ಕನ್ನಡ ರಾಜ್ಯೋತ್ಸವವನ್ನು ನಾಡಹಬ್ಬದಂತೆ ಅದ್ದೂರಿಯಿಂದ ಆಚರಿಸುತ್ತೇವೆ. ನವೆಂಬರ್ ತಿಂಗಳೆಂದರೆ ಕರುನಾಡಿನಾದ್ಯಂತ ಉತ್ಸಾಹ ಸಂಭ್ರಮದಿಂದ ಆಚರಿಸುತ್ತೇವೆ. ಈ ದಿನದ ಕುರಿತು ವಿಶೇಷ ಲೇಖನ ಕೊಡಗಿನ ಕವಿಯತ್ರಿ ಗೀತಾಂಜಲಿ ಎನ್ ಎಮ್ ಅವರಿಂದ ತಪ್ಪದೆ ಮುಂದೆ ಓದಿ…
ನವೆಂಬರ್ ೧ ಕನ್ನಡ ರಾಜ್ಯೋತ್ಸವ ನಮ್ಮ ಗೌರವ ನಮ್ಮ ಗುರುತು ಮತ್ತು ನಮ್ಮ ಹೆಮ್ಮೆ. ರಾಜ್ಯೋತ್ಸವ ನಮ್ಮ ನಾಡಿನ ಏಕತೆಯ ಪ್ರತೀಕ ಈ ದಿನ ನಮ್ಮ ಕರ್ನಾಟಕ ಒಂದಾದ ದಿನ. ನಮ್ಮ ಸಂಸ್ಕೃತಿ, ಪರಂಪರೆ, ಭಾಷೆ, ಕಲಾ ಸೌಂದರ್ಯ ಎಲ್ಲವನ್ನೂ ಒಟ್ಟುಗೂಡಿಸಿದ ದಿನ. ಹಾಗಾಗಿ ಕನ್ನಡ ರಾಜ್ಯೋತ್ಸವವನ್ನು ನಾಡಹಬ್ಬವಾಗಿ ಕರುನಾಡಿನಾದ್ಯಂತ ಉತ್ಸಾಹ ಸಂಭ್ರಮದಿಂದ ಆಚರಿಸುತ್ತೇವೆ. ಈ ದಿನ ಎಲ್ಲೆಲ್ಲೂ ಕನ್ನಡದ ಧ್ವಜ ಹೆಮ್ಮೆಯಿಂದ ರಾರಾಜಿಸುತ್ತಿರುತ್ತದೆ.
- ಈ ಉತ್ಸಾಹ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿರದೆ ನಿತ್ಯವೂ ನಿತ್ಯೋತ್ಸವದಂತೆ ಮಾರ್ಪಟ್ಟರೆ ಕನ್ನಡ ಎಂದೂ ಆವನತಿಯ ಅಂಚಿಗೆ ಹೋಗುವುದಿಲ್ಲ. ಇಂದು ನಮ್ಮ ಮಾತೃ ಭಾಷೆ ಕನ್ನಡ ಅನ್ಯ ಭಾಷೆಗಳ ವ್ಯಾಮೋಹದಲ್ಲಿ ಸಿಲುಕಿರುವವರ ನಡುವೆ ಸಿಲುಕಿ ನಲುಗುತ್ತಿದೆ. ನಮ್ಮ ಭಾಷೆ ಗೊತ್ತಿದ್ದರೂ ಬೇರೆ ಬೇರೆ ಭಾಷಿಕರಿಗಾಗಿ ಅವರ ಭಾಷೆ ಮಾತನಾಡುವುದು ಎಷ್ಟು ಸಮಂಜಸ ಅಲ್ಲವೇ? ನಮ್ಮ ಕರುನಾಡಿನಲ್ಲಿರುವ ಪರಭಾಷಿಕರಿಗೆ ನಮ್ಮ ಭಾಷೆಯನ್ನು ಕಲಿಸಬೇಕೇ ಹೊರತು ಅವರ ಭಾಷೆಗೆ ನಾವು ಹೊಂದಿಕೊಳ್ಳುವುದು ನಮಗೆ ಶೋಭೆಯಲ್ಲ ಹಾಗೂ ಸ್ವಾಭಿಮಾನವೂ ಆಲ್ಲ. ನಾವು ಕನ್ನಡಿಗರು ಎಲ್ಲಾ ವಿಷಯಗಳಿಗೂ ತಗ್ಗಿ ಬಗ್ಗಿ ನಡೆಯುವುದರಿಂದಲೇ ನಮ್ಮ ಕನ್ನಡಕ್ಕೆ ಈ ಸ್ಥಿತಿ ಬಂದಿರುವುದು. ಪರಭಾಷಿಕರಿಗೆ ನಾವೇ ಹೊಂದಿಕೊಂಡರೆ ಅವರೆಲ್ಲಿ ಕನ್ನಡ ಕಲಿಯಲು ಸಾಧ್ಯ? ಹಾಗಾಗಿಯೇ ಕರುನಾಡಿನ ನೆಲವನ್ನು ಆಶ್ರಯಿಸಿ ಬಂದವರು ಕನ್ನಡವನ್ನು ಕಲಿಯಲು ಮನಸ್ಸೂ ಕೂಡ ಮಾಡುವುದಿಲ್ಲ. ನಮ್ಮ ನೆಲ, ಗಾಳಿ, ಅನ್ನ, ನೀರು ಎಲ್ಲವೂ ಅವರಿಗೆ ಬೇಕು ಆದರೆ ಭಾಷೆ ಮಾತ್ರ ಬೇಡವೆಂದರೆ ಹೇಗೆ? ಇದು ಯಾವ ನ್ಯಾಯ.? ಇದನ್ನು ನೋಡಿದಾಗ ಅನ್ನಿಸುವ ಸತ್ಯವೆಂದರೆ ಕನ್ನಡಕ್ಕೆ ಕನ್ನಡಿಗರೇ ಮಾರಕವೆಂಬುದು.
- ಕನ್ನಡ ನೆಲದಲ್ಲಿ ಹುಟ್ಟಿ ಬೆಳೆದ ಮಾತ್ರಕ್ಕೆ ಕನ್ನಡಿಗರಾಗಲು ಸಾಧ್ಯವಿಲ್ಲ. ಹಾಗೆಯೇ ನನ್ನ ಮಾತೃ ಭಾಷೆ ಕನ್ನಡ ಎಂದು ಹೇಳಿದ ಮಾತ್ರಕ್ಕೂ ಕೂಡ ಕನ್ನಡಿಗರಾಗಲು ಸಾಧ್ಯವಿಲ್ಲ. ಕನ್ನಡವನ್ನು ಯಾರು ಬಳಸಿ ಬೆಳಸುತ್ತಾರೋ ಅವರು ಮಾತ್ರವೇ ಈ ನೆಲದ ನಿಜವಾದ ಕನ್ನಡಿಗರಾಗಲು ಸಾಧ್ಯ! ನಮ್ಮ ಮಾತೃ ಭಾಷೆ ನಮ್ಮ ಹೆಮ್ಮೆ. ನಮ್ಮ ಅಸ್ತಿತ್ವವೇ ಕನ್ನಡ ಅಂದಮೇಲೆ ನಮ್ಮ ಕನ್ನಡವನ್ನು ಮಾತನಾಡಲು ಏತಕ್ಕಾಗಿ ಹಿಂಜರಿಯಬೇಕು ? ಮಾತೃಭಾಷೆಯಿಂದಲೇ ನಮ್ಮ ವ್ಯಕ್ತಿತ್ವ ರೂಪುಗೊಂಡು ಪರಿಪೂರ್ಣವಾಗಲು ಸಾಧ್ಯ ಪ್ರಪಂಚದ ಯಾವುದೇ ಮೂಲೆಗೆ ಹೋದರೂ, ಯಾರು ಏನೇ ಸಾಧನೆ ಮಾಡಿದರು ನಾವು ಗುರುತಿಸಿಕೊಳ್ಳುವುದು ನಮ್ಮ ನೆಲ ಜಲ ಭಾಷೆಯಿಂದ ಮಾತ್ರ ಅಂದಮೇಲೆ ನಮ್ಮ ಭಾಷೆಯನ್ನು ಮಾತನಾಡಲು ಅಪಮಾನವೇಕೆ? ದಿನನಿತ್ಯ ನಮ್ಮ ಭಾಷೆಯನ್ನು ಬಳಸುವುದರಿಂದ ಮಾತ್ರವೇ ನಮ್ಮ ಕನ್ನಡ ಉಳಿಯಲು ಸಾಧ್ಯವೇ ಹೊರತು ಕನ್ನಡ ರಾಜ್ಯೋತ್ಸವದ ದಿನ ಕನ್ನಡವನ್ನು ಉಳಿಸಿ ಎಂದು ಭಾಷಣ ಮಾಡಿದರೆ ,ಮೊಬೈಲ್ ನಲ್ಲಿ ನಾವು ಕನ್ನಡಿಗರು ಎಂದು ಸ್ಟೇಟಸ್ ಹಾಕಿಕೊಂಡರೆ ಕನ್ನಡ ಉಳಿಯುವುದಿಲ್ಲ.
- ಇಂದು ಇಂಗ್ಲೀಷ್ ವ್ಯವಹಾರಿಕ ಭಾಷೆಯಾಗಿ ಗುರಿಟಿಸಲ್ಪಟ್ಟಿದೆ ನಿಜ, ಆದರೆ ನಮ್ಮ ಜನಗಳಿಗೆ ಈ ಇಂಗ್ಲಿಷಿನ ಮೋಹ ಎಷ್ಟಿದೆಯೆಂದರೆ ಇಂಗ್ಲಿಷ್ ನಲ್ಲಿ ಮಾತನಾಡುವವರು ಮಾತ್ರವೇ ಬುದ್ಧಿವಂತರು ಎಂಬ ಮೂಢನಂಬಿಕೆಯೊಳಗೆ ಸಿಕ್ಕಿ ಅಜ್ಞಾನಿಗಳಂತಾಗಿದ್ದಾರೆ,ಕನ್ನಡ ಮರೆತು ಬೇರೆ ಭಾಷೆ ಮೇಲಿನ ಮೋಹಕ್ಕಾಗಿ ಹಾಗೂ ತನಗೆ ಬೇರೆ ಬೇರೆ ಭಾಷೆ ತಿಳಿದಿದೆ ಎನ್ನುವ ತೋರ್ಪಡಿಕೆಗಾಗಿ ಕನ್ನಡವನ್ನು ತಿರಸ್ಕರಿಸುವುದು ನಿಜಕ್ಕೂ ಹೆತ್ತ ತಾಯಿಗೆ ಮಾಡಿದಷ್ಟೇ ಅವಮಾನವಾಗುತ್ತದೆ. ಅನಿವಾರ್ಯತೆ ಇದ್ದಾಗಷ್ಟೇ ಬೇರೆ ಭಾಷೆ ಬಳಸಬೇಕೇ ಹೊರತು ಅವರಿಗಾಗಿ ನಾವು ಅವರ ಭಾಷೆಗೆ ಹೊಂದಿ ಕೊಳ್ಳುವುದು ನಮ್ಮ ಮೂರ್ಖತನ,ಇಂದು ಕರುನಾಡ ರಾಜಧಾನಿ ಬೆಂಗಳೂರು ಶರವೇಗದಲ್ಲಿ ಬೆಳೆಯುತ್ತಿದೆ ಇಲ್ಲಿ ಜೀವನವನ್ನು ಆಶ್ರಯಿಸಿ ಲಕ್ಷಾಂತರ ಮಂದಿ ಬಂದಿದ್ದಾರೆ, ಇನ್ನೂ ಬರುತ್ತಲೂ ಇದ್ದಾರೆ,ಇವರ ಹಾವಳಿ ಹೆಚ್ಛಾದ್ದರಿಂದಲೇ ನಮ್ಮ ನಾಡು ತನ್ನ ಒಡಲಲ್ಲಿ ಆಶ್ರಯ ಕೊಟ್ಟ ತಪ್ಪಿಗೆ ನಮ್ಮ ಕನ್ನಡತಿಯನ್ನೇ ಮೂಲೆಗೆ ತಳ್ಳುತ್ತಿದ್ದಾರೆ.
- ಬೆಂಗಳೂರಿಗೆ ಹೋದಗೆಲ್ಲಾ ನನಗೆ ಆನ್ನಿಸುವುದೊಂದೆ ಇದು ನಮ್ಮ ಕರ್ನಾಟಕವಾ? ಇದು ನಮ್ಮ ಬೆಂಗಳೂರಾ? ಎಂದು ಕಾರಣ ಇಂಗ್ಲೀಷ್ ಒಂದೇ ಅಲ್ಲ ಎಕ್ಕಡ, ಎನ್ನಡಗಳ ಮದ್ಯೆ ಸಿಕ್ಕಿ ನಲುಗುತ್ತಿರುವ ನಮ್ಮ ಮಾತೃಭಾಷೆ ಕಸ್ತೂರಿ ಕನ್ನಡ ತನ್ನ ಸ್ವಸ್ಥಾನದಲ್ಲೇ ನೆಲೆ ಕಳೆದು ಕೊಳ್ಳುತ್ತಿರುವುದು ನಿಜಕ್ಕೂ ದುಃಖದ ಸಂಗತಿ, ಇಂತಹ ಸ್ಥಿತಿಗೆ ಬೆಂಗಳೂರಿನ ಕನ್ನಡಿಗರೇ ಕಾರಣವೇ ಹೊರತು ಬೆರೆಯವರಲ್ಲ,ಇಂಗ್ಲೀಷ್ ಕೇವಲ ವ್ಯವಹಾರಿಕವಾಗಿ ಒಂದು ಭಾಷೆ ಅಷ್ಟೆಯೇ ವಿನಹ ಅದು ಜ್ಞಾನವಲ್ಲ,ಇದನ್ನು ಮೊದಲು ಜನಗಳು ಅರ್ಥಮಾಡಿ ಕೊಳ್ಳಬೇಕು.
- ನಮ್ಮ ಕನ್ನಡ ಸಾಹಿತ್ಯ ಲೋಕ ತುಂಬಾ ಶ್ರೀಮಂತವಾದದ್ದು ನಮ್ಮ ಭಾಷೆ 2000 ವರ್ಷಕ್ಕಿಂತಲೂ ಪೂರ್ವವಾದದ್ದು ಎಂತೆಂತಹ ವಿದ್ವಾಂಸರನ್ನು ಮಹನೀಯರನ್ನು ಮಹಾನ್ ಕವಿಗಳನ್ನು ತಾಯಿ ಭುವನೇಶ್ವರಿ ದೇಶಕ್ಕೆ ಕೊಟ್ಟಿದ್ದಾಳೆ, ನಮ್ಮ ಭಾಷೆಯಲ್ಲಿ ಕವಿಗಳಿಗೆ ಸಿಗುವಷ್ಟು ಪ್ರಾಸಬದ್ದ ಪದಗಳು ಖಂಡಿತ ಬೇರೆ ಯಾವ ಭಾಷೆಯಲ್ಲೂ ಸಿಗಲಾರವು, ನಮ್ಮ ಕರುನಾಡಿನ ಶರಣರು ವಚನ ಸಾಹಿತ್ಯದ ಮೂಲಕ ಬದುಕಿನ ಅರ್ಥಗಳನ್ನು ಎಷ್ಟು ಸರಳವಾಗಿ ಹೇಳಿದ್ದಾರೆ, ಈ ಸರಳತೆ ಬೇರೆ ಯಾವ ಭಾಷೆಯಲ್ಲೂ ಸಿಗುವುದಿಲ್ಲ, ನಮ್ಮ ಸಾಹಿತ್ಯ ಕವಿತೆ, ಪುಸ್ತಕಗಳನ್ನು ಇಂದಿನ ಯುವ ಪೀಳಿಗೆಗೆ ಪ್ರತಿ ಮನೆಯ ಹಿರಿಯರು ಓದುವುದನ್ನು ಕಲಿಸಬೇಕು, ಮನೆಯಲ್ಲಿ ಆದಷ್ಟು ಕನ್ನಡವನ್ನೇ ಮಾತನಾಡಬೇಕು ಮಕ್ಕಳಲ್ಲಿ ಕನ್ನಡಾಭಿಮಾನವನ್ನು ಬೆಳೆಸಬೇಕು ಹಾಗಾದಾಗಲಷ್ಟೇ ಕನ್ನಡ ಭಾಷೆ ಮುಂದೆ ಉಳಿಯಲು ಸಾಧ್ಯ,ಇಂದು ನಾ ನೋಡಿದ ಮಟ್ಟಿಗೆ ದೊಡ್ಡ ದೊಡ್ಡ ಹುದ್ದೆಯಲ್ಲಿರುವರು ನಮ್ಮ ಕನ್ನಡಿಗರು ನಮ್ಮ ಭಾಷೆ ಮಾತನಾಡಲು ಹಿಂಜರಿಯುತ್ತಾರೆ ಇನ್ನು ಕೆಲವೊಂದು ನಟ ನಟಿಯರು ಕನ್ನಡ ಎಷ್ಟೇ ಚನ್ನಾಗಿ ಗೊತ್ತಿದ್ದರೂ ಕನ್ನಡ ಮಾತನಾಡುವುದು ಅಪಮಾನವೆಂಬತೆ ಆಡುತ್ತಾರೆ, ಇವರಿಗೆ,ಹೆಸರು ಹಣ ಮಾಡಲು ಜೀವನ ಕಟ್ಟಿಕೊಳ್ಳಲು ನಮ್ಮ ನೆಲ ಬೇಕು ಆದರೆ ನಮ್ಮ ನೆಲದ ಭಾಷೆ ಮಾತ್ರ ಬೇಡ ಇದು ನಿಜಕ್ಕೂ ದುರಹಂಕಾರದ ಪರಮಾವಧಿ ಎಂದರೆ ತಪ್ಪಲ್ಲ, ಬೇರೆ ಭಾಷೆಯನ್ನು ಗೌರವಿಸೋಣ ಆದರೆ ನಮ್ಮ ಭಾಷೆಯನ್ನು ಮಾತ್ರವೇ ಬಳಸೋಣ, ಬೆಳೆಸೋಣ ಪರಭಾಷಿಕರಿಗೆ ಕನ್ನಡವನ್ನು ಕಲಿಸೋಣ. ಆಗ ಕನ್ನಡ ಸಹಜವಾಗಿಯೇ ಮುಂದಿನ ತಲೆ ತಲೆ ಮಾರಿನವರೆಗೂ ಆರೋಗ್ಯಕರವಾಗಿ ಬೆಳೆಯುತ್ತದೆ.
ಕನ್ನಡವೇ ಸತ್ಯ ಕನ್ನಡವೇ ನಿತ್ಯ
“ಜೈ ಭುವನೇಶ್ವರಿ”
- ಗೀತಾಂಜಲಿ ಎನ್ ಎಮ್ – ಕೊಡಗು.
