ಜನುಮ ಜನುಮಕೂ – ಭಾಗ ೪

ನಾಯಕಿ ಅನುಷ್ಕಾ ಚಾವ್ಲಾ ಸಿನಿಮಾ ಸೆಟ್ ಗೆ ಬಾರದಿದ್ದಾಗ ನಿರ್ದೇಶಕ ರಾಣಾ ಕೆಂಡಾಮಂಡಲವಾಗುತ್ತಾರೆ. ಅದರ ಪರಿಣಾಮ ಏನಾಗುತ್ತೆ?. ಇದು ಜನುಮ ಜನುಮದ ಪ್ರೀತಿಯ ಕತೆ. ಮುಂದೆ ಓದಿ …

ರಂಗೋಲಿ ತೀಡಿದ ರೋಶನಿ!

ಅಷ್ಟರಲ್ಲಿ ನಿರ್ದೇಶಕ ರಾಣಾ ಕಾರಿನಿಂದ ಇಳಿದಿದ್ದರು. ಕೆಮರಾ ಇದ್ದ ಕಡೆಗೆ ಹೋಗಿ ಛಾಯಾಗ್ರಾಹಕ ತಂಗಮಣಿಗೆ ಶಾಟ್ಸ್ ಗೆ ಸಂಬಂಧಿಸಿದ ಹಾಗೆ ಏನೇನೋ ಸೂಚನೆ ಕೊಡ ತೊಡಗಿದರು. ರಾಣಾ ಬಂದ ಮೇಲೆ ಅಲ್ಲಿ ಚಟುವಟಿಕೆ ಜೋರಾಯಿತು. ಜನರೇಟರು ಗುರ್ ಎಂದಿತು.

ಫೋಟೋ ಕೃಪೆ : Pinterest

ನಾಯಕ ನಟ ಶಯನಕುಮಾರ್ ರೋಶನಿ ಚಾವ್ಲಾ ಳ ಬಿಡಲೇ ಇಲ್ಲ. ತನ್ನ ಪಕ್ಕದಲ್ಲೇ ಇನ್ನೊಂದು ಕುರ್ಚಿ ಹಾಕಿಸಿಕೊಂಡು ಕೂಡಿಸಿಕೊಂಡ. ಆಕೆಗೂ ಥ್ರಿಲ್ ಆಗಿತ್ತು. ತನಗೀಗ ನಲವತ್ತು ಪ್ಲಸ್ ಆಗಿದ್ದರೂ ಇಂಥ ಹಿರೋಗಳು ಸಹ ಎಡವಿ ಬೀಳುವಷ್ಟು ಗ್ಲಾಮರ್ ತನ್ನಲಿದೆಯಲ್ಲ ಎಂದು ಒಳಗೇ ಆನಂದಪಟ್ಟಳು. ಹೀರೋನ ತೊಡೆಯ ಮೇಲೆ ಕೈಯಿಟ್ಟು ಮೆಲ್ಲಗೆ ಬೆರಳಿನಿಂದ ರಂಗೋಲಿ ತಿಡಿದಳು. ಹೀರೊ ಶಯನಕುಮಾರ್ ಮೂರ್ಛೆ ಹೋಗುವುದೊಂದೇ ಬಾಕಿ. ಸಿನಿಮಾದಲ್ಲಿ ತನಗೆ ಮಹಾನ್ ಸುಂದರಿಯೇ ನಾಯಕಿಯಾಗಿ ಸಿಕ್ಕಳು ಎಂದು ಹಿಗ್ಗಿಹೋದ.

ಮ್ಯಾನೇಜರ್ ಹೊಗೆರಾಮನಿಗೆ ಈಗ ಮೆಲ್ಲಗೆ ಗಾಬರಿಯಾಗತೊಡಗಿತು. ಎಲ್ಲ ಬಂದರೂ ನಾಯಕಿ ಅನುಷ್ ಚಾವ್ಲಾ ಇನ್ನೂ ಬಂದಿಲ್ಲ. ಅಮ್ಮ ಬಂದಿದ್ದಾಳೆ. ಮಗಳು ಬರದಿದ್ದರೆ ಹ್ಯಾಗೆ. ನಿರ್ದೇಶಕರು ಇದನ್ನೇ ಸೀರಿಯಸ್ಸಾಗಿ ತೆಗೆದುಕೊಂಡರೆ ಮತ್ತೆ ಪ್ರೊಡ್ಯೂಸರಿಗೂ ಇವರಿಗೂ ಜಗಳ ಹೊತ್ತಿಕೊಂಡರೆ ಮುಗಿಯಿತು. ಈ ಸಲ ರಾಣಾ ಸರ್ ಹಿಂದೆ ಸರಿಯುವುದಿಲ್ಲ. ಇದೇ ಕಾರಣ ಮುಂದಿಟ್ಟು ಅವರು ಸಿನಿಮಾ ಬಿಟ್ಟು ಹೋದರೆ ಭಾರೀ ಅನಾಹುತವೇ ಆಗುತ್ತದೆ. ಇದು ಈ ಹೊಸ ಪ್ರೊಡ್ಯೂಸರ್ ಗೆ ಯಾಕೆ ಅರ್ಥ ಆಗಲ್ವೋ.

ಈಗ ಹೊಗೆರಾಮ ರಾಣಾರ ಹತ್ತಿರ ಹೋಗಿ ಕೈ ಹೊಸೆದ.
‘ಸಾರ್. ಎಲರೂ ಬಂದ್ರು. ಆದ್ರೆ ಹೀರೋಯಿನ್ ಚಾವ್ಲಾ ಇನ್ನೂ ಬರಲಿಲ್ಲ’.
ಅಷ್ಟರಲ್ಲಿ ಅಲ್ಲಿಗೆ ಸಹಾಯಕ ನಿರ್ದೇಶಕ ಪುಟ್ಸಾಮಿಯೂ ಬಂದು ಸೇರಿಕೊಂಡ. ಅವನ ಮುಖದಲ್ಲೂ ಅದೇ ಆತಂಕ.

‘ಸಾರ್… ಹೀರೋಯಿನ್ ಬರಲಿಲ್ಲ. ಈಗ ಎರಡು ಸೀನು ಅವರದ್ದೇ ಇದೆ. ಶುರು ಮಾಡೋದು ಲೇಟಾದ್ರೆ ಪ್ಯಾಕಪ್ಪು ಲೇಟಾಗುತ್ತದೆ. ಮತ್ತೆ ಎಕ್ಸಟ್ರಾ ಬಾಟಾ ಬೀಳುತ್ತೆ’.

ಫೋಟೋ ಕೃಪೆ : provideocoalitionsa

ರಾಣಾಗೆ ಮೈ ಉರಿಯಿತು.

‘ಏನಯ್ಯಾ ರಘುರಾಮ್ ? ಎಲ್ಲಿ ಕಣಯ್ಯ ಹಿರೋಯಿನ್ನು? ಪ್ರೊಡ್ಯೂಸರೂ ಕಾಣ್ತಿಲ್ಲಾ.ಏನಯ್ಯ ಇದೂ…?’

‘ಹೀರೋಯಿನ್ ಅಮ್ಮ ನಿಮ್ಮ ಕಾರಿನಲ್ಲೇ ಬಂದ್ರಲ್ಲ ಸಾರ್’.

ಪುಟ್ಸಾಮಿ ಹಾಗೆ ಹೇಳಿದಾಗ ತಕ್ಷಣವೇ ರಾಣಾ ಗರಂ ಆದರು.
‘ನಾವು ಸಿನಿಮಾಕ್ಕೆ ಬುಕ್ ಮಾಡಿರೋದು ಅನುಷ್ ಚಾವ್ಲಾನ್ನ ಕಣಯ್ಯ ಅವಳ ಅಮ್ಮನ ಅಲ್ಲ. ಏನಿದು ನಾನ್ಸೆನ್ಸ್ . ನಮ್ಮ ಸಮಯಕ್ಕೆ ಬೆಲೆನೇ ಇಲ್ವಾ? ರೀ…ರಘುರಾಮ್ ಬೇಗ ಸೆಕೆಂಡ್ ಹೀರೋಯಿನ್ ಹುಡುಕ್ರಿ…ಈ ಹಿಂದಿ ಹುಡುಗೀರ ಸಹವಾಸವೇ ಬೇಡಾ ನಮ್ಗೆ’.

‘ಈಗ ಲಂಚ್ ಟೈಂನಲ್ಲಿ ಬರ್ತಾಳೆ ಸಾರ್ ಕೂರ್ಗಿ ಹುಡುಗೀ. ಅವಳನ್ ನೀವು ನೋಡಿದ್ರೆ ಮುಗಿತು. ಓಕೇ ಮಾಡದಿದ್ರೆ ಕೇಳಿ…ಕೂರ್ಗಿಯಾದ್ರು ಅಪ್ಪಟ ಕನ್ನಡ ಹುಡುಗಿ ಸಾರ್. ಅವ್ಳು ಧಾರವಾಡಡಲ್ಲಂತೆ.’
ರಾಣಾರಿಗೆ ಅಚ್ಚರಿ ಕುತೂಹಲ ಒಟ್ಟಿಗೆ. ರಾಣಾ ಮೂಲತಃ ಬಳಗಾವಿಯವರು. ಅವರ ಹೆಂಡತಿ ಶಾಂತಾಳ ಊರು ಧಾರವಾಡ. ಇಂಡಸ್ಟ್ರಿಗೆ ಬಂದ ಮೇಲೆ ಬೆಂಗಳೂರಲ್ಲಿ ನೆಲೆ ನಿಂತರು. ಬೆಳಗಾವಿ- ಧಾರವಾಡ ಅಂದರೆ ಸಾಕು. ರಾಣಾರಿಗೆ ಎಲ್ಲಿಲ್ಲದ ಅಭಿಮಾನ. ಅವರು ಕಾಲೇಜುವರೆಗೆ ಓದಿದ್ದು ಬೆಳಗಾವಿಯಲ್ಲಿ. ಅವರ ಶ್ರೀಮತಿ ಶಾಂತ ಹೈಸ್ಕೂಲಿನ ತನಕ ಓದಿದ್ದು ಧಾರವಾಡದಲ್ಲಿ. ಅದಕ್ಕೆ ಧಾರವಾಡ ಅವರ ಪ್ರೀತಿಯ ಊರು.

‘ಏನೂ…ಕೂರ್ಗಿ ಹುಡುಗಿ ಧಾರವಾಡದಲ್ಲಿ ಓದಿದಾಳಾ? ಏನ್ ತಮಾಷೆ ಮಾಡ್ತಿದೀಯಾ?’
‘ನಿಮ್ಮ ಹತ್ರ ತಮಾಶೆ ಮಾಡ್ತೀನಾ ಸಾರ್? ಬರ್ತಾಳಲ್ಲ ಲಂಚ್ ಹೊತ್ನಲ್ಲಿ. ಆಗ ಮಾತಾಡ್ಸಿ.’
ಹೊಗೆರಾಮ ವಿವರ ಹೇಳಿದ. ಕೂರ್ಗಿ ಹುಡುಗಿ ಬಗ್ಗೆ ರಾಣಾರ ಕುತೂಹಲ ಇಮ್ಮಡಿಸಿತು. ಮಧ್ಯಾನ್ಹಕ್ಕಾಗಿ ಕಾದರು.

ಹೀರೋಯಿನ್ ಅಮ್ಮನಿಗೆ ಕಾಳು!

ಫೋಟೋ ಕೃಪೆ : istock(ಸಾಂದರ್ಭಿಕ ಚಿತ್ರ )

‘ಸಾರ್, ಅಲ್ನೋಡಿ ನಮ್ಮ ಹೀರೋ ಅಯ್ಯಮ್ಮನಿಗೆ ಹ್ಯಾಗ್ ಕಾಳು ಹಾಕ್ತಿದ್ದಾನೆ. ಎಲ್ಲಾ ಹೀರೋಗಳು ಹೀರೋಯಿನ್ ಜತೆ ಇರೋದನ್ನ ಕಂಡಿದ್ರೆ. ಆದ್ರೆ ಈವಯ್ಯ ಹೀರೋಯಿನ್ ಅಮ್ಮನ ಜತೆ ಇದಾನೆ…!’

‘ಖಿ ಖಿ…’ ಅಂತ ನಕ್ಕ. ಒಮ್ಮೆ ರಾಣಾರಿಗೂ ನಗು ಬಂತು. ಈ ಅಮ್ಮ ಸುನಾಮಿ ಥರ ಕಣೋ. ನೀನು ಸಿಕ್ಕಿಹಾಕಿಕೊ ಬೇಡ. ಎಂದು ಎಚ್ಚರಿಕೆಯನ್ನೂ ಕೊಟ್ಟರು.

‘ಅಮ್ಮನೇ ಹೀಗಿರಬೇಕಾದ್ರೆ ಮಗಳು ಇನ್ನೂ ಸೂಪರ್ ಸಾರ್. ನಮ್ಮ ಸಿನಿಮಾ ನೂರು ದಿನ ಓಡೋದು ಗ್ಯಾರಂಟಿ.’
ಅಲ್ಲಿಯ ತನಕ ದೂರದಲ್ಲಿ ನಿಂತಿದ್ದ ಸಹಾಯಕ ನಿರ್ದೇಶಕ ಪುಟ್ಸಾಮಿಗೆ ಇನ್ನು ತಾನು ತಾನು ಅಲ್ಲಿರುವುದು ಬೇಡ ಅನ್ನಿಸಿತು. ಮೆಲ್ಲಗೆ ಅಲ್ಲಿಂದ ಜಾಗ ಖಾಲಿ ಮಾಡಿದ.

‘ರಘುರಾಮ, ನಟಿಯ ತಾಯಿ ಬಂದಿದ್ದಾಳೆ. ಮಗಳು ಅನುಷ್ ಬರಲಿಲ್ಲ ಅನ್ಕೋ. ಮತ್ತೆ ನಾನು ಈ ರೋಶನಿ ಅಮ್ಮನ್ನ ಹಾಕ್ಕೊಂಡು ಸಿನಿಮಾ ಮಾಡಿಬಿಟ್ಟಳಾ?’.

‘ಒಂದ್ ಕೈ ನೋಡಿ ಬಿಡಿ ಸಾರ್. ವಯಸ್ಸಾದ್ರೆನಾತು? ಸೂಪರ್ ಆಗವಳೇ. ಅವಳಾದ್ರೆ ನೂರು ದಿನ. ಇವಳಾದ್ರೆ ಇವತ್ತು ದಿನ. ಎರಡೂ ಗ್ಯಾರಂಟಿಗಳೇ.’
ಮ್ಯಾನೇಜರ್ ನಕ್ಕ. ಮೊದಲೇ ಶೂಟಿಂಗ್ ತಡವಾಗುತ್ತಿರುವ ಬಗ್ಗೆ ಅಸಹನೆಗೊಂಡಿದ್ದ ರಾಣಾರಿಗೆ ಅದೆಲ್ಲಿತ್ತೋ ಕೋಪ. ರಪ್ಪನೇ ಹೊಗೆರಾಮನ ಕೆನ್ನೆಗೊಂದು ಬಾರಿಸಿಯೇ ಬಿಟ್ಟರು. ಈಗ ಎಲ್ಲರಿಗೂ ದಿಗ್ಭ್ರಮೆ.ಯೂನಿಟ್ ಹುಡುಗರು ದುರುಗುಟ್ಟಿ ನೋಡಿದರು.

ಏನ್ ಕಣ್ಣಲಾ ಇದು. ಈವಯ್ಯ ಡೈರೆಕ್ಟರ್ ಹಿಂಗಾಡ್ತಾವ್ನೆ. ಸೆಟ್ ನಲ್ಲೆ ಹೊಡಿದು ಬಿಡೋದಾ!ಇವ್ರು ಹಿಂಗೇ ಇದ್ರೆ ನಾವ್ಯಾರು ಈ ಪಿಕ್ಚರನಲ್ಲಿ ಕೆಲಸ ಮಾಡೋದು ಬ್ಯಾಡ ಕಾಣಲಾ…ಅಸೋಸಿಯೇಷನ್ ಗೆ ದೂರು ಕೊಡೋಣ ಅಷ್ಟೇಯಾ…

ಯುನಿಟ್ಟು ಹುಡುಗರು ತಮಗೆ ತಾವೇ ದೂರಿಕೊಂಡರು. ಏಟು ತಿಂದ ಪ್ರೊಡಕ್ಷನ್ ಮ್ಯಾನೇಜರ್ ಹೊಗೆರಾಮ ತಲೆ ತಗ್ಗಿಸಿ ನಿಂತಿದ್ದ. ಅವನಿಗೆ ಭಾರೀ ಅವಮಾನವಾಗಿತ್ತು. ಅವನ ಇಷ್ಟು ವರ್ಷದ ಸಿನಿಮಾದ ಜೀವನದಲ್ಲಿ ಯಾರೂ ಅವನಿಗೆ ಹೀಗೆ ಕಪಾಳಮೋಕ್ಷ ಮಾಡಿರಲಿಲ್ಲ. ಇಷ್ಟೊಂದು ಹುಡುಗರಿದ್ದಾರೆ. ಶೂಟಿಂಗ್ ನೋಡಲು ಬಂದ ಸಾರ್ವಜನಿಕರಿದ್ದಾರೆ. ಎಲ್ಲರೆದುರು ನಗೆ ಇಂಥ ಅವಮಾನ. ಅದೂ ತಾನು ಮಾಡದ ತಪ್ಪಿಗೆ. ಆ ಹುಡುಗಿ ಅನುಷ್ ಚಾವ್ಲಾ ಸರಿಯಾದ ಹೊತ್ತಿಗೆ ಲೊಕೇಷನ್ನಲ್ಲಿದ್ರೆ ಹೀಗಾಗುತ್ತಿರಲಿಲ್ಲ. ಡೈರೆಕ್ಟರುಗಳಿಗೆ ಕೋಪ ಇರುತ್ತೆ. ಅಂದ್ರೆ ಕೈಯೆತ್ತಿ ಹೊಡೆಯುವ ಮಟ್ಟಿಗೆ ಇರುತ್ತದೆ ಎಂದು ಅನಿಸರಲಿಲ್ಲ.

ಫೋಟೋ ಕೃಪೆ : imgur (ಸಾಂದರ್ಭಿಕ ಚಿತ್ರ )

ದೂರದಲ್ಲಿ ಕುರ್ಚಿ ಎಳೆದು ಕೊಂಡು ಕೂತ ನಿರ್ದೇಶಕ ರಾಣಾ ಕ್ಷಣ ಹೊತ್ತು ಯೋಚಿಸಿದರು. ತಪ್ಪು ಮಾಡಿಬಿಟ್ಟೆ ಅನಿಸಿತು. ಛಾಯಾಗ್ರಾಹಕ ತಂಗಮಣಿ ಅಸಹಾಯಕನಂತೆ ನಿರ್ದೇಶಕರತ್ತ ನೋಡಿದ. ಎಲ್ಲರಿಗೂ ಆತಂಕ ಆವರಿಸಿತ್ತು. ನಾಯಕ ನಟ ಶಯನಕುಮಾರ್ ಗೆ ಇದ್ಯಾವುದೂ ಗೊತ್ತಿಲ್ಲ. ಆತ ನಟಿಯ ಅಮ್ಮನೊಂದಿಗೆ ಹರಟೆಯಲ್ಲಿ ಮುಳುಗಿದ್ದ!

ರಾಣಾ ಕುರ್ಚಿಯಿಂದ ಮೇಲೆದ್ದರು. ಸಪ್ಪೆ ಮುಖ ಹಾಕಿಕೊಂಡು ನಿಂತಿದ್ದ ಹೊಗೆರಾಮ ಹತ್ತಿರ ಬಂದರು. ಅವನ ಎರಡೂ ಕೈಯನ್ನು ಹಿಡಿದುಕೊಂಡು.

‘ರಘುರಾಮ, ತಪ್ಪು ಮಾಡ್ಬಿಟ್ಟೆ, ಬೇಕಾದ್ರೆ ನೀನೂ ನನ್ನ ಕೆನ್ನೆಗೆ ಹೊಡೆದು ಬಿಡು. ಲೆಕ್ಕ ಸರಿಯಾಗುತ್ತದೆ.ನಿನ್ನೆ ರಾತ್ರಿಯಿಂದ ಏನಾಗಿದೆ ಅಂತ ನಿನಗೂ ಗೊತ್ತು.ನನ್ನ ಕ್ಷಮಿಸಿಬಿಡು.’

ಕೂಡಲೇ ಹೊಗೆರಾಮ ಮುಖದಲ್ಲಿ ನಗು ತಂದುಕೊಂಡ.

ನಿರ್ದೇಶಕರ ಕೈ ಹಿಡಿದು-

‘ಪರವಾಗಿಲ್ಲ ಸಾರ್. ನನ್ನ ಕಡೆಯಿಂದ್ಲುತಪ್ಪಾಗಿದೆ. ನಿಮಗೆ ನೂರೆಂಟು ಯೋಚ್ನೆ ಜವಾಬ್ದಾರಿ ಇರುತ್ತೆ. ನನಗೆಲ್ಲಾ ಅರ್ಥವಾಗುತ್ತೆ.ಎಲ್ಲಾ ಆದದ್ದು ಆ ಹಿಂದಿ ಹೀರೋಯಿನ್ ನಿಂದ.’

‘ಇಲ್ಲ, ಹಣ ಹಾಕಿರೋ ಆ ಪ್ರೊಡ್ಯೂಸರ್ ಗೆ ಸರಿಯಾದ ಕಮಿಟ್ ಮೆಂಟ್ ಇಲ್ದೆ ಇರೋದ್ರಿಂದ ನಾವ್ ನಾವೇ ಕಿತ್ತಾಡಿಕೊಳ್ಳೋ ಹಾಗಾಯ್ತು. ಸಾರೀ… ರಘುರಾಮ್, ತಪ್ಪು ಮಾಡ್ಬಿಟ್ಟೆ.’

ನಿರ್ದೇಶಕ ರಾಣಾ ಮತ್ತೆ ಮತ್ತೆ ಹಾಗೆಂದಾಗ ಹೊಗೆರಾಮನಿಗೆ ಮುಜುಗರವಾಯಿತು. ಈಗ ಯೂನಿಟ್ ಹುಡುಗರು ನಿಟ್ಟುಸಿರು ಬಿಟ್ಟರು.
‘ಹೋಗ್ಲಿ ಬಿಡಿ ಸಾರ್. ನಾನೂ ಮೂವತ್ತು ವರ್ಷ ಈ ಸಿನಿಮಾ ಇಂಡಸ್ಟ್ರೀಲಿದೀನಿ. ನಿಮ್ ಥರ ಸಿನಿಮಾ ಸಕ್ಸಸ್ ಗೆ ಜಗಳಾ ಮಾಡ್ರೋವ್ರನ್ನ ನೋಡಿರಲಿಲ್ಲ. ನಿಮಗೆ ಒಳ್ಳೆ ಅರ್ತಿಸ್ತಂನೆ ಕೊಡ್ತೀನಿ. ಕೂರ್ಗಿ ಹುಡುಗಿ ತುಂಬಾ ಕಮಿಟ್ ಮೆಂಟ್ ಇರೋ ಹುಡುಗಿ. ಮಧ್ಯಾಹ್ನ ಬರ್ತಾಳೆ’.
ರಾಣಾರ ಮುಖದಲ್ಲಿ ನಗು ಮೂಡಿತು. ಹೋಗೇರಾಮಾನೂ ನಕ್ಕ. ಯೂನಿಟ್ ಹುಡುಗರೂ ನಕ್ಕರು. ಛಾಯಾಗ್ರಾಹಕ ತಂಗಮಣಿ ಎಲ್ಲರನ್ನೂ ವಿಚಿತ್ರವಾಗಿ ನೋಡಿದ.
‘ಸಾರ್ ಹೀರೋಯಿನ್ ಯಾಕೆ ಲೇಟ್ ಮಾಡ್ತಿದ್ದಾಳೆ ಅಂತ ಹೇಳ್ತಿನಿ. ಬಾಂಬೆಯಿಂದ ಬರೋವಾಗ ಆಕೆ ಲೇಟ್ ಮಾಡ್ತಿದ್ದಾಳೆ ಅಂತ ಹೇಳ್ತಿನಿ. ಬಾಂಬೆಯಿಂದ ಬರೋವಾಗ ಆಕೆ ಕರ್ಚಿಫು ಅಲ್ಲೇ ಬಿಟ್ಟು ಬಂದಳಂತೆ . ನಮ್ಮ ಪ್ರಡ್ಯೂಸರ್ ಹೊಸದು ಕೊಡ್ಸಕ್ಕೆ ಅಂತ ಕಾರಿನಲ್ಲಿ ಕರಕೊಂಡು ಹೋಗಿದ್ದಾರೆ. ಈಗ ಬಂದು ಬಿಡ್ತಾರೆ ಸಾರ್.’

ಇದೇ ಕಣ್ಣಯ್ಯ ನನಗೆ ಉರಿಯೋದು.ಇಲ್ಲಿ ಇಡೀ ತಂಡ ನೊಣ ಹೊಡೀತಾ ಕೂತಿದೆ. ಮೀಟರ್ ಓಡ್ತಿದೆ. ಪ್ರೊಡ್ಯೂಸರ್ ಮಹಾಶಯರು ಕರ್ಚಿಫ್ ಕೊಡಿಸೋದಕ್ಕೆ ಆಕೇನ್ನ ಸಿಟಿಗೆ ಕರಕೊಂಡು ಹೀಗೆ ಆದ್ರೆ ಮುಂದೆ ಒಸಿನ ಆಕೆ ಆ ಕರ್ಚಿಫಿನ ಇವ್ರಿಗೆ ವಾಪಸ್ಸು ಕೊಡ್ತಾಳೆ. ಲಂಗೋಟಿ ಹಾಕ್ಕೊಂಡು ಮಾನಾ ಮುಚ್ಚೊಳ್ಳಿ ಅಂತ.

ರಾಣಾರ ಕೋಪ ಕಂಡ ಎಲ್ಲರಿಗೂ ಭಯವಾಯಿತು. ಇನ್ನೂ ಶೂಟಿಂಗ್ ಗೆ ಶುರುವಾಗಿಲ್ಲ. ಆಗಲೇ ವಕ್ಕರಿಸಿದಂತಾಗಿತ್ತು. ಇಡೀ ಸೆಟ್ ನಲ್ಲಿ ವಿಚಿತ್ರ ಮೌನ.

 (ಸೂಚನೆ : ಈ ಕತೆಯೂ ಈಗಾಗಲೇ ಪುಸ್ತಕರೂಪದಲ್ಲಿದ್ದು, ಆಕೃತಿಕನ್ನಡ ಮ್ಯಾಗಝಿನ್ ನಲ್ಲಿ ಪ್ರತಿ ಶನಿವಾರ ಪ್ರಕಟವಾಗುತ್ತದೆ. ಇತರೆ ಯಾರು ಕೂಡ ಈ ಕತೆಯನ್ನು ಪ್ರಕಟಿಸುವ ಹಾಗಿಲ್ಲ.ಹಾಗೂ ಕದಿಯುವಂತಿಲ್ಲ.)

ಮತ್ತೆ ಮುಂದಿನ ಶನಿವಾರ ಓದಿರಿ. ಇದೊಂದು ಕುತೂಹಲಕಾರಿ ಕತೆ. ತಪ್ಪದೆ ಓದಿರಿ. ]


  • ಹೂಲಿಶೇಖರ್  (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW