ನಟಿ, ಲೇಖಕಿ ರಂಜಿನಿ ರಾಘವನ್ ಅವರ ‘ಕತೆಡಬ್ಬಿ’ ಕೃತಿಯ ಕುರಿತು ಲೇಖಕರಾದ ವಾಣಿಶ್ರೀ ಕೊಂಚಾಡಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಕತೆಡಬ್ಬಿ
ಲೇಖಕರು: ರಂಜಿನಿ ರಾಘವನ್
ಪ್ರಕಾಶಕರು: ಬಹುರೂಪಿ
ಪುಟಗಳು : ೧೭೧
ಬೆಲೆ: ೨೦೦ರೂ/
ಲೇಖಕರ ಬಗ್ಗೆ :
ಬೆಂಗಳೂರಿನ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದ ರಂಜಿನಿ ರಾಘವನ್ ಬಾಲ್ಯದಿಂದಲೇ ಲಲಿತ ಕಲೆಗಳು ಮತ್ತು ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದವರು. ಒಳ್ಳೆಯ ವೃತ್ತಿಗಾರ್ತಿ ಹಾಗೂ ಹಾಡುಗಾರ್ತಿಯೂ ಹೌದು. ಅನೇಕ ನಾಟಕಗಳಲ್ಲಿ ಅಭಿನಯಿಸಿರುವ ಇವರು ‘ಪುಟ್ಟಗೌರಿ ಮದುವೆ’ ಧಾರಾವಾಹಿಯಿಂದ ಜನರಿಗೆ ಹೆಚ್ಚು ಪರಿಚಿತರಾದರೂ ‘ಕನ್ನಡತಿ’ ಧಾರವಾಹಿಯ ‘ಭುವಿ’ ಪಾತ್ರದಿಂದ ಜನರ ಮನ ಗೆದ್ದು ಮನೆ ಮಗಳಾದರು. ಶೇಷಾದ್ರಿಪುರಂ ಕಾಲೇಜಿನಲ್ಲಿ ತಮ್ಮ ಬಿಕಾಂ ಪದವಿಯನ್ನು ಹಾಗೂ ಸರ್ ಎಂ ವಿ.ಐ.ಟಿ ಕಾಲೇಜಿನಲ್ಲಿ ಎಂಬಿಎ ಮಾಡಿರುವ ಇವರು ಉತ್ತಮ ಕಥೆಗಾರ್ತಿಯೂ ಹೌದು. ಇದೀಗ ಇವರ ‘ಕತೆ ಡಬ್ಬಿ’ ಎನ್ನುವ ಕಥಾಸಂಕಲನ ಅನೇಕರ ಮನಗೆದ್ದು ಸದ್ದು ಮಾಡುತ್ತಿದೆ. ಅಲ್ಲದೆ ಇತ್ತೀಚೆಗೆ ‘ಸ್ವೈಪ್ ರೈಟ್’ ಎಂಬ ಕಾದಂಬರಿಯನ್ನೂ ಬರೆದಿರುತ್ತಾರೆ. ‘ಭುವಿ’ ಪಾತ್ರದ ಮೂಲಕ ಕನ್ನಡ ಭಾಷೆಯನ್ನು ಇನ್ನಷ್ಟು ಸುಂದರಗೊಳಿಸಿರುವ ಇವರ ಭಾಷಾ ಶೈಲಿಯೂ ಅಷ್ಟೇ ಸುಂದರ. ಕತೆ ಡಬ್ಬಿ ಬಿಡುಗಡೆಯಾದ ದಿನದಿಂದ ಯಾವಾಗ ನನ್ನ ಕೈ ಸೇರುವುದು ಎಂದು ಕಾಯುತ್ತಿದ್ದ ನಾನು ಒಂದೇ ಗುಕ್ಕಿನಲ್ಲಿ ಓದಿದರೂ ಕೆಲಸದ ಒತ್ತಡದಿಂದಾಗಿ ಹಾಗೂ ಸಮಯದ ಅಭಾವದಿಂದಾಗಿ ಹಲವು ದಿನಗಳಾದರೂ ಬರೆಯಲಾಗಿರಲಿಲ್ಲ.

ಕೃತಿಯ ಬಗ್ಗೆ:
ಇಲ್ಲಿ ಒಟ್ಟು ೧೪ ಕಥೆಗಳಿವೆ. ಪ್ರತಿಯೊಂದು ಕಥೆಯು ವಿಭಿನ್ನವಾಗಿದೆ. ಕೆಲವು ಕಥೆಗಳನ್ನಷ್ಟೇ ಉಲ್ಲೇಖಿಸಿದ್ದೇನೆ.
೧. ಕ್ಯಾಬ್ we met
೨. ಅಪ್ಪನ ಮನೆ ಮಾರಾಟಕ್ಕಿದೆ
೩ ಚುಚ್ಚುಮದ್ದಿನ ಸೈಡ್ ಎಫೆಕ್ಟ್
೪ ವೀಕೆಂಡ್ ಸ್ವಯಂವರ
೫ ಉಪ್ಪಿಲ್ಲದ ಸತ್ಯಾಗ್ರಹ ೬’ಮಾತುಗಾರರಿದ್ದಾರೆ ಎಚ್ಚರಿಕೆ’
೭ ಕಾಣೆಯಾದವರ ಬಗ್ಗೆ ಪ್ರಕಟಣೆ
೮ ಕಾಣದ ಕಡಲಿಗೆ
೯ ‘ವೈರಾಗ್ಯದ ವ್ಯಾಲಿಡಿಟಿ’
೧೦ ENGLISH ಕೃಷ್ಣ
೧೧ Hungry Man
೧೨ ನಂಜನಗೂಡು to ನ್ಯೂ ಜರ್ಸಿ
೧೩ ಯಾರು?
೧೪ ದೇವರು ಕಾಣೆಯಾಗಿದ್ದಾರೆ.
ಕ್ಯಾಬ್ we met:
ಬೆಂಗಳೂರಿನ ಗಲ್ಲಿಯೊಂದರಲ್ಲಿ ವಾಸವಾಗಿದ್ದ ಕ್ಯಾಬ್ ಡ್ರೈವರ್ ಆಗಿರುವ ತಿಮ್ಮೇಶನಿಗೆ ಪ್ರತಿನಿತ್ಯ ಪ್ರಯಾಣಿಕರನ್ನು ಅವರು ಹೇಳಿದ ಕಡೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬಿಟ್ಟು ಬರುವ ಕೆಲಸ. ಹೀಗೆ ಒಂದು ದಿನ ಮೊಬೈಲ್ ಆಪ್ ನಲ್ಲಿ login ಆದಾಗ ಎಂದಿನಂತೆ Ride is booked ಎಂದು ಬರುವ msg. ಸ್ವಲ್ಪ ಸಮಯದಲ್ಲಿ ಹೇಳಿದ ಲೊಕೇಶನ್ ಹತ್ತಿರ ಬಂದಾಗ ಸಿಕ್ಕ ಹುಡುಗಿಯೇ ಸ್ಪಂದನ. ಆದರೆ ಆಕೆಗೊಡನೆ ಮಾತನಾಡಿದಾಗ ಭಿನ್ನವಾಗಿ ತೋರುತ್ತಾಳೆ. ವಿದೇಶದಲ್ಲಿ ಎಂಎಸ್ ಮಾಡುವ ಆಸೆ ಹೊತ್ತ ಹುಡುಗಿ ಮನೆಯವರ ವಿರೋಧದ ನಡುವೆಯೂ ಹೋಗಲು ಹೊರಟ ಕಥೆ ಕೇಳಿ ಬೇಸರವಾಗುತ್ತದೆ. ಹೀಗೆ ಮಳೆಯಲ್ಲಿ ಸಿಕ್ಕಿಹಾಕಿಕೊಂಡ ಅವರ ಗಾಡಿ ಸರಿಯಾದ ಸಮಯ ನಿಲ್ದಾಣ ತಲುಪಲು ಸಾಧ್ಯವಿಲ್ಲವೆಂದಾಗ ಮೊದಲೇ ಮನೆಯವರ ಹಾಗೂ ಪ್ರೀತಿಸಿದ ಹುಡುಗನ ನಡವಳಿಕೆಯಿಂದ ಬೇಸತ್ತ ಸ್ಪಂದನ ಗಾಡಿಯನ್ನು ವಾಪಸ್ ಬಂದ ಜಾಗಕ್ಕೆ ಹೋಗುವಂತೆ ವಿನಂತಿಸಿಕೊಳ್ಳುತ್ತಾಳೆ. ಆದರೆ ಮಳೆಯಿಂದ ವಿಮಾನ delay ಆಗಿದೆ ಎಂಬ ಮೆಸೇಜ್ ಬಂದಾಗ ತಿಮ್ಮೇಶ “ಮೇಡಂ ದೇವರು ನಿಮಗೆ ಇನ್ನೊಂದು ಅವಕಾಶ ಕೊಟ್ಟಿದ್ದಾನೆ. ಕಳ್ಕೋಬೇಡಿ. ನಿಜವಾದ ಪ್ರೀತಿಗೆ ತಾಳ್ಮೆ ಇರುತ್ತದೆ .ಇನ್ನೊಬ್ಬರಿಗೋಸ್ಕರ ನಿಮ್ಮ ನಿರ್ಧಾರ ಬದಲಾಯಿಸಬೇಡಿ” ಎಂದು ಹೇಳುತ್ತಾನೆ.ಆತನ ಮಾತಿನಿಂದ ಪ್ರಭಾವಿತಳಾದ ಸ್ಪಂದನ ಕೊನೆಗೂ ವಿಮಾನವೇರುತ್ತಾಳೆ.
ಬೇರೆಯವರಿಗೋಸ್ಕರ ತಮ್ಮ ಆಸೆಗಳನ್ನು ತ್ಯಾಗ ಮಾಡಬಾರದು ಎಂಬ ಸೂಕ್ಷ್ಮವನ್ನು ಇಲ್ಲಿ ಹೇಳಿದ್ದಾರೆ. ರಕ್ತ ಸಂಬಂಧವೇ ಇಲ್ಲದ ಇಬ್ಬರು ಅಪರಿಚಿತರು ಪರಿಚಿತರಾಗಿ ಹೇಗೆ ಆಪ್ತರಾಗುತ್ತಾರೆಂಬುದನ್ನೂ ನೈಜವಾಗಿ ನಿರೂಪಿಸಿದ್ದಾರೆ.

ಅಪ್ಪನ ಮನೆ ಮಾರಾಟಕ್ಕಿದೆ:
ಹಳ್ಳಿ ಮೇಷ್ಟ್ರು ಮಗ ಮಲ್ಲಿಕಾರ್ಜುನ ( ಬದಲಾಯಿಸದ ಹೆಸರು ಮನೋಜ) ತಾಯಿ ತೀರಿಹೋದ ಬಳಿಕ ಅಪ್ಪನ ಮನೆ ಮಾರಾಟಕ್ಕಿಟ್ಟು , ಅವರಿಗೆ ಇಷ್ಟವಿರದಿದ್ದರೂ ತಮ್ಮ ಜೊತೆ ಕರೆದುಕೊಂಡು ಹೋಗುವ ಯೋಚನೆ ಮಾಡುತ್ತಾನೆ . ಹಾಗೆಯೇ ತನ್ನ ಐದು ವರ್ಷದ ಮಗ ಹಾಗೂ ಇತ್ತೀಚೆಗೆ ಕೊಂಡ ನಾಯಿ ಮರಿಯೊಡನೆ ಊರಿಗೆ ಬರುತ್ತಾನೆ.ಎಲ್ಲಾ ಕೆಲಸ ಮುಗಿಸಿ ವಾಪಸ್ ಆಗುವಾಗ ಬರಲೊಪ್ಪದ ನಾಯಿಮರಿಯನ್ನು ಒತ್ತಾಯದಿಂದ ಕಾರಲ್ಲಿ ಹಾಕಿ ಹೋಗುತ್ತಿರುವಾಗ ,ನಿನ್ನೆ ಮೊನ್ನೆ ಬಂದ ಮೂಕ ಪ್ರಾಣಿಗೆ ಮನೆಯ ಮೇಲೆ ಇಷ್ಟು ವ್ಯಾಮೋಹ ಇರಬೇಕಾದರೆ ಇಷ್ಟರವರೆಗೆ ಬಾಳಿ ಬದುಕಿದ ಅಪ್ಪನಿಗೆ ವ್ಯಾಮೋಹ ಇನ್ನೆಷ್ಟಿರಬೇಡ? ಎಂಬ ಯೋಚನೆ ಬಂದು ಮನೆ ಮಾರಾಟದ ಯೋಜನೆಯನ್ನು ಕೈಬಿಡುತ್ತಾನೆ,ಸಂಬಂಧ ಪಟ್ಟವರಿಗೆ ತಿಳಿಸುತ್ತಾನೆ.
ಚುಚ್ಚುಮದ್ದಿನ ಸೈಡ್ ಎಫೆಕ್ಟ್:
ಬಚ್ಚಲು ಮನೆಯಲ್ಲಿ ಜಾರಿ ಬಿದ್ದ ನೆಪದಿಂದ ಚಲನೆ ನಿಂತು ಗಾಲಿ ಕುರ್ಚಿಯಲ್ಲಿ ಇಲ್ಲವೇ ಮಲಗಿದ್ದ ನರಹರಿ ಶರ್ಮರು ಎಲ್ಲಕ್ಕೂ ಮಗನನ್ನು ಹಾಗೂ ಇತರರನ್ನು ಅವಲಂಬಿಸಿರುತ್ತಾರೆ. ದಿನೇ ದಿನೇ ಬಣ್ಣ ಬಣ್ಣದ ಆಂಟಿ ಬಯೋಟಿಕ್ ಮಾತ್ರೆಗಳು ದೇಹವನ್ನು ಹಿಂಡಿದಾಗ ಮನಸ್ಸಿಗೆ ಘಾಸಿಯಾಗುತ್ತದೆ. ಸರಿ ಇರುವಾಗ ದಿನನಿತ್ಯ ಮಗನೊಂದಿಗೆ ಜಗಳವಾಗುತ್ತಿದ್ದ ಸಂದರ್ಭ ನೆನಪಾಗುತ್ತದೆ. ಮಗ ನೀಡಿದ ಎಳನೀರಿನಿಂದ ಶುಗರ್ ಜಾಸ್ತಿ ಆಗಿದೆ ಎಂದು ಡಾಕ್ಟರ್ ಹೇಳಿದಾಗ ಮಗನೇ ನನ್ನನ್ನು ನಿವಾರಿಸಲು ಈ ರೀತಿ ಮಾಡಿರಬಹುದೇ ಎಂಬ ಸಂಶಯ ಬರುತ್ತದೆ. ಜೊತೆಗೆ ಈ ಹಿಂದೆ ತಾನು ಸಿವಿಲ್ ಕಾಂಟ್ರಾಕ್ಟರ್ ಆಗಿದ್ದಾಗ ದೊಡ್ಡ ಆಲದ ಮರ ಒಂದು ತನ್ನ ಮನೆಯ ಅಂದ ಕೆಡಿಸುತ್ತದೆ ಎಂದು ‘ಟಾರ್ಡನ್ ಕೆಮಿಕಲ್’ ಅನ್ನು ದಿನವೂ ಇಂಜೆಕ್ಟ್ ಮಾಡಿ ಸಾಯಿಸಿದ್ದು ನೆನಪಾಗುತ್ತದೆ.
ಆನಂತರದ ದಿನಗಳಲ್ಲಿ ಇನ್ನಷ್ಟು ಆರೋಗ್ಯ ಹದಗೆಟ್ಟು ಪ್ರಾಣ ಪಕ್ಷಿ ಹಾರಿ ಹೋಗುತ್ತದೆ.ಪರೀಕ್ಷಿಸಿದ ಡಾಕ್ಟರ್ ನ್ಯಾಚುರಲ್ ಡೆತ್ ಅನ್ನುತ್ತಾರೆ. ಆ ಬಳಿಕ ಕುಟುಂಬವನ್ನು ಭೇಟಿ ಮಾಡಿದ ಲಾಯರ್ ಅವರ ಅಷ್ಟೂ ಹಣ ಪರಿಸರ ಸಂರಕ್ಷಣೆಯ ಕುಟುಂಬಕ್ಕೆ ಹೆಸರಾಗಿರುವ ವನಶಕ್ತಿ ಸಂಸ್ಥೆಗೆ ಸಂದಾಯವಾಗಿರುತ್ತದೆ ಎಂದು ನರಹರಿ ಶರ್ಮರೇ ವಿಲ್ ಬರೆದಿದ್ದಾರೆ ಅನ್ನುತ್ತಾರೆ.
ವೀಕೆಂಡ್ ಸ್ವಯಂ ವರ :
ಪ್ರೈವೇಟ್ ಶಾಲೆವೊಂದರಲ್ಲಿ ಡ್ಯಾನ್ಸ್ ಟೀಚರ್ ಆಗಿ ಕೆಲಸ ಮಾಡುತ್ತಿರುವ ಪ್ರಾರ್ಥನಾ ಅಮ್ಮ ನೋಡಿ ಆರಿಸಿದ ವರನನ್ನು ಭೇಟಿಯಾಗಲು ಒರಾಯನ್ ಮಾಲ್ ಗೆ ಬರುತ್ತಾಳೆ. ಭೇಟಿಯಾದ ‘ವರ’ ಆಕಾಶ್ ಕನ್ಸ್ಟ್ರಕ್ಷನ್ ಕಂಪನಿಯ ಸಿಇಒ ಆಗಿರುತ್ತಾನೆ.ಇಬ್ಬರೂ ಕುಳಿತು ಪರಸ್ಪರ ಮಾತನಾಡುತ್ತಾರೆ. ಆಕಾಶ್ ಆಹ್ವಾನದ ಮೇರೆಗೆ ಜೊತೆಯಾಗಿ shopping ಬೇರೆ ಮಾಡುತ್ತಾರೆ. ತಾಯಿಗಾಗಿ ದಿನಕ್ಕೆ ಒಂದುವರೆ ಲಕ್ಷದಷ್ಟು ಖರ್ಚು ಮಾಡುತ್ತಾನೆ ಆಕಾಶ್. ಅಲ್ಲದೇ ಪ್ರಾರ್ಥನಾ ಳಿಗೂ ವಾಚ್ ಅನ್ನು ಉಡುಗೊರೆಯಾಗಿ ಕೊಡುತ್ತಾನೆ. ಆತನ ವಿಶಾಲ ಮನೋಭಾವದ ಅರಿವಾದ ಪ್ರಾರ್ಥನಾ, ತಾಯಿಯನ್ನೇ ಇಷ್ಟು ಪ್ರೀತಿ ಮಾಡುವ ಈತ ತನ್ನನ್ನು ಇನ್ನೆಷ್ಟು ಪ್ರೀತಿ ಮಾಡಿಯಾನು ಎಂದು ಯೋಚಿಸುತ್ತಾಳೆ. ಹಾಗೂ ಅವನಿಗಾಗಿ ತಾನು ಪ್ರೀತಿಸಿದ ಮಾಧ್ಯಮ ವರ್ಗದ ಶರತ್ ನನ್ನು ಕೈ ಬಿಡುವ ಯೋಚನೆಯನ್ನೂ ಮಾಡುತ್ತಾಳೆ. ಆದರೆ ಕಥೆಯ ಕೊನೆಯಲ್ಲಿ ಎಫ್ ಎಂ ಚಾನೆಲ್ ನವರು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನಾಗೆ ಆರ್‌ಜೆ ಕೇಳಿದ ” ನೀವು ಫೆಮಿನಿಸ್ಟೈ? ಎಂಬ ಪ್ರಶ್ನೆಗೆ ಉತ್ತರಿಸುವ ಆಕಾಶ್ ಅಭಿಮಾನದಿಂದ ‘ ಇವರು ಫೆಮಿನಿಸ್ಟಾ ಗೊತ್ತಿಲ್ಲ, ಆದರೆ ಸಮಾನತೆಯ ಬಗ್ಗೆ ನಂಬಿಕೆ ಇರುವವರು. ಆಗ ಕಾಫಿ ಬಿಲ್ ಕೊಡೋಕೆ ಬಂದಾಗ ಬಿಡ್ಲಿಲ್ಲ’ ಅನ್ನುತ್ತಾನೆ. ಆದರೆ ಪ್ರಾರ್ಥನಾ ಮನದಲ್ಲಿ ‘ಕಾಫಿ ಬಿಲ್ ಕೊಡಬೇಕು ಅಂತಿದ್ದ ತಾನು ಆನಂತರ ಅವನ ಖರ್ಚು ನೋಡಿ ದಂಗಾಗಿ ಆತನ ಅಂತಸ್ತಿನ ಮೇಲೆ ಅವಲಂಬಿತಳಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಬದುಕಿನ ದಾರಿ ಬದಲಾಯಿಸುವ ನಿರ್ಧಾರ ಮಾಡಿದ್ದು ಎಷ್ಟು ಸರಿ ಎಂಬದು ಯೋಚಿಸತೊಡಗುತ್ತಾಳೆ. ಕೊನೆಯಲ್ಲಿ ಆಕಾಶ್ ಅವಳನ್ನು ಒಪ್ಪಿದರೂ ಪ್ರಾರ್ಥನಾ ಮಾತ್ರ ತನ್ನ ಪ್ರೀತಿಯ ಬಗ್ಗೆ ಪ್ರಾಮಾಣಿಕವಾಗಿ ಹೇಳಿ ಆತ ಕೊಟ್ಟ ವಾಚ್ ಅನ್ನು ಹಿಂದಿರುಗಿಸಿ ತನ್ನ ಉತ್ತರಕ್ಕೆ ಕಾಯಬೇಡಿ ಎನ್ನುತ್ತಾಳೆ. ಅವಳ ಪ್ರಾಮಾಣಿಕತೆಯನ್ನು ಮೆಚ್ಚಿದ ಆಕಾಶ್ ಅವಳ ಡ್ಯಾನ್ಸ್ ಅಭಿಯಾನಿಯ ನೆನಪಾಗಿ ಅದನ್ನು ಇಟ್ಟುಕೊಳ್ಳಲು ಹೇಳುತ್ತಾನೆ.
Hungry Man:
ಭೂಮಿಯ ಮೇಲೆ ಆಗಷ್ಟೇ ಕಾಲ ಶುರುವಾದಾಗ ಜೀವ ರಾಶಿಗಳು, ನಾಲ್ಕು ಕಾಲಿನ ಪ್ರಾಣಿಗಳು, ಎರಡು ಕಾಲಿನ ಮನುಷ್ಯ ಸರೀಸೃಪಗಳು ,ಕೀಟಗಳು, ಹಕ್ಕಿಗಳು, ಜೀವ ಪಡೆದುಕೊಂಡವು. ದೇವರಿಗೆ ಇವರ ಆಟಗಳನ್ನು ನೋಡಿ ಸಂಭ್ರಮೋ ಸಂಭ್ರಮ. ಇಲ್ಲಿರುವ ಇವಕ್ಕೆಲ್ಲ ಬರೀ ಹರಟೆ, ಕುಣಿತ ಹಾಡು ಬೇಸರ ತಂದು ಕೊನೆಗೆ ಮನುಷ್ಯ ಎಲ್ಲರನ್ನೂ ಸಭೆ ಸೇರಿಸಿ’ ನಾವು ಭೂಮಿಗೆ ಬಂದಿರುವುದಕ್ಕೆ ಕಾರಣವೇನು? ಹೀಗೆ ಸುಮ್ಮನೆ ಸಮಯ ಕಳೆಯಲು ಬೇಸರವಾಗುತ್ತದೆ. ದೇವರಿಗೆ ಹೇಳಿ ಏನಾದರೂ ಕೆಲಸ ಕೊಡುವಂತೆ ಕೇಳಿಕೊಳ್ಳೋಣ ಅನ್ನುತ್ತಾನೆ. ಹಾಗೆ ದೇವರಿಗೊಂದು ಪತ್ರ ಬರೆಯುತ್ತಾನೆ . ಭೇಟಿಯಾಗಲು ಬಂದ ದೇವರ ಯಾವ ಮಾತಿಗೂ ಒಪ್ಪದ ಮನುಷ್ಯನಿಗೆ ದೇವರು ಒಂದು ಧ್ಯೇಯವನ್ನು ಕೊಡುತ್ತಾನೆ.
ಅದರ ಹೆಸರು ‘ಹಸಿವು’. ಇಷ್ಟೇ ಅಲ್ಲದೇ ಅವನು ಕೊಟ್ಟ ಪಾನೀಯದಲ್ಲಿ ಒಂದೊಂದೇ ಗುಟುಕು ಕುಡಿಯಬೇಕೆನ್ನುತ್ತಾನೆ. ಅದರಿಂದ ‘ಹಸಿವು’ ಹುಟ್ಟಿ ಆಹಾರಕ್ಕಾಗಿ ಹುಡುಕಾಟ ಶುರು ಮಾಡುತ್ತೀರಿ ಅನ್ನುತ್ತ ಮರಳುತ್ತಾನೆ. ಆನಂತರ ಮನುಷ್ಯ ಎಲ್ಲಾ ಪ್ರಾಣಿಗಳಿಗೂ ಒಂದೊಂದೇ ಗುಟುಕನ್ನು ನೀಡಿ ತಾನು ಮಾತ್ರ ಗಟಗಟನೆ ಎಲ್ಲವನ್ನೂ ಕುಡಿದು ಬಿಡುತ್ತಾನೆ . ಒಂದು ಗುಟುಕು ಕುಡಿದ ಬೇರೆ ಜೀವಿಗಳಿಗೆಲ್ಲ ಆಹಾರದ ಹಸಿವು ಮಾತ್ರ ಹುಟ್ಟಿದರೆ ದೇವರ ಮಾತನ್ನು ಮೀರಿದ ಮನುಷ್ಯನಿಗೆ ಅಧಿಕಾರದ ಹಸಿವು, ಹಣದ ಹಸಿವು, ಯವ್ವನದ ಹಸಿವು, ಹೀಗೆ ಎಲ್ಲಾ ಹಸಿವು ಹುಟ್ಟಿ ಸಂತೋಷದಲ್ಲಿ ಕಾಲ ಕಳೆಯುತ್ತಿದ್ದ ಮನುಷ್ಯ ಅದರಿಂದ ದೂರವಾಗುತ್ತಾನೆ. ಇದರಿಂದ ಬೇಸತ್ತ ಮನುಷ್ಯ ಪುನಃ ದೇವರ ಮೊರೆ ಹೋದಾಗ’ ತಾನು ಬೇಡವೆಂದರೂ ಹೆಚ್ಚಾಗಿ ಕುಡಿದ ಪಾನೀಯ ತಂದ ಹಸಿವಿನಿಂದ ಹೀಗೆ ಮಾಡುತ್ತಾನೆ. ಅವನು ಬಯಸಿದ ಭಾಗ್ಯವನ್ನು ಅವನೇ ತೊರೆದಾಗ ಮಾತ್ರ ಅವನಿಗೆ ಮುಕ್ತಿ ‘ಎನ್ನುತ್ತಾ ಕಲ್ಲಂತೆ ಕುಳಿತುಬಿಡುತ್ತಾನೆ.
ಇಷ್ಟೇ ಅಲ್ಲದೆ ಉಳಿದ ಕಥೆಗಳಾದ ಯಾರು? ದೇವರು ಕಾಣೆಯಾಗಿದ್ದಾರೆ. ಕಾಣದ ಕಡಲಿಗೆ’ ಉಪ್ಪಿನ ಸತ್ಯಾಗ್ರಹ’ ಮಾತುಗಾರರಿದ್ದಾರೆ ಎಚ್ಚರಿಕೆ’ ‘ English ಕೃಷ್ಣ ‘, ನಂಜನಗೂಡು to ನ್ಯೂ ಜರ್ಸಿ ‘ ಮೊದಲಾದ ಉಳಿದ ಎಲ್ಲಾ ಕಥೆಗಳೂ ಚೆನ್ನಾಗಿವೆ. ವಾಸ್ತವಕ್ಕೆ ಹತ್ತಿರವಾಗಿರುವ ಇವರ ಕಥೆಗಳು ವಿಭಿನ್ನ ವಸ್ತು, ಪಾತ್ರಗಳಿಂದ ಮನ ಸೆಳೆಯುತ್ತದೆ. ತನ್ನ ಮೊದಲ ಪ್ರಯತ್ನದಲ್ಲೇ ಸೆಂಚುರಿ ಬಾರಿಸಿದ್ದಾರೆ ಅನ್ನಬಹುದು. ಕಥೆಗಳಲ್ಲಿ ಏಕತಾನತೆ ಇಲ್ಲದೆ ವೈವಿಧ್ಯಮಯವಾದ ವಿಷಯಗಳನ್ನು ವಸ್ತುವಾಗಿಸಿದ ಕಾರಣ ಹಾಗೂ ಸರಳ ನಿರೂಪಣೆಯಿಂದಾಗಿ ಓದಿಸಿಕೊಂಡು ಹೋಗುತ್ತದೆ. ಓದುಗರ ಮನಸ್ಸನ್ನು ಗೆಲ್ಲಲು ಇನ್ನೇನು ಬೇಕು ಅಲ್ಲವೇ? ಇನ್ನಷ್ಟು ಉತ್ತಮ ಕೃತಿಗಳನ್ನು ರಂಜಿನಿ ರಾಘವನ್ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡಲಿ ಎಂಬುದೇ ನಮ್ಮೆಲ್ಲರ ಆಶಯ.
- ವಾಣಿಶ್ರೀ ಕೊಂಚಾಡಿ
