ಕರ್ಬಲಾದಲ್ಲಿ ಅಂದು ಏನಾಗಿತ್ತು!

ಅಕ್ಟೋಬರ್ 10 ರ [ಮುಹರ್ರಂನ 10ನೇ ದಿನ, ಹಿಜರಿ 61], ಕರ್ಬಲಾ ಘಟನೆಗೆ ಇಸ್ಲಾಮಿನ ಇತಿಹಾಸದಲ್ಲಿ ಪ್ರಮುಖವಾದ ಸ್ಥಾನವಿದೆ. ಅಂದಿನ ಘಟನೆಯ ಕುರಿತು ಇಮ್ತಿಯಾಜ್ ಖಾನ್ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಓ ಜನರೇ, ನಾನು ಯುದ್ಧಕ್ಕಾಗಿ ಬಂದವನಲ್ಲ. ನನ್ನೊಂದಿಗೆ ನನ್ನ ಕುಟುಂಬದ ಮಹಿಳೆಯರು, ಮಕ್ಕಳು ಇರುವರು. ನನ್ನನ್ನು ಕೊಂದು ಶಾಶ್ವತ ನರಕಕ್ಕೆ ಹೋಗಬೇಡಿರಿ.
ಅಕ್ಟೋಬರ್ 10 ರ [ಮುಹರ್ರಂನ 10ನೇ ದಿನ, ಹಿಜರಿ 61], ಕರ್ಬಲಾ ಘಟನೆಗೆ ಇಸ್ಲಾಮಿನ ಇತಿಹಾಸದಲ್ಲಿ ಪ್ರಮುಖವಾದ ಸ್ಥಾನವಿದೆ. ಪ್ರವಾದಿ ಮುಹಮ್ಮದ್ ರವರ ಮೊಮ್ಮಗ ಮತ್ತು ನಾಲ್ಕನೇ ಖಲೀಫರಾದ ಅಲಿಯವರ ಮಗ ಅಲ್-ಹುಸೈನ್ ಇಬ್ನ್ ಅಲಿಯವರ ಕುಟುಂಬ ಮತ್ತು ಅವರ ಪ್ರಮುಖ ಆಪ್ತರನ್ನೊಳಗೊಂಡ ಒಂದು ಸಣ್ಣ ತಂಡವನ್ನು ಉಮಯ್ಯದ್ ಖಲೀಫಾ ಯಜೀದ್ ನ ಸೈನ್ಯವು ಸೋಲಿಸಿ ಹತ್ಯೆ ಮಾಡಿದ ದಿನವಿದು.

ಕ್ರಿ.ಶ 680 ರಲ್ಲಿ ಯಜೀದ್, ತನ್ನ ತಂದೆ ಮು’ಆವಿಯಾನ ನಂತರ ಖಿಲಾಫತ್‌ಗೆ ಬಂದನು. ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ಆತ, ತನ್ನ ಖಿಲಾಫತ್ ಸ್ವೀಕರಿಸುವಂತೆ ಮದೀನಾದಲ್ಲಿ ವಾಸವಿದ್ದ ಹುಸೈನ್ ರಿಗೆ ಪತ್ರ ಬರೆದು ಆಜ್ಞೆ ಹೊರಡಿಸಿದನು. ಆದರೆ ಹುಸೈನ್ ಯಜೀದನ ಈ ಪ್ರಸ್ತಾವನೆಯನ್ನು ನೇರವಾಗಿ ನಿರಾಕರಿಸಿದರು.

ಏಕೆಂದರೆ ಖಿಲಾಫತ್ ನ ಗದ್ದುಗೆ ಏರಿರುವ ಯಜೀದ್ ದುರುಳನಾಗಿದ್ದ, ಧರ್ಮಲಂಡನಾಗಿದ್ದ. ಪ್ರವಾದಿಯ ವಚನಗಳನ್ನು ಪಾಲಿಸದ ಆತ ಕುಡುಕ, ವ್ಯಾಭಿಚಾರಿ, ನಿರ್ದಯಿಯಾಗಿದ್ದ. ಕುಡಿತ-ಕುಣಿತಗಳನ್ನು ಪ್ರೋತ್ಸಾಹಿಸುತ್ತಿದ್ದ.

ಫೋಟೋ ಕೃಪೆ : ಅಂತರ್ಜಾಲ

ಆದ್ದರಿಂದ ಪ್ರವಾದಿಯ ಮೊಮ್ಮಗನೂ, ಧರ್ಮದ ಪ್ರತೀಕವೂ ಆಗಿದ್ದ ಹುಸೈನ್ ಸಹಜವಾಗಿಯೇ ಅವನನ್ನು ನಿರಾಕರಿಸಲೇ ಬೇಕಾಗಿತ್ತು. ಹಾಗಲ್ಲದಿದ್ದರೆ ಶರೀಯತ್ ನಿಯಮಗಳನ್ನು ಗಾಳಿಗೆ ತೂರಿದ ಎಂತಹ ದುಷ್ಟನಾದರೂ ಇಸ್ಲಾಮಿನ್ ಖಲೀಫಾ ಆಗಲು ಯೋಗ್ಯನು ಎಂಬ ಸಂದೇಶ ಲೋಕಕ್ಕೆ ರವಾನೆಯಾಗುತ್ತಿತ್ತು.

ಅತ್ತ ಕುಫಾ ನಗರದಲ್ಲಿ (ಈಗಿನ ಇರಾಕ್‌ ಪ್ರಾಂತ್ಯ), ಮುಸ್ಲಿಂ ಸಮುದಾಯದ ನಾಯಕತ್ವವು ಮುಹಮ್ಮದ್(ಸ) ರವರ ಧರ್ಮನಿಷ್ಠ ಮೊಮ್ಮಗ ಹುಸೈನ್ ಗೆ ಸೇರಬೇಕು ಎಂದು ಕೂಫಾದ ಜನ ಮೇಲಿಂದ ಮೇಲೆ ಪತ್ರ ಬರೆದು, “ಯಜೀದನ ದೂರಾಡಳಿತದಿಂದ ನಮ್ಮನ್ನು ಪಾರುಗೊಳಿಸಲು, ತಾವು ತಕ್ಷಣವೇ ಕೂಫಾಗೆ ಬಂದು, ಇಸ್ಲಾಮ್ ನ ನಾಯಕರಾಗಿ ಮುಂದುವರಿಯಬೇಕು. ತಮಗೆ ಅಲ್ಲಾಹನ ಆಣೆಯಿದೆ. ನಂಬಿದ ಜನರೆಲ್ಲ ಬೆನ್ನಿಗೆ ನಿಂತು, ತಮ್ಮನ್ನೇ ಇಸ್ಲಾಮಿನ ಖಲೀಫ ಎಂದು ಘೋಷಿಸುತ್ತೇವೆ” ಎಂದು ಭರವಸೆ ನೀಡುತ್ತಿದ್ದರು.
ಇತ್ತ ಯಜೀದ್ ಮದೀನಾದ ಗವರ್ನರ್ ವಲೀದ್ ಬಿನ್ ಉತ್ ಬಾಗೆ ಪತ್ರ ಬರೆದು “ಒಂದೋ ಹುಸೈನನಿಂದ ಬೈತ್ (ಖಿಲಾಫತ್ ಸ್ವೀಕರಿಸುವುದಾಗಿ ಕೈಮೇಲೆ ಕೈಯಿತ್ತು ಪ್ರಮಾಣ ಮಾಡುವುದು) ಪಡೆಯಬೇಕು ಇಲ್ಲ ಅವರನ್ನು ವಧಿಸಿ, ಅವರ ಮೃತ ಶರೀರವನ್ನು ಕೂಫಾಗೆ ಕಳುಹಿಸಬೇಕು” ಎಂದು ಆದೇಶಿಸಿದ. ಮದೀನಾದ ಗವರ್ನರ್ ಹುಸೈನ್ ರನ್ನು ಕರೆದು “ತಾವು ಬೈತ್ ಸ್ವೀಕರಿಸದಿದ್ದರೆ, ಬೇರೆ ದಾರಿಯಿಲ್ಲದೇ ತಮ್ಮನ್ನು ನಾನು ವಧಿಸಬೇಕಾಗುತ್ತದೆ” ಎಂದು ತನ್ನ ನಿರ್ಣಯ ಹೇಳಿದನು.

ಫೋಟೋ ಕೃಪೆ : ಅಂತರ್ಜಾಲ

ಹುಸೈನ್ “ಇದು ನನ್ನ ಅಜ್ಜನ ಪವಿತ್ರ ನಗರ ಮದೀನಾ, ಇಲ್ಲಿ ನನ್ನ ವಧೆ ಆಗಬಾರದು. ನನಗೆ ಮದೀನಾ ತೊರೆಯಲು ಆಸ್ಪದ ಮಾಡಿಕೊಟ್ಟರೆ, ತೀರ್ಪಿನ ದಿನ ಅಲ್ಲಾಹನು ನಿಮ್ಮ ಈ ಕಾರ್ಯವನ್ನು ಮೆಚ್ಚಿ ನಿಮ್ಮನ್ನು ಕ್ಷಮಿಸಬಹುದು ಎಂದುಕೊಂಡಿದ್ದೇನೆ” ಎಂದರು. ಆತ ಅದಕ್ಕೆ ಒಪ್ಪಿದ. ಅದೇ ರಾತ್ರಿ ಹುಸೈನ್ ತನ್ನ ಕುಟುಂಬದ ಸದಸ್ಯರು ಮತ್ತು ಆಪ್ತರನ್ನೊಳಗೊಂಡ 82 ಜನರ ತಂಡವನ್ನು ಮದೀನಾದಿಂದ ಕರೆದುಕೊಂಡು ಮೆಕ್ಕಾಗೆ ತೆರಳಿದರು. ಮದೀನಾ ಬಿಡುವ ಸಂಕಟ, ತೀರ್ಪಿನ ದಿನದ ಸಂಕಟಕ್ಕಿಂತ ಕಡಿಮೆಯದ್ದಾಗಿರಲಿಲ್ಲ ಅವರಿಗೆಲ್ಲ.
ಹುಸೇನ್ ಮದೀನಾ ಬಿಟ್ಟು ಮೆಕ್ಕಾ ಸೇರಿದರು. ಆ ಸುದ್ದಿ ತಿಳಿದು, ಯಜೀದ್ ಮತ್ತೇ ಪತ್ರ ಬರೆದು, ಹುಸೈನ್ ಗೆ ತನ್ನ ತಾಬಾ ವಹಿಸಬೇಕು ಇಲ್ಲ ಮುಂದಿನ ಅನಾಹುತಕ್ಕಾಗಿ ಕಾಯಬೇಕು ಎಂದು ಮೆಕ್ಕಾದ ಗವರ್ನರ್ ಅಮ್ರ ಇಬ್ನ ಸಾದ್ ಗೆ ಪತ್ರ ಬರೆದ. ತನ್ನ ಬಗ್ಗೆ ಯಜೀದನಲ್ಲಿ ಮನೆಮಾಡಿಕೊಂಡಿರು ದ್ವೇಷ, ಅಸೂಯೆ, ದುರುದ್ದೇಶ ಹುಸೇನ್ ಅರಿತಿದ್ದರು. ತಾನೊಬ್ಬನೇ ಅವನ ದಾರಿಯ ಅಡ್ಡಿ ಎಂದೂ ಅವರಿಗೆ ತಿಳಿದಿತ್ತು. ಆದರೆ ಕೂಫಾದ ನಾಗರಿಕರು ತಮ್ಮನ್ನು ಉತ್ಸಾಹದಿಂದ ಸ್ವಾಗತಿಸುತ್ತಿದ್ದಾರೆ, ಅಲ್ಲಿಗೆ ಹೋದರೆ ಖಂಡಿತ ಆಶ್ರಯ ಸಿಕ್ಕೀತು ಎಂಬ ನಿರೀಕ್ಷೆಯಲ್ಲಿ ಮೆಕ್ಕಾದಿಂದ (ಜನರ ಪ್ರಬಲ ವಿರೋಧದ ನಡುವೆಯೂ) ಕೂಫಾಗೆ ಪಯಣ ಹೊರಟರು.

ಮೋಹರಂ ಮಾಸದ ಒಂದನೇ ತಾರೀಕಿನಂದು ಯೂಪ್ರಟೀಸ್ ನದಿಯ ಪಶ್ಚಿಮದಲ್ಲಿರುವ ಕರ್ಬಲಾಕ್ಕೆ ಈ ತಂಡವು ಆಗಮಿಸಿದಾಗ, ಕುಫಾದ ಉಮರ್ ಇಬ್ನ್ ಸಾದ್ ನೇತೃತ್ವದಲ್ಲಿ ಉಬೈದುಲ್ಲಾ ಕಳುಹಿಸಿದ 4,000 ಜನರ ಸೈನ್ಯವು ಅವರನ್ನು ತಡೆಯಿತು. ಹುಸೈನ್ ಕೂಫಾದ ಜನರು ಮಾಡಿದ ವಾಗ್ದಾನವನ್ನು ನಿರೀಕ್ಷಿಸುತ್ತಿದ್ದರು. ಆದರೆ ಕೂಫಾದ ಜನರಲ್ಲಿ ಹಲವರು ಲಂಚತಿಂದು ಯಜೀದನ ಪರವಾಗಿ ನಿಂತರೆ, ಕೆಲವರು ಯಜೀದನ ಕ್ರೌರ್ಯಕ್ಕೆ ಹೆದರಿ ಹುಸೈನ್ ರ ನೆರವಿಗೆ ಬರಲೇ ಇಲ್ಲ.

ಭ್ರಮನಿರಸನಗೊಂಡ ಹುಸೈನ್ “ಇದು ಯಾವ ಸ್ಥಳ? ಎಂದು ತಮ್ಮ ಆಪ್ತರಿಗೆ ಕೇಳಿದರು. ಅವರು ಕರ್ಬಲಾ ಎಂದಾಗ ದೀರ್ಘ ನಿಟ್ಟುಸಿರು ಬಿಟ್ಟು, ಇಲ್ಲೇ ನಮ್ಮ ಡೇರೆಗಳನ್ನು ಹಾಕಿರಿ. ಮುಂದಿನ ಬೆಳವಣಿಗೆಗಾಗಿ ಕಾಯೋಣ” ಎಂದರು. ಎರಡನೇ ದಿನ ಇನ್ನೂ 5,000 ಜನರ ಸೈನ್ಯ ಹುಸೈನ್ ರ ವಿರುದ್ಧ ಬಂದಿತು. ಮೂರನೇ ದಿನ 4,000 ಜನರ ಸೈನ್ಯ ಬಂದಿತು. ಹೀಗೆ 22,000 ಜನರ ದೊಡ್ಡ ಸೈನ್ಯ ಕೆಲವೇ ದಿನಗಳಲ್ಲಿ ಹುಸೈನ್ ರ ಡೇರೆಗಳನ್ನು ಸುತ್ತುವರೆಯಿತು.

ಹುಸೈನ್ ಆ ಸೈನ್ಯದ ಎದುರು ನಿಂತು ಅವರ ಉದ್ದೇಶ ವಿಚಾರಿಸಿದರು. “ನೀವು ಯಜೀದ್ ನ ಖಿಲಾಫತ್ ಸ್ವೀಕರಿಸಬೇಕು. ಹಾಗೆ ಮಾಡಿದರೆ ನಿಮ್ಮ ಪ್ರಾಣ ಉಳಿಸಿ, ಸನ್ಮಾನದ ಜೊತೆ ಉಡುಗೊರೆ ಕೊಟ್ಟು ಗೌರವಾದರದಿಂದ ಕಳುಹಿಸಿಕೊಡಲಾಗುವುದು” ಎಂದರು ಯಜೀದಿಗರು.

ಆ ಪರಿಸ್ಥಿತಿಯಲ್ಲಿ ಹುಸೈನ್ ವಿಚಲಿತರಾಗದೆ, ಎದೆಗುಂದದೆ ಹೀಗೆ ಹೇಳಿದರು.

ಫೋಟೋ ಕೃಪೆ : ಅಂತರ್ಜಾಲ

“ಓ ಜನರೇ, ನಾನು ಯುದ್ಧಕ್ಕಾಗಿ ಬಂದವನಲ್ಲ. ನನ್ನ ಜೊತೆ, ನನ್ನ ಕುಟುಂಬದ ಮಹಿಳೆಯರು, ಮಕ್ಕಳು ಇರುವರು. ನನ್ನನ್ನು ಗುರುತಿಸಿರಿ, ನಾನು ಪ್ರವಾದಿಯ ಮೊಮ್ಮಗನು. ಧರ್ಮದ ಪ್ರತೀಕನು. ನನ್ನನ್ನು ಕೊಂದು ಶಾಶ್ವತ ನರಕಕ್ಕೆ ಹೋಗಬೇಡಿರಿ. ನೀವು ನನ್ನ ಅಜ್ಜ ಮೊಹಮ್ಮದ್ (ಸ )ರನ್ನು ನಂಬಿ ಅವರ ಕಲಿಮಾ ಪಠಿಸುತ್ತೀರಿ. ಅವರ ಶರೀಯತ್ ಒಪ್ಪಿಕೊಂಡು ನಮಾಜ್ ಮಾಡುತ್ತೀರಿ. ಆದಾಗ್ಯೂ ನನ್ನನ್ನು ವಧಿಸಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೀರಿ. ನೀವೇ ನನಗೆ ರಕ್ಷಣೆ ಕೊಡುವುದಾಗಿ ಕರೆದಿದ್ದೀರಿ ಮತ್ತು ನೀವೇ ನನ್ನ ಪ್ರಾಣದ ಶತೃಗಳಾಗಿದ್ದೀರಿ. ನಾಳೆ ಸತ್ತು ಪ್ರವಾದಿಗೆ ಹೇಗೆ ಮುಖ ಕಾಣಿಸುವಿರಿ? ಎಚ್ಛೆತ್ತುಕೊಳ್ಳಿರಿ. ನಿಮಗೆ ನಾನು ಕ್ಷಮಿಸುತ್ತೇನೆ, ನಮಗೆ ಮರಳಿ ಮದೀನಾ ಹೋಗಲು ಆಸ್ಪದ ಮಾಡಿ ಕೊಡಿರಿ” ಎಂದು ಕೇಳಿಕೊಂಡರು.

ಹುಸೈನ್ ಮತ್ತು ಅವರ ಅಹ್ಲ್ ಬೈತ್ (ಪರಿವಾರ) ಬಗ್ಗೆ ದುರುದ್ದೇಶ, ದ್ವೇಷ, ಮಾತ್ಸರ್ಯ ಇಟ್ಟುಕೊಂಡ ದುರುಳರು ಅಷ್ಟಕ್ಕೇ ಬಿಡದೆ, ಇವರಿಗೆ ನೀರೂ ಸಿಗದಂತೆ ನದಿ ದಂಡೆ ಮೇಲೆ ಕಾವಲು ನಿಂತರು. ಹಸಿವು ತೃಷೆಯಿಂದ ನಿತ್ರಾಣಗೊಂಡ ಹುಸೇನಿಗರೆದುರು ಎರಡು ಆಯ್ಕೆಗಳಿದ್ದವು. ಒಂದು ಯಜೀದ್ ನನ್ನು ಒಪ್ಪಿಕೊಂಡು ಪ್ರಾಣಭಿಕ್ಷೆ ಪಡೆಯುವುದು, ಎರಡು ವಿರಾವೇಶದಿಂದ ಹೋರಾಡಿ ಹುತಾತ್ಮರಾಗುವುದು. ಹುಸೈನ್ ತನ್ನ ಬಳಗವನ್ನು ಕರೆದು ಸಮಾಲೋಚನೆ ನಡೆಸಿದರು. ಎಲ್ಲರೂ ಒಕ್ಕೊರಲಿನಿಂದ ಅಧರ್ಮದೆದುರು ಶರಣಾಗತಿ ಸಾಧ್ಯವಿಲ್ಲ, ನಾವು ಹೋರಾಡುತ್ತೇವೆ ಎಂದರು. ಈಗ ಯುದ್ಧ ಅನಿವಾರ್ಯವಾಗಿತ್ತು. ಹುಸೈನ್ ಮತ್ತು ಅವರ ಆಪ್ತರು ಧೈರ್ಯ, ಶೌರ್ಯ ಮತ್ತು ವೀರಾವೇಶದಿಂದ ಹೋರಾಡಿದರು.

ಮೊಹರಂ 10 ನೇ ತಾರೀಕಿನಂದು ಹುಸೇನ್ ಮತ್ತು ಅವರ ಕುಟುಂಬದ ಸದಸ್ಯರು ಹಾಗೂ ಅವರ ಆಪ್ತ ಅನುಯಾಯಿಗಳು ಒಟ್ಟು 72 ಜನ (ಅನಾರೋಗ್ಯ ಪೀಡಿತ ಒಬ್ಬ ಪುರುಷ ಮತ್ತು ಕುಟುಂಬದ ಮಹಿಳೆಯರನ್ನು ಹೊರತುಪಡಿಸಿ) ಭೀಕರವಾಗಿ ಹತರಾದರು.

ಹೀಗೆ ಕರ್ಬಲಾದ ಆ ಕರಾಳ ಘಟನೆಯನ್ನು ಇಸ್ಲಾಮಿನ ಇತಿಹಾಸದಲ್ಲಿ ಎಂದೆಂದೂ ಮಾಸದ ಗಾಯದಂತೆ ಇಂದಿಗೂ ನೆನಪಿಸಿಕೊಳ್ಳಲಾಗುತ್ತದೆ. ಹುಸೈನ್ ಸೋತು ಗೆದ್ದರು. ಯಜೀದ್ ಗೆದ್ದೂ ಅಳಿದುಹೋದನು. ಧರ್ಮಕ್ಕೇ ಜಯವಿದೆ, ಕ್ಷಣಿಕ ಸೋಲು ಸೋಲಲ್ಲ ಎಂಬ ಸಂದೇಶವನ್ನು ಈ ಕರ್ಬಲಾ ಮತ್ತೇ ಮತ್ತೇ ಸಾರುತ್ತದೆ.
ಕರ್ಬಲಾ ಆಸ್ತಿ ಅಂತಸ್ಥಿಗಾಗಿ ಅಲ್ಲ

ಸತ್ಯ ಮತ್ತು ನ್ಯಾಯಕ್ಕಾಗಿ ನಡೆದ ಯುದ್ಧ ಎಂಬುದು ಮರೆಯದಿರೋಣ.


  • ಇಮ್ತಿಯಾಜ್ ಖಾನ್ – (ಸಂತಶಿಶು)

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW