ಕಾಳೀ ಕಣಿವೆಯ ಕತೆಗಳು, ಭಾಗ – ೨೦

ಮನಸ್ಸು ಭಾರವಾಗಿದ್ದರೂ ಕರ್ತವ್ಯ ಬಿಡುವಂತಿರಲಿಲ್ಲ. ಡ್ಯಾಮಿನ ಕಡೆಗೆ ಹೊರಟೆ. ಎಲ್ಲ ಮರೆತು ಕರ್ತವ್ಯದ ಕಡೆಗೆ ಹೆಜ್ಜೆ ಹಾಕಿದೆ. ಬೆಳಿಗ್ಗೆ ಚಹ ಕುಡಿದಿರಲಿಲ್ಲ. ಕುಡಿಯಲೂ ಮನಸ್ಸಾಗಿರಲಿಲ್ಲ. ದಿನಾಲು ಹೊಳೆಯಲ್ಲಿ ಸ್ನಾನ ಮಾಡಿ ಬರುವಾಗ ಮೊದಲು ದುರ್ಗಾ ದರ್ಶನ ಮಾಡಿ ನಂತರ ಮೂಸಾ ಕಾಕಾನ ಹೊಟೆಲ್ಲಿನಲ್ಲಿ  ಮೀಟರ್‌ ಚಹ ಕುಡಿದು ಖೋಲೆಯತ್ತ ಬರುತ್ತಿದ್ದೆ. 

ಸೂಪಾ ಡ್ಯಾಮ ಸೈಟ್‌- ೧೯೭೦ ಮೇ,

ಬೆಳಗಿನ ಮಂಜು ನದಿಯ ಮೇಲೆ ನನ್ನನ್ನೂ ಕವುಚಿಕೊಂಡು ಉದ್ದಕ್ಕೂ ಹರಡಿತ್ತು. ನನ್ನ ಕಾಲ ಬುಡದಲ್ಲಿಯೇ ಚಂಗನೆ ನೆಗೆದು ಹೋದ ಮೊಲಗಳು

ಡ್ಯಾಮ ಸೈಟಿನಲ್ಲಿ ಢಾಣಾ ಡಂಗುರವಾದ ಮೈಪವರ್‌ ಕಂಪನಿ ಸುದ್ದಿ 

ನಾನು ಇವತ್ತೂ ನಸುಕಿನಲ್ಲಿಯೇ ಹೊಳೆಯ ಕಡೆಗೆ ಹೋದೆ. ಬೇಗ ಸ್ನಾನ ಮಾಡಿ ತಿಂಡಿಗೆ ಡ್ಯಾಮ ಸೈಟಿಗೆ ಹೋಗಬೇಕು. ಅಲ್ಲಿ ದಾಮೋದರನ್‌ ನನಗೂ ಸೇರಿಸಿ ಇವತ್ತು ಆಪಮ್ಮು- ಕಡಲೆ ಸಾಂಬಾರ್‌ ಮಾಡುತ್ತೇನೆ ಎಂದು ನಿನ್ನೆಯೇ ಹೇಳಿದ್ದ. ಇವತ್ತು ನದಿಯ ಎರಡೂ ಬದಿಯ ಬೆಟ್ಟದಲ್ಲಿ ಡ್ಯಾಮ ಸೆಂಟರ್‌ ಮತ್ತು ಸೈಡ್‌ ಲೈನ್‌ ಗೆರೆಗಳನ್ನು ಪಕ್ಕಾ ಮಾಡುವುದಿತ್ತು. ಅದಕ್ಕಾಗಿ ಶೇಷಗಿರಿಯವರು, ಮಂಗಾರಾಮ್‌, ಇಂಜನಿಯರ್‌ ಎಸ್‌.ವೈ. ನಾಯಕ, ಅವರೂ ಬೇಗ ಬರುತ್ತೇವೆಂದು ಹೇಳಿ ಹೋಗಿದ್ದರು. 

ಅವಸರದಿಂದ ನದಿಯ ಬಳಿ ಬಂದೆ. ಹರಿವ ನೀರಿನ ಮೇಲೆ ಮಂಜು ಆವರಿಸಿತ್ತು. ಸುತ್ತಲಿನ ಹಸಿರಿನ ತೊಪ್ಪಲಿನಿಂದ ಮಂದಿನ ಹನಿಗಳು ಕೆಳಗಿನ ಒಣ ಎಲೆಗಳ ಮೇಲೆ ತೊಪ್‌ ಎಂದು ಬೀಳುವ ಸದ್ದು ಕೇಳುತ್ತಿತ್ತು. ನಾನು ತಟಕ್ಕೆ ಅನತಿ ದೂರದಲ್ಲಿ ಹರಡಿದ್ದ ಕುಮುರಿಯನ್ನು ಹೊಕ್ಕೆ. ಶೌಚ ಕಾರ್ಯಕ್ರಮಕ್ಕೆ ಈ ಕುಮುರಿ ಹೇಳಿ ಮಾಡಿಸಿದ ಜಾಗ. ಬಯಲೆಂದರೆ ಬಯಲು. ಮರೆಯೆಂದರೆ ಮರೆ. ಬೆಳಗಿನ ಮಂಜು ನನ್ನನ್ನೂ ಕವಚಿಕೊಂಡು ಹರಡಿತ್ತು. ಎದ್ದು ನದಿಯ ಕಡೆಗೆ ಹೊರಡಬೇಕು. ಅದುವರೆಗೆ ಮರೆಯಲ್ಲಿ ಮಲಗಿದ್ದ ಎರಡು ಮೊಲಗಳು ನನ್ನ ಕಾಲ ಸಪ್ಪಳಕ್ಕೆ ಎಚ್ಚರಗೊಂಡು ಈಚೆ ಬಂದವು. ನನ್ನನ್ನು ನೋಡಿದ್ದೇ ತಡ. ಗಾಬರಿಗೊಂಡು ನನ್ನ ಕಾಲ ಬುಡದಲ್ಲಿಯೇ ಚಂಗನೆ ನೆಗೆದು ಹೋದವು. ಚಣ ಹೊತ್ತು ನಾನೂ ಹೆದರಿ ಹಿಂದಕ್ಕೆ ಸರಿದೆ. ಪಾಪದ ಪ್ರಾಣಿಗಳು. ನದಿಯ ಪಕ್ಕದಲ್ಲಿ ಅವುಗಳಿಗೆ ಇಂಥ ಕುಮುರಿಗಳು ಅಂದರೆ ಗಿಡಗಂಟಿಗಳ ಜಾಡು ರಕ್ಷಣೆಗೆ ತುಂಬ ಅನುಕೂಲ. ಓಡಿದ ಮೊಲಗಳು ಕಾಡಿನ ಹಸಿರಿನಲ್ಲಿ ಮರೆಯಾಗುವವ ರೆಗೆ ನೋಡುತ್ತ ನಿಂತೆ. 

ರಾತ್ರಿಯೆಲ್ಲ ಕಾಡಿನಲ್ಲಿದ್ದು ಬೆಳಕು ಹರಿಯುತ್ತಲೇ ಅವರು ನದಿಯ ತಟಕ್ಕೆ ಬಂದರು ಯಾಕೆ? …ಯಾರವರು?   

ನದಿಯ ತಟಕ್ಕೆ ಬಂದು ಅಲ್ಲಿದ್ದ ಕೋಡುಗಲ್ಲಿನ ಮೇಲೆ ಬಟ್ಟೆಗಳನ್ನು ಇಟ್ಟು ಸ್ನಾನಕ್ಕೆಂದು ನೀರಿಗಿಳಿದೆ. ನದಿಯ ನೀರಲ್ಲಿ ಕಾಲಿಟ್ಟಿದ್ದೇ ತಡ. ಸಣ್ಣ ಸಣ್ಣ ಮೀನುಗಳ ಹಿಂಡು ಅಂಗಾಲು, ಪಾದಗಳಿಗೆ ನಯವಾಗಿ ಬಾಯಿಂದ ಕಚ್ಚತೊಡಗಿದವು. ಏನೋ ಒಂಥರ ಖುಶಿಯಾಯಿತು. ಅಷ್ಟರಲ್ಲಿ ಕಾಡಿನ ಕಡೆಯಿಂದ ಅವಸರದಿಂದ ಬಂದ ಇಬ್ಬರು ನಡುವಯಸ್ಸಿನವರು  ನಾನಿದ್ದ ತಟದ ಕಡೆಗೇ ಬಂದರು. ಇಷ್ಟು ಹೊತ್ತಿನಲ್ಲಿ ಕಾಡಿನಲ್ಲಿ ಅವರಿಗೆ ಅದೇನು ಕೆಲಸವಿತ್ತೋ. ನೋಡುತ್ತಿದ್ದಂತೆ ಅಚ್ಚರಿಯೂ ಆಯಿತು. ಅವರು ಕೈಯಲ್ಲಿ ಒಂದು ದೊಡ್ಡ ಗೋಣೀ ಚೀಲದಲ್ಲಿ ಏನನ್ನೋ ಸುತ್ತಿ ಬೆನ್ನ ಮೇಲೆ ಹೊತ್ತು ತಂದಿದ್ದರು. ಏನಿರಬಹುದು? ಯೋಚಿಸಿದೆ. ಅಷ್ಟರಲ್ಲಿ ನನ್ನನ್ನು ದುರುಗುಟ್ಟಿ ನೋಡಿದ ಒಬ್ಬ ಮೀಸೆಯವ ತುಸು ಗಡುಸಾಗಿ ಕೇಳಿದ. 

ಫೋಟೋ ಕೃಪೆ : India Today

‘’ಕೋನ್‌ ತೋ… ಯಾನೋ… ತಮಾ?… ಯಾರ್‌ ನೀ. ಇಷ್ಟೊತ್ತಿಗ್‌ ಹೊಳೀ ಕಡೀ ಬಂದೀ?’’ 

‘’ನಾ… ಡ್ಯಾಮಿನಾಗ ಕೆಲಸಾ ಮಾಡಾಂವರಿ. ಜಳಕಾ ಮಾಡೂಕ್‌ ಬಂದೇನಿ. ಇಲ್ಲೇ ಬಾಬೂ ಚಾಳದಾಗ ಭಾಡಿಗೀ ಅದೇನಿ’’ 

ನನ್ನ ವಿವರ ಹೇಳಿದೆ. ಅವರು ಒಂದು ಕ್ಷಣ ನನ್ನನ್ನು ದುರುಗುಟ್ಟಿ ನೋಡಿ ನಂತರ ನದಿಯ ಗುಂಟ ಊರ ಕಡೆಗೆ ಚಾಚಿದ ಕಾಲು ದಾರಿಯತ್ತ ಕಣ್ಣು ಹಾಯಿಸಿ ಯಾರನ್ನೋ ನಿರೀಕ್ಷಿಸುವಂತೆ ನೋಡಿದರು. ಅವರ ಮುಖದಲ್ಲಿ ಆತಂಕವೂ ಇಲ್ಲದಿರಿಲಿಲ್ಲ. 

ಅವರು ಕಾಡಿನ ಕಡೆಯಂದ ಹೊತ್ತು ತಂದ ಗೋಣೀ ಚೀಲದಲ್ಲಿ ಏನಿತ್ತು? 

 ‘’ನಾಳಿಂದ ಇಷ್ಟು ಲಗೂ ಇತ್ಲಾಗ ಬರೂಕ್‌ ಹೋಗಬ್ಯಾಡ. ಹುಲಿ ಎಳಕೊಂಡು ಹ್ವಾದೀತು ನೋಡ್‌. ಇಲ್ಲಾಂದ್ರ ನಾವನ ನಿನ್ನ ಸೂರ್ಪನಖೀ ಹೊಂಡಕ್ಕ ಹಾಕತೀವಿ ಮೊಸಳಿ ಬಾಯಾಗ್‌ ಹ್ವಾದೀ ಹುಷಾರ್‌!’’

ನನಗೆ ಗಾಬರಿಯಾಯಿತು. ಯಾರು ಇವರು? ಹೌದು. ನಾನು ಇಷ್ಟು ಬೇಗ ಹೊಳೇ ಕಡೆಗೆ ಬರಬಾರದಿತ್ತೇನೋ. ರಾತ್ರಿ ಹೊತ್ತು ಕಾಡಿನಲ್ಲಿ ಏನೇನೋ ವ್ಯವಹಾರಗಳು ನಡೀತಾ ಇರುತ್ತವಂತೆ. ಅವುಗಳನ್ನು ಕಂಡೂ ಕಾಣದಂತೆ ನೋಡಿ ಸುಮ್ಮನಿರಬೇಕು. ಅಡುಗೆಯ ಅಪ್ಪೂ ಒಂದು ಸಲ ನನಗೆ ಹೀಗೆಂದು ಹೇಳಿದ್ದ. 

ನನ್ನ ಅನುಮಾನ ನಿಜವಾಯಿತು. ಅವರು ಯಾವ ಹೆದರಿಕೆಯೂ ಇಲ್ಲದೆ ನೇರವಾಗಿ ನನ್ನನ್ನು ಕೇಳಿದರು. 

‘’ನಿನ್ನ ಹಿಂದ ಮತ್ತ ಯಾರರ ಬರೂಕ್‌ ಹತ್ಯಾರೇನು?’’

‘’ಗೊತ್ತಿಲ್ರೀ. ನಾ ಜಳಕಾ ಮಾಡಿ ಹೋಗೂನು ಅಂತ ಇಲ್ಲೀಗೆ ಬಂದ್ನಿ’’  

‘’ಆತು. ನಿನಗೊಂದು ಎಚ್ಚರಿಕೀ ಮಾತು ಹೇಳ್ತೀನಿ ತಮಾ. ನೀನ್‌ ಇಲ್ಲಿ ನಮ್ಮನ್ನ ನೋಡಿಲ್ಲ. ನಾವೂ ನಿನ್ನನ್ನ ನೋಡಿಲ್ಲ. ಗೊತ್ತಾತೂ?’’  

ಫೋಟೋ ಕೃಪೆ : Media Storehouse

ಅವರು ನನ್ನನ್ನು ಬೆದರಿಸಿದಂತೆ ಹೇಳಿದರು. ಮತ್ತು ಅತ್ತಿತ್ತ ನೋಡಿ ಹೆಗಲ ಮೇಲಿದ್ದ ಗೋಣಿ ಚೀಲ ಕೆಳಗಿಳಿಸಿದರು. ಚೀಲಗಳಿಂದ ರಕ್ತ ತೊಟ್ಟಿಕ್ಕುತ್ತಿತ್ತು. ಅದನ್ನು ಇಟ್ಟ ಜಾಗವೆಲ್ಲ ರಕ್ತಮಯ. ನಾನು ಗಾಬರಿಯಾಗಿ ನೋಡಿದೆ. 

‘’ಏಯ್‌. ಜಳಕಾ ಆತಿಲ್ಲೋ. ಲಗೂ ಜಾಗಾ ಖಾಲೀ ಮಾಡು. ನೀನು ಇಲ್ಲಿ ಏನೋ ನೋಡಿಲ್ಲ. ಗೊತ್ತಾತೂ. ಯಾರ್‌ ಕಡೇಗೇರ ಹೇಳೀದಿ ಅಂದ್ರ… ನಿನ್ನ ಮೈಯಾಗಿನ ರಕ್ತಾನೂ ಹಿಂಗ಼ಽ ಹರೀತೈತಿ. ತಿಳೀತ’’ 

ಅಂದರು. ನಾನು ಮತ್ತೆ ಮಾತಾಡುವ ಗೋಜಿಗೆ ಹೋಗಲಿಲ್ಲ. ಅವರ ಕೈಯಲ್ಲಿ ಉದ್ದ ಚೂರಿಗಳಿದ್ದವು. ಕೊಯ್ತಾನೂ ಇದ್ದವು. ನಾನು ಒದ್ದೆ ಬಟ್ಟೆಗಳನ್ನು ಸರಿಯಾಗಿಯೂ ಹಿಂಡಿಕೊಳ್ಳದೆ ಅಲ್ಲಿಂದ ಜಾಗ ಖಾಲಿ ಮಾಡಿದೆ. ನಾಳೆಯಿಂದ ಇತ್ತ ಬರಬಾರದು. ಬಂದರೂ ಇಷ್ಟು ಬೇಗ ಬರಬಾರದು. ಜನ ಅಡ್ಡಾಡುವ ಹೊತ್ತು ನೋಡಿ ಬರಬೇಕು ಎಂದು ನಿರ್ಧರಿಸಿದೆ. 

ನಿಮಗೆ ಗೊತ್ತೇನು ಗುಡ್ಡೇ ಮಾಂಸ

 ತಡಮಾಡದೆ ಅವರು ಗೋಣೀ ಚೀಲದಲ್ಲಿದ್ದ ಜೀವ ಬಿಟ್ಟ ಒಂದು ಜಿಂಕೆ, ನಾಲ್ಕು ಮೊಲಗಳನ್ನು ಈಚೆ ತಗೆದು ನದಿಯ ನೀರಿನಲ್ಲಿ ಮುಳುಗಿಸಿ ತೊಳೆದರು. ಹರಿಯುತ್ತಿದ್ದ ರಕ್ತವನ್ನು ತೊಳೆದ ನಂತರ ಅವುಗಳನ್ನು ಹೊತ್ತು ಕುಮುರಿಯ ಕಡೆಗೆ ಮರೆಗೆ ಹೋದರು. ಅವರಿಗೆ ಅದು ಮಾಮೂಲು ಆಗಿತ್ತು. ಮುಖದಲ್ಲಿ ಯಾವ ಹೆದರಿಕೆಯೂ ಇರಲಿಲ್ಲ. ಅಲ್ಲಿ ಅವರು ಜಿಂಕೆಯ ಚರ್ಮ ಸುಲಿದು ಮಾಂಸ ಬೇರೆ ಮಾಡುವುದು ಕಂಡು ನಾನು ಅಲ್ಲಿಂದ ನಿಲ್ಲದೆ ಊರಿನತ್ತ ದೌಡಾಯಿಸಿದೆ.  

ರಾತ್ರಿ ಹೊತ್ತು ಕಾಡಿಗೆ ಹೋಗಿ ಬೇಟೆಯಾಡಿ ನಸುಗತ್ತಲೊಳಗೆ ಮಾಂಸದೊಂದಿಗೆ ಊರು ಪ್ರವೇಶಿಸುವ ತಂಡ ಇಂಥ ಊರಲ್ಲಿ ಇದ್ದೇ ಇರುತ್ತದೆ ಎಂದು ಕೇಳಿ ತಿಳಿದಿದ್ದೆ. 

ಶೀಳು ದಾರಿಯಲ್ಲಿ ಎದುರು ಬಂದ ಪೈ ಮಾಮಾ

ಓಹ್‌… ಸಮಯ ಸಿಕ್ಕಾಗ ಈ ಕಾಡು ಬೇಟೆಗಾರರ ಬಗ್ಗೆ ಒಂದು ಕತೆ ಬರೆಯಬೇಕು. ಈ ಕಾಳೀ ಕಣಿವೆಯಲ್ಲಿ ಬರೆಯಲು ಎಷ್ಟೊಂದು ವಸ್ತುಗಳಿವೆ. ದಿನವೂ ಏನಾದರೂ ಒಂದು ವಿಷಯ ಸಿಕ್ಕೇ ಸಿಗುತ್ತದೆ ಅನಿಸಿತು. ನಾನು ಮತ್ತೆ ಅಲ್ಲಿ ನಿಲ್ಲಲಿಲ್ಲ. ಅವಸರದಿಂದ ದಾಪುಗಾಲು ಹಾಕುತ್ತ ಹೊರಟೆ. ಕಾಳೀ ತಾಯೀ. ಎಲ್ಲ ನಿನ್ನ ಮಹಿಮೆ ಅಂದೆ ಮನಸ್ಸಿನಲ್ಲಿ.

ನದೀಗುಂಟ ಕಾಲುದಾರಿಯಲ್ಲಿ ನಡೆಯುತ್ತಿದ್ದ ನನಗೆ ಎದುರು ಬಂದದ್ದು ಡ್ರೈವರ್‌ ಪೈ ಮಾಮಾ. 

ಅವತ್ತು ನಾನು ಆಫೀಸಿನಲ್ಲಿ ಮಲಗಿದ್ದಾಗ ಹೆಬ್ಬಾವು ಬಂದು ಕೋಳಿ ನುಂಗಿ ದೊಡ್ಡ ಆವಾಂತರವನ್ನೇ ಸೃಷ್ಟಿಸಿತ್ತಲ್ಲ. ಅದೇ ರಾತ್ರಿ ಪೈಮಾಮನ ಲಾರಿಯಲ್ಲಿ ಒಂದಷ್ಟು ಬಯಲು ಸೀಮೆಯಿಂದ ಬಂದಿದ್ದ ಕೂಲಿ ಜನ ತಮ್ಮ ಗಂಟು-ಗದಡಿ ಗಳು ಮತ್ತು ಪುಟ್ಟ ಮಕ್ಕಳೊಂದಿಗೆ ಲಾರಿಯಿಂದ ಇಳಿದಿದ್ದರಷ್ಟೆ. ಪೈ ಮಾಮ ಅವರಿಂದಲೂ ಕಾಸು ಪೀಕಿದ್ದನ್ನು ಈಗಾಗಲೇ ಹೇಳಿದ್ದೇನೆ. ಆ ದಿನದ ನಂತರ ಪೈ ಮಾಮ ನನಗೆ ಕಂಡಿರಲಿಲ್ಲ. 

ಓಹ್‌! ನೀವು ಕೋಳೀ ಕಳ್ಳ ಶೇಖರ್‌ ಅಲ್ಲಾ?

ಆತ ಕೊಡಸಳ್ಳಿ ಆಣೆಕಟ್ಟು ಕಟ್ಟುವ ಸ್ಥಳಕ್ಕೆ ಬೋರು ಮಶೀನಿನ ಬಿಡಿ ಭಾಗಗಳನ್ನು ಇಳಿಸಿ ಬರಲು ಲಾರಿಯೊಂದಿಗೆ ಹೋಗಿದ್ದನಂತೆ. ನಿನ್ನೆ ರಾತ್ರಿ ತಡವಾಗಿ ಬಂದಿರಬೇಕು. ಹಾಗೆ ತಡವಾಗಿ ಬಂದಾಗಲೆಲ್ಲ ಈತನೂ ಆಫೀಸೀನಲ್ಲಿಯೇ ಮಲಗುತ್ತಾನಂತೆ. ನರಸಿಂಹಯ್ಯ ಸಾಹೇಬರು ಬೇರೆ ಬೆಂಗಳೂರಿನಿಂದ ಬಂದಿದ್ದಾರೆ. ಅವರಿಗೆ ರಾತ್ರಿ ಪಾರ್ಟಿ ವ್ಯವಸ್ಥೆ ಮಾಡಿಕೊಡುವವನೂ ಇವನೇ ಅಂತೆ. 

ಪೈ ಮಾಮ ನನ್ನನ್ನು ಕಂಡವನೇ ಥಟ್ಟನೇ ನಿಂತ. ‘’ಹ್ಹೋ…ನೀವು ಶೇಖರ ಅಲ್ಲಾ? ಅವತ್ತು ರಾತ್ರಿ ಆಫೀಸಿನಲ್ಲಿ ಮಲಗಿ ಸಾಹೇಬರ ಕೋಳೀ ಕದ್ದು ಮಲಯಾಳೀ ಹೊಟೆಲ್ಲಿಗೆ ಮಾರಿಬಿಟ್ರೆಂತೆ? ಭಲೇ ಧೈರ್ಯ ನಿಮ್ದು. ಇಲ್ಲೇನು? ನೀವೂ ಗುಡ್ಡೇ ಮಾಂಸ ತಗೋಳ್ಳೋದಕ್ಕೆ ಹೋಗಿದ್ರಾ?’’ 

ನಾನು ಗಾಬರಿ ಬಿದ್ದೆ. ಪೈ ಮಾಮ ಏನು ಹೇಳುತ್ತಿದ್ದಾನೆ. ‘ಗುಡ್ಡೇ ಮಾಂಸ’ ಅಂದರೇನು? ಈಗ ನಿಧಾನವಾಗಿ ಅರ್ಥವಾಯಿತು. ಅಲ್ಲಿ ಬೇಟೆಗಾರರು ಕಾಡಿನಲ್ಲಿ ಬೇಟೆಯಾಡಿ ತಂದ ಪ್ರಾಣಿಗಳ ಮಾಂಸವನ್ನು ಹತ್ತಾರು ಗುಡ್ಡೆ ಹಾಕಿ ಮಾರುತ್ತಾರೆ. ಒಂದೊಂದು ಗುಡ್ಡೆಯೂ ಒಂದೂವರೆ ಕಿಲೋ ತೂಕದ್ದಿರುತ್ತದೆ. ಗುಡ್ಡೆಗೆ ಏಳರಿಂದ ಎಂಟು ರೂಪಾಯಿಗಳು. ಅದನ್ನು ಖರೀದಿಸಲು ಊರಿನ ಕಡೆಯಿಂದ  ಕೆಲವರು ಫಾರೆಸ್ಟಿನವರ ಕಣ್ಣು ತಪ್ಪಿಸಿ ನದೀ ತಟದ ಕಡೆಗೆ ಬರುತ್ತಾರೆ. ಈ ಪೈ ಮಾಮನೂ ಹೀಗೆ ಗುಡ್ಡೇ ಮಾಂಸಕ್ಕಾಗಿ ಕುಮರಿಯ ಕಡೆಗೆ ಹೊರಟಿದ್ದಾನೆ ಎಂದು ಅರ್ಥವಾಯಿತು. ಆದರೆ ಆತ ನನಗೆ ಕೋಳೀ ಕಳ್ಳ ಎಂದು ಬಿರುದು ಕೊಟ್ಟದ್ದು ನನಗೆ ಸರಿ ಬರಲಿಲ್ಲ. 

ಪೈ ಮಾಮನೂ… ಅವನ ಲಾರಿಯಲ್ಲಿ ಬಂದ ಕೂಲಿಯವರೂ… ಜೋಯಡಾ ಕಾಡಿನ ಮರವೂ

‘’ನೀವೂ ಗುಡ್ಡೇ ಮಾಂಸ ತಗೋಳ್ಳೋಕೆ ಹೋಗಿದ್ರಾ?  ಭಲೇ ಇದ್ದೀರಿ ಮತ್ತೆ. ಹಾಗ್‌ ಮಾಡೋದಾ. ಸಾಹೇಬರ ಕೋಳೀ ಕದ್ದು ಮಲಯಾಳೀ ಅಂಗಡಿಗೆ ಮಾರೋದಾ? ಎಷ್ಟು ಕೊಟ್ಟ ಅವ್ನು ದುಡ್ಡೂ…?’’  

ನನಗೆ ರೋಸಿಹೋಯಿತು. ಸರಿಯಾಗಿ ಝಾಡಿಸಬೇಕು ಅಂದುಕೊಂಡೆ. ಆದರೆ ಕುತ್ತಿಗೆಯವರೆಗೆ ಬಂದ ಕೋಪ ಬಾಯಿ ತನಕ ಬರಲಿಲ್ಲ.

‘’ಹೋಗ್ಲಿ ಬಿಡಿ ಶೇಖರವರೇ. ನಾನೂ ಮಾಡೋದ್‌ ಅದನ್ನೇ. ಒಂದ್‌ ವಿಷಯ. ಅವತ್ತು ನಿಮ್ಮ ಬಯಲು ಸೀಮೆ ಕಡೆಯಿಂದ ಬಂದಿದ್ರಲ್ಲ ಕೂಲೀ ಜನ. ಅವರ ಸಲುವಾಗೇ ಇವತ್ತೂ ನನಗೆ ಬರೂದ್‌ ಲೇಟ್‌ ಆಯ್ತು ಮಾರಾಯ್ರೇ’’

‘’ಯಾಕೆ? ಆ ಜನ ಮತ್ತೆ ಇಲ್ಲಿಗೇ ಬಂದ್ರೇನು’’

‘’ಹಾಂ… ಬಂದ್ರು. ಅವತ್ತು ನನ್‌ ಲಾರೀಲಿ ಬಂದ್ರು.  ಇವತ್ತೂ ನನ್‌ ಲಾರೀಲೇ ಬಂದೀದಾರೆ. ಹೋಗಿ ನೋಡಿ. ಲಾರೀನ ಪೋಲಿಸ್‌ ಠಾಣೇ ಮುಂದೆ ನಿಲ್ಸಿ ಬಂದೀದೀನಿ. ನನಗೆ ಗುಡ್ಡೇ ಮಾಂಸ ತಗೋಬೇಕು. ತಡವಾಗುತ್ತಪ್ಪ…’’

ನಿರಾಕಾರ ಭಾವದಿಂದ ಪೈ ಮಾಮಾ ಕುಮರಿಯತ್ತ ಓಡಿದ. ನಾನು ಯೋಚನೆಗೆ ಬಿದ್ದೆ. ಅವತ್ತು ಪೈ ಮಾಮನ ಲಾರಿಯಲ್ಲಿ ಬಂದ ಬಯಲು ಸೀಮೆಯ ಕೂಲಿಯವರು ಮತ್ತೆ ಬಂದಿದ್ದಾರೆಯೇ. ಅಂದು ಜೋಯಡಾ ಕಡೆಗೆ ಹೋಗುತ್ತೇವೆ ಅಂದಿದ್ದರು. ಅಲ್ಲಿ ಕೆಲಸ ಸಿಗಲಿಲ್ಲವೇನೋ. 

ಫೋಟೋ ಕೃಪೆ : Newsacross.com

ಆ ಕೂಲಿಯವರಿಗೆ ನಮ್ಮ ಡ್ಯಾಮಿನಲ್ಲಿಯೇ ಕೆಲಸ ಕೊಡಿಸಬೇಕು

ಅವರನ್ನು ನಮ್ಮ ಡ್ಯಾಮಿಗೆ ಕರೆದೊಯ್ದು ಅಲ್ಲಿ ಏನಾದರೂ ಕೆಲಸ ಕೊಡಿಸಬೇಕು ಅನಿಸಿ ಸೀದಾ ಪೋಲೀಸ ಠಾಣಾದತ್ತ ಹೊರಳಿದೆ. ಅಲ್ಲಿ ಠಾಣಾದ ಮುಂದೆ ಪೈ ಮಾಮಾನ ಹೆಚ್‌.ಇ.ಸಿ.ಪಿ. ಎಂದು ಬೋರ್ಡು ಬರೆದಿದ್ದ ಡಿಪಾರ್ಟಮೆಂಟ ಲಾರಿ ನಿಂತಿತ್ತು. ಲಾರಿಯ ಸುತ್ತ ಜನರ ಸಣ್ಣ ಗುಂಪೂ ಸೇರಿತ್ತು.  ಪೋಲೀಸರು ಲಾರಿಯನ್ನು ಹತ್ತಿ ಇಳಿಯುವುದು ನೋಡುವುದು ಮಾಡುತ್ತಿದ್ದರು. ನಾನು ಹತ್ತಿರ ಹೋಗುತ್ತಿದ್ದಂತೆ. ಅಲ್ಲಿದ್ದ ಕೆಲವರು ಮಾತಾಡುವುದನ್ನು ಕೇಳಿಸಿಕೊಂಡೆ. ಭೂಮಿ ಗಡಗಡ ನಡುಗಿದಂತಾಯಿತು. 

ಅದೆಲ್ಲೋ… ಬಾದಾಮಿ ಕಡೆಯವರಂತೆ. ಜೋಯಡಾದಲ್ಲಿ ಗುಡುಸ್ಲು ಹಕ್ಕೊಂಡು ಇದ್ರಂತೆ. ಡ್ಯಾಮು ಕಟ್ಟಿದ್‌ ಮೇಲೆ ಮುಳುಗೋ ಕಾಡ್ನಲ್ಲಿ ಮರಗಳನ್ನು ಕಡಿಯೋ ಕೆಲಸಕ್ಕೆ ಬಂದವ್ರಂತೆ. ನಿನ್ನೆ ಸಂಜೆ ಒಂದು ದೊಡ್ಡ ಮರ ಕಡ್ದು ದೂರ ಸರಿಯೋಕ್‌ ಮುಂಚೇನೇ ಇಡೀ ಮರಾ ಇವರ ಮೇಲೇನೇ ಉರುಳಿ ಬಿತ್ತಂತೆ. ಇಬ್ರು ಅಲ್ಲೇ ಜಾವಾ ಬಿಟ್ರೆಂತೆ. ಇನ್ನಿಬ್ರು ತಿನೇಕರ್‌ ಡಾಕ್ಟರ ಅಸ್ಪತ್ರೇಲಿ ಇದಾರಂತೆ. ಬದುಕ್ತಾರೋ ಇಲ್ಲೋ ಭರೋಸಾ ಇಲ್ಲ.

ಮರಗಳೊಂದಿಗೆ ಇವರೂ ಧರೆಗುರುಳಿದ್ದರು. ಇದು ಡ್ಯಾಮು ಕಟ್ಟೆಗೆ ಮೊದಲ ಹಾರವೇ?

ಆ ಮಾತು ಕೇಳಿದ್ದೇ ನಾನು ಕುಸಿಯುವುದೊಂದೇ ಬಾಕಿ. ಇದೇ ಲಾರಿಯಲ್ಲಿ ಅವತ್ತು ನರಸಿಂಹಯ್ಯನವರ ಆಫೀಸ್‌ ಮುಂದೆ ಇಳಿದಿದ್ದರು. ಬೆಳಿಗ್ಗೆ ನಾನೇ ಮಾತಾಡಿಸಿದ್ದೆ. ಇವತ್ತು ಅವರಿಗೂ ಡ್ಯಾಮಿನಲ್ಲೇ ಕೆಲಸ ಕೊಡಿಸಲು ಮನಸ್ಸು ಹಂಬಲಿಸಿತ್ತು. ಈಗ ನೋಡಿದರೆ….

ನಡುಗುವ ಕಾಲುಗಳಿಂದಲೇ ಲಾರಿಯ ಹಿಂದಿನ ಚಕ್ರದ ಮೇಲೆ ಕಾಲಿಟ್ಟು ಹತ್ತಿ ನೋಡಿದೆ. ಬರೀ ಮೈಯಲ್ಲಿದ್ದ, ಮಾಸಿದ ಧೋತರ ಸುತ್ತಿಕೊಂಡಿದ್ದ ಎರಡು ಶವಗಳು ನಿಶ್ಚಲವಾಗಿ ಮಲಗಿದ್ದವು. ಉರುಳಿದ ಮರಗಳೊಂದಿಗೆ ಇವರೂ ಭೂಮಿಗೆ ಉರುಳಿದ್ದರು. ಇದೆಲ್ಲವನ್ನೂ ನೋಡಿ ಪೈ ಮಾಮಾನಿಗೆ ಏನೂ ಅನಿಸಲಿಲ್ಲವೇನೋ. ಆತ ಖುಶಿಯಿಂದ ಗುಡ್ಡೇ ಮಾಂಸ ತರಲು ನದಿಯ ಕುಮರಿಯ ಕಡೆ ಹೋಗಿಬಿಟ್ಟಿದ್ದ. ಪರರ ಈ ನೋವು-ಸಂಕಟಗಳು ತನ್ನವು ಅಲ್ಲ ಎಂದು ತಿಳಿಯುವ ಜನರೂ ತನ್ನ ಸುತ್ತ ಇದ್ದಾರಲ್ಲ ಅನಿಸಿತು. 

‘ಡ್ಯಾಮು ಕೆಲಸ ಬಂತು. ಜೀವಹಾನಿಯೂ ಸುರುವಾಯಿತು. ಇನ್ನೇನು ಅನಾಹುತ ಆಗುತ್ತೋ’ ಎಂದು ಅಲ್ಲಿದ್ದ ಹಲವರು ಗೊಣಗಿದ್ದೂ ಕೇಳಿಸಿತು. ನನಗೆ ಒಂದು ಕ್ಷಣ ಕಣ್ಣಿಗೆ ಮಿಂಚು ಹೊಡೆದಂತಾಯಿತು. ನಾನು ಇನ್ನು ಡ್ಯಾಮಿನಲ್ಲಿಯೇ ಕೆಲಸ ಮಾಡಬೇಕಾಗಿದೆ. ಅವರು ಹೇಳುವುದು ಶಾಪವೋ ಕೋಪವೋ ಒಂದೂ ತಿಳಿಯಲಿಲ್ಲ. ಅಲ್ಲಿ ನಿಲ್ಲದೆ ತೊಯ್ದ ಕಣ್ಣುಗಳನ್ನು ಒರೆಸಿಕೊಳ್ಳುತ್ತ ಚಾಳದ ಕಡೆಗೆ ನಡೆದುಬಿಟ್ಟೆ. ಮನಸ್ಸು ಮಂಜುಗಡ್ಡೆಯಾಗಿತ್ತು. 

  ಸೂರ್ಪನಖಿ ಸುಮ್ನೆ ಬಿಟ್ಟಾಳಾ? ಅವಳ ಜಾಗದಲ್ಲಿ ಡ್ಯಾಮು ಕಟ್ಟಿ ಕಾಡು ಮುಳುಗಿಸಿದ್ರೆ ಊರನೇ ನುಂಗಿ ನೀರು ಕುಡೀತಾಳೆ 

ಫೋಟೋ ಕೃಪೆ : wikipedia

ಆಗಲೇ ಸುದ್ದಿ ಚಾಳದಲ್ಲಿದ್ದವರಿಗೆಲ್ಲ ತಲುಪಿತ್ತು. ಚಾಳದಲ್ಲಿದ್ದ ಎಲ್ಲ ಮನೆಯವರೂ ಹೊರಗೇ ನಿಂತಿದ್ದರು. ಚಾಂದಗುಡೆಯವರು ಮತ್ತು ಭೈರಾಚಾರಿಯವರು ಒಂದು ಕಡೆ ನಿಂತಿದ್ದರೆ, ಚಾಳದ ಹೆಂಗಸಲರೆಲ್ಲ ಇನ್ನೊಂದು ಕಡೆ ನಿಂತು ಮಾತಾಡುತ್ತಿದ್ದರು. ಪರಿಮಳಾ ಅವರು, ಶಾರದಾಬಾಯಿಯವರು, ಮೂರು ಜನ ಪೋಲೀಸ ಮನೆಯ ಹೆಂಗಸರು ಇನ್ನೊಂದು ಕಡೆ ಸೇರಿದ್ದರು. ಬಹುಶಃ ಇದೇ ಹೆಣಗಳ ಸುದ್ದಿ ಇರಬೇಕು. ನನ್ನನ್ನು ದೂರದಿಂದಲೇ ಗಮನಿಸಿದ ಚಾಂದಗುಡೆಯವರು – 

‘’ಅಲ್ಲೀಗೆ ಹೋಗೇ ಬಂದ್ರಿ? ಪಾಪ ಯಾವ ಕಡೆಯ ಕೂಲಿಯವರೋ?’’ 

ಅಂದರು ನಾನು ಏನೂ ಹೇಳುವ ಮನಸ್ಥಿತಿಯಲ್ಲಿರಲಿಲ್ಲ. 

‘’ಬಗಾ… ನೀವ್‌ ಡ್ಯಾಮ್‌ ಕಟ್ಟೂಕ್‌ ಬಂದ್ರಿ. ನಿಮ್‌ ಡ್ಯಾಮು ಊರಾಗ್‌ ಹೆಣಾ ಬೀಳಿಸೂಕ್‌ ಸುರೂ ಆತು’’ 

ಪೋಲೀಸ ಮನೆಯ ದಪ್ಪಗಿನ ಹೆಂಗಸೊಬ್ಬಳು ನನ್ನತ್ತ ನೋಡೇ ಹೇಳಿದಳು. ಆಕೆಯೇ ನನ್ನನ್ನು ನಿನ್ನೆ ರಾತ್ರಿ ಮೇಲೆ ಬಿದ್ದು ಹಂದಿಗಳಿಂದ ಕಾಪಾಡಿದ ಮಾತೆಯಾಗಿದ್ದಳು.  ಆಕೆ ಇನ್ನೂ ರಾತ್ರಿ ಹಾಕಿಕೊಂಡಿದ್ದ ಸ್ಕರ್ಟಿನಲ್ಲಿಯೇ ಇದ್ದಳು. ಚಾಂದಗುಡೆ ಮತ್ತು ಭೈರಾಚಾರಿಯವರು ಮುಖ ಮುಖ ನೋಡಿಕೊಂಡರು. ಮತ್ತೆ ಯಾರೂ ಮಾತಾಡಲಿಲ್ಲ. 

(ಚಿತ್ರ ಸಂಗ್ರಹ : ಚಳಗೇರಿ ವಿ.ಎನ್ )

ಪರಿಮಳಾ ನನ್ನತ್ತ ನೋಡಿ-  

‘’ಇದರ ಮೇಲೂ ಒಂದ್‌ ಕತೀ ಬರೀರಿ ಶೇಖರ್‌. ಕೆರೆಗೆ ಹಾರ ಕತೆ ಬೇರೆದ್ದು. ಆ ಥರ ಬೇಡ’’ 

ಅಂದರು. ನನ್ನ ಮನಸ್ಸಿನ ಅಂಚಿನಲ್ಲಿ ಏನೋ ಕೊರೆದಂತಾಯಿತು. ಹೌದು. ಅವರು ಹೇಳುತ್ತಿರುವುದು ಬೇರೆ ಥರದ ಕಥೆ. ಆದರೆ ಇದು ಡ್ಯಾಮು ನೀರಿನಲ್ಲಿ ಮುಳುಗಡೆಯಾಗಲಿರುವ ಕಾಡಿನ ಮರಗಳ ಕಥೆ. ಇಂಥ ಮರ ಸಂಪತ್ತನ್ನು ಫಾರೆಸ್ಟಿನವರು ಮೊದಲೇ ಕಡಿದು ಸಾಗಿಸುವ ಕೆಲಸಕ್ಕೆ ಆಗಲೇ ಕೈ ಹಾಕಿದ್ದರು. ಇಂಥ ಮರಗಳನ್ನು ಕಡಿದು ಸಾಗಿಸುವ ಈ ಕೆಲಸವನ್ನು ಕಂತ್ರಾಟುದಾರರಿಗೆ ಕೊಟ್ಟಿದ್ದರು. ಕಂತ್ರಾಟುದಾರರು ಕಡಿಮೆ ದಿನಗೂಲಿಗೆ ಸಿಗುವ ಕನ್ನಡ ಕೂಲಿಗ ಳನ್ನು ಬಯಲು ಸೀಮೆಯಿಂದ ಕರೆತಂದಿದ್ದರು. ಇದೂ ಕೂಡ ಡ್ಯಾಮು ಕಟ್ಟುವ ಕೆಲಸದ ಇನ್ನೊಂದು ಭಾಗ. ಇಲ್ಲಿ ಹೀಗೆ ಕೆಲಸ ಮಾಡುವವರನ್ನು ಕಾಡು ಬಲಿ ತಗೆದುಕೊಂಡಿದೆ. ಇದನ್ನು ಕಾಡು ತಗೆದುಕೊಂಡ ಹಾರ ಅನ್ನಬೇಕೋ ಇಲ್ಲ ಡ್ಯಾಮು ಬಲಿ ತಗೆದುಕೊಂಡಿತೋ ಎಂದು ತಿಳಿಯದೆ ಒಂದು ಕ್ಷಣ ಪರಿಮಳಾರನ್ನು ನೋಡಿದೆ. ಅವರ ಕಪ್ಪು ಕಣ್ಣುಗಳು ನನ್ನತ್ತಲೇ ನೋಡುತ್ತಿದ್ದವು. 

ಮೆಲ್ಲಗೆ ಅವರಿಗೆ ಬರುತ್ತೇನೆ ಎಂದು ಹೇಳಿ ನನ್ನ ಖೋಲೆಯತ್ತ ನಡೆದೆ. ನನಗೆ ನೋವಾಗಿರುವುದನ್ನು ಪರಿಮಳಾ ಅವರು ಗುರುತಿಸಿದರೇನೋ. ಅವರೂ ಮತ್ತೆ ಮಾತಾಡಲಿಲ್ಲ. ನಾನು ಹೋಗುವುದನ್ನೇ ಬಾಗಿಲ ಬಳಿ ನಿಂತು ನೋಡುತ್ತಿದ್ದರು. ಮತ್ತು ಇವತ್ತು ಪೋಸ್ಟು ಕಚೇರಿಗೆ ಹೋಗಿ ನಿಮ್ಮ ಕತೆ ಕಳಿಸಿ ಬರುತ್ತೇನೆ ಎಂದು ಮೆಲ್ಲಗೆ ಹೇಳಿದರು.

ಮನಸ್ಸು ಭಾರವಾಗಿದ್ದರೂ ಕರ್ತವ್ಯ ಬಿಡುವಂತಿರಲಿಲ್ಲ. ಡ್ಯಾಮಿನ ಕಡೆಗೆ ಹೊರಟೆ

ಎಲ್ಲ ಮರೆತು ಕರ್ತವ್ಯದ ಕಡೆಗೆ ಹೆಜ್ಜೆ ಹಾಕಿದೆ. ಬೆಳಿಗ್ಗೆ ಚಹ ಕುಡಿದಿರಲಿಲ್ಲ. ಕುಡಿಯಲೂ ಮನಸ್ಸಾಗಿರಲಿಲ್ಲ. ದಿನಾಲು ಹೊಳೆಯಲ್ಲಿ ಸ್ನಾನ ಮಾಡಿ ಬರುವಾಗ ಮೊದಲು ದುರ್ಗಾ ದರ್ಶನ ಮಾಡಿ ನಂತರ ಮೂಸಾ ಕಾಕಾನ ಹೊಟೆಲ್ಲಿನಲ್ಲಿ  ಮೀಟರ್‌ ಚಹ ಕುಡಿದು ಖೋಲೆಯತ್ತ ಬರುತ್ತಿದ್ದೆ. 

ಡ್ಯಾಮ ಸೈಟಿಗೆ ಚಾಂದಗುಡೆಯವರ ಜೊತೆ ಹೋಗುವಾಗ ಒಮ್ಮೆ ಪಾನ್‌ ಅಂಗಡಿಯಲ್ಲಿ ಆಗಲೇ ಕೂತಿರುತ್ತಿದ್ದ ಫ್ಲೋರಿನಾಳತ್ತ ನೋಡಿ ಅವಳ ಕುಡಿ ನಗು ಸ್ವೀಕರಿಸಿ ಅಲ್ಲಿಂದ ಫಾರೆಸ್ಟು ಮನೆಗಳನ್ನು ದಾಟಿ ಅಲ್ಲಿಯೇ ಇದ್ದ ನಾಟಾ ಡಿಪೋದಲ್ಲಿ ಹಾದು ಡ್ಯಾಮಿನ ಕಡೆ ಹೋಗುವ ಕಾಡಿನ ದಾರಿ ತುಳಿಯುತ್ತಿದ್ದೆ. ನಾಟಾ ಡಿಪೋದಲ್ಲಿ ಎಂಥೆಂಥ ದಿಮ್ಮಿಗಳು ಇದ್ದವು ಅಂತೀರಾ. ತೇಗು, ನಂದಿ, ಹಲಸು, ಮಾವು, ಕೆಂಪು ಮರದ ಭಾರೀ ಗಾತ್ರದ ದಿಮ್ಮಿಗಳನ್ನು ಸಾಲಾಗಿ ಪೇರಿಸಿಟ್ಟಿದ್ದರು. ಅವುಗಳನ್ನು ನೋಡಿಕೊಂಡು ನಡೆಯುವುದೇ ಒಂದು ಸೊಗಸು. 

ಇವತ್ತು ಇಬ್ಬರ ಮನಸ್ಸೂ ನೊಂದಿತ್ತು. ನನಗೆ ಕೂಲಿಯವರ ಹೆಣ ನೋಡಿ ಸಂಕಟವಾಗಿದ್ದರೆ  ಚಾಂದಗುಡೆ ಅವರಿಗೆ ಆದದ್ದೇ ಬೇರೆ. ಅವರಿಗೆ ಸರಕಾರದ ಡಿಪಾರ್ಟುಮೆಂಟು ಹೋಗಿ ಇದು ಮುಂದೆ ಕಾರ್ಪೋರೇಶನ್‌ ಕಂಪನಿಯಾಗಿ ನಾವೆಲ್ಲ ಕಂಪನಿ ನೌಕರರಾಗುತ್ತಿದ್ದೇವೆ ಎಂಬ ದುಃಖವಾಗಿತ್ತು. ಇದುವರೆಗೆ ನಾವು ಸರಕಾರೀ ನೌಕರರು. ತಮಗೆ ನೌಕರಿಯ ಭದ್ರತೆಯಿದೆ ಎಂದು ಅಂದುಕೊಂಡವರಿಗೆ ಇನ್ನು ತಮಗೆ ಆ ಭದ್ರತೆಯಿಲ್ಲ ಎಂಬ ಅರಿವಾಗಿತ್ತು. ಡ್ಯಾಮು ಕಟ್ಟಿ ಸೂಪಾ ಊರು ಮುಳುಗುವ ಮುಂಚೆಯೇ ಹೆಚ್‌.ಇ.ಸಿ.ಪಿ. ಎಂಬ ಸರಕಾರೀ ಇಲಾಖೆ ಮುಳುಗಿ ಅಲ್ಲಿ ಮೈಪವರ್‌ ಎಂಬ ಕಂಪನಿಯೊಂದು ತಲೆ ಎತ್ತುವುದಿತ್ತು.  

ಬೆಳಿಗ್ಗೆ ನಾನು ಮತ್ತು ಚಾಂಗುಡೆಯವರು ಬೇಗನೆ ಡ್ಯಾಮ ಸೈಟಿಗೆ ಹೋದೆವು. ನನ್ನ ನಿರೀಕ್ಷೆಯಂತೆ ಎಲ್ಲರೂ ಆಗಲೇ  ಫೀಲ್ಡ ಆಫೀಸಿಗೆ ಬಂದು ಸೇರಿದ್ದರು. ಹೈದರಾಬಾದಿನ ಶೇಷಗಿರಿಯವರಿಗೆ ನಮ್ಮ ಇಲಾಖೆ ಕಾರ್ಪೋರೇಶನ್‌ ಆಗುವುದರಿಂದ ಏನೂ ನಷ್ಟವಿರಲಿಲ್ಲ. ಅವರು ಕೇಂದ್ರ ಸರಕಾರದ ನೌಕರರಾಗಿದ್ದರು. ತಮ್ಮ ಇಲ್ಲಿಯ ಕೆಲಸ ಮುಗಿಯುತ್ತಲೂ ವಾಪಸು ಅವರು ಹೈದರಾಬಾದಿನ ಕೇಂದ್ರ ಕಚೇರಿಗೆ ವಾಪಸು ಹೋಗುವವರಿದ್ದರು.  

ಅಲ್ಲಿ ಸಿಬ್ಬಂದಿಗಳ ಚಿಕ್ಕ ಗುಪೇ ಸೇರಿತ್ತು. ಸಿವಿಲ್‌ ಜೆ.ಇ. ವಿ.ವೈ. ನಾಯಕ ಅವರು, ಎ.ಇ.ಗಳಾದ ಚಾಮರಾಜರು, [ಇವರಿಬ್ಬರೂ ಮುಂದೆ ಎಂ.ಪಿ.ಸಿ.ಲಿ. ಆದಾಗ ವಾಪಸ್ಸು ಪಿ.ಡಬ್ಲೂ.ಡಿ. ಗೆ ಹೋದರು] ರಾಮಚಂದ್ರರಾವ್ ಅವರು, ಬೋರಿಂಗ್‌ ಆಪರೇಟರುಗಳು, ಇತರೆ ಸಿಬ್ಬಂದಿಗಳಾದ, ಕಾಶಿನಾದನ್‌ ಪಿಳ್ಳೆ, ನಾನು ಚಾಂದಗುಡೆ ಎಲ್ಲ ಸೇರಿದ್ದೆವು. ಕ್ಯಾಸಲ್‌ ರಾಕ್‌ ಕಾಡಿನಲ್ಲಿದ್ದು ಕೆಲಸ ಮಾಡುತ್ತಿದ್ದ ಸರ್ವೇ ತಂಡಕ್ಕೆ ಇದರ ಬಗ್ಗೆ ಯಾವ ಮಾಹಿತಿಯೂ ಇರಲ್ಲಿಲ್ಲ. ಎಲ್ಲರೂ ಸೀನಿಯರ್‌ ರಾಮಚಂದ್ರರಾವ್‌ ಕಡೆಗೆ ನೋಡುತ್ತಿದ್ದರು. ಬೆಂಗಳೂರಿನಿಂದ ಬಂದಿದ್ದ ಎ.ಇ.ಇ.ನರಸಿಂಹಯ್ಯ ಸಾಹೇಬರು ಸೈಟಿಗೆ ಬಂದ ನಂತರವೇ ಸರಿಯಾದ ಮಾಹಿತಿ ಸಿಗುತ್ತದೆಂದು ಇಂಜಿನಿಯರ್‌ ರಾಮಚಂದ್ರರಾವ್‌ ಹೇಳಿದರು. 

ಪಕ್ಕದಲ್ಲಿ ಕಾಳಿ ಮೆಲ್ಲಗೆ ಸದ್ದು ಮಾಡದೆ ಹರಿದು ಪೂರ್ವಕ್ಕೆ ಸಾಗುತ್ತಿದ್ದಳು. ಬಲದಂಡೆಯ ಬೆಟ್ಟದಡಿಯಿದ್ದ ಶೂರ್ಪನಖಿಯ ಗುಹೆ ಅಲ್ಲಿಂದಲೇ ಕಾಣುತ್ತಿತ್ತು. ನಿನ್ನೆ ತಾನೆ ಅಲ್ಲಿ ಹೋಗಿ ಶೂರ್ಪನಿಖೆಯ ಕಲ್ಲು ರೂಪಕ್ಕೆ ನಮಿಸಿ ದೀಪ ಉರಿಸಿ ಬಂದಿದ್ದೆ. ಮತ್ತು ಅಲ್ಲಿದ್ದ ಕುಂಕುಮವನ್ನು ಹಣೆಗೆ ಧರಸಿದ್ದೆ. ಆ ಗುಹೆಯಲ್ಲಿ ಶತಮಾನಗಳಿಂದ ಅದೆಷ್ಟು ರಕ್ತ ತರ್ಪಣ ಆಗಿತ್ತೋ ಎಣಿಕೆಗೆ ಬಾರದ್ದು. ಸೂಪಾದಿಂದ ಬರುವವರು ಕೈಯಲ್ಲಿ ಒಂದು ಕೋಳಿಯನ್ನು ತಂದು ಇಲ್ಲಿ ಶೂರ್ಪನಿಖಿಗೆ ಅರ್ಪಿಸಿ ಅಲ್ಲಿಯೇ ಅಡುಗೆ ಮಾಡಿಕೊಂಡು ತಿಂದು ಹೋಗುತ್ತಿದ್ದರು. ದಸರೆಯ ಸಂದರ್ಭದಲ್ಲಿ ಇಂಥದ್ದು ಜಾಸ್ತಿಯಿತ್ತು. 

ಎ.ಇ.ಇ. ಕೋಳೀ ನರಸಿಂಹಯ್ಯ ಸಾಹೇಬರು ಬಂದರು

ಸಾಹೇಬರು  ‘ಲಕ್ಷ್ಮೀ’ ಎಂದು ಕರೆಯುತ್ತಿದ್ದ ಸರಕಾರೀ ಜೀಪು ಬೆಟ್ಟದ ತಗ್ಗಿನಲ್ಲಿ ಇಳಿದು ಕುಮುರಿಗಳ ಮಧ್ಯ ಹಾಯ್ದು ಗುರುಗುಡುತ್ತ ಬಂದು ಫೀಲ್ಡ ಆಫೀಸಿನ ಮುಂದೆ ನಿಂತಿತು. ಸಾಹೇಬರೊಂದಿಗೆ ಜೀಪಿನ ಹಿಂದೆ ಕೂತಿದ್ದ ಭೈರಾಚಾರಿ ಯವರೂ ಕೆಳಗಿಳಿದರು. ಅವರ ಕೈಯಲ್ಲಿ ನೋಟ್ಸ ಬರೆದುಕೊಳ್ಳಲು ಪ್ಯಾಡ್‌ವೊಂದಿತ್ತು. ಆಗಿನ ಕಾಲದಲ್ಲಿ ಒಬ್ಬ ಸಹಾಯಕ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಬರುತ್ತಾರೆಂದರೆ ಮಾಮಲೇದಾರರು ಬರುವಷ್ಟು ಕಿಮ್ಮತ್ತು ಇರುತ್ತಿತ್ತು. 

ಸಾಹೇಬರನ್ನು ನೋಡಿದ್ದೇ ಎಲ್ಲರೂ ಎದ್ದು ನಿಂತು ನಮಸ್ಕಾರ ಹೇಳಿದರು. ಈಗ ಎಲ್ಲರಿಗೂ ಕುತೂಹಲ. ನರಸಿಂಹಯ್ಯ ಸಾಹೇಬರು  ತುಂಬ ಗತ್ತಿನ ಮನುಷ್ಯ. ಯಾರಿಗೂ ಸೋಲುವ ಕುಳವಲ್ಲ. ಹೊರಗಿನ ಪೆಂಡಾಲದಲ್ಲಿ ಬೆಂಗಳೂರಿನಿಂದ ಅವತ್ತೇ ಬಂದಿದ್ದ ಕಾಳೀ ಯೋಜನೆಯ ಮಾಡೆಲ್ಲನ್ನು ಇಡಲಾಗಿತ್ತು. ಅದನ್ನು ತರಲು ಬೆಂಗಳೂರಿಗೆ ಲಾರಿ ಸಮೇತ ಹೋಗಿದ್ದ ಡ್ರೈವರ್‌ ಇರಸನ್‌ [ಇಳುವರಸನ್‌] ಸಾಹೇಬರರಷ್ಟೇ ಗತ್ತಿನಿಂದ ಅಲ್ಲಿ ಕೈಕಟ್ಟಿಕೊಂಡು ನಿಂತಿದ್ದ. ನರಸಿಂಹಯ್ಯನವರು ಒಮ್ಮೆ ಮಾಡೆಲ್ಲನ್ನು ನೋಡಿದರು.  ನಂತರ-

‘’ಈ ಮಾಡೆಲ್ಲು ನಮ್ಮ ಪ್ರಾಣ ಕಣ್ರಯ್ಯ. ಯಾರಾದ್ರೂ ಮುಟ್ಟಿ ಹಾಳ್‌ ಮಾಡಿದ್ರೆ ಮೇಲಿನಾಫೀಸಿನವ್ರು ಎಲ್ರೂನೂ ನೇಣಿಗಾಕ್ತಾರೆ ಹುಷಾರ್‌’’ 

ಅಂದರು. ಅವರು ನನ್ನನ್ನು ಉದ್ದೇಶಿಸಿಯೇ ಹೇಳಿದರೇನೋ ಅನಿಸಿತು. ನಾನು ಮೇಲೆ ಗುಡ್ಡದಲ್ಲಿ ಕಾಣುತ್ತಿದ್ದ ಶೂರ್ಪನಿಖಿಯ ಗುಹೆಯತ್ತ ಕತ್ತು ತಿರುಗಿಸಿದೆ. 

ಸೂಪಾ ಆಣೆಕಟ್ಟು ಬುನಾದಿ ಸ್ಥಳದಲ್ಲಿ… (ಚಿತ್ರ ಸಂಗ್ರಹ : ಚಳಗೇರಿ ವಿ.ಎನ್ )

ಇನ್ನು ಇಲ್ಲಿ ಮೈಪವರ್‌ ಬರುತ್ತೆ ಕಣ್ರೀ…

‘’ಸರ್‌ ಎಲ್ರೂ ಕಾಯ್ತಿದಾರೆ. ಅದೇನೋ ಡಿಪಾರ್ಟುಮೆಂಟು ತಗ್ದು ಕಂಪನೀ ಮಾಡ್ತಾರಂತೆ ಸುದ್ದಿ ಬಂತು. ಅದು ನಿಜಾನಾ ಹೇಗೆ ಸಾರ್‌’’ 

ಅಸಿಸ್ಟಂಟ ಇಂಜಿನಿಯರ್‌ ರಾಮಚಂದ್ರರಾವ್‌ ಕೇಳಿದರು. ಇದ್ದುದರಲ್ಲಿ ಗಟ್ಟಿಯಾಗಿದ್ದವರು ಮತ್ತು ನರಸಿಂಹಯ್ಯ ಸಾಹೇಬರಿಗೆ ಟಾಂಗು ಕೊಡಬಲ್ಲವರು ರಾಮಚಂದ್ರರಾವ್‌ ಆಗಿದ್ದರು. ಮೂಲತಃ ಅವರು ಮೈಸೂರಿನವರು. ಅವರ ತಾತ ದಿವಾನರ ಕಚೇರಿಯಲ್ಲಿ ಲೆಕ್ಕ ಬರೆಯುತ್ತಿದ್ದರಂತೆ.   

‘’ಹೌದು. ಎಲ್ಲಾ ತೀರ್ಮಾನ ಆಗೋಗಿದೆ ಕಣ್ರೀ. ಈ ಹೆಚ್‌.ಇ.ಸಿ.ಪಿ. ಮೈಸೂರು ಅರಸರ ಕಾಲದಲ್ಲಿ ಮೈಸೂರು ಇಲೆಕ್ಟ್ರಿಕ್‌ ಡಿಪಾರ್ಟಮೆಂಟು ಆಗಿತ್ತು. ಜೋಗ ಪ್ರಾಜೆಕ್ಟು ಕಟ್ಟೋವಾಗ ಹೆಚ್‌.ಇ.ಸಿ.ಪಿ. ಇಲಾಖೆ ಆಯ್ತು. ಇಲ್ಲಿ ಕಾಳೀ ಪ್ರಾಜೆಕ್ಟ ಕೆಲಸ ಸುರು ಆಗ್ತಿದ್ದಂತೆ ಅದೂ ಮುಳುಗೋ ಹೊತ್ತು ಬಂತು. ಇನ್ನು ಇಲ್ಲಿ ಮೈಸೂರು ಪವರ್‌ ಕಾರ್ಪೋರೇಶನ್ನು ಅನ್ನೋ ಲಿಮಿಟೆಡ್‌ ಕಂಪನಿ ಬರುತ್ತಂತೆ. ಮೈಪವರ್‌ ಅಂತಾನೂ ಅದಕ್ಕೆ ಹೇಳ್ತಾರೆ. ಸರಕಾರದ ಹತ್ರ ಪ್ರಾಜೆಕ್ಟ ಕಟ್ಟೋಕೆ ದುಡ್ಡಿಲ್ಲ. ಸಾಲ ಎತ್ತೋಕೆ ಒಂದು ಕಂಪನಿ ಬೇಕಲ್ಲ. ಅದ್ಕೇ ಮಾಡ್ತಾ ಅವ್ರೆ.  ’ 

ಅಷ್ಟರಲ್ಲಿ ಎ.ಇ. ಚಾಮರಾಜ ಅವರು ಎತ್ತರದ ದನಿಯಲ್ಲಿ ಹೇಳಿದರು. 

‘’ಹಾಗಿದ್ರೆ ನಾನ್‌ ಇಲ್ಲಿರೋದಿಲ್ಲ ಬಿಡಿ. ವಾಪಸ್ಸು ಪಿ.ಡಬ್ಲೂ.ಡಿ. ಗೇ ಹೋಗ್ತೀನಿ ಸಾರ್‌. ನಮ್ಗೆಲ್ಲಾ ಮದರ್‌ ಡಿಪಾರ್ಟಮೆಂಟೇ ವಾಸಿ. ಈ ಎಂಪೀಸೀನೂ ಬೇಡ. ಮೈಪವರೂ ಬೇಡ’’ 

ಫೋಟೋ ಕೃಪೆ : Revv

ಅಂದರು. ಅದರ ಹಿಂದೆಯೇ ರಾಮಚಂದ್ರರಾವ್‌ ಅವರೂ ಹಾಗೇ ಹೇಳಿದರು. ಹೌದು. ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಾಲದಲ್ಲಿ ಮೈಸೂರು ಎಲೆಕ್ಟಿಕಲ್‌ ಡಿಪಾರ್ಟಮೆಂಟ್‌ ಅನ್ನೋದಿತ್ತು. ಶಿವನ ಸಮುದ್ರ ಪ್ರಾಜೆಕ್ಟು ಸುರು ಮಾಡಿದ್ದೇ ಹಾಗೆ ಅಲ್ವೆ. ಮುಂದೆ ಅದೇ ಹೆಚ್‌.ಇ.ಸಿ.ಪಿ [ಹೈಡ್ರೋ ಎಲೆಕ್ಟ್ರಿಕ್‌ ಕನ್‌ಸ್ಟ್ರಕ್ಶನ್‌ ಪ್ರಾಜೆಕ್ಟ್] ಅಂತಾಯ್ತು. ಈಗ ಅದೂ ಮುಳುಗಿ ಎಂ.ಪಿ.ಸಿ [ಮೈಸೂರು ಪವರ್‌ ಕಾರ್ಪೋರೇಶನ್‌ ಲಿ.] ಅಂತ ಕಂಪನೀ ಮಾಡ್ತಾರಂದ್ರೆ ಏನರ್ಥ. ನಮಗೆ ಪಿ.ಡಬ್ಲೂ.ಡಿ ನೇ ಸರಿ ಅಂದರು. ಆದರೆ ನಮ್ಮ ಬಾಸ್‌ ವಿ.ವೈ.ನಾಯಕರು ಆಕಾಶ ನೋಡುತ್ತ ಮೌನವಾಗೇ ಇದ್ದರು. ಅವರೂ ಕೂಡ ಪಿ.ಡಬ್ಲೂ.ಡಿ. ಯಿಂದಲೇ ಎರವಲು ಸೇವೆ ಮೇಲೆ ಬಂದವರಾಗಿದ್ದರು. ಎ.ಇ.ಇ. ನರಸಿಂಹಯ್ಯನವರಿಗೂ ಅವರಿಗೂ ಅಷ್ಟಕ್ಕಷ್ಟೇ. ಅವರಿರೋ ಕಡೆ ನಾಯಕ ಅವರು ಏನೂ ಮಾತಾಡುವುದಿಲ್ಲ ಎಂದು ಒಮ್ಮೆ ಚಾಂದಗುಡೆಯವರು ಹೇಳಿದ್ದರು. [ನಾಯಕರೂ ಮುಂದೆ ಪಿ.ಡಬ್ಲೂ.ಡಿ. ಗೆ ವಾಪಸು ಹೋಗುತ್ತಾರೆ]

ಪವರ್‌ ಕಾರ್ಪೋರೇಶನ್‌ ಬಂದ್ರೆ ಯಾಕ್ರೀ ಹೆದರಿಕೊಳ್ತೀರಾ?

ನರಸಿಂಹಯ್ಯನವರು ಮತ್ತೆ ಹೇಳಿದರು. 

‘’ಯಾಕೆ ಹೆದ್ರಿಕೊಳ್ತೀರಾ? ಮೈವರ್‌ ಬಂದ್ರೆ ನಿಮಗೆಲ್ಲಾ ಅಡ್ವಾನ್ಸ ಪ್ರಮೋಶನ್‌ ಕೊಟ್ಟೇ ಇಟ್ಕೊಳ್ಳೋದು. ಸಂಬಳ ಸ್ಕೇಲನೂ ಜಾಸ್ತಿ ಮಾಡ್ತಾರಂತೆ. ಸರಕಾರೀ ನೌಕರರಿಗಿಂತ ಸ್ಕೇಲು ದೊಡ್ಡದಿರುತ್ತೆ ಬಿಡಿ. ಕಾಡಿನಲ್ಲಿರೋದ್ರಿಂದ ಅದೂ-ಇದೂ ಸವಲತ್ತು ಮಣ್ಣಾಂಗಟ್ಟಿ ಎಂತ ಇರುತ್ತೆ’’ 

ಅಂದರು. ಇಂಜಿನಿಯರುಗಳೆಲ್ಲ ತಮ್ಮ ಭವಿಷ್ಯದ ಬಗ್ಗೆ ಮಾತಾಡುತ್ತಿರುವಾಗ ಚಾಂದಗುಡೆಯವರಿಗೆ ತಡೆದುಕೊಳ್ಳ ಲಾಗಲಿಲ್ಲ. ಅದುವರೆಗೆ ಬಿಳೀ ಪೈಜಾಮ ಎತ್ತಿ ಹಿಡಿದು, ತಲೆ ಕೆರೆಯುತ್ತ ನಿಂತವರು ಈಗ ಕೇಳಿಯೇ ಬಿಟ್ಟರು.

‘’ಮತ್ತ ನಮ್ಮ ಗತಿ ಏನ್ರೀ ಸರ್. ನಾವು ಹದಿನೈದು ವರ್ಷದಿಂದ ಅದೀವಲಾ ಇಲ್ಲಿ ಪ್ರಾಜೆಕ್ಟ ಕೆಲ್ಸದಾಗ’’. 

ಅಂದರು. ಮುಂದೆ ತಮ್ಮ ಗತಿ ಏನಾಗುತ್ತದೋ ಅನ್ನೋ ಗಾಬರಿಯಿಂದ. ನರಸಿಂಹಯ್ಯನವರು ನಕ್ಕು ಹೇಳಿದರು. 

‘’ನೀವು ಸೀನಿಯರ್‌ ಇದ್ದೀರಿ ಬಿಡ್ರೀ ಚಾಂದಗುಡೇ. ಬ್ರಹ್ಮ ಬಂದ್ರೂ ನಿಮ್ಮನ್ನ ಅಲ್ಲಾಡಿಸೋದಕ್ಕಾಗಲ್ಲ. ಇಲ್ಲಿದಾರೆ ನೋಡಿ. ಇವ್ರು….’’

ಎಂದು ನನ್ನತ್ತ ನೋಡುತ್ತ ಹೇಳಿದರು. ಅವರಿಗೆ ಕೋಳಿ ಕಳೆದು ಹೋದ ಕೋಪ ಇನ್ನೂ ಅರಿರಲಿಲ್ಲವೇನೋ. 

‘’ಇವ್ರು ದಿನಗೂಲಿಗಳು. ಕೆಸರಲ್ಲಿ ನೆಟ್ಟಿರೋ ಗರುಡಗಂಬ ಇದ್ದಂಗೆ. ಅತ್ಲಾಗೂ ಬೀಳಬಹುದು. ಇತ್ಲಾಗೂ ಬೀಳಬಹುದು. ನಿಲ್ಲೋದಂತೂ ಗ್ಯಾರಂಟಿ ಇಲ್ಲ’’ 

ಅಂದರು ವ್ಯಂಗ್ಯವಾಗಿ. ಅವರ ಮಾತಿಗೆ ರಾಮಚಂದ್ರರಾವ್‌ ಮತ್ತು ಚಾಮರಾಜರೂ ಗಟ್ಟಿಯಾಗಿ ನಕ್ಕರು. ನನಗೆ ಗಾಬರಿ ಅವಮಾನ ಒಟ್ಟಿಗೇ ಆಯಿತು. ಪಕ್ಕದಲ್ಲಿಯೇ ಇದ್ದ ನದಿಯ ಕಡೆ ಮುಖ ತಿರುಗಿಸಿದೆ. ದೂರದಲ್ಲಿ ನದಿಯಿಂದ ಬಿಂದಿಗೆ ಹೊತ್ತು ದಾಮೋದರನ್‌ ಹೊಟೆಲ್ಲಿನ ಕಡೆ ಹೊರಟ ಲಂಬಾಣಿ ಹುಡುಗಿ ಗೋಮ್ಲಿ ಕಂಡಳು. ಹತ್ತಿರ ಇದ್ದರೆ ನನ್ನನ್ನು ನೋಡಿ ಆಕೆಯೂ ಕಿಸಕ್ಕೆಂದು ನಗುತ್ತಿದ್ದಳೇನೋ. ಶ್ರೀಧರ್‌ ಕಾಣಕೋಣಕರ ತುಟಿಯಲ್ಲೇ ನಕ್ಕ. ಚಾಂದಗುಡೆಯವರು ಎಲ್ಲರೆದುರೇ ತಮ್ಮ ಸಡಿಲಾದ ಬಿಳಿಯ ಪೈಜಾಮನ್ನು ಎತ್ತಿ ಕಟ್ಟಿಕೊಂಡು ಹ್ಹಹ್ಹಹ್ಹ ಅಂದರು. ಮಲಯಾಳಿಗಳಾದ ಕಾಶೀನಾದನ್‌, ಮಮ್ಮದ ಕೋಯಾರಿಗೆ ಸಾಹೇಬರ ಮಾತು ಅರ್ಥವಾಗದೆ ಪಿಳಿ ಪಿಳಿ ಕಣ್ಣು ಬಿಟ್ಟರು.  

ಅಷ್ಟರಲ್ಲಿ ಅಲ್ಲಿಗೆ ಕಾರಿನಲ್ಲಿ ಜಿಯಾಲಿಜಿಸ್ಟರಾದ ಶೇಷಗಿರಿಯವರು, ಮಂಗಾರಾಮರು, ಜೊತೆಗೆ ವಿ.ಎಸ್‌. ಉಪಾಧ್ಯಾಯರೂ ಬಂದರು. ಉಪಾಧ್ಯಾಯರು ತಮಗೆ ನಡೆದದ್ದೆಲ್ಲ ಗೊತ್ತಿದೆ ಎನ್ನುವಂತೆ ಚಿವುಟುಗಣ್ಣಲ್ಲಿ ಎಲ್ಲರ ಮುಖ ನೋಡಿದರು. ಶೇಷಗಿರಿಯವರು ನಗುತ್ತಲೇ ಎಲ್ಲರಿಗೂ ಗುಡ್‌ ಮಾರ್ನಿಂಗ್‌ ಹೇಳಿ ‘ಕಮಾನ್‌ ಶೇಖರ್‌, ಇವತ್ತು ಬೆಟ್ಟದ ಮೇಲೆ ಡ್ಯಾಮ್‌ ಸೆಂಟ್ರಲ್‌ ಲೈನ್‌ ಗೆ ಸುಣ್ಣದ ಗೆರೆ ಹಾಕಬೇಕು’ 

ಅಂದರು. ನಾನು ಗಡಬಡಿಸಿದೆ. 

[ಮುಂದಿನ ಶನಿವಾರ ಮತ್ತೆ ಓದಿರಿ. ಮೈಪವರ್‌ ಅಲ್ಲೋಲ ಕಲ್ಲೋಲ ಸಂಗತಿಗಳನ್ನು ತಪ್ಪದೆ ಓದಿರಿ. ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ. ಇದು ಬೆಳಕು ತಂದವರ ಕತ್ತಲ ಬದುಕಿನ ಕತೆ]  


  • ಹೂಲಿಶೇಖರ್  (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)
hoolishekhar
0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW