ಪ್ರಕೃತಿಯೇ ನಮ್ಮ ಮೊದಲ ಗುರು. ಸಂಶೋಧನೆಗಳ ತಾಣ ಇದು. ಅಂದೊಂದು ಕಾಲವಿತ್ತು. ನಡೆದದ್ದೆಲ್ಲ ನಮ್ಮ ನೆಲವೇ. ಹರಿಯುವುದೆಲ್ಲ ನಮ್ಮ ಹಕ್ಕಿನ ಜಲವೇ. ಆಟ ಓಟ ನೋಟ ವಿನೋದಗಳಿಗೆ ಯಾವುದೇ ನಿರ್ಬಂಧಗಳಿರಲಿಲ್ಲ. ಶಿಕ್ಷಕರು, ಲೇಖಕರಾದ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣದಲ್ಲಿ ‘ವನ್ಯ ಜೀವ ಸಂಪತ್ತು’ ದಲ್ಲಿ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪ್ರಕೃತಿಯಲ್ಲಿ ತಾನೇ ತಾನಾಗಿ ಬೆಳೆಯುವುದು ವನ್ಯಜೀವಿ. ಇದು ಪ್ರಾಣಿ, ಸಸ್ಯ ಸಂಕುಲಗಳನ್ನು ಒಳಗೊಂಡಂತೆ ಲೆಕ್ಕವಿಲ್ಲದಷ್ಟು ಸೂಕ್ಷ್ಮಾಣು ಜೀವಿಗಳ ಮಡಿಲೂ ಆಗಿದೆ. ಎಲ್ಲ ಸಂಪತ್ತಿಗಿಂತಲೂ ಅತಿ ಅಮೂಲ್ಯವಾದ ಈ ಸಂಪತ್ತನ್ನು ಉಳಿಸಿಕೊಳ್ಳದೇ ಹೋದರೆ ಮಾನವನ ಎಲ್ಲಾ ಸಾಧನೆಗಳೂ ವ್ಯರ್ಥ ಎನಿಸುವ ಅನಿವಾರ್ಯ ಕಾಲಘಟ್ಟದಲ್ಲಿ ನಾವಿಂದು ನಿಂತಿದ್ದೇವೆ.
ಮಾರ್ಚ್ ದಿ.೦೩ರಂದು ‘ವಿಶ್ವ ವನ್ಯಜೀವಿ ದಿನ’ ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಇದರ ಆಚರಣೆ ತೀವ್ರ ಅಗತ್ಯವುಳ್ಳ ಆದ್ಯ ಕರ್ತವ್ಯವಾಗಿದೆ. ಪ್ರಗತಿಯ ಹುಮ್ಮಸ್ಸಿನಲ್ಲಿ ನಾವು ನಾಶಮಾಡಿರುವ/ಮಾಡುತ್ತಲೇ ಇರುವ ಜೀವಸಂಪತ್ತಿನ ಮೌಲ್ಯವನ್ನು ಅರಿಯುವುದು ಹಾಗೂ ಪ್ರಕೃತಿಗೆ ಅದರ ಅನಿವಾರ್ಯತೆ ಎಷ್ಟಿದೆ ಎಂಬುದನ್ನು ಮಾನವನಿಗೆ ಮನದಟ್ಟು ಮಾಡಿಸುವುದು ಈ ಆಚರಣೆಯ ಹಿಂದಿರುವ ಪ್ರಮುಖ ಉದ್ದೇಶವಾಗಿದೆ.

ಫೋಟೋ ಕೃಪೆ : ಅಂತರ್ಜಾಲ
ನಮ್ಮ ಪೂರ್ವಿಕರು ಪ್ರಕೃತಿಯನ್ನು ದೇವರೆಂದು ಆರಾಧಿಸಿದರು. ಇದು ಒಳಗೊಂಡಿರುವ ಎಲ್ಲ ಅಂಶಗಳೂ ‘ಭಗವಂತನ/ ದೇವಿಯ ಸ್ವರೂಪ’ ಎಂದು ಭಾವಿಸಿ ಭಕ್ತಿಯಿಂದ ಪೂಜಿಸಿದರು. ಪಂಚಭೂತಗಳಾದ ಗಾಳಿ, ನೀರು, ಅಗ್ನಿ, ವಾಯು, ಆಕಾಶ ಗಳೆಲ್ಲವೂ ದೇವತೆಗಳೆ.ಪ್ರತಿಗಿಡವೂ,ಪ್ರತಿ ಮರವೂ ಪೂಜನೀಯವೇ. ಗರಿಕೆಯಿಂದ ಹಿಡಿದು ಕಲ್ಪವೃಕ್ಷದವರೆಗೂ ಇದು ಭಗವತ್ಸ್ವರೂಪಿಯೇ. ನೀರು ಪವಿತ್ರ ತೀರ್ಥ ಹಾಗೂ ಜಲದೇವತೆ. ಗಾಳಿ ಆಂಜನೇಯನ ಅಂಶ ಮುಖ್ಯಪ್ರಾಣ. ಸೂರ್ಯ ಹಾಗೂ ಬೆಂಕಿ ಶಕ್ತಿದೇವತೆಗಳು.
ಮಣ್ಣು, ಎಲ್ಲಾ ಜೀವಿಗಳ ಜೀವನಾಧಾರದ ನೆಲೆ (ಹುಡಿಯೆ ಭಸ್ಮವು) ಹಣೆಗೆ ಧರಿಸುವ ಪವಿತ್ರ ತಿಲಕದಂತೆ. ಆಕಾಶ, ಸರ್ವಜೀವಿಗಳ ಬದುಕಿಗೆ ಅವಕಾಶವನ್ನು ಒದಗಿಸುವ ಸೂರ್ಯಗ್ರಹತಾರೆಗಳ ನೆಲೆ. ಹೀಗೆ ಎಲ್ಲ ಜೀವಿಗಳ ಜೀವನರಂಗ ಈ ಭೂಮಿ. ಕಾಡು ಬೆಟ್ಟ, ಬಯಲು, ಕಣಿವೆ, ನದಿ, ಸಾಗರಗಳು, ಮರುಭೂಮಿ, ಹಿಮ ಪ್ರದೇಶಗಳು ಹೀಗೆ ಪೃಥ್ವಿಯ ಮೇಲಣ ಹಾಗೂ ಅಂತರಂಗದ ಸಂಪತ್ತೆಲ್ಲವೂ ಸೃಷ್ಟಿಯ ಕೊಡುಗೆ. ನೈಸರ್ಗಿಕ ಋತುಮಾನಗಳು, ಮಳೆ, ಚಳಿ, ಬಿಸಿಲು ಎಲ್ಲವೂ ಕಾಲಧರ್ಮವನ್ನು ಪ್ರತಿಪಾದಿಸುತ್ತಾ ತಮ್ಮ ಕರ್ತವ್ಯದಲ್ಲಿ ಚ್ಯುತಿಯಾಗದಂತೆ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾ ತಮ್ಮ ಪಾತ್ರವನ್ನು ಚಾಚೂ ತಪ್ಪದಂತೆ ಮುಂದುವರಿಸುತ್ತಾ ಭೂಮಿಯ ಜೀವಂತಿಕೆಯನ್ನು ಕಾಪಾಡುತ್ತಿರುವ ಅಂಶಗಳು.
*
ಕಾಡು ಸಹಜವಾಗಿ ಬೆಳೆದದ್ದು.ಅರಣ್ಯ ಸಂರಕ್ಷಿಸಲ್ಪಟ್ಟದ್ದು. ಇಂತಹ ಸಹಜವಾದ ಒಂದು ಕಾಡು “ಒಂದು ವಿಶಿಷ್ಟವೆನಿಸುವ ಅಭೇದ್ಯ ಸಂಬಂಧಗಳಿಂದ ತಳುಕು ಹಾಕಿಕೊಂಡಿರುತ್ತದೆ. ಯಾವುದೋ ಬಳ್ಳಿ, ಇನ್ಯಾವುದೋ ಮರ, ಯಾವುದೋ ಗೆಲ್ಲು, ಇನ್ನಾವುದೋ ರೆಂಬೆ, ಒಂದಕ್ಕೊಂದು ತಳಕುಹಾಕಿಕೊಂಡಿರುತ್ತದೆ. ಇರುವೆ ದಾಟುವಷ್ಟು ದಂಟು ಸೇತುವೆಗಳು ಇರುತ್ತವೆ.ಯಾವುದೋ ಬಳ್ಳಿ,ಹೆಮ್ಮರ ಹತ್ತಿ ತುದಿಯೇರಿ ಹೂ ಬಿಟ್ಟಾಗ ಅದರ ಜೇನು ಹೀರಲು ಬರುವ ಹತ್ತಾರು ಜಾತಿಯದುಂಬಿ, ಕೀಟ, ಪತಂಗಗಳು, ನೂರಾರು ಜಾತಿಯ ಹಕ್ಕಿಗಳು. ನೆಲ, ಮರ, ಪೊಟರೆ, ತೊಗಟೆ, ಹೂವು ಕಾಯಿ ಹಣ್ಣು ತಿಂದು ಸವಿದು ಆಶ್ರಯಿಸಿಕೊಂಡು ಬದುಕುವ ಅಗಣಿತ ಜೀವರಾಶಿಗಳು.

ಫೋಟೋ ಕೃಪೆ : ಅಂತರ್ಜಾಲ
ನರೇಂದ್ರ ರೈ ದೇರ್ಲ…(ಹಸಿರು ಅಧ್ಯಾತ್ಮ)
‘ಜ್ವರ ಬಂತಾ…ಹಾಗಾದ್ರೆ ಕಳಂಜಿ ಕುಡಿ ಕುಡಿಯಿರಿ’
ಇದು ಮಳೆಗಾಲದಲ್ಲಿ ನಮ್ಮಲ್ಲಿ ಪ್ರಚಲಿತವಿದ್ದ ಔಷಧಿ. ಅಲ್ಲೇ ಕಾಡು ಪೊದೆಗಳಲ್ಲಿ ಧಾರಾಳವಾಗಿ ಬೆಳೆಯುತ್ತಿದ್ದ ಗಜ್ಜುಗದ, ‘ಮುಳ್ಳುಪೊದೆ’ಯಂತೆ ಇರುವ ಗಿಡದ ಕುಡಿಯನ್ನು ನಾಲ್ಕು ಕಾಳು ಮೆಣಸು, ಜೀರಿಗೆ, ಒಂದು ತುಂಡು ಹಸಿ ಅರಶಿನದೊಂದಿಗೆ ಅರೆದು ಅದರ ರಸಕ್ಕೆ ಕಬ್ಬಿಣ ಕಾಯಿಸಿ ಜ್ವರ ಬಂದವರಿಗೆ ಕುಡಿಸುತ್ತಿದ್ದ ಸಂಪ್ರದಾಯ ಇತ್ತೀಚಿನವರೆಗೂ ಇತ್ತು. ಗಾಯವಾದರೆ ಉಣ್ಣಿಗಿಡ (ಲಂಟಾನಾ ಕಾಡು ಗುಲಾಬಿ)ದ ಎಲೆಗಳನ್ನು ಅರೆದು ಹಚ್ಚಿದರೆ ಗಾಯ ವಾಸಿಯಾಗುವುದೆಂಬ ನಂಬಿಕೆ. ‘ಬಂದ’ ಗಿಡದ ಎಲೆಗಳನ್ನು ಕಷಾಯಮಾಡಿ ಅದರಿಂದ ಬಾಯಿ ಮುಕ್ಕಳಿಸಿದರೆ ಹಲ್ಲುನೋವು ಶಮನವಾಗುತ್ತದೆ ಎಂದು ಕಾಡಿನಲ್ಲಿ ಅದನ್ನು ಅರಸುವ ಹಲ್ಲುನೋವಿನವರನ್ನು ನಾನು ಆಗಾಗ ಕಾಣುತ್ತಿರುತ್ತೇನೆ.
ಸರ್ಪಸುತ್ತಿಗೆ ಮಾಡುವ ನಾಟಿವೈದ್ಯಕ್ಕೆ ಒಳ್ಳೆ ಕುಡಿ, ಚಗತೆ ಎಲೆ ಪೊಲಿಸೊಪ್ಪು, ಗರಿಕೆ ಇತ್ಯಾದಿ ಅರಿಶಿನ ಸೇರಿಸಿ ಅರೆದು ಆ ನಿರ್ದಿಷ್ಟ ಸ್ಥಳಕ್ಕೆ ಲೇಪಿಸುವುದು ಹಾಗೂ ಹೊಟ್ಟೆಗೂ ಸೇವಿಸುವುದು. ಹೀಗೆ ನೂರಾರು ರೋಗಗಳಿಗೆ ನಮ್ಮ ಸುತ್ತ ಮುತ್ತಲ ಕಾಡು ಬಳ್ಳಿ, ಗೆಡ್ಡೆಗೆಣಸು ಹೂವು, ಎಲೆ, ಕಾಯಿ, ತೊಗಟೆ, ಬೇರುಗಳೇ ಪ್ರಾಥಮಿಕ ಔಷಧ ಭಂಡಾರವಾಗಿತ್ತು. ಇದು ರೋಗ ನಿಧಾನವೂ ಆಗಿತ್ತು. ಆಯುರ್ವೇದ ಔಷಧಿಪದ್ಧತಿಗಳು ಗಿಡಮೂಲಿಕೆಗಳ ಆಧಾರದಿಂದಲೇ ಅಡ್ಡ ಪರಿಣಾಮಗಳಿಲ್ಲದ ಚಿಕಿತ್ಸಾಪದ್ಧತಿಯನ್ನು ಅನೂಚಾನವಾಗಿ ರೂಢಿಸಿಕೊಂಡು ಬಂದಿವೆ. ಶ್ರೀಗಂಧ, ಚಂದನಗಳ ಲೇಪನದಿಂದ ಆಗುವ ಪ್ರಯೋಜನವನ್ನು ಇಷ್ಟೆಂದು ಪಟ್ಟಿ ಮಾಡುವಂತಿಲ್ಲ.ಹೀಗಾಗಿ ಭಾರತೀಯ ಪೂಜಾಪದ್ಧತಿಯಲ್ಲಿ ಇವುಗಳ ಉಪಯೋಗ ಅನನ್ಯವಾಗಿವೆ. ಹೀಗೆ ಸಮೃದ್ಧ ಔಷಧ ಭಂಡಾರವಾಗಿದ್ದ /ಈಗಲೂ ಆಗಿರುವ ನಮ್ಮ ಕಾಡುಗಳು ಈಗ ಬಯಲಾಗಿ ಕಾಂಕ್ರೀಟ್ ರಕ್ಕಸನ ಆಕ್ಟೋಪಸ್ ಹಿಡಿತದಲ್ಲಿ ತಮ್ಮ ಉಸಿರು ಕಳೆದುಕೊಳ್ಳುತ್ತಿವೆ. ನಗರೀಕರಣದ ಭೂತ ಈ ಹಸಿರುತನದ ಜೀವಸೆಲೆಯನ್ನು ನುಂಗಿ ನೀರು ಕುಡಿಯುತ್ತಿದೆ.

ಫೋಟೋ ಕೃಪೆ : ಅಂತರ್ಜಾಲ
ನಗರ ಹಾಗೂ ಕಾಡಿನ ಪರಿಸರದಲ್ಲಿ ಒಂದು ಸುದೀರ್ಘ ನಡಿಗೆ ಮಾಡಿದಾಗ ಇದರ ವ್ಯತ್ಯಾಸ ಸ್ವಯಂ ವೇದ್ಯವಾಗುತ್ತದೆ. ಹೊಂಗೆಯ ಸಮೃದ್ಧ ತಂಪು ನೆರಳು, ಅರಳಿ, ಮಾವು, ಬೇವುಗಳ ಆರೋಗ್ಯಕರ ಗಾಳಿ, ನಮ್ಮ ಅರಳಿಕಟ್ಟೆಯಲ್ಲಿ ಹಳ್ಳಿಗರಿಗೆ ವಿಶಿಷ್ಟ ನೆಲೆಯನ್ನೇ ಒದಗಿಸಿತ್ತು. ಅದರಡಿಯಲ್ಲಿ ತಮ್ಮ ಊರ ದೇವತೆಗಳ ಮೂರ್ತಿಯನ್ನಿಟ್ಟು ಪೂಜಿಸುವ ಸಂಪ್ರದಾಯವಿತ್ತು.
ಧೂಳು, ಹೊಗೆ, ಗದ್ದಲಗಳ ನಡುವೆ ನಮ್ಮ ಮನಸ್ಸು ಪ್ರಶಾಂತವಾಗಿರುವುದಾದರೂ ಹೇಗೆ.? ಕೃತಕ ಕೈತೋಟಗಳು, ಉತ್ಪನ್ನಗಳು ಇದ್ದಾಗ್ಯೂ ಧೂಳು ತುಂಬಿದ ಗಿಡಮರಗಳು ಮನಸ್ಸಿಗೆ ಮುದಕೊಡುವುದಾದರೂ ಹೇಗೆ? ಅದೇ ವಾಹನಗಳ ಕರ್ಕಶ ಶಬ್ದ ಸದಾ. ಕಿವಿದೆರೆಗೆ ಬೀಳುವ ಸದ್ದು ಗದ್ದಲಗಳ ಸಂತೆ. ಅದೇ ಬೀದಿ ಬದಿ ವ್ಯಾಪಾರಿಗಳು. ದಿನದ ವ್ಯಾಪಾರ ವಹಿವಾಟು. ಅಲ್ಲಲ್ಲಿ ಕಸದ ರಾಶಿ ಪರ್ಯಾಯವಾಗಿ ಹಳ್ಳಿ ದಾರಿಯಲ್ಲಿ ಅಥವಾ ಕಾಡಿನ ಪರಿಸರದಲ್ಲಿ ನಡೆಯತೊಡಗಿದರೆ ಒಂದು ವಿಶಿಷ್ಟ ಅನುಭವದ ಪುಳಕಕ್ಕೆ ಒಳಗಾಗುತ್ತೇವೆ.
*
ಕಾಡಿನ ಪರಿಸರದಲ್ಲಿ ಏನುಂಟು ಏನಿಲ್ಲ. ಅಲ್ಲಿನ ಜೀವಜಾಲದ ವಿಶಿಷ್ಟ ಸಂಬಂಧಗಳು ಮೈನವಿರೇಳಿಸುತ್ತವೆ. ಮರವ ತಬ್ಬಿದ ಬಳ್ಳಿ ಆಕಾಶದೆತ್ತರ ತನ್ನ ಕೈಚಾಚಿ ಬಣ್ಣಬಣ್ಣದ ಹೂಗೊಂಚಲು ಗಳನ್ನು ಬಿರಿಸಿ ನಗುವ ನೋಟ. ಸಂಜೆಯಾಗುವಾಗ ಅವುಗಳ ಉದುರುವಿಕೆಯಿಂದ ಸಿದ್ಧವಾಗಿ ಬಿಡುವ ಹೂವಿನ ರಂಗೋಲಿ.ಹೂಗಳಿಂದ ಹೊಮ್ಮುವ ಭ್ರಮರಗೀತ … ಮರಗಳ ರೆಂಬೆಗಳಿಂದ ಸೂಸುವ ಶುಕಪಿಕಗಾನ.
ಕಂಪಿನ ಹೂಗಳಿಂದ ನಿರ್ಮಾಣವಾಗುವ ಸುಗಂಧಮಯ ಪರಿಸರ. ನೆರಳಿನ ಆ ತಂಪು ಮಂದಸಮೀರನ ಮೂಕ ಗಾನ. ಬೆಳಿಗ್ಗೆ ಆಗುತ್ತಿದ್ದಂತೆ ಹಿಂಡುಹಿಂಡಾಗಿ ಚಿತ್ತಾರ ಬರೆಯುತ್ತಾ
ಆಗಸದ ಒಡಲಿಗೆ ನೆಗೆದು ಬಿಡುವ ಬೆಳ್ಳಕ್ಕಿ ಹಿಂಡು. ಸಂಜೆಯಾಗುತ್ತಿದ್ದಂತೆ ತಮ್ಮ ಆವಾಸದೆಡೆಗೆ ಧಾವಿಸಿಬರುವ ಅವುಗಳ ಉಡ್ಡಯನದ ಸೊಬಗು.ಸೂರ್ಯಾಸ್ತದ ಹೊಂಬೆಳಕಿನ
ವರ್ಣಮಯ ಮೇಘಗಳು.

ಫೋಟೋ ಕೃಪೆ : ಅಂತರ್ಜಾಲ
ಸಸ್ಯ ಶ್ಯಾಮಲೆಯ ಈ ಆಡುಂಬೊಲ ನಿತ್ಯ ಸುಖದ ಸಗ್ಗ. ಬುದ್ಧಿಯನ್ನು ಪ್ರವರ್ಧಿಸುವ, ಹೊಂದಿಬಾಳುವುದನ್ನು ಕಲಿಸುವ, ಬದುಕಿನ ಅರ್ಥವನ್ನು ತಿಳಿಸುವ ಸಾಧನಾರಂಗ.. ಅಷ್ಟೇ ಅಲ್ಲ ಮೋಕ್ಷಧಾಮ ಸಹ. ಪ್ರಕೃತಿಯೇ ನಮ್ಮ ಮೊದಲಗುರು. ನಮ್ಮ ಋಷಿಮುನಿಗಳ ತಪೋಭೂಮಿ ಇದು. ಸಂಶೋಧನೆಗಳ ತಾಣ ಇದು. ಅನ್ವೇಷಣೆಗಳ ಪಂಥಾಹ್ವಾನ ಇದು. ಶಾಂತಿಯ ನೆಲೆಮನೆ ಇದು. ಬುದ್ಧಿ ಭಾವಗಳನ್ನು ಪ್ರಚೋದಿಸುವ ಪ್ರಭಾವಲಯ ಇದು. ವಿಹಾರದ ತಾಣ ಇದು. ಬದುಕಿನ ಕನಸುಗಳನ್ನು ನನಸುಗೊಳಿಸುವ ಸಾಧನೆಗೆ ಇಂಬುಕೊಡುವ ಅಭಯಧಾಮ ಇದು.
ಪ್ರೀತಿ ಪ್ರೇಮ ವಾತ್ಸಲ್ಯಗಳ ಅಮೃತವಾಹಿನಿಯನ್ನು ಹರಿಸುವ ಜೀವವಾಹಿನಿ ಇದು. ಅದಕ್ಕೇ ಈ ಭೂಮಿ ನಮ್ಮ ತಾಯಿ.
*
ಅಂದೊಂದು ಕಾಲವಿತ್ತು. ನಡೆದದ್ದೆಲ್ಲ ನಮ್ಮ ನೆಲವೇ. ಹರಿಯುವುದೆಲ್ಲ ನಮ್ಮ ಹಕ್ಕಿನ ಜಲವೇ. ಆಟ ಓಟ ನೋಟ ವಿನೋದಗಳಿಗೆ ಯಾವುದೇ ನಿರ್ಬಂಧಗಳಿರಲಿಲ್ಲ. ಆ ಬಯಲು, ಈ ಬೆಟ್ಟ, ಆ ಮರ ಈ ಕಾಡು ಎಲ್ಲವೂ ನಮಗಾಗೇ. ಕಾಡಿನಲ್ಲಿರುವ ಕೀಟಗಳು, ಮೃಗಗಳು ಎಲ್ಲವೂ ಸ್ವಚ್ಛಂದವಾಗಿ ಬದುಕುತ್ತಾ ಈ ಭೂಮಿಗೂ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ತಮ್ಮ ಬದುಕಿನ ಚಕ್ರವನ್ನು ಪೂರ್ಣಗೊಳಿಸುತ್ತಿದ್ದುವು. ಎಷ್ಟು ತೆರನಾದ ಖಗಗಳು, ಮೃಗಗಳು, ಚಿಟ್ಟೆ, ಮಿಡತೆ ಜೇನ್ನೊಗಳಂತಹ ಪರಾಗಸ್ಪರ್ಶಕಗಳು.
ನೀರೊಳಗಿನ ಮತ್ಸ್ಯಸಂತತಿ ಕಪ್ಪೆ ಇತ್ಯಾದಿ. ಅಶುದ್ಧಗೊಂಡಾಗ ಆ ನೀರಿನ ಕಶ್ಮಲಗಳನ್ನೇ ತಿಂದು ತಿಳಿಗೊಳಿಸುವ ಪರಿ ಸದ್ದಿಲ್ಲದೆ ನಡೆಯುತ್ತಿದ್ದ ಕಾರ್ಯ. ನೆಲದ ಜಲಗಾರರಾದ ಹದ್ದು ಕಾಗೆಯಂತಹ ಹಕ್ಕಿಗಳು. ಗಿಡಮರಗಳಿಗೆ ತೊಂದರೆ ಕೊಡುವ, ಬೆಳೆಗೆ ಹಾನಿಯನ್ನುಂಟುಮಾಡುವ ಸತ್ತ ಕೊಳೆತ ಪ್ರಾಣಿಗಳನ್ನು ತಿಂದು ಸ್ವಚ್ಛತೆಗೆ ಹಾಗೂ ಸಮೃದ್ಧಿಗೆ ತಮಗರಿವಿಲ್ಲದಂತೆ ಬಹುದೊಡ್ಡ ಕೊಡುಗೆಯನ್ನು ನೀಡುತ್ತಿದ್ದುವು.
*
ರಜೆ ಬಂತೆಂದರೆ ಮಕ್ಕಳಿಗೆ ಕಾಡು ನದಿ ಬೆಟ್ಟ ಬಯಲುಗಳೇ ಪ್ರಯೋಗ ಶಾಲೆ. ಅಲ್ಲಿ ಆಟವೂ ಇತ್ತು. ಜೀವನಪಾಠವೂ ಇತ್ತು. ಅಪ್ಪ ಅಮ್ಮನಿಗೆ ಸಹಾಯಕವಾಗುವಂತೆ ಕಾಡಿನಲ್ಲಿ ದೊರೆಯುವ ಒಣಕಟ್ಟಿಗೆ ಹಸುಮೇಕೆಗಳಿಗೆ ಬೇಕಾದ ಸೊಪ್ಪನ್ನು ಸಂಗ್ರಹಿಸಿ ತರುವ ಜವಾಬ್ದಾರಿಯೂ ಇತ್ತು. ಮರದಲ್ಲಿ ಕಟ್ಟಿದ ಹಕ್ಕಿಗೂಡು, ಜೇನು ಇವುಗಳ ಪರಿಚಯವೂ ಆಗುತ್ತಿತ್ತು.
ಪ್ರಾಣಿಪಕ್ಷಿಗಳ ಇಂಚರ ಮನತಣಿಸುತ್ತಿತ್ತು.ವಿವಿಧ ಮರಗಳು ಅವುಗಳ ಹೂಹಣ್ಣುಗಳು, ಎಲೆಗಳ ವಿನ್ಯಾಸ ಎಲ್ಲವೂ ಮನಸ್ಸಿಗೆ… ಯಾರೂ ತಿಳಿಹೇಳದಂತೆಯೇ ತಾನಾಗಿಯೇ ಪರಿಚಿತವಾಗುತ್ತಿತ್ತು. ಮಳೆಯಲ್ಲಿ ನೆನೆಯುವ ಸುಖ, ಬಿಸಿಲಿನ ಆಯಾಸ, ಮರಗಳ ತಂಪು, ಮೌನ… ಹೀಗೇ…. ಎಷ್ಟೋ ಸಂಗತಿಗಳು ತರಗತಿಯ ಬೋಧನೆಯಿಲ್ಲದೆಯೇ ಅನುಭವವೇದ್ಯವಾಗುತ್ತಿದ್ದುವು.
*
ಆದರೆ ಈಗ ಮಗ್ಗುಲು ಬದಲಿಸಿದ ಜನಜೀವನ ಮಕ್ಕಳ ರೆಕ್ಕೆಗಳನ್ನು ಶಿಕ್ಷಣದ ಹೆಸರಿನಲ್ಲಿ ಕಟ್ಟಿಹಾಕಿದೆ. ಅವರ ಸ್ವಚ್ಛಂದತೆಯ ಕನಸುಗಳ ಚಿಗುರನ್ನು ಚಿವುಟಿದೆ. ಸನ್ನಿವೇಶಗಳ ತಾಪದಲ್ಲಿ ಅವರ ಭಾವನೆಗಳನ್ನು ಸುಟ್ಟುಹಾಕಿದೆ. ವಿಶಾಲವಾದ ಶಾಲೆಯ, ಬಯಲಿನ ಉದಾತ್ತವಾದ ಶಿಕ್ಷಣದ ಕನಸುಗಳ ಸುತ್ತಲೂ ಎತ್ತರವಾದ ಕೋಟೆ ನಿರ್ಮಿಸಿ ದಿಗ್ಬಂಧಿಸಿದೆ.
ಕಣ್ಣಿಗೆ ಪಟ್ಟಿ ಕಟ್ಟಿದ ಕುದುರೆಗಳಂತೆ ಕೇವಲ ಅಂಕಗಳಿಕೆಯ, ಕಂಠಪಾಠದಲ್ಲಿ ಕರಗಿಹೋಗುತ್ತಿರುವ ಮಕ್ಕಳ ಸೀಮಿತ ಭಾವಲೋಕ ಬಣ್ಣಗೆಟ್ಟಿದೆ.
ಈಗ ನಡೆಯುವ ಸುಖವಿಲ್ಲ. ಗೆಳೆಯರೊಡನೆ ಬಿಡುವಿನಲ್ಲಿ ಆಡುವಂತಿಲ್ಲ. ಅಪ್ಪ ಅಮ್ಮನೊಂದಿಗೆ ವಿರಾಮವಾಗಿ, ಹಾಯಾಗಿ ಕಾಲಕಳೆಯುವಂತಿಲ್ಲ. ಅವರನ್ನು ಪ್ರಕೃತಿಯ ಯಾವ ಬೆಡಗೂ ಮೋಹಿಸುತ್ತಿಲ್ಲ. ಅನುಕೂಲ ಸಿದ್ಧಾಂತವೆಂಬಂತೆ ಸಿದ್ಧ ಆಹಾರ, ಪೇಯಗಳ ರುಚಿ ಅವರ ಆರೋಗ್ಯಕ್ಕೂ ಮಾರಕವಾಗಿರುವುದು ಒಂದು ಸಾಮಾಜಿಕ ದುರಂತ.
ತಮ್ಮ ಮೊಬೈಲಿನಲ್ಲೇ ಎಲ್ಲ ಮಾಹಿತಿ ಮನರಂಜನೆ. ಸಂಪರ್ಕ ಇತ್ಯಾದಿ ಎಲ್ಲವನ್ನು ಪಡೆದುಕೊಳ್ಳುವ ತಂತ್ರಜ್ಞಾನದ ಸುಳಿಯಲ್ಲಿ ಸಿಲುಕಿರುವ ನಮ್ಮ ಜನಾಂಗ ಸಂವೇದನಾಶೀಲತೆಗೆ ಎರವಾಗುತ್ತಿರುವುದು ಒಂದು ಸಾಮಾಜಿಕ ದುರಂತವೇ ಆಗಿದೆ.
*
ನಾಶವಾಗುತ್ತಿರುವ ಅರಣ್ಯ ಸಂಪನ್ನತೆ, ಏರು ಪೇರಾಗುತಿರುವ ಋತುಮಾನ,ಪಶುಸಂಪತ್ತಿಲ್ಲದೆ ಬಂಜೆಯಾಗುತ್ತಿರುವ ನೆಲ, ಕಾಡಿಲ್ಲದೆ ಬರಡಾಗುತ್ತಿರುವ ಭೂಮಿ. ಏರುತ್ತಿರುವ ಭೂ ತಾಪಮಾನ, ವಿಕೃತವಾಗುತ್ತಿರುವ ಮಾನವೀಯ ಸಂಬಂಧಗಳು, ಧನದಾಹ… ಹೀಗೆ ಈ ಬದುಕು ತನ್ನ ಅಸ್ತಿತ್ವದ ಮೌಲ್ಯಕ್ಕೆ ಎರವಾಗಿ ಪಾಶವೀಯತೆಯ ಆಡುಂಬೊಲವಾಗಿದೆ.
*
ಮತ್ತೆ ಕಾಡನ್ನು ದಟ್ಟವಾಗಿಸುವ, ತನ್ಮೂಲಕ ಭೂಮಿಯ ಬದುಕನ್ನು ಸಹ್ಯಗೊಳಿಸುವ ಕಾರ್ಯ ಇಂದು ಸಮರ ದೋಪಾದಿಯಲ್ಲಿ ಸಾಗಬೇಕಾಗಿದೆ.
‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :
- ಕಪ್ಪೆ ಗೂಡಿನ ಮಧುರ ನೆನಪು! – (ಭಾಗ ೧)
- ಜೀವನ ಪ್ರೀತಿಗುಂಟೆ ಅಸ್ಪ್ರಶ್ಯತೆ? – (ಭಾಗ ೨)
- ಅದೊಂದು ಸರಕಾರೀ ಶಾಲೆ ! – (ಭಾಗ ೩)
- ಏನೆನ್ನಬೇಕೋ ಈ ಮೌಢ್ಯಕೆ? – (ಭಾಗ ೪)
- ಆರಾಧಿಸು ಕಣ್ಣಿಗೆ ಕಾಣುವ ದೇವರ – (ಭಾಗ ೫)
- ಒಳಗೊಳ್ಳದಿರಲೆಂತು ಬದುಕ – (ಭಾಗ೬)
- ಬದುಕನ್ನು ಹೂತು ಬಿಡಬೇಡಿ – (ಭಾಗ ೭)
- ಮರುಕಳಿಸದ ಸುಗಂಧ – (ಭಾಗ ೮)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೯)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೦)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೧)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೨)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೩)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೪)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೫)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೬)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೭)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೮)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ – ೧೯)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ – ೨೦)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೧)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೨)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೩)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೪)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೫)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೭)
- ಶಿವದೇವಿ ಅವನೀಶಚಂದ್ರ – ಕವಿ, ಅಂಕಣಕಾರ್ತಿ, ಕೊಡಗು.
