ಮೂವತೈದು ಪೈಸೆಗೆ ಒಂದು ಕೇ.ಜಿ. ಅಕ್ಕಿ, ಎರಡು ನೂರಾ ಐವತ್ತು ರೂಪಾಯಿಗೆ ಒಂದು ತೊಲ ಚಿನ್ನ ಸಿಗುವ ಕಾಲ. ಆಗಿನದು ನಮ್ಮದು ದೊಡ್ಡ ಸಂಬಳದ ನೌಕರಿಯಾಗಿರಲ್ಲಿಲ್ಲ. ನನಗೆ ಸಿಗುತ್ತಿದ್ದ ತಿಂಗಳಿನ ಸಂಬಳ ಎಪ್ಪತೈದು ರೂಪಾಯಿ. ಅದರಲ್ಲಿ ಪ್ರತಿ ತಿಂಗಳು ಮೂವತೈದು ರೂಪಾಯಿಗಳನ್ನು ಉಳಿಸುತ್ತಿದ್ದೆ. ಅದು ಕೂಡ ಖಾಯಂ ಆಗಿರಲಿಲ್ಲ. ಇಲ್ಲಿ ಕೆಲಸ ಹೋದರೆ ನಾವೂ ಗೋವಾ ಕಡೆಗೆ ಹೋಗುವುದೇ ನಿಕ್ಕಿಯಾಗಿತ್ತು.
ಸೂಪಾ ಡ್ಯಾಮ ಸೈಟ್ – ಮೇ, ೧೯೭೦
ತಾಂತ್ರಿಕ ತಜ್ಞರಾದ ಶ್ರೀ ಎಂ. ಹಯಾತ್ ಅವರು ಎಂ.ಪಿ.ಸಿ.ಯ ಪ್ರಥಮ ಚೇರ್ಮನ್‌ರು
ಹಿರಿಯ ಐ.ಎ.ಎಸ್ ಅಧಿಕಾರಿಗಳಾದ ಶ್ರೀ ಪಿ.ಆರ್.ನಾಯಕ ಅವರು ಮೊದಲ ವ್ಯವಸ್ಥಾಪಕ ನಿರ್ದೇಶಕರು
(ಶ್ರೀ ವೀರೇಂದ್ರ ಪಾಟೀಲರು ಫೋಟೋ) (ಚಿತ್ರ ಸಂಗ್ರಹ : ಚಳಗೇರಿ ವಿ.ಎನ್ )
(ಮುಖ್ಯ ಇಂಜಿನಿಯರ್ ಶ್ರೀ ಎನ್ ಜಿ ಜೋಶಿ, ಪ್ರಥಮ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಪಿ ಆರ್ ನಾಯಕ್, ಪ್ರಥಮ ಚೇರ್ ಮನ್ .ಶ್ರೀ ಎಂ.ಹಯಾತ್ ಅವರ ಚಿತ್ರ) (ಚಿತ್ರ ಸಂಗ್ರಹ : ಚಳಗೇರಿ ವಿ.ಎನ್ )
ನರಸಿಂಹಯ್ಯ ಸಾಹೇಬರು ಇನ್ನೂ ಒಂದು ಸುದ್ದಿ ಹೇಳಿದರು. ಜುಲೈ ಇಪ್ಪತ್ತಕ್ಕೆ ಸರಕಾರದಿಂದ ಅಧಿಕೃತ ಘೋಷಣೆ ಆಗುವದಿದ್ದು ಅವತ್ತು ಮೈಸೂರು ಪವರ್ ಕಾರ್ಪೋರೇಶನ್ ಲಿಮಿಟೆಡ್ ಎಂಬ ಕಂಪನಿ ಅಧಿಕೃತವಾಗಿ ಆರಂಭ ವಾಗುತ್ತದೆ. ಇದರ ಬಗ್ಗೆ ಗೆಜೆಟ್ ನೋಟೀಫಿಕೇಶನ್ನೂ ಆಗುತ್ತದೆ ಎಂದು ಹೇಳಿದರು.
ರಾಜ್ಯದ ಹಿರಿಯ ತಾಂತ್ರಿಕ ತಜ್ಞ ಶ್ರೀ ಎಂ. ಹಯಾತ್ ಅವರು ಚೇರ್ಮನ್ ಅಂತಲೂ ಹಿರಿಯ ಐ.ಎ.ಎಸ್. ಅಧಿಕಾರಿ ಶ್ರೀ ಪಿ.ಆರ್.ನಾಯಕ ಅವರು ವ್ಯವಸ್ಥಾಪಕ ನಿರ್ದೇಶಕರಾಗಿಯೂ ನೇಮಕವಾಗುವ ಬಗ್ಗೆ ಮಾತು ಕೇಳ್ತಾ ಇದೆ. ಉಳಿದ ಹಾಗೆ ರಾಜ್ಯದ ಪರಿಣಿತ ತಂತ್ರಜ್ಞರು ಈ ಕಾರ್ಪೋರೇಶನ್ನಿನ ನಿರ್ದೇಶಕ ಮಂಡಲಿಯಲ್ಲಿರುತ್ತಾರೆ. ಮೈಸೂರು ಸರಕಾರದ ಮುಖ್ಯಮಂತ್ರಿಗಳು, ವಿದ್ಯುತ್ ಮಂತ್ರಿಗಳು, ಸರಕಾರದ ಮುಖ್ಯ ಕಾರ್ಯದರ್ಶಿಗಳು, ಮೈಸೂರು ರಾಜ್ಯ ಇಲೆಕ್ಟ್ರಿಕ್ ಬೋರ್ಡಿನ [ಎಂ.ಎಸ್.ಇ.ಬಿ] ಅಧ್ಯಕ್ಷರು, ನೀರಾವರಿ ಇಲಾಖೆಯ ನಿರ್ದೇಶಕರು, ಹಣಕಾಸು ಇಲಾಖೆಯ ನಿರ್ದೇಶಕರು, ಇನ್ನೂ ಯಾರ್ಯಾರೋ ಇದಾರಂತೆ. ಇವರನ್ನೊಳಗೊಂಡ ನಿರ್ದೇಶಕರ ಮಂಡಳಿ ರಚಿತವಾಗಲಿದೆ ಅಂತೆ ಎಂದು ಹೇಳಿದರು.
ಆಗ ಮಾನ್ಯ ಶ್ರೀ ವೀರೇಂದ್ರ ಪಾಟೀಲರು ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದರು. ಸ್ವತಃ ಅವರಿಗೇ ನಿಗಮದ ಬಗ್ಗೆ ಹೆಚ್ಚು ಆಸ್ಥೆ ಇದೆಯಂತೆ ಎಂದೂ ಹೇಳಿದರು. ಅಲ್ಲಿದ್ದ ಎಲ್ಲರೂ ಆತಂಕ ತುಂಬಿದ ಭಯದಿಂದ ಈ ಎಲ್ಲ ಸುದ್ದಿ ಕೇಳಿದರು.
ಮೂವತೈದು ಪೈಸೆಗೆ ಒಂದು ಕೇ.ಜಿ. ಅಕ್ಕಿ, ಎರಡು ನೂರಾ ಐವತ್ತು ರೂಪಾಯಿಗೆ ಒಂದು ತೊಲ ಚಿನ್ನ ಸಿಗುವ ಕಾಲ
ನನಗೂ ಆತಂಕವಾಗದೇ ಇರಲಿಲ್ಲ. ಆಗಿನದು ನಮ್ಮದು ದೊಡ್ಡ ಸಂಬಳದ ನೌಕರಿಯಾಗಿರಲ್ಲಿಲ್ಲ. ಇದ್ದದ್ದು ಖಾಯಂ ಕೂಡ ಆಗಿರಲಿಲ್ಲ. ಇಲ್ಲಿ ಕೆಲಸ ಹೋದರೆ ನಾವೂ ಗೋವಾ ಕಡೆಗೆ ಹೋಗುವುದೇ ನಿಕ್ಕಿಯಾಗಿತ್ತು. ಆದರೂ ಸಸ್ತಾ ಕಾಲ. ಎರಡು ನೂರಾ ಐವತ್ತು ರೂಪಾಯಿಗೆ ಹತ್ತು ಗ್ರಾಮ್ ಚಿನ್ನ ಸಿಗುತ್ತಿದ್ದ ಕಾಲ ಅದು. ನನಗೆ ಸಿಗುತ್ತಿದ್ದ ತಿಂಗಳಿನ ಸಂಬಳ ಎಪ್ಪತೈದು ರೂಪಾಯಿ. ಅದರಲ್ಲಿ ಪ್ರತಿ ತಿಂಗಳು ಮೂವತೈದು ರೂಪಾಯಿಗಳನ್ನು ಉಳಿಸುತ್ತಿದ್ದೆ.
ದೂಮಪಾನ ಇಲ್ಲ. ಸುರಾಪಾನ ಇಲ್ಲ. ಮಾಂಸ ಭಕ್ಷಣೆ ಇಲ್ಲ. ಎಲೆಯಡಿಕೆಯನ್ನೂ ಹಾಕುತ್ತಿರಲಿಲ್ಲ. ಚಹಾ ಕೂಡ ಮಿತವಾಗಿತ್ತು. ಮಿತ ಭೋಜನ. ಹಣ ಕೊಡದೆ ಯಥೇಚ್ಛವಾಗಿ ಸಿಗುತ್ತಿದ್ದ ಸ್ವಚ್ಛ ಗಾಳಿ, ಸ್ವಚ್ಛ ನೀರು ನಮ್ಮ ಭಾಗ್ಯವಾಗಿತ್ತು. ಅದರಿಂದಾಗಿ ಮೂವತೈದು ರೂಪಾಯಿಯ ತಿಂಗಳ ಉಳಿಕೆಯು ನನ್ನ ಪಾಲಿಗೆ ದೊಡ್ಡ ಗಳಿಕೆಯೂ ಆಗಿತ್ತು.
ಮೂವತೈದು ಪೈಸೆಗೆ ಒಂದು ಕಿಲೋ ಅಕ್ಕಿ ಸೂಪಾದ ಬಾಳೇ ಸಾಹುಕಾರರ ಅಂಗಡಿಯಲ್ಲಿ ಸಿಗುತ್ತಿತ್ತು. ಅಷ್ಟು ಸಂಬಳವೇ ನಮಗೆ ಭಾರಿಯಾಗಿತ್ತು. ಈಗ ಈ ಕಾರ್ಪೋರೇಶನ್ನು ಬಂದರೆ ಇದ್ದವರನ್ನು ಕಿತ್ತು ಹೊಸಬರನ್ನು ನೇಮಕ ಮಾಡಿಕೊಂಡರೆ ಗತಿಯೇನು ಎನ್ನುವ ಭಯ ಸುರುವಾಯಿತು. ಆದರೆ ನನ್ನ ಬಗ್ಗೆ ಮೊದಲಿಂದಲೂ ಕರುಣೆ ಇಟ್ಟುಕೊಂಡಿದ್ದ ತೆಲುಗು ದೇಶದ ಜಿಯಾಲಾಜಿಸ್ಟ ಶ್ರೀ ಶೇಷಗಿರಿಯವರು ನನ್ನ ಬೆನ್ನು ತಟ್ಟಿ ಹೇಳಿದರು.
‘’ಡೋಂಟ್ ವರೀ ಶೇಖರ್. ನಿಮ್ಮ ಸ್ಟೇಟ್‌ನವರು ಕೆಲಸ ಕೊಡದಿದ್ರೆ ನಾನು ಕೈ ಬಿಡೋದಿಲ್ಲ. ನಿಮ್ಮನ್ನು ಹೈದರಾಬಾದಿಗೆ ಒಯ್ತೇನೆ. ಅಲ್ಲಿ ನಮ್ಮ ಸರ್ವೇ ಆಫ್ ಇಂಡಿಯಾದಲ್ಲಿಯೇ ಕೆಲಸ ಕೊಡಿಸುತ್ತೇನೆ’’
ಅಂದು ಬಿಟ್ಟರು. ಅದು ನರಸಿಂಹಯ್ಯನವರಿಗೆ ಅಷ್ಟೇ ಅಲ್ಲ. ಅಲ್ಲಿದ್ದ ಎಲ್ಲ ಇಂಜಿನಿಯರುಗಳಿಗೆ ಇರುಸು-ಮುರಿಸಾಯಿತೇನೋ. ಅವರು ಯಾರೂ ಮುಂದೆ ಮಾತಾಡಲಿಲ್ಲ.
ಹಸಿದ ಹೊಟ್ಟೆಯಲ್ಲಿ ಯಾರೂ ದೇಶಭಕ್ತರಾಗುವುದಿಲ್ಲ
ಒಂದೇ ದಿನದಲ್ಲಿ ಎಲ್ಲರೂ ಆತಂಕ, ಗೊಂದಲದ ಗೂಡಾಗಿದ್ದರು. ಆದರೆ ಆಗಲೇ ಇಲಾಖೆಯ ಕೆಲಸ ಬಿಡಲು ನಿರ್ಧರಿಸಿದ್ದ ಶ್ರೀಧರ್ ಕಾಣಕೋಣಕರ ಮಾತ್ರ ನಿರ್ಲಿಪ್ತನಾಗಿದ್ದ.
ನನಗೆ ಓದುವಾಗಿನ ಒಂದು ಗಾದೆ ಮಾತು ನೆನಪಾಯಿತು. ಹಸಿದ ಹೊಟ್ಟೆಯಲ್ಲಿ ಯಾರೂ ದೇಶ ಭಕ್ತರಾಗುವುದಿಲ್ಲ. ಎಂಬುದು ಅದೆಷ್ಟು ಸತ್ಯ ಅಂದುಕೊಂಡೆ.
ಸೂಪಾ ಡ್ಯಾಮ್ ಚಿತ್ರ (ಚಿತ್ರ ಸಂಗ್ರಹ : ಚಳಗೇರಿ ವಿ.ಎನ್ )
ಉಳಿದವರು ತಮ್ಮ ತಮ್ಮ ಕೆಲಸ ನೆನಪಿಸಿಕೊಂಡು ಮೊಸಳೆ ಹೊಂಡದ ಕಡೆಗೆ, ನದೀ ತೀರದ ಬೆಟ್ಟದ ಕಡೆಗೆ ನಡೆದರು. ಬೆಟ್ಟದ ಇಳಿಜಾರಿನಲ್ಲಿ ಭೂಗರ್ಭದ ಆಳಕ್ಕೆ ರಂಧ್ರ ಕೊರೆಯುತ್ತಿದ್ದ ಬೊರಿಂಗ್ ಮಶೀನುಗಳು ಗುರ್ ಎಂದು ಸದ್ದು ಮಾಡಿದವು. ಶ್ರೀಧರ್ ನದಿಯ ಫ್ಲೋಯಿಂಗ್ ಗೇಜ ಮಶೀನು ಹಿಡಿದು ಡ್ಯಾಮಿನ ತಳಭಾಗದ ಕಡೆಗೆ ಹೋದ. ಇನ್ನು ಕೆಲವು ಕೂಲಿಕಾರರು ನದಿಯ ಎರಡೂ ಭಾಗದ ಬೆಟ್ಟದತ್ತ ಸಾಗಿ ಅಲ್ಲಿ ತೋಡಲಿರುವ ಟೆಸ್ಟಿಂಗ್ ಸುರಂಗಗಳ ಜಾಗದಲ್ಲಿಯ ಗಿಡಗಂಟಿಗಳನ್ನು ಸವರುವ ಕೆಲಸಕ್ಕೆ ಹೋದರು.
ಇಬ್ಬರು ಕೂಲಿಯವರು ಏನು ಮಾಡುವುದೆಂದು ತಿಳಿಯದೆ ನನ್ನತ್ತ ನೋಡಿದರು. ಇವತ್ತು ನದಿಗೆ ಅಡ್ಡಲಾಗಿ ಕಟ್ಟಲಿರುವ ಆಣೆಕಟ್ಟಿನ ಜಾಗ ಗುರುತಿಸಲು ಸುಣ್ಣದಿಂದ ಗೆರೆಗಳ್ನು ಹಾಕಲು ಶೇಷಗಿರಿಯವರು ನಿನ್ನೆಯೇ ಹೇಳಿದ್ದರು. ಅವರ ಮಾರ್ಗದರ್ಶನದಲ್ಲಿ ನದಿಯ ತಳಭಾಗದಿಂದ ಆಣೆಕಟ್ಟಿನ ಎತ್ತರದವರೆಗೆ ಎರಡೂ ಬೆಟ್ಟಗಳಲ್ಲಿ ಸುಣ್ಣದ ಗೆರೆ ಹಾಕುವ ಯೋಜಿತ ಕಾರ್ಯಕ್ರಮವಿತ್ತು. ಈ ಗೆರೆಗಳನ್ನು ದೂರದಿಂದ ನೋಡಿದರೆ ಸಾಕು. ಸೂಪಾ ಡ್ಯಾಮಿನ ತಳ ಭಾಗ ಮತ್ತು ಮೇಲು ಭಾಗದ ಅಗಲಗಳನ್ನು ಮತ್ತು ಎತ್ತರವನ್ನು ಕಣ್ಣಲ್ಲಿ ತುಂಬಿಕೊಳ್ಳಬಹುದಿತ್ತು. ಯೋಜನೆಯ ಪರಿವೀಕ್ಷಣೆಗೆ ಹೊರಗಿನ ಯಾರೇ ತಂತ್ರಜ್ಞರು, ಸರಕಾರೀ ಗಣ್ಯರು ಬಂದು ನಿಂತು ನೋಡಿದರೆ ಈ ಬೆಟ್ಟದ ಮೇಲಿನ ಗೆರೆಗಳು ಆಣೆಕಟ್ಟಿನ ಗಾತ್ರವನ್ನು ಹೇಳುತ್ತಿದ್ದವು. ನಾನು ಕೆಲಸದವರಿಗೆ ಸುಣ್ಣ ಮತ್ತು ಬಕೆಟ್ಟುಗಳನ್ನು ತಗೆದುಕೊಳ್ಳಲು ಹೇಳಿದೆ.
ನರಸಿಂಹಯ್ಯ ಸಾಹೇಬರು ತಮ್ಮ ಕೆಲಸ ಮುಗಿಯಿತೆಂದು ತಮ್ಮ ಲಕ್ಷ್ಮೀ ಜೀಪು ಹತ್ತಿ ಸೂಪಾ ಕಡೆಗೆ ಗುರ್ ಅನ್ನುತ್ತ ಹೊರಟೇಬಿಟ್ಟರು. ಎಲ್ಲ ಸಾಹೇಬರೂ ಹೋದದ್ದನ್ನು ನೋಡಿದ ಇರಸನ್ ತನ್ನ ಫೋರ್ಡ ಲಾರಿಯ ಬದಿ ಅಡ್ಡಗಾಲು ಹಾಕಿಕೊಂಡು ನಿಂತು ಜೋರಾಗಿ ಹೇಳಿದ.
‘’ವಣ್ಣೂ ಆಗೂದಿಲ್ಲೆ ಸುಡುಗಾಡು. ಅರ್ಧ ಸರ್ವೀಸು ಆಯಿ ಪೋಚಿ ನಂಗಳ್‌ದು. ತಾತನ್ ಕಾಲದಿಂದ್ಲೇ ನಾನ್ ಮೈಸೂರು ಸರಕಾರದ್ ಎಂಪ್ಲಾಯಿ ಇರುಕುದು. ಎವರಾದ್ರೂ ಸತ್ತು ಪೋಯಿಕೋ. ನಾ ಇಂಗೇ ಇದ್ದು ರಿಟೈರು ಆಗೂದು. ಹಾಽಮಾ…’’
ಸೂಪಾ ಡ್ಯಾಮ್ ಚಿತ್ರ (ಚಿತ್ರ ಸಂಗ್ರಹ : ಚಳಗೇರಿ ವಿ.ಎನ್ )
ಅಂದ ಜೋರಾಗಿ. ಅವನ ಏರಿದ ದನಿಗೆ ಬೆದರಿದರೇನೋ ಎಂಬಂತೆ ನಾಯಕ ಸಾಹೇಬರು ಅಲ್ಲಿಂದ ಮೆಲ್ಲಗೆ ಡೈರಿಯನ್ನು ಬಗಲಿನಲ್ಲಿಟ್ಟುಕೊಂಡು ನದಿಯ ತಳ ಭಾಗದಲ್ಲಿ ಹರಿವ ನೀರಿಗೆ ಅಡ್ಡಲಾಗಿ ಹಾಕಲಾಗಿದ್ದ ಕಬ್ಬಿಣದ ಛಾನಲ್‌ನತ್ತ ನಡೆದರು. ಶೂರ್ಪನಿಖಿ ಗವಿಯ ಬೆಟ್ಟ ಹತ್ತಬೇಕಾದರೆ ಈ ಛಾನಲ್ ಮೇಲೆಯೇ ಕಾಲಿಟ್ಟು ನದೀ ದಾಟಬೇಕಾಗಿತ್ತು. ನಾನು ಅವತ್ತೇ ಬೆಂಗಳೂರಿನಿಂದ ಬಂದಿದ್ದ ಕಾಳೀ ನದೀ ಜಲ ವಿದ್ಯುತ್ ಯೋಜನೆಯ ಮಾಡೆಲ್‌ನ್ನು ನೋಡುತ್ತ ಸ್ಟೋರು ಕೀಪರ್ ಕಾಶೀನಾದನ್ ಪಿಳ್ಳೆಯತ್ತ ಹೊರಳಿದೆ.
ಅದೇಕೋ ಕಾಣೆ. ಅಂಥ ಸ್ಥಿತಿಯಲ್ಲೂ ಬೆಳಿಗ್ಗೆ ನೋಡಿದ್ದ ಪರಿಮಳಾ ಅವರ ಮುಖ ಕಣ್ಣ ಮುಂದೆ ಬಂದು ಹೋಯಿತು. ಅವರು ಇವತ್ತು ನನ್ನ ಕತೆಯನ್ನು ಸ್ಫರ್ಧಾ ಅಂಗಳಕ್ಕೆ ಕಳುಹಿಸುತ್ತೇನೆ ಅಂದಿದ್ದಾರೆ. ಅವರಿಗೆ ಬರುವಾಗ ಪೋಸ್ಟ ಪಾರ್ಸಲ್ ಖರ್ಚನ್ನೂ ಕೊಡದೆ ಬಂದಿದ್ದೇನೆ. ಸಂಜೆ ಹೋಗಿ ಕೊಡಬೇಕು. ಹಣ ಎಷ್ಟಾಗುತ್ತದೋ. ಪಾಪ ಅವರು ಅದರ ಬಗ್ಗೆ ಏನೂ ಕೇಳದೆ ತಾವೇ ಜವಾಬ್ದಾರಿ ತಗೆದುಕೊಂಡರು.
ಡ್ಯಾಮಿನಲ್ಲಿ ಕೂಲಿ ಕೆಲಕ್ಕೆ ಬಂದ ಕನ್ನಡ ದೇಶದ ಜನ
ಇರಸನ್ ಮೇಲಿನಂತೆ ಹೇಳಲು ಕಾರಣವೂ ಇತ್ತು. ಡ್ಯಾಮಿನಲ್ಲಿ ಆಗ ಇದ್ದದ್ದು ಹೆಚ್ಚೆಂದರೆ ಹತ್ತು ಸಂಸಾರಗಳು. ಅದರಲ್ಲಿ ಕನ್ನಡ ಕೂಲಿಕಾರರದ್ದು ಐದು ಸಂಸಾರಗಳು ಮತ್ತು ಒಂದೇ ಒಂದು ಲಂಬಾಣೀ ಕುಟುಂಬವಿತ್ತು. ಲಚಮಣ್ ನಾಯಕ್ ಮತ್ತು ಅವನ ಹೆಂಡತಿ. ಅವನಿಗೆ ಮೂರು ಮಕ್ಕಳು. ಅದರಲ್ಲಿ ಗೋಮ್ಲಿಯೂ ಒಬ್ಬಾಕೆ. ಸಾಧು ಕುಟುಂಬ. ತಾವಾಯಿತು. ತಮ್ಮ ದಿನದ ದುಡಿಮೆಯಾಯಿತು ಅನ್ನುವ ಜನ. ಇವರ ತಾಪತ್ರಯವೆಂದರೆ ಸಂಜೆ ಹೊತ್ತು ದಂಪತಿಗಳಿಬ್ಬರೂ ಒಟ್ಟಾಗಿ ಕುಡಿದು ಗಲಾಟೆ ಮಾಡಿಕೊಂಡು ಮಲಗುವುದು. ಗಲಾಟೆ ಮಾಡಿಕೊಳ್ಳದಿದ್ದರೆ ಇವರಿಗೆ ನಿದ್ರೆಯೇ ಬರುವುದಿಲ್ಲವಂತೆ.
ಸೂಪಾ ಡ್ಯಾಮ್ ಚಿತ್ರ (ಚಿತ್ರ ಸಂಗ್ರಹ : ಚಳಗೇರಿ ವಿ.ಎನ್ )
ಅದರಲ್ಲೂ ರವಿವಾರ ಸೂಪಾ ಸಂತೆಗೆ ಹೋದರೆ ಗಂಡ ಹೆಂಡತಿಯರಿಬ್ಬರೂ ಅಲ್ಲಿಯೇ ಜನಾರ್ಧನನ ಲಿಕ್ಕರ ಶಾಪಿನಲ್ಲಿ ನೈಂಟೀ ಹಾಕುತ್ತಾರೆ. ನಂತರ ಮಲಯಾಳೀ ಮೂಸಾ ಕಾಕಾನ ಹೊಟೆಲ್ಲಿನಲ್ಲಿ ಸಿಂಗಲ್ ಪರೋಟಾ ಎಗ್ ಸೇರ್ವಾ ತಿನ್ನುತ್ತಾರೆ. ಅಲ್ಲಿಂದ ಡ್ಯಾಮಿಗೆ ಹೊರಡುವ ಮುಂಚೆ ಫ್ಲೋರಿನಾಳ ಪಾನ ಅಂಗಡಿಯ ಮುಂದೆ ಮೊದಲ ಹಂತದ ಜಗಳ ಕಿತ್ತಾಟ ಮಾಡಿಕೊಳ್ಳುತ್ತಾರೆ. ಯಾರಾದರೂ ಕರೆದರೆ ಲಚಮಣ್ ಮತ್ತೆ ಜನಾರ್ಧನ್ ಶಾಪಿಗೆ ನುಗ್ಗಿ ಇನ್ನರ್ಧ ನೈಂಟಿ ಹಾಕಿ ತುಟಿ ಒರೆಸಿಕೊಳ್ಳುತ್ತ ಹೆಂಡತಿ ಕೂತಲ್ಲಿ ಬರುತ್ತಾನೆ. ಅಲ್ಲಿಂದ ಇಬ್ಬರೂ ಲಂಬಾಣೀ ಹಾಡು ಹೇಳುತ್ತ, ಕೂಗಾಡುತ್ತ, ಡ್ಯಾಮ ಸೈಟ್ ಕಡೆಗೆ ನಡೆಯುತ್ತಾರೆ. ಮಕ್ಕಳಿಗೆಂದು ಸಂತೆಯಲ್ಲಿ ಕೊಂಡ ಸೇವು-ಪುಗ್ಗೆಯ ಪೊಟ್ಟಣ ಕೈಚೀಲದಲ್ಲಿರುತ್ತದೆ. ಕಾಡು ರಸ್ತೆಯಲ್ಲಿ ಬರುವಾಗ ಇವರ ಕಿತ್ತಾಟದ ಆರ್ಭಟಕ್ಕೆ ಗಿಡಗಂಟಿಯಲ್ಲಿ ಅಡಗಿ ಕೂತಿರುತ್ತಿದ್ದ ಮೊಲಗಳು, ಕಾಡುಕೋಳಿಗಳು ಹೆದರಿ ಓಡಿಹೋಗುತ್ತವೆ. ಅವನ್ನು ನೋಡಿ ಇವರ ರಣ ಕೇಕೇ ಇನ್ನೂ ಹೆಚ್ಚಾಗುತ್ತದೆ.
ಇಂಥ ಕನ್ನಡಿಗರು ಊರಿನಲ್ಲಿಯೇ ಲಗ್ನವಾಗಿ ಸಂಸಾರ ಬಂಧನಕ್ಕೆ ಒಳಗಾದ ಕುಟುಂಬಸ್ಥರು. ಸಂಸಾರ ಎಂಬ ಬಂಧನದಲ್ಲಿದ್ದವರು.
ಅಂಥವರು ಗಂಡ ಹೆಂಡತಿ ಮಕ್ಕಳು ಸೇರಿ ಇಪ್ಪತ್ತು ಜನ ಆಗಬಹುದು. ಅವರಲ್ಲಿ ಬಹುತೇಕರು ಆಗಿನ ವಿಜಾಪುರ ಜಿಲ್ಲೆಯ ಕಡೆಯಿಂದ ದುಡಿಯಲು ಬಂದ ಕೂಲಿಕಾರರು. ಸ್ವಂತ ಊರಲ್ಲಿ ಇವರಿಗೆ ಯಾವ ಆಸ್ತಿಯೂ ಇರಲಿಲ್ಲ. ಊರಲ್ಲಿ ಬರ ಬಿದ್ದು ದೇಸಾಯರು-ಗೌಡರು ಕೂಲಿಯನ್ನೂ ಸರಿಯಾಗಿ ಕೊಡುತ್ತಿರಲಿಲ್ಲವಂತೆ. ಸರಕಾರಗಳೂ ಇವರನ್ನು ಪ್ರಜೆಗಳೆಂದು ಲೆಕ್ಕಕ್ಕೆ ಹಿಡಿದಿರಲಿಲ್ಲ. ಅದಕ್ಕೇ ಸೂಪಾದತ್ತ ಗುಳೇ ಬಂದಿದ್ದರು. ಲಿಂಗಯ್ಯ, ನಂಜೇಗೌಡ ಎಂಬ ಇಬ್ಬರು ಹಳೇ ಮೈಸೂರು ಭಾಗದಿಂದ ಬಂದ ಒಂದಿಬ್ಬರು ಇಲ್ಲಿದ್ದರು. ಅವರೂ ಸಂಸಾರ ಸಮೇತ ಈ ಕಡೆಗೆ ಕೆಲಸ ಹುಡುಕಿಕೊಂಡು ಬಂದವರಾಗಿದ್ದರು. ಈ ಸಂಸಾರಸ್ಥರೆಲ್ಲ ಕನ್ನಡದವರಾದ್ದರಿಂದ ಇವರದೇ ಒಂದು ಗುಂಪಾಗಿತ್ತು. ಅವರ ಜತೆಗೆ ಲವ ಮತ್ತು ತುಳಸೀಬಾಯಿ ಅನ್ನುವ ಪುಟ್ಟ ಮರಾಠೀ ಸಂಸಾರವೂ ಕೆಲಸ ಹುಡುಕಿಕೊಂಡು ಮೊನ್ನೆ ತಾನೇ ಡ್ಯಾಮಿಗೆ ಬಂದಿತ್ತು.
ಕನ್ನಡಿಗರೆಂದರೆ ತಗ್ಗಿ-ಬಗ್ಗಿಕೊಂಡು ಹೇಳಿದ ಕೆಲಸ ಮಾಡಿಕೊಂಡಿರುವ ಜನ
ಅವರು ಅಲ್ಲಿ ಮಣ್ಣು ಕೆಲಸ, ರಸ್ತೆ ಕೆಲಸ, ನದೀ ಬಳಿ ಕುಮುರಿ ಕತ್ತರಿಸುವ ಕೆಲಸ, ಮೇಸ್ತ್ರಿಗಳು, ಸೂಪರ್‌ವಾಯಿಜರುಗಳು ಹೇಳುವ ಕೆಲಸವನ್ನು ಚಾಚೂ ತಪ್ಪದೆ ಮಾಡುತ್ತಿದ್ದರು. ಅವರೂ ದಿನಗೂಲಿಗಳೇ. ವಾರಕ್ಕೊಮ್ಮೆ ಸೂಪಾ ಊರಿಗೆ ಹೋಗಿ ಸಂತೆ ಮಾಡಿಕೊಂಡು ಬರುತ್ತಿದ್ದರು. ಎಲ್ಲರಿಗೂ ಊರಿನ ಕೊಂಕಣಸ್ಥರಾದ ಬಾಳೀ ಸಾಹುಕಾರರ ಅಂಗಡಿಯಲ್ಲಿಯೇ ಎಲ್ಲ ಕಿರಾಣಿ ರೇಶನ್ನು ಸಿಗುತ್ತಿತ್ತು. ಸೂಪಾದಲ್ಲಿ ಬಾಳಿಯವರದ್ದೇ ದೊಡ್ಡ ಕಿರಾಣಿ ಅಂಗಡಿಯಾಗಿತ್ತು.
(ಚಿತ್ರ ಸಂಗ್ರಹ : ಚಳಗೇರಿ ವಿ.ಎನ್ )
ಕನ್ನಡಿಗರು ಶಾಂತಿಪ್ರಿಯರಲ್ಲವೆ. ಇಲ್ಲಿಯ ಕನ್ನಡ ಕೂಲಿಕಾರರೂ ಹಾಗೆಯೇ. ಆರಕ್ಕೆ ಏರುವವರಲ್ಲ. ಮೂರಕ್ಕೆ ಇಳಿಯುವವರಲ್ಲ. ಹೇಳಿ-ಕೇಳಿ ಸಂಸಾರಸ್ಥರು. ಸ್ವಂತ ಊರು ಬಿಟ್ಟು ಮಲೆನಾಡು ದೇಶಕ್ಕೆ ಕೂಲಿ ಕೆಲಸಕ್ಕೆ ಬಂದವರು. ತಗ್ಗಿ ಬಗ್ಗಿ ಹೇಳಿದ ಕೆಲಸ ಮಾಡಿಕೊಂಡು ಇರುತ್ತಿದ್ದರು.
ಡ್ಯಾಮ ಸೈಟಿನಲ್ಲಿ ದೌಲತ್ತು ಮಾಡುತ್ತಿದ್ದ ತಮಿಳರು, ತೆಲುಗರು, ಮಲಯಾಳಿಗಳು
ಕನ್ನಡ ಸಾಹೇಬರುಗಳಿಗೆ ಚಾಮಿ-ಚಾಮೀ ಅನ್ನುತ್ತ ಕಾಳೆಯುತ್ತಿದ್ದರು
ಆದರೆ ಡ್ಯಾಮಿನಲ್ಲಿಯೇ ವಾಸವಾಗಿದ್ದ ತಮಿಳರು, ತೆಲುಗರು, ಮಲಯಾಳಿಗಳು ಹೀಗೆ ಶಾಂತಿಯಿಂದ ಇದ್ದವರೇ ಅಲ್ಲ. ಹೇಳಿದ್ದನ್ನು ಕೇಳುವವರೂ ಅಲ್ಲ. ಮೇಲು ನೋಟಕ್ಕೆ ಅತೀ ವಿನಯವಂತರಂತೆ ಕಾಣುವ ಇವರು ಸಾಹೇಬರುಗಳನ್ನು ಬಹು ಬೇಗ ಮರುಳು ಮಾಡಿಬಿಡುತ್ತಿದ್ದರು. ಅಪ್ಪಡೀ ಅಂದ್ರೆ ಅಪ್ಪಡೀ. ಇಪ್ಪಡೀ ಅಂದ್ರೆ ಇಪ್ಪಡೀ ಅನ್ನುವ ಜನ. ಇದನ್ನೇ ಮರಾಠಿಯಲ್ಲಿ ‘ಅಸಾ ಮಂಟ್ಲತರ… ಅಸಾ. ತಸಾ ಮಂಟ್ಲತರ… ತಸಾ’ ಅನ್ನುತ್ತಾರೆ.
ಚೆಲ್ಲಪ್ಪನ್ ಹೆಂಡತಿ ಸಿನಿಮಾ ನಟಿ ಸರಿತಾ ಥರ ಕಪ್ಪು ಸುಂದರಿ
ಈಗಾಗಲೇ ಹೇಳಿದಂತೆ ತಮಿಳು ದೇಶದ ಇರಸನ್ ಡ್ರೈವರ್ ಮತ್ತು ಪೇಂಟರ್ ಕೆಲಸ ಮಾಡುತ್ತಿದ್ದ ಚೆಲ್ಲಪ್ಪನ್ ಮಾತ್ರ ಸಂಸಾರ ಸಮೇತ ಡ್ಯಾಮಿನಲ್ಲಿ ವಾಸ ಮಾಡುತ್ತಿದ್ದರು. ಇರಸನ್‌ಗೆ ವಯಸ್ಸಿಗೆ ಬಂದ ಎರಡು ಗಂಡು ಮತ್ತು ಒಂದು ಹೆಣ್ಣು ಮಗಳಿದ್ದಳು. ಚೆಲ್ಲಪ್ಪನ್‌ಗೆ ಒಬ್ಬಳೇ ಹೆಣ್ಣು ಮಗಳಿದ್ದಳು. ಆಗಲೇ ಹುಡುಗಿಗೆ ಹತ್ತು ವರ್ಷ. ಮದುರೈ ಮೀನಾಕ್ಷಿಗೆ ಹೋಗಿ ಬಂದನಂತರ ಆಕೆ ಹುಟ್ಟಿದ್ದಂತೆ. ಹಾಗಾಗಿ ಆಕೆಯ ಹೆಸರು ಮೀನಾಕ್ಷಿ. ಚೆಲ್ಲಪ್ಪನ್ ನ ಹೆಂಡತಿ ಕಪ್ಪಗೆ ದಪ್ಪಗೆ ಇದ್ದಳು. ಯಾವಾಗಲೂ ಗಲ್ಲಕ್ಕೆ ಅರಿಶಿನ ಸವರಿಕೊಂಡಿರುತ್ತಿದ್ದಳು. ಕೊರಳಲ್ಲಿ ಅರಿಶಿನ ಕೊಂಬು ಕಟ್ಟಿಕೊಂಡಿದ್ದಳು. ಇಲ್ಲಿದ್ದ ತಮಿಳು ಹೆಂಗಸರು ಯಾರೂ ತಾಳಿ ಕಟ್ಟಿಕೊಂಡಿರಲಿಲ್ಲ. ಲಗ್ನ ಆದವರ ಕೊರಳಲ್ಲಿ ಅರಿಶಿನ ಕೊಂಬು ಇದ್ದೇ ಇರುತ್ತಿತ್ತು. ಇರಸನ್ ಹೆಂಡತಿ ಮಾತ್ರ ಭರ್ಜರಿ ಬಂಗಾರ ಹಾಕಿಕೊಳ್ಳುತ್ತಿದ್ದಳು. ಅರಿಶಿನ ಕೊಂಬೇ ತಮಿಳು ನಾಡ್ಡಲ್ಲಿ ಬಂಗಾರಕ್ಕಿಂತ ಶ್ರೇಷ್ಠವಂತೆ. ಅದೇ ಅವರಿಗೆ ತಾಳಿಯಂತೆ. ಚಲ್ಲಪ್ಪನ್ ಹೆಂಡತಿ ಕೂಲಿ ಕೆಲಸಕ್ಕೆಂದು ಹೊರಗೆಲ್ಲೂ ಹೋಗುತ್ತಿರಲಿಲ್ಲ. ಚೆಲ್ಲಪ್ಪನ್ ತನೆಗ ಸಿಗುತ್ತಿದ್ದ ಎರಡು ರೂಪಾಯಿ ದಿನಗೂಲಿಯಲ್ಲಿಯೇ ಮೂರು ಜನರ ಹೊಟ್ಟೆ ಬಟ್ಟೆ ನೋಡಿಕೊಳ್ಳುತ್ತಿದ್ದ. ಇರಸನ್‌ಗೆ ಹೋಲಿಸಿದರೆ ಚೆಲ್ಲಪ್ಪನ್ ಮಾತಿನಲ್ಲಿ ಮೆದು.
ಕಂತ್ರಾಟುದಾರ ರಂಗಾರೆಡ್ಡಿಯ ಆಂಧ್ರ ಶೈಲಿಯ ದೌಲತ್ತು
ಆಂಧ್ರ ದೇಶದ ಕಂತ್ರಾಟುದಾರ ರಂಗಾರೆಡ್ಡಿ ಹೆಂಡತಿ ಮಕ್ಕಳನ್ನು ಅನಂತಪುರಂ ಜಿಲ್ಲೆಯಲ್ಲಿ ಬಿಟ್ಟು ಒಬ್ಬನೇ ಇಲ್ಲಿ ಇರುತ್ತಿದ್ದ. ಡಿಪಾರ್ಟುಮೆಂಟಿನವರು ಖಾಸಗಿಯವನಾದರೂ ಆತನ ವಾಸಕ್ಕೂ ಡ್ಯಾಮ ಸೈಟಿನಲ್ಲಿ ತಂಗಡಿನ ಶೆಡ್ಡು ಕೊಟ್ಟಿದ್ದಾರೆ. ಊರಲ್ಲಿ ಅವನ ಹೆಂಡತಿ ಮಕ್ಕಳು ಅನುಕೂಲವಾಗಿಯೇ ಇದ್ದಾರಂತೆ. ಅವರಿಗೆ ಒಂದು ತೋಟ ಮಾಡಿಕೊಟ್ಟು ಅದೇ ನಿನ್ನ ಸಂಸಾರ ಎಂದು ಹೇಳಿ ರಂಗಾರೆಡ್ಡಿ ಸೂಪಾಕ್ಕೆ ಬಂದಿದ್ದಾನೆ. ಅವನ ಹೆಂಡತಿ ಎರಡು ಗಂಡು ಮಕ್ಕಳನ್ನು ಇಟ್ಟುಕೊಂಡು ಅಲ್ಲಿ ತೋಟ ಮಾಡುತ್ತಿದ್ದಾಳೆ. ಇಲ್ಲಿ ಕೆಲಸ ಮಾಡಲು ಬಂದವರ ಬಹುತೇಕ ಕತೆಗಳು ಹೀಗೆಯೇ ಇವೆ. ಸಂಸಾರಗಳನ್ನು ಊರಲ್ಲಿ ಬಿಟ್ಟು ಬಂದವರಲ್ಲಿ ಕೇರಳಿಗರು ಅಗ್ರಗಣ್ಯರು. ನಂತರದ ಸ್ಥಾನ ತಮಿಳರದು. ಅವರ ಇತಿಹಾಸ ಕೆದಕಿದರೆ ದೊಡ್ಡ ಪುರಾಣಗಳೇ ಹೊರಡುತ್ತವಂತೆ. ಅವರ ಸಹವಾಸ ಹೆಚ್ಚು ಮಾಡಬೇಡಿ ಎಂದು ಚಾಂದಗುಡೆ ಕಿವಿಯಲ್ಲಿ ಹೇಳುತ್ತಿದ್ದರು.
ರಂಗಾರೆಡ್ಡಿ ಇಲ್ಲಿ ಒಬ್ಬನೇ ಇದ್ದುದರಿಂದ ದಿನವೂ ಸಂಜೆ ಹೊತ್ತು ಸೂಪಾಕ್ಕೆ ಹೋಗಿ ಜನಾರ್ಧನ್ ಲಿಕ್ಕರ್ ಗೂಡಂಗಡಿ ಯಲ್ಲಿ ಸಾರಾಯಿ ಕುಡಿದು ರಾತ್ರಿ ತಡವಾಗಿ ಡ್ಯಾಮ ಸೈಟಿಗೆ ಬರುತ್ತಾನೆ. ಕಂತ್ರಾಟುದಾರನಾದ್ದರಿಂದ ಅವನ ಹಿಂದೆ ಮುಂದೆ ಒಂದಷ್ಟು ಜನರೂ ಇರುತ್ತಾರೆ. ಆಂಧ್ರ ರೆಡ್ಡಿಗಳ ದೌಲತ್ತನ್ನು ನಾನು ಮೊದಲ ಬಾರಿ ಕಂಡದ್ದು ಇವನನ್ನು ನೋಡಿಯೇ.
ಮಲಯಾಳಿಗಳು ಕಟ್ಟಿಕೊಳ್ಳುವ ಕನ್ನಡ ಪೊಂಡಾಟಿಗಳು
ಇನ್ನು ಬೋರು ಮಶೀನಿನ ಹೆಡ್ ಮೇಸ್ತ್ರಿ ಮೊಮ್ಮದ ಕೋಯಾ ಮಲಯಾಳ ದೇಶದಿಂದ ಬಂದವ. ಊರು ಬಿಟ್ಟು ಬಂದ ಮಲಯಾಳಿಗಳಿಗೆ ಹೆಂಡತಿಯರೇ ಇರುವುದಿಲ್ಲ. ಇದ್ದರೂ ಹೆಂಡತಿ ಮಕ್ಕಳ ಸಂಸಾರವನ್ನು ಜೊತೆಗೆ ತಂದಿರುವುದಿಲ್ಲ. ಲಗ್ನ ಆದ ಮೇಲೆ ಗಂಡನ ಹೆಸರು ಹೇಳಿಕೊಂಡು ಹೆಂಡತಿಯರು ಊರಲ್ಲಿಯೇ ಇರುತ್ತಾರೆ. ಅವರಿಗೂ ನೋವಿಲ್ಲ. ಇವರಿಗೂ ಖೇದವಿಲ್ಲ.
ಮಲಯಾಳಿಗಳ ಒಂದು ವಿಶೇಷವೆಂದರೆ ಇವರು ತಾವಿದ್ದ ಕಡೆಗೆಲ್ಲ ದಿಕ್ಕಿಲ್ಲದ ಹೆಂಗಸು ಸಿಕ್ಕರೆ ಯಾರನ್ನಾದರೂ ಪೊಂಡಾಟಿ ಎಂದು ಕಟ್ಟಿಕೊಂಡುಬಿಡುತ್ತಾರೆ. ಎರಡು ಮಕ್ಕಳಾಗುವವರೆಗಷ್ಟೇ ಅವರ ಸಂಸಾರ. ಆಮೇಲೆ ಅವರಿಗೆ ಕೈ ಕೊಟ್ಟು ಹೋಗಿ ಬಿಡುತ್ತಾರೆ. ಇಂಥ ಅನುಕೂಲಕ್ಕೆ ಅವರ ಬಲೆಗಳಿಗೆ ಬೀಳುವವರು ಹೆಚ್ಚಾಗಿ ಕನ್ನಡದ ಹೆಣ್ಣುಗಳೇ. ಅಂಥವರಿಗೆ ಸಂಸಾರ ನಿಷ್ಠೆ ಯಾವತ್ತೂ ಇರುವುದಿಲ್ಲ. ಹಾಗಾಗಿ ಮೊಮ್ಮದ ಕೋಯಾ ಇಲ್ಲಿ ಒಬ್ಬನೇ ಇದ್ದಾನೆ. ಶರಾವತಿಯಲ್ಲಿ ಕೆಲಸ ಮಾಡುವಾಗ ಒಬ್ಬಳು ಕನ್ನಡದ ಪೊಂಡಾಟಿ ಇದ್ದಳಂತೆ. ಆಕೆಗೆ ಒಂದು ಮಗು ಆಗುತ್ತಿದ್ದಂತೆ. ಇನ್ನೊಬ್ಬ ಮಲಯಾಳಿಯು ಆಕೆಯನ್ನು ಹಾರಿಸಿಕೊಂಡು ಎತ್ತಲೋ ಹೋಗಿ ಬಿಟ್ಟನಂತೆ. ಈತ ಬರಿಗೈಲಿ ಈಗ ಸೂಪಾ ಆಣೆಕಟ್ಟು ಕಟ್ಟಲು ಬಂದಿದ್ದಾನೆ.
(ಚಿತ್ರ ಸಂಗ್ರಹ : ಚಳಗೇರಿ ವಿ.ಎನ್ )
ಬೋರಿಂಗ್ ಮಶೀನಿನಲ್ಲಿ ಹೆಲ್ಪರ್ ಕೆಲಸಕ್ಕೆ ಸೇರಿಕೊಂಡವರು ನಂತರದಲ್ಲಿ ಕನ್ನಡಿಗರು ಮತ್ತು ಮರಾಠಿಯ ಕೆಲವು ಜನರು. ಯಾಕಂದರೆ ಕನ್ನಡಿಗರು ಕಾಯಕ ನಿಷ್ಠೆಗೆ ಹೆಸರಾದವರು ನೋಡಿ.
ವಾರಕ್ಕೊಮ್ಮೆ ಶೂರ್ಪನಿಖಿ ಗುಹೆಯ ಬಳಿ ಪರಭಾಷಿಕರ ಎಣ್ಣೆ ಪಾರ್ಟಿ
ನನಗೆ ವಿಚಿತ್ರವಾಗಿತ್ತು. ನಮ್ಮದು ನಾನಾ ಭಾಷೆಗಳ, ನಾನಾ ಪ್ರಾಂತಗಳ, ನಾನಾ ಜಾತಿಗಳ, ನಾನಾ ಪಂಗಡಗಳ ಅಖಂಡ ಭಾರತ ಎಂದು ಶಾಲಾ-ಕಾಲೇಜುಗಳಲ್ಲಿ ಓದಿದ್ದೆ. ಕೇಳಿದ್ದೆ. ಆದರೆ ಅದೆಲ್ಲ ಬೋಗಸ್ಸು ಎಂದು ನನಗೆ ಅರ್ಥವಾದದ್ದು ಈಗ. ಈ ಡ್ಯಾಮಿನಲ್ಲಿದ್ದ ಸಂಸಾರಗಳನ್ನು ಅವಲೋಕಿಸಿದಾಗ.
ಇಲ್ಲಿ ಕನ್ನಡದವರಿಗೂ ಇತರೆ ಭಾಷೆಯ ಕೆಲಸದವರಿಗೂ ಮಾನಸಿಕವಾಗಿ ಸಾಮರಸ್ಯ ಇಲ್ಲ ಎಂದು ನನಗೆ ಬಹುಬೇಗ ಅರ್ಥವಾಗಿ ಹೋಯಿತು. ಕನ್ನಡದವರು ಸೋಮಾರಿಗಳು, ಮೈಗಳ್ಳರು, ಬಿಲ್ಲೀ ದುಡ್ಡಿಗೆ ಕಣ್ ಕಣ್ ಬಿಡುವವರು, ದಡ್ಡರು, ಕಷ್ಟದ ಕೆಲಸ ಕಂಡರೆ ಓಡಿ ಹೋಗುವವರು ಎಂದು ಡ್ರೈವರ್ ಇರಸನ್ ಆಗಾಗ ಮೂದಲಿಸುತ್ತಿದ್ದ. ನನ್ನನ್ನೂ ಹಾಗೇ ನೋಡುತ್ತಿದ್ದ. ತಾನು ಇಲ್ಲಿ ಕನ್ನಡ ದೇಶಕ್ಕೆ ಬಂದು ಅಮೇರಿಕಾದ ಫೋರ್ಡ ಲಾರಿ ಓಡಿಸಿದ್ದರಿಂದಲೇ ಅಲ್ಲಿ ಶರಾವತಿ ಯಲ್ಲಿ ಪವರ್ ಹೌಸು ಎದ್ದು ನಿಂತಿತು ಎಂದು ಅಂದುಕೊಂಡಿದ್ದ.
ಅಲ್ಲದೆ ತಮಿಳು, ತೆಲುಗು, ಮಲಯಾಳಿಗಳು ಕರ್ನಾಟಕಕ್ಕೆ ಬರದಿದ್ದರೆ ಇಲ್ಲಿ ಯಾವ ಯೋಜನೆಗಳೂ ಬರುತ್ತಿರಲಿಲ್ಲ ಎಂದೂ ಹೇಳುತ್ತಿದ್ದ.
‘’ಮೈಸೂರು ಅರಸರಿಗೆ ದಿವಾನರಾಗಿ ಇದ್ದೋವ್ರೆಲ್ಲ ನಂಗಳ್ ತಮಿಳುನಾಡಕಾರ್‌ರು ಗೊತ್ತಾ. ವಿಶ್ವೇಶ್ವರಯ್ಯನವ್ರು, ಆಮೇಲೆ ಒಂದಿಬ್ರನ್ನು ಬಿಟ್ರೆ. ನಂಗಳ್ ತಮಿಳ್‌ಕಾರೇ ದಿವಾನರಾಗ್ತಿದ್ರು. ಸತ್ಯಮಾ… ನೀವು ಬೇಜಾರು ಮಾಡ್ಕೋಬೇಡಿ. ನಾವು ಇಲ್ಲಿ ನಮ್ಮವ್ರು ಮೈಸೂರು ಅರಸರಿಗೆ ದಿವಾನರು ಆಗಾತಾ ಇದ್ರೆ ನಿಮ್ಮ ಕನ್ನಡಕಾರರು ಅರಮನೇಲಿ ಚಾಮರ ಬೀಸ್ತಾ ನಿಲ್ತಿದ್ರು ಗೊತ್ತಾ’’
ಎಂದು ದೊಡ್ಡ ದನಿಯಲ್ಲಿ ಹೇಳುತ್ತಿದ್ದ. ಅದನ್ನು ನನಗೆ ರೋಸಿ ಹೋಗುತ್ತಿತ್ತು.
ಶೂರ್ಪನಿಖಿಯ ಗುಹೆಯ ಸಮೀಪವೇ ದ್ರಾವಿಡರ ಸುರಾಪಾನ. ಕಾಡಿನಲ್ಲಿ ಯಾರಿಗೂ ದಕ್ಕದ ಅಮೋಘ ಮಾರ್ಟಿ
(ಚಿತ್ರ ಸಂಗ್ರಹ : ಚಳಗೇರಿ ವಿ.ಎನ್ )
ವಾರಕ್ಕೊಮ್ಮೆ ಸಂಜೆ ಹೊತ್ತು ತಪ್ಪದೆ ನದಿಯ ಎಡದಂಡೆಯಲ್ಲಿ ದ್ರಾವಿಡರ ಒಂದು ಪಾರ್ಟಿ ನಡೆಯುತ್ತಿತ್ತು. ಶೂರ್ಪನಿಖಿ ಗುಹೆಯ ಕೆಳಗೆ ನದೀ ದಂಡೆಯ ಮೇಲೆ ಇದ್ದ ಅಗಲವಾದ ಕಲ್ಲು ಹಾಸಿನ ಮೇಲೆ ಈ ಸುರಾ ಪಾರ್ಟಿ ನಡೆಯುತ್ತಿತ್ತು. ಅಚ್ಚರಿಯೆಂದರೆ ಈ ಗುಹೆಯು ಭವಿಷ್ಯದಲ್ಲಿ ಕಟ್ಟಲಿರುವ ಡ್ಯಾಮಿನ ಗೋಡೆಯ ಕೇಂದ್ರ ರೇಖೆಯಲ್ಲಿತ್ತು. ಈ ಗುಹೆಯನ್ನು ಛಿದ್ರ ಮಾಡಿ ಡ್ಯಾಮಿನ ಬುನಾದಿ ಏರಿಸಬೇಕಾಗಿತ್ತು. ಈ ಪಾರ್ಟಿಗೆ ಹೊರಗಿನಿಂದ ದೊಡ್ಡವರ್ಯಾರೂ ಬಂದು ಸೇರುತ್ತಿರಲಿಲ್ಲ. ಡ್ಯಾಮಿನಲ್ಲಿಯೇ ಬಿಡಾರು ಮಾಡಿಕೊಂಡಿದ್ದ ತಮಿಳರು, ಮಲಯಾಳಿಗಳು, ತೆಲುಗರು ಸೇರುತ್ತಿದ್ದರಂತೆ. ಕನ್ನಡದವರಿಗೆ ಇಲ್ಲಿ ತಟ್ಟೆ,ಲೋಟ ಎತ್ತೋಯ್ದು ನದಿಯಲ್ಲಿ ತೊಳೆದು ತರಲು ಮಾತ್ರ ಅವಕಾಶವಿತ್ತಂತೆ. ಇದರಲ್ಲಿ ಸೇರುತ್ತಿದ್ದವರು ದಕ್ಷಣಾತ್ಯರೇ ಆದದ್ದರಿಂದ ನಾನು ಇದಕ್ಕೆ ದ್ರಾವಿಡರ ಪಾರ್ಟಿ ಎಂದು ಕರೆದಿದ್ದೇನೆ.
ಇವರಲ್ಲಿ ತಮಿಳಿನ ಡ್ರೈವರ್ ಇರಸನ್, ಪೋಂಟರ್ ಚೆಲ್ಲಪ್ಪನ್ ತೆಲುಗಿನ ರಂಗಾರೆಡ್ಡಿ, ಮಲಯಾಳೀ ಮೊಮ್ಮದ್ ಕೋಯಾ, ಈ ಪಾರ್ಟಿಯ ಆಯೋಜಕರಾಗಿರುತ್ತಿದ್ದರು. ಪಾರ್ಟಿ ಸುರುವಾದರೆ ಶ್ರೀಲಂಕಾ ರೇಡಿಯೋದಿಂದ ತಮಿಳು ಹಾಡುಗಳು ಕೇಳಬೇಕು. ಕಲ್ಲು ಹಾಸಿನ ಮೇಲೆ ಉರಿಯುವ ದೊಡ್ಡ ಬೆಂಕಿ. ಅದರ ಸುತ್ತ ಆ ಕಲ್ಲು ಹಾಸಿನ ಮೇಲೆಯೇ ಚಾಪೆಗಳನ್ನು ಮನೆಗಳಿಂದ ತಂದು ಹಾಕುತ್ತಿದ್ದರು.
ರಾತ್ರಿ ಹೊತ್ತು. ದಟ್ಟಡವಿಯಲ್ಲಿ ಎರಡು ದೊಡ್ಡ ಬೆಟ್ಟಗಳ ನಡುವೆ ಹರಿಯುತ್ತಿರುವ ಕಾಳೀ ನದಿ. ನದಿಯ ದಂಡೆಯ ಮೇಲೆ ಕತ್ತಲೆಯ ಸೆರಗಿನಲ್ಲಿ ಮುಚ್ಚಿಕೊಂಡ ಹತ್ತಾರು ಗುಡಿಸಲುಗಳು. ಅವುಗಳಲ್ಲಿದ್ದ ಸಂಸಾರಗಳು. ಕ್ವಾರ್ಟರು ಬಾಟಲಿಯಲ್ಲಿ ಡೀಜೈಲು ಹಾಕಿ ಉರಿಸುವ ದೀಪಗಳು. ಯಾರಾದರೂ ಬಂದು ಬಡಿದು ಹೆಣಗಳನ್ನು ಅಲ್ಲೇ ಇದ್ದ ಬೋರುಗುಂಡಿಗೆ ಹಾಕಿದರೂ ಕೇಳುವವರಿಲ್ಲ. ಅಂಥ ಹೆಪ್ಪುಗಟ್ಟಿದ ನೀರವತೆ ಇರುವ ಕಾಡಿನಲ್ಲಿ ಇವರದು ಯಾರಿಗೂ ದಕ್ಕದ ಅಮೋಘ ಪಾರ್ಟಿ.
(ಸೂಪದಲ್ಲಿದ್ದ ಶೂರ್ಪನಖಿ ಗುಹೆ ) (ಚಿತ್ರ ಸಂಗ್ರಹ : ಚಳಗೇರಿ ವಿ.ಎನ್ )
ಪಾರ್ಟಿಗೆ ಖಾದ್ಯಗಳು ಒಂದು ವಾರ ಇರಸನ್ ಮನೆಯಿಂದ ಬರುತ್ತಿದ್ದರೆ, ಮತ್ತೊಮ್ಮೆ ರಂಗಾರೆಡ್ಡಿ ಸ್ವತಃ ತಾನೇ ತೆಲುಗಿನ ಪುಲ್ಲಯ್ಯನ ಸಹಾಯದಿಂದ ತಯಾರಿಸಿದ ಹೈದರಾಬಾದಿ ಶೈಲಿಯ ಮಾಂಸದ ಅಡುಗೆ ಮಾಡಿಸಿಕೊಂಡು ತರುತ್ತಿದ್ದ.
ಇರಸನ್ ತಮಿಳು ನಾಡಿನ ಧರ್ಮಪುರಿ ಕಡೆಯವ. ಮೊಮ್ಮದ ಕೋಯಾ ಕೇರಳದ ಎರ್ಣಾಕುಲಂನಿಂದ ಬಂದವ. ರಂಗಾರೆಡ್ಡಿ ಆಂಧ್ರದ ಅನಂತಪುರ ಕಡೆಯವ. ಇವರೆಲ್ಲ ಶರಾವತಿ ಜಲ ವಿದ್ಯುತ್ ಯೋಜನೆಯಲ್ಲಿ ಇದ್ದು ಕೆಲಸ ಮಾಡಿ ಬಂದವರು. ಅಲ್ಲಿ ಹೆಚ್.ಇ.ಸಿ.ಪಿ. ಡಿಪಾರ್ಟುಮೆಂಟಿನಲ್ಲಿ ತಿಂದು ಬೇರು ಬಲಿತು, ಇಲ್ಲಿ ಈಗ ಕಾಳಿಗೆ ಬಂದಿದ್ದರು.
ಆಗ ಸೂಪಾದಲ್ಲಿ ಜನಾರ್ಧನ ಎನ್ನುವವ ಅಬಕಾರಿ ಕಂತ್ರಾಟುದಾರನಾಗಿದ್ದ. ಪಾರ್ಟಿಯ ದಿನ ಆತ ಇವರಿಗೆ ಪೇಶಲ್ಲಾಗಿ ಸಾರಾಯಿ ಕ್ಯಾನು ಕಳಿಸಿಕೊಡುತ್ತಿದ್ದ. ಮತ್ತು ರಂಗಾರಡ್ಡಿಯ ಹೆಸರಿಗೆ ಬಿಲ್ಲು ಬರೆಯುತ್ತಿದ್ದ.
ತಮಿಳರು-ತೆಲುಗರು-ಮಲಯಾಳಿಗಳು ಬರದಿದ್ದರೆ ಕರ್ನಾಟಕದಲ್ಲಿ ಡ್ಯಾಮುಗಳೇ ಏಳುತ್ತಿರಲಿಲ್ಲವಂತೆ
ಇರಸನ್ ತಮಿಳಿನ ವೀರ ಪಾಂಡ್ಯ ಕಟ್ಟುಬೊಮ್ಮನ್ ಥರ ಇದ್ದ. ಈಗಾಗಲೇ ಶರಾವತಿಯಲ್ಲಿ ಸರ್ವೀಸು ಮಾಡಿ ಬಂದುದರಿಂದ ಅವನಿಗೆ ನಮ್ಮಲ್ಲಿದ್ದ ಜ್ಯೂನಿಯರ್ ಇಂಜಿನಿಯರಕ್ಕಿಂತ ಇಪ್ಪತ್ತು ರೂಪಾಯಿ ಜಾಸ್ತಿ ಸಂಬಳ ಇತ್ತು. ಅಲ್ಲದೆ ಶರಾವತಿಯಿಂದಲೇ ಬಂದಿದ್ದ ಬೋರು ಆಪರೇಟರ್ ಮೊಮ್ಮದ್ ಕೋಯಾ [ಮಲಯಾಳಿ] ನಿಗೂ ಎಲ್ಲರಿಗಿಂತ ಹೆಚ್ಚು ಸಂಬಳವಿತ್ತು. ಡ್ಯಾಮಿನ ಸಿವಿಲ್ ಕೆಲಸಗಳ ಕಂತ್ರಾಟುದಾರರಾಗಿ ನರಸಿಂಹಯ್ಯನವರ ಬಲಗೈಯಂತಿದ್ದ ರಂಗಾರೆಡ್ಡಿ [ತೆಲುಗು] ತನ್ನ ಟೊಂಕಕ್ಕೆ ಕಟ್ಟಿಕೊಂಡಿದ್ದ ಬಿಳೀ ಲುಂಗಿಯಲ್ಲಿ ಕಂತೆ ಕಂತೆ ನೋಟುಗಳನ್ನು ಪೇರಿಸಿಕೊಂಡು ತಿರುಗುತ್ತಿದ್ದ.
ಯಾರು ಏನೇ ಹೇಳಲಿ. ಕಾರಣಗಳು ಏನೇ ಇರಲಿ. ನಮ್ಮ ಸರಕಾರದ ಇಂಥ ಯೋಜನೆಗಳಲ್ಲಿ ಪರಭಾಷಿಕರಿಗೇ ಮೇಲಿನವರು ಮಣೆ ಹಾಕುತ್ತಿದ್ದರು. ಇರಸನ್ ಡ್ರೈವರ ಯಾವಾಗಲೂ ಹೇಳುವಂತೆ ಇದು ಮಾಹಾರಾಜರ ಕಾಲದಿಂದಲೂ ಹೀಗೇ ನಡೆದುಕೊಂಡು ಬಂದ ಪದ್ಧತಿಯಂತೆ. ಅದೇ ಕಾರಣದಿಂದಲೋ ಏನೋ. ಕೊಡಗು, ಚಿಕ್ಕಮಗಳೂರಿಗೆ ಕಾಫೀ ತೋಟಕ್ಕೆ ಕೂಲಿಯಾಗಿ ಬಂದ ಮಲಯಾಳಿಗಳು, ಗಾರೇ ಕೆಲಸಕ್ಕೆ ಬಂದ ತಮಿಳರು ಇಲ್ಲಿ ಮಂತ್ರಿ ಮಹೋದಯರಾಗಿ ಮೆರೆದು ಹೋದರಲ್ಲ.
ಪೋಟೋ- ತಗಡಿನ ಸೆಡ್ಡು ಮತ್ತು ಹುಲ್ಲು ಗಿಡಿಸಲು ಗಳನ್ನು ಒಂದೇ ಫ್ರೇಮಿನಲ್ಲಿ ಹಾಕುವುದು
ಈ ಮೂರೂ ಜನರು ಶರಾವತಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಆಫೀಸಿನಲ್ಲಿ ಪ್ರಭಾವಿಗಳಾಗಿದ್ದರಂತೆ. ಇಲ್ಲಿ ಕೂಡ ಹಾಗೇ ಇದ್ದರು. ತಮ್ಮ ಬಿಡಾರಕ್ಕಾಗಿ ಇವರು ಡ್ಯಾಮಿನಲ್ಲಿ ಡಿಪಾರ್ಟಮೆಂಟಿನಿಂದ ತಗಡಿನ ಶೀಟು ಪಡೆದು ವಾಸಕ್ಕೆ ಪ್ರತ್ಯೇಕ ಸೆಡ್ಡು ನಿರ್ಮಿಸಿಕೊಂಡಿದ್ದರು. ಆದರೆ ಡ್ಯಾಮಿನಲ್ಲಿದ್ದ ಕನ್ನಡ ಕೂಲೀ ಕೆಲಸದವರಿಗೆ ತಗಡು ಕೊಟ್ಟಿರಲಿಲ್ಲ. ಸೆಡ್ಡೂ ಇರಲಿಲ್ಲ. ಅವರು ಬಿದಿರು-ಹುಲ್ಲು ಗುಡಿಸಲನ್ನು ತಾವೇ ಶ್ರಮ ವಹಿಸಿ ನಿರ್ಮಿಸಿಕೊಂಡು ಅಲ್ಲಿ ವಾಸವಾಗಿದ್ದರು. ರವಿವಾರ ಎಲ್ಲರಿಗೂ ಸಂತೆ ದಿನ. ಕನ್ನಡ ಕೂಲಿಕಾರರು ತೆಪ್ಪಗೆ ಮನೆಯಲ್ಲಿ ಬಿದ್ದುಕೊಂಡಿದ್ದರೆ ಈ ಸೀನಿಯರ್ ಕೆಲಸಗಾರರು ಡ್ಯಾಮ ಸೈಟಿನಲ್ಲಿ ಪಾನಗೋಷ್ಠಿ ಮಾಡಿ ನದೀ ದಂಡೆಯ ಮೇಲೆ ಕುಣಿದು ತಮಿಳು ಹಾಡುಗಳನ್ನು ಒರಟಾಗಿ ಹೇಳಿಕೊಂಡು ಕುಣಿದು ಕುಪ್ಪಳಿಸುತ್ತಿದ್ದರು. ಇಂಥ ಸಂದರ್ಭಗಳಲ್ಲಿ ಎಲ್.ಆರ್.ಈಶ್ವರಿಯ ಎಂಳಂದ ಪೈಂಯೋ … ಕಾದಲಿಕ್ಕೆ ನೇರಮಿಲೈ… ಹಾಡುಗಳು ಇವರ ಮೆಚ್ಚಿನದಾಗಿತ್ತು.
ಎಲ್.ಆರ್.ಈಶ್ವರಿಯ ಚಿತ್ರ. ಫೋಟೋ ಕೃಪೆ : Discogs
ಡ್ಯಾಮಿನಲ್ಲಿ ಪರಭಾಷಿಕರ ದರ್ಬಾರು ಆಗಲೇ ಸುರುವಾಗಿತ್ತು
ಶಿವನ ಸಮುದ್ರದಲ್ಲಿ ತಮಿಳರೇ ಮುಂದು ನಿಂತು ಡ್ಯಾಮು ಕಟ್ಟಿದ್ದು. ಕನ್ನಂಬಾಡಿಯಲ್ಲಿ ಹತ್ತು ಸಾವಿರ ಜನ ಕೆಲಸಗಾರರಲ್ಲಿ ತಮಿಳು, ತೆಲುಗು, ಮಲಯಾಳಿಗಳೇ ಎಂಟು ಸಾವಿರ ಮೇಲೆ ಮೇಲಿದ್ದರು. ಕನ್ನಡಿಗರು ದೂರ ನಿಂತು ತೋಟ ಮಾಡಿದರೇ ಹೊರತು ಡ್ಯಾಮು ಕಟ್ಟಲು ಬರಲಿಲ್ಲ. ಇನ್ನು ಶರಾವತಿ ಯಲ್ಲಿ ಆದದ್ದೇನು. ಅಲ್ಲಿಗೂ ನಮ್ಮ ತಮಿಳು, ಮಲಯಾಳಿ, ತೆಲುಗಿನ ಕಾರ್ಮಿಕರೇ ಬರಬೇಕಾಯ್ತು. ಕನ್ನಡ ಕಾರ್ಮಿಕರು ಅಲ್ಲಿ ರಸ್ತೆ, ಸೇತುವೆ, ಕಟ್ಟಡ ಕೆಲಗಳು ಅಂತ ಮಣ್ಣು ಕೆಲಸಕ್ಕಷ್ಟೇ ಸೀಮಿತರಾದರು. ಇಲ್ಲಿ ನೋಡಿ ಕಾಳೀ ಯೋಜನೆಯಲ್ಲೂ ಕನ್ನಡದವರು ಅದೇನು ಮಾಡುತ್ತಾರೆ ನೋಡ್ತಾ ಇರಿ ಎಂದೆಲ್ಲ ಮಾತಾಡುತ್ತಾರೆಂದು ತಿಳಿಯಿತು. ನನಗೆ ರೋಸಿ ಹೋಗಿದ್ದರೂ ಅಸಹಾಯಕನಾಗಿದ್ದೆ. ಇಲ್ಲಿ ಕನ್ನಡ ಕಾರ್ಮಿಕರು ಮುಂದೆ ಬರಲಿರುವ ಡ್ಯಾಮಿನ ಮುಖ್ಯ ಕೆಲಸಗಳಿಗೆ ಸೇರಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳಾಗಬೇಕು ಎಂದು ಅಂದುಕೊಂಡೆ. ಇದಕ್ಕಾಗಿ ಇಲ್ಲಿ ಬರುವ ಕನ್ನಡ ಕೆಲಸಗಾರರನ್ನು ಪ್ರೇರೇಪಿಸುವ ಕೆಲಸನ್ನಾದರೂ ಮಾಡಬೇಕು ಅಂದುಕೊಂಡೆ.
ಸೀಪಾ ಡ್ಯಾಮಿನಲ್ಲಿ ನಾನು ಒಂದನ್ನು ನಾನು ಗಮನಿಸಿದೆ. ತಮಿಳರು, ಮಲಯಾಳಿಗರು, ತೆಲುಗರ ಗುಡಿಸಲುಗಳಲ್ಲಿ ನಾನು ಅವರವರ ಭಾಷೆಯ ದಿನಪತ್ರಿಕೆಗಳು, ವಾರ ಪತ್ರಿಕೆಗಳು ಸುರುಳಿ ಸುತ್ತಿ ಬಿದ್ದಿರುವುದನ್ನು ಕಂಡೆ. ಆದರೆ ಕನ್ನಡ ಕೂಲಿಕಾರರ ಗುಡಿಸಲಲ್ಲಿ ಬಡತನ, ಅನಕ್ಷರತೆ, ದುಗುಡಗಳನ್ನು ಬಿಟ್ಟರೆ ನೋಡಲು ಮತ್ತೇನೂ ಸಿಗುತ್ತಿರಲಿಲ್ಲ.
ಇವತ್ತು ತಮಿಳರು ಮಲಯಾಳಿಗಳು ಪ್ರಪಂಚದಾದ್ಯಂತ ಹೋಗಲು ಬಹುಶಃ ್ವರಿಗೆ ಇರುವ ಅಕ್ಷರ ಆಸಕ್ತಿಯೇ ಕಾರಣ ಎಂದು ನನ್ನ ಅರಿವಿಗೆ ಬಂತು. ಇವರಿಗಿರುವ ಸ್ವಾಭಿಮಾನ, ಧೈರ್ಯ ನಮ್ಮ ಕನ್ನಡಿಗರಿಗೇಕೆ ಇಲ್ಲ ಎಂದು ಯೋಚಿಸಿದೆ.
(ಡ್ಯಾಮಿಗೆ ಸೆಂಟ್ರಲ್ ಲೈನ್ ಚಿತ್ರ) (ಚಿತ್ರ ಸಂಗ್ರಹ : ಚಳಗೇರಿ ವಿ.ಎನ್ )
ಯಾರೋ ವಿಶಲ್ ಹಾಕಿ ಸದ್ದು ಮಾಡಿದರು. ಯೋಚನೆಗಳಿಂದ ಈಚೆ ಬಂದು ಸುತ್ತ ನೋಡಿದೆ. ಆಗಲೇ ಬೆಟ್ಟ ಹತ್ತುತ್ತಿದ್ದ ಶೇಷಗಿರಿಯವರು ಮತ್ತು ಉಪಾಧ್ಯಾಯರನ್ನು ನೋಡಿ ಅತ್ತ ಓಡಿದೆ. ಕೂಡಲೇ ನಾನೂ ನದಿಯ ಎಡದಂಡೆಯ ಬೆಟ್ಟ ಹತ್ತತೊಡಗಿದೆ. ಅವತ್ತು ನಾವು ಡ್ಯಾಮಿನ ಸೆಂಟರ್ ಲೈನಿಗೆ ಹೊಸದಾಗಿ ಬೆಟ್ಟದ ಮೇಲೆ ಸುಣ್ಣದ ಗುರುತು ಹಾಕುವುದಿತ್ತು. ಅದಕ್ಕಾಗಿ ನಾಲ್ಕು ಜನ ಕೂಲಿಯವರನ್ನು ಮೊದಲೇ ಸಜ್ಜು ಮಾಡಲಾಗಿತ್ತು. ಅವರು ಸುಣ ಂತ್ತು ನೀರಿನ ಕೊಡಗಳನ್ನು ಹೆಗಲ ಮೇಲೆ ಇಟ್ಟುಕೊಂಡು ಬೆಟ್ಟ ಕೆಂಪು ಮೆಟ್ಟಿಲು ಹತ್ತತೊಡಗಿದರು. ಗಡಬಡಿಸಿ ನಾನೂ ಅತ್ತ ಓಡಿದೆ. ಹಾಗೆ ಹೋಗುವಾಗ ಚಾಂದಗುಡೆಯವರು ಮೆಲ್ಲಗೆ ಹೇಳಿದರು. ಮಧ್ಯಾನ ಊಟಕ್ಕ ಅಲ್ಲೇ ಬರ್ರಿ. ದಾಮೋದರನ್ ಹೊಟೆಲ್ಲಿನಾಗ ಕುಂತು ಉಣ್ಣೂನು ಎಂದು ಹೇಳಿದರು. ನಾನು ತಲೆಯಾಡಿಸುತ್ತ ಬೆಟ್ಟದ ಏರಿಯತ್ತ ಓಡಿದೆ. ಆಗಲೇ ಬಿಸಿಲಿನ ಕಾವು ಏರತೊಡಗಿತ್ತು.
[ಮುಂದಿನ ಶನಿವಾರ ಮತ್ತೆ ಹೊಸ ಕತೆಗಳು. ಮೈಸೂರು ಪವರ್ ಕಾರ್ಪೋರೇಶನ್ ಲಿ. ತೆಕ್ಕೆಗೆ ಕಾಳೀ ಕಣಿವೆಯ ಯೋಜನೆಗಳು. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತವಿದೆ. ಬರೆಯಿರಿ]
- ಹೂಲಿಶೇಖರ್ (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು