟ್ಟರು.

ಫೋಟೋ ಕೃಪೆ : ಅಂತರ್ಜಾಲ

ಆದರ್ಶಗಳನ್ನು ಹೊತ್ತ ಪದವೀಧರ ಯುವಕನೊಬ್ಬ, ನೈತಿಕತೆಯನ್ನೇ ಪಣಕ್ಕಿಟ್ಟು ಹಣಸಂಪಾದನೆಗಾಗಿ ಭ್ರಷ್ಟಗೊಳ್ಳುವ ಕಥೆಯನ್ನು ರೇ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ. ಇದು ವಿಷಾದ, ಕೋಪಗಳೆರೆಡನ್ನೂ ಒಮ್ಮೆಲೆ ಹುಟ್ಟಿಸುವ ಒಂದು ಅಪ್ಪಟ ರೇ ಚಿತ್ರ. ಒಂದುಹಂತದಲ್ಲಿ ಸಿನಿಕತೆ-ಹತಾಶೆಗಳನ್ನೇ ಮೂರ್ತರೂಪವಾಗಿಸಿದ್ದರೇನೋ ಎಂಬ ಭಾವ ಮೂಡುತ್ತದೆ. ಚಿತ್ರವನ್ನು ಎವೆಯಿಕ್ಕದೇ ನೋಡುವಂತೆ ಮಾಡುವಲ್ಲಿ ರೇ ಅವರ ಬಲಗೈ ಭಂಟರೇ ಆಗಿದ್ದ ದುಲಾಲ್ ದತ್ತ ರನ್ನೂ ನೆನೆಯಬೇಕಾಗುತ್ತದೆ. ’ಪಥೇರ್ ಪಾಂಚಾಲಿ’ ಯಿಂದ ’ಆಗಂತುಕ್’ ವರೆಗಿನಾ ಎಲ್ಲಾ ರೇ ಚಿತ್ರಗಳ ಸಂಕಲನಕಾರ ದತ್ತ, ೭೦ರ ದಶಕದಲ್ಲೇ ’ಜಂಪ್-ಕಟ್’ ಗಳನ್ನು ಸಮರ್ಥವಾಗಿ ನಿರ್ವಹಿಸಿದ್ದವರು.. ಕಂಪ್ಯೂಟರ್ ತಂತ್ರಜ್ಞಾನವಿನ್ನೂ ಹೆಚ್ಚಾಗಿ ಜನಪ್ರಿಯವಿರದ ಆ ದಿನಗಳಲ್ಲಿ, ತಗ್ಗು ಚಾವಣಿಯ ಸಣ್ಣ ಎಡಿಟಿಂಗ್ ಕೋಣೆಗಳಲ್ಲಿ, ಆರಡಿ ಎತ್ತರ ಮೀರಿದ ರೇ ‘ತಲೆ ತಗ್ಗಿಸಿ’ ಕುಳಿತು ತಮ್ಮ ’ಗುಟುರು’ ಹಾಕುವ ದಪ್ಪ ಧ್ವನಿಯಲ್ಲಿ ಸತವಾಗಿ ಕೊಡುತ್ತಿದ್ದ ಸೂಚನೆಗಳನ್ನು ಆಲಿಸುತ್ತಾ, ತಮ್ಮ ಕೆಲಸವನ್ನು ತನ್ಮಯರಾಗಿ ಮಾಡುತ್ತಿದ್ದ ದತ್ತ, ೨೦೧೦ರಲ್ಲಿ ತೀರಿಕೊಂಡರು. ’ಪಥೇರ್ ಪಾಂಚಾಲಿ’ ಯ ಸಂದರ್ಭದಲ್ಲಿ. ಉತ್ಸಾಹವೊಂದೇ ಅನುಭವವಾಗಿದ್ದ ರೇ ಮತ್ತು ದತ್ತ ಎರಡು ವಾರ ನಿದ್ರಾಹಾರ ತ್ಯಜಿಸಿ, ಸತತವಾಗಿ ಸಂಕಲದಲ್ಲಿ ತೊಡಗಿ ಪ್ರೀಮಿಯರ್ ಪ್ರದಶನವೊಂದಕ್ಕೆ ಚಿತ್ರವನ್ನು ಸಿದ್ದಗೊಳಿಸಿದ್ದರು. ರಿಚರ್ಡ್ ಅಟೆನ್ ಬರೋ , ಮಾರ್ಟಿನ್ ಸ್ಕೋರ್ಸೆಸಿ, ಆಡೂರ್ ಗೋಪಾಲಕೃಷ್ಣನ್ ರಂತಹ ಮೇಧಾವಿಗಳಿಂದಲೂ ಪ್ರಶಂಸಿಸಲ್ಪಟ್ಟ ಮತ್ತೊಬ್ಬ ಭಾರತೀಯ ಚಿತ್ರರಂಗದ ಸಂಕಲನಕಾರ ಇರಲಾರ. ರೇ ಆಯ್ದುಕೊಳ್ಳುತ್ತಿದ್ದ ಕಥೆಗಳನ್ನು ಸಿನಿಮಾ ಭಾಷೆಗೆ ಅಳವಡಿಸುವಲ್ಲಿ ರೇ ಅವರ ಸಂಕಲನಕಾರ ದತ್ತ ಮತ್ತು ಅವರ ತಾಂತ್ರಿಕ ತಂಡದ ಕೊಡುಗೆ ಮರೆಯಲಾಗದು. ’ಜನ ಅರಣ್ಯ’ದ ಸೋಮನಾಥ ಉದ್ಯೋಗಕ್ಕಾಗಿ ಅಲೆಯುವ, ಸಂದರ್ಶನಕ್ಕೆ ಹೋಗುವ ದೃಷ್ಯದಲ್ಲಿ ದತ್ತ ಅವರ ಸಂಕಲನದ ಕೈಚಳಕವನ್ನೊಮ್ಮೆ ಗಮನಿಸಬೇಕು. (ವಿಡಿಯೋ ಕೊಂಡಿ ಗಮನಿಸಿ)

ಸುಬ್ರತೋ ಮಿತ್ರ ಅವರಿಗೆ ಸಹಾಯಕನಾಗಿ ಒಬ್ಬ ’ಟ್ರಾಲೀ ಬಾಯ್’ ಆಗಿ ರೇ ಅವರ ಚಿತ್ರಗಳಿಂದಲೇ ತಮ್ಮ ಸಿನಿಮಾ ಜೀವನ ಆರಂಭಿಸಿದ ಸೌಮೇಂದು, ಹಂತ-ಹಂತವಾಗಿ ರೇ ಚಿತ್ರಗಳ ಅವಿಭಾಜ್ಯ ಅಂಗವಾಗಿಹೋದರು. ನಾಲ್ಕು ರಾಷ್ಟ್ರ ಪ್ರಶಸ್ತಿ ಪಡೆದರು. ಅದರಲ್ಲಿ ಮೂರು ರೇ ಚಿತ್ರಗಳಿಗಾಗಿ. ಪ್ರಸಕ್ತ ಸಿನಿಮಾ-ರೇ ಯುಗದ ನಡುವಿನ ಕೊಂಡಿಯಾಗಿರುವ ಸೌಮೇಂದು ೯೦ರ ಗಡಿಯಲ್ಲಿದ್ದಾರೆ. ರೇ ಯವರ ಬಗ್ಗೆ ಮಾತನಾಡುತ್ತಾ ಭಾವುಕರಾಗಿಬಿಡುವ ಸೌಮೇಂದು, ರೇ ಅವರನ್ನು ’ಮಹಾನ್ ಗುರು’ ಎನ್ನುತ್ತಾರೆ.

’ಶತರಂಜ್ ಕೆ ಕಿಲಾರಿ’, ’ಸದ್ಗತಿ’ (ದೆಹಲಿಯ ದೂರದರ್ಶನಕ್ಕಾಗಿ ಮಾಡಿದ ಜಾತಿವ್ಯವಸ್ಥೆಯ ಕ್ರೌರ್ಯವನ್ನು ಅನಾವರಣಗೊಳಿಸುವ ಚಿತ್ರ) ಹೊರತುಪಡಿಸಿದರೆ, ರೇ ಗೆ ಹಿಂದಿಯೇಕೋ ವ್ಯರ್ಜವಾಯಿತು. ಹಿಂದಿ ಚಿತ್ರರಂಗಕ್ಕೆ ಗತ್ತು-ದಿಕ್ಕು ತಂದವರಲ್ಲಿ ಬಂಗಾಳಿಗಳಿಗೆ ಒಂದು ವಿಶಿಷ್ಟ ಸ್ಥಾನವಿದೆ. ’ದೋ ಬಿಘಾ ಜಮೀನ್’ ಮಾಡಿದ ಬಿಮಲ್ ರಾಯ್, ’ಏಕ್ ದಿನ್ ಪ್ರತಿದಿನ್’, ’ಭುವನ್ ಶೋಮ್’ ತರದ ಚಿತ್ರಗಳಿಂದ ಇಡೀ ಭಾರತಕ್ಕೆ ತೆರೆದುಕೊಂಡ ಮೃಣಾಲ್ ಸೇನ್, ಬಂಗಾಳೀ ಕಣ್ಣುಗಳಿಂದ ಭಾರತೀಯ ಮಧ್ಯಮವರ್ಗವನ್ನು ವಿಶ್ಲೇಷಿಸಿದ ಹೃಷಿ ದಾ (ಹೃಷಿಕೇಶ್ ಮುಖರ್ಜೀ)….ಪ್ರಾತಃ ಸ್ಮರಣೀಯರು. ಇವರೆಲ್ಲರೊಡನೆ ರೇ ಅನ್ಯೋನ್ಯವಾಗಿದ್ದರು.

ಸತ್ಯಜಿತ್ ರೇ ಒಂದು ಕಾಲಘಟ್ಟದಲ್ಲಿ ಬಂದುಹೋಗುವ ನಿರ್ದೇಶಕರು. ಆದರೆ ಎಲ್ಲಾ ಕಾಲಘಟ್ಟಕ್ಕೂ ಸಲ್ಲುವ ದೃಶ್ಯಕಾವ್ಯಗಳನ್ನು ಅರ್ಪಿಸಿದ್ದಾರೆ. ತಮ್ಮ ಭಾಷೆ-ಮಣ್ಣಿನ ಬಗ್ಗೆ ಇವರಿಗಿದ್ದ ಶ್ರದ್ಧೆ, ಸಿನಿಮಾ ಬಗ್ಗೆ ಅವರಿಗಿದ್ದ ಉತ್ಕಟ ವ್ಯಾಮೋಹ ಅನನ್ಯ.

೧. ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಸತ್ಯಜಿತ್ ರೇ
೨. ಚಿತ್ರದ ವಿವಿಧ ದೃಶ್ಯಗಳು..


  • ರಾಘವನ್ ಚಕ್ರವರ್ತಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW